ದೊರೆತಿದ್ದ ಗಿಡಮರಗಳೇ ಇಲ್ಲಿಯೂ ಬೆಳೆಯುತ್ತಿದ್ದುವಾದ್ದರಿಂದ. ಹೆಚ್ಚಿನ ಸಂಗ್ರಹಣಕ್ಕೆ ಅವಕಾಶವಿರಲಿಲ್ಲ. ಮುಂದೆ ಮುಂದೆ ಹೋಗುತ್ತಲೇ ಇದ್ದೆವು. ರೇಂಜರು ತಟಕ್ಕನೆ ನಿಂತು ಅತ್ತಿತ್ತ ನೋಡಲಾರಂಭಿಸಿದ. ಹಾದಿ ಗೊತ್ತುಮಾಡುವುದು ಸ್ವಲ್ಪ ಕಷ್ಟವಾಯಿತು. ಫಾರೆಸ್ಟರು ಕೊಂಚ ದೂರ ಮುಂದೆ ಹೋಗಿ ಹುಡುಕಾಡಿ ರೇಂಜರಿಗೆ ಅದೇನನ್ನೋ ಮಲೆಯಾಳ ಭಾಷೆಯಲ್ಲಿ ವರದಿ ಒಪ್ಪಿಸಿದ. ಸ್ವಲ್ಪ ದೂರ ಹೋದರೆ ನಾವು ಬಂದ ದಾರಿ ಮೂರಾಗಿ ಕವಲೊಡೆಯುತ್ತದೆಯಂತೆ. ಅವುಗಳೊಂದರಲ್ಲಿ ಮಾತ್ರ ನಾವು ಮುಂಬರಿಯಬೇಕು; ಮಿಕ್ಕ ಎರಡೂ ಆನೆ ಹಿಂಡಿನ ನಿವಾಸ ಸ್ಥಾನವನ್ನು ಕುರಿತು ಸೇರುತ್ತವೆಯಂತೆ. ಅರಣ್ಯಾಧಿಕಾರಿಗಳ ಹಿಂದೆಯೇ ಒಂದು ಮೈಲಿ ನಡೆದವು. ವಿದ್ಯಾರ್ಥಿಗಳಲ್ಲಿ ಕೆಲವರಂತೂ ಬಹಳ ದೆಣಿದುಹೋಗಿದ್ದಿರಬೇಕು. ಕಿಸೆಯಲ್ಲಿ ತುಂಬಿಕೊಂಡು ಬಂದಿದ್ದ ಪೆಪ್ಪರ್‌ಮಿಂಟುಗಳನ್ನೂ ಬಿಸ್ಕತ್ತು ಚಾಕಲೇಟುಗಳನ್ನೂ ತಿಂದುಬಿಟ್ಟಿದ್ದರು. ಹಾದಿಯಲ್ಲಿ ಪೈಪೋಟಿಯಿಂದ ಶೇಖರಿಸಿಕೊಂಡಿದ್ದ ನೆಲ್ಲಿಕಾಯಿ ಹುಣಸೆಕಾಯಿಗಳನ್ನೂ ಮುಗಿಸಿಬಿಟ್ಟಿದ್ದರು. ಹಸಿವೂ ಬಾಯಾರಿಕೆಯೂ ಕಾಲ್ನಡಿಗೆಯ ಬಾಧೆಯೂ ಪೀಡಿಸುತ್ತಿದ್ದರೂ ಕಾಡಾನೆಯ ಹಿಂಡನ್ನು ನೋಡಲಿರುವ ಭವಿಷ್ಯದಲ್ಲಿ ಹುರುಪುಗೊಂಡಿದ್ದರು. ಬರಿಯ ಹುರುಪೂ ಮನೋಬಲವೂ ಇದ್ದರೆ ಸಾಕೆ? ಇವಕ್ಕೆ ಸರಿದೂಗುವ ದೇಹಶಕ್ತಿಯೂ ಇದ್ದರಲ್ಲವೆ ಆಸೆ ನೆರೆವೇರುವುದು? ವಿದ್ಯಾರ್ಥಿಗಳು ಅವರವರ ಶಕ್ತಿಸಾಮರ್ಥ್ಯಗಳಿಗನುಸಾರವಾಗಿ ಸಣ್ಣಸಣ್ಣ ಗುಂಪುಗಳಾಗಿ ಒಡೆದು ಹಿಂದೆ ಹಿಂದೆ ಉಳಿಯುವುದು ಅನಿವಾರ್ಯವೇ ಆಯಿತು. ನಾವು ಈ ಒಂದು ಮೈಲಿಯನ್ನು ದಾಟಿದ್ದು ಈ ರೀತಿಯಲ್ಲಿ. ರೇಂಜರು ತಿರುಗಿಯೂ ದಾರಿ ಹುಡುಕುವುದಕ್ಕೆಂದು ನಿಂತು ನೋಡಿದ. ನಾವೂ ಹಿಂದೆ ನೋಡಿ ವಿದ್ಯಾರ್ಥಿಗಳನ್ನು ಏಣಿಕೆ ಮಾಡಿದೆವು. ವರದರಾಜ ಹತ್ತು ಸಲ ಎಣಿಸಿ “ಐವರು ಹುಡುಗಿಯರು ನಾಪತ್ತೆ” ಎಂದ. ನಮಗೆ ವಿಪರೀತ ದಿಗಿಲಾಯಿತು. ಗೋವಿಂದ್‌ಅವರೂ ಇನ್ನೊಂದು ಸಲ ಎಣಿಕೆ ಮಾಡಿ ನಾಪತ್ತೆಯಾಗಿದ್ದ ಹುಡುಗಿಯರ ಹೆಸರುಗಳನ್ನು ಗುರುತು ಮಾಡಿಕೊಂಡರು -ಜಾನಕಿ, ಕಲ್ಪಕಂ, ಶಾಮಲ, ರಾಧಿಕಾ, ವನಜ. ಸ್ವಲ್ಪದೂರ ಅತ್ತಿತ್ತ ಹುಡುಕಿ ಬನ್ನಿರೆಂದು ಸುಂದರಂ ಅವರನ್ನು ಫಾರೆಸ್ಟರು ಅಟೆಂಡರುಗಳೊಡನೆ ಜತೆಮಾಡಿ ಕಳುಹಿಸಿದ್ದಾಯಿತು. ಇಪ್ಪತ್ತು ನಿಮಿಷಗಳಾದ ನಂತರ ಬಂದು ತಲೆ ಅಲ್ಲಾಡಿಸಿದರು. ನಮ್ಮೊಂದಿಗೆ ಉಳಿದಿದ ಹುಡುಗಿಯರನ್ನು ತನುಖೆಮಾಡಿ ಕೂಗಾಡುತ್ತಿದ್ದ. ಅಂದಿನ ಪ್ರವಾಸವನ್ನು ಅಲ್ಲಿಗೇ ಮುಕ್ತಾಯ ಮಾಡಿ ಮೂರು ದಾರಿ ಸೇರುವ ಎಡೆಗೆ ತಿರುಗಿಬಂದು ಆನೆ ನಿವಾಸವನ್ನು ಸೂಚಿಸುವ ದಾರಿಯಲ್ಲಿ ಎರಡು ಗುಂಪುಗಳಾಗಿ ಹುಡುಕಿ ನೋಡುವುದೆಂದು ತೀರ್ಮಾನ ಮಾಡಿದೆವು. ನಾನು, ಗೋವಿಂದ್‌, ರೇಂಜರು, ವರದರಾಜು, ತಂಗವೇಲು ಒಬ್ಬ ಅಟೆಂಡರು ಮೊದಲನೆಯ ಗುಂಪು. ಎಡಪಕ್ಕದ ಹಾದಿಯಲ್ಲಿ ಹೋಗಬೇಕಾದವರು. ಫಾರೆಸ್ಟರು, ಇನ್ನೊಬ್ಬ ರೇಜಂರು, ರಾಮಮೂರ್ತಿ ಎರಡನೆಯ ಗುಂಪು; ಬಲಪಕ್ಕದ ಹಾದಿಯಲ್ಲಿ ಹೋಗಬೇಕಾದವರು. ಉಳಿದವರು (ಸುಸ್ತುಬಿದ್ದಿದ್ದವರು) ಮೂರನೆಯ ಗುಂಪು; ಸುಂದರಂ ಅವರೊಡನೆ ಅಲ್ಲಿಯೇ ನಮಗಾಗಿ ಕುಳಿತು ಕಾಯುತ್ತಿರಬೇಕಾದವರು. ಒಂದರ್ಧ ಫರ್ಲಾಂಗು ದೂರ ದಾರಿ ಮಾಡಿಕೊಳ್ಳುತ್ತ ಕೊರಲು ಕೊಟ್ಟುಕೊಂಡೇ ಹೋದೆವು. ವರದರಾಜ ನಪತ್ತೆಯಾಗಿದ್ದ ಹುಡುಗಿಯರ ಹೆಸರುಗಳನ್ನು ಒಂದೊಂದಾಗಿ ಕೂಗುತ್ತಲೇ ಬಂದದ್ದರಿಂದ ಗಂಟಲು ಒಣಗಿಹೋಗಿ ಸುಮ್ಮನಾದ. ಅಂತರಾಳದಿಂದ “ಏಲ್ಪ್‌, ಏಲ್ಪ್‌” ಎಂಬ ದನಿಯೊಂದು ಕೇಳಿದ ಹಾಗಾಯಿತು. ಕಿವಿಗೊಟ್ಟು ಕೇಳಿದೆವು. ಎರಡು ನಿಮಿಷ ಬಿಟ್ಟು ತಿರುಗಿಯೂ  “ಏಲ್ಪ್‌, ಏಲ್ಪ್‌”  ಯಾವುದಾರೂ ಮೃಗದ ಉಲಿಯಿರಬಹುದೆ ಎಂದು ಗೋವಿಂದ್‌ವಿಚಾರಿಸಿದ್ದಕ್ಕೆ ರೇಜಂರು “ಇಲ್ಲ ನಮಗೆ ಪರಿಚಿತವಾದ ಕಾಡು ಮೃಗದ ಕೊರಲಾವುದೂ ಇದಲ್ಲ” ಎಂದ ಒಡನೆಯೆ ವರದರಾಜ ಇತ್ಯರ್ಥ: “ಹಾದಾರೆ ನಮ್ಮ ಊರುಮೃಗಗಳದ್ದೇ ಆಗಿರಬೇಕು!” ಅಳುಕಿನಿಂದ ಮುಂದುವರಿದೆವು, ಆಕ್ಲಾಂಡ ಕೆದರಿ ಬಾಗಿದ್ದ ಸಣ್ಣ ಚದುರ ಭೂಮಿಯನ್ನು ಸಮೀಪಿಸಿದೆವು, ಬತ್ತಿಹೋದ ಕೊರಲಿನ “ಏಲ್ಪ್‌, ಏಲ್ಪ್‌” ದನಿ ಹತ್ತಿರವಾಯಿತು. “ಅಯ್ಯಯ್ಯೋ” ಎಂದ ರೇಂಜರು. ಕಾಡಾನೆಯನ್ನು ಹಿಡಿಯುವುದಕ್ಕಾಗಿ ತೋಡಿದ್ದ ಹಳ್ಳ ಅದೆಂದು ಅವನಿಗೆ ತಟ್ಟನೆ ಹೊಳೆಯಿತು. ಹನ್ನೆರಡಡಿ ಆಳ ಹತ್ತು ಅಡಿ ಅಗಲವಿರುವ ಹಳ್ಳವನ್ನು ಬಾವಿಯ ರೀತಿಯಲ್ಲಿ ತೋಡಿ ಅದು ಇರುವ ಜಾಗ ತಟ್ಟನೆ ತಿಳಿಯಬಾರದೆಂಬ ಉದ್ದೇಶದಿಂದ ನೆಲಮಟ್ಟದ ಮೇಲೆ ಸಣ್ಣಸಣ್ಣ ಗಳುಗಳನ್ನು ಅಡ್ದಕ್ಕೂ ಉದ್ದಕ್ಕೂ ಹಾಸಿ ಅದರ ಮೇಲೆ ತರಗೆಲೆಗಳನ್ನೂ ಎಲೆಗುತ್ತಿಗಳನ್ನೂ ಆಕ್ಲೇಂಡ್ರ ಕಾಂಡಗಳನ್ನೂ ಸಿಕ್ಕಿಸಿ ಮರೆಮಾಡಿದ್ದರು. ಹತ್ತಿರ ಧವಿಸಿ ಇಣುಕಿ ನೋಡುತ್ತೇವೆ: ನಾಪತ್ತೆಯಾಗಿದ್ದ ಪಂಚಕನ್ಯೆಯರೇ! ತಳದಲ್ಲಿ ಹಾಸಿದ್ದ ಒಣಹುಲಿನಲ್ಲಿ ಅರ್ಧ ಹುದುಗಿಹೋಗಿದ್ದರು.

