ಹೀಗೆ ಪಟ್ಟಿ ಮಡುತ್ತಾ, ಆಲೋಚಿಸುತ್ತಾ ಹೋದರೆ ಅದು ಬೆಳೆಯುತ್ತಲೇ ಹೋಗುತ್ತದೆ. ಸೀಮಿತ ಅವಧಿಯಲ್ಲಿ ಇದುವರೆಗೆ ಅವಲೋಕಿಸಿದ ಎಲ್ಲ ವಿವರಗಳ ದೃಷ್ಟಿಕೋನಗಳ ಹಿನ್ನಲೆಯಲ್ಲಿ ಹೇಳುವುದಾದರೆ ಇಂದು ಶಾಸನಗಳನ್ನು ವರ್ತಮನದ ಅವಶ್ಯಕತೆಗಳಿಗೆ ಅನುಗುಣವಾಗಿ ಅನೇಕ ನೆಲೆಗಳಲ್ಲಿ ಅಧ್ಯಯನ ಮಾಡಲು ನೂರಾರು ವಿದ್ವಾಂಸರಿಗೆ ಬೇಕಾದಷ್ಟು ಅವಕಾಶಗಳಿರುವುದು ತಿಳಿದುಬರುತ್ತದೆ. ಆಸಕ್ತರು. ಯುವ ವಿದ್ವಾಂಸರಿಗೆ ಬೇಕಾದಷ್ಟು ಅವಕಾಶಗಳಿರುವುದು ತಿಳಿದುಬರುತ್ತದೆ. ಆಸಕ್ತರು ಯುವ ಸಂಶೋಧಕರು ಈ ಕ್ಷೇತ್ರದತ್ತ ಗಮನಹರಿಸಬೇಕಾಗಿದೆ. ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ಅದಕ್ಕಿರುವ ಪ್ರಾಮುಖ್ಯತೆ ಅಥವಾ ಮಹತ್ವವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಆಗ ಮಾತ್ರ ಇಂಥ ಕ್ಷೇತ್ರಗಳಲ್ಲಿ ತಲಸ್ಪರ್ಶಿ ಅಧ್ಯಯನಗಳು, ಸಂಶೋಧನೆಗಳು, ನಡೆಯಲು ಸಾಧ್ಯವಾಗಿ ‘ಸಮಗ್ರ ಸಾಂಸ್ಕೃತಿಕ ಚರಿತ್ರೆಗಳ ನಿರ್ಮಾಣ’ ಮಾಡಲು ಸಾಧ್ಯವಾಗುತ್ತದೆ.

ಒಂದು ಕಾಲದಲಿ ಇತಿಹಾಸದ ಘಟನೆಗಳಿಗೆ, ದಾಖಲೆಗಳಿಗೆ ಸೀಮಿತವಾಗಿ ಬಳಕೆಯಾಗುತ್ತಿದ್ದ ಶಾಸನಗಳು ಇಂದು ಬಹುಮುಖೀ ಆಯಾಮ ಪಡೆದುಕೊಳ್ಳುತ್ತಿವೆ. ಅವು ರಾಜಕೀಯ ಅಧ್ಯಯನದಿಂದ ಬಿಡಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ವೈಜ್ಞಾನಿಕ, ವೈಚಾರಿಕ, ಧಾರ್ಮಿಕ ನೆಲೆಯಲ್ಲಿ ಸ್ತ್ರೀಯರ ನೋವಿನ ನೆಲೆಗಳ ಹಿನ್ನೆಲೆಯಲ್ಲಿ, ಶೈಕ್ಷಣಿಕ ಆಡಳಿತಾತ್ಮಕವಾಗಿ, ಜನಪದದ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಲು ಬಳಕೆಯಾಗುತ್ತಿರುವುದು ಅವುಗಳಿರುವ ಮಹತ್ವವನ್ನು ತಿಳಿಸುತ್ತದೆ.

