ಕರ್ನಾಟಕದ ತುಂಬಾ ಹರಡಿಕೊಂಡಿರುವ ಕೋಟೆ-ಕೊತ್ತಲಗಳು, ಅರಮನೆಗಳು, ಭತೇರಿಗಳು, ಸ್ಮಾರಕಗಳು, ಪಾಳುಬಿದ್ದ ಹಳ್ಳಿ, ಪಟ್ಟಣಗಳು ಸಾಂಸ್ಕೃತಿಕ ಚರಿತ್ರೆಗೆ ವಿಸೇಷ, ವಿಶಿಷ್ಟ ಆಕರ ಸಾಮಗ್ರಿಗಳು. ಅನೇಕ ಪ್ರಾಚೀನ ಕಾವ್ಯಗಳು, ಐತಿಹಾಸಿಕ ಲಾವಣಿ ಇತರ ಜಾನಪದ ರಚನೆಗಳೂ ಸಹ ಇವುಗಳನ್ನು ಕುರಿತು ರಚನೆಯಾಗಿವೆ. ಇವೆರಡರ ಸಾಹಿತ್ಯದ ಅಂತರ ಶಿಸ್ತ್ರೀಯ ಅಧ್ಯಯನಗಳು ನಡೆದರೆ ಆಶ್ಚರ್ಯ ಮತ್ತು ಅದ್ಬುತವಾದ ಸಂಶೋಧನೆ ನಡೆದಂತಾಗುತ್ತದೆ. ಒಂದೆರಡು ಕೃತಿ ಹಾಗೂ ಬಿಡಿ ಬರಹಗಳನ್ನು ಬಿಟ್ಟರೆ ಸಮಗ್ರ ಅಧ್ಯಯನ ಈ ಕ್ಷೇತ್ರದಲ್ಲಿ ನಡೆದಿಲ್ಲ.

ಪ್ರಾಚೀನ ರಾಜಪ್ರಭುತ್ವದಲ್ಲಿ ಕೋಟೆ-ಕೊತ್ತಲಗಳಿಲ್ಲದ ಆಳ್ವಿಕೆಯನ್ನು, ನಗರ ಪಟ್ಟಣಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅದರ ಪ್ರಾಮುಖ್ಯತೆ ಎಷ್ಟಿತ್ತು ಎಂಬುದು ಅಂದಿನ ರಾಜವ್ಯವಸ್ಥೆಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿಯೇ “ಕೋಟೆ ಇಲ್ಲದ ರಾಜನು ಬಿರುಗಾಳಿಯ ಮುಂದಿನ ಮೋಡದ ತುಂಡುಗಳಿಗೆ ಸಮಾನ”ನೆಂದು ಕಾಮಾಂಧಕನು ಹೇಳುತ್ತಾನೆ. (ಕ.ಶಾ.ಸಾ.ಅ.ಚಿ.ಮೂ. ಪು.೩೧೭) ದುರ್ಗವು ಸಪ್ತಾಂಗಗಳಲ್ಲಿ ಒಂದು ಇದರ ಪ್ರಾಮುಖ್ಯತೆಯನ್ನು ಪ್ರಾಚೀನ ಕನ್ನಡಿಗರು ಕಂಡುಕೊಂಡಿದ್ದಾರು. ಈ ಕುರಿತು ಕರ್ನಾಟಕದ ನೂರಾರು ಶಾಸನಗಳಲ್ಲಿ ಉಲ್ಲೇಖಗಳಿವೆ. ಅತ್ಯಂತ ಪ್ರಾಚೀನ ಕೋಟೆಯಾದ ‘ಬಾದಾಮಿ ಕೋಟೆ’ಯನ್ನು (ಕ್ರಿ.ಶ. ೫೪೩) ಮೊದಲು ಕಟ್ಟಿಸಿದ್ದು ಪುಲಿಕೇಶಿ. ಹಾಗೆಯೇ ಭದ್ರವಾದ ಅರಮನೆಗಳೂ ಅಷ್ಟೇ ಮುಖ್ಯವಾಗಿದ್ದವು. ಅದಕ್ಕಾಗಿಯೇ ನೂರಾರು ರಾಜರು ನೂರಾರು ಅರಮನೆಗಳನ್ನು ಕಟ್ಟಿಸಿದ್ದಾರೆ. ಅವುಗಳ ವಿಶಿಷ್ಟ ಶೈಲಿ, ವಾಸ್ತುರಚನೆ, ಶಿಲ್ಪಕಲೆ, ವಿನ್ಯಾಸಗಳು, ತಂತ್ರಜ್ಞಾನಗಳನ್ನು ಕುರಿತು ಶಾಸನಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ.

