ಕೆಲವು ವರ್ಷಗಳ ಹಿಂದೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡುತ್ತಿದ್ದೆ. ಬಸ್ಸು ಮಂಡ್ಯ ಜಿಲ್ಲೆಯಲ್ಲಿ ಹೋಗುತ್ತಿದ್ದಾಗ ಆ ಜಿಲ್ಲೆ ಹಿಂದೆ ಇದ್ದ ಸ್ಥಿತಿಯ ನೆನಪಾಯಿತು. ಆಗ ಅದು ಮಳೆ ಸಾಲದೆ, ನೀರಿನ ಸೌಕರ್ಯವಿಲ್ಲದೆ, ಹೆಚ್ಚು ಕಡಿಮೆ ಬರಡು ಭೂಮಿಯಾಗಿತ್ತು. ಈಗ ರಸ್ತೆಯ ಇಕ್ಕೆಲದಲ್ಲೂ ಕಣ್ಣಿಗೆ ಕಾಣುವಷ್ಟು ದೂರವೂ ಹಸುರು ಕಂಗೊಳಿಸುತ್ತದೆ. ಎಲ್ಲಿ ನೋಡಿದರೂ ಭತ್ತದ ಬೆಳೆ; ಕಬ್ಬಿನ ಬೆಳೆ; ಎಲ್ಲ ಕಡೆಗಳಿಂದಲೂ ನೀರಿನ ಕಲರವ ಕಿವಿಯನ್ನು ಮುತ್ತುತ್ತದೆ. ನಾನು ಈ ಮಾರ್ಪಾಟನ್ನು ಸವಿಯುವುದರಲ್ಲಿ ಮಗ್ನನಾಗಿದ್ದಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕ ಸುತ್ತಣ ಹಸುರಿನ ಕಡೆಗೆ ಕೈಬೀಸಿ ಇಂಗ್ಲಿಷಿನಲ್ಲಿ ‘All this is visvesvarayya (ಇವೆಲ್ಲ ವಿಶ್ವೇಶ್ವರಯ್ಯ)’ ಎಂದ. ನನ್ನ ಮನಸ್ಸಿನಲ್ಲಿದ್ದ ಯೋಚನೆಯೇ ಆತನ ಬಾಯಿಂದ ಹೊರಟಿತು. ಸಾಧಾರಣವಾಗಿ ನಾವು ‘ಇದೆಲ್ಲಾ ವಿಶ್ವೇಶ್ವರಯ್ಯನವರು ಮಾಡಿದ ಕೆಲಸ’ ಎಂದು ಹೇಳುವ ಪದ್ಧತಿ. ಆದರೆ ಈ ಸಂದರ್ಭದಲ್ಲಿ ಆತ ಹೇಳಿದ್ದೇ ಸರಿ ಎನ್ನಿಸತು. ಈಗ ವಿಶ್ವೇಶ್ವರಯ್ಯನವರ ಭೌತದೇಹ ನಮ್ಮೊಡನೆ ಇಲ್ಲ. ಆದರೆ ಮಂಡ್ಯ ಜಿಲ್ಲೆಯ ಸೌಂದರ್ಯದಲ್ಲಿ, ಅಲ್ಲಿಯ ಜನರ ಅಭ್ಯುದಯದಲ್ಲಿ, ಅವರು ಜೀವಂತರಾಗಿದ್ದಾರೆ. ಅಂಥ ಸಂಪತ್ತನ್ನು ಸೃಷ್ಟಿಸಿ ಜನಜೀವನದ ಸೌಖ್ಯವನ್ನು ಹೆಚ್ಚಿಸುವುದೇ ಅವರ ಜೀವದಜೀವ. ಆ ಜಿಲ್ಲೆಗೆ ನೀರನ್ನು ಒದಗಿಸುವ ಕೃಷ್ಣರಾಜಸಾಗರವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡರು, ಅದರ ಯೋಜನೆಯನ್ನು ತಯಾರಿಸಿದವರು, ಅದನ್ನು ಕಟ್ಟಿಸಿದವರು, ವಿಶ್ವೇಶ್ವರಯ್ಯ. ಅದರ ಪ್ರಯೋಜನವನ್ನು ಪಡೆಯುತ್ತಿರುವವರು ಮಂಡ್ಯದ ರೈತರು, ಮತ್ತು ಅವರ ಮೂಲಕ ಮೈಸೂರು ರಾಜ್ಯ. ಅದಕ್ಕಾಗಿಯೇ ನಾವು ಈ ಎಂಜಿನಿಯರ್‌ರಾಜತಂತ್ರಜ್ಞರು ಮಾಡಿದ ಲೆಕ್ಕವಿಲ್ಲದಷ್ಟು ಉಪಕಾರಗಳಲ್ಲಿ ಮೊದಲು ಕೃಷ್ಣರಾಜಸಾಗರವನ್ನು ನೆನೆಯುತ್ತೇವೆ. ನನ್ನ ಆ ಸಹಪ್ರಯಾಣಿಕನು ವಿಶ್ವೇಶ್ವರಯ್ಯನವರ ಇತರ ಮಹಾಕಾರ್ಯಗಳನ್ನು – ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಬ್ಯಾಂಕು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರಿನ ಚೇಂಬರ್‌ಆಫ್‌ಕಾಮರ್ಸ್‌ಇವುಗಳನ್ನೂ ಸ್ಮರಿಸಿಕೊಂಡ. ಆದರೆ ಕೃಷ್ಣರಾಜ ಸಾಗರದ ಹೆಸರು ಹೇಳಿದ ಮೇಲೆ. ಗಾಂಧೀಜಿ ಒಂದು ಸಾರಿ ಹೇಳಿದರು: ಭಗವಂತ ಮಾನವರಿಗೆ ಕಾಣಿಸಿಕೊಂಡರೆ, ಮೊದಲು ಅನ್ನದ ರೂಪದಲ್ಲಿ ಕಾಣಿಸಿಕೊಳ್ಳಬೇಕು, ಎಂದು ವಿಶ್ವೇಶ್ವರಯ್ಯನವರು ತಮ್ಮನ್ನು ನಿಮಿತ್ತವಾಗಿ ಮಾಡಿಕೊಂಡು ಮಂಡ್ಯ ಜಿಲ್ಲೆಯಲ್ಲಿ ಅನ್ನಬ್ರಹ್ಮನ ಅವತಾರ ಮಾಡಿಸಿದರು.

