ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ |ಶ್ರಾವಣಾ ಬಂತು |
ಕಡಲಿಗೆ  ಶ್ರಾವಣಾ ಬಂತು | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನ ರೂಪತಾಳಿ |

ಶ್ರಾವಣಾ ಬಂತು ಘಟ್ಟಕ್ಕೆ | ರಾಜ್ಯಪಟ್ಟಕ್ಕ
ಬಾನಮಟ್ಟಕ್ಕ
ಏರ್ಯಾವ ಮುಗಿಲು | ರವಿ ಕಾಣೆ ಹಾಡೆಹಗಲು |

ಶ್ರಾವಣಾ ಬಂತು ಹೊಳಿಗಳಿಗೆ  | ಅದೇ ಶುಭಗಳಿಗೆ
ಹೊಳಿಗೆ ಮತ್ತ ಮಳಿಗೆ
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ |

ಶ್ರಾವಣಾ ಬಂತು ಊರಿಗೆ | ಕೇರಿಕೇರಿಗೆ
ಹೊಡೆದ ಝೂರಿಗೆ
ಜೋಕಾಲಿ ಏರಿ | ಅಡರ್ಯಾವ ಮರಕ ಹಾರಿ |

ಶ್ರಾವಣಾ ಬಂತು ಮನಿಮನಿಗೆ | ಕೂಡಿ ದನಿದನಿಗೆ
ಮನದ ನನಿಕೊನಿಗೆ
ಒಡೆದಾವ ಹಾಡೂ | ರಸ ಉಕ್ಕತಾವ ನೋಡು ಶ್ರಾವಣಾ ಬಂತು || ೧ ||

ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೊ ಜಂಗಿ
ಜಾತ್ರಿಗೇನೋ | ನೆರದsದ ಇಲ್ಲೆ ತಾನೋ ||

ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ
ಕಟ್ಟಿಕೊಂಡೂ | ನಿಂತಾವ ಹರ್ಷಗೊಂಡು ||

ಹಸಿರುಟ್ಟ ಬಸುರಿಯ ಹಾಂಗ
ನೆಲಾ ಹೊಲಾ ಹ್ಯಾಂಗ
ಅರಿಸಿಣ ಒಡೆಧಾಂಗ
ಹೊಮ್ಮತಾವ | ಬಂಗಾರ ಚಿಮ್ಮತಾವ

ಗುಡ್ಡ ಗುಡ್ಡ ಸ್ಥಾವರಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ ||

ನಾಡೆಲ್ಲ ಏರಿಯ ಹಾರಿ
ಹರಿತಾವ ಝರಿ
ಹಾಲಿನ ತೊರಿ
ಈಗ ಯಾಕs | ನೆಲಕೆಲ್ಲ ಕುಡಿಸಲಾಕ
ಶ್ರಾವಣಾ ಬಂತು || ೨||