ಕೋಟೆಯ ವಿಧಗಳು, ಅವುಗಳ ರಚನಾವಿನ್ಯಾಸ, ಕೋಟೆಗಳಿಂದ ರಾಜರಿಗೆ ಇದ್ದ ಪ್ರಯೋಜನ, ಕೋಟೆ ಕೊತ್ತಲಗಳ ನಿರ್ಮಾಣದ ಹಿಂದಿರುವ ಕತೆಗಳು. ಕಟ್ಟಿಸಿದವರು, ಮುತ್ತಿದವರು, ಜಲದುರ್ಗಗಳು, ಗಿರಿದುರ್ಗಗಳು, ವನದುರ್ಗಗಳು, ಅವುಗಳ ವಿಶೇಷತೆ, ಹುಲಿಮೊಗ, ಅದರ ರಚನೆಯ ಶೈಲಿಯನ್ನು ಕುರಿತು ಸಂಶೋಧನೆ ನಡೆಸಬೇಕಿದೆ. ಅಂದರೆ ರಾಜಮನೆತನಗಳ ಹಿನ್ನೆಲೆಯಲ್ಲಿ, ಕಾಲಘಟ್ಟಗಳ ಹಿನ್ನೆಲೆಯಲ್ಲಿ, ಪ್ರದೇಶವನ್ನು ಆಧರಿಸಿ ಹೀಗೆ ಅವುಗಳನ್ನು ವಿಂಗಡಿಸಿಕೊಂಡೂ ಸಹ ಸಂಶೋಧನೆ ನಡೆಸಬಹುದು.

ಅನೇಕ ಶಾಸನಗಳು ಇದಕ್ಕೆ ಬೇಕಾದ ಮಾಹಿತಿಯನ್ನು ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಿವೆ. ಅರಮನೆಗಳ ರಚನೆ, ಅವುಗಳ ವಿನ್ಯಾಸ, ವಿಶೇಷತೆ, ಅದರೊಳಗಿನ ನಿಗೂಢ ಮಾರ್ಗಗಗಳು, ಇವು ರಾಜರಿಂದ ರಾಜರುಗಳಿಗೆ ಅವರವರ ಸಾಮರ್ಥ್ಯಾನುಸಾರ ಹೇಗೆ ಭಿನ್ನವಾಗಿದ್ದವು, ಅದಕ್ಕೆ ಕಾರಣಗಳೇನು ಇವುಗಳ ಸಮಗ್ರ ಅಧ್ಯಯನವೂ ನಡೆಯಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಬಹಳ ಮುಖ್ಯವಾಗಿ ಪ್ರಸ್ತಾಪ ಮಾಡಲೇಬೇಕಾದ ಸಂಗತಿ ಎಂದರೆ ಕೋಟೆ ಕಾಳಗಗಳು. ಅಲ್ಲಿರುತ್ತಿದ್ದ ಸೈನ್ಯ ವ್ಯವಸ್ಥೆ. ಅರಮನೆಯ ಆಳುಕಾಳುಗಳು, ದಾಸಿಯರು ಇತ್ಯಾದಿ. ಹೀಗೆ ಹತ್ತು ಹಲವು ರೀತಿಯಲ್ಲಿ ಸಂಶೋಧನೆ ನಡೆಸಲು ಅವಕಾಶವಿದೆ.