gopal-columnಆಧುನಿಕ ಕನ್ನಡ ಭಾಷೆಯ ಸ್ಥಿತಿಗತಿಗಳ ಬಗೆಗೆ ಚರ್ಚಿಸುವಾಗ ಮುಖ್ಯವಾಗಿ ಶಾಲೆಗಳಲ್ಲಿ ಕಲಿಸುವ ಕನ್ನಡಭಾಷೆ ಮತ್ತು ಸಮೂಹಮಾಧ್ಯಮಗಳಲ್ಲಿ ನಿರೂಪಿತವಾಗುವ ಕನ್ನಡ ಇವೆರಡನ್ನು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಭಾಷಾಶಿಕ್ಷಣ ಹಾಗೂ ಸಮೂಹಮಾಧ್ಯಮಗಳ ಮೂಲಕ ತಲುಪುವ ಭಾಷೆಯೇ ಅಧಿಕೃತವಾಗಿ ಆಯಾ ಪ್ರಾದೇಶಿಕ ಭಾಷೆಯ ಸಾಮಾಜಿಕ ಸ್ಥಿತಿಗತಿಗಳನ್ನು ತೋರ್ಪಡಿಸುತ್ತದೆ. ಮೊದಲಿಗೆ, ಶಾಲೆಗಳಲ್ಲಿ ಕಲಿಸುತ್ತಿರುವ ಕನ್ನಡಭಾಷೆ ಮತ್ತು ವ್ಯಾಕರಣಗಳನ್ನು ನೋಡೋಣ. ಖ್ಯಾತ ಭಾಷಾಶಾಸ್ತ್ರಜ್ಞರಾದ ಡಾ. ಡಿ.ಎನ್. ಶಂಕರ ಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂದು ಸಾರಿ ದಶಕಗಳೇ ಸಂದುವು. ಅದೇ ಸರಣಿಯಲ್ಲಿ ಅವರು ಹಲವು ಪುಸ್ತಕಗಳನ್ನೂ ಬರೆದು ಸಾಂಪ್ರದಾಯಕ ವ್ಯಾಕರಣದ ಹಿಡಿತದಿಂದ ಕನ್ನಡವನ್ನು ಹೊರತಂದು ಕನ್ನಡದ ಅಕ್ಷರ, ಪದ, ವಾಕ್ಯಗಳ ಆಧಾರದ ಮೇಲೆ ಹೊಸಗನ್ನಡದ ವ್ಯಾಕರಣವನ್ನು ರೂಪಿಸುವ ಅಗತ್ಯವನ್ನು ಸಾರಿ ಸಾರಿ ಹೇಳುತ್ತ ಬಂದಿದ್ದಾರೆ. ಶಂಕರ ಭಟ್ಟರಂಥ ವಿದ್ವಾಂಸರ ಅಭಿಪ್ರಾಯಗಳನ್ನು ವಿವರವಾಗಿ ಪರಿಶೀಲಿಸಿ ಸೂಕ್ತವಾಗಿ ಅಳವಡಿಸಿಕೊಳ್ಳುವ ಬಗೆಯನ್ನು ಆಲೋಚಿಸಬೇಕು. ಆದರೆ, ಎಲ್ಲಕ್ಕೂ ಮೊದಲು ಕನ್ನಡ ವರ್ಣಗಳಿಗೇ ಅವರು ದೊಡ್ಡ ಕತ್ತರಿಯಾಡಿಸಿ ಶಸ್ತ್ರಕ್ರಿಯೆಗೆ ಮುಂದಾಗಿರುವುದು ವಿವಾದಕ್ಕೆ ಎಡೆಗೊಟ್ಟ ವಿಷಯ. ಕನ್ನಡ ವರ್ಣಮಾಲೆಯಲ್ಲಿ ಸಂಸ್ಕೃತದ ಬಲದಿಂದ ಸೇರಿಕೊಂಡಿರುವ ಅನೇಕ ಅಕ್ಷರಗಳು ಬೇಕಾಗಿಲ್ಲ ಎನ್ನುವುದು ಹಲವರ ವಾದ.

