ಬೇಸಗೆಯ ನಡುಹಗಲು. ಬಿಸಿಯ ಬಿಸಿಲು ಹಸುರು ಮಲೆಗಳ ಮೇಲೆ ಹುಲುಸಾಗಿ ಮಲಗಿತು. ಹೆಗ್ಗೋಟೆಯ ಹೆಗ್ಗೋಡೆಗಳಂತೆ ಸುತ್ತಲೂ ಎತ್ತರವಾಗಿ ಎದ್ದ ಗಿರಿಗಳಿಂದ ಸಂಕುಚಿತವಾದಂತೆ ತೋರುತ್ತಿದ್ದ ತಿಳಿಯಾಳದ ಬಾನಿನಲ್ಲಿ ಬೂರುಗದರಳೆಯಂತಿದ್ದ ತುಂಡುಮೋಡಗಳು ಸೋಮಾರಿಯ ಮೆದುಳಿನಲ್ಲಿ ಅಲೆದಾಡುವ ಕನಸುಗಳಂತೆ ತೇಲುತ್ತಿದ್ದವು, ಹಕ್ಕಿಗಳು ಬಿಸಿಲಿನ ಬೇಗೆಗೆ ಬಸವಳಿದು ಮರಗಳಲ್ಲಿ ಮರೆಯಾಗಿ ಕನವರಿಸುವುವೋ ಎಂಬಂತೆ ಕಿಚಿಮಿಚಿ ಮಾಡುತ್ತಿದ್ದವು. ಎಲ್ಲಿಯೋ ಒಂದು ಮರಕುಟಗನ ಹಕ್ಕಿ ಮಾತ್ರ ಅಡವಿಯ ಬಡಗಿಯಂತೆ ಕೊಟ್‌ಕೊಟ್‌ಸದ್ದು ಮಾಡುತ್ತಿತ್ತು. ನಾನು ಊಟ ಮುಗಿಸಿಕೊಂಡು ನಮ್ಮ ಮನೆಯ ಉಪ್ಪರಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹವಣಿಸುತ್ತಿದ್ದೆ. ಗಿ – ನನ್ನೊಡನೆ ಇದ್ದರು. ಅಷ್ಟರಲಿ ಮಾಯ ಓಡಿಬಂದು ಕಣ್ಣಿನಲ್ಲಿ ನೀರು ಸುರಿಸುತ್ತ “ಅಣ್ಣಪ್ಪನಿಗೆ ಕಾಯಿಲೆ ಜೋರಾಗಿದೆ, ಉಳಿಯುವಂತಿಲ್ಲ. ನಿಮ್ಮನ್ನು ಬರಹೇಳಿದೆ” ಎಂದನು. ನಾನು ಗಿ- ಇಬ್ಬರೂ ಉದ್ದ್ವೇಗದಿಂದ ಎದ್ದೆವು. ಪ್ರಕೃತಿ ಮಾತ್ರ ನಿಶ್ಚಿಂತ ಉದಾಸೀನವಾಗಿತ್ತು.

ಮಾಯ ಅಣ್ಣಪ್ಪನ ತಮ್ಮ. ಅಣ್ಣಪ್ಪ ನಮ್ಮ ಒಕ್ಕಲು ಬಹಳ ವಿನೋದಶೀಲ ಅವನದು. ಸತ್ಯವಂತ, ಪ್ರಾಮಾಣಿಕ ನಮ್ಮ ಹಿರಿಯ. ಕಾಲದಿಂದಲೂ ನಮ್ಮ ಗದ್ದೆಮಾಡಿಕೊಂಡು ಗುತ್ತಿಗೆಯನ್ನು ಸಲ್ಲಿಸುತ್ತ ಯೋಗ್ಯನಾಗಿದ್ದ ಮನುಷ್ಯ. ಅವನದು ಯಾವಾಗಲೂ ನಗುಮುಖ. ಸಾಮಾನ್ಯವಾಗಿ ಬಡವರಲ್ಲಿ, ಅದರಲ್ಲಿಯೂ ಮಲೆನಾಡಿನ ಸಾಹುಕಾರರ ಗಾಣಕ್ಕೆ ಸಿಕ್ಕಿಬಿದ್ದಿರುವ ಬಡವರಲ್ಲಿ ಸುಲಭವಲ್ಲದ ನಗುಮುಖ. ನನಗಿನ್ನೂ ನೆನಪಿದೆ. ಅವನೊಂದು ದಿನ ಏನನ್ನೋ ಕಡೆಯುವ ಕೆಲಸದಲ್ಲಿದ್ದ. ಅವನಿಗೆ ಸಹಾಯವಾಗಿದ್ದವನು ಒಬ್ಬ ಚಿಕ್ಕ ಹುಡುಗ. ಬಹಳ ಹೊತ್ತು ಕೆಲಸ ಮಾಡಬೇಕಾದ್ದರಿಂದ ಹುಡುಗನ ಉತ್ಸಾಹ ಬತ್ತುವ ಸ್ಥಿತಿಗೆ ಬರಲು, ಅಣ್ಣಪ್ಪ ಕತೆ ಹೇಳಲು ತೊಡಗಿದ. ಹುಡುಗನ ಕೈ ಚುರುಕಾಯಿತು.  ನಾನು ಮರೆಯಲ್ಲಿದ್ದು ಆ ಕತೆಯನ್ನು ಆಲಿಸಿ ಬಹಳ ನಕ್ಕುಬಿಟ್ಟೆ -ಆ ಕಥೆ ಮತ್ತಿಂತೆಂದೊಡೆ…..

