ನೆಲ, ಜಲ, ವಾಯು ಸಂಚಾರಗಳಲ್ಲಿ ಒಂದೊಂದರ ಸೊಗಸು ಒಂದೊಂದಕ್ಕಿದೆ. ಜೀವನದ ಹೆದರಿಕೆ ಇರುವವನಿಗೆ ವಾಯುಸಂಚಾರ ಸ್ವಪ್ನದಲ್ಲೇ ಒಳ್ಳೆಯದು. ಬೆನ್ನುಲುಬಿನ ಆಸೆ ಇರುವವನಿಗೆ ನಮ್ಮ ಮುರುಕಲು ರಸ್ತೆಗಳ ಪ್ರಯಾಣವೂ ಬೇಡ; ರೈಲಿನ ನುಗ್ಗಾಟವೂ ಬೇಡ. ಸುಖಸಂತೋಷಗಳಿಗೆ ಹೇಳಿಸಿದ್ದು ಜಲಯಾನ. ನೀವು ಸಪ್ತಸಾಗರಗಳನ್ನೇ ದಾಟಿಹೋಗಿ, ಊರಿನ ಹೊಳೆಯಲ್ಲಿ ತೇಲಿ ಹೋಗಿ, ಬೆನ್ನಿನ ಸೌಖ್ಯಕ್ಕೂ ಅದೇ ಬೇಕು; ಕಣ್ಣಿನ ಸುಖಕ್ಕೂ ಅದೇ ಬೇಕು. ಸಾಗರ ಯಾನದ ಯೋಗ ಎಷ್ಟು ಮಂದಿಗಿರುತ್ತದೆ? ಆದರೆ; ನದೀಯಾನದ ಭೋಗ ನಾವು, ನೀವು ಎಲ್ಲರೂ ಉಣ್ಣ ಬಹುದಾದುದು. ವರ್ಷಕ್ಕೊಮ್ಮೆ ಸ್ನಾನ ಮಾಡುವವರಿಗೆ ನದಿಯೆಂದರೆ ಹೆದರಿಕೆಯಾದೀತು. ನಿತ್ಯ ಮೀಯುವವನಿಗೆ ನೀರಿನ ಭಯ ಬರಲಾರದಷ್ಟೆ. ಅದರಲ್ಲೇ ತೇಲಿ ಹೋಗುವ ಸುಖ, ನಾವು ಅನುಭವಿಸಬಹುದಾದ ಮಾನವೀ ಸುಖಗಳಲ್ಲಿ ಅತ್ಯುತ್ತಮವಾದುದು.

ನಾನು ಎಳೆಯನಾಗಿದ್ದಾಗ, ಒಂದು ರಾತ್ರಿ ಕಲ್ಯಾಣಪುರ ಎಂಬಲ್ಲಿ, ಹೊಳೆಯಲ್ಲಿ ದೋಣಿಯ ಮೆಲೆ ಕುಳಿತುಕೊಂಡೆ. ಬೆಳಿಗ್ಗೆ ಎದ್ದುದ್ದು ನಮ್ಮೂರಿನ ಕಡವು ಮಣೂರಿನಲ್ಲಿ, ಎಂಟು ಘಂಟೆಗೆ ಹೋದದ್ದು ಹತ್ತೇ ಮೈಲು. ಸಾಮಾನ್ಯ ದೋಣಿಯಲ್ಲಿ ಕುಳಿತರೆ ತಾಸಿಗೆ ಎರಡು ಮೈಲು ಹೋಗಬಹುದು. ಅವಸರವಿದ್ದ ಪ್ರಾಣಿಗೆ  ಅದು ಹೇಳಿದ ಕ್ರಮವಲ್ಲ. ಆತ ತಂತಿಯಲ್ಲೋ, ವಾಯರ್‌ಲೆಸ್ಸಿನಲ್ಲೋ ಪ್ರಯಾಣ ಬೆಳಸಬಹುದು, ನಿಮಗೆ ವಿರಾಮ ವಿದ್ದದ್ದಾದರೆ, ನಿಮಿಷ ನಿಮಿಷಕ್ಕೂ ಸುಖ ಉಂಡು, ಹೋಗಬಹುದಾದ ಪಯಣವಿದು. ಆ ದಿನ ನಾನು, ದೋಣಿಯಲ್ಲಿ ಚಾಪೆ ಹಾಸಿ, ನಿದ್ದೆ ಬರುವಾಗ ಒರಗುವುದಕ್ಕೆ ದಿಂಬನ್ನಿಟ್ಟುಕೊಂಡು, ದೋಣಿಯ ಬಾನಿಗೆ ಒರಗಿ ಕುಳಿತುಕೊಂಡೆ. ಅದು ತೊಳೆ ದೋಣಿಯಲ್ಲ; ಜಲ್ಲೆಗಳಿಂದ ಒತ್ತುವ ದೋಣಿ. ಮಾಡು, ಮುಚ್ಚುಮರೆಗಳಿರಲಿಲ್ಲ. ಅದಕ್ಕೇನೆ ರಾತ್ರಿಯ ಪಯಣ ಆರಿಸಿದ್ದು. ನೀಲಬಾನಿಗಿಂತ ದೊಡ್ಡ ಮಾಡು ಯಾವುದು? ಒಂದಲ್ಲ, ಎರಡಲ್ಲ; ಸಾವಿರಾರು ಚುಕ್ಕಿಗಳು ಮೇಲಿಂದ ಮಿನುಗುತ್ತಿರುತ್ತವೆ. ಸಾಲದುದಕ್ಕೆ ತಿಂಗಳು ಮಾಮ ಮೂಡಣದಲ್ಲಿ ತಲೆ ಎತ್ತಿ ಮೇಲಕ್ಕೆ ಬಂದನೇ ಬಂದ. ಅವನ ಬೆಳಕಿಗೆ ನಗು, ನದಿಯ ಅಲೆಗಳಲ್ಲಿ ಮಿನುಗತೊಡಗಿತು. ಸಾವಿರ ಜನರು ಒಮ್ಮೇಗೇ ಹಲ್ಲುಕಿಸಿದರು, ನಿಷ್ಕಪಟವಾಗಿ ನಕ್ಕ ಹಾಗೆ, ನದಿಗೆ ನದಿಯೇ ನಗತೊಡಗಿತು. ದೋಣಿ ದಡ ಬಿಟ್ಟು ಹೊರಟಿತು. ಇಕ್ಕಡೆಯ ತೆಂಗಿನ ತೋಟಗಳು ತೂಕಡಿಸುತ್ತ, ನಿದ್ರೆ ಮಾಡುತ್ತ ನಿಂತಿದ್ದವು. ದೋಣಿಯ ಜಲ್ಲು ನಿರನ್ನು ಹೊಕ್ಕು, ಮೇಲೇಳುವಾಗ ಅದರ ಉಲಿಯೇ ಬೇರೆ. ಆ ಪುಟ್ಟ ದೋಣಿ ನೀರನ್ನು ಸೀಳಿಕೊಂಡು ಮೀನಿನ ಹಾಗೆ ಓಡುವಾಗ ಅದರ ಲಾಸ್ಯವೇ ಬೇರೆ. ತಂಪಾದ ಹವೆ, ಸೊಂಪಾದ ನೋಟ, ಬಾನು ನೀರುಗಳ ಅನುಪಮ ಮೇಳ ಇದು. ಬಾನನ್ನು ನೋಡುತ್ತಾ ಕುಳಿತರೆ, ಒಂದೋಂದೇ ನಕ್ಷತ್ರ ಸಿಡಿದು ಬೀಳುವುದೂ ಕಾಣುತ್ತದೆ. ನಕ್ಷತ್ರವಲ್ಲ; ನ್ಯಾಯವಾಗಿ ಉಲಕೆ ಅನ್ನುತ್ತಾರೆ ಅದನ್ನು. ಅಜ್ಜಿಯ ಕತೆ ಬೇರೆಯೇ ಹೇಳುತ್ತದೆ ಆ ವಿಷಯವಾಗಿ. ‘ಸ್ವರ್ಗವನ್ನೇರಿದ ಆತ್ಮಗಳು ನಕ್ಷತ್ರಗಳಾಗಿದ್ದು, ತಮ್ಮ ಪುಣ್ಯ ಖರ್ಚಾಗುತ್ತಲೇ, ಕೆಳಕ್ಕೆ ಬಿದ್ದು, ನರಕಕ್ಕೆ ಹೋಗುತ್ತವೆ’ ಎಂದು ಆ ಒಂದು ರಾತ್ರಿ ನಾನು ಹತ್ತಿಪ್ಪತ್ತು ಜೀವರುಗಳ ಪುಣ್ಯ ಖರ್ಚಾಗಿ, ಅವರು ಬಿದ್ದದ್ದನ್ನು ನೋಡಿದೆ. ಆದರೆ, ನನ್ನ ಪುಣ್ಯ ಖರ್ಚಾಗಿ ಕಂಡದ್ದು, ನಾನು ದೋಣಿಯಿಂದ ಇಳಿಯಬೇಕಾಗಿ ಬಂದಾಗ ಮಾತ್ರ. ನಿದ್ದೆ ಬರಲಿ, ಬಾರದಿರಲಿ; ಮನಸ್ಸಿಗೆ ದೊರೆಯುವ ಜಲಯಾನದ ಶಾಂತಿ ಚಿರಸ್ಮರಣೀಯವಾದದ್ದು. ಇದೆಲ್ಲ ನನ್ನ ಎಳೆತನದ ಊಹೆ ಎಂದಿಟ್ಟುಕೊಂಡಿದ್ದೆ. ನಿಜಕ್ಕೂ ಹಾಗಲ್ಲ.