ನಮ್ಮನ್ನು  ಕಂಡೊಡನೆಯ ಹುಡುಗಿಯರಿಗೆ ನಾಚಿಕೆ, ನಂಬಿಕೆ, ಅಂಜಿಕೆ, ಅಳು ನಾಲ್ಕೂ ಒಟ್ಟಿಗೆ ಬಂದವು. ಗಾಬರಿಯಿಂದ ಪೆಚ್ಚುಬಿದ್ದಿದ್ದರು. ನಿರಾಶೆಯಿಂದ ನಚ್ಚುಗೊಂಡಿದ್ದರು. “ನಮ್ಮನ್ನು ಊರಿಗೆ ಕಳುಹಿಸಿಬಿಡಿ” ಎಂದು ಬಿಕ್ಕಿ ಬಿಕ್ಕಿ ಅತ್ತರು. “ಊರಿಗೆ ರವಾನೆ ಹಾಕುವುದಕ್ಕೆ ಮೊದಲು ನಿಮ್ಮನ್ನು ಮೇಲೆತ್ತುವ ಸಾಹಸ ಮಾಡಬೇಕಾಗಿದೆ. ಮೊದಲಿನ ಕಾರ್ಯ ಮೊದಲಾಗಲಿ” ಎನ್ನುವಷ್ಟರಲ್ಲಿಯೇ ವರದರಾಜ ” ಖಂಡಿತ ನೀವೇ ಹೋಗಿ, ತಿರುಗಿ ಬರಬೇಡಿ, ನೀವಿರುವ ಕಂದರದಲ್ಲಿಯೇ ಗುಪ್ತ ಮಾರ್ಗವಿದ್ದರೆ ಹುಡುಕಿನೋಡಿ, ಅಷ್ಟು ಅವಸರವಾದರೆ ಅದರೊಳಕ್ಕೆ ನುಸುಳಿ ನಿಮ್ಮ ಮನೆಗಳನ್ನು ಸೇರಿಕೊಂಡುಬಿಡಿ” ಎಂದ. ಇತ್ತ ವರದರಾಜನ ಬಡಾಯಿ ಬಾಯನ್ನು ಮುಚ್ಚಿಸಿ ಅತ್ತ ಹಳ್ಳದ ಹುಡುಗಿಯರ ಅಳುಬಾಯನ್ನು ಮುಚ್ಚಿಸುವ ಹೊತ್ತಿಗೆ ನನಗೆ ಸಾಕು ಸಾಕಾಗಿಹೋಯಿತು. ಇನ್ನೊಂದು ದಿಕ್ಕಿನಲ್ಲಿ ಹುಡುಕಹೋಗಿದ್ದ ಗುಂಪಿನವರನ್ನೂ ಕಾದು ಕುಳಿತಿದ್ದ  ಗುಂಪಿನವರನ್ನೂ ಕದೆದುಕೊಂಡು ಬರಲು ಗೋವಿಂದ್‌ಅವರನ್ನೂ ಅಟೆಂಡರನ್ನೂ ಕಳುಹಿಸಿದೆ.

ಬಾವಿಯೊಳಗಿಂದಲೇ ಕಲ್ಪಕಂ: “ಮತ್ತಾರೂ ಇಲ್ಲಿ ಬರುವುದು ಬೇಡ, ಸರ್‌”.

ವರದ: “ನಮಗೇನು ಹುಚ್ಚೆ ನೀವಿರುವಲ್ಲಿಗೆ ಬರುವುದಕ್ಕೇ!”

