ತಟ್ಟನೆ ನಿಂತು ನೋಡಿದೆ, ತೊಟ್ಟಿಯಾಚಿಂದ
ಹಸಿದ ಹಾವುಗಳಂತೆ ಇಳಿದು ಒಳಗೆ
ಎರಡು ಕೈಗಳು; ಸಿಕ್ಕ ಎಂಜಲಿನೆಲೆಯನ್ನು
ಹಿರಿದು ತೆಗೆದವು, ಕಸದಿಂದ ಹೊರಗೆ.

ತಡಮಾಡಲಿಲ್ಲ, ತಡೆದನುಮಾನಿಸಲಿಲ್ಲ.
ಎಲ್ಲಾದರೂ ಉಂಟೆ ತುಂಡು ರೊಟ್ಟಿ?
ಮತ್ತು ಅನ್ನದ ಅಗಳು? ಎಲೆಯೆಲ್ಲ ಬಳಿದಾಗ
ಏನೋ ಸಿಕ್ಕಿತು; ತಣ್ಣಾಗಾತು ಹೊಟ್ಟೆ.

ಎರಡು ಬ್ರೆಡ್ದಿನ ತುಂಡು, ಚೆಲ್ಲಿದ ಹುಳಿಯನ್ನ
ಸಿಪ್ಪೆ ಉಪ್ಪಿನ ಕಾಯಿ ಕೂಡಿದುಪ್ಪು
ಎಲ್ಲಿಯೊ ಕಂಡಿದ್ದೆನಲ್ಲ ಈ ಕೈಗಳು?
ಹೌದಿವೇ ಕೈಗಳು; ಬಲಿಷ್ಠ, ಕಪ್ಪು.

ಅಷಾಢ ಮೋಡಗಳು ‘ಧೋ’ ಗುಟ್ಟಿ ಸುರಿದು
ಹೊಲಗದ್ದೆಗಳು ತೊಯ್ದು ತಪ್ಪಡ್ಯಾಗಿ
ಹೂಡಿದ್ದ ನೇಗಿಲಿನ ಹಾಡು, ರವಕೆಯ ಹಸಿರು
ತೊಡಸಿದ್ದವಲ್ಲದೆ ತೆನೆಯು ತೂಗಿ

ಅಂದು ಕೊಂಡೆನು. ಅಲ್ಲ ಇವುಗಳೆ ಅಲ್ಲವೆ
ಗಚ್ಚುಗಾರೆಯ ಹೊತ್ತು ಹಗಲು ಇರುಳು.
ಉಪ್ಪರಿಗೆ ಬಂಗಲೆಯ ನಿಲ್ಲಿಸಿಲ್ಲವೆ? ಮ
ತ್ತೆ, ಇವುಗಳಿಂದಲ್ಲವೆ ಸುಖದ ನೆರಳು

ಹಸಿದ ಕೈಗಳಿಗೆ ದುಡಿಮೆಯಂದರೆ ಪ್ರೀತಿ
ಚೆಲುವೆಂದರೂ ಪ್ರೀತಿ ಕಾಣೊ ಅವಕೆ
ಹಾಗೆಂದೇ ಲಾವಣ್ಯ ವರ್ತುಲಗಳನು ಬರೆ
ವ, ಬೆಳ್ಳಕಿಗಳ ಹಿಂಡು ಬೆರೆವ ಬಯಕೆ

ಕಣ್ಣಿಗಷ್ಟೆ ಅಲ್ಲ. ಕಿವಿಗಳೂ ಸಂತಸದ
ಹಕ್ಕಿಗಳ ಗೂಡಾಗಲೆಂದು, ನುಡಿಸಿ
ಯಾವ್ಯಾವುದೋ ವಾದ್ಯ. ಈ ಕೈಗಳಲ್ಲವೆ
ಇಂದೇಕೆ ಇಳಿದಿವೆ? ಎಂಜಲನು ಬಯಸಿ

ಹಸಿದ ಕೈಗಳಿಗೆ ಪ್ರೀತಿಯೆಂದರೆ ಪ್ರೀತಿ
ಹಾಗೆಂದೆ ತಟ್ಟಿ ಎದೆ ಎದೆಯ ಕದವ
ಕಾದರೂ, ಹಸಿದವರಿಗವು ತೆರೆಯಲೆ ಇಲ್ಲ
ಎಷ್ಟೆಂದು ತಡೆದಾರು? ತಮ್ಮ ಹಸಿವೆ?

ಕಸದ ತೊಟ್ಟಿಗೆ ಇನ್ನು ಹಸಿದ ಕೈ ಇಳಿಯವು
ಅಂದುಕೊಂಡೆನು ಅಂಜಿ ನೊಂದುಕೊಂಡು,
ನೇಣುಗಂಬವ ಕೂಡ ಧಿಕ್ಕರಿಸಿ ನುಗ್ಗುವರು
ಎತ್ತಿಕೊಳ್ಳಲು ಸಿಕ್ಕ ಕೋವಿ. ಗುಂಡು

ಹಸಿದವರು ಕೂಡ ಬದುಕಬೇಕಲ್ಲವೆ? ಮ
ತ್ತೆ, ಪ್ರೀತಿಯೂ ಬೇಕಲ್ಲ ದುಡಿವ ಜನಕೆ
ಎದೆಯ ಕದಗಳು ಮುಚ್ಚಿದಾಗ, ಮತ್ತಿನ್ನೇನು
ಮುಖ್ಯವಲ್ಲವೆ ಸಾವಿಗಿಂತ ಬದುಕೆ?

