ಕರ್ನಾಟಕವನ್ನು ಹಲವಾರು ರಾಜಮನೆತನಗಳು, ನೂರಾರು ರಾಜರು, ಸಾಮಂತರು, ಪಾಳೆಗಾರರು ಆಳಿ ಅಲಿದು ಹೋಗಿದ್ದಾರೆ. ಹಾಗಾಗಿ ಅವರ ಹೆಸರಿನ ಜೊತೆಗೆ ಅವರಿಗಿದ್ದ ಬಿರುದಾವಳಿಗಳನ್ನು ಉಲ್ಲೇಖಿಸುವ ಸಾವಿರಾರು ಶಾಸನಗಳು ಕರ್ನಾಟಕದಾದ್ಯಂತ ದೊರೆತಿವೆ. ಅವನು ದೊಡ್ಡರಾಜನಿರಬಹುದು, ಚಿಕ್ಕರಾಜನಿರಬಹುದು. ಸಾಮಂತ, ಅಧಿಕಾರಿ, ಪಾಳೆಗಾರ ಯಾರೇ ಆಗಿರಲಿ ಅವರಿಗೆ ಅವರವರ ಸಾಧನೆ ಸಾಹಸಗಳಿಗನುಗುಣವಾಗಿ, ಶೀಲ ಸ್ವಭಾವಗಳಿಗೆ ಅನುಗುಣವಾಗಿ ಅನೇಕ ಬಿರುದುಗಳು ಪ್ರಶಸ್ತಿಗಳು ಮುಡಿಗೇರಿರುವುದುಂಟು. ಈ ಬಿರುದುಗಳ ದೊಡ್ಡ ಪಟ್ಟಿಯೇ ಮಾಡಬಹುದು ಇವುಗಳನ್ನು ಅನ್ಯ ಆಕರಗಳಿಂದಲು ಪರಿಶೀಲಿಸಬಹುದು.

ಈ ಬಿರುದುಗಳ ಹಿನ್ನಲೆ, ಐತಿಹಾಸಿಕ ಘಟನೆ, ಸಂದರ್ಭ, ಅದಕ್ಕೆ ಕಾರಣಗಳು ಅವು ಆಡಳಿತಾತ್ಮಕವಾಗಿ, ಸಾಮಾಜಿಕ ವಿದ್ಯಾಮಾನಗಳಿಂದ ಪಡೆದವುಗಳೋ ಇತ್ಯಾದಿ ಪರಿಶೀಲನೆ ಆಗಬೇಕು. ಹಾಗೆಯೇ ಅವುಗಳನ್ನು ಯಾರು ಕೊಡುತ್ತಿದ್ದರು, ಯಾರಿಗೆ ಕೊಡುತ್ತಿದ್ದರು ಏತಕ್ಕಾಗಿ ಕೊಡುತ್ತಿದ್ದರು ಅಥವಾ ರಾಜನೇ ಸ್ವತಃ ಕರೆದುಕೊಳ್ಳುತ್ತಿದ್ದನೆ ಅಥವಾ ಆಸ್ಥಾನ ವಿದ್ವಾಂಸರು ಕೊಡುತ್ತಿದ್ದರೋ ಎಂಬುದರ ಬಗ್ಗೆ ಸಮಗ್ರವಾದ ಸಂಶೋಧನೆ ನಡೆಯಬೇಕಿದೆ. ಇವು ರಾಜರಿಂದ ರಾಜರಿಗೆ, ಹೇಗೆ ಭಿನ್ನವಾಗಿರುತ್ತಿದ್ದವು ಎಂಬುದು ಕುತೂಹಲ ಕೆರಳಿಸುತ್ತದೆ.

