ಪ್ರಾಚೀನ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಕುರಿತು ಅಧ್ಯಯನಗಳು ನಡೆದಿರುವುದು ತುಂಬಾ, ಕಡಿಮೆ ಎನ್ನಬಹುದು. ಎಂ ಚಿದಾನಂದಮೂರ್ತಿಯವರ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ದಲ್ಲಿ ಐದಾರು ಪುಟಗಳಷ್ಟು ಉಲ್ಲೇಖ ಬರುತ್ತದೆ. ಆದರೆ ಇದು ಕ್ರಿ.ಶ. ೧೧೫೦ಕ್ಕೆ ಸೀಮಿತವಾಗಿದೆ. ಆನಂತರದ ವಿವರಗಳು ಸಿಗುವುದಿಲ್ಲ. ‘ಪ್ರಾಚೀನ ಕರ್ನಾಟಕದಲ್ಲಿ ವಿದ್ಯಾಭ್ಯಾಸ’ ಎನ್ನುವ ಜೋತ್ಸ್ನಕಾಮತ್ ಅವರ ಅಧ್ಯಯನವೂ ಇದೇ ಮಾದರಿಯದು. ಹಾಗಾಗಿ ವಿದ್ಯಾಭ್ಯಾಸದ ವಿಸ್ತೃತ ಸ್ವರೂಪಗಳು ಸ್ಪಷ್ಟವಾಗಿ ಅಧ್ಯಯನಕ್ಕೆ ಒಳಪಟ್ಟಿಲ್ಲವೆಂದೇ ಹೇಳಬೇಕು. ವರ್ತಮಾನದ ಶಿಕ್ಷಣ ವ್ಯವಸ್ಥೆಗೆ ಅದರಿಂದ ಆಗುವ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯ ಸಂಶೋಧನೆಗಳು ನಡೆಯಬೇಕಾಗಿದೆ.

ಪ್ರಾಚೀನ ಕರ್ನಾಟಕದ ವಿದ್ಯಾಭ್ಯಾಸ ಪದ್ಧತಿಯು ಬಹುಪಾಲು ಧಾರ್ಮಿಕವಾದುದು. ವೈದಿಕ ಯುಗದಲ್ಲಿ ‘ವಿದ್ಯಾಸಂಸ್ಥೆಗಳೆಂದು ಕರೆಸಿಕೊಳ್ಳುವ ಕೇಂದ್ರಗಳಿರಲಿಲ್ಲ. ಗುರುವಿನ ಮನೆಯೇ ಪಾಠಶಾಲೆಯಾಗಿತ್ತು. ವಿದ್ಯಾರ್ಥಿಯು ಗುರುವಿನ ಮನೆಯಲ್ಲಿ ಗುರುಸೇವೆ ಮಾಡುತ್ತಾ ಗುರುವಿನಿಂದ ವಿದ್ಯೆಯನ್ನು ಕಲಿಯುತ್ತಿದ್ದನು. ಇಂಥ ವಿದ್ಯಾರ್ಥಿಯನ್ನು ‘ಅಂತೆವಾಸಿ’ ಎಂದು ಕರೆಯುತ್ತಿದ್ದರು. ಕ್ರಿಸ್ತಪೂರ್ವ ಮೂರನೇ ಶತಮಾನದ ಅಶೋಕನ ಕಾಲದಲ್ಲಿ ಬೌದ್ಧವಿಹಾರಗಳು ದೊಡ್ಡ ಸಂಸ್ಥೆಗಳಾಗಿ ಬೆಳೆದು, ಕ್ರಮೇಣ ವಿದ್ಯಾಕೇಂದ್ರಗಳಾಗಿ ಪರಿಣಮಿಸಿದವು. ಇವು ಆರಂಭದಲ್ಲಿ ಭಿಕ್ಷು, ಭಿಕ್ಷಣಿಯರ ಶಿಕ್ಷಣಕ್ಕಾಗಿ ಮೀಸಲಾಗಿದ್ದವು. ಕಾಲಕ್ರಮೇಣ ಉಳಿದವರಿಗೂ ಇಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಸಿಕ್ಕಿತು ಎನ್ನಬಹುದು. ಇದರಿಂದ ಪ್ರೇರಣೆ ಹೊಂದಿದ ಹಿಂದೂಗಳು ತಮ್ಮ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದರೂ ಇರಬಹುದು. ಡಾ. ಆಲ್ತೇಕರರು ಹೇಳುವಂತೆ ಹಿಂದೂಗಳಲ್ಲಿ ವ್ಯವಸ್ಥಿತ ವಿದ್ಯಾಕೇಂದ್ರಗಳು ಕ್ರಿ. ಶ. ೯ನೇ ಶತಮಾನದವರೆಗೂ ಕಾಣಿಸಿಕೊಳ್ಳುವುದಿಲ್ಲ. ಇದುವರೆಗೂ ಲಭ್ಯವಿರುವ ಪ್ರಾಚೀನ ಕರ್ನಾಟಕದ ಶಾಸನಗಳೂ ಈ ಮಾತನ್ನು ಖಚಿತಪಡಿಸುತ್ತವೆ.

