ಶಾಸನಗಳಲ್ಲಿ ಸ್ತ್ರೀ ಸಮಾಜದ ಕುರಿತು ಅಧ್ಯಯನವೂ ಸಹ ಆಸಕ್ತರಿಗೆ ತೆರೆದುಕೊಂಡಿರುವ ಕ್ಷೇತ್ರವಾಗಿದೆ. ಶಾಸನಗಳ ಭಾಷೆ, ಸಾಹಿತ್ಯವನ್ನು ಸ್ತ್ರೀ ದೃಷ್ಟಿಕೋನದಿಂದ ಅಥವಾ ಸ್ತ್ರೀವಾದದ ಹಿನ್ನೆಲೆಯಾಗಿ ನೋಡುವುದು ಕಷ್ಟ. ಏಕೆಂದರೆ ಲಿಂಗಾಧಾರಿತವಾಗಿ ವ್ಯಕ್ತವಾಗುವ ಆ ಕಾಲದ ಚಿತ್ರಣವೇ ಬೇರೆ ಸ್ವರೂಪದ್ದು. ಸಾಮಾನ್ಯವಾಗಿ ಶಾಸನಗಳನ್ನು ಬರೆಸಿದವರು, ಹಾಕಿಸಿದವರು, ಬರೆದವರು, ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದರು, ಅವುಗಳನ್ನು ಓದಿ ಅರ್ಥ್ಯೆಸಿಕೊಂಡವರು, ಬೇರೆಯವರಿಗೆ ತಿಳಿಸಿ ಹೇಳಿದವರೂ ಪುರಷರೇ ಆಗಿದ್ದಾರೆ. ಆದ ಕಾರಣ ಇಲ್ಲೆಲ್ಲಾ ಹೆಚ್ಚು ಸ್ಥಳ ಅಥವಾ ನಿರ್ಧಾರಗಳು ಪುರಷನಿಗೆ ಮೀಸಲಾಗಿದೆ ಎಂದರೆ ತಪ್ಪಾಗಲಾರದು. ಆ ಕಾರಣದಿಂದ ಪುರುಷ ಕೇಂದ್ರಿತವಾದ ನಿರ್ಧಾರಗಳೇ ಅಂತಿಮವಾಗಿದ್ದವು. ಅವನಿಗೆ ಅನುಕೊಲವಾಗಿಯೇ ಲೋಕವನ್ನು ಅವನು ಗ್ರಹಿಸಿದ್ದಾನೆ. ಅವನಿಗೆ ತಕ್ಕಂತೆ ಹೊಂದಿಸಿ ಕೊಂಡಿದ್ದಾನೆ. ಹಾಗಾಗಿ ಸ್ತ್ರೀಯರು ಅಲ್ಪಪ್ರಮಾಣದ ಸ್ಥಳದಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಾರಣ ಆಡಳಿತ, ಧರ್ಮ ರಾಜಕಾರಣ, ಅಧಿಕಾರ, ಆರ್ಥಿಕ, ಸಾಂಸ್ಕೃತಿಕ, ವಿದ್ಯಾಭ್ಯಾಸ ಇತ್ಯಾದಿಗಳೆಲ್ಲಾ ಪುರುಷ ಕೇಂದ್ರಿತವಾಗಿದ್ದವು ಎನ್ನುವುದನ್ನು ಮರೆಯುವಂತಿಲ್ಲ ಇದು ಕನ್ನಡ ಸೃಜನಶೀಲ ಸಾಹಿತ್ಯಕ್ಕೂ ಅನ್ವಯವಾಗುವಂತಹ ಮಾತು.

