ಪ್ರಾಚೀನ ಕರ್ನಾಟಕದ ಆಡಳಿತಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡಲು ಶಾಸನಗಳು ಬಹುಮುಖ್ಯ ಅಕರಗಳು. ಚಕ್ರಾದಿಪತ್ಯದ ಅತ್ಯುನ್ನತ ನೆಲೆಯಾದ ರಾಜಧಾನಿಯಿಂದ ಆ ಕ್ಷೇತ್ರಕ್ಕೆ ಒಳಪಟ್ಟ ಸಣ್ಣ ಗ್ರಾಮವೊಂದರವರೆಗೆ ಅಧಿಕಾರ ಕೇಂದ್ರೀಕರಣ, ವಿಕೇಂದ್ರಿಕರಣಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಆಡಳಿತ ಕ್ರಮ ಇತ್ತು ಎಂಬುದೂ ಕುತೂಹಲಕರ ಸಂಗತಿ. ನಾಡು, ಮಂಡಲ, ಸೀಮೆ, ಊರು, ಗ್ರಾಮ, ಅಗ್ರಹಾರ, ಪಟ್ಟಣ್ಣ, ನಗರ, ಅರಮನೆ, ಮಠಗಳು, ದೇವಾಲಯಗಳು, ಬಸದಿಗಳು ಇವೆಲ್ಲಾ ಅಧಿಕಾರದ ಕೇಂದ್ರಗಳಾಗಿದ್ದವು. ಇಲ್ಲಿಯ ಆಡಳಿತ ನಿರ್ವಹಣೆಗಾಗಿ ಅನೇಕ ಅಧಿಕರಿಗಳು ಪ್ರತ್ಯೇಕವಗಿ ಸಾಂಘಿಕಾಗಿ, ಅಧೀನವಾಗಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಧಿಕಾರದ ಮಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಏಳಿಗೆಗೆ ದುಡಿದಿದ್ದಾರೆ. ಅವರಿಗಿದ್ದ ಅಧಿಕಾರದ ಮಿತಿಯಲ್ಲಿ ಅವರು ಕೈಗೊಂಡ ಜನಮುಖಿ ಕಾರ್ಯಗಳು, ಜನವಿರೋಧಿ ಕಾರ್ಯಗಳು, ಅವರಿಗಿದ್ದ ವಿನಾಯ್ತಿಗಳು, ಸ್ವಾತಂತ್ಯ್ರ ಇತ್ಯಾದಿ ವಿವರಗಳು ಅನೇಕ ಶಾಸನಗಳಲ್ಲಿ ಲಭ್ಯವಿದೆ. ಅವುಗಳ ಶೋಧನೆ ಕ್ರಮಬದ್ಧ ಅಧ್ಯಯನ ನಡೆಯಬೇಕಾಗಿದೆ.

ಹಾಗೆಯೇ ಯಾವ ಯಾವ ಕಾಲಘಟ್ಟಗಳಲ್ಲಿ ಈ ಅಧಿಕಾರ ಕೇಂದ್ರಗಳು ಬದಲಾವಣೆ ಹೊಂದಿದವು ಅದರ ವಿವಿಧ ನೆಲೆಗಳು ಯಾವುವು ಅದರಿಂದ ಉಂಟಾದ ಬದಲಾವಣೆಯ ಲಾಭ-ನಷ್ಟಗಳೇನು ಎನ್ನುವುದರ ಶೋಧನೆ ಆಗಬೇಕಿದೆ. ರಾಜ, ಮಂತ್ರಿ, ಸಾಮಂತ, ದಂಡಾಧಿಕಾರಿ, ಮಹಾಪ್ರಧಾನಿ ಮಹಾಮಾತ್ಯ, ಸಂಧಿವಿಗ್ರಹಿ, ಮನೆವೆಗ್ಗಡೆ, ತಂತ್ರಪಾಲ, ಗೌಡ, ಶಾನುಭೋಗ ಪಟೇಲ, ತೋಟಿ, ತಳವಾರ, ಅಯಗಾರರು, ನೀರುಗಮಟಿ. ಇದರ ಜೊತೆಗೆ ಕುಮಾರವೃತ್ತಿ, ಬೀಳವೃತ್ತಿ, ಅಚಲವೃತ್ತಿ, ಅಣುಗವೃತ್ತಿ, ಅವರ ಸ್ಥಾನ ಕಾರ್ಯವ್ಯಾಪ್ತಿ, ಗಾವುಂಡ, ಪ್ರಭುಗಾವುಂಡ, ಊರಗಾವುಂಡ ಇನ್ನೂ ಬೇರೆ ಬೇರೆ ರೀತಿಯ ಆಡಳಿತಾಧಿಕಾರಿಗಳು, ಅವರ ಆಡಳಿತ ವೈಖರಿಗಳ, ಕಾರ್ಯವಿಧಾನ, ಅವರು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು, ಜನರೊಂದಿಗೆ ಇದ್ದ ಒಡನಾಟ ಇತ್ಯಾದಿ ವಿಷಯಗಳನ್ನು ಕುರಿತು ಅಧ್ಯಯನ ಮಾಡುವವರಿಗೆ ಶಾಸನಗಳು ಫಲವತ್ತಾದ ನದಿ ಮುಖಜ ಭೂಮಿ ಇದ್ದಂತೆ. ಹಾಗಾಗಿ ವಿದ್ವಾಂಸರಿಗೆ ಸಂಶೋಧನಾ ಆಸಕ್ತರಿಗೆ ಇದು ಬೇಕಾದಷ್ಟು ಅವಕಾಶ ನೀಡುತ್ತದೆ. ಅಕರಗಳನ್ನು ಒದಗಿಸುತ್ತದೆ.