ಕರ್ನಾಟಕದ ಹಲವು ಶಾಸನಗಳು ಪ್ರಾಚೀನ ಕರ್ನಾಟಕದ ವ್ಯಾಪಾರ, ವಹಿವಾಟು, ವಾಣಿಜ್ಯ ಇತ್ಯಾದಿಗಲನ್ನು ಉಲ್ಲೇಖಿಸುತ್ತವೆ. ಇಲ್ಲಿ ಬಹಳ ಮುಖ್ಯವಾದದ್ದು ಅಂದಿನ ಆರ್ಥಿಕ ವ್ಯವಸ್ಥೆ. ರಾಜ್ಯದ ಆದಾಯ ಖರ್ಚುಗಳು. ಇಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ ಸಂಸ್ಥೆಗಳು ಎಂದರೆ ವರ್ತಕ ಸಮೂಹಗಳು. ಇವರಲ್ಲಿ ನಾನಾ ಗುಂಪುಗಳುಂಟು. ಇವರ ವ್ಯಾಪಾರದ ರೀತಿ ನೀತಿಗಳು, ವಲಸೆ, ಮಾರಾಟವಾಗುತ್ತಿದ್ದ ವಸ್ತುಗಳು. ಅವುಗಳ ಬೆಲೆ, ಬಲೆಯ ನಿಯಂತ್ರಣ, ಅವುಗಳನ್ನು ಎಲ್ಲಿ ಕೊಳ್ಳುತ್ತಿದ್ದರು, ಎಲ್ಲಿ ಮಾರಾಟ ಮಾಡುತ್ತಿದ್ದರು. ಅದಕ್ಕೆಇದ್ದ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ವಿವರಗಳನ್ನು ಕುರಿತು ಸಂಶೋಧನೆಯನ್ನು ನಡೆಸಲು ಅನೇಕ ಅವಕಾಶಗಳುಂಟು. ಇವುಗಳ ಹಿನ್ನೆಯಲ್ಲಿ ಅವರ ಜೀವನ ವಿಧಾನ, ಅದರಿಂದ ಬರುತ್ತಿದ್ದ ರಾಜ್ಯದ ಆದಾಯ, ಅವುಗಳಿಗೆ ವಿಧಿಸುತ್ತಿದ್ದ ತೆರಿಗೆ ಇತ್ಯಾದಿಗಳನ್ನು ಕುರಿತು ಸಮಗ್ರವಾದ ಅಧ್ಯಯನಗಳು ನಡೆಯಬೇಕಿದೆ. ಆರ್. ಸಿ. ಹಿರೇಮಠ ಅವರ ‘ಶಾಸನಗಳಲ್ಲಿ ಕನಾಟಕದ ವರ್ತಕರು’ ಕೃತಿಯನ್ನು ಬಿಟ್ಟರೆ ಕೆಲವು ಬಿಡಿ ಲೇಖನಗಳನ್ನು ಮಾತ್ರ ಕಾಣಬಹುದು.

ರಾಜ್ಯದ ಆದಾಯವು ತೆರಿಗೆಗಳಿಂದ ಮತ್ತು ಇತರ ಮೂಲಗಳಿಂದ ಬರುತ್ತಿದ್ದಿತ್ತು. ಅಪಾರವಾದ ಧನ ರಾಜ್ಯಕ್ಕೆ ಸೇರುತ್ತಿತ್ತು. ಅಟ್ಟದೆರೆ, ಅಡಕೆಲುವಣ, ಅಡೆಗರ್ಚು, ಅಡ್ಡಗೆರೆ, ಅರುವಣ, ಊರುಟ್ಟಿಗ, ಉಟ್ಟಸಾಂತದರೆ, ಒಸಗೆ, ಕತ್ತರಿವಣ, ಕಂದಿ, ಕನ್ನಡಿವಣ, ಕವಣಾಯ, ಕವರ್ತೆ, ಕಳ್ಳವಲಿಕೆ, ಕಾಣಿಕೆ, ಕಿರುಕುಳ, ಕುಮಾರ ಗದ್ಯಾಣ, ಕುರುಂಬ ದೆರೆ, ಕುಳಿಯ ಸುಂಕ, ಕೊಡತಿವಣ, ಗಾಣದ ತೆರೆ, ತಲರಸುಂಕ, ತಿಪ್ಪೆಸುಂಕ, ತುಪ್ಪದೆರೆ, ಬಾಲವಣ, ಇಂಥದೇ ನೂರಾರು ತೆರಿಗೆಗಳನ್ನು ಶಾಸನಗಳು ಉಲ್ಲೇಖಿಸುತ್ತವೆ. ಇವೆಲ್ಲಾ ರಾಜ್ಯದ ಆದಾಯದ ಮೂಲಗಳು. ತೆರಿಗೆಗಳ ಶಬ್ದ ವಿವೇಚನೆ, ಕಾಲ, ರಾಜರ ವಿವರ, ಯಾರಿಗೆ ವಿಧಿಸುತ್ತಿದ್ದರು ಇತ್ಯಾದಿಗಳ ಕುರಿತು ಪ್ರತ್ಯೇಕ ಅಧ್ಯಯನ ಮಾಡಬಹುದಾಗಿದೆ.