ಡಾ. ವಿಶ್ವೇಶ್ವರಯ್ಯನವರು ೧೯೧೯ರಲ್ಲಿ ಸ್ವಂತ ಇಚ್ಛೆಯಿಂದ ದಿವಾನಗಿರಿಯನ್ನು ಬಿಟ್ಟುಕೊಟ್ಟು ಅಧಿಕಾರದಿಂದ ನಿವೃತ್ತರಾದರು; ಆದರೆ ದೇಶಸೇವೆಯಿಂದ ನಿವೃತ್ತರಾಗಲಿಲ್ಲ. ವರ್ಷಗಟ್ಟಲೆ ಅವರು ಕೃಷ್ಣರಾಜಸಾಗರದ ಅಭಿವೃದ್ಧಿ ಸಮಿತಿಯ ಮತ್ತು ಭದ್ರಾವತಿಯ ಕಬ್ಬಿಣ ಮುತ್ತು ಉಕ್ಕಿನ ಕಾರ್ಖಾನೆಯ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅವರ ಜೀವನದ ಕೊನೆ ಕೊನೆಯವರೆಗೂ ಕೈಗಾರಿಕೆ ಅಥವಾ ಎಂಜಿನಿಯರಿಂಗಿಗೆ ಸಂಬಂಧಪಟ್ಟ ತೊಡಕಾದ ಸಮಸ್ಯೆಯೇನು ಬಂದರೂ ಮೈಸೂರು ರಾಜ್ಯವು ಅವರ ಸಲಹೆಯನ್ನು ಬೇಡುತ್ತಿತ್ತು, ಪಡೆಯುತ್ತಿತ್ತು. ಅವರ ನಂತರ ಬಂದ ದಿವಾನರು ಮತ್ತು ಮಂತ್ರಿಗಳಲ್ಲಿ ಹೆಚ್ಚು ಕಡಿಮೆ ಎಲ್ಲರೂ ಅವರಲ್ಲಿ ಭಕ್ತಿಯಿಂದ ನಡೆದುಕೊಂಡು ಸಲಹೆ ಪಡೆದಿದ್ದಾರೆ. ನಮ್ಮ ರಾಜ್ಯದ ಜನಜೀವನದಲ್ಲಿ ಅದೆಷ್ಟು ಕಡೆ ಅವರ ಕೈವಾಡ ಕಾಣುತ್ತದೆಯೊ! ಅದಕ್ಕೇ ನಮ್ಮ ಜನ ದೊಡ್ಡದಾಗಿ ಕೈಬೀಸಿ ಹೇಳುತ್ತಾರೆ: ‘ಇದೆಲ್ಲಾ ವಿಶ್ವೇಶ್ವರಯ್ಯನವರ ಕೆಲಸ’ ಎಂದಲ್ಲ, ‘ಇದೆಲ್ಲಾ ವಿಶ್ವೇಶ್ವರಯ್ಯ’ ಎಂದು.

ವಿಶ್ವೇಶ್ವರಯ್ಯನವರು ಸಾಧಿಸಿದ ಕೆಲಸಗಳಷ್ಟೇ – ಬಹುಶಃ ಅವಕ್ಕಿಂತ ಹೆಚ್ಚಾಗಿ – ಅವರ ವ್ಯಕ್ತಿತ್ವ ಜನರ ಮನಸ್ಸನ್ನು ಸೆಳೆದಿದೆ. ಅವರು ಅತ್ಯಂತ ದಕ್ಷರಾದ ಎಂಜಿನಿಯರ್‌, ಮುಂದಾಲೋಚನೆಯುಳ್ಳ ರಾಜತಂತ್ರಜ್ಞರು, ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಘನವಾದ ಆದರ್ಶಗಳನ್ನು ಕಲ್ಪಿಸಿಕೊಂಡು ಅವನ್ನು ಸಾಧಿಸಲು ಶ್ರಮಿಸಿದವರು – ಇದನ್ನೆಲ್ಲಾ ಒತ್ತಿ ಹೇಳಬೇಕಾದ ಅವಶ್ಯಕತೆಯಿಲ್ಲ. ಇಲ್ಲಿ ಅವರ ವ್ಯಕ್ತಿತ್ವಕ್ಕೇ ಹೆಚ್ಚು ಗಮನ ಕೊಡಲಾಗಿದೆ. ಅವರ ವಿಷಯದಲ್ಲಿ ನಾನು ಕೇಳಿರುವ ಕಥೆಗಳೆಲ್ಲವೂ ನಿಜವಾಗಿ ನಡೆದುವೆಂದು ಹೇಳಲು ಸಾಕಾದಷ್ಟು ಆಧಾರವಿಲ್ಲ; ಆದರೆ ಆ ಕಥೆಗಳೆಲ್ಲವೂ ಅವರ ಸ್ವಭಾವಕ್ಕೆ ಹೊಂದುವಂಥವೇ ಅವರನ್ನು ದಿವಾನರನ್ನಾಗಿ ನೇಮಿಸಿದ ಸರ್ಕಾರಿ ಆಜ್ಞೆ ಕೈಗೆ ಬಂದಾಗ ಅವರು ಅದನ್ನು ತಾಯಿಯ ಪಾದಗಳ ಬಳಿ ಇಟ್ಟು ‘ನಮ್ಮ ಬಂಧುಗಳಲ್ಲಿ ಯಾರೊಬ್ಬರಿಗಾಗಲಿ ನೌಕರಿ ಕೊಡಬೇಕೆಂದು ನೀನು ಶಿಫಾರಸು ಮಾಡಬಾರದು; ಮಾಡುವುದಿಲ್ಲವೆಂದು ಭರವಸೆ ಕೊಟ್ಟರೆ ದಿವಾನಗಿರಿಯನ್ನು ಒಪ್ಪಿಕೊಳ್ಳುತ್ತೇನೆ’ ಎಂದರಂತೆ. ಈ ಮಾತನ್ನು ಹೇಳಿದ್ದು ಅವರ ತಾಯಿಗಲ್ಲ, ಸೋದರಮಾನಿಗೆ ಎಂದೂ ಕೇಳಿದ್ದೇನೆ – ಯಾವುದು ನಿಜವೋ ತಿಳಿಯದು. ಆದರೆ ಅವರು ತಮ್ಮ ಬಂಧುಗಳಲ್ಲಿ ಯಾರೊಬ್ಬರಿಗೂ ನೌಕರಿ ಕೊಡಲಿಲ್ಲವೆಂಬುದೇನೋ ಸತ್ಯ.