ಕನ್ನಡ ವರ್ಣಮಾಲೆಯಲ್ಲಿ ಪೂರ್ವದಿಂದ ಬಳಕೆಯಲ್ಲಿ ಉಳಿದುಬಂದಿರುವ ಎಲ್ಲ ಅಕ್ಷರಗಳನ್ನೂ ನಾವು ವ್ಯಾಪಕವಾಗಿ ಬಳಸದೆ ಇರಬಹುದು. ಹಾಗೆಂದು ಕಡಿಮೆ ಬಳಕೆಯಲ್ಲಿರುವ ಅಕ್ಷರಗಳನ್ನು ಒಮ್ಮೆಗೇ ಕಿತ್ತೊಗೆಯುವುದೇ ಪರಿಹಾರವಲ್ಲ. ಕನ್ನಡ ಸಾಹಿತ್ಯದ ಪರಿಚಯ ಬೆಳೆದಂತೆ ಸಾಹಿತ್ಯದ ಪುಟಪುಟಗಳಲ್ಲಿ ಸೇರಿಹೋಗಿರುವ ಈ ಎಲ್ಲ ಅಕ್ಷರಗಳಿರುವ ಪದ, ವಾಕ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗುತ್ತದೆ. ಅದಕ್ಕೇನಂತೆ, ಱ ೞ ಗಳನ್ನು ಪರಿಚಯಿಸುವ ರೀತಿಯಲ್ಲೇ ‘ಇವೆಲ್ಲ ಒಂದು ಕಾಲದಲ್ಲಿದ್ದವು, ಈಗ ಇಲ್ಲ’ ಎನ್ನಬಹುದಲ್ಲವೇ? ಆದರೆ, ಱ ೞ ಗಳನ್ನು ಯಾರೂ ಉದ್ದೇಶಪೂರ್ವಕವಾಗಿ ಕಿತ್ತೊಗೆಯಲಿಲ್ಲ. ರ -ಱ, ಳ-ೞ ಕಾರಗಳ ಪರಸ್ಪರ ಧ್ವನಿ ವ್ಯತ್ಯಯ, ಅವು ಸೇರಿಕೊಂಡಿರುವ ಪದಗಳ ಅರ್ಥವೈದೃಶ್ಯದ ಸೂಕ್ಷ್ಮಗಳನ್ನೆಲ್ಲ ದಿನನಿತ್ಯದ ಮಾತುಕತೆಯಲ್ಲಿ ನಿರಂತರವಾಗಿ ರೂಢಿಸಿಕೊಂಡಿರುವುದು ಕನ್ನಡಿಗರಿಗೆ ಸಾಧ್ಯವಾಗಲಿಲ್ಲ. ತಮಿಳು, ಮಲೆಯಾಳಂಗಳಲ್ಲಿ ಇವತ್ತಿಗೂ ಉಳಿದು ಬಂದ ಈ ಅಕ್ಷರಗಳು ಕನ್ನಡದಿಂದ ಅಂದಾಜು ಸಾವಿರ ವರ್ಷಗಳ ಹಿಂದೆಯೇ ಕಣ್ಮರೆಯಾದವು. ಹಳಗನ್ನಡ ಕೃತಿಗಳನ್ನು ಓದುವಾಗ ಮಾತ್ರವೇ ಱ ೞ ಗಳ ನೆನಪಾಗುವುದು. ಆ ಅಕ್ಷರಗಳ ಉಚ್ಚಾರಣೆ ಗೊತ್ತಿರುವ ಅಧ್ಯಾಪಕರು ಅವನ್ನು ಸರಿಯಾಗಿ ಉಚ್ಚರಿಸಿ, ರ-ಳಕಾರಗಳ ಉಚ್ಚಾರಕ್ಕಿಂತ ಅವು ಹೇಗೆ ಭಿನ್ನ ಎನ್ನುವುದನ್ನು ತೋರಿಸಿಕೊಟ್ಟಾರು.