ವರದರಾಜನ  ಬಾಯನ್ನು ನನ್ನ ಬಲಗೈಯಿಂದ ಗಟಿಯಾಗಿ ಮುಚ್ಚಿ ಹೇಳಿದೆ: “ನೀವು ಹೀಗೆಲ್ಲ ಸವಾಲು ಹಾಕುವುದು ಒಳಿತಲ್ಲ. ನಿಮ್ಮನ್ನು ಈಗ ಮೇಲಕ್ಕೆ ಎತ್ತುವ ಕೆಲಸ ಮಾಡಬೇಕಾಗಿದೆ. ನಮಗೆ ಜನಸಹಾಯ ಬೇಕು. ನಾವು ಹೇಳಿದಂತೆ ನೀವು ಕೇಳುವುದು ಒಳಿತು.

ಜಾನಕಿ: “ಅವರೆಲ್ಲ ಬಂದು ನೋಡಿ ಹಾಸ್ಯಮಾಡುತ್ತಾರೆ. ಸರ್‌”.

ನನ್ನ ಕೈಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದ  ವರದರಾಜನನ್ನು ತಡೆಯುತ್ತ: “ಅವರು ನಕ್ಕರೆ ನಗಲಿ, ನೀವೂ ವಿನೋದದಲ್ಲಿ ಕಲೆಯಿರಿ.”

ಶಾಮಲ: “ನಾವು ಹಿಂತಿರುಗಿ ಮದರಾಸಿಗೆ ಹೋದಮೇಲೆ ಅಲ್ಲಿನವರಿಗೆಲ್ಲ ಹೇಳಿ ಬಿಡುತ್ತಾರೆ, ಸರ್‌”.

ವನಜ: “ಹಾಸ್ಟಲಿನಲ್ಲೆಲ್ಲ ಡಂಗುರ ಹುಯ್ಯುತ್ತಾರೆ, ಸರ್‌”.

ರಾಮ ರಾಮ! ಸಾಕುಸಾಕಾಗಿಹೋಯಿತು. ನನಗೆ ಹಲ್ಲುಕಚ್ಚಿಕೊಂಡು ಬದಲು ಕೊಡದೆ ಸುಮ್ಮನಿದ್ದೆ. ನಿಶ್ಯಬ್ಧವನ್ನು ಕಂಡು ಅವರಿಗೆ ಏನನ್ನಿಸಿತೋ ಏನೋ “ಸಾರ್‌ಸಾರ್‌, ಹೋಗಿಬಿಟ್ಟಿರಾ! ಹೋಗಬೇಡಿ, ಸಾರ್‌. ಇಲ್ಲಿಯೇ ಇರಿ. ಹೆದರಿಕೆಯಾಗುತ್ತೆ.” ತಲೆ ಚಚ್ಚಿಕೊಂಡೆ. “ಎಲ್ಲಿಯೂ ಹೋಗಲಿಲ್ಲ, ಇಲ್ಲಿಯೇ ಇದ್ದೇವೆ. ಸ್ಪಲ್ಪ ಸುಮ್ಮನಿರುತ್ತೀರೋ ಇಲ್ಲವೋ?” ಎಂದೆ. ವರದರಾಜನ ಬಾಯನ್ನು ಎಷ್ಟು ಹೊತ್ತು ಅದುಮಿಟ್ಟಿರಲು ಸಾಧ್ಯ? ಹಿರಿಯ ಕೊರಲಿನಲ್ಲಿ ಕಿರುಚಿದ: “ಪ್ರಾರಬ್ಧಗಳೇ, ನಿಮಗೆ ಸಹಾಯ ಮಡುವುದಕ್ಕೆ ನಮಗೆ ಅವಕಾಶ ಕೊಡುತ್ತೀರೋ ಇಲ್ಲವೋ? ದೂರ ಸರಿದರೆ ಬಾ ಎನ್ನುತ್ತೀರಿ. ಹತ್ತಿರ ಬಂದರೆ ಹೋಗು ಎನ್ನುತ್ತೀರಿ. ನಿಮಗೇನಾದರೂ ಮಾರ್ಯದೆ ಇದೆಯೆ? ಬಿದ್ದಿರಿ, ಅಲ್ಲಿಯೇ ಬಿದ್ದಿರಿ. ರಾತ್ರಿ ನಿಮ್ಮೊಂದಿಗೆ ಇನ್ನೊಂದೆರಡು ಆನೆಗಳೂ ಬೀಳುತ್ತವೆ. ಅವುಗಳ  ಜತೆಯಲ್ಲಿರಿ, ಯಾರಿಗೂ ಗೊತ್ತಾಗುವುದಿಲ್ಲ” ಎಂದ. ಬಾವಿಯಲ್ಲಿ ನಿಶ್ಯಬ್ಧವಾಯಿತು, ಮಿಕ್ಕವರೂ ಹತ್ತಿರದಲ್ಲಿಯೇ ಬರುತ್ತಿರುವ ಕೊರಲೂ ಕೇಳಿಸಿತು:-

“ಆನೆ ಇವರನ್ನು ಕಚ್ಚಿಕೊಂಡು ಹೋಗಿಬಿಟ್ಟಿತಾ?”

“ಎಷ್ಟು ಆನೆಗಳು ಬಂದಿದ್ದವೋ?”

“ಒಂದೇ ಆನೆ ಐವರನ್ನೂ ಹೆಗಲ ಮೇಲೆ ಕೂಡಿಸಿಕೊಂಡು ಹೋಗಿರಬೇಕು”.

“ಇಲ್ಲ, ಹಳ್ಳದಲ್ಲಿ ಆನೆ ಇವರನ್ನು ಸೆಳೆದುಕೊಂಡಿರಬೇಕು”.

“ಆನೆಗೆ ತೋಡಿದ್ದ ಹಳ್ಳ ಇವರ ಕಣ್ಣಿಗೆ ಬೀಳಲಿಲ್ಲವೇ?”

“ಆನೆ ಇವರನ್ನು ಕಂಡು ಹೆದರಿರಬೇಕು. ಫ್ರೋಫೆಸರು ಹೇಳಿರಲಿಲ್ಲವೆ, ಉಗ್ರ ಬಣ್ಣಗಳ ಉಡುಗೆ ಬೇಡವೆಂದು?”

“ಅಥವಾ ಆನೆಯನ್ನು ನೋಡಿ ಇವರೇ ಹೆದರಿರಬೇಕು”.

“ಅದು ಹೋಗಲಿ, ಇವರು ನಮ್ಮ ಗುಂಪನ್ನು ಬಿಟ್ಟು ಬೇರೆಯಾಗಬೇಕಾಗಿದ್ದ ಪ್ರಮೇಯವೇನಿತ್ತು? ಶುದ್ಧ ತಲೆಹರಟೆಗಳು.”

