ಓಹೋ, ನೀನು ಯಾವಾಗ ಇಲ್ಲಿಗೆ ಬಂದೆ?’

‘ನೀನು ಯಾರು? ಓ…..ಇದು ನಾನು ಮೊದಲಿದ್ದ ವಾರ್ಡಲ್ಲವೆಂದು ತೋರುತ್ತದೆ’. ನಾನು ಸುತ್ತಲೂ ತಿರುಗಿ ನೋಡಿದೆ. ಸುತ್ತಲಿನ ವಾತಾವರಣ ನನಗೆ ಹೊಸದಾಗಿ ಕಂಡಿತು. ನರ್ಸುಗಳು ಸುತ್ತಲೂ ಇದ್ದ ರೋಗಿಗಳು ಎಲ್ಲರೂ ನನಗೆ ಹೊಸಬರು ಎಂದೆನಿಸಿತು. ಗೋಡೆಯ ಮೇಲಿದ್ದ ದೊಡ್ದ ಗಡಿಯಾರ ಅರ್ಧ ಗಂಟೆ ಹೊಡೆಯಿತು. ನಾನು ಗಡಿಯಾರದ ಕಡೆ ನೋಡಿದೆ. ಗಂಟೆ ಎಂಟೂವರೆಯಾಗಿತ್ತು. ನಾನು ಮೊದಲಿದ್ದ ವಾರ್ಡಿನಲ್ಲಿ ನಾಲ್ಕು ಹಾಸಿಗೆಗಳಿದ್ದವು. ಇಲ್ಲಿ ಆರು ಹಾಸಿಗೆಗಳಿದ್ದವು.

‘ಇದೇನು ಹೀಗೆ ಕಣ್ಣುಬಿಟ್ಟುಕೊಂಡು ಬೆಪ್ಪುತಕ್ಕಡಿ ಹಾಗೆ ಸುತ್ತಲೂ ನೋಡ್ತಿದಿಯಾ?’

ಆರನೆಯ ಬೆಡ್‌ಗಹಿಗಹಿಸಿ ನಗುತ್ತಾ ಕೇಳಿತು.

‘ಊಂ…..ಹೊಸ ಜಾಗ, ಆದುದರಿಂದ ಸುತ್ತಲೂ ನೋಡಿದೆ’.

ನನ್ನ ಬಳಿ ಹೆಜ್ಜೆಯ ಸದ್ದನ್ನು ಕೇಳಿ ಸುಮ್ಮನಾದೆ. ಮೇಲ್‌ನರ್ಸೊಬ್ಬ ನನ್ನ ಬಳಿ ಬಂದು ಮಂಚಕ್ಕೆ ಚೀಟಿಯೊಂದನ್ನು ತಗುಲಿ ಹಾಕಿ ಹೋದ. ನಾನು ಅವನು ತಗುಲಿ ಹಾಕಿದ ಚೀಟಿಯನ್ನು ನಿಧಾನವಾಗಿ ಓದಿದೆ.

‘ಬೆಡ್‌ನಂಬರ್‌ಏಳು. ಓಹೋ ಇಂದಿನಿಂದ ನನಗೆ ಬೇರೆ ಹೆಸರು’,

‘ಇದುವರೆವಿಗೂ ಯಾವ ಹೆಸರಿತ್ತು?’

‘ಬೆಡ್‌ನಂಬರ್‌ಮೂರು’.

‘ನಮ್ಮ ಬಾಳು ಈ ರೋಗಿಗಳ ಸೇವೆಯಲ್ಲೇ ಆಯಿತು. ನನಗಂತೂ ಈ ಬಾಳು ಬೇಸರವಾಗಿದೆ. ಥೂ, ನೀನೇನು ಬೇಕಾದರೂ ಹೇಳು, ಇದಕ್ಕಿಂತ ಸಾವು ಉತ್ತಮ’.

ಆರನೆಯ ಬೆಡ್‌ಅತ್ಯಂತ ಬೇಸರದಿಂದ ನುಡಿಯಿತು. ನಾನು ಪ್ರತ್ಯುತ್ತರ ಕೊಡಲಿಲ್ಲ. ನನ್ನ ಮೌನವನ್ನು ಕಂಡು ಅದು ಪುನಃ ಹೇಳಿತು.

‘ನಿನಗೆ ಹಾಗೆನಿಸುವುದಿಲ್ಲವೇ? ನಿನಗೆ ರೋಗಿಗಳ ಸಹವಾಸ ಬೇಸರವಾಗಿಲ್ಲವೇ?’

‘ಊಹೂಂ. ಇದರಲ್ಲಿಯೂ ಆನಂದವಿದೆ’.

ಆರನೆಯ ಬೆಡ್‌ಸಂತಾಪದಿಂದ ನುಡಿಯಿತು.

‘ಆನಂದ! ನೀನು ಮೂರ್ಖ. ಕಡು ಮೂರ್ಖ. ಸದಾ ಈ ರೋಗಿಗಳ ನರಳಾಟ, ಕೆಮ್ಮು, ವಾಂತಿ ಇವು ಯಾರಿಗೆ ಬೇಕಾಗಿದೆ? ಇವರ ಗೋಳು ಕೇಳಿ ನನ್ನ ತಲೆ ಚಿಟ್ಟು ಹಿಡಿದುಹೋಗಿದೆ. ಸತ್ಯಹೀನ ಮುಖ, ಒಣಗಿದ ಕಂಠ, ಬೆಳುಪೇರಿದ ತುಟಿ, ಕಾಂತಿಹೀನವಾದ ಕಣ್ಣು…. ಸಾವಿನ ಬದುಕಿನ ಮಧ್ಯೆ ತೂರಾಡುವ ಈ ದೇಹಗಳನ್ನು ನೋಡಿ ನೋಡಿ ನನ್ನ ಕಣ್ಣುಗಳು ಸಿಡಿಯುತ್ತಿವೆ. ಜೀವನದಲ್ಲಿ ನಮಗೂ, ಶಾಂತಿ, ಸೌಂದರ್ಯ ಬೇಡವೆ? ಸುಖ, ಸೌಂದರ್ಯ ಕಾಣಲು ನೀನು ಹಾತೊರೆಯುವುದಿಲ್ಲವೇ?’

‘ಇಲ್ಲ ಗೆಳೆಯಾ ಸುಖ, ಸೌಂದರ್ಯ, ಕ್ಷಣಿಕವಾದುದಕ್ಕೆ ನಾನು ಬೆಲೆ ಕೊಡುವುದಿಲ್ಲ. ನೀನೊಬ್ ಹುಚ್ಚ. ಸುಖ, ಸೌಂದರ್ಯಕ್ಕಾಗಿ ನಾನೆಷ್ಟು ಹಂಬಲಿಸುತ್ತಿದ್ದೇನೆ ಗೊತ್ತೆ?’ ಈ ರೋಗಿಗಳ ಸಹವಾಸದ ಬದಲು ಮುಗ್ಧೆಯೊಬ್ಬಳ ಸಾನ್ನಿಧ್ಯ ಸಿಕ್ಕದಿದರೆ… ಆರನೆಯ ಬೆಡ್ಡು ಕನಸು ಕಾಣುತ್ತಿರುವಂತೆ ನುಡಿಯಿತು.

‘ಚೆಲುವೆಯೊಬ್ಬಳ ಮೃದು ಸ್ಪರ್ಶವನ್ನು ದಿನವೂ ಅನುಭವಿಸಬಹುದಾಗಿತ್ತು. ಅವಳು ಮುಡಿದ ಮಲ್ಲಿಗೆ ಹೂವಿನಿಂದ ನನ್ನ ದೇಹವೆಲ್ಲಾ ಪರಿಮಳವಾಗುತ್ತಿತ್ತು. ಅವಳ ಬಳೆಗಳ ನಾದ ನನಗೆ ಜೋಗುಳ ಹಾಡುತ್ತಿತ್ತು. ಅವಳು ತನ್ನ ಹಾಲುಗೆನ್ನೆಯನ್ನು ನನಗೊತ್ತಿ ನಿದ್ರಿಸಿದಾಗ ನನ್ನನ್ನು ನಾನೇ ಮರೆಯಬಹುದಿತ್ತು. ಅವಳ ಪ್ರಥಮ ರಾತ್ರಿ… ಮಧುರ ಮಿಲನದ ರಾತ್ರಿ… ನಾನು ಆ ನೂತನ ದಂಪತಿಗಳ ಪ್ರೇಮ ಸಂವಾದವನ್ನು ಕೇಳಿ ಹಿಗ್ಗಬಹುದಾಗಿತ್ತು. ಅವರ ಪ್ರೇಮ ಚೇಷ್ಟೆಯಲ್ಲಿ….’

‘ಗೆಳೆಯಾ, ಎಚ್ಚರ ಮಾಡಿಕೋ, ಹೀಗೆ ಹಗಲುಗನಸು ಕಾಣಬೇಡ.’

ಆರನೆಯ ಬೆಡ್ಡಿನ ಅನ್ಯ ಮನಸ್ಕತೆ ಕಂಡು ನಾನು ಕೂಗಿದೆ.