ಈಗ ಕನ್ನಡದಿಂದ ಮೂಲೋತ್ಪಾಟನೆಗೊಳ್ಳಬೇಕೆಂದು ಪಟ್ಟಿಮಾಡಿರುವ ಅಕ್ಷರಗಳಲ್ಲಿ ಮಹಾಪ್ರಾಣಗಳೂ ಋ, ಙ, ಞ, ಅಃ, , ಶ, ಷ ಮೊದಲಾದವೂ ಇವೆಯಷ್ಟೆ. ಹೊಸದಾಗಿ ಬರೆಯುವ ಪುಸ್ತಕಗಳಲ್ಲಿ ಈ ಯಾವುದೇ ಅಕ್ಷರವಿಲ್ಲದಂತೆ ನೋಡಿಕೊಳ್ಳಬಹುದೋ ಏನೋ. ಆದರೆ, ಹೊಸಗನ್ನಡ ಸಾಹಿತ್ಯದ ತುಂಬ ಹರಡಿಕೊಂಡಿರುವ ಈ ಅಕ್ಷರಗಳನ್ನು ಜರಡಿಯಾಡುವುದು ಹೇಗೆ? ‘ಪದಚ್ಯುತ’ ಅಕ್ಷರಗಳೊಂದೂ ಇಲ್ಲದಂತೆ ಪ್ರಸಿದ್ಧ ಕವಿ,ಸಾಹಿತಿಗಳ ಬರೆವಣಿಗೆಯನ್ನೆಲ್ಲ ತಿದ್ದಿ ತೀಡಿ ಪರಿಷ್ಕರಿಸಬೇಕು ಇಲ್ಲವೇ ಆಯಾ ಅಕ್ಷರಗಳು ಕಾಣಿಸಿಕೊಳ್ಳುವಲ್ಲೆಲ್ಲ ‘ ಇದು ಹಿಂದೆ ಇತ್ತು, ಈಗಿಲ್ಲ, ಇದರ ಉಚ್ಚಾರ ಹೀಗೆ’ ಎಂದೆಲ್ಲ ಒಕ್ಕಣೆ ಸೇರಿಸಬೇಕು. ಇದೆಲ್ಲ ಆಗತಕ್ಕ ಕೆಲಸವಲ್ಲ.

ಆಡುಮಾತಿನ ಕನ್ನಡದಲ್ಲಿ ಆಯಾ ಪ್ರದೇಶದ ವೈಶಿಷ್ಟ್ಯಕ್ಕೆ ಅನುಸಾರವಾಗಿ ಅಕ್ಷರಗಳ ಉಚ್ಚಾರಣೆ ಹಾಗೂ ಬಳಕೆಯಲ್ಲಿ ಭಿನ್ನತೆ ಕಾಣಿಸುತ್ತದೆ. ರು-ಋ, ಶ-ಷ-ಸ, ಅಲ್ಪಪ್ರಾಣ-ಮಹಾಪ್ರಾಣ ಮೊದಲಾದವುಗಳ ವ್ಯತ್ಯಯಗಳು ಇದ್ದೇ ಇರುತ್ತವೆ. ಸಂದರ್ಭಕ್ಕೆ ಅನುಸಾರವಾಗಿ ಅರ್ಥಮಾಡಿಕೊಳ್ಳುವ ಅವಕಾಶವಿದ್ದು, ಇವೆಲ್ಲ ಏರುಪೇರುಗಳು ಒಪ್ಪಿತವೇ. ಆಡುಮಾತಿನಲ್ಲಿ ಬಳಸುವ ಧ್ವನಿಗಳ ಈ ಸೌಕರ್ಯವನ್ನು ಪಾರಂಪರಿಕ ಶಿಷ್ಟಭಾಷೆಯ ವರ್ಣಮಾಲೆಗೂ ಅನ್ವಯಿಸಲಾಗದು. ಆಡುಮಾತಿನ ಈ ಅನುಕೂಲವನ್ನು ಬರೆವಣಿಗೆಯ ಭಾಷೆಗೂ ವಿಸ್ತರಿಸಿಕೊಳ್ಳಲು ಹೊರಟರೆ ಭಾಷೆ ಗೊಂದಲದ ಗೂಡಾಗುತ್ತದೆ. ಶಿಷ್ಟಭಾಷೆ ಎನ್ನುವುದು ಸಮಾಜದ ಯಾವುದೋ ಒಂದು ವರ್ಗದ, ಸುಶಿಕ್ಷಿತ ಗುಂಪಿನ ಮಾಧ್ಯಮವಲ್ಲ. ಅದು ಸಾಹಿತ್ಯವಾಹಿನಿಯ ಪ್ರಧಾನ ಅಂಗ; ಸಾರ್ವಜನಿಕ ವ್ಯವಹಾರ, ಶಿಕ್ಷಣ, ಸಮೂಹ ಮಾಧ್ಯಮ ಮೊದಲಾದವುಗಳ ಮೂಲಶಕ್ತಿ.