ಇನ್ನೊಮ್ಮೆ ನಾನು, ಬೆಳೆದು ಬುದ್ಧಿ ಬಾರದಿದ್ದರೂ, ಮೀಸೆ ಬಂದ ಮೇಲೆ ಹೊನ್ನಾವರದಿಂದ, ಗೆರಸೊಪ್ಪೆಯ ತನಕ ಹದಿನೆಂಟು ಮೈಲು ದೂರ – ನದಿಯಲ್ಲಿ ಹೋಗಿ ಬಂದಿದ್ದೆ. ಮಧ್ಯಾಹ್ನ ಹೊನ್ನಾವರ ಬಂದರದಲ್ಲಿ ಮೂರು ಘಂಟೆಯ ಹೊತ್ತಿಗೆ ದೋಣಿಯಲ್ಲಿ ಕುಳಿತೆ. ಹೊನ್ನಾವರದೆ ಹೊಳೆಯ ಅಗಲ ತುಂಬ ಜಾಸ್ತಿ. ಕಡಲಿಗೆ ನದಿ ಸಂಗಮವಾಗುವ ಸ್ಥಳ ಅದು. ಅಲೆಗಳ ಹೊಡೆತ ಹೆಚ್ಚು; ಮೇಲಿನ ಬಿಸಿಲು ಜೋರಾಗಿಯೇ ಇತ್ತು. ಆದರೆ, ಒಮ್ಮೆ ದೋಣಿಯಲ್ಲಿ ಕುಳಿತ ಮೇಲೆ, ದೋಣಿಗೆ ಹಾಕಿದ ಮಾಡಿನ ಒಳಗೆ ಕುಳಿತುಕೊಳ್ಳುವ ಆಸೆ ನನಗಾಗಲಿಲ್ಲ. ಉಯ್ಯಾಲೆಯ ತೂಗಾಟ ಸುಳ್ಳು, ದೋಣಿಯ ಓಲಾಟ ನಿಜ; ತೇಲಾಡುತ್ತಲೇ ಇತ್ತು ನಮ್ಮ ದೋಣಿ. ಚಿಕ್ಕಪುಟ್ಟ ಅಲೆಗಳು ಅದರ ಬಾಣಿಗೆ ಬಡಿಯುತ್ತಲೇ ಇದ್ದುವು. ದೋಣಿಯವ ಅದರ ಹಾಯಿ ಬಿಡಿಸಿದ, ಚಿಕ್ಕಾಣಿ ಹಿಡಿದು, ಭೂಪಾತಿರಂಗನ ಹಾಗೆ ಅದರ ಹಿಂಗೋಟಿನ ಮೇಲೆ ಹೋಗಿ ಕುಳಿತ. ದೊಡ್ಡ ದೋಣಿ ಹೊರಟೇ ಬಿಟ್ಟಿತು. ನಮ್ಮೂರ ಜಟಕಾ ಗಾಡಿಯ ವೇಗ ಮೀರಿಸುವ ವೇಗದಲ್ಲಿ ಹೊರಟಿತು. ಹುರುಳಿ ಹಾಕಿದ್ದಿಲ್ಲ; ಪೆಟ್ರೋಲ್‌ತುಂಬಿಸಿದ್ದಿಲ್ಲ. ದೋಣಿಕಾರನ ರಟ್ಟೆಗೂ ದಣಿಲ್ಲ. ಹಾಯಿಬಟ್ಟೆಯ ಹೊಟ್ಟೆಗೆ, ಪಡುವಣ ಗಾಳಿ ರುಮು, ರುಮು ಬಡಿದದ್ದೇ ತಡ – ನೀರನ್ನು ಸೀಳಿಕೊಂಡು, ದೋಣಿ ಸಾಗಿಯೇ ಬಿಟ್ಟಿತು. ಆ ನೀರೋ ಏನೇನು ಬಣ್ಣ ಬೇಕು ಅದರಲ್ಲಿ. ಕಡುನೀಲದಿಂದ ಹಿಡಿದು, ಕಡು – ಹಸುರಿನ ತನಕ ಎಲ್ಲವೂ ಇವೆ. ದಡದ ಗುಡ್ಡ, ತೆಂಗಿನ ತೋಟ, ಬಾನು, ಮುಗಿಲು ಇವ್ವೆಲ್ಲವುಗಳ ಬಣ್ಣ, ಬೆಡಗುಗಳನ್ನು ನೀರು ಬಿಂಬಿಸುತ್ತಿತ್ತು. ತಾನೂ ಹೊಳೆಯುತ್ತಿತ್ತು. ದಂಡೆಗೆ ಮುಖ ಮಾಡಿದರೆ, ಎರಡೆರಡು ದಂಡೆಗಳು! ನದಿಯ ಇಬ್ಬದಿಗಳಲ್ಲಲ್ಲ ಒಂದೇ ಕಡೆಯಲ್ಲಿ ಎರಡು ದಂಡೆಗಳು. ಮಗ್ಗುಲ ದಂಡೆ ಹೇಗೂ ಇದೆಯಲ್ಲ; ಅದರ ಕೆಳಗೆ ನೀರಲ್ಲಿ ತಲೆಕೆಳಗಾಗಿ ಕಾಣಿಸುವ ನೆಲ, ಗುಡ್ಡ, ಗಿಡಮರಗಳ ಸೊಬಗು, ಸೃಷ್ಟಿ ಸೌಂದರ್ಯದ ಮುಖಕ್ಕೆ ಕನ್ನಡಿ ಹಿಡಿದ ಹಾಗಿತ್ತು. ಸಂಜೆಯಾದ ಹಾಗೆ ದೋಣಿ ಹೋಗುತ್ತಲೇ ಇತ್ತು. ತೆಂಗಿನ ತೋಟಗಳನ್ನು ಹಾದು, ನೀರಿನ ನಡುಗುಡ್ಡೆಗಳನ್ನು ಹಿಂದಕ್ಕೆ ಬಿಟ್ಟು, ಸಾಗುತ್ತಲೇ ಇತ್ತು. ಮುಂದೆ, ಮುಂದೆ ಹೋದಂತೆ ಗುಡ್ಡಗಾಡುಗಳ ಸೊಬಗೆಲ್ಲ, ಚಿತ್ರಪಟ ಹಿಡಿದ ಹಾಗೆ ಕಣ್ಣೆದುರಿಗೆ ಬರುತ್ತಲೇ ಇತ್ತು. ಸಂಜೆಯಾಗುತ್ತ ಬಂದಂತೆ ಸೃಷ್ಟಿಯ ಬಣ್ಣ ಬೇರೆಯಾಯಿತು. ಎಲ್ಲೆಲ್ಲೂ ಹೊಂಬಣ್ಣ, ಚೆಂಬಣ್ಣಗಳು! ಮುಳುಗುವ ಸೂರ್ಯನ ಬೆಡಗನ್ನು ನೋಡಬೇಕಾದರೆ, ನದೀಯಾನದ ವೇಳೆಯಲ್ಲೇ ನೋಡಬೇಕು. ನಾವು ಗೆರಸೊಪ್ಪೆ ಊರು ಸೇರಿದ್ದು ಕತ್ತಲಾಗುವಾಗ, ಅಲ್ಲಿಂದ ಮುಂದೆ, ಹದಿನೆಂಟು ಮೈಲು ನಡೆದು ಜೋಗಿಗೆ ಹೋದೆವು. ಹಾಗೆ ಜಲಪಾತ ಕಂಡೆವು. ನೀರು ಬೀಳುವ ನೋಟ ಕಂಡೆವು. ಆ ಕಡೆಯಿಂದ ಜನ ಅದನ್ನು ಗೆರಸೊಪ್ಪೆಯ ‘ಧಬೆಧಬೆ’ ಅನ್ನುತ್ತಾರೆ. ಗೆರಸೊಪ್ಪೆ ಜಲಪಾತ ಬೀಳುವ ತಾಣಕ್ಕಿರುವ ಹೆಸರು ಅದು. ಹೆಚ್ಚಿನ ಶಬ್ಧ ಕೇಳಿ  ‘ಧಬಧಬಾ’ ಅಂದಿರಬೇಕು ಜನ ಆದರೆ  ಗೆರಸೊಪ್ಪೆ  ಊರಲ್ಲೇ ಕುಳಿತರೆ, ನದಿಯ ‘ಧಬಧಬಾ’ ಇಲ್ಲವೇ ಇಲ್ಲ. ಎಷ್ಟು ಪ್ರಶಾಂತ ನದಿಯದು! ಮರುದಿನ ರಾತ್ರಿ ಅಲ್ಲಿಂದಲೇ ನಾವು ಬೆಳದಿಂಗಳ ಮರುಪಯಣ ಹೂಡಿದೆವು ಮರಳಿ ಹೊನ್ನಾವರಕ್ಕೆ ಹಿಂದಿನ ದಿನ ನಾವು ಹಾದುಹೋದ ದಾರಿಯೇ ಬೇರೆ ಈ ದಾರಿಯೇ ಬೇರೆ – ಎನ್ನುವಂತಿತ್ತು ಆ ಒಂದೇ ದಾರಿ. ನದಿಯ ಹಗಲಿನ ಬಣ್ಣ ಬೆಡಗಿಗೂ, ರಾತ್ರಿಯ ಶಾಂತಿ ಸೊಬಗಿಗೂ ಎಷ್ಟು ಅಂತರ ಅನ್ನುತೀರಿ! ತಲಾವೊಂದರ ನಾಲ್ಕಾರಾಣೆ ಕೊಟ್ಟು, ಎಂಟು ಹತ್ತು ತಾಸಿನ ಸ್ವರ್ಗ ಸೌಂದರ್ಯ ಕಾಣಲು ಬರುತ್ತದೆ. – ಅಂದರೆ ನೀವು ನಂಬಲಾರರಿ. ಆದರೆ,  ಗೆರಸೊಪ್ಪೆಯಿಂದ ಹೊನ್ನಾವರಕ್ಕೆ  ಹೋಗಲು ನಾವು ಕೊಟ್ಟದ್ದೂ ಅಷ್ಟೇ ಹಣ. ಅದಕ್ಕೂ ಹೆಚ್ಚಲ್ಲ; ಆದರೆ, ಇಪ್ಪತ್ತು ವರ್ಷಗಳ ಹಿಂದೆ ಕಂಡ ಸುಖ ಈಗಲೂ ನೆನವರಿಕೆಯಾಗುತ್ತದೆ.