‘ನೀನು ಪಾಪಿ ನನ್ನನ್ನೇಕೆ ಆ ಕನಸಿನಿಂದ ಕೂಗಿ ಎಬ್ಬಿಸಿ ಈ ನರಕಕ್ಕೆ ಎಳೆದು ತಂದೆ? ಈ ರೋಗಿಗಳ ಮೂಳೆಯ ದೇಹದಿಂದ ನನ್ನ ದೇಹ ಬಡಕಲಾಯಿತು. ಇವರ ಬೆಳೆದ ಗಡ್ಡ ನನ್ನನ್ನು ಹಿಂಸಿಸುತ್ತಿದೆ. ನೀನು ಆ ಸುಂದರ ದೃಶ್ಯವನ್ನು ಕಾಣಲು ಬಯಸುವುದಿಲ್ಲವೇ?’

‘ಖಂಡಿತ ಇಲ್ಲ. ನನ್ನ ಜೀವನದಲ್ಲಿ ಭೋಗಕ್ಕಿಂತಲೂ ನಾನು ತ್ಯಾಗಕ್ಕೆ ಶ್ರೇಷ್ಠ ಸ್ಥಾನ ಕೊಡುತ್ತೇನೆ.’

‘ಸರಿ, ನೀನೊಬ್ಬ ಹುಚ್ಚ.’

ಅಲ್ಲಿ ನೋಡು, ಹೊಸ ರೋಗಿಯೊಬ್ಬನನ್ನು ಇತ್ತ ಕಡೆಗೇ ಕೊಂಡು ಬರುತ್ತಿದ್ದಾರೆ.

ಇಬ್ಬರೂ ಅತ್ತ ಕಡೆ ನೋಡಿದೆವು.

ಹೊಸರೋಗಿಗೆ ಸುಮಾರು ಮೂವತ್ತು ವರ್ಷಗಳಿರಬಹುದು. ರೋಗ ಅವನ ದೇಹದ ಮೇಲೆ ತನ್ನ ದಾಳಿಯನ್ನು ನಡೆಸಿತ್ತು. ಆತನ ತಲೆಗೂದಲು ಕೆದರಿ ಕಣ್ಣುಗಳಲ್ಲಿ ಭಯ, ಕಳವಳ ತುಂಬಿದ್ದವು. ಮುಖ ಒಣಗಿ ಮುದಡಿ ಹೋಗಿತ್ತು.

‘ಅಯ್ಯೋ ಪಾಪ. ಈ ರೋಗ ಇನ್ನೂ ಹೊಸದಾಗಿ ಅಂಟಿರಬೇಕು. ಆದುದರಿಂದಲೇ ಮುಖದಲ್ಲಿ ಇನ್ನೂ ಜೀವಕಳೆಯಿದೆ. ಪಾಪ! ಹೆದರಿ ನಡುಗುತ್ತಿದ್ದಾನೆ. ಅವನ…’

ಆರನೆಯ ಬೆಡ್ಡು ಉತ್ಸಾಹದಿಂದ ಕೂಗಿತು.

‘ಅವನ ಪಕ್ಕದಲ್ಲಿ ಬರುತ್ತಿರುವ ಚೆಲುವೆಯನ್ನು ನೋಡು. ಬಹುಶಃ ಅವನ ಹೆಂಡತಿ ಇರಬೇಕು. ಅಬ್ಬ! ಏನು ಸೌಂದರ್ಯ! ಸೃಷ್ಟಿಕರ್ತ ತನ್ನ ಜಾಣ್ಮೆಯನ್ನೆಲ್ಲಾ ಇವಳನ್ನು ಸೃಷ್ಟಿಸಲು ಖರ್ಚು ಮಾಡಿರಬೇಕು. ಅವಳ ಕಣ್ಣುಗಳು ಆರೋಗ್ಯ, ಯೌವನವನ್ನು ಸೂಸುತ್ತಿವೆ. ಅವಳ ದುಂಡು ದೇಹದ ಸೊಬಗು ಕಣ್ಣು ಸೆಳೆಯುವಂತಿದೆ. ಇಂತಹ ಸೌಂದರ್ಯ ನೋಡಿ ಬಹಳ ದಿನಗಳಾಗಿದ್ದವು.’

ಆದರೆ ನನ್ನ ಗಮನ ರೋಗಿಯಲ್ಲಿ ನೆಟ್ಟಿತ್ತು. ಅವನು ಜೀವನದಲ್ಲಿ ತನಗೆ ದೊರೆತ ಪೆಟ್ಟಿನಿಂದ ಚಳಿ ಬಂದವನಂತೆ ನಡುಗುತ್ತಿದ್ದ.

‘ಅವಳ ಮುಖದ ಬಣ್ಣ, ತುಟಿಯ ರಂಗು…’

ನಾನು ನಿದ್ದೆಯಿಂದ ಎಚ್ಚೆತ್ತವನಂತೆ ಆರನೆಯ ಬೆಡ್ಡಿನ ಕಡೆ ತಿರುಗಿದೆ. ಅದು ಮುಕ್ತ ಕಂಠದಿಂದ ಅವಳ ಚೆಲುವನ್ನು ಬಣ್ಣಿಸುತ್ತಿತ್ತು.

‘ನೀನು ಯಾರ ವಿಚಾರ ಹೇಳ್ತಿದಿಯಾ?’

‘ಕುರುಡಾ, ನಿನಗೆ ಕಣ್ಣಿದ್ದೂ ವ್ಯರ್ಥ. ಎದುರಿಗೆ ನಿಂತಿರುವ ಸೌಂದರ್ಯವನ್ನೂ ನೀನು ಕಾಣಲಾರೆ. ಅವಳೇ ನೋಡು, ರೋಗಿಯ ಹಿಂದೆ ಬರುತ್ತಿದ್ದಾಳೆ….’

ಅವಳನ್ನು ನಾನು ಇದುವರೆಗೂ ಗಮನಿಸಿಯೇ ಇರಲಿಲ್ಲ. ಆರನೆಯ ಬೆಡ್ಡು ನನ್ನ ಗಮನವನ್ನು ಅವಳ ಕಡೆ ಸೆಳೆಯಲು ನಾನೂ ನೋಡಿದೆ.

ನಿಜವಾಗಿಯೂ ಅವಳು ಸುಂದರಿಯಾಗಿದ್ದಳು.

‘ಅವಳ ಕಣ್ಣು ನೋಡು, ಯಾವ ವಜ್ರಕ್ಕಿಂತ ಕಡಿಮೆಯಾಗಿದೆ….’

ಅವಳ ಕಣ್ಣುಗಳು ಹೊಳೆಯುತ್ತಿದ್ದವು. ಅವಳು ಮತ್ತೊಂದೆರಡು ಹೆಜ್ಜೆ ಮುಂದೆ ಬರುತ್ತಲೂ ನಾನು ಅವಳನ್ನು ಸೂಕ್ಷ್ಮವಾಗಿ ಗಮನಿಸಿದೆ.

ಹೃದಯದಲ್ಲಿ ಹೆಪ್ಪುಗಟ್ಟಿದ್ದ ಶೋಕದಿಂದ, ತುಂಬಿಯೂ ತುಳುಕದ ದುಃಖದ ಕಾವಿನಿಂದ ಅವಳ ಕಣ್ಣುಗಳು ಪ್ರಜ್ವಲಿಸುತ್ತಿದ್ದವು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆಯಲು ಅವಳು ತನ್ನ ಕೆಂದುಟಿಯನ್ನು ಆಗಾಗ್ಗೆ ಕಚ್ಚಿ ಮನಸ್ಸನ್ನು ಕಲ್ಲು ಮಾಡುತ್ತಿದ್ದಳು. ಹೊಸ ರೋಗಿಯನ್ನು ನನ್ನ ಬಳಿಯೇ ನಿಲ್ಲಿಸಿದರು.

‘ಇದೇ ನಿಮ್ಮ ಹಾಸಿಗೆ, ಮಲಗಿಕೊಳ್ಳಿ’ ಎಂದು ವಾರ್ಡ್‌ಬಾಯ್‌ಹೇಳಿದ.

ಅವನು ಮಂಚದ ಮೇಲೆ ಕುಳಿತು ಹೆಂಡತಿಯ ಕಡೆ ನೋಡಿದ. ಅವಳು ಮಂಚದ ಪಕ್ಕದಲ್ಲಿದ್ದ ಕುರ್ಚಿಯನ್ನು ಎಳೆದುಕೊಂಡು ಆರನೆಯ ಬೆಡ್ಡಿಗೆ ಬೆನ್ನು ಮಾಡಿ ಗಂಡನ ಮುಖ ನೋಡುತ್ತಾ ಕುಳಿತಳು. ಆರನೆಯ ಬೆಡ್ಡು ಮತ್ಸರದಿಂದ ನುಡಿಯಿತು.