ಸಾವಿರಾರು ವರ್ಷಗಳ ಕನ್ನಡ ಲಿಪಿಯ ಬೆಳವಣಿಗೆಯನ್ನು ಒಂದು ಕತ್ತರಿಪ್ರಯೋಗದಿಂದ ತಮಗೆ ಬೇಕಾದ ಆಕಾರಕ್ಕೆ ಕುಗ್ಗಿಸಿಕೊಳ್ಳುವ ಕ್ರಮವನ್ನೇನೂ ತಕ್ಷಣಕ್ಕೆ ಒಪ್ಪಬೇಕಾದುದಿಲ್ಲ. ಆದರೆ, ಶಾಲಾ ಪಠ್ಯಕ್ರಮದಲ್ಲಿ ಕನ್ನಡ ಕಲಿಕೆಯನ್ನು ಹಂತಗಳಾಗಿ ವಿಂಗಡಿಸಿ, ಜೊತೆಗೆ ಸುಲಭ ವ್ಯಾಕರಣ, ಸರಳಗನ್ನಡ ರೂಪಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಯುವ ಹಾದಿಯಲ್ಲಿ ಸಂಸ್ಕೃತದ ಅನಗತ್ಯ ಅನುಕರಣೆಯನ್ನು ತಡೆಗಟ್ಟಬಹುದು.

ಕನ್ನಡ ಕಲಿಕೆಯನ್ನು ಹಂತಗಳಾಗಿ ವಿಂಗಡಿಸುವುದೆಂದರೇನು? ಉಚ್ಚಾರಣೆಯ ದೃಷ್ಟಿಯಿಂದಲೂ ಬರೆವಣಿಗೆಯ ದೃಷ್ಟಿಯಿಂದಲೂ ಪ್ರಾರಂಭದಲ್ಲಿ ಮಗುವಿಗೆ ಗೊಂದಲವೆನಿಸುವ ಅಕ್ಷರಗಳನ್ನು ಬೇರೆ ಬೇರೆ ಹಂತಗಳಲ್ಲಿ ಕಲಿಸುವುದು. ಹೀಗೆ ವಿಂಗಡಿಸಬಹುದಾದ ಅಕ್ಷರಗಳು ಯಾವುವು? ಕಾಗುಣಿತವನ್ನು ಜೊತೆಜೊತೆಗೇ ಕಲಿಸುವ ಅವಶ್ಯಕತೆಯಿರುವುದರಿಂದ ಬಹುತೇಕ ಸ್ವರಗಳನ್ನು ಮೊದಲಿಗೇ ಕಲಿಸಬೇಕಾಗುತ್ತದೆ. ಸಂಧ್ಯಕ್ಷರಗಳಾದ ಐ, ಔಕಾರಗಳನ್ನು ಮುಂದಿನ ಹಂತದಲ್ಲಿ ಕಲಿಸಬಹುದು. ಹಾಗೆಯೇ ವಿಸರ್ಗ, ಮಹಾಪ್ರಾಣಗಳನ್ನೂ ಙ, ಞ, ಶ, ಷಕಾರಗಳನ್ನೂ ಮೊದಲ ಹಂತದಲ್ಲಿ ಕಲಿಸುವ ಅಗತ್ಯವಿಲ್ಲ. ಮೊದಲನೆಯ ಪಠ್ಯಪುಸ್ತಕದಲ್ಲಿ ಯಾವ ಯಾವ ಅಕ್ಷರಗಳನ್ನು ಕಲಿಸಲಾಗುತ್ತದೆಯೋ ಆಯಾ ಅಕ್ಷರಗಳನ್ನೊಳಗೊಂಡ ಪದಗಳನ್ನು ಮಾತ್ರ ಪರಿಚಯಿಸಬೇಕಾಗುತ್ತದೆ. ಎರಡನೆಯ ತರಗತಿಗೆ ಬರುವ ವೇಳೆಗೆ ಅಲ್ಪಪ್ರಾಣಗಳೊಡನೆ ಮಹಾಪ್ರಾಣಾಕ್ಷರಗಳನ್ನು ಒಂದೊಂದಾಗಿ ಪರಿಚಯಿಸಿ ಆಯಾ ಅಕ್ಷರಗಳಿರುವ ಸರಳ ಪದಗಳನ್ನು ಕಲಿಸುವುದು ಸೂಕ್ತ. ಈಗಾಗಲೇ ಅಲ್ಪಪ್ರಾಣಗಳ ಪರಿಚಯವಿರುವ ಮಗುವಿಗೆ ಹೊಸದಾಗಿ ಕಲಿಯಬೇಕಾದ ಮಹಾಪ್ರಾಣಗಳ ಉಚ್ಚಾರಣೆ ಹಾಗೂ ಅಕ್ಷರರೂಪಗಳ ಭಿನ್ನತೆ ತಾನಾಗಿಯೇ ತಿಳಿಯುತ್ತದೆ. ಇನ್ನೂ ಮುಂದಿನ ತರಗತಿಯಲ್ಲಿ ಋ, ಅಃ, ಷ, ಙ, ಞ ಮೊದಲಾದವನ್ನು ಆಯಾ ಅಕ್ಷರಗಳನ್ನೊಳಗೊಂಡ ಪದಗಳ ಸಹಿತ ಪರಿಚಯಿಸಬಹುದು.