ಇನ್ನೊಮ್ಮೆ ನಾನು, ಎರ್ನಾಕುಳಂನಲ್ಲಿ ಕುಳಿತೆ – ರಾತ್ರಿ ಮೋಟಾರ್‌ಲಾಂಚಿನಲ್ಲಿ ಕತ್ತಲಲ್ಲೇ ಲಾಂಚು ಹೊರಟಿತು. ಲಾಂಚಿಗೆ ಮಾಡೂ ಇತ್ತು. ನನ್ನ ಸುತ್ತಲಿನ ಜನ ಹೆಣಬಿದ್ದ ಹಾಗೆ ನಾಲ್ಕು ಸುತ್ತಲೂ ಮಲಗಿದ್ದರು. ಬೆಳಿಗ್ಗೆ ಏಳುವಾಗ ನಾವು ‘ಎಲೆಪ್ಪಿ’ಗೆ ಮುಟ್ಟಿದ್ದೆವು. ಆ ರಾತ್ರಿ ಕಂಡದ್ದೇನಿಲ್ಲ. ಸಜೀವ ಹೆಣಗಳ ಸಂತೆಯನ್ನು ಮಾತ್ರ. ಆ ಮಂದೀ ಮಾತ್ರ. ಮಾಡಿನ ಈ ಕಡೆಗೆ ಬಂದು ಕುಳಿತಾಗ, ಕಿರಿದಾದ ಕಾಲುವೆಯಲ್ಲಿ ಅದು ಸಾಗಿಹೋದಾಗ ಮುಂಬಯಿ ದೇಖೋ, ಮದ್ರಾಸ್ ದೇಖೋ ಅನ್ನುತ್ತಾರಲ್ಲ -ಅಂಥಾ ನೋಟ ಹೆಜ್ಜೆ, ಹೆಜ್ಜೆಗೂ ಕಾಣಿಸಿತು. ನಮ್ಮ ಮುಂದೆ, ಹಿಂದೆ, ಎದುರು, ಬದುರು ಎಷ್ಟೆಲ್ಲಾ ದೋಣಿಗಳು, ಗಾಳ ಹಾಕುವವರು, ಮೀನು ಹಿಡಿಯುವವರು, ಎಲ್ಲರೂ ದೋಣಿಯಲ್ಲೇ ಸಂಚರಿಸುತ್ತಿದ್ದರು.