ಒಂದೂರಿನಲ್ಲಿ ಒಬ್ಬನು ರಾತ್ರಿ ಮಲಗಿದ್ದಾಗ ಒಂದು ಓಡುಹುಳು ಅವನ ಕಿವಿಯೊಳಗೆ ನುಗ್ಗಿತಂತೆ. ಅದು ಕಿವಿಯನ್ನು ಕೊರೆದು ಕೊರೆದು ತಲೆಯನ್ನು ಪ್ರವೇಶಿಸಿತು. ಅಲ್ಲಿ ಅದಾಗಲೆ ಗಬ್ಬವಾಗಿದ್ದರಿಂದ, ಮರಿಹಾಕಿ, ಸಂಸಾರ ಹೂಡಿತು. ತಾಯಿ ಮರಿಗಳಿಗೆ ಅವನ ಮೆದುಳೇ ಆಹಾರವಾಯಿತು. ಹೀಗೆ ಆ ಮರಿಗಳು ತಲೆಯ ತಿರುಳನ್ನು ತಿಂದು ತಿಂದು ಕಡೆಗೆ ಬರಿಯ ತಲೆಯೋಡು ಮಾತ್ರ ಉಳಿಯಿತು. ಆದರೂ ಆ ಮನುಷ್ಯ ಎಂದಿನಂತೆ ಕೆಲಸ ಮಾಡುತ್ತಿದ್ದನಂತೆ. ಒಂದು ದಿನ ಒಬ್ಬ ಪೋಲೀಸಿನವನು ಅಲ್ಲಿಗೆ ಬಂದು ಅವನನ್ನು ಕೂಗಿದನಂತೆ. ಆ ಮನುಷ್ಯ ಏನೋ ಕೆಲಸದ ಮೇಲಿದ್ದುದರಿಂದ ಬೇಗನೆ ಬರಲಾಗಲಿಲ್ಲ. ಪೋಲಿಸು ಮಹಾಶಯನಿಗೆ ಕೋಪ ಬಂದು ಗಟ್ಟಿಯಾಗಿ ರೇಗಿ ಕೂಗಲು ಆ ಮನುಷ್ಯ  ಭೀತಿಯಿಂದ ಹೊರಗೆ ಬಂದನಂತೆ. ಅವನು ಹೊರಗೆ  ಬರಲು  ಪೋಲೀಸಿನವನು  “ಏನೋ! ಏಕೆ ಬರಲಿಲ್ಲವೋ ನಾನು ಕರೆದ ಕೂಡಲೆ?” ಎಂದು ಕೆನ್ನೆಗೆ ಬಲವಾಗಿ ಹೊಡೆದನಂತೆ. ಹೊಡೆಯಲು, ತಿರುಳಿಲ್ಲದ ಕರಟದಂತಿದ್ದ ಆ ತಲೆಬುರುಡೆ ದೇಹದ ಮೇಲಿಂದ ಉರುಳಿಬಿದ್ದು ಒಡೆದೇ ಹೋಯಿತಂತೆ!

ಈ ಕತೆಯನ್ನು ಕೇಳುತ್ತಿದ್ದ ಹುಡುಗ ಬಿಲ್ಲುಂಬೆರಗಾಗಿ ಬಾಯಿ ತೆರೆದು ಕಣ್ಣರಳಿಸಿ ಅಣ್ಣಪ್ಪನ ಮುಖವನ್ನೇ ನೋಡುತ್ತಿದ್ದ. ಸ್ವಲ್ಪ ಹೊತ್ತಾದ ಮೆಲೆ ಆ ಹುಡುಗ “ನಿಜವಾಗಿಯೂ ನಡೆದುದು ಹೌದೇನೊ, ಅಣ್ಣಪ್ಪಾ?” ಎಂದ. ಅಣ್ಣಪ್ಪ ತಾನೇ ಆ ಕೇಸು ವಿಚಾರಣೆಯಾದಾಗ ಸಾಕ್ಷಿ ಹೇಳಿದ್ದೆ ಎಂದನು. ಹುಡುಗ ಸುಮ್ಮನಾದ. ನಾನು ನಗುತ್ತ ಹೊರಟುಹೋದೆ. ಅಣ್ಣಪ್ಪ ಕತೆಗಾರ ಹೌದೋ ಅಲ್ಲವೋ ತಿಳಿಯದು ನನಗೆ; ನಗೆಗಾರನೆಂಬುದೇನೋ ನಿರ್ವಿವಾದವಾದುದು.

ಅಣ್ಣಪ್ಪನ ಗುಡಿಸಲಿಗೂ ನಮ್ಮ ಮನೆಗೂ ಸುಮಾರು ನಾಲ್ಕು ಫರ್ಲಾಂಗುಗಗಳು ದೂರವಿರಬಹುದು. ನಾನು, ಗಿ-ಆ ಉರಿಬಿಸಿಲಿನಲ್ಲಿ ಹೊರೆಟೆವು. ನಮ್ಮ ಕೂಡೆ ಮಾಯನು ಖಿನ್ನವದನನಾಗಿ ಬರುತ್ತಿದ್ದನು. ಅವನೊಡನೆ ಕಾಯಿಲೆಯ ವಿವರಣೆ ಏನೆಂದು ಕೇಳಿದೆವು.

“ಎರಡು ವಾರದಿಂದ ನೆಲ ಹಿಡಿದಿದ್ದಾನೆ. ಎಲುಬು ಚರ್ಮ ಎರಡೆ ಇದೆ. ಆಗಾಗ ಬಾಯಲ್ಲಿ ರಕ್ತ ಕಾರುತ್ತಾನೆ. ಮೇಲುಸಿರೆಳೆಯುತ್ತಿದ್ದಾನೆ” ಎಂದು ವ್ಯಸನಸೂಚಕವಾದ ಸ್ವರದಿಂದ ಹೇಳಿದ.

“ಔಷಧಿ ಏನು ಮಾಡಿದಿರಿ?”

“ಚೌಡಿಯ ಕಾಟ ಎಂದರು. ಭಟ್ಟರ ಹತ್ತಿರ ನಿಮಿತ್ತ ಕೇಳಿಸಿದ್ದಾಯಿತು. ಭಸ್ಮ ಕೊಟ್ಟರು; ಅದನ್ನು ತಿನ್ನಿಸಿದೆವು. ಆಮೇಲೆ ಪಂಜರೊಳ್ಳಿ ದೆವ್ವಕ್ಕೆ ಕೋಳಿ ಕೊಟ್ಟೆವು” ಎಂದು ಪ್ರಾರಂಭಿಸಿದನು. ನನಗೆ ರೇಗಿತು.