‘ನೀನು ಪುಣ್ಯಶಾಲಿ. ಅವಳ ಮುಖವನ್ನು ಕಣ್ಣುತುಂಬ ನೋಡಬಹುದು. ಆದರೆ ನಿನ್ನಂತಹ ಅರಸಿಕನೆದುರಿಗೆ ಅವಳ ರೂಪವೆಲ್ಲ ವ್ಯರ್ಥ.’

ನನಗೆ ಅವಳ ಮುಖದಲ್ಲಿದ್ದ ಸೌಂದರ್ಯಕ್ಕಿಂತಲೂ, ನೋವಿನ ಕಡೆ ಹೆಚ್ಚು ಲಕ್ಷ್ಯವಿತ್ತು.

ಅವಳು ಅಳುವನ್ನು ನುಂಗಿ, ಮಧುರವಾಗಿ ನಕ್ಕಳು. ಅವನು ಕ್ಷೀಣವಾದ ದನಿಯಲ್ಲಿ ಹೇಳಿದ.

‘ಉಮಾ, ಇನ್ನು ಸಂಸಾರದ ಗತಿಯೇನು?’

‘ನೀವು ಧೈರ್ಯವಾಗಿರಿ. ದೇವರು ಹೇಗೋ ನಡೆಯಿಸುತ್ತಾನೆ.’

‘ಹಾಗಲ್ಲ ಉಮಾ, ನಾನು ನರಕದಿಂದ ಹೊರಬೀಳಬೇಕಾದರೆ ಎಷ್ಟು ವರ್ಷವಾಗುತ್ತದೋ ಅದುವರೆಗೂ ಅಪ್ಪನಿಗೆ ಬರುವ ಐವತ್ತು ರೂಪಾಯಿ ಪೆನ್ಷನ್ನಿನಲ್ಲಿ ಜೀವನ ಸಾಗಿಸಲು ಸಾಧ್ಯವೇ?’

ನಾನು ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳತ್ತೇನೆ.

‘ಹುಡುಕಿದ ತಕ್ಷಣ ಸಿಗಬೇಕಲ್ಲ ? ಅಮ್ಮ, ಅಪ್ಪ ನನಗೆ ಕ್ಷಯವೆಂದು ತಿಳಿದರೆ ಎಷ್ಟು ಗೋಳಾಡುವರೋ…..!’

‘ನೀವು ಸಂಸಾರದ ವಿಷಯವಾಗಿ ಕೊರಗು ಹಚ್ಚಿಕೊಂಡು ನಿಮ್ಮ ದೇಹಸ್ಥಿತಿಯನ್ನು ಕೆಡಿಸಿಕೊಂಡರೆ ನನ್ನಾಣೆ’.

‘ಯೋಚನೆ ಮಾಡದಿರಲು ಹೇಗೆ ಸಾಧ್ಯ? ನಾನು ಇಲ್ಲಿಂದ ಹೊರ ಬೀಳುವುದು ಯವಾಗಲೋ!’

‘ಡಾಕ್ಟರ್‌ಹೇಳಿದ್ದು ಆಗಲೇ ಮರೆತುಹೋಯಿತೇ’ ಖಾಯಿಲೆ ಈಗತಾನೆ ಶುರುವಾಗಿದೆ. ಇನ್ನಾರು ತಿಂಗಳಿಗೆ ಪೂರ್ತಿ ವಾಸಿಯಾಗುತ್ತದೆ. ಆದರೆ ನೀವು ಧೈರ್ಯ ಬೀಡಬಾರದು ಅಂತ ಡಾಕ್ಟರು ಹೇಳಿದ್ದಾರೆ’.

‘ಸರಿ, ಅವರು ಹೇಳಿದರೂ ನನಗೆ ನಂಬಿಕೆ ಬರುವುದಿಲ್ಲ’.

ತಾತ್ಸಾರವಡಗಿತ್ತು ಅವನ ದನ್ನಿಯಲ್ಲಿ.

‘ಹೀಗೆ ನೀವು ಧೈರ್ಯಗೆಡಬಾರದು ನನಗೇನೋ ಸಂಪೂರ್ಣ ಧೈರ್ಯವಿದೆ. ಒಂದಲ್ಲ ಒಂದು ದಿನ ನಿಮಗೆ ಖಂಡಿತ ಗುಣವಾಗುತ್ತದೆ’.

“ಆತ ಉತ್ಸಾಹದಿಂದ ಕೇಳಿದ ನನಗೆ ನಿಜವಾಗಿಯೂ ವಾಸಿಯಾಗುತ್ತದೆಯೇ?’

‘ಅದರಲ್ಲಿ ಸಂದೇಹವೇ ಇಲ್ಲ. ಆದರೆ ನೀವು ಭರವಸೆ ಬಿಡಬಾರದು ನಿಮ್ಮ ಮನಸ್ಸಿನ ಧೈರ್ಯದಿಂದಲೇ ರೋಗದೂರವಾಗಬೇಕು’.

ಆತನ ಮುಖದಲ್ಲಿ ನಸುನಗೆ ತಲೆದೂರಿತು.

‘ನಿಮ್ಮನ್ನು ನೋಡಿದರೆ ನನಗೆ ಈ ರೋಗ ಬರಬಾರದಾಗಿತ್ತೆ ಎಂದೆನಿಸುತ್ತದೆ’. ಉಮಾ ಚೇಷ್ಟೆಯಿಂದ ನುಡಿದಳು.

‘ಛೀ! ಕೆಟ್ಟ ಮಾತನಾಡಬೇಡ’.

‘ಊಹುಂ. ಸುಖವಾಗಿ ಮಲಗಿದ ಕಡೆ ರಾಜೋಪಚಾರವಾಗುತ್ತದೆ. ನಾಳೆ ಬರುವಾಗ ಮೊಟ್ಟೆ, ಹಣ್ಣುಗಳನ್ನು ತರುತ್ತೇನೆ. ನಾನಿನ್ನು ಬರಲೇ?’

‘ಬಸ್ಸಿನಲ್ಲಿ ಹೋಗು’

‘ಬಸ್ಸಾದರೆ ಪುನಃ ನಾಲ್ಕಾಣೆ ಖರ್ಚು’

‘ಈ ಬಿಸಿಲಿನಲ್ಲಿ ನಡೆಯಬೇಡ, ಗಂಡ ಹೇಳಿದ’.

ಉಮಾ ಅನುಮಾನಿಸುತ್ತಾ ಒಪ್ಪಿಕೊಂಡಳು.

‘ನಡಿ ನಾನೂ ಬಾಗಿಲನವರೆಗೆ ಬರುತ್ತೇನೆ’.

‘ಬೇಡಿ ನೀವು ಮಲಗಿಕೊಳ್ಳಿ. ನಾನು ನಾಳೆ ಸಂಜೆ ಬರುತ್ತೇನೆ’.

ಉಮಾ ಎದ್ದು ನಗುತ್ತಾ ‘ಬರ್ತೀನಿ’ ಎಂದಳು. ಅವಳು ಕಣ್ಮರೆಯಾದೊಡನೆ ಆತ ಮಲಗಿದ. ಆರನೆಯ ಬೆಡ್ದಿನಲ್ಲಿ ಮಲಗಿದ್ದವನು ಕುತೂಹಲದಿಂದ ಪ್ರಶ್ನಿಸತೊಡಗಿದ.

‘ನಿಮ್ಮ ಹೆಸರೇನು?’

‘ವಿಶ್ವನಾಥರಾವ್‌’

‘ಖಾಯಿಲೆ ಶುರುವಾಗಿ ಎಷ್ಟು ದಿನವಾಯಿತು?’

‘ಈಗತಾನೆ ಶುರುವಾಗಿದೆ. ವಾಸಿ ಮಾಡುತ್ತೇನೆ ಎಂದು ಡಾಕ್ಟರು ಹೇಳಿದ್ದಾರೆ. ನೀವು ಇಲ್ಲಿಗೆ ಬಂದು ಎಷ್ಟು ದಿನವಾಯಿತು.?

ಆತ ಕರ್ಕಶವಾಗಿ ನಕ್ಕ.

‘ನಾನೇ? ನಾನು ಇಲ್ಲಿಗೆ ಬಂದು ಮೂರು ವರ್ಷಗಳಾದವು ನನಗೀಗ ಆಸ್ಪತ್ರೆಯೇ ಮನೆಯಾಗಿ ಹೋಗಿದೆ. ನನ್ನ ಎದೆಯಲ್ಲಿನ ನಾಲ್ಕು ಮೂಳೆಗಳನ್ನು ಕತ್ತರಿಸಿದ್ದಾರೆ. ಇನ್ನೂ ಎರಡು ಮೂಳೆಗಳನ್ನು ಕತ್ತರಿಸಬೇಕಂತೆ….