ಅಶೋಕನಿಗಿಂತ ಹಿಂದಿದ್ದ ಜಾತಕ ಕತೆಗಳಲ್ಲಿ ಬರುವ ‘ತಕ್ಷ ಸಿಲೆ’ ಈಗಿನ ಬಿಹಾರದ ನಲಂದ, ಆಂಧ್ರಪ್ರದೇಶದ ಕಂಚಿ, ಇತ್ಯಾದಿ ಪ್ರಾಚೀನ ವಿದ್ಯಾಕೇಂದ್ರಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಇದ್ದದ್ದು ಕಂಡುಬರುತ್ತದೆ. ಹಾಗೆಯೇ ಪ್ರಾಚೀನ ಕರ್ನಾಟಕದಲ್ಲಿಯೂ ಸಹ ಇಂಥ ವಿದ್ಯಾಕೆಂದ್ರಗಳು ಬೇರೆ ಬೇರೆ ಸ್ವರೂಪದಲ್ಲಿ ಇದ್ದಿರಬೇಕು. ಕನ್ನಡ ಶಾಸನಗಳು ತಿಳಿಸುವಂತೆ ಅಗ್ರಹಾರ, ಬ್ರಹ್ಮಪುರಿ, ಮಠ, ಘಟಿಕಾಸ್ಥಾನ ಹಾಗೂ ದೇವಾಲಯ, ಬಸದಿ ಮುಂತಾದ ಕಡೆ ಶಿಕ್ಷಣ ಕಲಿಸುವುದು ರೂಢಿಯಲ್ಲಿತ್ತು. ಈ ರೀತಿ ಇದ್ದ ಶಿಕ್ಷಣ ಪದ್ಧತಿ ಎಂಥಹದು ಎಂಬುದು ಕುತೂಹಲಕರ ಅಧ್ಯಯನ.

ಪ್ರಾಥಮಿಕ ವಿದ್ಯಾಭ್ಯಾಸ, ಉನ್ನತ ಶಿಕ್ಷಣ, ಯಾವ ಯಾವ ಸ್ವರೂಪದಲ್ಲಿತ್ತು. ಅಲ್ಲಿ ಯಾವ ರೀತಿಯ ವಿಷಯಗಳನ್ನು ಕಲಿಸುತ್ತಿದ್ದರು. ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದ ಗುರುಗಳು ಯಾರು. ಅವರ ಅರ್ಹತೆ, ವಿದ್ವತ್ತು ಯಾವ ರೀತಿಯದು, ಯಾವ ಯಾವ ಭಾಷೆಗಳಲ್ಲಿ ಕಲಿಸುತ್ತಿದ್ದರು. ಪದವಿಗಳು ಯಾವುವು, ಪರೀಕ್ಷೆಗಳ ಸ್ವರೂಪ ಎಂಥಹದು ಅದರ ಮಾನದಂಡ ಯಾವುದೆಂಬ ವಿವರಗಳು ಅದ್ಬತವಾದವು. ಹಾಗೆಯೇ ಈ ಶಿಕ್ಷಣ ಕೆಂದ್ರಗಳಲ್ಲಿದ್ದ ಗುರುಗಳ ಸಂಬಳ -ಸಾರಿಗೆ, ಅವರ ಜೀವನ ವಿಧಾನಗಳು ಎಂಥವು ಎನ್ನುವುದನ್ನು ಅನೇಕ ಶಾಸನಗಳು ಉಲ್ಲೇಖಿಸುತ್ತವೆ. ಹಾಗೆಯೇ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಶಾಸನಗಳಲ್ಲಿ ಉಲ್ಲೇಖವಿರುವ ‘ಸ್ಥಾನಪತಿಗಳು’ ‘ನೈಷ್ಠಿಕ ಬ್ರಹ್ಮ’ ಭಟ್ಟವೃತ್ತಿ, ಕುಮಾರವೃತ್ತಿ, ‘ಮಾಣಿಗಲು’ ಇತ್ಯಾದಿ ಅಧಿಕಾರ ಅಥವಾ ವೃತ್ತಿಗಳ ಬಗ್ಗೆಯೂ ಅಧ್ಯಯನ ನಡೆಯಬೇಕಿದೆ.

