ನಾಣ್ಯ ಪದ್ದತಿ, ವಸ್ತು ವಿನಿಮಯ ಪದ್ಧತಿ ಕರ್ನಾಟಕದಲ್ಲಿ ಇತ್ತು. ಆದರೆ ಇದರ ಬಗ್ಗೆ ಹೆಚ್ಚು ಅಧ್ಯಯನಗಳೇ ನಡೆದಿಲ್ಲ. ವಿವಿಧ ವಸ್ತುಗಳು, ದವಸ, ಧಾನ್ಯಗಳ ಬೆಲೆಗಳಿಗೆ ಅನುಗುಣವಾಗಿ ಈ ವಿನಿಮಯ ಪದ್ಧತಿ ನಡೆಯುತ್ತಿತ್ತು. ಅದರಂತೆ ನಾಣ್ಯ ಪದ್ಧತಿಯೂ ಕರ್ನಾಟಕದ ವ್ಯವಹಾರ, ವಹಿವಾಟುಗಳ ಮೇಲೆ ಹಿಡಿತ ಸಾಧಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ನಾಣ್ಯವನ್ನು ಟಂಕಿಸುತ್ತಿದ್ದ ಟಂಕಸಾಲೆಗಳು ಅಥವಾ ಕೇಂದ್ರಗಳು ಅಥವಾ ಕಮ್ಮಟಗಳನ್ನು ‘ಅಚ್ಚಿನ ಟಂಕಸಾಲೆ’ ಎಂದು ಕರೆಯುತ್ತಿದ್ದರು. ಕರ್ನಾಟಕದ ಅನೇಕ ಕಡೆ ಈ ಟಂಕಸಾಲೆಗಳು ಇದ್ದವು ಎನ್ನುವುದನ್ನು ಈಗಾಗಲೇ ತಿಳಿದಿದ್ದೇವೆ. ಉದಾ: ಲೊಕ್ಕಿಗುಂಡಿ>ಲಕ್ಕುಂಡಿ ಆಗಿರುವುದು ಇಂದಿನ ಗದಗ್ ಜಿಲ್ಲೆಯ ಲಕ್ಕುಂಡಿ, ಸೊಂಡಿ, ದೊರಸಮುದ್ರ ಇನ್ನೂ ಮುಂತಾದ ಟಂಕಸಾಲೆಗಳು ಕರ್ನಾಟಕದಲ್ಲಿ ಕಂಡುಬರುತ್ತದೆ.

ಕೆಲವು ದೇವಸ್ಥಾನಗಳಲ್ಲಿಯೂ ನಾಣ್ಯ ಟಂಕಿಸುತ್ತಿದ್ದರು ಉದಾ: ಬಳ್ಳಾರಿ ತಾಲೂಕಿನ ಕೊಟಿರೊಣೆ ( ಕುಡಿತಿನಿ) ಯ ಕುಮಾರಸ್ವಾಮಿ ದೇವಸ್ಥಾನದಲ್ಲಿ ಈ ಕೇಂದ್ರವಿದ್ದಿತು ಎಂದು ಶಾಸನಗಳಿಂದ ತಿಳಿದುಬರುತ್ತದೆ. ವಿವಿಧ ರಾಜರ ಕಾಲದಲ್ಲಿದ್ದ ನಾಣ್ಯಗಳ ವಿಶೇಷತೆ, ಸ್ವರೂಪ, ಅವುಗಳ ಮೌಲ್ಯ, ಅದಕ್ಕೆ ಕಾರಣಗಳು ಹಾಗೂ ಯಾರು ತಯಾರಿಸುತ್ತಿದ್ದರು. ಅದರ ಮೇಲ್ವಿಚಾರಣೆಯನ್ನು ಯಾರು ನೋಡಿಕೊಳ್ಳುತ್ತಿದ್ದರು ಎಂಬುದೂ ಅಷ್ಟೇ ಮುಖ್ಯ ವಿಚಾರ. ಅಲ್ಲಿ ತಯಾರಾಗುತ್ತಿದ್ದ ನಾಣ್ಯ ನೋಟು ತಯಾರಿಕೆ, ಬೆಳ್ಳಿ ನಾಣ್ಯ, ಬಂಗಾರದ ನಾಣ್ಯಗಳು ಕಾಗದದ ನೋಟುಗಳು, ಚರ್ಮದ ನಾಣ್ಯ ಅಥವಾ ನೋಟು…. ಇತ್ಯಾದಿ. ಅದಕ್ಕಾಗಿ ಬಳಕೆಯಾಗುತ್ತಿದ್ದ ಕಚ್ಚಾ ಸಾಮಗ್ರಿಗಳು, ಅವುಗಳನ್ನು ನಿರ್ವಹಿಸುತ್ತಿದ್ದ ಅಧಿಕಾರಿಗಳ ಮುದ್ರೆಗಳು ಇತ್ಯಾದಿ ಅಧ್ಯಯನ ಕುತೂಹಲಕಾರಿಯಾದದ್ದು. ಇವುಗಳನ್ನು ಕುರಿತು ಶಾಸನಗಳು ಏನನ್ನು ಹೇಳುತ್ತವೆ ಎಂದು ಸಂಶೋಧನೆ ಮಾಡಬೇಕಾಗಿದೆ. ಸಂಶೋಧಕರು ಇದು ಕಷ್ಟ ಸಾಧ್ಯದ ಕ್ಷೇತ್ರವೆಂದು ಅಲಕ್ಷಿಸಿದ್ದಾರೆ.

ವಿವಿಧ ನಾಣ್ಯ, ನೋಟುಗಳ ಹೆಸರುಗಳನ್ನು ಶಾಸನಗಳು ಉಲ್ಲೇಖಿಸುತ್ತವೆ. ಉದಾ: ಗದ್ಯಾಣ, ಪಣ, ಅಡ್ಡ, ಹಾಗ, ವೀಸ ಬೇಳೆ ಇತ್ಯಾದಿ. ಅದರ ಜೊತೆಗೆ ಕಾಕಿಣಿ, ನಿಷ್ಕ ಧರಣ, ಚಿನ್ನದ ನಾಣ್ಯ ದೀನಾರ, ದ್ರಮ್ಮ ಇತ್ಯಾದಿ. ಅದರ ಜೊತೆಗೆ ಕಾಕಿಣಿ, ನಿಷ್ಕ ಧರಣ, ಚಿನ್ನದ ನಾಣ್ಯ, ದೀನಾರ, ದ್ರಮ್ಮ ಇತ್ಯಾದಿ ಇಂಥ ನಾಣ್ಯಗಳ ತಯಾರಿಕೆಯನ್ನು, ತಯಾರಾಗುವ ಕೇಂದ್ರಗಳನ್ನು ಕುರಿತು ಸಮಗ್ರ ಸಂಶೋಧನೆ ನಡೆಯಬೇಕು. ಯುವ ವಿದ್ವಾಂಸರು ಈ ಕಡೆಗಮನ ಹರಿಸಿದರೆ ಹೊಸ ಹೊಸ ಸಾಧ್ಯತೆಗಳಿಗೆ ತೆರೆದು ಕೊಂಡಂತಾಗುತ್ತದೆ.