ತೆರಿಗೆಗಳನ್ನು ಯಾರು ಸಂಗ್ರಹಿಸುತ್ತಿದ್ದರು. ಯಾವ ಯಾವ ಕಾರಣಗಳಿಗಾಗಿ ಯಾರಿಂದ ಸಂಗ್ರಹಿಸುತ್ತಿದ್ದರು. ಯಾರು ಯಾರಿಗೆ ಏಕೆ ವಿನಾಯಿತಿಗಳು ಇದ್ದವು ಎನ್ನುವುದನ್ನು ಪರಿಶೀಲಿಸಬೇಕಾಗಿದೆ. ಉದಾ: ಸುಂಕವೆರ್ಗ್ಗಡೆ, ಇತರ ಅಧೀನದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ಉಲ್ಲೇಖ ಸಿಗುತ್ತವೆ. ಇಂಥದೇ ಸುಂಕ ಸಂಗ್ರಹಿಸುವ ಅಧಿಕಾರಿವರ್ಗಗಳನ್ನು ಗಮನಿಸಬೇಕು. ತೆರಿಗೆ ಸಂಗ್ರಹಿಸುವ ವಿಧಾನ, ಅವರ ವೇತನಗಳು ಗೌಡ, ಶಾನುಭೋಗ ಇತ್ಯಾದಿ. ಗಾವುಂಡ ಸುಂಕ-ಸಂಗ್ರಹಿಸಿದ್ದರಲ್ಲಿ ಒಂದಿಷ್ಟು ಭಾಗ ಇರಬಹುದು. ರೈತರಿಂದ ಬಹುಶಃ ಸುಗ್ಗಿಯ ಕಾಲದಲ್ಲಿ ಸುಂಕಗಳನ್ನು ಧಾನ್ಯಗಳನ್ನು ಸಂಗ್ರಹಿಸುತ್ತಿದ್ದಿರಬೇಕು.

ಖರ್ಚಿನ ವಿಧಾನಗಳು : ಹೀಗೆ ತೆರಿಗೆಗಳಿಂದ ಬಂದ ರಾಜ್ಯದ ಆದಾಯವನ್ನು ರಾಜನು ಪ್ರಜೆಗಳಿಗಾಗಿ ವ್ಯಯ ಮಾಡುತ್ತಿದ್ದನು. ಕೋಟೆಕಟ್ಟಲಿಕ್ಕೆ, ಸೈನ್ಯಕ್ಕೆ ಆಯುಧಗಳಿಗೆ, ಅಧಿಕಾರಿಗಳ ವೇತನಕ್ಕೆ, ಸಾರ್ವಜನಿಕ ಕೆಲಸ ಕಾರ್ಯಗಳಾದ ಕೆರೆ ಕಟ್ಟೆ ಕಾಲುವೆಗಳಿಗೆ, ಅಣೆಕಟ್ಟುಗಳಿಗೆ, ರಸ್ತೆ, ಸೇತುವೆಗಳಿಗೆ, ದೇವಾಲಯಗಳ ನಿರ್ಮಾಣಕ್ಕೆ, ರಿಪೇರಿಗೆ, ಪೂಜಾ ವಿಧಾನಗಳಿಗೆ, ಅಂಗಭೋಗ ರಂಗಭೋಗಗಳಿಗೆ, ದಾನ-ದತ್ತಿಗಳಿಗೆ, ಅಗ್ರಹಾರಗಳಿಗೆ, ವಿಧ್ಯಾಭ್ಯಾಸಕ್ಕೆ, ಸತ್ರಗಲಿಗೆ, ಕ್ಷಾಮ-ಬರಗಾಲದ ಸಂದರ್ಭದಲ್ಲಿ ಆಶ್ರಯದಾತರಿಗೆ, ಕವಿಗಳಿಗೆ, ಕಲಾವಿದರಿಗೆ, ವಿದ್ವಾಂಸರಿಗೆ, ಹಾಗೆಯೇ ಕಲೆ, ಸಾಹಿತ್ಯ ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಅರಮನೆಯ ಖರ್ಚು ವೆಚ್ಚಗಳಿಗೆ… ಹೀಗೆ ದೊಡ್ಡ ಪಟ್ಟಿ ಬೆಲೆಯುತ್ತಾ ಹೋಗುತ್ತದೆ. ಇವೆಲ್ಲವುಗಳನ್ನೂ ಸಾವಿರಾರು ಶಾಸನಗಳು ತಮ್ಮ ಗರ್ಭದಲ್ಲಿ ಇಟ್ಟುಕೊಂಡು ಸಂಶೋಧಕರಿಗಾಗಿ ಕಾಯುತ್ತಿವೆ.