ಇನ್ನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಶ್ರೀ ಶಂಕರಭಟ್ಟರು ಈ ಮಾಲಿಕೆಯಲ್ಲಿ ಬರೆದಿರುವ ಅನೇಕ ಪುಸ್ತಕಗಳು ನಮ್ಮ ಪಠ್ಯಪುಸ್ತಕ ಸಮಿತಿಯವರಿಗೆ ದಾರಿ ತೋರುವಂಥವು. ವ್ಯಾಕರಣದ ಪಾರಿಭಾಷಿಕ ಶಬ್ದಗಳಿಗೆ ಕನ್ನಡದ್ದೇ ಆದ ಪದಗಳನ್ನು ಆಯ್ದುಕೊಳ್ಳುವುದು ಮೊದಲ ಅಗತ್ಯ. ಒತ್ತಕ್ಷರ ಎಂಬ ಪದವಿರುವಾಗ ಸಂಯುಕ್ತಾಕ್ಷರ ಎಂಬ ಕಠಿಣಪದವನ್ನು ಪರಿಚಯಿಸುವ ಅಗತ್ಯವಿಲ್ಲವಷ್ಟೆ. ಇತ್ತೀಚೆಗೆ ವಿಧ್ಯರ್ಥಕ ಎಂಬ ಪದಕ್ಕೆ ಸಂವಾದಿಯಾಗಿ ಲೇಖಕ ಗಿರಿಯವರು ಕೋರುಲಿ ಎಂಬ ಪದ ಬಳಸಿದಾಗ ಅಚ್ಚರಿಯಾಯಿತು. ನಾವು ಕನ್ನಡವನ್ನು ಕಲಿಯಲು ಕಷ್ಟದ ಹಾದಿಯನ್ನೇ ಹಿಡಿದು ಒದ್ದಾಡುತ್ತಿದ್ದೇವೆಯಲ್ಲ ಎನಿಸಿತು. ಇನ್ನು ಮಕ್ಕಳಿಗೆ ಕನ್ನಡದ ಲೋಪ,ಆಗಮ, ಆದೇಶಸಂಧಿಗಳನ್ನು ಪರಿಚಯಿಸಿದ ನಂತರ, ಸವರ್ಣದೀರ್ಘ, ಗುಣ, ವೃದ್ಧಿ, ಯಣ್, ಜಶ್ತ್ವ ಮೊದಲಾದ ಸಂಸ್ಕೃತ ಸಂಧಿಗಳನ್ನು ಹೇಳಿಕೊಡಬೇಕಾದ ಅಗತ್ಯವಿಲ್ಲ. ಹೀಗೆಯೇ ಸಂಸ್ಕೃತ ವ್ಯಾಕರಣಕ್ಕೆ ನೇರವಾಗಿ ಸಂಬಂಧಿಸಿದ ಬಹುತೇಕ ಅಂಶಗಳನ್ನು ಕೈಬಿಟ್ಟು ಪಠ್ಯಕ್ಕೆ ಪೂರಕವಾದ ಕನ್ನಡ ಭಾಷಾ ವ್ಯಾಕರಣಾಂಶಗಳನ್ನು ಮಾತ್ರವೇ ಉಳಿಸಿಕೊಳ್ಳುವುದರಿಂದ ಕನ್ನಡ ಕಲಿಕೆಗೆ ಸಂಬಂಧಿಸಿದ ದೊಡ್ಡ ತಲೆನೋವು ಕಡಿಮೆಯಾಗುತ್ತದೆ. ಮೇಲಿನ ತರಗತಿಗಳಿಗೆ ಹೋದಂತೆ ಐಚ್ಛಿಕವಾಗಿ ವಿಸ್ತಾರವಾದ ವ್ಯಾಕರಣ ಭಾಷಾಶಾಸ್ತ್ರಗಳನ್ನು ಕಲಿಯುವುದಕ್ಕೆ ಅವಕಾಶ ಇದ್ದೇ ಇದೆ.