ಈ ಶೈಲಿಯ ಪ್ರಶ್ನೆಗಳು, ಉಹೆಗಳು ಮರುಪ್ರಶ್ನೆಗಳು, ಹೊಸ ಊಹೆಗಳು ಕೇಳಿಬಂದವು. ರೇಂಜರು ಫಾರೆಸ್ಟರನ್ನು ಕರೆದು “ಎರಡು ದೊಡ್ಡ ಬಿದಿರುಗಳನ್ನು ಕಡಿದುಕೊಂಡು ಬಾ” ಎಂದ. ಬಿದಿರುಮೆಳೆ ಪಕ್ಕದಲ್ಲಿಯೇ ಇತ್ತು. ಎರಡು ಗಳುಗಳಿಗೆ ಅಡ್ದಪಟ್ಟಿಗಳನ್ನು ಕಟ್ಟಿ ಏಣಿಯಂತೆ ಹವಣಿಸಿ ಹಳ್ಳದೊಳಕ್ಕೆ ಇಳಿಬಿಟ್ಟಾಗ ಮೇಲಿನ ಮೆಟ್ಟಲಿಗೂ ನೆಲದ ಸಮಕ್ಕೂ ಎರಡು ಅಡಿಗಳ ಅಂತರ ಬಿಟ್ಟಿತ್ತು. ಈಗಾಗಲೇ ಹೊತ್ತಾಗಿಬಿಟ್ಟಿರುವುದರಿಂದ ನೆಲಸಮವನ್ನು ಮುಟ್ಟುವ ಇನ್ನೊಂದು ಏಣಿಯನ್ನು ತಯಾರಿಸುವುದು ಬೇಡವೆಂದೂ, ಹುಡುಗಿಯರು ಏಣಿಯ ಕೊನೆ ಮೆಟ್ಟಲನ್ನು ಹತ್ತಿ ನಿಲ್ಲುವುದೆಂದೂ, ದಡದ ಮೇಲೆ ಯಾರಾದರೂ ನಿಂತುಕೊಂಡು ಕೈಕೊಟ್ಟು ಅವರನ್ನು ನೆಲದ ಮೇಲಕ್ಕೆ ಸೆಳೆದುಕೊಳ್ಳುವುದೆಂದೂ ತೀರ್ಮಾನಿಸಿದೆವು. ಮೊದಲು ಹತ್ತಿದವಳು ಶಾಮಲ; ಕೊನೆಯ ಮೆಟ್ಟಲಿಗೆ ಬಂದಾಗ ನಾನೇ ಕೈಚಾಚಿದೆ, ಅವಳು ಹಿಡಿದುಕೊಳ್ಳಲೆಂದು. ನಾಚಿಕೊಂಡು ನಿಂತಳು. ಹೋಗಲಿ, ನಾನು ಬೇಡ ಗೋವಿಂದ್‌ಅವರು ಕೈಚಾಚಿದರು. ನಾಚಿಕೆ ಅಧಿಕವಾಯಿತು. ವರದರಾಜನಿಗೆ ಹೇಳಿದೆ, ಅವನು ಕೈಚಾಚಿದ್ದಕ್ಕೆ ಸೊಟ್ಟ ಮೋರೆ ಹಾಕಿಕೊಂಡು ಸಿಡುಗುಟ್ಟಿದಳು. ಒಳಗಿನಿಂದ ಇತರರೂ ಇವಳ ನಿಲುವನ್ನೇ ಸಮರ್ಥಿಸುತ್ತಿದ್ದರು. ನನಗಂತೂ ಕೋಪ ಉಕ್ಕಿಬಂದಿತು. ಇವರ ಪಾತಿವ್ರತ್ಯ  ಧರ್ಮ ರೀತಿಯನ್ನು ಕಂಡು. ಹಲ್ಲುಕಚ್ಚಿಕೊಂಡು ನಮ್ಮೊಂದಿಗಿದ್ದ ಹುಡುಗಿಯರಿಬ್ಬರನ್ನು ಕಳುಹಿಸಿದೆ. ಅವರು ತಮ್ಮ ಕೈಚಾಚಿ ಶಾಮಲಳ ಕೈ ಹಿಡಿದುಕೊಂಡರು. ಶಾಮಲ ನೆಲದ ಮೇಲೆ ಹೆಜ್ಜೆಯಿಡುವುದಕ್ಕೆ ಬದಲಾಗಿ ಇವರಿಬ್ಬರೂ ಒಳಕ್ಕೆ ಬೀಳುವ ಸ್ಥಿತಿ ಏರ್ಪಟ್ಟಿತು. ರೆಂಜರು ಎರಡು ಹೆಜ್ಜೆ ಮುಂದೆ ಧಾವಿಸಿ ಒಳ ಬೀಳಲಿದ್ದ ಹುಡುಗಿಯರ ರಟ್ಟೆಗಳನ್ನು ಬಲವಾಗಿ  ಹಿಡಿದು  ಹಿಂದಕ್ಕೆ ಸೆಳೆದದ್ದರಿಂದ ಇನೊಂದು ಅನಾಹುತ ತಪ್ಪಿತು. ನಾವು ಸೋತೆವೆಂದು ಒಪ್ಪಿಕೊಂಡೆವು. ಆದರೆ ಜವಾಬ್ದಾರಿ ನನ್ನದು ತಾನೆ? ಅವರನ್ನು ಅಲ್ಲಿಯೇ ಬಿಟ್ಟುಹೋಗುವುದು ಸಾಧ್ಯವೇ? ಹಗೆ ಮಾಡುವುದಕ್ಕೆ ಧೈರ್ಯತಾನೆ ಎಲ್ಲಿಂದ ಬರಬೇಕು? ಹಸ್ತಸ್ಪರ್ಶ ಅವರಿಗೆ ಮೈಲಿಯಾಗುವುದಾಗಿದ್ದ ಪಕ್ಷಕ್ಕೆ ಬಿದಿರಿನಲ್ಲಿಯೇ ಮೂರು ಅಡಿಯ ಕೋಲೊಂದನ್ನು ತೆಗೆದುಕೊಂಡು, ನಾನು ಅದರ ಒಂದು ತುದಿಯನ್ನು ಬಲವಾಗಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ಮೇಲೇರಿ ಬರುವವರೆಗೆ ನೀಟುವುದೆಂದೂ, ಅವರು ಬರಿತುದಿಯನ್ನು ಹಿಡಿದುಕೊಂಡು ನೆಲದ ಮೇಲಕ್ಕೆ ಬರುವುದೆಂದೂ ಯೋಚಿಸಿ ಹಾಗೆಯೇ ಮಾಡಿದೆ. ಒಬ್ಬೊಬ್ಬರಾಗಿ ಹತ್ತಿಬಂದರು. ಮೇಲಕ್ಕೆ ಬಂದವರಿಗೆ ಸುತ್ತಲಿನ ಸುಳಿವೇ ಇಲ್ಲ! ಐವರೂ ಒಬ್ಬರನ್ನೊಬ್ಬರು ವಿಧವಿಧವಾಗಿ ತಬ್ಬಿಕೊಂಡು ತಮತಮಗೇ ವಂದಾನಾಸಮರ್ಪಣೆ ಮಾಡಿಕೊಳ್ಳುತ್ತಿದ್ದುದನ್ನು ನೋಡಿ ನಮಗೆಲ್ಲರಿಗೂ ವೀಪರೀತ ನಗು ಬಂದಿತು. ಈ ಆಲಿಂಗನಾಮಹೋತ್ಸವ ಮುಗಿದೊಡನೆಯ ನಾವು ಹಲ್ಲು ಬಿಟ್ಟಿದನ್ನು ಗಮನಿಸಿದರು. ನೀರುಜಡೆ ಜಾನಕಿ ಸಿಟ್ಟೆದ್ದು ಹುಡುಗರನ್ನು ನೋಡಿ “ಯಾಕ್ರೋ ಹಲ್ಲು ಕಿರಿಯುತ್ತಿದ್ದೀರ?” ಎಂದು ಗದರಿಸಿದಳು. ಮಿಕ್ಕ ನಾಲ್ವರೂ “ನಮ್ಮ ಚೀಲಗಳನ್ನು ಯಾರೋ ತೆಗೆದುಕೊಂಡುಬಿಟ್ಟಿದ್ದಾರೆ! ನಮ್ಮ ಸಸ್ಯಕರಂಡಗಳನ್ನು ಯಾರೋ ಕದ್ದುಬಿಟ್ಟಿದ್ದಾರೆ! ಎಂದು ಕೂಗಾಡಹತ್ತಿದರು. ಯಾರೂ ಯಾವುದನ್ನೂ ತೆಗೆದುಕೊಳ್ಳಲಿಲ್ಲ. ಹಳ್ಳಕ್ಕೆ ಜಾರಿಬಿದ್ದಾಗ ಹೊತ್ತಿದ್ದ ಸಾಮಾನುಗಳ ಸಮೇತ ಒಳಕ್ಕೆ ಕುಸಿದಿದ್ದರು. ಹತ್ತಿಬಂದಾಗ ಅವನ್ನು ಅಲ್ಲಿಯೇ ಮರೆತಿದ್ದರು. ಅಟೆಂಡರುಗಳು ಹಳ್ಳದಲ್ಲಿ ಇಳಿದು ಸಾಮಾನುಗಳನ್ನು ತೆಗೆದುಕೊಂಡು ಬಂದರು. ಬಿಡಿದಿಗೆ ವಾಪಸು ಬಂದೆವು.

