ಕನ್ನಡ ನೆಲದೊಳಗಿನ್ನೂ ಕನ್ನಡಕ್ಕೆ ಹೋರಾಡುವ ಕಾಲವು
ಮುಗಿದಿಲ್ಲೆಂದರೆ ಅದು ನಮಗೇ ಅವಮಾನ.
ಕನ್ನಡ ರಾಜ್ಯೋದಯವಾಗಿದೆ ಎಂದರೆ
ಅದು ನಿಮಗೇ ಅನುಮಾನ :
ನಿಜ ; ಕನ್ನಡ ರಾಜ್ಯೋದಯವಾಗಿದೆ ಹೊರಗೆ
ಇನ್ನೂ ಕನ್ನಡ ರಾಜ್ಯೋದಯವಾಗುವುದಿದೆ
ನಮಗೂ ನಿಮಗೂ ಒಳಗೆ.

ರಾಜ್ಯೋದಯದೊಂದಿಗೆ ವ್ಯಾಜ್ಯೋದಯವೂ ಆಯಿತು
ನಮ್ಮೊಳಗೊಳಗೇ.
ಕನ್ನಡತನ ಕನ್ನಡ ಸಂಸ್ಕೃತಿ ಈ ಎಲ್ಲವು ಉಳಿದವು
ಎಲ್ಲೋ ತಳದೊಳಗೆ.
ಅಂತೂ ಕನ್ನಡ ರಾಜ್ಯೋದಯವಾಗಿದೆ ಹೊರಗೆ,
ಇನ್ನೂ ಕನ್ನಡ ರಾಜ್ಯೋದಯವಾಗುವುದಿದೆ
ನಮಗೂ ನಿಮಗೂ ಒಳಗೆ.

ಕನ್ನಡವೆಂದರೆ ಕೇವಲ ದೇಶವೆ
ಕನ್ನಡವೆಂದರೆ ಕೇವಲ ಭಾಷೆಯೆ
ಕೂಗಿಗೆ ಮೆರವಣಿಗೆಗೆ ಗಲಭೆಗೆ
ಅಥವಾ ಪದವಿಯ ಓಟಿನ ಬೇಟೆಗೆ
ಒದಗುವ ಹಸಿ-ಬಿಸಿ ಭಾವಾವೇಶವೆ-
ಅದು ಖಂಡಿತ ಅಲ್ಲ.

ಕನ್ನಡವೆಂಬುದು ಕೆಚ್ಚಿಗೆ ನಚ್ಚಿಗೆ
ಆತ್ಮಪ್ರತ್ಯಯದಂತಃಸ್ಸತ್ವಕೆ
ಕನ್ನಡ ಜನಗಣ ನಾಯಕ ಸ್ಫೂರ್ತಿಗೆ
ಅಧಿದೈವದ ಹೆಸರು.

ಶತ ಶತಮಾನದ ಕವಿಗಳ ಕೃತಿಗಳ
ರಾಜರ, ಸಂತರ, ಜನಸಾಮಾನ್ಯರ,
ಹೊಳೆಗಳ, ಗುಡಿಗಳ, ಹಸುರಿನ, ಉಸಿರಿನ
ಸತ್ವದ ಹಿನ್ನೆಲೆಗೀ ಹೆಸರು.

ಈ ಒಳ ಪ್ರಜ್ಞೆಗೆ ಬೇರನ್ನಿಳಿಸಿ
ನಾವೂ ನೀವೂ ಕನ್ನಡತನವನ್ನರಿಯುವ ತನಕಾ,
ಹೀಗೇ ರಾಜ್ಯೋತ್ಸವವಾಗುತ್ತದೆ ಬರಿ ಹೊರಗೆ
ಇನ್ನೂ ಕನ್ನಡ ರಾಜ್ಯೋದಯವಾಗುವುದಿದೆ
ನಮಗೂ ನಿಮಗೂ ಒಳಗೆ.