ವಿಶ್ವನಾಥ ಕಂಪಿಸಿದ. ಅವನ ಕಂಪನವನ್ನು ಗಮನಿಸಿದ ಆತ,

‘ಕ್ಷಮಿಸಿ, ನಿಮ್ಮನ್ನು ಹೆದರಿಸಿಬಿಟ್ಟೆ. ಎಲ್ಲರೂ ನನ್ನಂತೆ ದುರದೃಷ್ಟಶಾಲಿಗಳಲ್ಲ, ನೀವು ಪುಣ್ಯ ಮಾಡಿದ್ದರೆ ಒಂದಲ್ಲ ಒಂದು ದಿನ ಇಲ್ಲಿಂದ ಹೊರಬೀಳಬಹುದು. ಆಕೆ ನಿಮ್ಮ ಹೆಂಡತಿಯೇನು?

‘ಹೌದು’

‘ಪಾಪ! ತಾಯಿ, ತಂದೆ ಇದ್ದಾರೆಯೇ?’

‘ಇದ್ದಾರೆ’

‘ಮಕ್ಕಳು?’

‘ನಾಲ್ಕು ವರ್ಷದ ಒಬ್ಬ ಮಗನಿದ್ದಾನೆ’ ಎನ್ನುತ್ತಾ ವಿಶ್ವನಾಥ ಮಲಗಿದ.

‘ಗೆಳೆಯಾ, ಯಾಕೆ  ಮಾತನಾಡುವುದಿಲ್ಲ’ ಆರನೆಯ ಬೆಡ್ದು ಕೂಗಿತು.

‘ಏನು ಮಾತನಾಡಲಿ?’

‘ಅವಳು ಹೋದಮೇಲೆ ವಾರ್ಡ್‌ಮಂಕಾಯಿತಲ್ಲವೇ?’

‘ನೀನು ಬರೀ ಅವಳ ಸೌಂದರ್ಯ ಕಾಣುವೆ, ಆ ಸೌಂದರ್ಯದಲ್ಲಿನ ನೋವನ್ನು ಕಾಣಲೊಲ್ಲೆಯೇಕೆ? ‘

‘ನೋವು ನನಗೆ ಬೇಡ. ದಿನಾ ನಾವು ನೋಡುವುದು ನೋವು ನರಳಾಟವಲ್ಲವೇ? ನಾನು ಅಂತಹ ಚೆಲುವೆಯ ಸಾನಿಧ್ಯ ಬಯಸುತ್ತೇನೆ. ನೀನು?’

‘ರೋಗಿಗಳಿಗೇ ನಮ್ಮ ಅಗತ್ಯ ಹೆಚ್ಚಲ್ಲವೇ?’

‘ನಿನ್ನ ಕೈಲಿ ಮಾತನಾಡಿ ಪ್ರಯೋಜನವೇನು!’ ಎನ್ನುತ್ತಾ ಆರನೆಯ ಬೆಡ್ಡು ಸುಮ್ಮನಾಯಿತು.

ಮಾರನೆಯ ದಿನ ಸಂಜೆ ಉಮಾ ಸಂತಸದ ನಗೆ ಬೀರುತ್ತಾ ಒಳಗೆ ಬಂದಳು.

ಆರನೆಯ ಬೆಡ್ಡು ಹರ್ಷದಿಂದ ಕೂಗಿತು.

‘ಅಗೋ ಚೆಲುವಿನ ರಾಣಿ ಬಂದಳು’

ವಿಶ್ವನಾಥ ಉತ್ಸಾಹದಿಂದ ಎದ್ದುನಿಂತು ಹೆಂಡತಿಯನ್ನೂ, ಮಗನನ್ನೂ ಸ್ವಾಗತಿಸಿದ.

‘ರಾಜನ್ನೂ ಕರ್ಕೊಂಡು ಬಂದಿದೀಯಾ?’

‘ನಾನೂ ಅಣ್ಣನ್ನ ನೋಡ್ಬೇಕು ಬರ್ತೀನಿ ಎಂದು ಹಟಮಾಡಿದ’.

ತಂದೆಯ ಮುಖ ಕಂಡಕೂಡಲೇ ರಾಜ ತಾಯಿಯ ಕೈಬಿಟ್ಟು ಓಡಿಬಂದು ತಂದೆಯನ್ನಪ್ಪಿದ. ವಿಶ್ವನಾಥ ಮಗನನ್ನು ಎದೆಗೊತ್ತಿಕೊಂಡ.

‘ಇವತ್ತು ನಿಮ್ಮ ಮುಖ ಎಷ್ಟೋ ಗೆಲುವಾಗಿದೆ’

‘ಮನೆಯ ಗತಿಯೇನು, ಉಮಾ?’

‘ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ’.

‘ಹೀಗೆ ಸ್ಪಲ್ಪವಾಗಿ ಸಾಯುವುದಕ್ಕಿಂತ ಒಂದೇ ಬಾರಿಗೆ ಸಾಯುವುದು ಮೇಲು’.

‘ಸಾವು’ ಎಂಬ ಪದ ಕೇಳಿ ಉಮಾ ಬೆಚ್ಚಿದಳು.

‘ಎಂತಹ ಮಾತನ್ನಾಡುವಿರಿ? ನಮ್ಮ ಸಂಸಾರದ ಬೆಳಕು ನೀವು. ಹೀಗೆ ಮಾತನಾಡುವುದು ಸರಿಯೇ?’

ವಿಶ್ವನಾಥನ ಮುಖದಲ್ಲಿ ಪಶ್ಚಾತ್ತಾಪ ಕಾಣಿಸಿತು. ತಪ್ಪಾಯಿತು, ಉಮಾ, ನಾನು…..’

ಮಾತಿನ ನಡುವೆಯೇ ಅವನು ಕೆಮ್ಮತೊಡಗಿದ. ಕೆಮ್ಮಿನಿಂದ ಅವನ ದೇಹ ಮಂಚದೊಡನೆ ಕುಲುಕಾಡಿತು. ವಿಶ್ವನಾಥ ತನ್ನೆದೆಗೆ ತಲೆಯಾನಿಸಿ ಕುಳಿತಿದ್ದ ಮಗನನ್ನು ದೂರ ತಳ್ಳಿ ಟವಲಿನಿಂದ ಬಾತಿ ಮುಚ್ಚಿಕೊಂಡ. ಕೆಮ್ಮಿನ ಪರಿಣಾಮವಾಗಿ ಕಣ್ಣಿನಲ್ಲಿ ನೀರು ಹರಿಯತೊಡಗಿತು. ಉಸಿರು ತಡೆದು, ತಡೆದು ಬರತೊಡಗಿತು. ಉಮಾ ಗಂಡನ ಸಂಕಟವನ್ನು ತಾನೇ ಅನುಭವಿತ್ತಿರುವಂತೆ ತೋರಿತು.

‘ಇನ್ನು ಮೇಲೆ ರಾಜೂನ ಇಲ್ಲಿಗೆ ಕರೆದುಕೊಂಡು ಬರಬೇಡ. ಈ ರೋಗ ಬಹಳ ಅಪಾಯವಾದುದು. ಮಗುವಿಗೆ ನರಕದ ದರ್ಶನವೇಕೆ?’

‘ಊಂ….. ನಾನು ಬರ್ತೀನಿ’ ರಾಜು ರಾಗ ತೆಗೆದ.

‘ಹಾಗೆ ಆಗ್ಲಿ’ ಎಂದು ಮಗನ ಸಮಾಧಾನಕ್ಕಾಗಿ ನುಡಿದ ವಿಶ್ವನಾಥ.

* * *

‘ಇದೇಕೆ ಅವಳಿನ್ನೂ ಬರಲಿಲ್ಲ?’

ಆರನೆಯ ಬೆಡ್ದು ತವಕದಿಂದ ಕೇಳಿತು.

‘ಬಸ್ಸು ಇನ್ನೂ ಬಂದಿಲ್ಲವೇನೋ?’ ವಿಶ್ವನಾಥ  ಎದ್ದು ಕುಳಿತು ಪಕ್ಕದವನಿಗೆ ಹೇಳಿದ.

‘ಅವಳು ಬಂದರೆ ಇರಲು ಹೇಳಿ. ನಾನು ಈಗಲೇ ಬಂದುಬಿಡುತ್ತೇನೆ’ ಎನ್ನುತ್ತಾ ಬಾತ್‌ರೂಮಿನ ಕಡೆ ಹೊರಟ.

ಅವನು ಹೋದ ಎರಡು ನಿಮಿಷಗಳಲ್ಲಿ ಉಮಾ ಬಂದಳು. ಆಕೆ ಬಂದು ಗಂಡನನ್ನು ಮಂಚದ ಮೇಲೆ ಕಾಣದೆ ಸುತ್ತಲೂ ನೋಡಿದಳು.

‘ಇನ್ನೇನು ಬರುತ್ತಾರೆ’ ಪಕ್ಕದ ರೋಗಿ ಹೇಳಿದ. ಉಮಾ ಕುರ್ಚಿಯ ಮೇಲೆ ಕುಳಿತು ಅಂಗೈಗೆ ಕೆನ್ನೆಯಾನಿಸಿ ತಲೆ ತಗ್ಗಿಸಿದಳು. ಅವಳ ಮುಖದಲ್ಲಿ ಚಿಂತೆ ಮನೆಮಾಡಿತು. ಎರಡು ಹನಿ ನೀರು ಅವಳ ಸೀರೆಯ ಮೇಲೆ ಬಿತ್ತು.

