ಈಗಾಗಲೇ ಕರ್ನಾಟಕದ ವೀರಗಲ್ಲುಗಳು (ಆರ್. ಶೇಷಶಾಸ್ತ್ರಿ), ‘ಕರ್ನಾಟಕದ ಸತಿಪದ್ಧತಿ’ ಮಹಾಸತಿ ಆಚರಣೆ (ಬಸವರಾಜ ಸಿ. ಕಲ್ಗುಡಿ) ಇಂಥ ರಚನೆ ಗೊಂಡಿದ್ದರೂ, ಕರ್ನಾಟಕದ ತುಂಬಾ ಹರಡಿಕೊಂಡಿರುವ ಸಾವಿರಾರು ವೀರಗಲ್ಲು, ಮಾಸ್ತಿಕಲ್ಲುಗಳನ್ನು ಗಮನಿಸಿದರೆ ಈ ಅಧ್ಯಯನ ಏನೇನೂ ಅಲ್ಲ ಎನಿಸುತ್ತದೆ. ವೀರಗಲ್ಲುಗಳು ಅವುಗಳಿಗೆ ಬಿಟ್ಟ ದಾನ-ದತ್ತಿ-ಮಾಸ್ತಿಕಲ್ಲುಗಳು ಅವುಗಳಿಗೆ ಬಿಟ್ಟ ದಾನ-ದತ್ತಿ, ನಿಷಧಿಕಲ್ಲುಗಳು ಅವುಗಳಿಗೆ ಬಿಟ್ಟ ದಾನದತ್ತಿ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಸಂಶೋಧನೆ ನಡೆಸಲು ಅವಕಾಶವಿದೆ.ವೀರಗಲ್ಲುಗಳ ವಿವಿಧ ಬಗೆಗಳಾದ ತುರುಗೋಳ್, ಪೆಣ್ಬುಯಲ್ ಊರುಳಿವು, ಕೀಳ್ಗಂಟಿ, ಗರುಡಪದ್ಧತಿ ಇತ್ಯಾದಿ ಒಂದೊಂದು ಬಗೆಯೂ ಒಂದೊಂದು ಪ್ರತ್ಯೇಕ ಸಂಶೋಧನಾ ಕ್ಷೇತ್ರಗಳು. ಅಪಾರವಾದ ಶಾಸನ ಸಂಪತ್ತು ಇದಕ್ಕೆ ಬೇಕಾದ ಪೂರಕ ಮಾಹಿತಿಯನ್ನು ಒದಗಿಸುತ್ತವೆ. ಹಾಗೆಯೇ ಆತ್ಮಬಲಿ ಪ್ರಕಾರಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬಹುದು. ಸಿಡಿತಲೆ, ಜೋಳವಾಳಿ, ವೇಳವಾಳಿ, ಸತಿಪದ್ಧತಿ, ಅಗ್ನಿಪ್ರವೇಶ ಜಲಪ್ರವೇಶ ಇನ್ನು ಹತ್ತು ಹಲವು ಬಗೆಯ ವೀರಗಲ್ಲುಗಳು, ಆತ್ಮ ಬಲಿ ಕಲ್ಲುಗಳು ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಶಾಸನಗಳಲ್ಲಿ ಅಂತರ್ಗತವಾಗಿವೆ. ಅವುಗಳ ಹಿಂದಿರುವ ನೋವಿನ ನೆಲೆಗಳನ್ನು ಗುರುತಿಸುವ ಕೆಲಸ ಸಂಶೋಧಕನಿಂದ ಆಗಬೇಕಿದೆ.

ವೀರಗಲ್ಲು, ಮಾಸ್ತಿಕಲ್ಲುಗಳ ಪಾಠ ಮತ್ತು ಶಿಲ್ಪವನ್ನು ಗಮನಿಸಿದ ಅಧ್ಯಯನ ಆಗಬೇಕಿದೆ. ಹಾಗೆಯೇ ವೀರಗಲ್ಲುಗಳು- ಮಾಸ್ತಿಕಲ್ಲುಗಳ ಹಿಂದಿರುವ ಕಾರಣಗಳನ್ನು ಆಧರಿಸಿ ಅಧ್ಯಯನವನ್ನು ಮಾಡಬಹುದು ಉದಾ: ಧಾರ್ಮಿಕ ಕಾರಣಗಳು, ಸಾಮಾಜಿಕ ಕಾರಣಗಳು, ರಾಜಕೀಯ ಕಾರಣಗಳನ್ನು, ಅವುಗಳ ಹಿಂದಿರುವ ಉದ್ದೇಶಗಳನ್ನೂ ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಬಹುದಾಗಿದೆ. ಹಾಗೆಯೇ ರಾಜಮನೆತನಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಬಹುದು. ಉದಾ: ಕದಂಬರ ಕಾಲದ ವೀರಗಲ್ಲುಗಳು, ವಿಜಯನಗರ ಕಾಲದ ವೀರಗಲ್ಲುಗಳು, ರಾಷ್ಟ್ರಕೂಟರ ಕಾಲದ ವೀರಗಲ್ಲುಗಳು, ವಿಜಯನಗರದ ಕಾಲದ ವೀರಗಲ್ಲುಗಳು ಆ ನಂತರದ ಪಾಳೆಗಾರರ ಕಾಲದ ವೀರಗಲ್ಲುಗಳು ಇತ್ಯಾದಿಯಾಗಿ ಇದೇ ಮಾದರಿಯಲ್ಲಿ ಮಹಾಸತಿ ಆಚರಣೆಯನ್ನು ಅಭ್ಯಾಸ ಮಾಡಬಹುದಾಗಿದೆ.

ಹಾಗೆಯೇ ವೀರರ ಸ್ಮಾರಕಗಳು, ಅದಕ್ಕಾಗಿ ಬಿಟ್ಟ, ದಾನ-ದತ್ತಿ, ಕೊಡುಗೆಗಳು, ನತ್ತರಪಟ್ಟ, ನತ್ತರಗೂಡುಗೆ, ರಕ್ತಕೊಡುಗೆ ಉಂಬಳಿ ಇತ್ಯಾದಿ ವಿವರಗಳನ್ನು ಕನ್ನಡ ಶಾಸನಗಳು ತಿಳಿಸುತ್ತವೆ. ಅದಕ್ಕಾಗಿ ಸಂಶೋಧಕರಿಗಾಗಿ ಕಾದುಕುಳಿತಿವೆ. ಅದನ್ನು ಉಪಯೋಗಿಸಿಕೊಂಡು ಹೊಸ ಸಾಧ್ಯತೆಗಳನ್ನು ಸೃಷ್ಟಿಸಬಹುದು.