ಬೇರೊಮ್ಮೆ, ವಂಡಸೆ ಎಂಬ ಊರಿನಿಂದ ಕುಂದಾಪುರಕ್ಕೆ ದೋಣಿಯಲ್ಲಿ ಹೋಗಿದ್ದೆ. ಪುಟ್ಟ ದೋಣಿ; ಹತ್ತೆಂಟು ಜೀವಗಳು ಒಳಗೆ ಬೆಳಗಾದ ಮೇಲೇಯೇ ಹೊರಟದ್ದು. ಉಬ್ಬಿನ ನದಿಯ ಕಾವಿಬಣ್ಣದ ನೀರಿನ ಮೇಲೇಯೇ ನಮ್ಮ ಯಾನ. ತುಸು ದೂರ ಹೋಗುತ್ತಲೇ ಮುಗಿಲು ಕವಿಯಿತು; ಗುಡುಗು, ಮಿಂಚು ಹೊಳೆಯಿತು. ಶಾಂತವಾಗಿದ್ದ ನದಿಯಲ್ಲಿ ಗಾಳಿ ಸಮುದ್ರದ ಕಲ್ಲೋಲವನ್ನು ಎಬ್ಬಿಸಿಬಿಟ್ಟಿತು. ‘ಹೊಳೆ ಇಳಿದವನಿಗೆ ಚಳಿಯೇನು’ ಎಂಬ ಗಾದೆ ಇದೆ ನಮ್ಮೂರಲ್ಲಿ. ಆ ಚಳಿಗೆ ನಾವು ಬಟ್ಟೆ ಹೊದ್ದರೂ ಅಷ್ಟೇ, ಬಿಟ್ಟರೂ ಅಷ್ಟೆ. ನಮ್ಮ ದೋಣಿ ಹೋಗುತ್ತಲೇ ಇತ್ತು. ನಾವು ಆ ದಿನ ಮಾಡಿದ ಸ್ನಾನ ಒಂದು ತಿಂಗಳಿಗೆ ಸಾಕಾಗುವಷ್ಟಾಯಿತು. ಆದರೆ, ಕಂಡ ನದಿಯ ರೌದ್ರಸೌಂದರ್ಯ – ಅಷ್ಟೇ ಚಿರಸ್ಮರಣೀಯವಾಗಿತ್ತು.

ಚಿಕ್ಕ ಮರದ ಪಾತ್ರೆಗೆ ದೋಣಿ ಎಂದು ನಾಮಕರಣ. ನಾಲಿಗೆ ತಿರುಗದವರು ‘ಡೋಣಿ’ ಎನ್ನುವುದೂ ಉಂಟು ಅದನ್ನು. ಆ ಪಾತ್ರೆ ದೊಡ್ಡದಾದ ಹಾಗೆ, ಬೇರೆ ಹೆಸರಿದೆ! ಸಣ್ಣದಾದರೆ ಬೇರೆ ಹೆಸರು. ಸಣ್ಣದು ‘ಪಾತಿ’ ಅನಿಸಿಕೊಳ್ಳುತ್ತದೆ. ಒಮ್ಮೆ ಭಟ್ಕಳದ ಕಡಲು ತೀರದ ಗುಡ್ಡಕ್ಕೆ ಹೋಗಿ ನಿಂತಾಗ, ಎದುರಿನ ಆಖಾಶದಲ್ಲಿ, ಆ ನೀಲ ಕಡಲಿನಲ್ಲಿ -ಒಬ್ಬೊಬ್ಬನೇ ಕುಳಿತಿರುವಷ್ಟು ದೊಡ್ಡ ಪಾತಿಗಳ ಮೇಲೆ ಬೆಸ್ತರು ಚಿಂತೆಯಿಲ್ಲದೆ ಕುಳಿತು, ಗಾಳಹಾಕಿ ಮೀನು ಹಿಡಿಯುತ್ತಿದ್ದರು. ಆದರೆ, ಅದರಲ್ಲೇ ಕುಳಿತು ಯಾನ ಮಾಡುವುದಕ್ಕೆ ಸಾಕಷ್ಟು ಜೀವವಿಮೆ ಮಾಡಿಲ್ಲ ಎಂದು ನಾನಂತೂ ಸಾಹಸಪಡಲಿಲ್ಲ. ದೋಣಿ ದೊಡ್ಡದಾದರೂ, ಕೆಲವು ಸಾರಿ ಇನ್ಯೂರೆನ್ಸ್‌ಅಗತ್ಯವಾಗುವುದುಂಟು. ಬೆನ್ನು ನೋವಿಗಲ್ಲ; ಎದೆಯ ಪುಕ್ಕಿಗೆ, ಸವಿನ ಬೆದರಿಕೆಗೆ. ಸತ್ತಮೇಲೆ ಸ್ವರ್ಗಕ್ಕೆ ಹೋದರೆ, ಅಲ್ಲಿಯೂ ನದಿ ಇದೆ- ದೋಣಿಗಳಿವೆ ಎಂದೂ ಯಾರಾದರೂ ಗ್ಯಾರಂಟಿ ಕೊಟ್ಟರೆ, ಆಗ ಎಂಥ ದೋಣಿಯನ್ನೂ ಏರುವ ಮನವಾದೀತು.