ಹಾಗಾಗಿ ಸ್ತ್ರೀ ಸಮಾಜವನ್ನು ಕುರಿತು ಕನ್ನಡ ಶಾಸನಗಳು ವ್ಯಕ್ತಪಡಿಸುವ ಆ ಕಾಲದ ಸಾಂಸ್ಕೃತಿಕ ಚಿತ್ರಣಗಳನ್ನು ಕಟ್ಟಿಕೊಳ್ಳುವ ಪ್ರಯತ್ನ ತುರ್ತಾಗಿ ಆಗಬೇಕಿದೆ. ಅದಕ್ಕಾಗಿ ಶಾಸನಗಳನ್ನು ಸ್ತ್ರೀ ಸಮಾಜ ಅಥವಾ ಸ್ತ್ರೀ ಕೇಂದ್ರಿತ ನೆಲೆಯಲ್ಲಿ ಪರಾಮರ್ಶಿಸಬೇಕಾಗಿದೆ. ಪ್ರಾರಂಭಿಕ ಶಾಸನಗಳಿಂದ ಹಿಡಿದು ಪಾಳೆಯಗಾರರ ಕೊನೆಗಾಲದವರೆಗೂ ಲಭ್ಯವಾಗುವ ಅನೇಕ ಶಾಸನಗಳನ್ನು ನಾವು ಕಾಲಘಟ್ಟಗಳ ಹಿನ್ನೆಲೆಯಲ್ಲಿ, ರಾಜಮನೆತನಗಳ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ದೇಕಬ್ಬೆ, ಸಾವಿಯಬ್ಬೆ, ಅತ್ತಿಮಬ್ಬೆ… ಹೀಗೆ ನೂರಾರು ಮಹಿಳೆಯರ ವಿವರಗಳು, ಸಾಧನೆಗಳು ಮುಖ್ಯವಾಗಿ ಚರ್ಚಿತವಾಗುತ್ತವೆಯಾದರೂ ರಾಣಿಯರು, ಸಾಮಾನ್ಯ ಸ್ತ್ರೀಯರು, ದೇವದಾಸಿಯರು, ದಾಸಿಯರು, ಸನ್ಯಾಸಿನಿಯರು, ನರ್ತಕಿಯರು, ಪರಿಚಾರಕಿಯರು, ನೃತ್ಯಗಾರ್ತಿಯರು ಸೊಳೆಯರು ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು.

ಇದರ ಜೊತೆಗೆ ವಿವಿಧ ರೀತಿಯ ವೃತ್ತಿಯಲ್ಲಿ ತೊಡಗಿರುವ, ಸಾಧನೆ ಮಾಡಿರುವ ಮಹಿಳೆಯರನ್ನು ಕುರಿತು ಅಧ್ಯಯನ ಮಾಡಬೇಕಾಗಿದೆ. ಸ್ತ್ರೀಯರ ವಿದ್ಯಾಭ್ಯಾಸ ವಿವಿಧ ರಂಗಗಳಲ್ಲಿ ಅವರ ಪ್ರೌಢಿಮೆ, ಭಾಷೆ, ವೇಷಭೂಷಣ, ಉಡುಗೆ-ತೊಡುಗೆ, ಆಭರಣ, ಅಲಂಕಾರಗಳು, ಧಾರ್ಮಿಕ ವಿವರಣೆಗಳು, ಆಡಳಿತ ಹಾಗೂ ಯುದ್ಧಗಳಲ್ಲಿ ಅವರ ಪಾತ್ರ, ವಿವಾಹ ಪದ್ಧತಿಗಳು, ಏಕಪತ್ನಿತ್ವ, ಬಹುಪತ್ನಿತ್ವ, ವಿಧವೆಯರ ಬದುಕು ವಿವಿಧ ಜಾತಿ ಧರ್ಮಗಳ ಹಿನ್ನೆಲೆಯಲ್ಲಿ ಹೇಗಿದ್ದವು ಎನ್ನುವುದು ಸಹ ಮುಖ್ಯವಾದದ್ದು. ಸ್ತ್ರೀಯರು ಮತ್ತು ಧರ್ಮ, ಸ್ತ್ರೀಯರು ಮತ್ತು ರಾಜಕೀಯ, ಸ್ತ್ರೀಯರು ರಚಿಸಿದ ಸಾಹಿತ್ಯ, ದೇವಾಲಯ, ಬಸದಿಗಳು, ಅವುಗಳಿಗೆ ಬಿಟ್ಟ ದಾನ-ದತ್ತಿಯ ವಿಷಯಗಳನ್ನು ಸಮಗ್ರವಾಗಿ ಶಾಸನಗಳಿಂದ ಸಂಶೋಧಿಸಬಹುದಾಗಿದೆ. ಹೀಗೆ ವಿವಿಧ ಹತ್ತು ಹಲವು ಮುಖಗಳನ್ನು ಶಾಸನಗಳ ಸಂಶೋಧನೆಯಿಂದ ಅನವಾರಣಗೊಳಿಸಲು ಅವಕಾಶವಿದೆ. ‘ಶಾಸನಗಳಲ್ಲಿ ಸ್ತ್ರೀ ಸಮಾಜ’ ಎನ್ನುವ ಚನ್ನಕ ಎಲಿಗಾರ ಅವರ ಕೃತಿಯನ್ನು ಹೊರತುಪಡಿಸಿದರೆ ಯಾವ ಸಂಶೋಧಕರು ಈ ದಾರಿಯನ್ನು ತುಳಿದಿಲ್ಲಾ. ಹಾಗಾಗಿಯೇ ವಿದ್ವಾಂಸರೂ, ಯುವ ಸಂಶೋಧಕರು ಈ ಕ್ಷೇತ್ರದಲ್ಲಿ ಗಣನೀಯವಾದ ಶೋಧ ನಡೆಸಲು ಅವಕಾಶವಿದೆ.