ಕರ್ನಾಟಕವನ್ನಾಳಿದ ವಿವಿಧ ರಾಜಮನೆತನಗಳೂ ಆಯಾ ರಾಜರೂ ಬೇರೆ ಬೇರೆ ರೀತಿಯ ಮುದ್ರೆಗಳನ್ನು, ಲಾಂಛನಗಳನ್ನು ಹೊಂದಿದವರಾಗಿದ್ದರು. ರಾಜರು ತಮ್ಮ ಮುದ್ರೆಗಳಲ್ಲಿ ಬಳಸುತ್ತಿದ್ದ ಗುರುತೇ ಲಾಂಛನ ಪ್ರಾಚೀನ ಕರ್ನಾಟಕದ (ಐಯ್ಯಾವೊಳೆ ಐನೂರ್ವರು) ಎಂಬ ಹಿರಿಯ ವರ್ತಕರ ಗುಂಪೂ ಸಹ ತನ್ನದೇ ಆದ ಪ್ರತ್ಯೇಕ ವಾದ್ಯ ಧ್ವಜ, ಮುದ್ರೆಗಳನ್ನು ಹೊಂದಿದ್ದಿತ್ತು ಎಂಬುದು ಅದರ ಅವಶ್ಯಕತೆಯನ್ನು ತಿಳಿಸುತ್ತದೆ. ಹಾಗೆಯೇ ಅವರ ವಿದ್ಯೆ, ಸಾಮರ್ಥ್ಯ, ಆಯಾ ಕಾಲದ ವಾದ್ಯಗಳು, ದತ್ತು ಸ್ವೀಕಾರಗಳು, ತೆರಿಗೆಗಳು, ವಿನಾಯಿತಿಗಳು ಇತ್ಯಾದಿಗಳನ್ನು ಕುರಿತಂತೆ ಅಧ್ಯಯನಗಳು ನಡೆಯಬೇಕಾಗಿದೆ. ಹಲವಾರು ಶಾಸನಗಳು ಇದಕ್ಕೆ ಪೂರಕ ವಿವರಗಳನ್ನು ನೀಡಬಯಸುತ್ತವೆ. ಆಸಕ್ತರು ಸಂಶೋಧಕರು ಈ ಹಿನ್ನೆಲೆಯಲ್ಲಿರುವ ಅವುಗಳ ಕಾಲ ದೇಶ, ವರ್ತಮಾನಗಳಿಗನುಗನುಗುಣವಾಗಿ ಸಮಗ್ರ ಅಧ್ಯಯನ ನಡೆಸಬಹುದು.

ಪಂಚ ಮಹಾವಾದ್ಯಗಳ ಮೇಲೆ ಡಾ. ವಿ. ರಾಘುವನ್ ಒಂದೇ ಒಂದು ಲೇಖನವನ್ನು ಬರೆದಿದ್ದಾರೆ ಅದನ್ನು ಹೊರತುಪಡಿಸಿದರೆ ಮತ್ತೊಂದು ಇಲ್ಲ. ಒಂದೊಂದು ರಾಜವಂಶವೂ ತನಗೆ ವಿಶಿಷ್ಟವಾದ ವಾದ್ಯಗಳನ್ನು, ಧ್ವಜಗಳನ್ನು ಲಾಂಛನಗಳನ್ನು, ಮುದ್ರೆಗಳನ್ನು, ಪಡೆದಿದ್ದಿತು.

ಉದಾ:

ವಂಶ ಲಾಂಚನ ಧ್ವಜ ವಾದ್ಯ
ಕದಂಬ ಸಿಂಹ ಕಪಿ ಪೆರ್ಮಟ್ಟಿ ತೊರ್ಯ
ಬಾಣ ವೃಷಭ ಕೃಷ್ಣ ಪೈಶಾಚಿಕ ಪಟರು
ರಾಷ್ಟ್ರಕೂಟ ಗರುಡ ಪಾಳಿ ಡಕ್ಕ/ತಿವಳಿ

ಹೀಗೆಯೇ ಮದ್ದಾನೆ, ವರಾಹ, ಗಂಡ ಬೇರುಂಡ ಇತ್ಯಾದಿ ಗುರುತುಗಳನ್ನು ತಮ್ಮ ಲಾಂಛನ, ಧ್ವಜ ಹಾಗೂ ಮುದ್ರೆಗಳಲ್ಲಿ ಬಳಸುತ್ತಿದ್ದುದು ಕಂಡುಬರುತ್ತದೆ. ಇವೆಲ್ಲವುಗಳ ಸಮಗ್ರ ಅಧ್ಯಯನಕ್ಕೆ ಅವಕಾಶವಿದೆ.