ಶಾಸನಗಳನ್ನು ಮತ್ತು ಜಾನಪದವನ್ನು ಅಂತರ ಶಿಸ್ತೀಯ ಅಧ್ಯಯನಕ್ಕೆ ಒಳಪಡಿಸಲು ಬೇಕಾದಷ್ಟು ಅವಕಾಶವಿದೆ. ಸಾಂಸ್ಕೃತಿಕ ಚರಿತ್ರೆಯ ನಿರ್ಮಾಣದಲ್ಲಿ ದಾಖಲು ಸಾಹಿತ್ಯದಷ್ಟೇ ಪ್ರಮುಖವಾದ ಮತ್ತೊಂದು ಆಧಾರವೆಂದರೆ ಜಾನಪದ ಅಥವಾ ಮೌಖಿಕ ಆಕರಗಳು ಶಾಸನಾಧ್ಯಯನಕ್ಕೆ ಇದೂ ಒಂದು ಆಯಾಮ. ಜನಪದರು ಶಾಸನಗಳಿಂದ ದೂರ ಇದ್ದರು ಎಂಬುದು ಒಪ್ಪಬಹುದಾದ ವಿಚಾರವಾದರೂ ಜನಪದರ ವಿವರಗಳು ಶಾಸನಗಳಿಂದ ದೂರವಿರಲಿಲ್ಲ ಎನ್ನುವುದಕ್ಕೆ ಈ ರೀತಿಯ ಶಾಸನಗಳು ಉದಾಹರಣೆಯಾಗಿವೆ. ಇದೊಂದು ಆಶ್ಚರ್ಯ ಸಂಗತಿ ಎನಿಸಿದರೂ ಸರಳ ಸತ್ಯದ ಮಾತು.

ಜನಪದ ಲಾವಣಿಗಳಲ್ಲಿಯೇ ಮುಖ್ಯವಾಗಿ ಐತಿಹಾಸಿಕ ವಿವರಗಳನ್ನು, ಘಟನೆಗಳನ್ನು ಕುರಿತು ರೂಪುಗೊಂಡ ಎಷ್ಟೋ ಲಾವಣಿಗಳು ನಮ್ಮ ಮುಂದಿವೆ. ಉದಾ : ಸಂಗೊಳ್ಳಿ ರಾಯಣ್ಣನ ಲಾವಣಿಗಳು, ಕುಮಾರ ರಾಮನ ಲಾವಣಿಗಳು, ಪಿರಿಯಾ ಪಟ್ಟಣದ ಕಾಳ ಲಿತ್ತೂರು ಚನ್ನಮ್ಮನನ್ನು ಕುರಿತ ಲಾವಣಿಗಳು, ಹಲಗಲಿ ಬೇಡರ ಲಾವಣಿಗಳು ಇನ್ನೂ ಮುಂತಾದ ನೂರಾರು ಲಾವಣಿ, ಹಾಡು, ಕಥೆಗಳು, ಗಾದೆ-ಒಗಟುಗಳನ್ನು ನಾವು ಕಾಣಬಹುದು. ಇದೇ ವಿವರಗಳನ್ನು ಶಾಸನಗಳಲ್ಲೂ ಲಭ್ಯವಾಗುತ್ತದೆ. ತೀರಾ ಇತ್ತೀಚೆಗೆ ಡಾ. ಶಾಂಭವಿ ಅವರು ‘ಹಾಸನ ಜಿಲ್ಲೆಯ ಶಾಸನೊಕ್ತ ಗಾದೆಗಳು’ ಎಂಬ ಅಪರೂಪದ ಲೇಖನ ಬರೆದಿದ್ದಾರೆ. ಅದಲ್ಲದೇ ಕನ್ನಡ ಶಾಸನಗಳಲ್ಲಿ ಅನೇಕ ಜನಪದ ಆಚರಣೆಗಳನ್ನು ರೂಢಿ ಸಂಪ್ರದಾಯಗಳನ್ನು, ನಂಬಿಕೆಗಳನ್ನು ಕುರಿತು ವಿವರಗಳು ಲಭ್ಯವಾಗುತ್ತವೆ.

ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ‘ಸಿಡಿ’ ಆಚರಣೆಯನ್ನು ಅನೇಕ ಶಾಸನಗಳು ಉಲ್ಲೇಖಿಸುತ್ತವೆ. ಇಂದಿಗೂ ಅದು ಆಚರಣೆಯಲ್ಲಿದೆ ಹಾಗೆಯೇ ‘ಉಟ್ಲುಮರ,’ ‘ಘಾವು’ ಸಿಗಿಯುವುದು, ‘ಸತಿ’ ಆಚರಣೆ ಅದರ ಶಿಲ್ಪಗಳಲ್ಲೂ ಶಾಸನ ಲಿಪಿಯಲ್ಲೂ ಪ್ರಕಟವಾಗಿದೆ. ಡಾ. ಬಸವರಾಜ ಕಲ್ಗುಡಿಯವರ ‘ಸತಿ ಆಚರಣೆಯನ್ನು ಕುರಿತು ಮಹಾಸತಿ-ಒಂದು ಅಧ್ಯಯನ’ ಕೃತಿ ನೋಡಬಹುದು. ಇದನ್ನ ಜಾತಿ ವರ್ಗಗಳ ಹಿನ್ನಲೆಯಲ್ಲಿ ವಿವರಿಸಿಕೊಳ್ಳಬೇಕಾಗುತ್ತದೆ. ಅದರ ಬಗೆಗಳು, ನಿಯಮಗಳು ಅದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಥನಗಳು, ಅದು ಹೇಳುತ್ತಿರುವ ನೋವಿನ ನೆಲೆಗಳನ್ನು ಕುರಿತು ಸಮಗ್ರ ಅಧ್ಯಯನ ಇದುವರೆಗೂ ಸಾಧ್ಯವಾಗದಿರುವುದು ಈ ಕ್ಷೇತ್ರದ ಬಹುದೊಡ್ಡ ಕೊರತೆ.

ಬಲಿ, ಹಬ್ಬ ಹರಿದಿನಗಳು, ಅಮಾವಾಸ್ಯೆ ಹುಣ್ಣಿಮೆ, ಜಾತ್ರೆಗಳು, ಸಂತೆಗಳು. ಸಂತೆಯಲ್ಲಿ, ಜಾತ್ರೆಯಲ್ಲಿ ಮಾರಾಟವಾಗುತ್ತಿದ್ದ ವಸ್ತುಗಳು. ದನಗಳ ಜಾತ್ರೆ, ದೇವರ ಉತ್ಸವಗಳು, ಮುಂತಾದ ಬೇಕಾದಷ್ಟು ವಿವರಗಳು ಶಾಸನಗಳಲ್ಲಿ ಉಲ್ಲೇಖವಾಗಿವೆ. ಇದರ ಜೊತೆಗೆ ರಾಗಿ ಹೊಲ, ಜೋಳದ ಹೊಲಗಳಲ್ಲಿ ಗಿಳೀ ಕಾಯುವ, ನಾಟಿಮಾಡುವ ಸ್ತ್ರೀಯರ ವಿವರಗಳು ಉಲ್ಲೇಖವಾಗಿರುವುದು ತಿಳಿದ ಸಂಗತಿ. ಹಾಗಾಗಿ ಇವೆಲ್ಲಾ ಮಾಹಿತಿಗಳನ್ನು ಒಟ್ಟುಗೂಡಿಸಿ ಸಾಮಾನ್ಯ ಮನುಷ್ಯನ ಬದುಕನ್ನು ಅರ್ಥಮಾಡಿಕೊಳ್ಳಲು, ಶಾಸನ ಮತ್ತು ಜನಪದರನ್ನು ತೌಲನಿಕವಾಗಿ ವಿಮರ್ಶೆಗೆ ಒಳಪಡಿಸಿ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎನ್ನುವುದನ್ನು ಸಂಶೋಧಕರು ಮನಗಾಣಬೇಕಾಗಿದೆ.