“ಔಷಧಿ ಏನು ಮಾಡಿದ್ದೀರಿ?” ಎಂದು ಕೇಳಿದರೆ, ‘ಚೌಡಿ, ಭಟ್ಟ, ಭಸ್ಮ, ಕೋಳಿ!’ – ಅಯ್ಯೋ ಮುಟ್ಠಾಳ! ಕಾಯಿಲೆಗೆ ಔಷದಿ ಕೊಡಬಾರದೇನೋ” ಎಂದೆ

“ಔಷಧಿಯನ್ನೂ ಕೊಟ್ಟರು” ಎಂದನು.

“ಯಾರು?” ಎಂದೆ

“ನೆರೆಮನೆ ಮಂಜಣ್ಣ” ಎಂದನು.

ನನಗೆ ಇನ್ನೂ ಸಿಟ್ಟುಬಂದಿತು. ಮಲೆನಾಡಿನಲ್ಲಿ ‘ನನ್ಗೆ ನಾನೇ ವೈದ್ಯನಾಗಿ ಬಿಟ್ಟೆ!’ ಎಂದುಕೊಂಡು ಔಷಧಿಕೊಟ್ಟು ಅನೇಕ ರೋಗಿಗಳನ್ನು ವೈಕುಂಠಧಾಮಕ್ಕೆ ಕಳುಹಿಸುವವರು ಬಹಳಮಂದಿ ಇದ್ದಾರೆ. ಜನಗಳು ಕಾಯಿಲೆಯಾದರೆ ಮೊದಲು ದೆವ್ವಕ್ಕೆ ಹೇಳಿಕೊಳ್ಳುತ್ತಾರೆ. ಆಮೇಲೆ ಸರ್ವಜ್ಞಮೂರ್ತಿಗಳಾದ ಭಟ್ಟರು, ಶಾಸ್ತ್ರೀಗಳು ಮುಂತಾದವರೊಡನೆ ನಿಮಿತ್ತ ಕೇಳಿಸಿ, ಅವರು ಕೊಟ್ಟ ಬೂದಿಯನ್ನು ಹಚ್ಚುತ್ತಾರೆ ಅಥವಾ ತಿನ್ನುಸುತ್ತಾರೆ. ತರುವಾಯ ತನಗೆ ತಾನೆ ವೈದ್ಯನಾಗಿಬಿಟ್ಟ ಯಾವನೋ ಒಬ್ಬನಿಂದ ಏನೋ ಔಷಧಿ ಕೊಡಿಸುತ್ತಾರೆ. ಕಡೆಯಲ್ಲಿ ರೋಗಿ ಅಪರಿಹಾರ್ಯವಾದ ದುರವಸ್ಥೆಗಿಳಿದ ಮೇಲೆ ಆಸ್ಪತ್ರೆಗೆ ಓಡುತ್ತಾರೆ. ಡಾಕ್ಟರು ಏನಾದರೂ ಔಷಧಿ ಕೊಟ್ಟರೆ ಅದನ್ನು ಕುಡಿಸುತ್ತಾ, ತಮಗೆ ತಿಳಿದ ಮದ್ದುಗಳನ್ನೂ ತಿನ್ನಿಸುತ್ತಾ, ದೆವ್ವಭೂತಗಳಿಗೆ ಹರಕೆ ಒಪ್ಪಿಸುತ್ತಾ, ಸಾಕಾದಷ್ಟು ಅಪತ್ಯ ಮಾಡುತ್ತಾ, ಅದೃಷ್ಟವಶದಿಂದ ರೋಗಿ ಬದುಕಿದರೆ, ಅದನ್ನು ಭಟ್ಟರ ಭಸ್ಮಕ್ಕೂ ದೆವ್ವದ ಕೃಪೆಗೂ – ಆರೋಪಿಸಿ, ರೋಗಿ ಸತ್ತರೆ ಅದನ್ನು ಆಸ್ಪತ್ರೆ ಡಾಕ್ಟರ ಔಷಧಿಗೆ ಆರೋಪಿಸಿ, ತಮ್ಮ ಅನುಭವದ ಜ್ಞಾನಭಂಡಾರವನ್ನು ಇತರರಿಗೂ ಹಂಚುತ್ತಾರೆ. ಹೀಗೆ ಅವಿವೇಕ ನಾಚಿಕೆಮುಳ್ಳಿನಂತೆ ಬೆಳೆಯುತ್ತಾ ಹೋಗುತ್ತದೆ.

ನಾವು ಅಣ್ಣಪ್ಪನ ಗುಡಿಸಲನ್ನು ಸೇರಿದೆವು. ಕಿರುಜಗುಲಿಯ ಕೆಸರುಹಲಗೆಯ ಮೇಲೆ ತೊಗಲು ಅಂಟಿದ ಎಲುಬಿನ ಗೂಡಿನಂತೆ ಅಣ್ಣಪ್ಪ ಮುದ್ದೆಯಾಗಿ ಮುದುರಿಕೊಂಡು ಕೂತಿದ್ದ! ಮೈಮೇಲೆ ಬಟ್ಟೆಯಿಲ್ಲ. ಒಂದು ಚಿಂದಿ ಕಂಬಳಿ ಅವನಿಗೆ ಸ್ವಲ್ಪ ದೂರದಲ್ಲಿ ಮುದುರಿಬಿದ್ದಿತ್ತು. ತಲೆಕೂದಲು ಕೆದರಿ ವಿಕಾರವಾಗಿತ್ತು. ನನ್ನನ್ನು ನೋಡಿದ ಕೂಡಲೆ ಕೈಮುಗಿದು ಬಿಕ್ಕಿ ಬಿಕ್ಕಿ ಅಳಲು ತೊಡಗಿದ. ಅವನಿಗೆ ಮಾತಾಡಲು ಉಸಿರೇ ಇರಲಿಲ್ಲ. ನೋಟ ಭಯಾನಕವಾಗಿತ್ತು. ನನಗೆ ನಮ್ಮ ದೇಶದ ದಾರಿದ್ರ್ಯವೇ ಮೂರ್ತಿಮತ್ತಾಗಿ ನನ್ನೆದುರು ಬಂದಂತಾಯಿತು. ಹೊಟ್ಟೆಯ ಅಳಲನ್ನು ಹಾಗೆಯೆ ತಿಂದುಕೊಂಡು ಕೆಸರುಹಲಗೆಯ ಮೇಲೆ ಕುಳಿತುಕೊಳ್ಳಲು ಹವಣಿಸುತ್ತಿದ್ದೆ. ಅಷ್ಟರಲ್ಲಿ ಅಣ್ಣಪ್ಪ ಪಾತಾಳ ಧ್ವನಿಯಿಂದ “ಅಯ್ಯಾ, ಮೇಲೆ ಕುಳಿತುಕೊಳ್ಳಿ” ಎಂದು ಅಲ್ಲಿದ್ದ ಒಂದು ಮೊರಡಾದ ಕಾಲುಮಣೆಯನ್ನು ತೋರಿಸಿದ. ನಾನು ಅದರ ಮೇಲೆ ಕುಳಿತುಕೊಂಡೆ. ಸ್ವಲ್ಪ ಹೊತ್ತು ಮಾತಾಡಲು ಬಾಯೇ ಬರಲಿಲ್ಲ.