ಕ್ರಮ, ಶಿಸ್ತು, ತರ್ಕಬದ್ಧವಾದ ಆಲೋಚನೆ, ನಿಷ್ಕೃಷ್ಟತೆ ಇವು ವಿಶ್ವೇಶ್ವರಯ್ಯನವರು ಹುಟ್ಟುಗುಣಗಳು. ಇವುಗಳಿಗೆ ಲೋಪ ಬಂದೀತೆಂಬ ಶಂಕೆಯಿಂದ ಅವರು ಯಾವ ಕೆಲಕ್ಕಾಗಲಿ ಪೂರ್ವಸಿದ್ಧತೆಯಿಲ್ಲದೆ ಕೈಹಾಕುತ್ತಿರಲಿಲ್ಲ. ಇದಕ್ಕೆ ಉದಾಹರಣೆಯಾಗಿ ಅವರ ಜೀವನದಲ್ಲಿ ನಡೆದ ಒಂದು ಸಂಗತಿಯನ್ನು ಹೇಳಬಹುದು. ಒಂದು ಬಾರಿ ಅವರು ತಮ್ಮ ತವರೂರಾದ ಮುದ್ದೇನಹಳ್ಳಿಯಲ್ಲಿ ತಂಗಿದ್ದರು. ಅಂದು ಸಂಜೆ ಹಳ್ಳಿಯ ಪ್ರಾಥಮಿಕ ಶಾಲೆಯ ಬಳಿ ಹೋಗುತ್ತಿರುವಾಗ ಶಾಲೆಯಿಂದ ಮಕ್ಕಳು ಕೇಕೆಹಾಕುತ್ತಾ, ನಗುತ್ತಾ, ಕುಣಿಯುತ್ತ ಹೊರಬಂದರು. ವಿಶ್ವೇಶ್ವರಯ್ಯನವರು ಮಕ್ಕಳ ಕುಣಿದಾಟವನ್ನು ನೋಡಿ ಮುಗುಳುನಗೆ ನಗುತ್ತಾ ಮೇಷ್ಟರನ್ನು ಕರೆದು ಹತ್ತು ರೂಪಾಯಿ ನೋಟನ್ನು ಅವರ ಕೈಲಿಟ್ಟು ‘ಮಕ್ಕಳಿಗೆ ಏನಾದರೂ ತರಿಸಿಕೊಡಿ, ಬಾಯಿ ಸಿಹಿಯಾಗಲಿ’ ಎಂದರು. ಇದನ್ನು ನೋಡುತ್ತಿದ್ದ ವೃದ್ಧರೊಬ್ಬರು, ‘ಸ್ವಾಮಿ ಅವರಿಗೆ ಪೆಪ್ಪರ್‌ಮೆಂಟ್‌ಹಂಚಿದರೆ ಸಾಕೆ? ನಾಲ್ಕು ಬುದ್ಧಿಯ ಮಾತೂ ಅಪ್ಪಣೆಯಾಗಬೇಕು’ ಎಂದರು. ಹುಡುಗರೆಲ್ಲಾ ಮತ್ತೆ ಶಾಲೆಯೊಳಕ್ಕೆ ಕರೆತಂದ್ದಾಯಿತು; ವಿಶ್ವೇಶ್ವರಯ್ಯನವರು ಐದು ನಿಮಿಷ ಮಾತನ್ನೂ ಆಡಿದರು. ಆದರೆ ಶಾಲೆಯಿಂದ  ಹೊರಗೆ ಬಂದಾಗ ಅವರಿಗೆ ತಮ್ಮ ವಿಷಯದಲ್ಲೇ ವಿಪರೀತ ಅಸಮಾಧಾನ. ಎಂದೂ ಮಾಡದ ಕೆಲಸವನ್ನೂ ಅಂದು ಮಾಡಿದ್ದರು. ಪೂರ್ವ ಸಿದ್ಧತೆಯಿಲ್ಲದೆ ಭಾಷಣ ಮಾಡಿದ್ದರು! ಅವರ ದೃಷ್ಟಿಯಲ್ಲಿ ಅಕ್ಷಮ್ಯವಾದ ಈ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವವರೆಗೂ ರೂಪಾಯಿ ಖರ್ಚು ಮಾಡಿ, ಮಕ್ಕಳಿಗೆ ತಿಂಡಿತೀರ್ಥಗಳನ್ನು ಹಂಚಿ, ಮತ್ತೆ ಒಂದು ಭಾಷಣ ಮಾಡಿದರು. ಅದು ಜಾಗರೂಕತೆಯಿಂದ ತಯರು ಮಾಡಿದ್ದ ಭಾಷಣ. ಮೊದಲಿನ ಭಾಷಣಕ್ಕೂ ಎರಡನೆಯದಕ್ಕೂ ವಿಷಯಸಂಪತ್ತಿನಲ್ಲೂ ಸುಸಂಬದ್ಧತೆಯಲ್ಲೂ ಏನು ವ್ಯತ್ಯಾಸವಿತ್ತೊ ತಿಳಿಯದು; ಇದ್ದರೂ ಆದು ಆ ಚಿಕ್ಕಮಕ್ಕಳ ಗಮನಕ್ಕಂತೂ ಬಂದಿರಲಾರದು. ಅವರು ಮಿಠಾಯಿ ತಿಂದು ಬಾಯಿ ಚಪ್ಪರಿಸುತ್ತಾ ಬಟ್ಟಲುಗಣ್ಣು ಬಿಟ್ಟು ‘ದಿವಾನರು’ ಎಂಬ ವಿಚಿತ್ರ ಅದ್ಭುತ ವ್ಯಕ್ತಿಯನ್ನು ನೋಡುತ್ತಿದ್ದರೇ ಹೊರತು ಭಾಷಣವನ್ನು ಅಷ್ಟಾಗಿ ಕೇಳುತ್ತಿದ್ದಿರಲಾರರು. ಈ ಪ್ರಸಂಗದಲ್ಲಿ ನಾವು ಗಮನಿಸಬೇಕಾದ ಅಂಶ ಇದು: ವಿಶ್ವೇಶ್ವರಯ್ಯನವರು  ಮೇಧಾವಿಗಳಾದ ಮತ್ತು ವಿಚಾರ ಪರರಾದ ಶ್ರೋತೃಗಳಿಗೆ ಎಷ್ಟು ಗೌರವ ಸಲ್ಲಿಸಬೇಕೋ ಅಷ್ಟೇ ಗೌರವನ್ನು ಆ ಹಸುಮಕ್ಕಳಿಗೂ ಸಲ್ಲಿಸಿದರು.

