ಪ್ರಾಚೀನ ಕರ್ನಾಟಕದ ಯುದ್ಧ ಕಲೆಯನ್ನು ಕುರಿತು ಸಂಶೋಧನೆ ನಡೆಸುವುದು ಎಂದರೆ ವೀರಯುಗವನ್ನು ದರ್ಶನ ಮಾಡಿದಂತೆ. ಕರ್ನಾಟಕದಲ್ಲಿ ಆಳರಸರು ಮಾಡಿದ ನೂರಾರು ಯುದ್ಧಗಳು ಪ್ರಭುತ್ವವನ್ನು, ಜನಸಾಮಾನ್ಯರನ್ನು, ಸೈನಿಕರನ್ನು ಎಷ್ಟು ನೆಮ್ಮದಿ ಕೆಡಿಸಿದ್ದವು ಎಂದು ಅರಿಯಬೇಕಾಗುತ್ತದೆ. ಯುದ್ಧಗಳಿಗಾಗಿಯೇ ನಾಡಿನ ಸಂಪತ್ತು ನಾಶವಾಗುತ್ತಿತ್ತು. ಇದರಿಂದ ಆಗುತ್ತಿದ್ದ ಪ್ರಯೋಜನವನ್ನು ಏನು? ಎನ್ನುವ ಅನೇಕ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ. ಯುದ್ಧಭೂಮಿ, ರಥಗಳು, ಗಜಸೇನೆ, ಅಶ್ವಸೇನೆ, ಪದಾತಿಗಳ ಮಾಹಿತಿಯನ್ನು ಶಾಸನಗಳು ಬಹಳಷ್ಟು ಉಲ್ಲೇಖಿಸುತ್ತವೆ. ಹಾಗೆಯೆ ಆಯುಧಗಳು ಬಿಲ್ಲು, ಬಾಣ, ಗುರಾಣಿ, ಕವಚಗಳು, ಯುದ್ಧ ವಾದ್ಯಗಳು, ಧ್ವಜಗಳು, ಸೊಡಿಮದ್ದು, ವೈದ್ಯಕೀಯ ಚಿಕಿತ್ಸೆ ಇಂಥವೇ ನೂರಾರು ರೀತಿಯ ವಿವರಗಳನ್ನು ಇಲ್ಲಿಮದ ಹೆಕ್ಕಿ ತೆಗೆಯಲು ಅವಕಾಶವಿದೆ.

ಯುದ್ಧದ ಪ್ರಭೇದಗಳನ್ನು ಗಮನಿಸಿದರೆ ನಾನಾ ರೀತಿಯ ಯದ್ಧಗಳು ಕಂಡುಬರುತ್ತವೆ. ತುರುಗಾಳಗ, ಪೆಣ್ಬುಯಲ್, ಉರಳಿವು, ಗಡಿಯುದ್ಧ, ಕೋಟೆಕಾಳಗ… ಇತ್ಯಾದಿ ಈ ಪದಗಳ ಹಿನ್ನಲೆ, ಶಬ್ದವಿವೇಚನೆ ಕಾರಣ, ಪರಿಣಾಮಗಳನ್ನು ಕುರಿತು ಸಮಗ್ರ ಅಧ್ಯಯನಗಳು ನಡೆಯಬೇಕಿದೆ. ಇವುಗಳನ್ನು, ರಾಷ್ಟ್ರಕೂಟ ಪೂರ್ವ, ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯ, ಹೊಯ್ಸಳ ವಿಜಯನಗರ ಕಾಲ, ಪಾಳೆಗಾರರ ಕಾಲದ ಯುದ್ಧಗಳೆಂದು ವಿಂಗಡಿಸಿಕೊಂಡು ಅಧ್ಯಯನ ಮಾಡಬಹುದು. ಹಾಗೆಯೇ ಪ್ರದೇಶಗಳನ್ನಾಧಾರಿಸಿಯು, ಕಾಲಘಟ್ಟಗಳನ್ನಾಧರಿಸಿಯೂ ಅಧ್ಯಯನ ಮಾಡಬಹುದು. ಸಾವಿರಾರು ಶಾಸನಗಳು ನಾಡಿನಾದ್ಯಂತ ನಡೆದಿದ್ದ ಈ ಯುದ್ಧಗಳು ಯುದ್ಧಸಿದ್ಧತೆ, ಯುದ್ಧ ಕಲೆಗಳ ಬಗ್ಗೆ ಮಾಹಿತಿ ನೀಡುತ್ತವೆ. ಅವುಗಳನ್ನು ಈ ಕಾಲದ ಯುದ್ಧ ವಿರೋಧಿ ನಿಲುವಿನ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ.