ದೇವಾಲಯ, ಬಸದಿಗಳನ್ನು ಉಲ್ಲೇಖಿಸುವ ಸಾವಿರಾರು ಕನ್ನಡ ಶಾಸನಗಳನ್ನು ನಮ್ಮ ಮುಂದೆ ಇವೆ. ಎಲ್ಲ ಅರಸು ಮನೆತನಗಳ ಆಳ್ವಿಕೆಯ ಅವಧಿಯಲ್ಲಿ ದೇವಾಲಯ ಬಸದಿಗಳ ನಿರ್ಮಾಣ ನಿರಂತರವಾಗಿ ನಡೆದುಕೊಂಡು ಬಂದಿದೆ. ಆ ಕಾರಣಕ್ಕಾಗಿಯೇ ಸಾವಿರಾರು ದೇವಾಲಯಗಳು ಕರ್ನಾಟಕದ ತುಂಬಾ ಒಂದಕ್ಕಿಂತ ಒಂದು ಭಿನ್ನವಾಗಿ, ವಿಶೇಷವಾಗಿ ವಿವಿಧ ರೀತಿಯ ವಾಸ್ತು ಶಿಲ್ಪ, ಕಲೆಗಳಿಂದ ಕರ್ನಾಟಕದ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ. ಒಂದೊಂದು ದೇವಾಲಯವೂ ಒಂದೊಂದು ವಿಶೇಷ ಅಧ್ಯಯನವೇ ಆಗುವಷ್ಟು ಮಹತ್ವಪೂರ್ಣವಾದವುಗಳೂ ಇವೆ. ಅವುಗಳ ಹಿಂದೆ ಇರುವ ಕಥನಗಳೂ ಅಷ್ಟೇ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ೧೯೬೫ ರಲ್ಲಿಯೇ ಎಸ್ ಶ್ರೀಕಂಠಶಾಸ್ತ್ರೀಗಳು ಈ ಕುರಿತು ಒಂದು ಪುಸ್ತಕ ರಚಿಸಿದ್ದರು. ಹಾಗೆಯೇ ‘ಕಲ್ಯಾಣಿ ಚಾಲುಕ್ಯರ ದೇವಾಲಯಗಳು’ ಎನ್ನುವ ಹೆಚ್. ಎಸ್. ಗೋಪಾಲರಾವ್ ಅವರ ಕೃತಿ ಮತ್ತು ದೇವರ ಕೊಂಡಾರೆಡ್ಡಿಯವರ “ತಲಕಾಡಿನ ಗಂಗರ ದೇವಾಲಯಗಳು” ಎನ್ನುವ ಕೃತಿಯನ್ನು ಹೊರತುಪಡಿಸಿದರೆ ಪ್ರತ್ಯೇಕವಾದ ಅಧ್ಯಯನಗಳು ನಡೆದಿಲ್ಲವೆಂದೇ ಹೇಳಬೇಕು.

ಗ್ರಾಮಾಡಳಿತ ವ್ಯವಸ್ಥೆಯಲ್ಲಿ ಸ್ಥಳೀಯವಾಗಿ ಆಡಳಿತ ಕೇಂದ್ರಗಳು, ನ್ಯಾಯ ತೀರ್ಮಾನ ಕೇಂದ್ರಗಳೂ ಆಗಿದ್ದ ಈ ದೇವಾಲಯಗಳ ನಿರ್ಮಾಣಕ್ಕೆ ಅನೇಕ ಕಾರಣಗಳಿವೆ. ರಾಜನೋ ಮಂತ್ರಿಯೋ ಯುದ್ಧದಲ್ಲಿ ಗೆದ್ದ ನೆನಪಿಗೆ, ರಾಜನಿಗೆ ಮಕ್ಕಳಾಗದೇ ಇರುವುದಕ್ಕಾಗಿ, ಮಕ್ಕಳು ಆದ ನೆನಪಿಗೆ, ಸತ್ತ ತಂದೆ-ತಾಯಿಯರ ನೆನಪಿಗೆ, ಮಡದಿ ಮಕ್ಕಲ ಹೆಸರಿನಲ್ಲಿ ಅವುಗಳ ನಿರ್ಮಾಣ, ಜೀರ್ಣೋದ್ಧಾರ ಕಾರ್ಯ ನಡೆಯುತ್ತಾ ಬಂದಿದೆ. ಹಾಗಾಗಿ ರಾಜರಿಗೆ, ಭಕ್ತರಿಗೆ, ಅವುಗಳ ಬಗ್ಗೆ ಇದ್ದ ಶ್ರದ್ಧೆ, ನಿಷ್ಟೆ, ಗೌರವ, ಅದಕ್ಕಾಗಿ ಅವರು ಬಿಡುತ್ತಿದ್ದ ದಾನ, ದತ್ತಿ, ಧಾನ್ಯ ಇತ್ಯಾದಿಗಳನ್ನು ಇನ್ನಷ್ಟು ಸಮಗ್ರವಾಗಿ ಶೋಧಿಸಬೇಕಾಗಿದೆ. ದೇವಾಲಯದ ಆಡಳಿತ ವರ್ಗ, ದೇವದಾಸಿಯರು. ಅವರ ಬದುಕು, ಸಮಾಜದೊಂದಿಗೆ ಅವರ ಸಂಬಂಧ, ಪೂಜಾರಿಗಳ ಕರ್ತವ್ಯ, ಪೂಜೆ ಪುರಸ್ಕಾರಗಳು, ನೈವೇದ್ಯ ದಾಸೋಹ ಇತ್ಯಾದಿ ವಿವರಗಳನ್ನು ಸಾವಿರಾರು ಶಾಸನಗಳು ತಮ್ಮ ಗರ್ಭದಲ್ಲಿ ಹುದುಗಿಸಿಕೊಂಡಿವೆ. ಅವುಗಳ ಸೂಕ್ಷ್ಮವಾದ ಅಧ್ಯಯನಕ್ಕೆ ವಿಪುಲ ಅವಕಾಶವಿದೆ.

