ಶಾಸನಗಳನ್ನು ಹಾಕಿಸುವುದು ಎಂದರೆ ಸುಲಭ, ಸರಳವಾದ ಕೆಲಸವಲ್ಲ. ಅದು ಸಿದ್ದಗೊಳ್ಳಬೇಕಾಗಿದ್ದರೆ ಮೂರು ನಾಲ್ಕು ಹಂತಗಳಲ್ಲಿ ಕೆಲಸ ನಡೆಯಬೇಕಿತ್ತು ರಾಜನೋ, ಮಂತ್ರಿಯೋ, ಅಧಿಕಾರಿಯೋ, ಶಾಸನವನ್ನು ಹೇಳುತ್ತಿದ್ದನು. ಅದನ್ನು ಬಟ್ಟೆ ಅಥವಾ ಕಾಗದ, ಇನ್ನಾವುದೋ ವಸ್ತುವಿನ ಮೇಲೆ ಇನ್ನೊಬ್ಬ ಬರದುಕೊಳ್ಳುತ್ತಿದ್ದನು. ಹಾಗೆ ಬರೆದುಕೊಂಡಿದ್ದನ್ನು ಲಿಪಿಕಾರ ಅಥವಾ ಖಂಡಣೆಕರ ಕಲ್ಲಿನ ಮೇಲೋ ಲೋಹದ ಮೇಲೋ ಕೆತ್ತುತ್ತಿದ್ದನು. ಅದಾದ ಮೇಲೆ ಸೂಕ್ತ ಸ್ಥಳದಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ನಿಲ್ಲಿಸುತ್ತಿದ್ದ ಪರಿಪಾಠ ಇತ್ತು. ಹೀಗಾಗಿ ಈ ಕಾರ್ಯದಲ್ಲಿ ಭಾಗಿಯಾದವರನ್ನು ಶಾಸನ ರೂವಾರಿಗಳು, ಶಾಸನ ಲಿಪಿಕಾರರು, ಶಾಸನ ಖಂಡೆಣೆಕಾರರು, ಶಾಸನ ಕವಿಗಳು ಇತ್ಯಾದಿಯಾಗಿ ಕರೆಯುತ್ತಿದ್ದುಂಟು-ಇವರ ಸಹಕಾರ ಸಲಹೆಗಳಿಲ್ಲದಿದ್ದರೆ ಲಕ್ಷಾಂತರ ಶಾಸನಗಳು ಬೆಳಕು ಕಾಣುವುದು ಕಷ್ಟವಾಗುತ್ತಿತ್ತು.

ಮೇವುಂಡಿ ಮಲ್ಲಾರಿ ಅವರ ‘ಶಾಸನ ಕವಿಗಳು’ ಎನ್ನುವ ಒಂದು ಕೃತಿಯನ್ನು ಹೊರತುಪಡಿಸಿದರೆ ಈ ಹಿನ್ನೆಲೆಯಲ್ಲಿ ಶಾಸನಗಳ ಅಧ್ಯಯನವೇ ನಡೆದಿಲ್ಲ ಎನಿಸುತ್ತದೆ. ಆದಕಾರಣ ಅವರ ಅರ್ಹತೆ, ವಿದ್ಯೆ, ಅವರಿಗೆ ನೀಡುತ್ತಿದ್ದ ಭತ್ಯೆ, ಅವರ ಜೀವನ ವಿವರಗಳು ಅವರಿಗಿದ್ದ ರಾಜಾಶ್ರಯಗಳು ಇತ್ಯಾದಿಗಳ ತಿಳಿವಳಿಕೆಗಾಗಿ ಸಮಗ್ರ ಅಧ್ಯಯನ ನಡೆಯಬೇಕಿದೆ. ಶಾಸನ ಹಾಕಿಸಿದ ರಾಜನಷ್ಟೇ ಶಾಸನ ಕೆತ್ತಿದ ಲಿಪಿಕಾರ, ಕವಿಗಳು, ಖಂಡಣೆಕಾರರೂ ಮುಖ್ಯ ಎಂಬುದನ್ನು ಸಂಶೋಧಕರು ಶೋಧಿಸಬೇಕಾಗಿದೆ. ಸಮಾಜದಲ್ಲಿ ಅವರಿಗಿದ್ದ ಗೌರವಗಳನ್ನು ಅಥವಾ ಸ್ಥಾನಮಾನಗಳನ್ನು ಸಮಾಜದ ಇತರರೊಂದಿಗೆ ಅವರಿಗಿದ್ದ ಸಂಬಂಧಗಳನ್ನು ಕುರಿತು ಯೋಚಿಸಲು ಇಲ್ಲಿ ಅವಕಾಶವಿದೆ. ಸಾವಿರಾರು ಶಾಸನಗಳು ಇದಕ್ಕೆ ಆಕರವಾಗಿ ದೊರೆಯುತ್ತವೆ.