ಎಲ್ಲಿಂದ – ಎಲ್ಲಿಗೋ ಬಂದೆ. ಚುಕ್ಕಾಣಿ ಇಲ್ಲದ ದೋಣಿಯ ಅವಸ್ಥೆಯೇ ಹೀಗೆ. ನೀರು ಹರಿದ ಹಾಗೆ ಅದೂ ಹೋಗುತ್ತದೆ. ದೋಣಿ ದೊಡ್ಡದಾದರೆ ‘ಓಡ’ ಅನ್ನುತ್ತಾರೆ. ಮತ್ತೂ ದೊಡ್ಡದಾದರೆ ‘ಮಂಜಿ’, ‘ಪತ್ತೆಮಾರಿ’, ನಗ, ಮಚ್ವೆ ಎಂದೇನೇನೋ ಹೆಸರಿನಿಂದ ಕರೆಯುತ್ತಾರೆ. ಎರಡು, ಮೂರು, ನಾಲ್ಕು ಹಾಯಿಗಳನ್ನು ಕಟ್ಟುವಂತಹ ಕಡಲು ಹಾಯುವ ದೋಣಿಗಳೂ ಇವೆ.

ಒಮ್ಮೆ, ಗಂಗೊಳ್ಳಿ ಬಂದರಿನಲ್ಲಿ ಕುಳಿತು ಅಳುವೆಯಿಂದ ಇಂಥದೊಂದು ಮಚ್ವೆಯ ಮೇಲೆ, ಎರಡು ಮೈಲು ದೂರ ಕಡಲಿನೊಳಗೆ ಹೋಗಿದ್ದೆ; ಸುಮ್ಮನೆ ತಮಾಷೆ ನೋಡುವುದಕ್ಕೆ. ಬಿಸಿಲೋ, ಬಲತುಂಬ! ಹೊರಟದ್ದೋ, ನಡು ಮಧ್ಯಾಹ್ನಕ್ಕೆ. ಕಡಲಿನ ಸೌಂದರ್ಯ ಆದಷ್ಟು ನೋಡಬೇಕೆಂದು. ಮಚ್ವೆ ದಡಬಿಟ್ಟಿತು. ಹಾಗೆಯೇ, ಕಡಲು ಸೇರುವ ಅಳುವೆಯನ್ನು ಹೊಕ್ಕಿತು. ಆಗಲೇ ತಳಮಳಾ ಹೆಚ್ಚಿತು. ಆಳೆತ್ತರದ ಕಡಲಿನ ಅಲೆಗಳು ಉಕ್ಕುವಾಗ ನಮ್ಮ ದೋಣಿ ಸಹ ಅಷ್ಟೇ ಮೇಲೆ, ಕೆಳಗೆ ಆಗುತ್ತದೆ. ಯಾವ, ಯಾವ ಕೋಣಾಕೃತಿಯಲ್ಲಿ ಬೇಕಾದರೂ ಅದು ಚಲಿಸುತ್ತದೆ. ಮೊದಲಿನ ಒಂದು ಮೈಲು ಹೋಗುವುದರೊಳಗೆ, ನಮ್ಮಲ್ಲಿ ಹಲವರ ಹೊಟ್ಟೆಯಲ್ಲೂ ಅಷ್ಟೇ ತಳಮಳವಾಗಿತು. ತಿಂದದ್ದನ್ನೆಲ್ಲ ಕಾರಿದವರೆಷ್ಟೋ ಮಂದಿ. ನಾನಂತು, ನನ್ನ ಎತ್ತರದ ಪೀಠದ ಮೇಲೆ ಗಟ್ಟಿಯಾಗಿ ಕುಳಿತು, ಆಚೀಚಿನ ಮರ ಹಿಡಿದು, ನೋಡುತ್ತ ಕುಳಿತಿದ್ದೆ. ಹಾಯಿ ಬಿಡಿಸಿದ್ದರು! ದೋಣಿ -ಅಂಥ ಎತ್ತರದ ಅಲೆಗಳ ಮೇಲೆ ಗಾಳಿಯ ಒತ್ತಡಕ್ಕೆ ಜಿಗಿದು ಹೋಗುತ್ತಿದ್ದ ನೋಟ ಅದ್ಭುತವಾಗಿತ್ತು. ಕಡಲಿನ ಅಲೆಗಳಿಗೆ -ರೂಢಿ ಇಲ್ಲದವರಿಗೆ, ಇದು ಸ್ವಲ್ಪ ಕಷ್ಟವಾದೀತು. ಆದರೆ, ನೋಟದ ಸುಖ ನೆನಸಿಕೊಂಡರೆ, ಕಡಲಯಾನ ವಿಚಿತ್ರ ಅನುಭವ ತಂದುಕೊಡುತ್ತದೆ.  ನಮ್ಮ ದೋಣಿಯೊಟ್ಟಿಗೆ ನೀರಿನಲ್ಲಿ ಜಿಗಿದು, ಜಿಗಿದು,ಸ್ಪರ್ಧೆ ನಡೆಸುವ ಹಲವು ಜಾತಿಯ ಮೀನುಗಳನ್ನು ಕಾಣಬಹುದು. ಮೀನನ್ನು ಕಂಡೇ, ಮೊದಲಿನ ಮನುಷ್ಯ ದೋಣಿ ಮಾಡಿದ್ದು ಅನ್ನುತ್ತಾರೆ.