ಲೋಕರೂಢಿಯ ದೃಷ್ಟಿಯಿಂದ ಎಷ್ಟೇ ಅಲ್ಪವಾದುದಾಗಲಿ ಎಷ್ಟೇ ಮಹತ್ತಾದುದಾಗಲಿ ಪ್ರತಿಯೊಂದು ವಸ್ತುವನ್ನೂ ಪ್ರತಿಯೊಂದು ಸನ್ನಿವೇಶವನ್ನೂ ವಿರಾಟ್‌ದೃಷ್ಟಿಯಿಂದ ನೋಡಲೆಳಸುವುದು ನನಗೊಂದು ಹುಚ್ಚು. ಹಾಗೆ ನೋಡಿದರೆ ಅಲ್ಪತ್ವ ಮಹತ್ವಗಳೆಲ್ಲ ಮಯಾವಾಗಿ ಸಮತ್ವ ಮೂಡುತ್ತದೆ  ನಮ್ಮ ಅಂಹಾಂಕಾರವೂ ತೆಗ್ಗಿ, ಅಣುವಿನಿಂದ ಹಿಡಿದು ಆಕಾಶದವರೆಗೂ, ಅಜ್ಞಾತವಾದ ಇರುವೆಯಿಂದ ಜಗದ್ವಿಖ್ಯಾತನಾದ ಮಹಾತ್ಮನವರೆಗೂ ಎಲ್ಲರೂ ಎಲ್ಲವೂ ಮಹಿಮಾಮಾಯವಾಗಿ, ಅನಿರ್ವಚನೀಯವಾದ, ಅಪಾರವಾದ ವಿಶ್ವವ್ಯೂಹದಲ್ಲಿ ಸರ್ವ ಸಮತ್ವದ ಮತ್ತು ಸರ್ವಮಹತ್ವದ ಅನುಭವವುಂಟಾಗಿ, ಹೃದಯದಲ್ಲಿ ನಿಶ್ಚಲತೆಯೂ ಆನಂದವೂ ಶಾಂತಿಯೂ ಮೈದೋರುತ್ತವೆ. ಪ್ರತಿಯೊಂದು ವಸ್ತುವಿನ ಪೂರ್ಣ ಪ್ರಯೋಜನ ವ್ಯಕ್ತವಾಗುವುದು ಅಂತಹ ವಿರಾಟ್‌ದೃಷ್ಟಿಯಿಂದಲೆ. ಸೃಷ್ಟಿಯೆಲ್ಲವೂ ಒಂದು ಮಹಾಜಾಲದಂತೆ ಎಂದೂ ಪ್ರತಿಯೊಂದು ವಸ್ತುವೂ ಜಡವಾಗಿರಲಿ ಚೇತನವಾಗಿರಲಿ ಪರಸ್ಪರೋಪ ಜೀವಿಯೆಂದೂ ಅನೇಕ ಶತಮಾನಗಳ ಹಿಂದೆ ಮೃತ್ಯುಮುಖಿಯಾಗಿದ್ದ ರಾವಣನ ಆರ್ತನಾದ ನಾಳೆ ಸಾಯಲಿರುವ ನೊಣವೊಂದರ ರೋದನಕ್ಕೂ ನಾಳೆ ಅರಳಲಿರುವ ಕುಸುಮವೊಂದರ ಸೌಂದರ್ಯುಕ್ಕೂ ಹೇಗೋ ಸಂಬಂಧಪಟ್ಟಿದೆಯೆಂದೂ ನನ್ನ ಧೃಡವಾದ ನಂಬುಗೆ. ಆದ್ದರಿಂದ ಬಣ್ಣ ಬಣ್ಣದ ಸಣ್ಣ ಹಕ್ಕಿಯೊಂದು ಯಾರೂ ಕಾಣದಂತೆ ಮಲೆನಾಡಿನ ಕಾಡಿನ ಒಂದು ಮರದಲ್ಲಿ ಕುಳಿತು ಪ್ರಾತಃಕಾಲದ ಸ್ವಣೋತ್ಸವದಲ್ಲಿ ಇಂಪಾಗಿ ಗಾನಗೈಯುತ್ತಿದ್ದರೆ ನಾನು ಆ ಸನ್ನಿವೇಶವನ್ನು ಸರ್ವಕಾಲ ಸರ್ವದೆಶರಚಿತವಾದ ವಿರಾಟ್‌ರಂಗದ ಭಿತ್ತಿಯಲ್ಲಿಟ್ಟು ನೋಡಿ ಕೇಳಿ ನಲಿಯುತ್ತೇನೆ. ಹಾಗೆ ಮಾಡುವುದರಿಂದ ಸನ್ನಿವೇಶದ ಮಹತ್ವ ನೂರ್ಮಡಿಯಾಗುತ್ತದೆ. ಅದು ಜಗತ್ತಿನಲ್ಲಿ ನಡೆಯುವ ಮತ್ತಾವ ಮಹದ್ವ್ಯಾಪಾರಕ್ಕೂ ಕೀಲಾಗುವುದಿಲ್ಲ. ಬ್ರಹ್ಮವ್ಯೂಹದಲ್ಲಿ ಷೇಕ್ಸಪಿಯರಿನ ನಾಟಕ ರಚನೆ ಎಷ್ಟು ಮುಖ್ಯವೋ, ಮೊನ್ನೆ ನಡೆದ ಘೋರಯುದ್ಧ ಎಷ್ಟು ಅನಿವಾರ್ಯವೋ, ಅದು ಅಷ್ಟೇ ಮುಖ್ಯ, ಅಷ್ಟೇ ಅನಿವಾರ್ಯ ಎಂಬುದು ನನ್ನ ನಂಬುಗೆ. ಭುವನಕವಿಯ ಭವ್ಯ ಸ್ವರಮೇಲದಲ್ಲಿ ರನ್ನ ಒಂದು ಲಲಿತರಾಗವಾದರೆ ಗೂಬೆ ಕೂಡ ಒಂದು ಕೀಚುದನಿ!