‘ಉಮಾ ಅಳುತ್ತಿದ್ದಾಳೆ ‘ ನಾನು ಆರನೆಯ ಬೆಡ್ಡಿಗೆ ಕೂಗಿ ಹೇಳಿದೆ.

‘ಅವಳ ಮುಖ ನನಗೆ ಕಾಣುವುದಿಲ್ಲ. ಹೆಂಗಸರು ಅಳುವಾಗ ಸುಂದರವಾಗಿ ಕಾಣುವರು ಎಂದು ಕೇಳಿದ್ದೇನೆ. ಉಮಾ ಹೇಗೆ ಕಾಣುಸುತ್ತಾಳೆ?’.

‘ನನಗೆ ದುಃಖ, ನೋವಿನ ಹೊರತು ಬೇರೇನೂ ಕಾಣುವುದಿಲ್ಲ. ದುಃಖವಿದ್ದೆಡೆ ಸೌಂದರ್ಯ ಕಾಣಲು ಸಾಧ್ಯವೆ, ಗೆಳೆಯ?’

ನಾನು ಅನುಕಂಪದಿಂದ ನುಡಿದೆ.

‘ನೀನೊಬ್ಬ ಕುರುಡ’ ಅದು ಕಟುವಾಗಿ ಉತ್ತರಿಸಿತು.

ನಾನು ಅವಳ ಮುಖವನ್ನೇ ನೋಡುತ್ತಿದ್ದೆ. ಇದೇನು ಇದ್ದಕ್ಕಿದಂತೆಯೇ ಉಮೆಯ ಮುಖದ ಮೇಲೆ ಸಿಹಿ ನಗೆ ಪಸರಿಸಲು ಕಾರಣವೇನು? ಅವಳ ಕಣ್ಣುಗಳು ಅಗಲವಾಗಿ ಮಿಂಚಿದವು. ನಾನು ಅವಳ ನೋಟವನ್ನು ಅನುಸರಿಸಿ ನೋಡಿದೆ. ವಿಶ್ವನಾಥ ಬರುತ್ತಿದ್ದ.

ಅಬ್ಬ! ಒಂದು ಕ್ಷಣದಲ್ಲಿ ಎಂತಹ ಬದಲಾವಣೆ!

ವಿಶ್ವನಾಥ ಹಾಸಿಗೆಯ ಮೇಲೆ ಕುಳಿತ.

‘ಇದೇನು ಉಮಾ, ಈ ದಿನ ನೀನು ಬಹಳ ಸಂತೋಷವಾಗಿರುವ ಹಾಗಿದೆ?’

ಅವನ ಅಜ್ಞಾನಕ್ಕೆ ನಾನು ವ್ಯಥೆ ಪಟ್ಟೆ. ಒಂದು ಕ್ಷಣ ಹಿಂದೆ ಅವಳ ಮೂಕರೋದನಕ್ಕೆ ನಾನು ಸಾಕ್ಷಿಯಾಗಿದ್ದೆ. ಗಂಡನಿಗಾಗಿ ಒಂದು ಗಳಿಗೆಯಲ್ಲಿ ನಗುವಿನ ಮುಖವಾಡ ಧರಿಸಬಲ್ಲ ಈ ಹೆಂಗಸಿನ ಚಾತುರ್ಯಕ್ಕೆ ನಾನು ಬೆರಗಾದೆ.

‘ನಿಮಗೆ ಮೊದಲಿಗಿಂತಲೂ ವಾಸಿ ಎಂದು ಡಾಕ್ಟರು ಹೇಳಿದರು. ತೂಕ ಈಗ ಹೆಚ್ಚಾಗಿದೆಯಂತೆ. ಮುಖವೂ ಮೊದಲಿನಷ್ಟು ಬಿಳಚಿಕೊಂಡಿಲ್ಲ’.

‘ನಿಜವಾಗಿಯೂ?’

‘ಹೌದು’ ಎಂದು ಉಮಾ.

ಸ್ವಲ್ಪ ಹೊತ್ತಿನಲ್ಲಿ ಎನನ್ನೋ ಜ್ಞಾಪಿಸಿಕೊಂಡಡವಳಂತೆ ನುಡಿದಳು.

‘ನನಗೆ ಕೆಲಸ ಸಿಕ್ಕಿದೆ.’

‘ನೀನು ದುಡಿದು ನನ್ನನ್ನು ಸಾಕುವ ಹಾಗಾಯಿತು.’

‘ನೀವು ಹಾಗೆ ಮಾತನಾಡಬೇಡಿ. ಇದುವರೆಗೂ ನಾನು ಹಾಯಾಗಿ ಮನೆಯಲ್ಲಿರಲಿಲ್ಲವೇ? ನಿಮಗೆ ಕೈಲಾಗದ ಒಂದೆರಡು ದಿನ ನಾನು ದುಡಿದರೆ ತಪ್ಪೇನು?’

‘ಅಮ್ಮ, ಅಣ್ಣ ಏನೆಂದರು?’

‘ಏನೂ ಅನ್ನಲಿಲ್ಲ. ಸದ್ಯಕ್ಕೆ ಅವರ ಪೆನ್ಷನ್ನಿನಲ್ಲಿ ಸಂಸಾರ ಸಾಗುತ್ತಿದೆ. ನನ್ನ ಮೂವತ್ತು ರೂಪಾಯಿ ಸಂಬಳವನ್ನು ನಿಮ್ಮ ಹಣ್ಣು, ಮೊಟ್ಟೆ, ಟಾನಿಕ್ಕಿಗಾಗಿ ಉಪಯೋಗಿಸುತ್ತೇನೆ. ನೀವು ಇಲ್ಲಿಂದ ಬಂದನಂತರ ಬೇಕಾದರೆ ನನ್ನ ರಾಣಿಯಂತೆ ಒಂದೆಡೆ ಕೂರಿಸಿಬಿಡಿ.’

ಉಮಾ ಕಿಲಕಿಲನೆ ನಕ್ಕಳು ವಿಶ್ವನಾಥನೂ ಪ್ರಸನ್ನನಾದ.

* * *

‘ನರ್ಸುಗಳಿಗೆ ಹೇಳಾಯಿತೇ?’ ಉಮಾ ಕೇಳಿದಳು.

‘ಹೂಂ ಹೇಳಾಯಿತು. ಡಾಕ್ಟರು ಬಂದರು. ಅವರು… ‘ ನಾವಿಬ್ಬರೂ ಡಾಕ್ಟರ ಮಾತನ್ನು ಆಲಿಸಿದೆವು. ಡಾಕ್ಟರು ಉಮೆ ಕಡೆ ತಿರುಗಿ ಹೇಳಿದರು.

‘ತಾಯಿ, ಇದರಲ್ಲಿ ನನ್ನ ಕೈವಾಡವೇನೂ ಇಲ್ಲ. ನಿನ್ನ ಧೈರ್ಯ, ಭರವಸೆಯೇ ನಿನ್ನ ಗಂಡನನ್ನು ಕಾಪಾಡಿದವು’ ಎನ್ನುತ್ತಾ ವಿಶ್ವನಾಥನ ಕಡೆ ತಿರುಗಿ,

‘ವಾರಕ್ಕೊಂದು ಸಲ ಬಂದು ‘ಸ್ಕ್ರೀನ್‌’ ಮಾಡಿಸಿಕೊಂಡು ಹೋಗಿ ಎಂದರು.

ವಿಶ್ವನಾಥ, ಉಮಾ, ಡಾಕ್ಟರಿಗೆ ಕೈಮುಗಿದು ಹೊರಟುಹೋದರು.

‘ಉಮೆಯ ಮೂಕದಲ್ಲಿದ್ದ ಆನಂದಕ್ಕೆ ನೀನು ಬೆಲೆಕಟ್ಟಬಲ್ಲೆಯಾ?’

ನಾನು ಕೇಳಿದೆ.

‘ಸಾಧ್ಯವಿಲ್ಲ. ಈಗ ಅವಳಲ್ಲಿ ಮೊದಲಿನ ಸೌಂದರ್ಯವೂ ಇಲ್ಲ. ಕಾರಣವೇನು?’

‘ದುಃಖಾಗ್ನಿಗೆ ಸಿಕ್ಕಿ ಅವಳ ಮೊದಲಿನ ಸೌಂದರ್ಯ ಸುಟ್ಟುಹೋಗಿದೆ ಗೆಳೆಯಾ, ಮೊದಲನೆಯ ದಿನ ಅವಳ ಕೊರಳಲ್ಲಿ ಒಂದೆಳೆ ಚಿನ್ನದ ಸರ ನೋಡಿದ್ದೆ ಈಚೀಚೆಗೆ ಆ ಸರ ಅವಳ ಕತ್ತಿನಲ್ಲಿ ಕಾಣುತ್ತಿರಲಿಲ್ಲ.