ಶ್ರೋತೃವರ್ಗದ ವಿಷಯದಲ್ಲಿ ಗೌರವ, ಆಲೋಚನೆಯಲ್ಲಿ ಸತ್ಯನಿಷ್ಠೆ, ಈ ಉದಾತ್ತ ಗುಣಗಳಿಗೆ ಬೆಲೆ ಕೊಡಬೇಕಾದ್ದರಿಂದ ಅವರು ಎಂಥ ಅಮುಖ್ಯ ಸಂದರ್ಭದಲ್ಲಾಗಲಿ ಪೂರ್ವ ಸಿದ್ಧತೆಯಿಲ್ಲದೆ ಮಾತಾಡಲೊಲ್ಲರು. ಆಡಿದ ಮಾತು, ಬರೆದ ಬರಹ, ಯಾವುದರಲ್ಲೂ ಸತ್ಯಕ್ಕೂ ನಿಷ್ಕೃಷ್ಟತೆಗೂ ಲೋಪ ಬರಬಾರದು. ಕೆಲವರು ಪ್ರೀತಿಜನ್ಯವಾದ ವಿಷಾದದಿಂದ, ‘ಇವರು ತಮ್ಮ ಮಾತಿನಿಂದಲೂ ಬರಹದಿಂದಲೂ ಭಾಷಾಸೌಂದರ್ಯವನ್ನು ನಿರ್ಧಯರಾಗಿ ಹೊರದೂಡೂತ್ತಾರಲ್ಲ’ ಎಂದು ಅತೃಪ್ತಿಗೊಂಡಿದ್ದಾರೆ. ವಿಶ್ವೇಶ್ವರಯ್ಯನವರು  ಹಾಗೆ ಮಾಡುತ್ತಿದ್ದುದ್ದೇನೋ ನಿಜ: ಆದರೆ ಅದು ನಕಾರಾತ್ಮಕ ಕ್ರಿಯೆಯಲ್ಲ. ಅವರ ಉದ್ದೇಶ ಭಾಷಾಸೌಂದರ್ಯವನ್ನು  ಹೊರ ಹಾಕಬೇಕೆಂದಲ್ಲ, ಸತ್ಯವನ್ನು ಬರಮಾಡಿಕೊಳ್ಳಬೇಕೆಂದು ಅನೇಕ ವೇಳೆ ‘ಭಾಷಾಸೌಂದರ್ಯ’ ಎನ್ನಿಸಿಕೊಳ್ಳುವುದು ಸತ್ಯವನ್ನು ಮರೆಸುತ್ತದೆ. ಸುಂದರವಾದ ವಾಗ್ರತ್ನಗಳ ಅಲಂಕಾರ ಮಾಡಿ ಜನರನ್ನು ಮರಳುಮಾಡುವ ಕಲೆ ನಮ್ಮಲ್ಲಿ ಸಾಕಾದಷ್ಟು ಬೆಳೆದಿದೆ! ವಿಶ್ವೇಶ್ವರಯ್ಯನವರಿಗೆ ಸತ್ಯವೇ ಸೌಂದರ್ಯ; ಆದ್ದರಿಂದ ಅದನ್ನು ಅಲಂಕರಿಸಲೊಲ್ಲರು. ಸತ್ಯ ತನ್ನ ಸತ್ಯತೆಯಿಂದಲೆ ಪ್ರಭಾವಶಾಲಿಯಾಗಬಲ್ಲುದೆಂದು ಅವರ ನಂಬಿಕೆ.

‘ಡಾ. ವಿಶ್ವೇಶ್ವರಯ್ಯನವರಿಗೆ ಪ್ರಕೃತಿ ಸೌಂದರ್ಯವನ್ನು ಅನುಭವಿಸಿ ಆನಂದ ಪಡೆಯುವ ಮನೋವೃತ್ತಿಯಿಲ್ಲ’ ಎಂಬ ಟೀಕೆಯನ್ನೂ ಇದೇ ದೃಷ್ಟಿಯಿಂದ ಪರಿಶೀಲಿಸಬೇಕು. ನನಗೆ ಹಿರಿಯ ಮಿತ್ರರಾಗಿ ಗುರುಸ್ಥಾನದಲ್ಲಿರುವವರೊಬ್ಬರು ವಿಶ್ವೇಶ್ವರಯ್ಯನವರನ್ನು ಬಹುಕಾಲ ದಿಂದ ಚೆನ್ನಾಗಿ ಬಲ್ಲವರು; ಕೆಲವು ಸಂದರ್ಭಗಳಲ್ಲಿ ಕೇವಲ ವಿಶ್ವಾಸಕ್ಕಾಗಿ ಅವರ ಕಾರ್ಯದರ್ಶಿಗಳಾಗಿ  ಕೆಲಸ ಮಾಡಿದವರು. ಅವರು ಒಂದು ಸಾರಿ ವಿಶ್ವೇಶ್ವರಯ್ಯ ನವರೊಡನೆ ಪ್ರವಾಸದಲ್ಲಿದ್ದಾಗ ಕನ್ಯಾಕುಮಾರಿಯಲ್ಲಿ ಸಂಜೆ ಬೆಳಕು ಸಮುದ್ರದ ಮೇಲೆ ಬಿದ್ದು ನಿರ್ಮಿಸಿದ  ಸೌಂದರ್ಯವನ್ನು ನೋಡಿ ಭಾವಾವೇಶದಿಂದ ಬಣ್ಣಿಸತೊಡಗಿದರಂತೆ. ವಿಶ್ವೇಶ್ವರಯ್ಯನವರು ನಿಟ್ಟುಸಿರುಬಿಟ್ಟು ‘ನೀವು ಕವಿಗಳಾಗಿಬಿಟ್ಟಿರಿ!’ ಎಂದರು  ಪ್ರಕೃತಿ ಸೌಂದರ್ಯ ಅವರ ಕಣ್ಣಿಗೆ ಕಾಣಲಿಲ್ಲವೆಂದಲ್ಲ. ಆ ಸೌಂದರ್ಯ ಅಲ್ಲಿ ಇದ್ದೇ ಇದೆ. ಅದಕ್ಕೆ ಆಭರಣ ತೊಡಿಸುವುದರಲ್ಲಿ ನಮ್ಮ ಶಕ್ತಿ ವ್ಯಯವಾಗಬೇಕೆ? ಕಮಲಕ್ಕೆ ಬಣ್ಣ ಬಳಿಯಬೇಕೆ? ಅವರು ನಿಸರ್ಗ ಸೌಂದರ್ಯವನ್ನ ಬಲ್ಲರು; ಆದರೆ ಅದರ ಮುನ್ನೆಲೆಯಲ್ಲಿ ವಿಕಟ ನೃತ್ಯ ಮಾಡುತ್ತಿರುವ ಜನಜೀವನದ ಕಷ್ಟ, ಕಾರ್ಪಣ್ಯ, ದಾರುಣತೆಗಳನ್ನೂ ಬಲ್ಲರು. ಇವು ಅವರ ಹೃದಯವನ್ನು ಶೂಲದಂತೆ ಇರಿದಿವೆ. ನಿಸರ್ಗದ ಸೌಂದರ್ಯವನ್ನು ಜನಜೀವನದಲ್ಲೂ ತರಬೇಕು; ನಮ್ಮ ಗಮನ ಹರಿಯಬೇಕಾದ್ದು ಅತ್ತಕಡೆಗೆ. ಕಲ್ಪನಾ ಪ್ರಪಂಚದಲ್ಲೂ ಭಾವಪ್ರಪಂಚದಲ್ಲೂ ಇರುವ ಆದರ್ಶವನ್ನು ವಾಸ್ತವ ಪ್ರಪಂಚದಲ್ಲಿ ಸಾಧಿಸಬೇಕೆಂದು ಹಂಬಲಿಸುವ ಕಾರ್ಯವಾಸಿಗಳ ತರ್ಕ ಹೀಗೆ ಸಾಗುವುದೇ ಸ್ವಾಭಾವಿಕ. ವಿಶ್ವೇಶ್ವರಯ್ಯನವರು ಜೋಗ್‌ಜಲಪಾತದ ಅದ್ಭತ ಸೌಂದರ್ಯದ ಮುಂದೆ ಮೊದಲಬಾರಿ ನಿಂತಾಗ ಭಾವಸಮಾಧಿಗೆ ಹೋಗಲ್ಲೊಲ್ಲದೆ ‘ಎಷ್ಟೊಂದು ಶಕ್ತಿ ಪೋಲಾಗುತ್ತಿದೆ!’ ಎಂದರಂತೆ (ಈ ಮಾತನ್ನು ಇತರರ ವಿಷಯದಲ್ಲಿ ಹೇಳಿದ್ದನ್ನೂ ಕೇಳಿದ್ದೇನೆ). ಈ ಕಥೆ ನಿಜವಲ್ಲದಿದ್ದರೆ ನಿಜವಾಗಬೇಕಾದದ್ದು. ವಿಶ್ವೇಶ್ವರಯ್ಯನವರಿಂದ ಹೊರಡಬೇಕಾದರೆ ಅಂಥ ಮಾತೇ. ಆ ಜಪಪಾತದ ಶಕ್ತಿಯನ್ನು ಉಪಯೋಗಕ್ಕೆ ತರಲು ಮೈಸೂರು ಸರ್ಕಾರ ಈಗ ಶ್ರಮಿಸುತ್ತಿದೆ.