ವಾಪಸು ಬರುವ ದಾರಿಯಲ್ಲಿ ಎಲ್ಲರಿಗೂ ಏನೋ ಒಂದು ‘ಥರ’ ಮಾತಿಲ್ಲ ಕತೆಯಿಲ್ಲ, ಗೆಲುವಿಲ್ಲ. ಕಾಡಾನೆಗಳನ್ನೂ, ಕಾಡೆಮ್ಮೆಗಳನ್ನೂ ಕಣ್ಣಾರ ಕಾಣುವ ಅವಕಾಶ – ಅತಿ ಅಪರೂಪವಾದ ಅವಕಾಶ – ಹೋಗಿಬಿಟ್ಟಿತಲ್ಲಾ ಎಂಬ ಉತ್ಸಾಹಭಂಗ ಕೆಲವರಿಗೆ ಪಂಚಕನ್ಯೆಯರಿಂದ ತಪ್ಪಿಹೋಯಿತಲ್ಲಾ ಎಂಬ ರೋಷ ಕೆಲವರಿಗೆ. ಸಂಜೆ ನಾಲ್ಕು ಗಂಟೆಯಾಗಿಬಿಟ್ಟಿದ್ದರಿಂದ ಹಸಿವು ಬಾಯರಿಕೆಗಳು ಅನೇಕರಿಗೆ  ಹಿಂದೆ ನಮಗೆ ಮಹಾದಾನಂದವನ್ನು ಕೊಟ್ಟಿದ್ದ ಅಶೋಕಮರಗಳ ಹತ್ತಿರ ಬಂದಾಗ ಕೂಡ “ಇವಕ್ಕೆ ಕಾಡಿನಲ್ಲೇಕೆ ಇಷ್ಟು ಶೃಂಗಾರ?” ಎಂದು ತಾತ್ಸಾರಗೊಳ್ಳುವಂತಾಯಿತೇ ಹೊರತು ಉತ್ಸಾಹ ತರಲಿಲ್ಲ. ವರದರಾಜನಂತೂ “ಕಾಡಾನೆಗಳನ್ನು ಕಾಣುವ ಬದಲು ಊರಾನೆಗಳನ್ನು ಕಂಡದ್ದಾಯಿತು” “ಕಾಡಾನೆಗಳನ್ನು ಕಾಣುವ ಬದಲು ಊರಾನೆಗಳನ್ನು ಕಂಡದ್ದಾಯಿತು” ಎಂದು ಗೊಣಗುತ್ತಲೇ ಇದ್ದ. ಹುಡುಗಿಯರೂ ಮೌನತಾಳಿದ್ದರು; ತಾವಾಡಿದ್ದ ಮಾತುಗಳೂ ನಡೆದುಕೊಂಡಿದ್ದ ರೀತಿಯೂ ನೆನಪಿಗೆ ಬಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಿದ್ದರೋ ಏನೋ! ಆದರೂ ಒಂದು ಸಲ ಜಾನಕಿ “ಆ ಹಳ್ಳದಲ್ಲಿ ಆನೊಯೊಂದು ಬಿದ್ದುಬಿಟ್ಟಿದ್ದರೆ, ಪಾಪ……!” ಎನ್ನುವಷ್ಟರಲ್ಲಿಯೇ ವರದರಾಜ “ನಮಗೆ ಕಷ್ಟವಾಗುತ್ತಿರಲಿಲ್ಲ! ಅದು ಬೇಟೆಗಾರರ ಪಾಡಾಗುತ್ತಿತ್ತು. ನೀವು ಬಿದ್ದದ್ದರಿಂದ ನಮ್ಮದು ನಾಯಿಪಾಡಾಯಿತು!” ಎಂದು ಬಾಯಿ ಮುಚ್ಚಿಸಿದ.