ಕಾಶೀಯಾತ್ರೆ ಮಾಡುವವನು ದೋಣಿಯ ಸುಖ ಅನುಭವಿಸಬಹುದು. ಗಂಗೆಯ ತಡಿಯಲ್ಲಿ ಹತ್ತಾರು ಸ್ನಾನ ಘಟ್ಟಗಳಿವೆ. ಅವು ಒಂದೊಂದನ್ನು ನಡೆದು, ಸಂಚರಿಸಿ ನೋಡುವುದು -ತುಂಬ ಕಷ್ಟದ ಕೆಲಸ. ಕಣ್ಣಿಗೂ ಸುಖವಿಲ್ಲ. ಅದರ ಬದಲು, ದೋಣಿಯೊಂದರ ಮೇಲೆ ಕುಳಿತು, ಒಂದು ತುದಿಯಲ್ಲಿ ಕುಳಿತು, ನಗರದ ಇನ್ನೊಂದು ತುದಿಯ ತನಕ ಸುಮಾರು ಐದಾರು ಮೈಲುಗಳ ತನಕ ಸಂಚರಿಸಬಹುದು. ದಂಡೆಗೆ ತುಸು ದೂರದಲ್ಲಿ ಕುಳಿತು ಅಂಥ ಯಾನ ಮಾಡಿದರೆ, ಆ ಪ್ರಾಚೀನ ನಗರದ ಸೊಬಗೆಲ್ಲ ಒಂದೊಂದಾಗಿ ಕಾಣಿಸುತ್ತದೆ. ನದಿ ದಂಡೆಯಲ್ಲಿನ ಸೋಪಾನಗಳು, ಉನ್ನತವಾದ ಸೌಧಗಳು, ನೀರಲ್ಲಿ ಮುಳುಗಿ, ಮೀಯುವ ಸಾವಿರಾರು ಯಾತ್ರಿಕರು, ದಂಡೆಯಲ್ಲಿ ಕುಳಿತು, ಆ ಗದ್ದಲದಲ್ಲೂ ಶಾಂತಿಯಿದೆ ಎಂದು ತಿಳಿದು ತಪಸ್ಸು ಮಾಡುತ್ತಿರುವ ಗಡ್ಡದ ಬಾವಾಜಿಗಳು – ಒಂದೊಂದೇ, ಎಂತೆಂಥ ನೋಟ ಕೊಡುತ್ತದೆ ಬಲ್ಲಿರಾ? ಹಾಗೆಯೇ ಸಾಗಿಹೋದರೆ, ಮಣಿಕರ್ಣಿಕೆಯಲ್ಲಿ -ನೀರಿನಲ್ಲಿ ಮುಳುಗಿಸಿಟ್ಟ ಚಟ್ಟಗಳನ್ನೂ, ಬೆಂಕಿ ನುಂಗುತ್ತಿರುವ ಚಿತೆಗಳನ್ನು ಕಾಣಬಹುದು. ನಾವು ಒಬ್ಬರೇ ಹೀಗೆ ಹೋಗುವವರಲ್ಲ. ಹಿಂದೆ, ಮುಂದೆ ದೋಣಿಗಳು ಹೋಗುತ್ತಲೇ ಇರುತ್ತವೆ. ಅದರಲ್ಲಿ ಕುಳಿತು, ತಾಳ ಹಾಕಿ ಭಜನೆ ಮಾಡುತ್ತಿರುವ ಯಾತ್ರಿಕರೂ ಇದ್ದಾರೆ. ಜಲಯಾನಕ್ಕೂ, ಸಂಗೀತಕ್ಕೂ ಅನ್ಯೋನ್ಯವಾದ ಮೇಳವಿದೆ. ನದಿಯ ಮೇಲೆ ದೋಣಿ ಲಘುವಾಗಿ ತೇಲಿದ ಹಾಗೆ, ನೀರ ಮೇಲೆ ಹೋಗುವ ನಮ್ಮ ಮನಸ್ಸು ಪ್ರಾಪಂಚಿಕ ಕಷ್ಟಗಳನ್ನು ಮರೆತು, ಲಘುವಾಗಿ ತೇಲಿಹೋಗುತ್ತದೆ. ಇಷ್ಟೆಲ್ಲ ಹೊತ್ತು, ದೋಣಿಯ ಮಾತನ್ನೇ ಹೇಳಿದೆ. ಮರ ಇರುವ ಊರಿನಲ್ಲಿ ಇದ್ದರೆ ದೋಣಿ. ಇಲ್ಲದೆ ಹೋದರೆ, ಅಂಥವರ ಪಾಲಿಗೆ ಹರಿಗೋಲು. ಯಾಕೆ ಆ ಹೆಸರು ಬಂದಿತೋ ನನಗೆ ಗೊತ್ತಾಗದು. ಹತ್ತೆಂಟು ಮಂದಿ ಕುಳಿತುಕೊಳ್ಳಬಹುದಾದ, ಉರುಟಾದ ಬೆತ್ತದ ಬುಟ್ಟಿಯನ್ನು ಮಾಡಿ, ಅದಕೆ ಹೊರಮಗ್ಗುಲಲ್ಲಿ ಚರ್ಮಹೊದಿಸಿ, ಇಂಥ ಹರಿಗೋಲು ಮಾಡುತ್ತಾರೆ. ಇದು ಹರಿಯುವ ‘ಕೋಲು’ ಅಲ್ಲ. ಪ್ರಾಯಶಃ ‘ಗೋಳು’ ಇರಬಹುದು. ಒಮ್ಮೆ ಹಂಪಿಗೆ ಹೋದ ನಾನು, ತುಂಬಿದ ತುಂಘಭದ್ರಾ ನದಿಯನ್ನು ದಾಟಿ, ಆನೆಗುಂದಿಗೆ ಹೋಗುವುದಕ್ಕೆ ಇಂಥ ಹರಿಗೋಲಿನಲ್ಲಿ ಕುಳಿತೆ. ಅಪಾಯವೇನಿಲ್ಲ. ಒಳಗೆ ಹಿಡಿದಷ್ಟು ಜನ ತುಂಬಿಸುತ್ತಾರೆ. ಆ ಚರ್ಮಕ್ಕೆ ತೂತುಬಿದ್ದರೆ ಒಳಕ್ಕೆ ನೀರು ಬಂದೀತೇ ಎಂಬ ಅನುಮಾನ ಬರಬಹುದು. ಅದು ಜೀವನ ಪಾತ್ರೆ. ನಾವೂ ಜೀವನ ಪಾತ್ರೆಗಳೇ. ನಮಗೆ ತೂತುಬಿದ್ದರೆ ಒಳಗಿನ ನೀರು ಹೊರಕ್ಕೆ ಹರಿಯುತ್ತದೆ; ಅದಕ್ಕೆ ತೂತುಬಿದ್ದರೆ ಹೊರಗಿನ ನೀರು ಒಳಕ್ಕೆ ಬರುತ್ತದೆ. ಅದರಲ್ಲಿ ಕುಳಿತು ಹೋಗುವಾಗ, ದಿಕ್ಕಿನ ಮೇಲೆ ಹತೋಟಿ ಕಡಿಮೆ. ಆದರೂ, ಒಂದು ಬಸ್ಸಿನಲ್ಲಿ ಕುಳಿತ ಹಾಗೆ ಜನ, ಜಗಳ ಮಾಡಬೇಕಾದಂಥ ಕಾರಣವಿಲ್ಲ. ಮುಂದಿನ ಸೀಟು, ಹಿಂದಣ ಸೀಟು, ಎಡ, ಬಲ ಎಂಬ ತಕರಾರೇ ಇಲ್ಲ. ದೋಣಿ ಈ ದಂಡೆ ಬಿಟ್ಟು, ಆ ದಂಡೆ ಮುಟ್ಟುವುದರೊಳಗೆ ಪ್ರತಿಯೊಂದು ಕಡೆಯೂ, ಪ್ರತಿಯೊಂದು ದಿಕ್ಕೂ ಎಂಟೆಂಟು ಸಾರಿ ನೋಡಲು ಸಿಗುತ್ತದೆ. ಅಂದರೆ, ನೀರಿನ ಅಮಲು ನೀರಿಗೂ ಬಂದುಬಿಡುತ್ತದೆ. ದಡ ಬಿಟ್ಟರೆ ಅದಕ್ಕೆ ತಲೆ ತಿರುಕಲು ಸುರು. ದೋಣಿಕಾರ ತೊಳೆಹಾಕಲು ತೊಡಗಿದಂತೆ, ಉರುಟಾದ ಆ ಬುಟ್ಟಿ ಮೆಲ್ಲಗೆ ತಿರುಗಲು ತೊಡಗುತ್ತದೆ. ನೀರನ್ನು ಸೀಳಿಕೊಂಡು ಹೋಗುವ ಆಕಾರ ಇಲ್ಲದ್ದಕೆ, ಅದು ಪ್ರವಾಹದೊಡನೆ ತೇಲಿಹೋಗುತ್ತದೆ. ಈ ಕಡೆಯಿಂದ, ಆ ಕಡೆಗೆ ಲಂಬವಾಗಿ ಹೋಗಬೇಕು, ನೆಟ್ಟಗೆ ಹೋಗಬೇಕು- ಅನ್ನುವವನಿಗೆ ಹರಿಗೋಲು ಹೇಳಿದ್ದಲ್ಲ. ‘ಹೋದರೆ ಸಾಕು, ಈಚೆಯಿಂದ ಆಚೆಗೆ – ಎನ್ನುವ ತಾಳ್ಮೆಬೇಕು. ನದಿಯ ಪ್ರವಾಹ ಕಂಡು, ಗುರಿಯಿಂದ ಗುರಿಗೆ, ನೆಟ್ಟಗೆ ಎದುರಾಗಿ ಹೋಗುವ ಬದಲು, ದಂಡೆಯಿಂದ ಎಷ್ಟೋ ಮೇಲಕ್ಕೆ ತೆಗೆದುಕೊಂಡು ಹೋಗಿ ಹರಿಗೋಲನ್ನು ತೇಲಿಸಿದಲ್ಲಿ ಹೆಚ್ಚು, ಕಡಿಮೆ ಗುರಿ ಮುಟ್ಟುತ್ತೇವೆ ನಾವು’. ಹೋಗಿ, ಆಚೆ ದಂಡೆ ಸೇರುವಾಗ ಇಳಿದ ವ್ಯಕ್ತಿಯನ್ನು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ತೋರಿಸು ಎಂದು ಯಾರಾದರೂ ಕೇಳಿದರೆ, ಆತ ಮೇಲೆ ಕೆಳಗೆ ನೋಡುವನೇ ಹೊರತು, ಸರಿಯಾದ ದಿಕ್ಕು ತೋರಿಸಲಾರ. ಆ ಮಾತಂತಿರಲಿ. ‘ನೀನು ಹೊರಟ ದಂಡೆ ಯಾವುದು, ಸೇರಿದದಂಡೆ ಯಾವುದು’ ಎಂದು ಕೇಳಿದರೂ, ಉತ್ತರ ಅಷ್ಟೇ ಕಷ್ಟದ್ದು.