ಇಂಥ ಯಾವ ಬದಲಾವಣೆ ಮಾಡುವುದಿದ್ದರೂ ಪಠ್ಯಪುಸ್ತಕಗಳ ಮೂಲಕವೇ ಆಗಬೇಕು ಎನ್ನುವುದನ್ನು ಇನ್ನೊಮ್ಮೆ ಒತ್ತಿ ಹೇಳಬಯಸುತ್ತೇನೆ. ಕನ್ನಡದ ಸ್ಥಿತಿಗತಿಗಳಿಗೆ ಸಂಬಂಧಿಸಿದ ಇಂದಿನ ಗೊಂದಲಗಳಿಗೆ ನಮ್ಮ ಸತ್ವಹೀನ ಪಠ್ಯಪುಸ್ತಕಗಳ ಕೊಡುಗೆ ಕಡಿಮೆಯೇನಲ್ಲ. ಕನ್ನಡ ಭಾಷೆಯ ಸೊಗಸನ್ನು ಸರಳವಾಗಿಯೂ ಸ್ವಾರಸ್ಯಕರವಾಗಿಯೂ ಮಕ್ಕಳಿಗೆ ತಲುಪಿಸದ, ಕನ್ನಡ ಸಾಹಿತ್ಯದ ಅತ್ಯುತ್ತಮ ಮಾದರಿಗಳನ್ನು ಪರಿಚಯಿಸದ ಇಂದಿನ ಕನ್ನಡ ಪಠ್ಯಪುಸ್ತಕಗಳ ಬಗೆಗೆ ಏನನ್ನೂ ಹೇಳದಿರುವುದೇ ಮೇಲು. ಕನ್ನಡ ವ್ಯಾಕರಣವನ್ನು ಸಂಸ್ಕೃತದ ಮೂಲಕವೇ ಕಲಿಯಬೇಕೆಂದು ಒತ್ತಡ ಹೇರುತ್ತಿರುವ ಈ ಪಠ್ಯಪುಸ್ತಕಗಳಿಂದ ಹೊಸ ಪ್ರಯೋಗಗಳನ್ನು ನಿರೀಕ್ಷಿಸಲು ಸಾಧ್ಯವೇ ಆಗುತ್ತಿಲ್ಲ.