ಅಣ್ಣಪ್ಪನ ಗುಡಿಸಲಿನಲ್ಲಿ ಕಾಲಮಣೆಯ ಮೇಲೆ ಕುಳಿತು ಇಂತಹ ಸ್ವಪ್ನ ಸಮುದ್ರದಲ್ಲಿ ತೇಲತೊಡಗಿದೆನು. ಆ ಬಡವನ ರೋಗದ ವಿಷಮಾವಸ್ಥೆ ಭರತ ಖಂಡದ ಸ್ವಾತಂತ್ರ್ಯ ಸಂಗ್ರಾಮದಂತೆಯೇ ಮುಖ್ಯವಾಗಿ ಕಂಡಿತು. ಹೊರಗೆ ನೋಡಿದೆ. ಮಲೆನಾಡಿನ ಹೆಬ್ಬನ ಹೆಬ್ಬೆಟ್ಟಗಳು ಸಾಲುಸಾಲಾಗಿ ಅನಂತವಾಗಿ ಹಬ್ಬಿದ್ದುವು. ಆ ಪರ್ನಾಸಮುದ್ರದ ತರಂಗಗಳ ಮೇಲೆ ನಡುಹಗಲಿನ ಉರಿಬಿಸಿಲು ಪಸರಿಸಿತ್ತು. ಮೇಲೆ, ಅನಂತವಾಗಿದ್ದರೂ ಶಾಂತವಾಗಿ ಕಾಣುತ್ತಿದ್ದ ನೀಲಾಕಾಶದಲ್ಲಿ ಅನೇಕ ಕೋಟಿ ಮೈಲಿಗಳ ದೂರದಲ್ಲಿ ಸೂರ್ಯ ಹೊಳೆಯುತ್ತಿದ್ದನು. ಗುಡಿಸಲಿನ ಕೊಳಕಾದ ಅಂಗಳದಲ್ಲಿ ತಿಪ್ಪೆಯ ಮೇಲೆ ಹೇಂಟೆಯೊಂದು ಮಣ್ಣನ್ನು ಕೆದರಿ ಕೆದರಿ ತನ್ನ ಹೂಮರಿಗಳಿಗೆ ತಿಂಡಿ ತಿನ್ನಿಸುತ್ತಿತ್ತು; ಹುಳು ಹುಪ್ಪಟೆಗಳನ್ನು! ತನ್ನ ಯಜಮಾನನ ರೋಗದ ವಿಚಾರ ಅದಕ್ಕೆ ಗೊತ್ತಾದಂತೆ ತೋರಲಿಲ್ಲ! ಕಂತ್ರಿನಾಯಿಯೊಂದು ಅಲ್ಲಿಯೇ ಪಕ್ಕದಲ್ಲಿ ಮಲಗಿ ಮೈಮೇಲೆ ಕುಳಿತು ಪೀಡಿಸುವ ನೊಣಗಳನ್ನು ಬಾಯಿ ಹಾಕಿ ಅಟ್ಟಿಕೊಳ್ಳುತ್ತಿತ್ತು. ಎದುರುಗಡೆ ಗದ್ದೆಯ ಬಯಲಿನಲ್ಲಿ ಕೆಲವು ಕಾಲ್ನಡೆಗಳು ಮೇಯುತ್ತಿದ್ದವು. ಕಾಲದ ಆಳದಲ್ಲಿ ಮುಳುಗಿ ದೇಶದ ವಿಸ್ತಾರದಲ್ಲಿ ಸಂಚರಿಸಿದೆ. ಪುನಃ ವಿರಾಟ್‌ರಂಗದ ಭಿತ್ತಿಯಲ್ಲಿ ಅಣ್ಣಪ್ಪನ ರೇಷ್ಮೆ ಕಾಯಿಲೆಯನ್ನು ಚಿತ್ರಿಸಿದೆ- ಸಿಂಧುವಿನಲ್ಲಿ ಒಂದು ಬಿಂದು! ಈ ವಿಚಿತ್ರ ಸೃಷ್ಟಿಯ ಉದ್ದೇಶ, ಸುಖದುಃಖಗಳ ಅರ್ಥ, ಆ ಬಡವನೂ ಲೋಕರೂಢಿಯ ದೃಷ್ಟಿಗೆ ಅಲ್ಪನೂ ಆದ ಅಣ್ಣಪ್ಪನ ಜನ್ಮ ಜೀವಿತಗಳ ಉದ್ದೇಶ, ಅರ್ಥ; – ಏನೇನೋ ನೂರು, ಸಾವಿರ, ಲಕ್ಷ, ಕೋಟಿ ಬಾವನೆಗಳು ‘ದರ್ಶನ’ದಲ್ಲಿ ಮಿಂಚಿದವು. ನನಗೊಂದು ಬಗೆಹರಿಯಲಿಲ್ಲ ನಮ್ರನಾದೆ; ದೀನನಾದೆ ನಿಟ್ಟುಸಿರುಬಿಟ್ಟು ಮುಂದಿನ ಕರ್ತವ್ಯಕ್ಕೆ ಸಿದ್ಧನಾದೆ.