ವರ್ತಕ ಸಮೂಹಗಳು : ವರ್ತಕ ಸಮೂಹಸಲ್ಲಿ ನಾನಾ ಗುಂಪುಗಲಿದ್ದವು. ಒಂದು ರಾಜ್ಯದ ಅಧ್ಯಯನಕ್ಕೆ ಅಥವಾ ಸಾರ್ವಜನಿಕರ ವ್ಯವಹಾರಗಳಿಗೆ ಇವು ಬಹಳ ಮುಖ್ಯ ಆಗಿದ್ದವು. ಮುಮರಿದಂಡು, ಪಟ್ಟಣಸ್ವಾಮಿ, ನಾನ ದೇಶಿಗಳು, ಉಭಯ ನಾನಾ ದೇಶಿ, ನಖರ, ಅಶೇಷನಕರ, ವಡ್ಡವ್ಯವಹಾರಿ, ಮಹಾವಡ್ಡ ವ್ಯವಹಾರಿ ‘ಐಯ್ಯಾವೊಲೆ ಐನೂರ್ವರು’ ಇತ್ಯಾದಿ ವ್ಯಾಪಾರಿಗಳು ಗುಂಪುಗಳಿದ್ದವು. ಈ ಗುಂಪುಗಳ ಅಥವಾ ಸಂಘಗಳು ಅದರ ಮುಖ್ಯಸ್ಥರನ್ನು ಚುನಾವಣೆಗಲ ಮೂಲಕ ಆಯ್ಕೆ ಮಾಡುತ್ತಿದ್ದವು. ಈ ವರ್ತಕರು ಸ್ಥಳೀಯ ವ್ಯಾಪಾರ, ಅನ್ಯದೇಶಗಳ ವ್ಯಾಪಾರ, ಹೀಗೆ ಅದಕ್ಕೆ ಬೇರೆ ಬೇರೆ ಗುಂಪುಗಳು ಇದ್ದವು. ಉದಾ: ಹೊರದೇಶಗಳಾದ, ಚೋಳ, ಪಾಂಡ್ಯ, ಮಗಧ, ಸೌರಾಷ್ಟ್ರ ಮುಂತಾದ ರಾಜ್ಯಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದವು. ತೇಗ, ಗಂಧ, ರತ್ನ, ಕುದುರೆ, ಆನೆಗಳನ್ನು ಹಡಗುಗಳ ಮೂಲಕ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು.

ಅವರ ಮಾರಾಟ ಮಾಡುತ್ತಿದ್ದ, ಕೊಳ್ಳುತ್ತಿದ್ದ ವಸ್ತುಗಳನ್ನು ಸಾಮಾಗ್ರಿಗಳನ್ನು ದವಸಧಾನ್ಯಗಳನ್ನು ಕತ್ತೆ, ‘ಕೋಣ’ ಬಂಡಿ, ತಲೆ ಮೇಲೆ ಹೊತ್ತೊಯ್ಯವುದು. ಕಡಲಾಚೆಯ ವ್ಯಾಪಾರವಾದರೆ ಹಡಗು ಇತ್ಯಾದಿಗಳ ಮೂಲಕ ಸಾಗಿಸುತ್ತಿದ್ದರು. ಸಾಂಬಾರು ಪದಾರ್ಥಗಳು, ಔಷಧ ಪದಾರ್ಥಗಳು, ಸುವಾಸನಾದ್ರವ್ಯ, ಗಂಧ, ರತ್ನಗಳಿಗೆ ಹೊರದೇಶದಲ್ಲಿ ಬಹಳ ಬೇಡಿಕೆ ಇತ್ತು ಎಂದು ಕಂಡುಬರುತ್ತದೆ. ಆಶ್ಚರ್ಯವೆಂದರೆ ಈ ಸಮೂಹಗಳು ಪ್ರತ್ಯೇಕವಾದ ‘ಸೈನ್ಯವನ್ನೆ’ ಹೊಂದಿದ್ದವು ಎಂಬುದು ಪ್ರಭುತ್ವದ ಮೇಲೂ ಹಿಡಿತವಿಟ್ಟುಕೊಳ್ಳುವಷ್ಟು ಪ್ರಭಲರಾಗಿದ್ದರು. ಇವತ್ತಿನ ಬಂಡವಾಳಗಾರರಿಗೆ ಏನೂ ಕಡಿಮೆ ಇರಲಿಲ್ಲವೆನ್ನಬಹುದು.

