ಪ್ರಸ್ತುತ ದಿನಗಳಲ್ಲಿ ಪರಿಸರ, ಪ್ರಕೃತಿಯ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಬೆಟ್ಟ, ಗುಡ್ಡ, ಗಿಡ, ಮರ, ಕಾಡು, ಕಣಿವೆ, ಕೆರೆ, ಕುಂಟೆಗಳು ದಿನನಿತ್ಯ ಮಾಯವಾಗುತ್ತಿವೆ. ಜಾಗತೀಕರಣ, ಆಧುನೀಕರಣ, ಅಭಿವೃದ್ದಿ ಹೆಸರಿನಲ್ಲಿ ದಿನನಿತ್ಯ ಭೂಮಿಯ ಒಳಗನ್ನು, ಹೊರಗನ್ನು ವಿಕಾರಗೊಳಿಸುತ್ತಿದ್ದೇವೆ. ಆದರೆ ನಮ್ಮ ಪೂರ್ವಿಕರು ಅದನ್ನು ದೈವ ಸಮಾನವೆಂದು ಕಾಪಾಡಿಕೊಂಡು ಬಂದಿದ್ದಾರೆ. ನಾವು ಅದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯವಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಾಚೀನರು ಏನೇನು ಕ್ರಮ ಕೈಕೊಂಡಿದ್ದರು ಎಂಬುದನ್ನು ತಿಳಿಯಲು ನಾವು ಪ್ರಾಚೀನ ಗ್ರಂಥಗಳು, ಶಾಸನಗಳನ್ನು ಅವಲೋಕಿಸಬಹುದು. ಪರಿಸರ, ಪ್ರಕೃತಿಯ ಬಗ್ಗೆ ಜಾಗೃತಿ ಮೂಡುತ್ತಿರುವ ಈ ದಿನಗಳಲ್ಲಿ ಇಂಥ ಅಧ್ಯಯನಗಳು ಬಹಳ ಮುಖ್ಯ.

ಅನೇಕ ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಮೂಲ ಸೆಲೆಯೇ ಇಲ್ಲದಂತೆ ಕಣ್ಮರೆಯಾಗಿವೆ. ಮನುಷ್ಯನಿಗೆ ಈ ಪ್ರಾಣಿ-ಪಕ್ಷಿ, ಸಸ್ಯ, ನದಿ ಅರಣ್ಯ ಮುಂತಾದ ನೈಸರ್ಗಿಕ ಸಂಪತ್ತಿನಿಂದ ಆಗುವ ಪ್ರಯೋಜನ ಎಂಥದು, ಇವುಗಳೊಂದಿಗೆ ಬದುಕುತ್ತಿದ್ದ ಜೀವ ವೈವಿಧ್ಯದ ಜೀವನಕ್ರಮಗಳು ಎಂಥವು ಎಂಬುದನ್ನು ತಿಳಿಯುವಲ್ಲಿ ಶಾಸನಗಳು ಸಹಕಾರಿಯಾಗಿವೆ, ನಮ್ಮ ಮಹಾಕಾವ್ಯಗಳಲ್ಲಿ ಬರುವ ೧೮ ವರ್ಣನೆಗಳಲ್ಲಿ ಪ್ರಕೃತಿ ವರ್ಣನೆಗೆ ಹೆಚ್ಚು ಸ್ಥಾನವಿದೆ.

ಪಂಪನ ತಮ್ಮ ಜಿನವಲ್ಲಭನು ಹೆಸರಿಸಿರುವ ಕವಿತಾಗುಣಾರ್ಣವ ‘ಮದನವಿಲಾಸ’ ಎಂಬ ಬನವನ್ನು ಕಟ್ಟಿಸಿದ ಉಲ್ಲೇಖ ಕುರಿಕ್ಯಾಲ ಶಾಸನದಲ್ಲಿ ಬರುತ್ತದೆ. ಹಾಗೆಯೆ ಬಹಳ ಮುಖ್ಯವಾಗಿ ಗಮನಿಸುವ ಇನ್ನೊಂದು ಸಂಗತಿ ಎಂದರೆ “ಶಾಸನ ರಚನಾಕಾರನೊಬ್ಬನಿಗೆ ಶಾಸನ ಬರೆದುಕೊಟ್ಟದ್ದಕ್ಕಾಗಿ ಸಸಿಗಳನ್ನು ದಾನನೀಡಿದ ವಿವರಗಳನ್ನು (ಸೌ. ಇ. ಇ. ೨೦. ೧೭೩) ಶಾಸನವೊಂದು ತಿಳಿಸುತ್ತದೆ. ಇದು ಇಂದಿನ ಪರಿಸರ ವಿರೋಧಗಳಿಗೆ ಏನನ್ನು ತಿಳಿಸುತ್ತಿದೆ ಎಂಬುದು ನನಗೆ ಬಹಳ ಮುಖ್ಯ. ಇಂಥ ಇನ್ನೂ ಹಲವಾರು ವಿವರಗಳನ್ನು ಶಾಸನಗಳು ಉಲ್ಲೇಖಿಸುತ್ತವೆ. ಅವುಗಳ ಶೋಧ ಮತ್ತು ಸಮಗ್ರತೆ ಬಹಳ ಮುಖ್ಯ.