ಬತ್ತಲೆ ಕೂತಿದ್ದ ಅಣ್ಣಪ್ಪ! ಅವನು ಕೂತಿದ್ದ ಎಂಬುದನ್ನು ಕೇಳಿ ನೀವು ಕಾಯಿಲೆ ಅಷ್ಟೇನೂ ಜೋರಾಗಿರಲಿಲ್ಲ ಎಂದು ತಿಳಿದುಬಿಟ್ಟೀರಿ. ಆಸ್ಪತ್ರೆಯಲ್ಲಾದರೆ ಅಂತಹ ರೋಗಿಯನ್ನು ಸ್ವಲ್ಪ ಅಲುಗಾಡಲೂ ಕೂಡ ಬಿಡರು. ಅವನನ್ನು ನೋಡಿದರೆ ಸ್ಮಶಾನಕ್ಕೆ ತಾನೇ ಹೊರಡಲು ಸಿದ್ಧನಾಗಿ ಕುಳಿತಂತೆ ತೋರುತ್ತಿತ್ತು. ನಾನು ಮಾಯನ ಕಡೆ ತಿರುಗಿ “ಇದೇನೋ ಇದು? ಅವನಿಗೆ ಮಲಗಲು ಹಾಸಿಗೆ ಇಲ್ಲವೇನೋ?” ಎಂದೆ. ಮಾಯ “ಹಾಸಿಗೆ ಬೇಡ ಎಂದ. ಬಹಳ ಉರಿಯಂತೆ” ಎಂದು ಅಲ್ಲಿ ಬಿದ್ದಿದ್ದ ಚಿಂದಿ ಕಂಬಳಿಯನ್ನೇ ಹಾಸಿದನು. ನಾನು ಅಣ್ಣಪ್ಪನಿಗೆ ಮಲಗಲು ಹೇಳಿದೆ. ಅವನು ಪುನಃ ಅದೇ ಪ್ರೇತವಾಣಿಯೋ ಎಂಬಂತಿರುವ ಪಾತಾಳಸ್ವರದಿಂದ “ಅಯ್ಯಾ, ನಾನು ಸಾಯುತ್ತೇನೆ. ನನ್ನ ಸಾಲಕ್ಕೆ ನನ್ನ ಮನೆಯ ದನಕರು ಪಾತ್ರೆ ಎಲ್ಲದರ ಪಟ್ಟಿಯನ್ನು ತೆಗೆದುಕೊಳ್ಳಿ” ಎಂದನು. ನನಗೆ ಎದೆಯಿರಿದಂತಾಯಿತು. “ಅದೆಲ್ಲಾ ಹಾಗಿರಲಿ! ನೀನು ಮಲಗಿಕೋ ಮೊದಲು” ಎಂದು ಗದರಿ ಹೇಳಿದೆ. ನನ್ನ ಬಲತ್ಕಾರಕ್ಕೆ ಮಲಗಿಕೊಂಡ. ಅವನು ಮಲಗಿಕೊಂಡ ರೀತಿಯನ್ನು ನೋಡಿದರೆ, ಮಲಗುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಸಂಪೂರ್ಣವಾಗಿ ಹತಾಶನಾದಂತೆ ತೋರಿತು.

ನಾನು ಅವನ ಕಾಯಿಲೆಯ ಪ್ರಸ್ತಾಪವನ್ನು ತೆಗೆದರೆ ಅವನು ಸಾಲದ ಮಾತನ್ನೇ ತೆಗೆಯುತ್ತಿದ್ದನು. “ಅಯ್ಯಾ, ನನ್ನ ಋಣ ತೀರಿದ್ದನ್ನು ನೋಡಿ ಸುಖವಾಗಿ ಸಾಯುತ್ತೇನೆ. ನನ್ನ ದನಕರು ಪಾತ್ರೆ ಎಲ್ಲ ಪಟ್ಟಿಮಾಡಿ” ಎಂಬುದೇ ಅವನ ಪಲ್ಲವಿಯಾಯಿತು. ಗಿ-  ಯವರು ಬಹಳವಾಗಿ ಹೇಳಿದರು. ಸಾಲದ ಚಿಂತೆ ಬೇಡ ಎಂದು. ನಾನೂ ಹೇಳಿದೆ ನೀನು ಸಾಯುವುದಿಲ್ಲ; ಏನೂ ಇಲ್ಲ. ಸುಮ್ಮನೆ ಮಲಗಿಕೋ. ಡಾಕ್ಟರಿಗೆ ನಾನೇ ಕಾಗದ ಬರೆದು ಔಷಧಿ ತರಿಸಿ ಕೊಡುತ್ತೇನೆ ಎಂದೆ. ನನ್ನ ಮಾತಿನ ಎರಡನೆಯ ಅಂಶವನ್ನು ನಂಬಿದನೇ ಹೊರತು ಮೊದಲನೆಯ ಭಾಗದಲ್ಲಿ ಅವನಿಗಿ ನಂಬುಗೆ ಇದ್ದಂತ ತೋರಲಿಲ್ಲ. ಕಡೆಗೆ ಅವನ ಕಾಟವನ್ನು ತಡೆಯಾಲಾರದೆ ಗಿ- ಯವರಿಗೆ ಹೇಳಿದೆ. “ಒಂದು ಪಟ್ಟಿ ಮಾಡಿ” ಎಂದು. ಅವರೂ ಪಟ್ಟಿಯನ್ನೂ ಬರೆಯುವಂತೆ ನಟಿಸಿದರು. ನಡು ನಡುವೆ ಅಣ್ಣಪ್ಪ ಮಾತನಾಡಲು ಯತ್ನಿಸಿದನು. ನಾನು ರೇಗಿದಂತೆ ನಟಿಸಿ ಅವನು ಸುಮ್ಮನೆ ಮಲಗುವಂತೆ ಮಾಡಿದೆ. ಒಂದು ಬಟ್ಟೆಯನ್ನೂ ಹೊದಿಸುವಂತೆ ಮಾಡಿದೆ. ಏಕೆಂದರೆ ಅವನಿಗೆ ಬಂದಿದ್ದುದು ನ್ಯೂಮೋನಿಯಾ ಕಾಯಿಲೆ. ಅವನಿಗಿದ್ದ ಕಷ್ಟ ಸಹಿಷ್ಣುತೆ ಇಲ್ಲದಿದ್ದರೆ ಅವನಾಗಲೆ ಹೆಣವಾಗಿರಬೇಕಿತ್ತು.  ಹಳ್ಳಿಗರಿಗೆ ಕಾಯಿಲೆಗಳಿಗಿರುವ ಜಾತಿ ಭೇದ ತಿಳಿಯದು. ಅವರಿಗೆ ನ್ಯೂಮೋನಿಯಾ  ಆಗಲಿ, ಟೈಫಾಯ್ಡ್‌ಆಗಲಿ, ಮಲೇರಿಯಾ ಆಗಲಿ, ಏನೇ ಆಗಲಿ, ಎಲ್ಲವೂ ಬರಿಯ ಕಾಯಿಲೆ, ನ್ಯೂಮೋನಿಯಾವನ್ನು ರೇಷ್ಮೆ ಕಾಯಿಲೆ ಎಂದು ಅವರಲ್ಲಿ ತಿಳಿದವರು ಕರೆಯುತ್ತಾರೆ. ಬಹುಶಃ “ಶ್ಲೇಷ್ಮಜ್ವರ” “ರೇಷ್ಮೆ ಕಾಯಿಲೆ” ಆಗಿರಬೇಕೆಂದು ತೋರುತ್ತದೆ.