ಜಗದ್ಗುರು ಹುಟ್ಟಿದ ಮಾಸ
ಕಟ್ಟಿ ನೂರು ವೇಷ
ಕೊಟ್ಟು ಸಂತೋಷ
ಕುಣಿತದ | ತಾನsನ ದಣಿತದ |

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ |ಶ್ರಾವಣಾ ಬಂತು |

ಲೇಖಕರು

ದತ್ತಾತ್ರೇಯ ರಾಮಚಂದ್ರ ಬೇಂದ್ರೆ (೧೮೯೬-೧೯೮೧) ಕನ್ನಡದ ದೊಡ್ಡ ಕವಿಗಳಲ್ಲಿ ಒಬ್ಬರು. ಅಂಬಿಕಾತನಯದತ್ತ ಎಂಬ ಕಾವ್ಯ ನಾಮದಲ್ಲಿ ಕವನಗಳನ್ನು ಬರೆದಿದ್ದಾರೆ. ಧಾರವಾಡದವರಾದ ಬೇಂದ್ರೆಯವರು ಕನ್ನಡ ಭಾಷೆಗೆ ಅಪಾರವಾದ ಸೂಕ್ಷತೆ ಹಾಗೂ ನಾದಮಯತೆಯನ್ನು ಕೊಟ್ಟ ಕವಿ. ಅವರು ಬರೆದ ನೂರಾರು ಕವನಗಳನ್ನು ಈಗಲೂ ನಾಡಿನ ತುಂಬ ಹಾಡಲಾಗುತ್ತಿದೆ. ‘ಗರಿ’, ‘ಸಖೀಗೀತ’, ‘ನಾದಲೀಲೆ’, ‘ಗಂಗಾವತರಣ’ ಅವರ ಮುಖ್ಯ ಸಂಕಲನಗಳು. ‘ಅರಳು ಮರಳು’ ಸಂಕಲನಕ್ಕೆ ೧೯೫೮ರಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂದಿತು. ‘ನಾಕುತಂತಿ’ ಸಂಕಲನಕ್ಕೆ ೧೯೭೪ ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು. ಬೇಂದ್ರೆಯವರು ಬರೆದ ಚಿಂತನ ಬರೆಹಗಳು ಸಾಹಿತ್ಯದ ವಿರಾಟ್‌ಸ್ವರೂಪ ಎಂಬ ಸಂಪುಟದಲ್ಲಿ ಪ್ರಕಟವಾಗಿವೆ. ಪ್ರಭಾವಶಾಲಿ ಮಾತುಗಾರರಾಗಿದ್ದ ಬೇಂದ್ರೆ, ಶಿವಮೊಗ್ಗದಲ್ಲಿ ನಡೆದ ೨೭ನೇ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಆಶಯ

ಈ ಕವನವನ್ನು ಬೇಂದ್ರೆಯವರ ‘ಹಾಡುಪಾಡು’ ಸಂಕಲನಿಂದ ಆರಿಸಿಕೊಳ್ಳಲಾಗಿದೆ. ಕವನವು ಶ್ರಾವಣ ಮಾಸದಲ್ಲಿ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳನ್ನು ಹಾಗೂ ಅವುಗಳ ಚೆಲುವನು ವರ್ಣಿಸುತ್ತದೆ.

ಪದಕೋಶ

ಝೂರಿಗೆ = ರಭಸಕ್ಕೆ, ಆಡರು = ಹತ್ತು, ಕುತನಿ = ಹತ್ತಿ ಮತ್ತು ರೇಷ್ಮೆಯಿಂದ ಮಾಡಿದ ನುಣುಪಾದ ಬಟ್ಟೆ, ಜಂಗಿ =ಯುದ್ಧಕ್ಕೆ ಎಂಬಂತೆ, ವಿಶೇಷವಾಗಿ, ಬಾಸಿಂಗ = ಮದುಮಗನ ಕಿರೀಟ, ಅಭ್ಯಂಗ = ಮಂಗಳಸ್ನಾನ, ಜಗದ್ಗುರು = ಕೃಷ್ಣ

ಟಿಪ್ಪಣಿ

ಭೈರವ =ಶಿವನ ಉಗ್ರರೂಪದ ಅವತಾರ

ಪ್ರಶ್ನೆಗಳು

೧. ಶ್ರಾವಣವು ಕಡಲು ಆಕಾಶ ಮತ್ತು ಹೊಳೆಗಳ ಮೇಲೆ ಮಾಡಿದ ಪರಿಣಾಮ ಯಾವುದು?

೨. ಊರು ಮತ್ತು ಮನೆಗಳಲ್ಲಿ ಶ್ರಾವಣನ ಆಗಮನದಿಂದ ಉಂಟಾದ ಬದಲಾವಣೆಗಳು ಯಾವುವು?

೩. ಶ್ರಾವಣ ಮಾಸದಲ್ಲಿ ಬೆಟ್ಟ ಬನ ಹಾಗೂ ನೆಲ ಹೇಗೆ ಕಾಣುತ್ತಿವೆ?

೪. ಗುಡ್ಡಗಳನ್ನು ಆವರಿಸುವ ಮೋಡಗಳು ಕವಿಕಣ್ಣಿಗೆ ಹೇಗೆ ಕಂಡಿವೆ?

ಪೂರಕ ಓದು

೧. ಶ್ರಾವಣವನ್ನು ಕುರಿತಂತೆ ಬೇಂದ್ರೆಯವರೇ ರಚಿಸಿರುವ ಇತರ ಕವನಗಳು

೨. ಪಂಚೆ ಮಂಗೇಶರಾಯರ ‘ ಕಾರ್ಗಾಲದ ವೈಭವ’ ಕವನ

೩. ಕುವೆಂಪು ಅವರ ‘ವರ್ಷ ಭೈರವ’ ಕವನ