ಕನ್ನಡ ಭಾಷೆಯ ಮೂಲಕ ಜನಸಾಮಾನ್ಯರನ್ನು ದಿನದ ಇಪ್ಪತ್ನಾಲ್ಕು ಗಂಟೆಯೂ ತಲುಪುವ ದೊಡ್ಡ ಹೊಣೆಹೊತ್ತ ಸಮೂಹ ಮಾಧ್ಯಮಗಳೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಹೆಚ್ಚಿನ ಗಾಂಭೀರ್ಯ ತೋರಬೇಕಾಗಿದೆ. ಪೂರ್ವಕಾಲದ ಪಂಡಿತರು ಸಂಸ್ಕೃತಕ್ಕೆ ಕೊಟ್ಟ ಆದ್ಯತೆಯನ್ನು ಈ ಮಾಧ್ಯಮಗಳು ಇಂಗ್ಲೀಷಿಗೆ ಅನುಗ್ರಹಿಸಿಬಿಟ್ಟಿವೆ. ಇದರ ಅತಿರೇಕ ತಲುಪಿರುವ ರೇಡಿಯೋ ಖಾಸಗಿ ಎಫ್ ಎಂ ಕೇಂದ್ರಗಳತ್ತ ನೋಡಿ. ಆಡುಭಾಷೆಯ ಸಲುಗೆಯ ಮೂಲಕ ಜನಮನಗಳಿಗೆ ತಲುಪುವ ಉತ್ಸಾಹ ತೋರತೊಡಗಿರುವ ಖಾಸಗಿ ಕೇಂದ್ರಗಳು ಕನ್ನಡವನ್ನು ಹಂತಹಂತವಾಗಿ ಕೊಲ್ಲತೊಡಗಿವೆ. ಆಕಾಶವಾಣಿಯಂಥ ಮಾಧ್ಯಮವು ಆಡುಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು ಶಿಷ್ಟಭಾಷೆಯ ಗಾಂಭೀರ್ಯವನ್ನೇ ಸದಾಕಾಲ ಅನುಸರಿಸುತ್ತಿರಬೇಕೆನ್ನುವುದು ನನ್ನ ಮಾತಿನ ಅರ್ಥವಲ್ಲ. ಕಾರ್ಯಕ್ರಮದ ಉದ್ಘೋಷಕರೂ, ವಾರ್ತಾಪ್ರಸಾರದಂತಹ ಶಿಸ್ತು, ಗಾಂಭೀರ್ಯವನ್ನು ಅಪೇಕ್ಷಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರೂ ಸರಳ ಗ್ರಂಥಸ್ಥ ಭಾಷೆಯಲ್ಲೇ ವಿಷಯವನ್ನು ಪ್ರಸ್ತುತಪಡಿಸುವುದು ಅಪೇಕ್ಷಣೀಯ. ಹಿಂದೆ, ದೂರದರ್ಶನವಿಲ್ಲದಿದ್ದ ಕಾಲದಲ್ಲಿ, ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ವಾರ್ತೆಗಳೂ ಅವನ್ನು ಓದುತ್ತಿದ್ದವರೂ ಜನಮಾನಸದಲ್ಲಿ ಇಂದಿಗೂ ಮೆಚ್ಚುಗೆ ಪಡೆದಿದ್ದಾರೆ. ಅದೇ ಪ್ರಮಾಣದ ಜನಪ್ರಿಯತೆಯನ್ನು ಪಡೆದ ಕಾರ್ಯಕ್ರಮಗಳಲ್ಲಿ ಎ. ಎಸ್. ಮೂರ್ತಿ ಪ್ರಸ್ತುತ ಪಡಿಸುತ್ತಿದ್ದ ಈರಣ್ಣನ ಸಂಭಾಷಣೆ, ಧಾರವಾಡ ಆಕಾಶವಾಣಿಯ ಗ್ರಾಮಸ್ಥರಿಗಾಗಿ ಕಾರ್ಯಕ್ರಮದ ಉತ್ತರ ಕರ್ನಾಟಕದ ಆಡುಭಾಷೆಯ ಸೊಗಡು ನೆನಪಾಗುತ್ತವೆ. ತಪ್ಪು ತಪ್ಪಾದ ಕನ್ನಡದಲ್ಲಿ ಕೆಟ್ಟ ಇಂಗ್ಲೀಷ್ ಬೆರೆಸಿ ಮಾತನಾಡುವ ಇಂದಿನ ಖಾಸಗಿ ರೇಡಿಯೋ ಕೇಂದ್ರಗಳ ಉದ್ಘೋಷಕರಿಗೆ ತಾವು ದೊಡ್ಡ ಸಮುದಾಯದೊಡನೆ ಸಂವಹನ ನಡೆಸಬೇಕಾದವರೆಂಬ, ಮಹತ್ವದ ಜವಾಬ್ದಾರಿಯುಳ್ಳವರೆಂಬ ಪ್ರಜ್ಞೆಯೇ ಇಲ್ಲದಿರುವುದು ಅಚ್ಚರಿ ಹುಟ್ಟಿಸುತ್ತದೆ. ಕನ್ನಡ ಭಾಷೆಯನ್ನು ಕುರಿತ ಅವಜ್ಞೆಗೆ ಈ ರೇಡಿಯೋ ಕೇಂದ್ರಗಳ ಕೊಡುಗೆಯೂ ಅಪಾರವಾಗಿದ್ದು ಅಪಾಯದ ಮಟ್ಟ ಮುಟ್ಟಿದೆ. ಇದೇ ಮಾತು ಹಲವು ಟೆಲಿವಿಷನ್ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ.

