ಒಂದು ಶಾಸನ ರೂಪುಗೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ರಚನಾಕ್ರಮ ಇರುತ್ತದೆ. ಇದನ್ನು ಶಾಸನದ ವಿಷಯನ್ನು ಪೂರ್ವಿ ಎನ್ನುತ್ತಾರೆ. ಅಂದ ಹಾಗೆ ಅವುಗಳಿಗೆ ಬೇರೆ ಬೇರೆಯ ಮಿತಿಗಳೂ ಇರುತ್ತವೆ. ಬೇರೆ ಬೇರೆ ಸ್ವರೂಪಗಳಲ್ಲಿರುತ್ತವೆ. ಅಂದರೆ ಮೊದಲು ರಾಜನ ಮನೆತನದ ಅಥವಾ ಅವನ ಪೂರ್ವಿಕರ ವಿವರಗಳು, ಆನಂತರ ಅವನ ವಂಶಾವಳೀ, ಬಿರುದುಗಳು, ಆನಂತರ ಘಟನೆ, ಕೊನೆಯಲ್ಲಿ ಶಾಸನ ಹಾಳು ಮಾಡಿದವರಿಗೆ ಒದಗುವ ಸಂಕಷ್ಟ ಅಥವಾ ಶಾಪ, ಶಾಸನ ರಕ್ಷಿಸಿದವರಿಗೆ ಸಿಗುವ ಪುಣ್ಯ ಇತ್ಯಾದಿಗಳ ವಿವರಗಳು ಬರುತ್ತವೆ. ಅದು ವೀರಶಾಸನದ ರೀತಿಗೂ, ದಾನಶಾಸನ, ದತ್ತಿ, ಮಾನ್ಯೆ, ಪ್ರಶಸ್ತಿ ಶಾಸನ, ವಿಜಯಶಾಸನ, ಇತ್ಯಾದಿ ಶಾಸನಗಳಲ್ಲಿ ಬೇರೆ ಬೇರೆಯ ಸ್ವರೂಪದಲ್ಲಿ ಕಂಡುಬರುತ್ತದೆ. ಅಂದರೆ ಕಾಲಕಾಲಕ್ಕೆ ಶಾಸನಗಳ ರಚನಾ ವಿನ್ಯಾಸಗಳು, ವಸ್ತುಗಳು ಬದಲಾಗುತ್ತಾ ಬಂದಿವೆ.

ಹೀಗಾಗಿ ಶಾಸನಗಳ ಭಾಷೆ, ಸಾಹಿತ್ಯ, ಛಂದಸ್ಸು, ನಿರೂಪಣಾ ಕ್ರಮ, ಶೈಲಿ. ತಂತ್ರ, ವಸ್ತು, ಪದ್ಯದ ಶೈಲಿ, ಗದ್ಯದ ಶೈಲಿ ಇತ್ಯಾದಿ ವಿಷಯಗಳನ್ನು ಕುರಿತು ಅದ್ಬುತವಾದ ಸಂಶೋಧನೆ ನಡೆಸಬಹುದು. ಅದರ ಜೊತೆಗೆ ಸಮಕಾಲೀನ ಸೃಜನಶೀಲ ಬರಹಗಳಾದ ಕಥೆ, ಕಾವ್ಯಗಳ ಮೇಲೆ ಈ ಶಾಸನಗಳು ಅದರಲ್ಲಿರುವ ಭಾಷೆ, ಛಂದಸ್ಸು ಶೈಲಿ ಇತ್ಯಾದಿಗಳು ಯಾವ ರೀತಿಯ ಪರಿಣಾಮ, ಪ್ರಭಾವ ಬೀರಿವೆ ಎನ್ನುವುದನ್ನು ಪರಾಮರ್ಶಿಸಿ ಅಧ್ಯಯನ ಮಾಡಲು ಹಲವಾರು ಅವಕಾಶಗಳಿವೆ. ಆರ್. ನರಸಿಂಹಾಚಾರ್ ಅವರು ‘ಶಾಸನ ಪದ್ಯ ಮಂಜರಿ ‘, ಹು. ಕ. ಜಯದೇವ ಅವರ ಶಾಸನ ಮತ್ತು ಗದ್ಯ ಕೃತಿಗಳನ್ನು ಇಲ್ಲಿ ಗಮನಿಸಬಹುದು.