ಇಂಥ ಅಧ್ಯಯನಗಳಿಗೆ, ಸಂಶೋಧನೆಗಳಿಗೆ ಸಹಾಯ ಸಹಕಾರ ನೀಡುವ ಅನೇಕ ಸಂಘ, ಸಂಸ್ಥೆಗಳು ಕರ್ನಾಟಕದಲ್ಲಿ ಇವೆ. ವಿದ್ವಾಂಸರು, ಸಂಶೋಧಕರು ಅವುಗಳ ನೆರವನ್ನು ಪಡೆಯಬಹುದು. ಉದಾ: ಕರ್ನಾಟಕದ ಇತಿಹಾಸ ಅಕಾಡೆಮಿ, ಕರ್ನಾಟಕ ಇತಿಹಾಸ ಕಾಂಗ್ರೆಸ್, ಅನೇಕ ವಿಶ್ವವಿದ್ಯಾಲಯಗಳು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಮಿಥಿಕ್ ಸೊಸೈಟಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಬೈಲಹೊಂಗಲದ ಕಿತ್ತೂರು ಚನ್ನಮ್ಮ ರಾಣಿ ಇತಿಹಾಸ ಮಂಡಲ, ಚಿತ್ರದುರ್ಗ ಸಂಶೋಧನಾ ತಂಡ, ಜಿಲ್ಲಾ ಇತಿಹಾಸ ಸಂಶೋಧನ ಮಂಡಲಿ, ಜಿಲ್ಲಾ ಇತಿಹಾಸ ಸಂರಕ್ಷಣಾ ವೇದಿಕೆ ತುಮಕೂರಿನ ಇತಿಹಾಸ ಪರಿಷತ್ತು, ತಿಪಟೂರಿನ ನೊಳಂಬ ಇತಿಹಾಸ ಪರಿಷತ್ತು, ಶಿವಮೊಗ್ಗ ಕೆಳದಿ ವಸ್ತು ಸಂಗ್ರಹಾಲಯ, ಇತಿಹಾಸವೇದಿಕೆ, ದಾವಣಗೆರೆಯ ಜಿಲ್ಲಾ ಇತಿಹಾಸ ಸಂಶೋಧನ ಮಂಡಲಿ, ಹೊಸಪೇಟೆಯ ಶ್ರೀ ವಿದ್ಯಾವಿಜಯನಗರ ಹಂಪಿ ಹೆರಿಟೇಟ್ ಟ್ರಸ್ಟ್ ಆನೆಗುಂದಿ, ಕೋಲಾರ ಜಿಲ್ಲೆಯ ಕೈವಾರದ ಶ್ರೀ ಯೋಗಿನಾರಾಯಣ ಇಂಡಾಲಜಿಕಲ್ ರೀಸರ್ಚ್ ಇನ್ಸ್‌ಟ್ಯೂಟ್ ಮುಂತಾದ ಸಂಸ್ಥೆಗಳನ್ನು ಹೆಸರಿಸಬಹದು.

ಈ ಮೇಲಿನ ವಿವರಗಳನ್ನು ಗಮನಿಸಿದಾಗ ನಮ್ಮ ಸಾಂಸ್ಕೃತಿಕ ಸಂಶೋಧನೆಗಳು ಯಾವ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ತಿಳಿದುಬರುತ್ತದೆ. ಇಂಥ ಸಂಘ ಸಂಸ್ಥೆಗಳ ಸಲಹೆ ಸಹಕಾರದಿಂದ ವಿವಿಧ ವಿದ್ವಾಂಸರು ತಮ್ಮ ಸಂಶೋಧನೆ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಕನ್ನಡ ಶಾಸನಗಳನ್ನು ಹಲವು ರೀತಿಯಲ್ಲಿ ಆಕರಗಳಾಗಿ ಬಳಸಿಕೊಂಡು ನಡೆಸುವ ಅಧ್ಯಯನ ಬಹು ಶಿಸ್ತೀಯ ಅಧ್ಯಯನಗಳಾಗಿ ಬೆಳೆಯುತ್ತಿದೆ ಎನ್ನವುದರಲ್ಲಿ ಎರಡು ಮಾತಿಲ್ಲ. ಇದುವರೆಗೆ ನನ್ನ ಮಾತುಗಳು ನನ್ನ ಈ ಕ್ಷಣದವರೆಗಿನ ಆಲೋಚನೆಗಳ ಹಿನ್ನೆಲೆಯಲ್ಲಿ ಶಾಸನಾಧ್ಯಯನವನ್ನು ಹೇಗೆ ಬಹುಮುಖಿಗೊಳಿಸಬೇಕು ಹಾಗೂ ಅನ್ಯ ಆಕರಗಳ ಜೊತೆ ಹೇಗೆ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಸೀಮಿತವಾದವುಗಳು. ಈ ರೀತಿಯ ಅಧ್ಯಯನಗಳು ಕಾಲಕಾಲಕ್ಕೆ ಹೊಸ ಹೊಸ ಆಯಾಮವನ್ನು ಪಡೆದುಕೊಳ್ಳುತ್ತಲೇ ಇರುತ್ತವೆ ಎಂಬುದನ್ನು ಮರೆಯಬಾರದು. ಅದು ಕಾಲದ ನಿಯಮವೂ ಹೌದು.