ಕನ್ನಡದಂತೆಯೇ ತಮಿಳು, ತೆಲುಗು ಮುಂತಾದ ಭಾಷೆಗಳಲ್ಲೂ ಪ್ರಾದೇಶಿಕ ಪ್ರಭೇದಗಳಿದ್ದೇ ಇವೆ. ಆದರೆ, ಸಾರ್ವಜನಿಕ ಸಂಪರ್ಕಕ್ಕೆ ಸಂಬಂಧಿಸಿದಂತೆ ಎಲ್ಲ ಭಾಷೆಗಳೂ ಸಾಂಪ್ರದಾಯಕ ಶಿಷ್ಟಭಾಷೆಯೊಂದನ್ನು ಅನುಸರಿಸಿಕೊಂಡು ಬಂದಿವೆ. ವೃತ್ತಪತ್ರಿಕೆಯ ಅಂಕಣವಿರಲಿ, ರೇಡಿಯೋ ಸುದ್ದಿವಾಚನವಿರಲಿ, ಪಠ್ಯಪುಸ್ತಕದ ಲೇಖನವಿರಲಿ ಅದು ಶುದ್ಧವೂ ಸರಳವೂ ಆದ ಭಾಷಾರೂಪವೊಂದನ್ನು ಬಳಸುವುದು ಬಹುಮುಖ್ಯ. ಇದಕ್ಕೆ ಜಾತೀಯ ಇಲ್ಲವೇ ಪ್ರಾದೇಶಿಕ ಭೇದಗಳಾಗಲಿ, ಆಡುಮಾತಿನ ಸಲುಗೆಸೌಕರ್ಯಗಳಾಗಲಿ ವ್ಯಾಕರಣದಿಂದ ವಿನಾಯಿತಿಗಳಾಗಲಿ ಅನ್ವಯಿಸುವುದಿಲ್ಲ. ಈ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು ಆಯಾ ಕಾಲದ ಜನರು ತಮತಮಗೆ ತೋಚಿದ ರೀತಿಯಲ್ಲಿ ಬದಲಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಈ ಭಾಷೆ ಸಂಸ್ಕೃತ, ಇಂಗ್ಲೀಷ್ ಮುಂತಾದ ಭಾಷೆಗಳಿಂದ ನೆರವು ಪಡೆದಿರಬಹುದು. ಆದರೆ ಕನ್ನಡವು ಅನ್ಯಭಾಷೆಯ ಹಿಡಿತಕ್ಕೆ ಸಿಲುಕಿಬಿಟ್ಟಿರುವುದೆಂದು ಭಾವಿಸಬೇಕಾಗಿಲ್ಲ. ಅಂತಹ ಪ್ರಭಾವ ನಮ್ಮ ಭಾಷೆಯ ವ್ಯವಹೃತಿಯಲ್ಲಿ ಅನಗತ್ಯವಾಗಿ ಹೆಚ್ಚುತ್ತಿದೆಯೆಂದು ತೋರಿದಲ್ಲಿ ಜಾಗರೂಕತೆಯಿಂದ ಸರಿಪಡಿಸುವ ಸ್ವಾತಂತ್ರ್ಯ ನಮಗಿದ್ದೇ ಇದೆ. ಅದನ್ನು ಬಿಟ್ಟು ಶಿಷ್ಟಭಾಷೆಯ ಬುಡಕ್ಕೇ ಕೊಡಲಿಯಿಟ್ಟು ದುರ್ಬಲಗೊಳಿಸುವ ಪ್ರಯತ್ನವು, ಭಾಷೆಯ ಹಾಗೂ ಭಾಷಿಕರ ದೀರ್ಘಕಾಲೀನ ಸ್ವಾಸ್ಥ್ಯದ ದೃಷ್ಟಿಯಿಂದ ಸಾಧುವಲ್ಲ.

[ಕಣಜದಲ್ಲಿ ಪ್ರಕಟವಾಗುವ ಅಂಕಣ ಬರಹಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಆಯಾ ಅಂಕಣಕಾರರದು]