ಪ್ರಾಚೀನ ಕರ್ನಾಟಕದ ಕೋಟೆ ಕೊತ್ತಲಗಳ ಒಳಗಡೆ ಇರುವ ಮದ್ದಿನ ಮನೆಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿಲ್ಲ. ಅವುಗಳಲ್ಲಿದ್ದ ಮದ್ದು, ಸಿಡಿಮದ್ದು-ಗುಂಡುಗಳು, ಆಯುಧಗಳು ಅವುಗಳ ತಯಾರಿಕೆ, ಅದಕ್ಕಾಗಿ ಬಳಸುತ್ತಿದ್ದ ಲೋಹ, ಅವುಗಳ ತಯರಿಕೆಯಲ್ಲಿದ್ದ ತಂತ್ರಗಾರಿಕೆಯನ್ನು ಕುರಿತು ಅಧ್ಯಯನಗಳು ನಡೆಯಬೇಕಿದೆ. ಕೋಟೆಯ ಒಳಗಡೆ ಆಯಕಟ್ಟಿನ ಜಾಗಗಳಲ್ಲಿ ಇಟ್ಟು ಯುದ್ಧ ಮಾಡುತ್ತಿದ್ದ ಪಿರಂಗಿಗಳು, ಅವುಗಳ ರಚನೆ, ಅವುಗಳನ್ನು ಬಳಸುತ್ತಿದ್ದ ಸಂದರ್ಭಗಳು, ಬಳಸುತ್ತಿದ್ದ ಕ್ರಮ ಇತ್ಯಾದಿ ಜ್ಞಾನದ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಒಂದು ಸಂಶೋಧನೆಯೇ ಆಗಿದೆ.

ಅದರ ಜೊತೆಯಲ್ಲಿಯೇ ಕೋಟೆಯ ಒಳಗಡೆಯಿದ್ದ ಕಾಳಿನ ಕಣಜಗಳು, ಅದರಲ್ಲಿರುತ್ತಿದ್ದ ಧವಸ ಧಾನ್ಯಗಳು, ಅದರ ಸಂಗ್ರಹಣಾ ವಿಧಾನ, ಬಳಕೆಯ ವಿಧಾನ, ಇಷ್ಟೊಂದು ಧಾನ್ಯವನ್ನು ಯಾರಿಂದ ಸಂಗ್ರಹಿಸುತ್ತಿದ್ದರು, ಯಾರಿಗಾಗಿ ಸಂಗ್ರಹಿಸುತ್ತಿದ್ದರು ಕೆಡದೆ ಹಾಗೆ, ಹುಳು ಬೀಳದ ಹಾಗೆ ಹೇಗೆ ನೋಡಿಕೊಳ್ಳುತ್ತಿದ್ದರು ಇತ್ಯಾದಿ ಮಾಹಿತಿಯ ಶೋಧವೂ ನಡೆಯಬೇಕಾಗಿದೆ ಉದಾ. ಅಲ್ಲಿ ಸಂಗ್ರಹಿಸಿದ ಕಾಳುಗಳನ್ನು ತಿನ್ನಲು ಅಥವಾ ಆಹಾರಕ್ಕಾಗಿ ಸಂಗ್ರಹಿಸುತ್ತಿದ್ದದ್ದು ಒಂದು ವಿಧಾನವಾದರೆ, ಕೋಟೆಯನ್ನು ಎದುರಾಳಿ ಸೈನ್ಯ ಕುದುರೆ, ಆನೆ, ಮೇಲೇರಿ ಬರುತ್ತಿದ್ದರೆ ಮೇಲಿನಿಂದ ರಾಗಿಯನ್ನು ಚೆಲ್ಲುತ್ತಿದ್ದರಂತೆ. ಕಾರಣ ಜಾರಿಬೀಳಲಿ ಎಂದು. ಹೀಗೆ ಬೇರೆ ಬೇರೆ ಕಾರಣಗಳಿಗೂ ಇಲ್ಲಿನ ದವಸಗಳು ಬಳಕೆಯಾಗುತ್ತಿದ್ದಿರಬೇಕು. ಇವೆಲ್ಲವುಗಳ ಸರಿಯಾದ ಅಧ್ಯಯನ ನಡೆಯಬೇಕಾಗಿದೆ.