ಮಾರುಕಟ್ಟೆ ಸಂತೆಯಲ್ಲಿ ಮಾರಾಟವಾಗುತ್ತಿದ್ದ ವಸ್ತುಗಳು : ಇಷ್ಟೊಂದು ಬೃಹದಾಕಾರವಾಗಿ ಬೆಲೆದ ವರ್ತಕ ಸಮೂಹಗಳು ತಮ್ಮ ವ್ಯಾಪಾರಗಳನ್ನು ಸಂತೆ ಮಾರುಕಟ್ಟೆಗಳ ಮೂಲಕವೇ ಮಾಡುತ್ತಿದ್ದರು. ಅಲ್ಲಿ ನಾನಾ ರೀತಿಯ ನೂರಾರು ಒಡವೆ ವಸ್ತುಗಳು ಮಾರಾಟವಾಗುತ್ತಿದ್ದವು. ಜನಸಾಮಾನ್ಯರು, ವ್ಯಾಪಾರಿಗಳು, ಅಧಿಕಾರಿಗಳು ಎಲ್ಲರಿಗೂ ಮುಕ್ತ ಅವಕಾಶವಿತ್ತು. ಹಾಗಾಗಿ ಇಲ್ಲಿ ಮಾರಾಟವಾಗುತ್ತಿದ್ದ ವಸ್ತುಗಳನ್ನು ಹೀಗೆ ಪಟ್ಟಿ ಮಾಡಬಹುದು. ಹಣ್ಣು, ಹಂಪಲು, ಇಂದ್ರನೀಲ, ಚಂದ್ರಕಾಂತ, ಮುತ್ತು, ಮಾಣಿಕ್ಯ, ವಜ್ರ, ರತ್ನ, ಏಲಕ್ಕಿ, ಲವಂಗ, ಶ್ರೀಗಂಧ, ಕರ್ಪೂರ, ಕಸ್ತೂರಿ, ಕುಂಕುಮ, ಅರಿಷಿಣ, ಮೆಣಸು, ಜೀರಿಗೆ, ಸಾಸಿವೆ, ಸಕ್ಕರೆ, ಇಂಗು, ಶುಂಠಿ, ಅಕ್ಕಿ ಬೆಲ್ಲ, ನಾರುಬೇರು, ಉಪ್ಪು, ಹತ್ತಿ, ಅಡಿಕೆ ಎಲೆ, ಭತ್ತ, ರಾಗಿ, ಗೋಧಿ ಇತ್ಯಾದಿ ಹಾಗೆಯೇ ನೂಲು, ಹಲಗೆ, ಬಿದಿರು, ಲೋಹ, ವಿಗ್ರಹ, ಬಲಪ, ಓಲೆಗರಿ… ಇನ್ನು ಹೀಗೆ ಹಲವಾರು ಪಡಿ ಪದಾರ್ಥಗಳು ಮಾರಾಟವಾಗುತ್ತಿದ್ದುದನ್ನು ಕನ್ನಡ ಶಾಸನಗಳು ತಿಳಿಸುತ್ತವೆ.

ಇವುಗಳಿಗಿದ್ದ ಸುಂಕ, ಸ್ಥಳಗಳು, ಬೆಲೆಗಳು, ಅದರ ಅಯೋಜನೆ, ರಾಜರಿಂದ ರಾಜರಿಗೆ, ಕಾಲದಿಂದ ಕಾಲಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಅವು ಹೇಗೆ ಭಿನ್ನವಾಗಿದ್ದವು ಇಂಥದೆ ಹತ್ತಾರು ಪ್ರಶ್ನೆಗಳನ್ನು ಇಟ್ಟುಕೊಂಡು ಸಂಶೋಧನೆ ನಡೆಸುವುವರಿಗೆ ವಿಪುಲವಾದ ಅವಕಾಶ, ಆಕರ ಸಾಮಾಗ್ರಿ ಇಲ್ಲಿ ಮಡುಗಟ್ಟಿ ಕುಂತಿದೆ.