‘ಮಾರಿಕೊಂಡಳೋ ಏನೋ, ಅವಳ ಮುಖ ನೋಡಿದರೆ ಹೆದರಿಕೆಯಾಗುವಂತಿದೆ. ಅವಳ ಕಣ್ಣುಗಳು ಕಾಂತಿಹೀನವಾಗಿದೆ. ತುಂಬಿದ ದೇಹ ಬಡಕಲಾಗಿದೆ. ಅವಳ ಸೌಂದರ್ಯ….’

‘ಹೌದು, ನಶಿಹೋಗಿದೆ.’

‘ಮೊದಲನೆಯ ದಿನ ಅವಳ ಚೆಲವು ನೋಡಿ ನಾನು ಎಷ್ಟು ಹಿಗ್ಗಿದ್ದೆ?’

‘ಎರಡು ವರ್ಷ ಸತತವಾಗಿ ಗಂಡನ ಸೇವೆ ಮಾಡಿದುದನ್ನು ಮರೆತೆಯಾ? ಅವನ ಆರೋಗ್ಯಕ್ಕಾಗಿ ತನ್ನ ಸೌಭಾಗ್ಯಕ್ಕಾಗಿ ಈಕೆ ತನ್ನ ಸೌಂದರ್ಯ, ಸಂತೋಷ ಆರೋಗ್ಯ ಎಲ್ಲವನ್ನೂ ಬಲಿಗೊಟ್ಟಿದ್ದಾಳೆ. ಎಂತಹ ತ್ಯಾಗ!’

* * *

ನಾನು ಹೆಂಗಸರ ವಾರ್ಡಿಗೆ ಬಂದುದು ಇದೇ ಮೊದಲನೆಯ ಬಾರಿ. ವಾರ್ಡಿಗೆ ಬಂದ ಕೂಡಲೇ ನಾನು ಎಲ್ಲರ ಪರಿಚಯವನ್ನು ಮಾಡಿಕೊಂಡೆ.

‘ನಾನು ಹೆಂಗಸರ ವಾರ್ಡಿಗೆ ಬಂದೇ ಇರಲಿಲ್ಲ. ನನ್ನನ್ನು ಈಗ ಯಾಕೆ ತಂದರೋ!’ ಎನ್ನುತ್ತಾ ನಾನು ನರ್ಸ್‌ತೂಗಿಹಾಕಿದ ಚೀಟಿಯನ್ನು ನೋಡಿದೆ.

‘ನಿನ್ನ ನಂಬರ್‌ಎಷ್ಟು?’ ಎಂಟನೆಯ ಬೆಡ್ಡು ಕೇಳಿತು.

‘ಬೆಡ್‌ನಂಬರ್‌ಏಳು. ನನ್ನ ಇಲ್ಲಿಗೇಕೆ ತಂದರು.?

‘ಯಾಕೆ ತಂದರು ಎಂದರೆ – ಹೊಸ ರೋಗಿ ಬಂದಿರಬೇಕು’.

‘ಪಾಪ! ಇನ್ನೊಂದು ಜೀವಿ ಈ ನರಕ ಪ್ರವೇಶಿಸುವುದನ್ನು ನೋಡಿದರೆ ವ್ಯಥೆಯಾಗುತ್ತದೆ. ‘ಶ್‌, ಹೊಸ ರೋಗಿ ಬರುತ್ತಿದ್ದಾಳೆ.’

ನಾನು ಕುತೂಹಲದಿಂದ ನೋಡಿದೆ.

ಉಮಾ!

ನಾನು ಚಕಿತನಾದೆ. ಅವಳ ಸೌಂದರ್ಯ ಮಾಯವಾಗಿತ್ತು ಅವಳ ಕಣ್ಣುಗಳು ಗುಳಿ ಬಿದ್ದಿದ್ದವು. ಕೆನ್ನೆಯ ಮೂಳೆ ಹಾಯ್ದುಕೊಂಡಿತ್ತು. ಆಕೆ ಚರ್ಮ, ಎಲುಬಿನ ಗೂಡಾಗಿದ್ದಳು.

ನಾನು ಉದ್ವೇಗದಿಂದ ‘ಉಮಾ, ಉಮಾ’ ಎಂದು ಚೀರಿದೆ. ಉಮಾ ತನ್ನೊಡನೆ ಬರುತ್ತಿದ್ದ ವ್ಯಕ್ತಿಗೆ,

‘ನೀವು ಹೋಗಿ, ಆಫೀಸಿಗೆ ಹೊತ್ತಾಗುತ್ತದೆ’ ಎಂದಳು.

ವಿಶ್ವನಾಥ! ನನಗೆ ಅವನ ಗುರುತೇ ಸಿಕ್ಕಿರಲಿಲ್ಲ. ಆರು ತಿಂಗಳಲ್ಲಿ ವಿಶ್ವನಾಥ ಎಷ್ಟು ಬದಲಾಯಿಸಿದ್ದಾನೆ! ಆ ಮೂಳೆ ದೇಹವೆಲ್ಲಿ ! ಈ ಕೊಬ್ಬಿದ ಶರೀರವೆಲ್ಲಿ? ವಿಶ್ವನಾಥ ಕೊಬ್ಬಿದ ಗೂಳಿಯಂತಿದ್ದ. ರಕ್ತ ಮುಖದಿಂದ ಚಿಮ್ಮುತ್ತಿತ್ತು

‘ಹಾಗಾದರೆ ನಾನು ಹೋಗಲೇ’

‘ಹೂಂ. ಮಗೂನ ಸರಿಯಾಗಿ ನೋಡಿಕೊಳ್ಳಿ’.

ವಿಶ್ವನಾಥ ಹೊರಟುಹೋದ. ಉಮೆಯ ಪರಿಸ್ಥಿತಿಯನ್ನು ನೆನೆದು ನಾನು ದುಃಖಿಸಿದೆ.

* * *

ಒಂದು ದಿನ ಸಂಜೆ ಬಸ್ಸು ಬರುವ ಸಮಯವಾಗುತ್ತಲೇ ಉಮಾ ಎದ್ದು ಕುಳಿತು ತಲೆಬಾಚಿಕೊಂಡಳು.

‘ಎಲ್ಲಿಗೆ ಹೋಗ್ತೀರಾ?’ ಎಂಟನೆಯ ಬೆಡ್ದಿನ ರೋಗಿ ಪ್ರಶ್ನಿಸಿದಳು.

‘ಬೇಜಾರಾಗಿದೆ, ವರಾಂಡದಲ್ಲಿ ನಿಲ್ಲುತ್ತೇನೆ’.

‘ಗಂಡ ಬರುವ ಸಮಯವಾದರೆ ಅವಳ ಮುಖ ಹೇಗೆ ಅರಳುತ್ತದೆ’. ಎಂಟನೆಯ ಬೆಡ್ದು ಹಾಸ್ಯ ಮಾಡಿ ನಕ್ಕಿತು.

‘ಅವನು ಈಚೀಚೆಗೆ ಸರಿಯಾಗಿ ಬರುತ್ತಿಲ್ಲ’.

ಬಸ್ಸಿನ ಹಾರನ್ನಿನ ಸದ್ದು ಕೇಳಿಸಿತು.

‘ಓ ಬಸ್ಸು ಬಂತು. ಅವಳ ಗಂಡ ಬಂದಿರಬಹುದಲ್ಲವೇ?’

‘ಆದರೂ ಅವರು ಒಳಗೇಕೆ ಬರಲಿಲ್ಲ?’

‘ಮರಗಳ ಕೆಳಗೇ ಕುಳಿತು ಮಾತನಾಡತ್ತಿರಬಹುದು. ಕಾಲು ಗಂಟೆಯ ನಂತರ ಎಂಟನೆಯ ಬೆಡ್ದು ಕೂಗಿತು.

‘ಅವಳು ಬಂದಳು!’

‘ಯಾರು?’

‘ನಿನ್ನ ರೋಗಿ?’

‘ಉಮಾನೇ? ಅವಳ ಗಂಡ ಎಲ್ಲಿ? ಒಬ್ಬಳೆ ಬರುತ್ತಿದ್ದಾಳೆ’.

‘ಹೌದು. ಮುಖ ತುಂಬಾ ಪೆಚ್ಚಾಗಿದೆ’.

ಉಮಾ ಒಬ್ಬಳೇ ಬಂದದನ್ನು ನೋಡಿ ಪಕ್ಕದಾಕೆ ಪ್ರಶ್ನಿಸಿದಳು.

‘ಈ ದಿನವೂ ನಿಮ್ಮ ಯಜಮಾನರು ಬರಲಿಲ್ಲವೇ’

‘ಇಲ್ಲಮ್ಮ, ಈಚೀಚೆಗೆ ಅವರಿಗೆ ಆಫೀಸಿನಲ್ಲಿ ತುಂಬಾ ಕೆಲಸವಂತೆ. ಆದುದರಿಂದ ಬರುವುದಕ್ಕಾಗುವುದಿಲ್ಲ ಎಂದು ಹೇಳಿ ಕಳಿಸಿದ್ದಾರೆ’.