ಶಾಸನಗಳಲ್ಲಿ ಉಲ್ಲೇಖವಾಗಿರುವ ಉದ್ಯಾನಗಳು, ಕಾಡು, ಗಿಡ, ಮರಗಳು ಅದರ ರಕ್ಷಣೆ ನಿರ್ಮಾಣ, ವಹಿವಾಟು, ಅದಕ್ಕೆ ಸಂಬಂಧಿಸಿದ ಉಲ್ಲೇಖಗಳು, ವಿವಿಧ ಬಗೆಯ ಸಸ್ಯಗಳು ಅವುಗಳ ಬಳಕೆಯ ವಿಧಾನ, ಮರ ಮುಟ್ಟುಗಳು, ಇತ್ಯಾದಿ ವಿಷಯಗಳ ಬಗ್ಗೆ ಅನೇಕ ಶಾಸನಗಳಲ್ಲಿ ಮಾಹಿತಿ ದೊರೆಯುತ್ತದೆ. ಉದಾಹರಣೆಗೆ : ಬಿ. ಜಿ. ಎಲ್ ಸ್ವಾಮಿ ಅವರ ‘ಶಾಸನಗಳಲ್ಲಿ ಗಿಡಮರಗಳು’ ಹಾಗೂ ಎಂ. ಜಿ. ನಾಗರಾಜ್ ಅವರ ‘ದೇವರ ಕಾಡು’ ಕೃತಿಗಳನ್ನು ಗಮನಿಸಬಹುದು. ಇದನ್ನು ಹೊರತುಪಡಿಸಿದರೆ ಇಂಥ ಅಧ್ಯಯನಗಳೇ ನಡೆದಿಲ್ಲ. ಮಲೆನಾಡು. ಕರಾವಳಿ ತೀರದಲ್ಲಿ ಸಿಗುವ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಅಪರೂಪದ ಶಾಸನಗಳಲ್ಲಿ ಹೆಚ್ಚು ಹೆಚ್ಚು ಮಾಹಿತಿ ಲಭ್ಯವಾಗುತ್ತದೆ. ಇವುಗಳ ಸಮಗ್ರ ಅಧ್ಯಯನವಾಗಲೀ ಬಿಡಿ ಬಿಡಿ ಅಧ್ಯಯನವಾಗಲೀ ನಡೆದಿಲ್ಲ.

ಶಾಸನಗಳು ಉಲ್ಲೇಖಿಸುವ ಪ್ರಾಣಿ-ಪಕ್ಷಿಗಳು, ವನ್ಯಜೀವಿಗಳು, ಉದ್ಯಾನಗಳ ಬಗ್ಗೆಯೂ ಸಮಗ್ರವಾದ ಅಧ್ಯಯನ ಮಾಡಲು ಅವಕಾಶವಿದೆ. ಇಂಥ ಸಂಶೋಧನೆ ಸಸ್ಯ ಪ್ರಪಂಚ, ಸಸ್ಯ ಶಾಸ್ತ್ರೀಯ ಮತ್ತು ಸಾಂಸ್ಕೃತಿಕ ತಿಳಿವಳಿಕೆಗೆ ಅನುಕೂಲವಾಗುತ್ತದೆ. ಶಾಸನಗಳಲ್ಲಿ ಪ್ರಕಟವಾಗಿರುವ ಬಗೆಬಗೆಯ ಗಿಡಮರ ಬಳ್ಳಿಗಳು ಇಂದು ಎಷ್ಟು ಇಲ್ಲವಾಗಿವೆ. ಹಾಗಾಗಿ ಒಂದು ಹೊಸ ಪ್ರಪಂಚವನ್ನೇ ದರ್ಶಿಸಲು ಸಾಧ್ಯವಿದೆ. ಇದರ ಜೊತೆಗೆ ಕಾಡ್ಗಿಚ್ಚು, ಗಾಳಿ, ಮಳೆ, ನದಿ ಪ್ರವಾಹ, ಪ್ರಕೃತಿ ವಿಕೋಪಗಳ ಬಗ್ಗೆಯೂ ತಿಳಿಯಬಹುದು.