ಪ್ರಾಚೀನ ಕರ್ನಾಟಕದ ವಿದ್ಯಾಕೇಂದ್ರಗಳಾದ ಬಿಜಾಪುರ ಜಿಲ್ಲೆಯ ಸಾಲೋಟಗಿ ಮಠ (೧೦ ನೇ ಶತಮಾನ) ಬಳ್ಳಿಗಾವೆಯ ಕೋಡಿಮಠ (೧೧ ನೇ ಶತಮಾನ), ಗುಲಬರ್ಗಾ ಜಿಲ್ಲೆಯ ಹೂವಿನ ಬಾಗೇವಾಡಿಯ ನಾಗಾವಿ, ನೊಳಂಬರ ಕಾಲದ ಈಗಿನ ಆಂಧ್ರ ಪ್ರದೇಶಕ್ಕೆ ಸೇರಿರುವ ‘ಹೆಂಜೇರು.’ ಧಾರವಾಡ ಜಿಲ್ಲೆಯ ಹೊದ್ದೂರು ಇತ್ಯಾದಿ ಸ್ಥಳಗಳಲ್ಲಿ ವಿದ್ಯಾಕೇಂದ್ರಗಳಿದ್ದವು. ಇವುಗಳ ವಿಸ್ತೃತವಾದ ಅಧ್ಯಯನ ನಡೆದೇ ಇಲ್ಲವಾಗಿದೆ. ಈ ಮೊದಲೇ ಹೇಳಿದ ವಿಚಾರಗಳ ಹಿನ್ನೆಲೆಯಲ್ಲಿ ಈ ವಿದ್ಯಾಕೇಂದ್ರಗಳ ಸಮಗ್ರವಾದ ಸಂಶೋಧನೆ ನಡೆಯಬೇಕಿದೆ. ಇಲ್ಲಿದ್ದ ಜಾತಿ, ವರ್ಗಗಳ ಜನರ ವಿವರಗಳೂ ಅಷ್ಟೇ ಮುಖ್ಯ. ಅಲ್ಲಿ ಯಾರು ಓದಬಹುದಿತ್ತು ಅದರ ರೀತಿ ನೀತಿ ಏನು ಎನ್ನುವುದು ಮುಖ್ಯ ಸಂಗತಿ. ಇದು ಅಂದಿನ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರಾಚೀನ ವಿದ್ಯಾಕೇಂದ್ರಗಳಿಗೆ, ಮಠಮಾನ್ಯಗಳಿಗೆ, ದೇವಾಲಯ, ಬಸದಿಗಳಿಗೆ ವಿದ್ಯಾಭ್ಯಾಸಕ್ಕಾಗಿಯೇ ರಾಜರು, ಸಾಮಂತರು, ಅಧಿಕಾರಿಗಳು, ಸಾರ್ವಜನಿಕರು, ವಿವಿಧ ರೀತಿಯ ದಾನ-ದತ್ತಿ ಮಾನ್ಯಗಳನ್ನು ಬಿಟ್ಟಿದ್ದಾರೆ. ಈ ವಿವರಗಳನ್ನು ತಿಳಿಸುವ ಅನೇಕ ಶಾಸನಗಳು ಕರ್ನಾಟಕದ ತುಂಬಾ ಇವೆ ಇಂಥವುಗಳ ಸಂಶೋಧನೆ, ಅಥವಾ ಸಮಗ್ರ ಅಧ್ಯಯನ ಬಹಳ ಮುಖ್ಯವಾದುದು ಆಸಕ್ತರಿಗೆ ಇಲ್ಲಿ ಬಹಳಷ್ಟು ಅವಕಾಶವಿದೆ.