ಇಷ್ಟು ನುಡಿದವಳೇ ಉಮಾ ಮುಸುಕು ಹಾಕಿ ಮಲಗಿದಳು ಅವಳ ಕಣ್ಣಿನಿಂದ ನೀರು ಹರಿಯತೊಡಗಿತು.

‘ಉಮಾ ಅಳುತ್ತಿದ್ದಾಳೆ’ ನಾನು ಕೂಗಿ ಹೇಳಿದೆ.

‘ಯಾಕೆ?’

‘ಅವಳಿಗೆ ತುಂಬಾ ದುಃಖವಾಗಿದೆ. ಈಚೀಚೆಗೆ ಅವಳ ಗಂಡ ತುಂಬಾ ಉದಾಸೀನ ನಾಗುತ್ತಿದ್ದಾನೆ. ತನಗೆ ತಾನೆ ಮಾತನಾಡಿಕೊಂಡು ಕಂಬನಿಗೆರೆಯುತ್ತಿದ್ದಾಳೆ’.

‘ಪಾಪ ಬಡಪಾಯಿ. ಹಾಗಾದರೆ ಸ್ನೇಹಿತೆ ಬಂದು ಹೇಳಿದುದು ಸುಳ್ಳೇ?

‘ಸುಳ್ಳು, ತನ್ನ ಗಂಡನ ಔದಾಸೀನ್ಯವನ್ನು ನೆರೆಯವಳಿಂದ ಮುಚ್ಚಲು ಹಾಗೆ ಹೇಳಿಕೊಂಡಳು. ನೋಡು, ಅವಳ ಕಣ್ಣೀರಿನಿಂದ ನನ್ನ ದಿಂಬೆಲ್ಲಾ ಒದ್ದೆಯಾಗುತ್ತಿದೆ’.

‘ರೋಗಗ್ರಸ್ತ ಹೆಂಡತಿಯಲ್ಲಿ ಅವನಿಗೆ ಆಸಕ್ತಿಯಿಲ್ಲವೇನೋ’

‘ಸಾಕು ಸುಮ್ಮಿನಿರು. ಇವಳಿಗೂ ಹೃದಯವಿಲ್ಲವೆ? ಅವನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದಳು. ಅವನಿಗೆ ಆ ಕೃತಜ್ಞತೆಯಾದರೂ ಬೇಡವೆ? ಆಫೀಸು ಕೆಲಸ ಎಲ್ಲಾ ಬರೀ ನೆಪ. ತನಗೆ ಉಪಯೋಗವಿಲ್ಲದ ಹೆಂಡತಿಯಲ್ಲಿ ಅವನಿಗೆ ಶ್ರದ್ಧಯಿಲ್ಲ.

‘ಅವನು ಇಲ್ಲಿಗೆ ಬಂದು ಎಷ್ಟು ದಿನವಾಯಿತು.?’

‘ಇವಳು ಇಲ್ಲಿಗೆ ಸೇರಿದ ಹೊಸದರಲ್ಲಿ ದಿನವೂ ಬರುತ್ತಿದ್ದ. ಆಮೇಲೆ ಮೂರು ದಿನಕೊಂದು ಬಾರಿ ಬರಲಾರಂಬಿಸಿದ. ಅದು ವಾರಕೊಂದು ಬಾರಿಗಿಳಿದು, ಈಗ ಹದಿನೈದು ದಿನವಾದರೂ ಗಂಡನ ಮುಖವನ್ನು ನೋಡಿಲ್ಲ. ರೋಗಿಗೆ ಔಷಧಿಗಿಂತಲೂ ಪ್ರೀತಿ, ವಿಶ್ವಾಸ ಬೇಕು’.

‘ಅವನು ಕಟುಕ’

‘ಇವಳು ಇಲ್ಲಿಗೆ ಬಂದು ಒಂದೂವರೆ ವರ್ಷವಾಯಿತು. ಒಂದು ದಿನ ತನ್ನ ಮಗುವನ್ನು ನೋಡಿಲ್ಲ’.

‘ಕಾರಣ?’

‘ಗಂಡ, ಆ ಮಗುವನ್ನು ಇಲ್ಲಿಗೆ ಕರೆದು ತರುವುದಿಲ್ಲ’.

‘ಹಾಗಾದರೆ ಇವಳ ಗತಿ?’ ಎಂಟನೆಯ ಬೆಡ್ಡು ಕಳವಳದಿಂದ ಕೇಳಿತು.

‘ಗಂಡನ ಔದಾಸೀನ್ಯದ ಅರಿವಾಗಿದೆ. ನಿನ್ನೆ ಮುಸುಕಿನಲ್ಲಿ ಅಳುತ್ತಾ ಹೇಳಿಕೊಳ್ಳುತ್ತಿದ್ದಳು. “ಭಗವಂತಾ, ನಾನವರಿಗೆ ಬೇಡವಾದ ಮೆಲೆ ನನಗೆ ಬದುಕುಲಾಶೆಯಿಲ್ಲ” ಎಂದು.

‘ಗಂಡನ ಔದಾಸೀನ್ಯ ತಿಳಿದಿದ್ದರೂ ಪ್ರತಿದಿನವೂ ಬಸ್ಸು ಬರುವ ವೇಳೆಗೆ ಇವಳು ಅಲಂಕರಿಸಿಕೊಂಡು ಹೊರಗೆ ನಿಲ್ಲಲು ಕಾರಣವೇನು?’

‘ಅವಳಿಗಿನ್ನೂ ಆಸೆಯಿದೆ. ಒಂದಲ್ಲ ಒಂದು ದಿನ ಗಂಡ ಬಂದಾನು ಎಂಬ ಹಂಬಲವಿನ್ನೂ ಅವಳ ಹೃದಯದಿಂದ ದೂರವಾಗಿಲ್ಲ. ಈ ಹಂಬಲಿನಿಂದಾಗಿ ಅವಳ ಆತ್ಮ ಇನ್ನೂ ದೇಹದೊಳಗಿದೆ’.

‘ಅದಾರೋ ಬರುವ ಸದ್ದು, ಅವಳ ಗಂಡನಿರಬೇಕು’.

ನಾನು ತಿರುಗಿ ನೋಡಿದೆ. ಹೆಂಗಸೊಬ್ಬಳು ಉಮ್ಮೆಯ ಬಳಿ ನಿಂತು ‘ಉಮಾ’ ಎಂದು ಕೂಗಿದಳು.

ಉಮಾ ಮುಸುಕು ತೆಗೆದು,

‘ಕುಳಿತುಕೋ ಗೌರಿ. ಇದೇನು ಇಲ್ಲಿಗೆ ಬಂದೆ’ ಎಂದಳು.

‘ನಮ್ಮ ಗುರುತಿನವರೊಬ್ಬರನ್ನು ನೋಡಲು ಬಂದೆ. ಹಾಗೆ ನಿನ್ನನ್ನೂ ನೋಡಿಕೊಂಡು ಹೋಗೋಣವೆಂದು ಬಂದೆ. ನಿಮ್ಮ ಯಜಮಾನರು ಬರಲಿಲ್ಲವೇ?’

‘ಅವರಿಗೆ ಸಮಯ ಸಿಗುವುದಿಲ್ಲ. ಆಫೀಸಿನ ಕೆಲಸ ತುಂಬಾ ಇರುತ್ತದೆ. ಬಿಡುವಿದ್ದ ದಿನ ಬರುತ್ತಾರೆ’.

‘ನಾನೂ, ಎಂಟನೆಯ ಬೆಡ್ದು ಪರಸ್ಪರ ನೋಡಿಕೊಂಡೆವು. ಸುಳ್ಳು ಹೇಳುವುದರಲ್ಲಿ ಈಕೆ ಚತುರೆ’. ಎಂಟನೆಯ ಬೆಡ್ದು ಟೀಕಿಸಿತು.

‘ಗಾದೆ ಕೇಳಿಲ್ಲವೇ ಸಂಸಾರ ಗುಟ್ಟು, ರೋಗ ರಟ್ಟು ಅಂತ್ಯ’.

‘ತಾಳು ಅವರ ಮಾತು ಕೇಳೋಣ’. ಎಂಟನೆಯ ಬೆಡ್ಡು ಕೂತೂಹಲದಿಂದ ಅವರ ಸಂಭಾಷಣೆಗೆ ಕಿವಿಯೊಡ್ದಿತು.’

‘ನಿಮ್ಮ ಯಜಮಾನರು ಬಂದು ಎಷ್ಟು ದಿನವಾಯಿತು?’

‘ಮೂರು ದಿನವಾಯಿತು’.

ಗೌರಿ, ಉಮೆಯನ್ನೂ ತೀಕ್ಷ್ಣವಾಗಿ ನೋಡಿದಳು.

‘ಸುಳ್ಳೇಕೆ ಹೇಳುವೆ? ನಿನ್ನ ಗಂಡನ ಚರ್ಯೆಯನ್ನು ನನ್ನಿಂದ ಅಡಗಿಸಿಡಬೇಡ’.