ಬಡವರು ತಮಗೆ ಅವಶ್ಯಕವಾದ ಸೇವೆಯೆಲ್ಲಕ್ಕೂ ಹಣ ಸುರಿಯಬೇಕು. ಹಣಗಾರರೂ ಅಧಿಕಾರದಲ್ಲಿರುವವರೂ ಅನೇಕ ವೇಳೆ ಬಿಟ್ಟಿ ಸೇವೆಯನ್ನು ನಿರೀಕ್ಷಿಸುತ್ತಾರೆ. ಪಡೆದೂ ಪಡೆಯಿತ್ತಾರೆ. ‘ಅದು ಪ್ರಭಾವಶಾಲಿಗಳಾದವರಿಗೆ ನಾವು ಸಲ್ಲಿಸಬೇಕಾದ ಕಾಣಿಕೆ, ಅವರಿಂದ ಹಣ ತೆಗೆದುಕೊಳ್ಳದಿರುವುದು ವಿವೇಕ’ ಎಂಬ ಭಾವನೆ ಜನರ ಮನಸ್ಸಿನಲ್ಲಿರುವುದು ಸಾಮಾನ್ಯ. ಆದರೆ ವಿಶ್ವೇಶ್ವರಯ್ಯನವರು ‘ದುಡಿದವನಿಗೆ ಪ್ರತಿಫಲ ದೊರೆಯಲೇಬೇಕು’ ಎಂಬ ತತ್ವಕ್ಕೆ ವಿರೋಧವಾಗಿ ಎಂದೂ ನಡೆದವರಲ್ಲ. ಒಂದು ಬಾರಿ ಅವರು ಹಾಸನ ಜಿಲ್ಲೆಯ ಯಾವುದೋ ಸಣ್ಣ ಊರಿನ ಬಳಿ ಬಿಡಾರ ಮಾಡಿದ್ದರಂತೆ. ಕೈಬೆರಳಿಗೆ ಅಕಸ್ಮಾತ್ತಾಗಿ ಸಣ್ಣ ಗಾಯವಾಗಿ ರಕ್ತ ಬಂತು. ಹಳ್ಳಿಯ ಆಸ್ಪತ್ರೆಗೆ ಹೋಗಿ ಗಾಯದ ಮೇಲೊಂದು ಪ್ಲಾಸ್ತ್ರಿ ಹಾಕಿಸಿ, ಮರಳಿ ಬಿಡಾರಕ್ಕೆ ಬಂದೊಡನೆ ಡಾಕ್ಟರಿಗೆ ಇಪ್ಪತ್ತೈದು ರೂಪಾಯಿನ ಚೆಕ್ಕು ಕಳಿಸಿದರು. ಡಾಕ್ಟರರು ಚೆಕ್ಕನ್ನು ಹಿಡಿದುಕೊಂಡು ಓಡಿಬಂದು, ‘ನನ್ನ ಕರ್ತವ್ಯಕ್ಕಿಂತ ಹೆಚ್ಚಿನದೇನನ್ನೂ ನಾನು ಮಾಡಲಿಲ್ಲ. ಈ ಚೆಕ್ಕನ್ನು ತೆದ್ಗೆದುಕೊಳ್ಳಲಾರೆ. ತಮಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದೇ ನನಗೊಂದು ಗೌರವ’ ಎಂದರು. ಅದಕ್ಕೆ ಉತ್ತರವಾಗಿ ವಿಶ್ವೇಶ್ವರಯ್ಯನವರು ಆತನ ಕೊನೆಯ ವಾಕ್ಯಕ್ಕೆ ಹೆಚ್ಚಿನ ವ್ಯಾಪ್ತಿಯನ್ನು ಕೊಟ್ಟು, ಗಂಭೀರ ಮುದ್ರೆಯಿಂದ ಹೇಳಿದರು: ‘ಹೌದು, ಯಾವ ರೋಗಿಗೇ ಆಗಲಿ, ಸೇವೆ ಸಲ್ಲಿಸಿದಾಗ ನಿಮ್ಮನ್ನು ನೀವು ಗೌರವಿಸಿಕೊಂಡಂತೆ. ನಮ್ಮೆಲ್ಲರ ಮನೋವೃತ್ತಿಯೂ ಹಾಗಿರಬೇಕೆಂದೇ ನನ್ನ ಆಸೆ. ಆದರೆ ಹಣ ಕೊಡುವ ಶಕ್ತಿಯುಳ್ಳವನು ಕೊಡಬೇಕು. ಕೊಡದಿದ್ದರೆ. ಕೊಡಲಾರದವರಿಂದ ಹಣ ಪಡೆಯುವ ಆಸೆ ನಿಮ್ಮಲ್ಲಿ ಕುದುರಬಹುದು. ನಿಮ್ಮ ಕರ್ತವ್ಯವನ್ನು ನೀವು ಪಾಲಿಸಿದ್ದೀರಿ; ನನ್ನದನ್ನೂ ಪಾಲಿಸಲು ಅವಕಾಶ ಕೊಡಿ’.