ಪ್ರಭಾವತೀ ದರ್ಬಾರು

ಬಿಡದಿಯನ್ನು ಸೇರಿದೊಡನೆಯೆ ಊಟಮಾಡಿ, ಸಂಜೆ ಆರುಗಂಟೆಯ ಹೊತ್ತಿಗೆ ಬೆಳಕು ಹೊತ್ತಿಸಿಕೊಂಡು ನಾವು ತಂದಿದ್ದ ಸಂಗ್ರಹಣ ಚೀಲಗಳನ್ನೂ ಕರಂಡಗಳನ್ನೂ ಬಿಚ್ಚಿ, ಗಿಡಸಾಮಾಗ್ರಿಗಳ ಅಧ್ಯಯನಕ್ಕೆ ಕುಳಿತುಕೊಂಡೆವು. ದೊಡ್ಡ ಕೈಸಾಲೆ, ವಿದ್ಯಾರ್ಥಿಗಳಿಗೆ ಹೇಳಬೇಕಾದುದನ್ನು ಕಲಿಸಲು ಅನುಕೂಲವಾಗಿತ್ತು. ಈ ದಿನ ಹುಡುಗರು ಬಂದರು; ಅರ್ಧಗಂಟೆಯಾದರೂ ಹುಡುಗಿಯರೂ ಬರಲಿಲ್ಲ. ಯೂಜಿನೀಷಿಯ ಮೊಳಕೆಯನ್ನು ಮೈಕ್ರೋಸ್ಕೋಪಿನಲ್ಲಿಟ್ಟು ಪರಾವಲಂಬಿಯ ಬೇರು ಅತಿಥೇಯ ಬೇರನ್ನು ಹೊಕ್ಕಿರುವ ರೀತಿಯನ್ನು ಕಾಣಿರೆಂದು ಎಲ್ಲರನ್ನೂ ಕರೆದೆ. ಹುಡುಗರೆಲ್ಲ ಬಂದು ನೋಡಿದರು. ಹುಡುಗಿಯರಾದರೂ ಕೋಣೆಯಿಂದ ಹೊರಬರಲಿಲ್ಲ. ನನ್ನ ಕರೆ ಕೇಳಿಸಿತೋ ಇಲ್ಲವೋ ಎಂಬ ಸಂದೇಹದಿಂದ ಏರುಕೊರಲು ಕೊಟ್ಟೆ. ಸುಳಿವಿಲ್ಲ. ಬೇರೊಂದು ಸಾಮಗ್ರಿಯನ್ನಿಟ್ಟು ಹುಡುಗರಿಗೆ ತೋರಿಸಬೇಕೆಂದುಕೊಂಡೆ. ಒಡನೆಯೇ ಹುಡುಗಿಯರ ವಿಷಯದಲ್ಲಿ ಕನಿಕರ ಹುಟ್ಟಿತು. ಸರಾಸರಿ ಪ್ರಕಾರ ಹುಡುಗಿಯರು ಹುಡುಗರಿಗಿಂತಲೂ ಓದಿನಲ್ಲಿ, ಕುಳಿತುಕೊಳ್ಳವುದರಲ್ಲಿ, ಪಾಠ-ಗಿಣಿಪಾಠವೇ ಆದರೂ ಒಪ್ಪಿಸುವುದರಲ್ಲಿ ಉತ್ಸಾಹಿಗಳು. ಹುಡುಗರಿಗೆ ಕೊಟ್ಟ ಅವಕಾಶಗಳನ್ನೇ ಅವರಿಗೂ ಕೊಡುವುದು ನನ್ನ ಧರ್ಮವಲ್ಲವೆ? ಹೀಗೆಂದುಕೊಂಡು ವರದರಾಜನನ್ನು ನೋಡಿ ಬಾ ಎಂದೆ. ಅವನು ಹೋಗಿ ಮೆಲ್ಲಗೆ ಬಾಗಿಲು ತಟ್ಟಿದ; ಬರಲಿಲ್ಲ. ದಬ್ಬಿದ, ಒಳಗೆ ಅಗುಳಿ ಹಾಕಿತ್ತು; ಬೀಗದಕೈ ತೂತಿನಲ್ಲಿ ನೋಡಿದ, ನೆಗೆದುಬಿದ್ದು ನಕ್ಕ, ಹತ್ತಿರ ಬಂದು, “ಸರ್‌, ನೀವೇ ಬಂದು ನೋಡಿ, ನೋಡಬೇಕಾದ ದೃಶ್ಯ” ಎಂದ. ಇವನ ಹುಡುಗುತನ ನೋಡಿ ನನಗೆ ರೇಗಿತಾದರೂ ನಾನೇ ಎದ್ದುಹೋಗಿ ನೋಡುವ ಆಸೆಯಾಯಿತು. ಹೋಗಿ ಬಾಗಿಲು ತಟ್ಟಿದೆ. ಅಗುಳಿ ಬಿದ್ದುಕದ ಸ್ಪಲ್ಪ ತೆರೆಯಿತು, “ಪ್ರಭಾವತಿ ದರ್ಬಾರು”  ದೃಶ್ಯ: ಕಲ್ಪಕಂ ಮಂಚದ ಮೇಲೆ ಸುತ್ತಿದ ಹಾಸಿಗೆಯನ್ನೊರಗಿಕೊಂಡು ಕಾಲುಚಾಚಿ ಪವಡಿಸಿದ್ದಾಳೆ. ಬಿರಿಹಾಕಿದ ತಲೆಕೂದಲನ್ನು ವನಜ ಬಾಚುತ್ತಿದ್ದಾಳೆ, ಜಾನಕಿ ಅವಳ ಭುಜದ ಹತ್ತಿರ ಟ್ರಂಕೊಂದರ ಮೇಲೆ ಕುಳಿತು ಕಾಗದದ ಚೀಲದಿಂದ ಬಿಸ್ಕತ್ತುಗಳನ್ನು ತೆಗೆದು ಕಲ್ಪಕಂನ ಬಾಯಲ್ಲಿ ಇರಿಸುತ್ತಿದ್ದಾಳೆ, ಮಧ್ಯೆ ಮಧ್ಯೆ ತಾನೂ ತಿನ್ನುತ್ತಿದ್ದಾಳೆ. ಇನ್ನಿಬ್ಬರು ಎಡಬಲದಲ್ಲಿ ಕುಳಿತು  ಕಲ್ಪಕಂನ ಕಾಲುಗಳನ್ನು ಒತ್ತುತ್ತಿದ್ದಾರೆ. ಮಿಕ್ಕವರು ಕಲ್ಪಕಂಗೆ ಎದುರಾಗಿ ಕುಳಿತಿದ್ದಾರೆ; ಅವರ ಪೈಕಿ ಒಂದಿಬ್ಬರು ಯಾವುದೊ ತಮಿಳು ಸಿನಿಮಾ ಹಾಡೊಂದನ್ನು ಕುಂಞ್‌ಯೆನ್ನುತ್ತಿದ್ದಾರೆ. ನನಗೆ ವಿಪರೀತ ನಗು ಬಂದಿತು. ಅವರು ದಣಿವಾರಿಸಿಕೊಳ್ಳಲು ಸುಖಪಡುತ್ತಿದ್ದ ವೈಖರಿಯನ್ನು ಕಂಡು ಅಸೂಯೆಯ ಸುಳಿವೂ ಹರಿದು ಮಾಯವಾಯಿತು. ಕದವನ್ನು ಪೂರ್ತಿ ತೆಗೆದು ಕೃತಕ ಕೋಪದಿಂದ “ಏನು ಬರುತ್ತೀರೋ, ಇಲ್ಲ ಹೀಗೆಯೇ ದರ್ಬಾರಿನಲ್ಲಿ ಕುಳಿತಿರುತ್ತೀರೋ?” ಎಂದು ಗದರಿಸಿದೆ. ನಾನಲ್ಲಿದ್ದ ಅರಿವಾದದೊಡನೆಯೆ ಎಲ್ಲರೂ ಚಿಮ್ಮನೆ ನೆಗೆದು ಎದ್ದು ಬಂದರು. ಅಷ್ಟರಲ್ಲಿ ವರದರಾಜ ತಾನು ಕಂಡಿದ್ದ ನೋಟಕ್ಕೆ ಬಣವನ್ನೂ, ಮೆರುಗನ್ನೂ ಕೊಟ್ಟು ಗೆಳೆಯರಿಗೆಲ್ಲಾ ಹೇಳಿಬಿಟ್ಟಿದ್ದ. ತಮಗೆ ಆ ದೃಶ್ಯವನ್ನು ಕಾಣುವ ಅವಕಾಶ ಒದಗಲಿಲ್ಲವೆಂದು ಹುಡುಗರು ನಿರುತ್ಸಾಹಗೊಂಡಿದ್ದರೂ, ಹುಡುಗಿಯರು ಬಂದು ಮೈಕ್ರೋಸ್ಕೋಪಿನೊಳಗೆ ನೋಡುತ್ತಿರುವಾಗ ಮುಳು ಮುಳು ನಗುತ್ತಿದ್ದರು. ಜಾನಕಿ: “ಯಾಕ್ರೋ, ಈ ಮುಸಿನಗೆ? ಗಟ್ಟಿಯಾಗಿ ನಗುವುದಕ್ಕೆ ಧೈರ್ಯವಿಲ್ಲವೇ?” ಎಂದು ಮೂದಲಿಸಿದಳು. ರಾಮಮೂರ್ತಿ ಎಂದ; “ಧೈರ್ಯವಿಲ್ಲದೇ ಇಲ್ಲ. ನಾವು ಯಥೋಚಿತವನ್ನು ಅರಿತವರು. ಪ್ರಕೃತಕ್ಕೆ ಮುಸಿನಗು ಉಚಿತ. ಇನ್ನೊಂದು ಸಂದೇಹ ನಿವಾರಣೆಯಾದ ಮೇಲೆ ಹುಚ್ಚುನಗೆ ಉಚಿತ. ಆಗ ಅದನ್ನೂ ಧೈರ್ಯವಾಗೆಯೇ ಪ್ರದರ್ಶಿಸುತ್ತೇವೆ.” ವರದರಾಜ ಜಾನಕಿಯನ್ನು ಕುರಿತು, “ಆ ಸಂದೇಹ ಏನು ಎಂದು ಕೇಳೆ” ಎಂದ. ಇವನು ತನ್ನ ಪರ ಇರುವನೆಂಬ ನಂಬಿಕೆಯಿಂದ “ನನ್ನನು ಕೇಳೊ, ಹೇಳುತ್ತೇನೆ” ಎಂದಳು. ರಾಮಮೂರ್ತಿ: “ಹಗಲಲ್ಲಿ ಹಳ್ಳಕ್ಕೆ ಬಿದ್ದ ಎಂಬ ಸಾಮತಿಯನ್ನು ಮಾತ್ರ ಕೇಳಿದ್ದೇವು. ಅದು ಉತ್ಪ್ರೇಕ್ಷಾಲಂಕಾರ ಎಂದುಕೊಂಡಿದ್ದೆವು. ಆದರೆ ನೀವು ಸಾಮತಿಗೆ ಲಕ್ಷ್ಯವಾಗಿ ಶೋಭಿಸುತ್ತಿದ್ದೀರ. ಅದು ಹೇಗೆತಾನೆ ಅಷ್ಟು ದೊಡ್ಡ ಹಳ್ಳ – ಆನೆಗಳನ್ನು ಹಿಡಿಯುವುದಕ್ಕಾಗಿ – ತೋಡಿದ್ದ ಹಳ್ಳ, ಹತ್ತಡಿ ಅಗಲ ಹನ್ನೆರಡಡಿ ಆಳ ಅಗೆದಿದ ಹಳ್ಳ- ಕೃತಿಮ ಸಸ್ಯಾವಳಿಯಿಂದ ಹೊಂದಿಕೆಗೊಂಡಿದ್ದ ಹಳ್ಳವನ್ನು ಸಸ್ಯಾಶಾಸ್ತ್ರ ಓದಿಯೂ ತಾನಾಗಿ ಬೆಳೆದ ಬೆಳೆ ಯಾವುದು. ಕೃತಕವಾಗಿ ನೆಟ್ಟು ಸಿಕ್ಕಿಸಿದ ಬೆಳೆ ಯಾವುದೂ ಎಂಬುದರ ವಿವೇಚನೆಯಿಂದ ಕೃತಿಮವನ್ನು ಅರಿಯಬಹುದಾಗಿದ್ದ ಹಳ್ಳವನ್ನು ಹುಡುಕಿಕೊಂಡು ಹೋಗಿ ಬಿದ್ದಿರಲ್ಲಾ, ಅದು ಹೇಗೆ ಹುಡುಕಿದಿರಿ?” ಜಾನಕಿ ಅಣಕಿಸುತ್ತ ಅದನ್ನು “ನಾವೇನೂ ಹುಡುಕಿಕೊಂಡು ಹೋಗಲಿಲ್ಲ” ಎಂದು ಸರ್ರನೆ ನನ್ನ ಕಡೆ ತಿರುಗಿ “ಇಲ್ಲ ಸರ್‌. ನಮಗೆ ಹಿಂದೆ ಸಿಕ್ಕಿದ್ದ ಯೂಜಿನೀಷಿಯ ಗಿಡಗಳು ಮುರಿದು ಹೋಗಿದ್ದವು, ಸರ್‌ಈ ಪ್ರದೇಶದಲ್ಲಿ ಇನ್ನೂ ಹುಲುಸಾದ ಗಿಡಗಳನ್ನು ಕಂಡೆವು , ಸರ್‌ಇನೊಂದೆರಡು ಗಿಡಗಳನ್ನು ಅಗೆಯೋಣವೆಂದುಕೊಂಡು ಐವರೂ ಒಟ್ಟಾಗಿ ನುಗ್ಗಿದೆವು, ಸಾರ್‌. ನಾನು ಮುಂದು ತಾನು ಮುಂದು ಎಂದು ನುಗ್ಗಿದಾಗ ಈ ಕೃತಿಮ ನಮಗೆ ಗೊತ್ತಾಗಲಿಲ್ಲ, ಸರ್‌.” ವರದರಾಜ: “ಆದರೂ ಹಳ್ಳದೊಳಕ್ಕೆ ಇವರಾಗಿಯೇ ಬೀಳಲಿಲ್ಲ, ಸರ್‌ಹಳ್ಳವೇ ಇವರನ್ನು ತನ್ನೊಳಕೆ ಸೆಳೆದುಕೊಂಡು ಬಿಟ್ಟಿತು, ಸರ್‌ಪಾಪಿ ಹಳ್ಳ, ಸರ್‌!!” ಪಾಪ ಎಂದೆನ್ನಿಸಿದರೂ, ಯಾರಿಗೆ ತಾನೆ ನಗು ಬರುವುದಿಲ್ಲ ಈ ಸಂದರ್ಭದಲ್ಲಿ ? ಹುಡುಗರು ಕೇಕೆಹಾಕಿಕೊಂಡೇ ನಕ್ಕರು.

