ಪ್ರಾಚೀನ ಕರ್ನಾಟಕ ಕಲೆಗಳ ತವರೂರಾಗಿದ್ದಿತ್ತು. ಅನೇಕ ರಾಜರು ಸ್ವತಃ ತಾವೇ ಕಲಾವಿದರಾಗಿದ್ದರು. ಅಲ್ಲದೆ ಅನೇಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಆಶ್ರಯದಲ್ಲಿಟ್ಟುಕೊಂಡು ಕಲೆ, ಕಲಾವಿದ ಎರಡನ್ನು ಬೆಳೆಸುತ್ತಿದ್ದರು. ಪ್ರದರ್ಶನ ಕಲೆಗಳಾದ ಹಾಡುಗಾರಿಕೆ, ವಾದ್ಯಗಾರರು, ನೃತ್ಯ-ನೃತ್ಯಗಾರರು, ಇಂದ್ರಜಾಲ, ವೈಣಿಕರು, ಗಾಯಕರು, ನಟ, ನಾಟ್ಯ-ಕಾವ್ಯ, ಸಂಗೀತಗೋಷ್ಟಿಗಳು, ಸಂಗೀತಗಾರರು ಅವರ ವಸ್ತ್ರಾಭರಣ, ಜೀವನ ಚಿತ್ರಣ, ಅವರ ಸ್ಥಾನಮಾನಗಳು ಸಮಾಜದೊಂದಿಗೆ, ಪ್ರಭುತ್ವದೊಂದಿಗೆ ಇದ್ದ ಅವರ ಸಂಬಂಧಗಳನ್ನು ಶೋಧಿಸಬೇಕಾಗಿದೆ. ಚಿತ್ರಕಲೆಯಂತೂ ಅದ್ಬುತವಾದದ್ದು. ರಾಜಾಶ್ರಯದಲ್ಲಿ ಅನೇಕ ಚಿತ್ರ ಕಲಾವಿದರಿರುತ್ತಿದ್ದರು. ರಾಜಾಲಯ, ಅರಮನೆ, ದೇವಾಲಯಗಳ ಒಳಗೋಡೆಗಳ ಮೇಲೆ ಇಂದಿಗೂ ಅಚ್ಚಳಿಯದೇ ಇರುವ ಶಿಲ್ಪಕಲೆ, ಚಿತ್ರಕಲೆಯಲ್ಲಿ ಪ್ರವೀಣರಾಗಿದ್ದರು ಎಂಬುದನ್ನು ಶಾಸನ ಹಾಗೂ ಚರಿತ್ರೆಯಿಂದ ತಿಳಿಯಬಹುದು.

ಕಲೆ ಹಾಗೂ ಸಾಂಸ್ಕೃತಿಕ ಬದುಕು ಪ್ರಾಚೀನ ಕರ್ನಾಟಕದ ಬಹುಮುಖ್ಯ ಕಾಳಜಿಯಾಗಿದ್ದಿತ್ತು. ಬೇಲೂರು, ಹಳೇಬಿಡು, ಐಹೊಳೆ, ಪಟ್ಟದಕಲ್ಲು ಮುಂತಾದ ಸ್ಥಳಗಳಲ್ಲಿರುವ ಶಿಲ್ಪ ವೈಶಿಷ್ಟ್ಯವನ್ನು ಗಮನಿಸಿದರೆ ಶಿಲ್ಪಿಗಳು, ಅವರ ಪರಿಣತಿ ಅವರ ಜೀವನ ವಿವರ, ಸಂಬಳ ಸಾರಿಗೆ ಇತ್ಯಾದಿಗಳನ್ನು ಕುರಿತು ಆಲೋಚಿಸಬಹುದು. ಹಾಗೆಯೇ ಅನೇಕ ದೇವಾಲಯ, ಅರಮನೆ, ಕೋಟೆ ಕೊತ್ತಲ, ಮಠ, ಮಂದಿರ, ಬಸದಿಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು, ವಾಸ್ತುಶಿಲ್ಪದ ವೈಶಿಷ್ಟ್ಯ ಇತ್ಯಾದಿಗಳನ್ನು ಸಂಶೋಧಿಸಲು ಆಸಕ್ತರು ಗಮನ ವಹಿಸಿದರೆ ಒಂದು ದೊಡ್ಡ ಅಧ್ಯಯನ ಸಾಧ್ಯವಾಗುತ್ತದೆ. ಪ್ರಾಚೀನ ಕರ್ನಾಟಕದ ವಾಸ್ತು ವೈವಿಧ್ಯಗಳು ಇದರಿಂದ ತಿಳಿದುಬರುತ್ತವೆ.

ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದ ಕ್ರೀಡೆ, ಮನರಂಜನೆ, ಆಹಾರಪದ್ಧತಿಗಳು, ಪಾನೀಯಗಳನ್ನು ಕುರಿತು ವಿಶಿಷ್ಟವಾದ ಸಂಶೋಧನೆ ನಡೆಸಬಹುದು. ಕರ್ನಾಟಕದ ಹಲವಾರು ಶಾಸನಗಳಲ್ಲಿ ಇದಕ್ಕೆ ಪೂರಕ ಮಾಹಿತಿಗಳು ಲಭ್ಯವಾಗುತ್ತವೆ. ಇದರಿಂದ ಶಾಸನಗಳು ಇವುಗಳ ಬಗ್ಗೆ ಏನನ್ನು ಹೇಳುತ್ತವೆ ಎಂಬುದೇ ಒಂದು ಕುತೂಹಲದ ಸಂಗತಿ. ಇದುವರೆಗೂ ಈ ರೀತಿಯ ಅಧ್ಯಯನಗಳು ನಡೆದೇ ಇಲ್ಲ ಎಂದು ಹೇಳಬೇಕು. ಉದಾಹರಣೆಗೆ ನೆತ್ತ, ಜೂಜು, ಕುಂದಕ, ಬೇಟೆ, ಮುಂತಾದ ಕ್ರೀಡೆಗಳ ಉಲ್ಲೇಖ ಬಹಳಷ್ಟು ಶಾಸನಗಳಲ್ಲಿವೆ. ಅವುಗಳನ್ನು ಸಮಗ್ರವಾಗಿ ಅಭ್ಯಸಿಸಿ ಶೋಧಿಸಬೇಕಾಗಿದೆ.

ಆಹಾರ-ಪಾನೀಯಗಳ ವಿವರಗಳು ಅಷ್ಟೇ ಮುಖ್ಯವಾದದ್ದು. ಉಡುಗೆ ತೊಡುಗೆಗಳು, ಆಭರಣ, ರಾಜರು, ರಾಣಿಯರು, ಸೈನಿಕರು, ಸಾಮಾನ್ಯರು ಬಳುಸುತ್ತಿದ್ದ ಪಾನೀಯಗಳಲ್ಲಿ ಬಹುಶಃ ವ್ಯತ್ಯಾಸ ಇದ್ದೇ ಇರುತ್ತದೆ. ಆಹಾರದಲ್ಲೂ ಅಷ್ಟೇ ಹಾಗಾಗಿ ಅವುಗಳ ತಯಾರಿಕೆಯಲ್ಲಿದ್ದ ದೇಶೀಯ ಅಥವಾ ಸ್ಥಳೀಯ ಕಲ್ಪನೆ ಮುಂತಾದವುಗಳನ್ನು ನಾವು ಶೋಧಿಸಿ ಸಮಗ್ರ ಅಧ್ಯಯನಕ್ಕೆ ಒಳಪಡಿಸಲು ಬೇಕಾದಷ್ಟು ಮಾಹಿತಿ ಹಾಗೂ ಅವಕಾಶ ಇದೆ ಎಂದು ಹೇಳಬಹುದು.