ಕೆಲವು ವೇಳೆ ಮಹಾಪುರುಷರು ಉನ್ನತವಾಗಿ ಬೆಳೆದು ವಿಶಾಲವಾಗಿ ಕೊಂಬೆಗಳನ್ನು ಹರಡಿಕೊಂಡಿರುವ ಮರಗಳಂತೆ ತಮ್ಮ ಸುತ್ತಲೂ ನೆರಳು ಚೆಲ್ಲುತ್ತಾರೆ; ಆ ನೆರಳಿನಲ್ಲಿ ಮತ್ತಾವ ಗಿಡವೂ ಬೆಳೆಯದು. ಅಂಥವರ ಪ್ರಭಾವದಿಂದಾಗಿ ಅವರ ಸುತ್ತಮುತ್ತ ಇರುವವರ ಆತ್ಮವಿಶ್ವಾಸ, ಎದೆಗಾರಿಕೆ ಮುನ್ನುಗ್ಗುವ ಶಕ್ತಿ ಇವೆಲ್ಲಾ ಕುಂದುಹೋಗಬಹುದು. ಈ ಬಗೆಯ ಲೋಪಕ್ಕೆ ಅವಕಾಶ ಕೊಡದಿರುವ ಅಪರೂಪ ವ್ಯಕ್ತಿಗಳಲ್ಲಿ ವಿಶ್ವೇಶ್ವರಯ್ಯನವರೂ ಒಬ್ಬರು. ಅವರು ತಮ್ಮ ಸುತ್ತಲೂ ಚೆಲ್ಲಿರುವುದು ನೆರಳಲ್ಲ ಬೆಳಕು. ಅವರು ಬಯಸುತ್ತಿದ್ದದ್ದು ಕುರುಡು ವಿಧೇಯತೆಯಲ್ಲ; ಆತ್ಮವಿಶ್ವಾಸವುಳ್ಳವರನ್ನೂ ಹೊಸ ಪ್ರಯೋಗಗಳನ್ನು ನಡೆಸುವ ಕೆಚ್ಚುಳ್ಳವರನ್ನೂ ಅವರು ಹುಡುಕಿಕೊಂಡು ಹೋಗುತ್ತಿದ್ದರು; ಆ ಗುಣಗಳನ್ನು ಇತರರ ಮೇಲೆ ಬಲಾತ್ಕಾರವಾಗಿ ಹೊರಿಸಿದ್ದೂ ಉಂಟು. ಮೈಸೂರು ರಾಜ್ಯದಲ್ಲಿ ಅವರ ನಂತರ ಅಧಿಕಾರಕ್ಕೆ ಬಂದು ದಕ್ಷತೆಗೂ ಪ್ರಾಮಾಣಿಕತೆಗೂ ಹೆಸರು ಪಡೆದ ದಿವಾನರಿಬ್ಬರು ಅವರೊಡನೆಯೇ ಬಹುಕಾಲ ಕೆಲಸಮಾಡಿ ಅವರಲ್ಲಿ ಭಕ್ತಿಯಿಟ್ಟಿದ್ದರು; ಅವರ ಪಾಲಿಸಿಗಳನ್ನು ಮುಂದುವರೆಸಿದವರು. ಆದರೂ ಅವಶ್ಯಕವೆಂದು ತೋರಿದಾಗ ವಿಶ್ವೇಶ್ವರಯ್ಯನವರ ಅಭಿಪ್ರಾಯಗಳನ್ನು ವಿರೋಧಿಸುವ ಧೈರ್ಯ ಅವರಲ್ಲಿ ಬೆಳೆದಿತ್ತು; ಪ್ರಾಮಾಣಿಕ ವಿರೋಧಕ್ಕೆ ಗೌರವ ಕೊಡುವ ಔನ್ನತ್ಯ ವಿಶ್ವೇಶ್ವರಯ್ಯನವರಲ್ಲಿತ್ತು. ಆತ್ಮವಿಶ್ವಾಸವನ್ನು ಅವರು ಹೇಗೆ ಬೆಳೆಸುತ್ತಿದ್ದರೆಂಬುದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವನ್ನು ಇಲ್ಲಿ ಕಾಣಿಸಬಹುದು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬ್ಲಾಸ್ಟ್‌ಫರ್ನೇಸಿನ ಮೇಲ್ವಿಚಾರಣೆಗೆ ಅಂಮೇರಿಕದವರರೊಬ್ಬರನ್ನು ನೇಮಿಸಿದ್ದರು. ಆತನ ಅಧಿಕಾರಾವಧಿ ಮುಗಿದೊಡನೆ ವಿಶ್ವೇಶ್ವರಯ್ಯನವರು ಅವರನ್ನು ಗೌರವದಿಂದ ಕಳಿಸಿಕೊಟ್ಟು, ಮೈಸೂರಿನವರೊಬ್ಬರನ್ನು ಕರೆದು ‘ಈ ಕೆಲಸವನ್ನು ನೀವು ವಹಿಸಿಕೊಳ್ಳಿ’ ಎಂದರು. ಆ ಯುವಕನಿಗೆ ಅನಿರೀಕ್ಷಿತವಾಗಿ ಈ ಸನ್ಮಾನ ದೊರೆತದ್ದು ಆಶ್ಚರ್ಯವನ್ನುಂಟು ಮಾಡಿತು. ಯಾಂತ್ರಿಕ ವಿಷಯಗಳಲ್ಲಿ ದಕ್ಷತೆಯಿರುವುದೆಂದರೆ ಬಿಳಿಯರಲ್ಲಿ ಮಾತ್ರ ಎಂದು ಜನ ನಂಬಿದ್ದ ಕಾಲ! ಆತ ‘ನನ್ನ ಕೈಲಾದಷ್ಟು ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನನಗೆ ಈ ಕೆಲಸಕ್ಕೆ ಬೇಕಾದಷ್ಟು ಶಕ್ತಿಯಿದೆಯೋ ಇಲ್ಲವೋ ಕಾಣೆ’ ಎಂದು ನಮ್ರನಾಗಿ ತಡವರಿಸಿದ. ವಿಶ್ವೇಶ್ವರಯ್ಯನವರ ಉತ್ತರ ಸ್ಪಲ್ಪ ನಿಷ್ಠುರವಾಗಿಯೇ ಬಂತು: ‘ನಿಮಗೆ ಶಕ್ತಿಯಿದೆಯೆ ಅಂತ ನಾನು ಕೇಳುತ್ತಿಲ್ಲ, ಇದೆ ಅಂತ ಹೇಳುತ್ತಿದ್ದೇನೆ’.