ಸಂಸಾರ ಸುಖ ಎಣಿಸಿ, ನೋಡಿ, ತೂಕ ಮಾಡಿ ಅನುಭವಿಸಬೇಕು – ಅನ್ನುವವನಿಗೆ ಹೇಳಿಸಿದ್ದು ದೋಣಿಯ ಯಾನ. ಭವಸಾಗರದಲ್ಲಿ ಹೇಗೋ ತೇಲಿದರಾಯಿತು – ಎನ್ನುವವನಿಗೆ ಹೇಳಿಸಿದ್ದು ಹರಿಗೋಲಿನ ಯಾನ. ದೋಣಿ, ಹರಿಗೋಲುಗಳ ಯಾನದ ಕಷ್ಟ, ಆಯಾಸ ಎಷ್ಟೇ ಇರಲಿ, ಗಾಡಿಯಲ್ಲಿ ಕಚ್ಚಾ ರಸ್ತೆಯಲ್ಲಿ ಪ್ರಯಾಣ ಮಾಡುವುದೂ ಬೇಗ ಮುಟ್ಟಿಯೇವೆಂದು ಭ್ರಮಿಸಿ ಮೋಟಾರಲ್ಲಿ ಕುಳಿತು, ಮೋಟಾರು ಕೆಟ್ಟು, ಹಾದಿಯಲ್ಲಿ ಒಣಗುವುದೂ – ಇವರೆಡಕ್ಕಿಂತ ದೋಣಿ, ಹರಿಗೋಲುಗಳು ಎಂದೆಂದೂ ವಾಸಿ.

ಲೇಖಕರು

ಶಿವರಾಮ ಕಾರಂತ (೧೯೦೨-೧೯೯೭) ಅವರಷ್ಟು ಲೋಕವನ್ನು ಸುತ್ತಾಟ ಮಾಡಿದ ಮತ್ತೊಬ್ಬ ಲೇಖಕ ಕನ್ನಡದಲಿಲ್ಲ ಅನ್ನಬಹುದು. ಅವರಷ್ಟು ಪ್ರಕಾರಗಳಲ್ಲಿ  ಕೆಲಸ ಮಾಡಿದ ಲೇಖಕರೂ ಕಡಿಮೆ, ನಾಟಕ ರಚನೆ, ಯಕ್ಷಗಾನ, ಜಾನಪದ, ಸಿನಿಮಾ, ಚಿತ್ರಕಲೆ, ನಿಘಂಟು ರಚನೆ, ಪಠ್ಯಪುಸ್ತಕ ರಚನೆ, ವಿಶ್ವಕೋಶ ರಚನೆ, ಪರಿಸರ ಚಳುವಳಿ, ಚುನಾವಣೆ ರಾಜಕೀಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕಾರಂತರು ಕೆಲಸ ಮಾಡಿದವರು. ಏಕಾಗಿಯಾಗಿ ಅವರು ‘ವಿಜ್ಞಾನ ಪ್ರಪಂಚದ’ ನಾಲ್ಕು ಸಂಪುಟಗಳನ್ನು ಪ್ರಕಟಿಸಿದರು. ಇಷ್ಟೆಲ್ಲ ಇದ್ದರೂ ಅವರು ಕನ್ನಡದ ಕಾದಂಬರಿಕಾರರು ಎಂದೇ ಪ್ರಸಿದ್ಧರಾಗಿದ್ದಾರೆ. ‘ಚೋಮನದುಡಿ’, ‘ಮರಳಿ ಮಣ್ಣಿಗೆ’, ‘ಬೆಟ್ಟದಜೀವ’, ‘ಮೈಮನಗಳ ಸುಳಿಯಲ್ಲಿ’ ಇವು ಅವರ ಪ್ರಮುಖ ಕಾದಂಬರಿಗಳು.  ಹುಚ್ಚುಮಸ್ಸಿನ ಹತ್ತುಮುಖಗಳು ಅವರ ಆತ್ಮಚರಿತ್ರೆ. ‘ಯಕ್ಷಗಾನ ಬಯಲಾಟ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ (೧೯೬೦) ಪ್ರಶಸ್ತಿಯೂ, ‘ಮೂಕಜ್ಜಿಯ ಕನಸುಗಳು’  ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿಯೂ (೧೯೭೮) ಬಂದಿವೆ. ಪ್ರವಾಸಪ್ರಿಯರಾದ ಕಾರಂತರು ಇಡೀ ಪ್ರಪಂಚವನ್ನೇ ಸುತ್ತುಹಾಕಿ ಅನೇಕ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಕಾರಂತರು ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು.