ಅರಮನೆಯ ಸುತ್ತಮುತ್ತ ಅಥವಾ ಕೋಟೆಯ ಒಳಗಡೆ ಮತ್ತೊಂದು ನಿಗೂಢತೆ ಎಂದರೆ ತುಪ್ಪದ ಕಣಜಗಳದ್ದು. ಬಹಳ ವಿಶೇಷವಾದ ರಚನ ಶೈಲಿಯಲ್ಲಿ ಇವು ನಿರ್ಮಾಣವಾಗಿರುತ್ತವೆ. ಸೋಜಿ ಮತ್ತು ಆಶ್ಚರ್ಯದ ಸಂಗತಿ ಎಂದರೆ ಈ ರೀತಿಯಾಗಿ ಸಂಗ್ರಹಿಸಿದ ಇಷ್ಟೊಂದು ತುಪ್ಪವನ್ನು ಯಾವ ಕಾರಣಕ್ಕಾಗಿ ಬಳಸುತ್ತಿದ್ದರು. ಯಾರು ಬಳಸುತ್ತಿದ್ದರು. ಕೇವಲ ಒಂದು ತಿಂಗಳು ತುಪ್ಪ ಹಳೆಯಾದಾದರೂ ಬಳಕೆಮಾಡಲು ಸಾಧ್ಯವಾಗುತ್ತಿರಲಿಲ್ಲ (ತಿನ್ನಲು). ಹಾಗಿದ್ದ ವೇಳೆ ಇಷ್ಟೊಂದು ಪ್ರಮಾಣದ ತುಪ್ಪವನ್ನು ಏತಕ್ಕಾಗಿ ಬಳಸುತ್ತಿದ್ದರು ಎಂಬುದು ಎಲ್ಲರಿಗೂ ನಿಗೂಢ.

ಕೆಲವು ಅಪರೂಪದ ದಾಖಲೆಗಳು ತಿಳಿಸುವಂತೆ ಇದನ್ನು ನಾಟಿವೈದ್ಯಕ್ಕೆ ‘ಸೈನಿಕರ ರೋಗ ರುಜಿನಗಳಿಗೆ’ ಬಳಸುತ್ತಿದ್ದರು. ಹಾಗೆಯೇ ಯುದ್ಧದಲ್ಲಿ ಹಾನಿಗೊಳಗಾದ ದೇಹದ ಭಾಗಗಳಿಗೆ ‘ಪ್ಲಾಸ್ಟಿಕ್ ಸರ್ಜರಿ’ ರೀತಿಯ ಕಾರ್ಯಗಳಿಗೂ ಬಳಸುತ್ತಿದ್ದರು ಎಂಬುದನ್ನು ಟಿಪ್ಪು-ಹೈದರ್ ಕಾಲದ ದಾಖಲೆಗಳು ತಿಳಿಸುತ್ತವೆ. ಇಂಥದೇ ಹತ್ತಾರು ವಿಚಾರಗಳನ್ನು ಅನ್ಯ ಆಕರಗಳೊಂದಿಗೆ ಶೋಧಿಸಬೇಕಾಗಿದೆ. ಹಾಗಾಗಿ ಅವುಗಳ ನಿರ್ಮಾಣದ ಅವಶ್ಯಕತೆ, ಪ್ರಯೋಜನ ಅದರ ಬಳಕೆಯನ್ನು ಕುರಿತು ಸಮಗ್ರ ಅಧ್ಯಯನಕ್ಕೆ ಅವಕಾಶವಿದೆ ಈ ರೀತಿಯ ಅಧ್ಯಯನಗಳು ನಡೆದೇ ಇಲ್ಲ.