ಕರ್ನಾಟಕದ ಸಾವಿರಾರು ಕನ್ನಡ ಶಾಸನಗಳು ವಿವಿಧ ಅಳತೆ-ತೂಕ, ಮಾಪನಗಳನ್ನು ಕುರಿತು ಉಲ್ಲೇಖೀಸುತ್ತವೆ. ಆರ್. ಜಗದೀಶ ಅವರ ‘ಪ್ರಾಚೀನ ಕರ್ನಾಟಕ ಅಳತೆ ಮಾನಗಳು’ ಕೃತಿಯನ್ನು ಹೊರತುಪಡಿಸಿದರೆ ಒಂದರೆಡು ಬಿಡಿಲೇಖನ ಇವುಗಳನ್ನು ಬಿಟ್ಟರೆ ಹೆಚ್ಚು ಅಧ್ಯಯನಗಳು, ಸಂಶೋಧನೆಗಳು ನಡೆದಿಲ್ಲ. ಭೂಮಿಯ ಅಳತೆ, ನೀರಿನ ಅಳತೆ, ಧಾನ್ಯಗಳು ಇತ್ಯಾದಿಗಳನ್ನು ಅಳತೆ ಮಾಡಲು ಅನೇಕ ಬಗೆಯ ತೂಕ ಮತ್ತು ಮಾಪನಗಳನ್ನು ಪ್ರಾಚೀನರು ಬಳಸುತ್ತಿದ್ದುದುಂಟು. ಅವು ಕಾಲದಿಂದ ಕಾಲಕ್ಕೆ, ರಾಜರಿಂದ ರಾಜರಿಗೆ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸದಿಂದ ಕೂಡಿರುತ್ತಿದ್ದವು.

ಹೊಲಗಳನ್ನು ಅಳತೆ ಮಾಡಲು, ಭೂಮಿಯನ್ನು ಅಳತೆ ಮಾಡಲು, ಬೀಜವನ್ನು ಅಳತೆಮಾಡಲು ವಿವಿಧ ರೀತಿಯಾದ ಅಳತೆ ಕೋಲುಗಳು ಬಳಕೆಯಲ್ಲಿದ್ದವು. ಉದಾ: ವ್ಯವಹಾರ ಗಣಿತ ಮತ್ತು ಕ್ಷೇತ್ರ ಗಣಿತಗಳ ಕರ್ತೃವಾದ ರಾಜಾಧಿತ್ಯನು ಹೊಲಗಳನ್ನು ಅಳೆಯಲು ‘ಗಳೆ’ಗಳನ್ನು ಬಲಸಬೇಕೆಂದು ಹೇಳುತ್ತಾನೆ. ಇದು ಊರು, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತಿತ್ತು. ರಾಜನಿಂದ ರಾಜರಿಗೂ, ಕಾಲದಿಂದ ಕಾಲಕ್ಕೆ ಬದಲಾವಣೆಯಿಂದ ಕೂಡಿರುತ್ತಿತ್ತು. ಕುರುಗೋಡಿನ ಶಾಸನವೊಂದು ಹೇಳುವ ಹಾಗೆ ‘೧೮ ಗೇಣು’ ಹೊಂದಿರುವ ಕೋಲು ದೇವಸ್ಥಾನದಲ್ಲಿತ್ತು ಎಂದು ತಿಳಿಯುತ್ತದೆ. ಶಾಸನಗಳಲ್ಲಿ ಬೇರೆ ಬೇರೆ ಪ್ರಮಾಣದ ನೂರಾರು ರೀತಿಯ ಅಳತೆ ಕೋಲುಗಳ ಉಲ್ಲೇಖ ಸಿಗುತ್ತವೆ. ಉದಾ: ‘ಇರ್ಪ್ಪತ್ತೆಂಟು ಗೇಣುಗಳೆ,’ ‘ಐವತ್ತೆರಡು ಗೇಣುಗಳೆ’ ಇತ್ಯಾದಿ. ಇವುಗಳಿಗೆ ಬೇರೆ ಬೇರೆ ಹೆಸರುಗಳು ಇದ್ದದ್ದು ತಿಳಿದು ಬರುತ್ತದೆ. ಉದಾ: ಬಂಟರ ಭಾವನ ಕೋಲು, ಮಲೆಪರ ಮಾರಿಯ ಕೋಲ್ ಇದಲ್ಲದೆ ಮತ್ತರು ಕಂಬ, ಬೆದ್ದಲು, ನಿವರ್ತನ, ನಿರಾವರಿ ಇತ್ಯಾದಿ ಹೆಸರುಗಳು ಇದ್ದವು.

ಕಾಳು-ಕಡ್ಡಿ, ದವಸಧಾನ್ಯವನ್ನು ಅಳೆಯಲು ಉಪಯೋಗಿಸುತ್ತಿದ್ದ ವಸ್ತುಗಳ ದೊಡ್ಡ ಪಟ್ಟಿಯನ್ನು ನೀಡಬಹುದು. ಖಂಡುಗ, ಪಂಚಕ, ಕೊಳಗ, ಬಳ್ಳ, ಮಾನ, ಸೊಲಿಗೆ, ಭಾರ, ತೊಲ, ಬೀಸಗೆ, ಫಲ, ಕರ್ಷ, ದೇವಗೊಳಗ, ದಮಗೊಳಗ, ಜಕ್ಕಿಗೊಳಗ, ಧರ್ಮಗೊಳಗ, ಗಿದ್ದಿಗೆ, ಹಾಗೂ ಸುವರ್ಣ ಇತ್ಯಾದಿಯಾಗಿ ಬೆಳೆದುಕೊಂಡು ಹೋಗುತ್ತದೆ. ಇವುಗಳ ಬಳಕೆ, ಇವುಗಳ ಮೇಲಿನ ನಿಯಂತ್ರಣ ಅಥವಾ ಹತೋಟಿ, ಆಡಳಿತದ ನಿಯಂತ್ರಣ ಮುಂತಾದವುಗಳನ್ನು ಶಾಸನಗಳು ವಿಫುಲವಾಗಿ ತಿಳಿಸಿಕೊಡುತ್ತವೆ. ಇವುಗಳನ್ನು ಸಂಶೋಧಕರು ರಾಜರು, ಕಾಲಘಟ್ಟ ಪ್ರದೇಶಾವಾರು ಅಧ್ಯಯನ ಮಾಡಲು ಸಾಕಷ್ಟು ಅವಕಾಶವಿದೆ.