ಪಟ್ಟಿ ಬರೆಯುವ ನಾಟಕವನ್ನು ಪೂರೈಸಿ ಅವನಿಗೆ ಧೈರ್ಯ ಹೇಳಿ, ಬುದ್ಧಿ ಹೇಳಿದೆವು. ಅವನು ಏಳದಂತೆ ನೋಡಿಕೊಳ್ಳಬೇಕೆಂದು ಮಾಯನಿಗೆ ಹೇಳಿದೆವು. ಕಡೆಗೆ ಡಾಕ್ಟರಿಗೊಂದು ವಿಷಾದವಾದ ಕಾಗದ ಬರೆದು ಒಬ್ಬ ಆಳನ್ನು ಔಷಧಿಗೆಂದು ಕಳುಹಿಸಿದೆವು. ಸಾಯಂಕಾಲ ಪುನಃ ಬಂದು ನೋಡುತ್ತೇವೆ ಎಂದು ಹೇಳಿ ಹೊರಟೆವು. ದಾರಿಯಲ್ಲಿ ಬರುತ್ತಾ ಅಣ್ಣಪ್ಪನಿಗಾಗಿ ಮನಸ್ಸಿನಲ್ಲಿಯೇ ನಮ್ರವಾಗಿ ಭಗಂತನನು ಪ್ರಾರ್ಥಿಸಿದೆ. ಮನೆಗೆ ಬಂದ ಮೇಲೆ ರೋಗಿಯ ಪಥ್ಯಕ್ಕಾಗಿ ಕೆಲವು ಪದಾರ್ಥಗಳನ್ನು ಕಳುಹಿಸಿದೆವು.

ಸಾಯಂಕಾಲ ರೋಗಿಯನ್ನು ನೋಡಲು ಹೋದವು!….

ಲೇಖಕರು

ಕುವೆಂಪು ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪-೧೯೯೪) ಅವರು, ೨೦ನೇ ಶತಮಾನ ಕಂಡ ದೊಡ್ಡ ಲೇಖಕರಲ್ಲಿ ಒಬ್ಬರು. ಅವರು ಬರೆದ ‘ಕಾನೂರು ಹೆಗ್ಗಡಿತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು, ಜಗತ್ತಿನ ಶ್ರೇಷ್ಠ ಕಾದಂಬರಿಗಳ ಸಾಲಿಗೆ ಸೇರುವಂತಹವು ‘ ಶ್ರೀರಾಮಾಯಾಣ ದರ್ಶನಂ’ ಮಹಾಕಾವ್ಯಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ (೧೯೫೫) ಜ್ಞಾನಪೀಠ ಪ್ರಶಸ್ತಿಯೂ (೧೯೬೮) ಬಂದಿವೆ. ಪಾಂಚಜನ್ಯ ‘ಪಕ್ಷಿಕಾಶಿ’, ‘ಕೋಗಿಲೆ ಮತ್ತು ಸೋವಿಯಟ್‌ ರಷ್ಯಾ’, ‘ಚಂದ್ರಮಂಚಕೆ ಬಾ ಚಕೋರಿ’ ಮುಂತಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಶೂದ್ರತಪಸ್ವಿ’, ‘ಬೆರಳ್ಗೆ ಕೊರಳ್‌’ ಮುಂತಾದವು ಅವರ ನಾಟಕಗಳು. ಕುವೆಂಪು ನಮ್ಮ ದೊಡ್ಡ ಲೇಖಕರು ಮಾತ್ರವಲ್ಲ. ತಮ್ಮ ವೈಚಾರಿಕ ಚಿಂತನೆಗಳಿಂದ ಕನ್ನಡದಲ್ಲಿ ಅಪಾರ ಪ್ರಭಾವ ಭೀರಿದ ಸಾಂಸ್ಕೃತಿಕ ವ್ಯಕ್ತಿತ್ವ ಕೂಡ. ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’, ‘ವಿಚಾರಕ್ರಾಂತಿಗೀ ಆಹ್ವಾನ’ ಮೊದಲಾದ ಕೃತಿಗಳಲ್ಲಿ ಪ್ರಖರವಾದ ವಿಚಾರಗಳಿವೆ. ‘ ನೆನಪಿನ ದೋಣಿಯಲ್ಲಿ ‘ ಅವರ ಆತ್ಮಚರಿತ್ರೆಯಾಗಿದೆ. ಕುವೆಂಪು ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಆಶ್ರಯ