ಈ ಅಧ್ಯಯನದಲ್ಲಿ ಕಾಲ, ರಾಜವಂಶ, ಅವುಗಳ ವಾಸ್ತು, ಶಿಲ್ಪಕಲೆ, ಅಲ್ಲಿನ ಆಚರಣೆ, ಸಂಪ್ರದಾಯ, ಅದಕ್ಕಿರುವ ದಾನ-ದತ್ತಿಗಳು, ಅದರ ಅಂಗಬೋಗ, ರಂಗಬೋಗ, ದೀಪಾರಾಧನೆ, ದೇವಾಲಯಗಳ ಜೀರ್ಣೋದ್ಧಾರ, ರಚನ ವಿನ್ಯಾಸ, ಧಾರ್ಮಿಕ ಹಿನ್ನೆಲೆ, ರಥೋತ್ಸವಗಳು, ಜನ ಜಾತ್ರೆಗಳು ಇಂಥವೇ ಹತ್ತಾರು ವಿಧದಲ್ಲಿ ಆಕರಗಳನ್ನು ಶೋಧಿಸಿದರೆ ಬಹುಮುಖ್ಯ ಸಂಗತಿಗಳು ಲಭ್ಯವಾಗುತ್ತವೆ. ಶಿಲ್ಪಕಲೆ ಅಧ್ಯಯನದಲ್ಲಿ ರಾಜಮನೆತನ, ಪ್ರಾದೇಶಿಕತೆ ವಿವಿಧ ಕಾಲ ಘಟ್ಟದಲ್ಲಿನ ಅದರ ಮಾರ್ಪಾಡು, ಅದಕ್ಕೆ ಕಾರಣಗಳು, ಇತ್ಯಾದಿಗಳ ಶೋಧವೂ ನಡೆದಾಗ ಬಹುಶಃ ಸಮಗ್ರತೆ ಬರುತ್ತದೆ ಎಂದು ಭಾವಿಸಿದ್ದೇನೆ. ಅದಕ್ಕೂ ಬಹಳಷ್ಟು ಅವಕಾಶಗಳು ಇಲ್ಲಿವೆ.

ಅಸಂಖ್ಯಾತ ಶಾಸನೋಕ್ತ ದೇವಾಲಯಗಳ ಅಧ್ಯನವನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಸಂಶೋಧನೆಗೆ ಅಳವಡಿಸಬಹುದು. ವೇಸರ ಶೈಲಿಯ ದೇವಾಲಯಗಳು. ನಾಗರ ಶೈಲಿಯ ದೇವಾಲಯಗಳು, ದ್ರಾವಿಡ ಶೈಲಿಯ ದೇವಾಲಯಗಳು, ಕರ್ನಾಟಕದ ಬಸದಿಗಲು, ಮಸೀದಿಗಲು ಎನ್ನುವ ನೆಲೆಯಲ್ಲಿಯೂ ಸಂಶೋಧನೆ ಮಾಡಲು ಸಾಧ್ಯತೆಗಳಿವೆ. ಹಾಗೆಯೇ ಚೋಳರ ದೇವಾಲಯಗಳು, ರಾಷ್ಟ್ರಕೂಟರ ದೇವಾಲಯಗಳು, ವಿಜಯನಗರ ಕಾಲದ ದೇವಾಲಯಗಳು, ಪಾಳೆಗಾರರ ಕಾಲದ ದೇವಾಲಯಗಳು, ಬಸದಿಗಳು, ಮಸೀದಿಗಳು ಎಂದು ಅವರ ಅವಧಿಯನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಬಹುದು. ಇದಕ್ಕಾಗಿ ಪುರಾತತ್ವ ಇಲಾಖೆಯ ವರದಿಗಳನ್ನೂ ಸಹ ಆಕರವಾಗಿ ಬಳಸಿಕೊಳ್ಳಬಹುದು. ಇಷ್ಟೆಲ್ಲಾ ಸಾಧ್ಯತೆಗಳನ್ನು ಒಳಗೊಂಡ ಈ ಸಂಶೋಧನೆ ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಹಾಗೆಯೇ ತಾಲ್ಲೂಕು, ಜಿಲ್ಲಾವಾರು ದೇವಾಲಯಗಳ ಸೂಚಿಯನ್ನು ಸಿದ್ಧಮಾಡಬೇಕಿದೆ.