ಉಮಾ ವಿಷಾದದಿಂದ ನಕ್ಕಳು.

‘ಉಮಾ, ನಾನೊಂದು ಸುದ್ದಿ ಕೇಳಿದೆ. ಮುಂದಿನ ಸೋಮವಾರ ನಿನ್ನ ಗಂಡನಿಗೆ ಕುಲಕರ್ಣಿಯವರ ಮಗಳನ್ನು ಕೊಟ್ಟು ಪಶ್ಚಿಮವಾಹಿನಿಯಲ್ಲಿ ಮದುವೆಯಂತೆ.

‘ಏನು?’ ಉಮೆಯೊಡನೆ ನಾವೂ ಚೀರಿದೆವು.

‘ಸುಳ್ಳು ಎಂದು ಅವಳೊಡನೆ ಪ್ರತಿಭಟಿಸಿದೆವು’.

‘ಖಂಡಿತವಾಗಿಯೂ ಸುಳ್ಳಲ್ಲ ಉಮಾ  ಕುಲಕರ್ಣಿಯವರ ಅಕ್ಕನೇ ನನಗೆ ಈ ಸುದ್ದಿ ತಿಳಿಸಿದರು’.

ಉಮಾ ಅಷ್ಟು ಬೇಗ ಶಾಂತಳಾದುದು ನನಗೆ ಆಶ್ಚರ್ಯವನ್ನುಂಟುಮಾಡಿತು.

‘ದೇವರು ಅವರಿಬ್ಬರಿಗೂ ಒಳ್ಳೆಯದು ಮಾಡಲಿ. ಛಿದ್ರವಾದ ಅಂಗಿಯನ್ನು ತೊಡಲು ಆದೀತೇ?’

ಗೌರಿ ಹೊರಟುಹೋದೊಡನೆ ಉಮಾ ಮುಸುಕು ಬೀರಿ ಮಲಗಿದಳು. ಅವಳ ಕಣ್ಣೀರಿನಿಂದ ದಿಂಬು ತೊಯ್ದುಹೋಯಿತು. ನಾನು ಮೌನವಾಗಿ ಅವಳೊಡನೆ ದುಃಖಿಸತೊಡಗಿದೆ.

ಕತ್ತಲು ನಿಧಾನವಾಗಿ ಕವಿಯತೊಡಗಿತು.

ಲೇಖಕರು

ತ್ರಿವೇಣಿ (೧೯೨೮-೧೯೬೩) ಅವರ ಮೂಲ ಹೆಸರು ಭಾಗೀರಥಿ, ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡ ತ್ರಿವೇಣಿ ಅವರು ಕಡಿಮೆ ಕಾಲಾವಧಿಯಲ್ಲಿಯೇ ಅನೇಕ ಕತೆ ಕಾದಂಬರಿಗಳನ್ನು ಬರೆದು ಜನಪ್ರಿಯರಾದರು. ‘ಶರಪಂಜರ’, ‘ಬೆಕ್ಕಿನ ಕಣ್ಣು’, ‘ಬೆಳ್ಳಿಮೋಡ’, ‘ಹಣ್ಣೆಲೆ ಚಿಗುರಿದಾಗ’, ಮುಂತಾದ ಕಾದಂಬರಿಗಳನ್ನು ‘ಸಮಸ್ಯೆಯ ಮಗ’, ‘ಹೆಂಡತಿಯ ಹೆಸರು’ ಮುಂತಾದ ಕಥಾಸಂಕಲನಗಳನ್ನು ಹೊರತಂದರು. ಅವರ ಅನೇಕ ಕಾದಂಬರಿಗಳು ಸಿನಿಮಾಗಳಾಗಿಯೂ ಜನಪ್ರಿಯವಾಗಿವೆ. ತ್ರಿವೇಣಿ ಒಬ್ಬ ಪ್ರತಿಭಾವಂತ ಲೇಖಕಿಯಾಗಿದ್ದರು. ಅವರ ಕತೆ ಕಾದಂಬರಿಗಳ ವಿಶೇಷತೆ ಎಂದರೆ, ಮನಶ್ಯಾಸ್ತ್ರದ ಹಿನ್ನೆಲೆಯಲ್ಲಿ ಮಾನವೀಯ ಸಮಸ್ಯೆಗಳನ್ನು ಕುರಿತು ಚಿತ್ರಿಸುವುದು.

ಆಶಯ

ಪ್ರಸ್ತುತ ಕತೆಯು ಮಾನವೀಯ ಕಷ್ಟ ಬಂದಾಗ ನಮ್ಮ ಸಮಾಜದಲ್ಲಿ ಗಂಡು ಮತ್ತು ಹೆಣ್ಣುಗಳು ತೋರುವ ವಿಭಿನ್ನ ವರ್ತನೆಗಳನ್ನು ಕುರಿತ ಒಂದು ಚಿತ್ರವಾಗಿದೆ.

ಪದಕೋಶ

ಚರ್ಯೆ = ವರ್ತನೆ

ಪ್ರಶ್ನೆಗಳು

೧. ಎರಡು ಮಂಚಗಳು ಮಾಡುವ ಸಂಭಾಷಣೆಯಲ್ಲಿ ಇರುವ ಜೀವನದ ಸತ್ಯವೇನು?

೨. ಆರನೇ ನಂಬರಿನ ಬೆಡ್‌ಗೆ ಯಾಕೆ ಜೀವನ ಬೇಸರವಾಗಿತ್ತು?

೩. ಆರನೇ ನಂಬರ್‌ಬೆಡ್‌ಕಾಣುತ್ತಿದ್ದ ಕನಸು ಯಾವುದು? ಅದಕ್ಕೆ ಏಳನೇ ನಂಬರಿನ ಬೆಡ್‌ಕೊಟ್ಟ ಉತ್ತರ ಯಾವುದು?

೪. ಹೊಸದಾಗಿ ಬಂದ ರೋಗಿ ಸ್ಥಿತಿಯೂ ಅವನ ಹೆಂಡತಿಯ ಚೆಲವೂ ಹೇಗಿದ್ದವು?

೫. ಸಂಸಾರ ನಿರ್ವಹಣೆ ಬಗ್ಗೆ ಗಂಡ ಮಾಡಿದ ಚಿಂತೆಗೆ ಉಮಾ ಹೇಗೆ ಸಮಾಧಾನ ಮಾಡುತ್ತಾಳೆ.?

೬. ವಿಶ್ವನಾಥನಲ್ಲಿದ್ದ ಸಾವಿನ ಭಯವನ್ನು ಹೋಗಲಾಡಿಸಲು ಉಮಾ ಹೇಗೆ ಪ್ರಯತ್ನಿಸುತ್ತಾಳೆ?

೭. ಆರೋಗ್ಯ ಕಳೆದುಕೊಂಡ ಉಮಾ ಯಾವ ಅವಸ್ಥೆಯಲ್ಲಿ ಆಸ್ಪತ್ರೆಗೆ ಬರುತ್ತಾಳೆ?

೮. ವಿಶ್ವನಾಥನ ವರ್ತನೆಯಲ್ಲಿ ಯಾವ ಬದಲಾವಣೆಗಳಾದವು?

೯. ಉಮಾ ಕೊನೆಗೂ ಅನಾಥಳಾದ ರೀತಿ ಯಾವುದು?

೧೦. ಏಳನೇ ನಂಬರಿನ ಬೆಡ್ಡು ಕಂಡುಕೊಂಡ ಜೀವನ ದರ್ಶನ ಯಾವುದು?

೧೧. ಈ ಕತೆಯ ಜೀವನದ ಯಾವ ಸತ್ಯವನ್ನು ಹೇಳಲು ಯತ್ನಿಸುತ್ತಿದೆ?

೧೨. ಪುರುಷರ ಸ್ವಾರ್ಥ ಹಾಗೂ ಹೆಣ್ಣಿನ ಮಾನವೀಯತೆ ಕುರಿತು ಕತೆ ಮಾಡುತ್ತಿರುವ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪೂರಕ ಓದು

೧. ಇದೇ ಪುಸ್ತಕದಲ್ಲಿರುವ ‘ಗಾಂಧಿ’ ಹಾಗೂ ‘ಅಣ್ಣಪನ ರೇಷ್ಮೆಕಾಯಿಲೆ’ ಕತೆಗಳು.

೨. ಶಾಂತನಾಥ ದೇಸಾಯಿ ಅವರ ‘ಮುಕ್ತಿ’ ಕಾದಂಬರಿ.

೩. ಗಾಂದೀಜಿ ದಕ್ಷಿಣ ಆಫ್ರಿಕಾದಲ್ಲಿ ಕಸ್ತೂರಬಾ ಕಾಯಿಲೆಯಾದಾಗ ತೋರುವ ವರ್ತನೆಗಳ ಚಿತ್ರ (ಅವರ ಆತ್ಮಕತೆ) ‘ನನ್ನ ಸತ್ಯಾನ್ವೇಷಣೆ’ಯಲ್ಲಿ)