ಮಾರನೆಯ ದಿನ ಹುಡುಗಿಯರಿಗೆ ರಜ ಕೊಟ್ಟೆ . ಅವರು ಒಡನೆಯೇ ಒಪ್ಪಿಕೊಳ್ಳುತ್ತಾರೆಯೇ? ಪ್ರಶ್ನೆಗಳು, ವಾಗ್ವಾದಗಳು ಕೂಗಾಟಗಳು ನಡೆಯಬೇಕಲ್ಲ!

ಜಾನಕಿ: “ನಮಗೇನೂ ದಣಿವಾಗಿಲ್ಲ”

ಗೋವಿಂದ್‌: “ಅದನ್ನು ನಿರ್ಣಯಿಸುವವರು ನೀವಲ್ಲ, ನಾವು.”

“ನಿನ್ನೆಯೂ ನಮಗೆ ದಣಿವಾಗಿರಲಿಲ್ಲ…….”

“ನಿನ್ನೆಯ ಮಾತನ್ನು ನಿನ್ನೆಗೇ ಬಿಟ್ಟುಬಿಡಿ; ಅದರ ವಿಷಯ ನಮಗೆ ಗೊತ್ತು”.

“ನಾವೆಲ್ಲ ರೆಡಿ ಆಗಿಬಿಟ್ಟಿದ್ದೇವೆ.”

“ಅದು ಸರಿಯೆ. ಅಟೆಂಡರೊಂದಿಗೆ ನಿಮ್ಮನ್ನು ಬೇರೆ ಕಡೆ ಕಳುಹಿಸುತ್ತೇವೆ. ಅಲ್ಲಿಗೆ ಹೋಗಿ ಬನ್ನಿ”.

“ಹುಡುಗರಿಗೆ ಮಾತ್ರೆ ಬೇರೆ, ನಮಗೆ ಬೇರೆ, ಏಕೆ ಸಾರ್‌ಈ ಪಕ್ಷಪಾತ?”

“ಬೇರೆ ಏಕೂ ಅಲ್ಲ. ಅವರು ಹುಡುಗರು, ನೀವು ಹುಡುಗಿಯರು ಅಷ್ಟೆ. ಅದಕ್ಕೇ ಪಕ್ಷಪಾತ”.

ನಾನು ಬಾಯಿ ಹಾಕಿದೆ: “ಎಲ್ಲಿ ನೋಡಿ ಈ ದಿನ ರಜ ತೆಗೆದುಕೊಂಡು ಬಿಡದಿಯಲ್ಲಿಯೇ ಉಳಿದುಕೊಂಡು ವಿಶ್ರಾಂತಿ ತೆಗೆದುಕೊಳ್ಳಿ. ನಾಳೆ ಪೀರಮೇಡಿಗೆ ನಿಮ್ಮನ್ನೂ ಕರೆದುಕೊಂಡು ಹೋಗುತ್ತೇವೆ. ಇಲ್ಲದಿದ್ದರೆ ಈ ದಿನ ಬನ್ನಿ, ನಾಳೆ ಬೇಡ”.

ಅವರವರಲ್ಲಿಯೇ ಗುಸುಗುಸು ಮಾತನಾಡಿಕೊಂಡು ವನಜ ಮುಂದೆ ಬಂದಳು;

“ಈ ದಿನ ಬರುತ್ತೇವೆ. ನಾಳೆ….” ಎನ್ನುವಷ್ಟರಲ್ಲಿಯೇ ಜಾನಕಿ ಅವಳನ್ನು ಜಿಗುಟಿ “ಅಲ್ಲ ಸಾರ್‌, ಈ ದಿನ ಇಲ್ಲಿಯೇ ಉಳಿಯುತ್ತೇವೆ; ನಾಳೆ ಕರೆದುಕೊಂಡು ಹೋಗುವುದಾರೆ.” ಸಧ್ಯ, ಇಂದಿನ ಇತ್ಯರ್ಥ ಕೈಗೂಡಿತೆಂಬ ಸಂತೋಷದಿಂದ ಹೊರಟೆವು.

ವರದರಾಜನೂ ತಂಗವೇಲುವೂ ಅವರನ್ನು ರೇಗಿಸುವ ಉದ್ದೇಶದಿಂದ ಹೆಜ್ಜೆಹೆಜ್ಜೆಗೂ ಹಿಂತಿರುಗಿ “ಟಾ ಟಾ” ಎಂದು ಕೈಯಾಡಿಸುತ್ತ ಬಂದರು. ಹುಡುಗಿಯರು ಸೆರಗುಗಳನ್ನು ಬಿಗಿಸುತ್ತ ಏನೋ ಶಪಿಸಿದರು, ವರದರಾಜ “ಹೋಗಿ, ನಿನ್ನೆಯ ದರ್ಬಾರು ನಡೆಸಿ, ಹೋಗಿ, ಹೊತ್ತಾಗುತ್ತದೆ” ಎಂದು ಇನ್ನಷ್ಟು ರೇಗಿಸಿದ.

ಲೇಖಕರು

ಬೆಂಗಳೂರು ಗುಂಡಪ್ಪ ಲಕ್ಷ್ಮಣಸ್ವಾಮಿ (೧೯೧೬-೧೯೮೦) ಅವರು ಕರ್ನಾಟಕ ಕಂಡ ಪ್ರತಿಭಾವಂತ ಸಸ್ಯಶಾಸ್ತ್ರಜ್ಞರಲ್ಲಿ ಒಬ್ಬರು.