‘ವಿಶ್ವೇಶ್ವರಯ್ಯನವರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಯಿತಲ್ಲವೆ?’ ಎಂಬ ಸಂದೇಹವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ನಮ್ಮ ಜೀವಸಂಪತ್ತನ್ನು ಹೆಚ್ಚಿಸಲು ನೆರವಾಗುವ ಅಂಶಗಳು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕಂಡುಬಂದಾಗ ಅವನ್ನು ಸ್ವೀಕರಿಸಲು ವಿಶ್ವೇಶ್ವರಯ್ಯನವರು ಹಿಂದೆಗೆಯುತ್ತಿರಲಿಲ್ಲ. ಏಕೆ ಹಿಂದೆಗೆಯಬೇಕು? ಆದರೆ ಅವರ ಜೀವನಕ್ಕೆ ತಳಹದಿಯಾಗಿದ್ದದ್ದು ಭಾರತದ ಸಂಸ್ಕೃತಿಯಲ್ಲವೆಂದು ಭಾವಿಸಿದರೆ ಅದು ತಪ್ಪು. ಅವರಿಗೆ ಪಾಶ್ಚಾತ್ಯರ ದಿರಸನ್ನು ಕಂಡರೆ ಅಭಿಮಾನವೇನೋ ಉಂಟು. ಅದು ನೀಟಾಗಿರುತ್ತದೆ, ಅತ್ತ ಇತ್ತ ಹಾರಾಡುವುದಿಲ್ಲ, ಕೈ ಕಾಲುಗಳ ಚಲನೆಗೆ ಅಡ್ಡಿಯಾಗುವುದಿಲ್ಲ. ಆದರೆ ಮನೆಯಲ್ಲಿ ಊಟಕ್ಕೆ ಕುಳಿತುಕೊಳ್ಳುವಾಗ ಅವರು ಪಂಚೆಯನ್ನೇ ಉಡುತ್ತಿದ್ದರಂತೆ. ಕೈಗಾರಿಕೆಗಳನ್ನು ಬೆಳೆಸಿಕೊಳ್ಳದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲವೆಂಬುದನ್ನು ಅವರಿಗಿಂತ ಚೆನ್ನಾಗಿ ಮನಗಂಡವರಿಲ್ಲ, ಆದರೆ ಅವರು ಪ್ರಯಾಣ ಹೊರಟಿದ್ದಾಗ ಅವರ ಸೂಟ್‌ಕೇಸಿನಲ್ಲಿ ಭಗವದ್ಗೀತೆಯ ಪ್ರತಿ ಇದ್ದದ್ದನ್ನುಉ ಮಿತ್ರರೊಬ್ಬರು ಕಂಡಿದ್ದಾರೆ. ಕೊನೆಯವರೆಗೂ ಅವರ ಮನೆಯಲ್ಲಿ ಉಪಾಕರ್ಮ ಮೊದಲಾದ ಹಬ್ಬಗಳು ಒಂದು ಮಿತಿಯಲ್ಲಿ – ಅವರಿಗಿದ್ದ ಕಾಲಾವಕಾಶದ ಮಿತಿಯಲ್ಲಿ – ಆಚರಣೆಯಲ್ಲಿದ್ದವೆಂದು ಕೇಳಿದ್ದೇನೆ. ಅವರು ಇಹಜೀವನಕ್ಕೆ ತಿರಸ್ಕಾರ ಹಾಕಿ ಆಧ್ಯಾತ್ಮಿಕ ಜೀವನವೊಂದನ್ನೇ ಗಗನಕ್ಕೆ ಏರಿಸುತ್ತಿರಲಿಲ್ಲ ನಿಜ. ಆದರೆ, ನಮ್ಮ ಉಪನಿಷತ್ತುಗಳು ತಾನೆ ಹಾಗೆ ಮಾಡುತ್ತವೇನು? ಕಾಯಕದ ಹಿರಿಮೆ, ಕರ್ತವ್ಯ ನಿಷ್ಠೆ ಸರ್ವರಿಗೂ ಸಂಪಧ್ಯಕ್ತವಾದ ಪೂರ್ಣಜೀವನ – ಇಂಥ ಆದರ್ಶಗಳನ್ನು ನಂಬಿದ್ದ  ವಿಶ್ವೇಶ್ವರಯ್ಯನವರು ಉಪನಿಷತ್ತುಗಳ ಶ್ರುತಿಗೆ ಹೊಂದುವಂಥ ಜೀವನವನ್ನು ನಡೆಸುತ್ತಿದ್ದರೆಂದು ಧಾರಾಳವಾಗಿ ಹೆಳಬಹುದು. ಅಸ್ಪಷ್ಟವಾದ, ಜೀವನದ ಸಂಬಂಧವನ್ನು ಕಡಿದುಕೊಂಡಿರುವ, ನಿಷ್ಚಲ ಅನುಭಾವವು ‘ನಾನೇ ಭಾರತದ ಅಂತರಾತ್ಮ’ ಎಂದು ಅನೇಕವೇಳೆ ಸೋಗುಹಾಕುತ್ತದೆ. ಈ ಬಗೆಯ ಅನುಭಾವ ವಿಶ್ವೇಶ್ವರಯ್ಯನವರಿಗೆ ಹಿಡಿಸದು.

‘ವಿಶ್ವೇಶ್ವರಯ್ಯ: ವ್ಯಕ್ತಿ ಮತ್ತು ಐತಿಹ್ಯ’ ಈ ದ್ವೈತ ಸಲ್ಲದು; ಅವರ ಮಟ್ಟಿಗೆ ‘ವ್ಯಕ್ತಿಯೇ ಐತಿಹ್ಯ, ಐತಿಹ್ಯವೇ ವ್ಯಕ್ತಿ’ ಎನ್ನಬಹುದು.

ಲೇಖಕರು

ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್‌(೧೯೦೦) ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ಪ್ರೊಫೆಸರ್‌ಆಗಿದ್ದವರು. ಕನ್ನಡದ ಲಲಿತ ಪ್ರಬಂಧಗಳಲ್ಲಿ ಅವರಷ್ಟು ಎತ್ತರದ ಸಾಧನೆ ಮಾಡಿದವರಿಲ್ಲ. ಬಹಳ ಸುಂದರವಾದ ಸರಸಪೂರ್ಣಾವಾದ ಗದ್ಯವನ್ನು ಬರೆದ ಮೂರ್ತಿರಾಯರು ‘ಹಗಲುಗನಸುಗಳು’, ‘ಅಲೆಯುವ ಮನ’, ‘ಮಿನುಗುಮಿಂಚು’ ಮುಂತಾದ ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ‘ಪತ್ರಗಳು ಚಿತ್ರಗಳು’ ಕೃತಿಗೆ ೧೯೭೯ರಲ್ಲಿ ಕೇಂದ್ರ ಸಾಹಿತ್ಯ ಆಕಾಡೆಮಿ ಬಹುಮಾನ ಬಂದಿದೆ. ಕನ್ನಡದಲ್ಲಿ ಶಿವರಾಮ ಕಾರಂತರಂತೆ ಮೂರ್ತಿರಾಯರು ಕೂಡ ನಾಸ್ತಿಕವಾದಿ ಚಿಂತನೆಯ ಪ್ರತಿಪಾದಕರು. ಅವರು ಬರೆದ ‘ದೇವರು’ ಪುಸ್ತಕವು ಬಹಳ ಚರ್ಚೆಗೆ ಒಳಗಾಗಿದೆ. ಅವರ ಪ್ರವಾಸ ಕಥನದ ಹೆಸರು ‘ಅಪರವಯಸ್ಕನ ಅಮೆರಿಕಾ ಯಾತ್ರೆ’ ಕನ್ನಡದಲ್ಲಿ ನೂರುವರ್ಷಕ್ಕೂ ಮೀರಿದ ಸುದೀರ್ಘ ಬಾಳುವೆ ಮಾಡಿದ ಲೇಖಕರಲ್ಲಿ ಒಬ್ಬರಾಗಿರುವ ಮೂರ್ತಿರಾಯರು, ‘ಸಂಜೆಗಣ್ಣಿನ ಹಿನ್ನೋಟ’ ಎಂಬ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ಮೂರ್ತಿರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ೧೯೮೪ರಲ್ಲಿ ಕೈವಾರದಲ್ಲಿ ನಡೆದ ೫೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಈ ವ್ಯಕ್ತಿಚಿತ್ರವನ್ನು ಅವರ ‘ಸಮಗ್ರ ಲಲಿತಪ್ರಬಂಧಗಳು’ ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಇಲ್ಲಿ ಲೇಖಕರು ಸರ್‌ಎಂವಿ ಬಗ್ಗೆ ಜನರಲ್ಲಿರುವ ನೆನಪಿನ ಪ್ರಸಂಗಗಳನ್ನು ಇಟ್ಟುಕೊಂಡು, ಕರ್ನಾಟಕ್ಕೆ ಅವರು ಮಾಡಿದ ಸೇವೆಯನ್ನು ಚಿತ್ರಿಸಿದ್ದಾರೆ. ಅವರ ಬಗ್ಗೆ ಇರುವ ಕೆಲವು ಟೀಕೆಗಳಿಗೆ ಉತ್ತರಿಸಲು ಯತ್ನಿಸಿದ್ದಾರೆ.