ಲೇಖಕರು

ಸುಬ್ಬಣ್ಣ ರಂಗನಾಥ ಎಕ್ಕುಂಡಿ (೧೯೨೩-೧೯೯೫) ಅವರು ತಮ್ಮ ಕಥನ ಕವನಗಳಿಂದ ಹೆಸರಾದವರು. ‘ಹಾವಾಡಿಗರ ಹುಡುಗ, ‘ಬೆಳ್ಳಿಕ್ಕಿಗಳು’, ‘ಗೋಧಿಯ ತೆನೆಗಳು’, ‘ಕಥನ ಕವನ’, ಅವರ ಕೆಲವು ಕವನ ಸಂಕಲನಗಳು. ‘ಬಕುಲದ ಹೂವುಗಳು’ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ (೧೯೯೨) ಬಂದಿದೆ.

ಆಶಯ

ಪ್ರಸ್ತುತ ಕವನವನ್ನು  ‘ಬಕುಲದ ಹೂವುಗಳು’ ಸಂಕಲನದಿಂದ ಆರಿಸಿಕೊಂಡಿದೆ. ಕವನವು ಹಸಿವಿನ ಬೀಕರತೆಯನ್ನು ಹೇಳುತ್ತಿದೆ. ಆದರೆ ಹಸಿವಿನಿಂದ ಕಂಗಾಲಾಗಿರುವ ಈ ಜನರೇ ದುಡಿದು ನಾಡಿನ ಸಂಪತ್ತನ್ನು ಸೃಷ್ಟಿಸುವವರು. ಇದೊಂದು ವೈರುಧ್ಯದ ಪರಿಸ್ಥಿತಿ. ಈ ವಿಷಮ ಪರಿಸ್ಥಿತಿ ಬದಲಾಯಿಸಲು ಕೊನೆಗೆ ದುಡಿವ ಜನ ಅನಿವಾರ್ಯವಾಗಿ ಆಯುಧ ಕೈಗೆತ್ತಿಕೊಳ್ಳುತ್ತಾರೆ. ಯಾಕೆಂದರೆ ಅವರಿಗೂ ಚೆನ್ನಾಗಿ ಬಾಳಬೇಕು ಎಂಬ ಕನಸಿದೆ ಎಂದು ಕವನವು ಸೂಚಿಸುತ್ತದೆ.

ಪದಕೋಶ

ತಪ್ಪಡ್ಯಾಗಿ = ನೆನೆದು ತೊಪ್ಪೆಯಾಗಿ

ಪ್ರಶ್ನೆಗಳು

೧. ಹಸಿದ ಕೈಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಏನು ಮಾಡುತ್ತಿವೆ?

೨. ಈ ಕೈಗಳನ್ನು ಎಲ್ಲೆಲ್ಲಿ ಕಂಡಿದ್ದೇನೆ ಎಂದು ಕವಿ ಹೇಳುತ್ತಾನೆ?

೩. ಹಸಿದವರಿಗೆ ರಾಮಾಜವ ಎದೆಕದ ತೆಗೆಯದೆ ಇದ್ದಾಗ, ಅವರು ಏನು ಮಾಡುತ್ತಾರೆ ಎಂದು ಕವಿತೆ ಎಚ್ಚರಿಸುತ್ತದೆ?

೪. ಸಾವಿಗಿಂತ ಬದುಕು ಮುಖ್ಯ ಎಂಬ ಮಾತಿನ ಅರ್ಥವನ್ನು ಕವಿತೆಯ ಹಿನ್ನೆಲೆಯಲ್ಲಿ ವಿವರಿಸಿ.

ಪೂರಕ ಓದು

೧. ಕುವೆಂಪು ಅವರ ‘ಕಲ್ಕಿ’ ಪದ್ಯ ಹಾಗೂ ‘ಧನ್ವಂತರಿಯ ಚಿಕಿತ್ಸೆ’ ಕತೆ.

೨. ಕುಂವೀ ಅವರ ‘ದೇವರ ಹೆಣ’ ಕತೆ.

೩. ದ ರಾ ಬೇಂದ್ರೆ ಅವರ ‘ತುತ್ತಿನಚೀಲ’, ‘ಅನ್ನಾವತಾರ’, ‘ಕುರುಡುಕಾಂಚಾಣ’ ಮೊದಲಾದ ಕವನಗಳು.

೪. ದೇವನೂರ ಮಹಾದೇವ ಅವರ ‘ಒಡಲಾಳ’ ಕಾದಂಬರಿ.

೫. ‘ಮಕ್ಕಳ ಮಾರ್ಯಾರ ಮಳಿರಾಯ’ ಎಂಬ ಬರಗಾಲದ ವರ್ಣನೆಯಿರುವ ಜನಪದ ಹಾಡು.