ಅವರ ‘ಹಸಿರು ಹೊನ್ನು’, ‘ಸಾಕ್ಷಾತ್ಕಾರದ ಹಾದಿಯಲ್ಲಿ’, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ಮುಂತಾದವು ಸಸ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳು. ಆದರೆ ಇವು ಕೇವಲ ಸಸ್ಯ ವಿಜ್ಞಾನದ ಪುಸ್ತಕಗಳಾಗಿರದೆ, ಕತೆ ಪುಸ್ತಕದಂತೆ ಓದಿಸಿಕೊಳ್ಳುವ ಆಪ್ತಶೈಲಿಯನ್ನು ಒಳಗೊಂಡಿವೆ. ಹಾಸ್ಯಮಯವಾಗಿ ಬರೆಯುವುದು, ವಿಡಂಬನೆ ಮಾಡುವುದು ಸ್ವಾಮಿಯವರ ಬರೆಹದ ವಿಶೇಷವಾಗಿದೆ. ಜಗತ್‌ಪ್ರಸಿದ್ಧ ಸಸ್ಯಶಾಸ್ತ್ರಜ್ಞನಾದ ಅಮೆರಿಕದ ಇರ್ವಿಂಗ್‌ಬೈಲಿಯವರ ಶಿಷ್ಯನಾಗಿ, ಅಮೆರಿಕೆಯ ಹಾರ್ವರ್ಡ್‌ವಿಶ್ವವಿದ್ಯಾಲಯದಲ್ಲಿ ಕಲಿತ ಸ್ವಾಮಿ, ಮದರಾಸಿನ ಪ್ರೆಸಿಡೆನ್ನಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಫ್ರೊಫೆಸರ್‌ಆಗಿದ್ದರು. ಸಾಹಿತ್ಯ ಸಂಗೀತ ವಿಷಯದಲ್ಲಿ ಅಪಾರ ಅಧ್ಯಯನ ಮಾಡಿದ್ದ ಸ್ವಾಮಿಯವರು, ‘ಕಾಲೇಜು ರಂಗ’, ‘ತಮಿಳುತಲೆಗಳ ನಡುವೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ‘ಹಸಿರು ಹೊನ್ನು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮) ಬಂದಿತು.

ಆಶಯ

ಪ್ರಸ್ತುತ ಬರೆಹವನ್ನು ಅವರ ‘ಹಸಿರು ಹೊನ್ನು’ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಸಸ್ಯಶಾಸ್ತ್ರದ ವಿದ್ಯಾರ್ಥಿಗಳನ್ನು ಸಸ್ಯವೀಕ್ಷಣೆ ಹಾಗೂ ಸಸ್ಯಸಂಗ್ರಹಕ್ಕೆಂದು ಕಾಡಿಗೆ ಕರೆದುಕೊಂಡು ಹೋಗಿದ್ದಾಗ, ಲೇಖಕರಿಗಾದ ಅನುಭವಗಳನ್ನು ಇದು ವರ್ಣಿಸುತ್ತದೆ. ನಗರ ವಾತಾವಾರಣದಲ್ಲಿ ಬೆಳೆದ ವಿದ್ಯಾರ್ಥಿಗಳು, ಕಾಡಿನ ಪರಿಸರದಲ್ಲಿ ಪಡುವ ಪಾಡಿನ ಚಿತ್ರಣ ಇಲ್ಲಿದೆ. ಜತೆಗೆ ಕಾಲೇಜು ಹುಡುಗ ಗುಡುಗಿಯರಲ್ಲಿ ಇರುವ ಪರಸ್ಪರ ಛೇಡಿಸುವ ಸ್ವಭಾವವನ್ನು ವಿನೋದಮಯ ರೀತಿಯಲ್ಲಿ ಬರೆಹ ಚಿತ್ರಿಸುತ್ತದೆ.

ಪದಕೋಶ

ಎಲೆಗುತ್ತಿ = ಎಲೆಗುಚ್ಛ, ನೀಟುವುದು = ಚಾಚುವುದು, ಬಿಡದಿ = ತಾತ್ಕಾಲಿಕವಾಗಿ ಮಾಡಿದ ವಸತಿ, ಪ್ರಕೃತಕ್ಕೆ = ಸದ್ಯಕ್ಕೆ, ಯಥೋಚಿತ = ಎಷ್ಟುಬೇಕೋ ಅಷ್ಟು, ಸಾಮತಿ = ಗಾದೆಮಾತು, ಲಕ್ಷ್ಯ = ಉದಾಹರಣೆ, ಕೃತಿಮ = ಮೋಸ

ಟಿಪ್ಪಣಿ

ರೇಂಜರು = ಅರಣ್ಯದ ಬೇರೆ ಬೇರೆ ವಲಯಗಳ ರಕ್ಷಣೆಯ ಅಧಿಕಾರಿ, ಸಸ್ಯಕರಂಡ = ಸಂಗ್ರಹಿಸಿದ ಸಸ್ಯಗಳನ್ನು ಬಾಡದಂತೆ ರಕ್ಷಿಸಿಡುವ ತಗಡಿನ ಪೆಟ್ಟಿಗೆ, (Vasculum), ಯೂಜಿನೀಷಿಯ = ಒಂದು ಬಗೆಯ ಸಸ್ಯ, ಉತ್ಪ್ರೇಕ್ಷಾಲಂಕಾರ = ಇರುವುದನ್ನು ಕೊಂಚ ಅತಿಮಾಡಿ ವರ್ಣಿಸುವ ಒಂದು ಕಾವ್ಯವಿಧಾನ

ಪ್ರಶ್ನೆಗಳು

೧. ಐವರು ಹುಡುಗಿಯರು ಇದ್ದಕ್ಕಿದಂತೆ ಹೇಗೆ ನಾಪತ್ತೆಯಾಗುತ್ತಾರೆ?

೨. ಆನೆಹಳ್ಳದಲ್ಲಿದ್ದ ಹುಡುಗಿಯರನ್ನು ಪತ್ತೆ ಮಾಡಿದ ರೀತಿ ಯಾವುದು?

೩. ಆನೆಹಳ್ಳದಲ್ಲಿ ಬಿದ್ದಿದ್ದ ಹುಡುಗಿಯರ ಮೊದಲ ಪ್ರತ್ರಿಕ್ರಿಯೆ ಏನಾಗಿತ್ತು?

೪. ವರದರಾಜನು ಹಳ್ಳದೊಳಗೆ ಬಿದ್ದಿದ್ದ ಹುಡುಗಿಯರನ್ನು ಹೇಗೆ ಛೇಡಿಸಿದನು?

೫. ಆನೆಹಳ್ಳದಲ್ಲಿದ್ದ ಹುಡುಗಿಯರನ್ನು ಹೊರಗೆ ತಂದ ವಿಧಾನದ ಸ್ವಾರಸ್ಯ ಚಿತ್ರಿಸಿರಿ.

೬. ಹಳ್ಳದಿಂದ ಹೊರಬಂದ ಮೇಲೆ ತಂಡದಲ್ಲಿ ವರ್ತನೆಯಲ್ಲಿ ಉಂಟಾದ ಬದಲಾವಣೆಗಳು ಯಾವುವು?

೭. ಪ್ರಭಾವತಿ ದರ್ಬಾರಿನಲ್ಲಿ ಯಾರ್ಯಾರು ಯಾವ್ಯಾವ ಸೇವೆ ಮಾಡುತ್ತಿದ್ದರು?

೮. ರಾಮಮೂರ್ತಿ ಪಂಚಕನ್ಯೆಯರನ್ನು ಹೇಗೆ ಟೀಕಿಸಿದನು?

೯. ಮಾರನೆಯ ದಿನ ಸಸ್ಯಸಂಗ್ರಹಕ್ಕೆ ಹೋಗುವ ಮುನ್ನ ನಡೆದ ಸಂಭಾಷಣೆಯ ಸ್ವಾರಸ್ಯವೇನು?

೧೦. ವರದರಾಜನ ತಮಾಶೆ ಸ್ವಭಾವ ಕುರಿತು ಬರೆಯಿರಿ.

ಪೂರಕ ಓದು

೧. ಬಿ ಜಿ ಎಲ್‌ಸ್ವಾಮಿ ಅವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’

೨. ದೇನಾಶ್ರೀ ಅವರ ‘ಕಾಲಾತೀತದ ದ್ವೀಪಗಳಲ್ಲಿ ‘ ಎಂಬ ಟಂಡಮಾನ್‌ಪ್ರವಾಸಕಥನ

೩. ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೋ’ ಹಾಗೂ ‘ಜುಗಾರಿ ಕ್ರಾಸ್‌’ ಕಾದಂಬರಿಗಳು

೪. ಚಂದ್ರಶೇಖರ ನಂಗಲಿ ‘ಕಾಡು ಮತ್ತು ತೋಪು’ ಚಾರಣ ಕಥನ