ಪ್ರಸ್ತುತ ಪ್ರಬಂಧವನ್ನು ಅವರ ‘ಮಲೆನಾಡಿನ ಚಿತ್ರಗಳು’ ಎಂಬ ಪ್ರಬಂಧ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಈ ಪ್ರಬಂಧವು ಮಲೆನಾಡಿನಲ್ಲಿದ್ದ ಬಡತನ, ರೋಗ ಹಾಗೂ ಅಜ್ಞಾನವನ್ನು ಕುರಿತ ಹೃದಯವಿದ್ರಾವಕ ಚಿತ್ರವನ್ನು ನೀಡುತ್ತದೆ. ಬಡವರು ತಮ್ಮೆಲ್ಲ ನೋವು  ಕಷ್ಟಗಳ ಒಳಗೆ ಕೂಡ ಕತೆ ಹೇಳುವ ಹಾಡುಕತ್ಟುವ ಪ್ರತಿಭೆಯನ್ನು ಪಡೆದಿರುತ್ತಾರೆ, ಎಂಬುದು ಕೂಡ ಇಲ್ಲಿ ಪ್ರಕಟವಾಗುತ್ತದೆ.

ಪದಕೋಶ

ಕಡೆಯುವುದು = ರುಬ್ಬುವುದು, ಬಿಲ್ಲಂಬೆರಗು = ಮಹಾ ಆಶ್ಚರ್ಯ, ಕಾಲ್ನಡೆ = ದನಗಳು, ರನ್ನ = ಒಂದು ಜಾತಿಯ ಪಕ್ಷಿ, ಮೊರಡಾದ = ಉರುಟಾದ, ನಾಚಿಕೆಮುಳ್ಳು = ಮುಟ್ಟಿದರೆ ಎಲೆ ಮುದುರಿಕೊಳ್ಳುವ ಮುಳ್ಳಿನ ಗಿಡ, ಓಡಹುಳು = ಸಹಣಿಯ ಹುಳು, ಶ್ಲೇಷ್ಮ = ಕಫ, ಪರ್ಣಸಮುದ್ರ = ಎಲೆಗಳ ಸಮುದ್ರ, ಬೂರುಗ = ಹತಿಯನ್ನು ಬಿಡುವ ಒಂದು ಜಾತಿಯ ಕಾಡುಮರ

ಟಿಪ್ಪಣಿ

ಕೆಸರು =ಹಲಗೆ ಮಲೆನಾಡಿನಲ್ಲ್ ಹೊರಗಿಂದ ಬಂದವರು ಕುಳಿತುಕೊಳ್ಳಲು ಜಗಲಿಯಲ್ಲಿ ಇರುವ   ಒಂದು ಜಾಗ

ಪ್ರಶ್ನೆಗಳು

೧. ಅಣ್ಣಪ್ಪನ ಸ್ವಭಾವದ ಬಗ್ಗೆ ಲೇಖಕರು ಕೊಡುವ ಚಿತ್ರ ಯಾವುದು?

೨. ಅಣ್ಣಪ್ಪ ಹೇಳುವ ಓಡಹುಳು ಕತೆ ಏನು?

೩. ಮಲೆನಾಡಿನಲ್ಲಿ ಕಾಯಿಲೆ ಬಿದ್ದವರಿಗೆ ಯಾವ ಬಗೆಯ ಉಪಚಾರದ ಪದ್ಧತಿಯಿತ್ತು?

೪. ಲೋಕದ ಕಣ್ಣಲ್ಲಿ ಅಲ್ಪವಾದುದು ಹೇಗೆ ನಿಜವಾಗಿಯೂ ಮಹತ್ವವಾದುದು ಎಂದು ಲೇಖಕರು ವಿವರಿಸುತ್ತಾರೆ.?

೫. ಅಣ್ಣಪ್ಪನ ದೇಹಸ್ಥಿಯು ಲೇಖಕರ ಕಣ್ಣಿಗೆ ಹೇಗೆ ಕಂಡಿತು?

೬. ರೋಗಿಯಾದ ಅಣ್ಣಪ್ಪನ ಮುಂದೆ ಕುಳಿತು ಲೇಖಕರು ಮಾಡುವ ದಾರ್ಶನಿಕ ಚಿಂತನೆ ಯಾವುದು?

೭. ಅಣ್ಣಪ್ಪ ತನ್ನ ಸಾಲ ತೀರಿಸಲು ಮಾಡುವ ಕೊನೆಯ ವಿನಂತಿಯಲ್ಲಿ ಅವನ ಅಸಹಾಯಕತೆ ಹಾಗೂ ಸ್ವಾಭಿಮಾನ ಹೇಗೆ ವ್ಯಕ್ತವಾಗುತ್ತದೆ?

ಪೂರಕ ಓದು

೧. ಕುವೆಂಪು ಅವರ ‘ಯಾರೂ ಅರಿಯದ ವೀರ’ ಹಾಗೂ ‘ಶ್ರೀಮನ್ಮೂಕವಾಗಿತ್ತು’ ಎಂಬ ಕತೆಗಳು

೨. ತ್ಯಾನಂದೂರು ಪುಟ್ಟಣ್ಣನವರು ಬರೆದ ‘ನಾ ಕಂಡ ಮಲೆನಾಡು’

೩. ಬಿಳುಮನೆ ರಾಮದಾಸ್‌ಅವರು ಬರೆದ ‘ಹುಲಿಮಾಡಿಸಿದ ಮದುವೆ ಮತ್ತು ಇತರ ಲೇಖನಗಳು’ ಸಂಕಲನ

೪. ಪೂರ್ಣಚಂದ್ರ ತೇಜಸ್ವಿ ಅವರ ‘ಪರಿಸರದ ಕತೆ’