ಆಶಯ

ಪ್ರಸ್ತುತ ಲೇಖನವನ್ನು ‘ಕಾರಂತರ ಲೇಖನಗಳು ಸಂಪುಟ ೬’ ರಿಂದ ಆರಿಸಿಕೊಳ್ಳಲಾಗಿದೆ. ಮೂಲತ ರೇಡಿಯೋದಲ್ಲಿ ಮಾಡಲಾದ ಭಾಷಣವಿದು. ಇದು ಮೊದಲ ಬಾರಿಗೆ ೧೯೫೦ರಲ್ಲಿ ‘ಕನ್ನಡನುಡಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದರಲ್ಲಿ ಲೇಖಕರು ತಾವು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಬಗೆಯ ದೋಣಿಗಳಲ್ಲಿ ಮಾಡಿದ ಪ್ರಯಾಣದ ಅನುಭವವನ್ನು ಬಣ್ಣಿಸಿದ್ದಾರೆ. ಇದು ಪ್ರವಾಸ ಕಥನದಂತೆ ಕಂಡರೂ ನಮ್ಮ ನಾಡಿನ ದೋಣಿ ಸಂಸ್ಕೃತಿಯನ್ನು ಚಿತ್ರಿಸುವ ಕೆಲಸ ಕೂಡ ಮಾಡುತ್ತದೆ. ಕಾರಂತರ ಬಹಳ ಸುಂದರವಾದ ಗದ್ಯ ಬರೆಹಕ್ಕೆ ಈ ಲೇಖನ ಸಾಕ್ಷಿಯಾಗಿದೆ.

ಪದಕೋಶ

ಮಚ್ವೆ = ಹಡಗು, ತೊಳೆ = ಹುಟ್ಟು, ಮಾಡು = ಛಾವಣಿ, ಕಡವು =ನದಿ ದಾಟುವ ಜಾಗ, ಉರುಟಾದ = ನಾಜೂಕಿಲ್ಲದ

ಟಿಪ್ಪಣಿ

ಜಲ್ಲೆ = ದೋಣಿ ನಡೆಸಲು ಬಳಸುವ ಗಳು, ಅಳುವೆ = ಕಡಲಿಗೆ ನದಿ ಸೇರುವ ಜಾಗ, ಬಾಣು = ಕುಳಿತುಕೊಳ್ಳಲು ಮಾಡಿರುವ ದೋಣಿಯ ನಡುವಿನ ಅಡ್ದಪಟ್ಟಿ,

ಪ್ರಶ್ನೆಗಳು

೧. ಕಾರಂತರು ತಮ್ಮ ಎಳವೆಯಲ್ಲಿ ಕಲ್ಯಾಣಪುರ ಹೊಳೆಯಲ್ಲಿ ಮಾಡಿದ ದೋಣಿ ಪಯಣದ ಅನುಭವವನ್ನು ಹೇಗೆ ವಿವರಿಸುತ್ತಾರೆ?

೨. ಗೆರಸೊಪ್ಪೆಯಲ್ಲಿ ಮಾಡಿದ ಜಲ ಪ್ರಯಾಣದ ವರ್ಣನೆಯನ್ನು ವಿವರಿಸಿರಿ.

೩. ಎರ್ನಾಕುಳಂ ದೋಣಿ ಪಯಣವು ಲೇಖಕರಿಗೆ ಯಾಕೆ ಸಂತೋಷ ಲೊಡಲಿಲ್ಲ?

೪. ಕುಂದಾಪುರಕ್ಕೆ ದೋಣಿಯಲ್ಲಿ ಹೋದಾಗ ಕಂಡ ರುದ್ರಸೌಂದರ್ಯ ಎಂತಹುದು?

೫. ಗಂಗೊಳ್ಳಿ ಬಂದರಿನಲ್ಲಿ ಮಾಡಿದ ಮಚ್ವೆಯ ಪಯಾಣವು ಯಾಕೆ ಅದ್ಭುತವಾಗಿತ್ತು?

೬. ಕಾಶಿಯ ಗಂಗಾನದಿಯಲ್ಲಿ ಪಯಣಿಸುವುದು ಹೇಗೆ ವಿಭಿನ್ನವಾದಾನುಭವಕ್ಕೆ ಕಾರಣವಾಗುತ್ತದೆ?

೭. ಹಂಪಿಯ ತುಂಗಭದ್ರಾ ನದಿಯನ್ನು ದಾಟುವಾಗ ಲೇಖಕರಿಗೆ ಯಾಕೆ ದಿಕ್ಕುಗಳೆಲ್ಲ ಕಲಸಿಕೊಂಡಂತೆ ಆಯಿತು?

ಪೂರಕ ಓದು

೧. ಕಾಕಾ ಕಾಲೇಲ್ಕರ್‌ಅವರು ಕರ್ನಾಟಕ ನದಿಗಳನ್ನೂ ಒಳಗೊಂಡಂತೆ ಭಾರತದ ನದಿಗಳನ್ನು ಕುರಿತು ಬರೆದಿರುವ ‘ಜೀವನಲೀಲೆ’ ಪುಸ್ತಕ.

೨. ಪೂರ್ಣಚಂದ್ರ ತೇಜಸ್ವಿಯವರ ‘ಅಲೆಮಾರಿಯ ಅಂಡಮಾನ್‌ಹಾಗೂ ಮಹಾನದಿ ನೈಲ್‌’.

೩. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಅವರ ಪ್ರಭಂಧ ಸಂಕಲನ ‘ಹೇಮಾವತಿ ತೀರದಲ್ಲಿ ಮತ್ತು ಇತರ ಪ್ರಬಂಧಗಳು’.

೪. ರಾವ್‌ಬಹಾದ್ದೂರರ ಕಾದಂಬರಿ ‘ಗ್ರಾಮಾಯಣ’.

೫. ಮಾಲಿನಿಮಲ್ಯ ಅವರು ಸಂಪಾದಿಸಿದ ಶಿವರಾಮ ಕಾರಂತರ ‘ಶಿವರಾಮ ಕಾರಂತರ ಲೇಖನಗಳು ನಾಡು ನಿಸರ್ಗ ಪರಿಸರ ಸಂಪುಟ ೭’.

೬. ಹಿ. ಚಿ. ಬೋರಲಿಂಗಯ್ಯ ಅವರ ‘ಗಿರಿಜನರ ನಾಡಿಗೆ ಪಯಣ’ ಪ್ರವಾಸಕಥನ.