ಪದಕೋಶ

ನಿಷ್ಕೃಷ್ಟತೆ = ಖಚಿತೆ, ವಾಗ್ರತ್ನ = ಮಾತಿನ ರತ್ನ, ಪ್ಲಾಸ್ತ್ರಿ =ಬ್ಯಾಂಡೇಜು, ದ್ವೈತ ವಿಭಜನೆ =ಎರಡುತನ, ಐತಿಹ್ಯ = ದಂತಕತೆಯಾಗಿ ಹರಡಿರುವ ಘಟನೆ

ಟಿಪ್ಪಣಿ

ದಿವಾನ ಪದವಿಗೆ ರಾಜಿನಾಮೆ ಪ್ರಸಂಗ ಹಿಂದುಳಿದ ವರ್ಗಗಳಿಗೆ ಸರಕಾರಿ ಕೆಲಸಗಳಲ್ಲಿ ಮೀಸಲಾತಿ ನೀಡುವ ಕುರಿತು ಮೈಸೂರಿನ ದೊರೆಗಳಾದ ನಾಲ್ವಡಿ ಕೃಷ್ಣರಾಜ ಒಡೆಯರು, ಮಿಲ್ಲರ್‌ಆಯೋಗ ನೇಮಿಸಿ ಪಡೆದ ವರದಿಯನ್ನು ಜಾರಿ ತರಬೇಕೆಂದು ಬಯಸಿದರು. ಇದಕ್ಕೆ ಸರ್‌ಎಂವಿ ಅವರ ವಿರೋಧವಿತ್ತು. ಹೀಗೆ ಮಾಡುವುದರಿಂದ ಪ್ರತಿಭೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಒಡೆಯರು ಮಿಲ್ಲರ್‌ವರದಿ ಜಾರಿಗೆ ತರಲು ನಿರ್ಧರಿಸಿದಾಗ ವಿಶ್ವೇಶ್ವರಯ್ಯನವರು ತಾತ್ವಿಕ ಕಾರಣ ನೀಡಿ ರಾಜಿನಾಮೆ ಕೊಟ್ಟರು.

ಪ್ರಶ್ನೆಗಳು

೧. ವಿಶ್ವೇಶ್ವರಯ್ಯನವರನ್ನು ಕುರಿತು ಪ್ರಯಾಣಿಕನೊಬ್ಬ ಮಾಡಿದ ಉದ್ಗಾರವು ಲೇಖಕರಿಗೆ ಯಾಕೆ ನಿಜವೆನಿಸಿತು?

೨. ಕರ್ನಾಟಕದ ಅಭಿವೃದ್ಧಿಗೆ ವಿಶ್ವೇಶ್ವರಯ್ಯನವರು ಮಾಡಿದ ಮುಖ್ಯ ಕೆಲಸಗಳು ಯಾವುವು?

೩. ದಿವಾನ ಪದವಿ ಬಂದಾಗ ವಿಶ್ವೇಶ್ವರಯ್ಯನವರು ತಮ್ಮ ತಾಯಿಗೆ ಹೇಳಿದ ಮಾತೇನು?

೪. ದಿವಾನರಾಗಿ ವಿಶ್ವೇಶ್ವರಯ್ಯನವರು ರಾಜಿನಾಮೆ ಕೊಡಬೇಕಾದ ಹಿನ್ನೆಲೆ ಯಾವುದು. ಈ ಕುರಿತು ನಿಮ್ಮ ಅಭಿಪ್ರಾಯವೇನು?

೫. ವಿಶ್ವೇಶ್ವರಯ್ಯನವರಿಗೆ ಪ್ರಕೃತಿ ಸೌಂದರ್ಯ ಸವಿಯುವ ಪ್ರಜ್ಞೆ ಇರಲಿಲ್ಲ ಎಂಬುದಕ್ಕೆ ಲೇಖಕರು ಕೊಡುವ ವಿವರಣೆ ಯಾವುದು?

೬. ವಿಶ್ವೇಶ್ವರಯ್ಯನವರು ತಮ್ಮ ಕೈಕೆಳಗೆ ಕೆಲಸ ಮಾಡುವವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದ ರೀತಿಯನ್ನು ವಿವರಿಸಿ?

೭. ವಿಶ್ವೇಶ್ವರಯ್ಯನವರ ಮೇಲಿದ್ದ  ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಕುರಿತಂತೆ ಲೇಖಕರ ಅಭಿಪ್ರಾಯವೇನು?

ಪೂರಕ ಓದು

೧. ಡಿವಿಜಿ ಅವರು ವಿಶ್ವೇಶ್ವರಯ್ಯನವರನ್ನು ಕುರಿತು ‘ಜ್ಞಾಪಕಚಿತ್ರಶಾಲೆ ಸಂಪುಟ ೪’ ರಲ್ಲಿ ಬರೆದಿರುವ ಲೇಖನ.

೨. ಪಿ ಲಂಕೇಶ್‌ಅವರು ‘ಟೀಕೆಟಿಪ್ಪಣಿ ಸಂಪುಟ ೨’ ರಲ್ಲಿ ಬರೆದಿರುವ ‘ಇಂದಿನ ಭ್ರಷ್ಟವಾತಾರಣದಲ್ಲಿ ಸರ್‌ಎಂವಿ ನೆನಪು’ ಲೇಖನ.