ಪ್ರಾಚೀನ ಕರ್ನಾಟಕದ ಕೃಷಿ ಪ್ರಧಾನವಾದ ವ್ಯವಸ್ಥೆಯಿಂದ ಕೂಡುತ್ತು. ಅದು ಅಂದಿನ ಸಮಾಜದ ಪ್ರಭುತ್ವದ ಬೆಳೆವಣಿಗೆಯ ಮೇಲೆ ಪ್ರಭಾವ ಹೊಂದಿತ್ತು. ಜನರ, ರಾಜರುಗಳ ಒಟ್ಟಾರೆ ವ್ಯವಸ್ಥೆಯ ಜೀವನಾಡಿಯಾಗಿತ್ತು. ಆದ್ದರಿಂದ ಕಾಲಕಾಲಕ್ಕೆ ಈ ರಾಜ್ಯದ ಭಾಗಗಳನ್ನು ಆಳ್ವಿಕೆ ಮಾಡಿಕೊಂಡು ಬಂದ ಪ್ರತಿಯೊಬ್ಬ ರಾಜನೂ ಕೃಷಿ ಅಥವಾ ವ್ಯವಸಾಯದ ಅಭಿವೃದ್ಧಿಗೆ ಒಂದಲ್ಲಾ ಒಂದು ರೀತಿಯಲ್ಲಿ ಶ್ರಮಿಸಿದ್ದಾರೆ. ಇಂಥ ವಿಚಾರಗಳನ್ನು ಕುರಿತ ಅನೇಕ ದಾಖಲೆಗಳು ಸಿಗುತ್ತವೆ. ಇವುಗಳ ಜೊತೆಗೆ ಪ್ರಾಚೀನ ನೀರಾವರಿ ಹಾಗೂ ಕೃಷಿ ಪದ್ದತಿಯ ಸ್ವರೂಪಗಳನ್ನು ಕುರಿತು ಕನ್ನಡ ಶಾಸನಗಳು ನೀಡು ಮಾಹಿತಿ ಬಹಳ ಅದ್ಭುತವಾದದ್ದು. ಈಗಾಗಲೆ ‘ವಿಜಯನಗರ ಕಾಲದ ನೀರಾವರಿ ವ್ಯವಸ್ಥೆ’ ‘ಹೊಸಪೇಟೆ ತಾಲ್ಲೂಕಿನ ಕೆರೆಗಳು’ ಈ ರೀತಿಯ ಕೆಲವು ಅಧ್ಯಯನಗಳು, ಲೇಖನಗಳೂ ಪ್ರಕಟವಾಗಿವೆ. ಆದರೆ ಅವು ಅಸಮಗ್ರವಾದುವುಗಳು. ಅಸಂಖ್ಯಾತ ಶಾಸನಗಳನ್ನು ಆಧರಿಸಿ ಸಮಗ್ರವಾದ ಪ್ರಾಚೀನ ಕರ್ನಾಟಕದ ವ್ಯವಸಾಯವನ್ನು ತಿಳಿಯುವ ಪ್ರಯತ್ನ ಆಗಬೇಕಾಗಿದೆ. ಅದು ಪುಸ್ತಕ ಕಾಲಕ್ಕೂ ಮುಂದೆಯೂ ಸಾರ್ವಕಾಲಿಕವಾಗಿರುವ ಅಧ್ಯಯನಗಳಾಗಿರಬೇಕು. ಇವತ್ತಿನ ಜಾಗತೀಕರಣದ ಅಬ್ಬರ ನಮ್ಮನ್ನು ಮೂಲ ಸಾವಯವ ಕೃಷಿಯ ಕಡೆ ಗಮನ ಕೊಡುವಂತೆ ಮಾಡಿದೆ. ಇಲ್ಲದಿದ್ದರೆ ಕುಲಾಂತರಿ ತಳಿಗಳಿಂದ ಅದು ಹೋಗುತ್ತದೆ. ದೇಶ ಬಡತನವನ್ನು ಎದುರಿಸಬೇಕಾಗುತ್ತದೆ.

ಪ್ರಾಚೀನ ಕರ್ನಾಟಕದಲ್ಲಿ ಬೆಳೆಯುತ್ತಿದ್ದ ವಿವಿಧ ಬೆಳೆಗಳನ್ನು ಯಾವ ಯಾವ ಪ್ರದೇಶದಲ್ಲಿ, ಯಾವ ಯಾವ ಕಾಲಘಟ್ಟದಲ್ಲಿ, ಯಾವ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದರು ಎನ್ನುವುದನ್ನು ತಿಳಿಯಬೇಕು. ಅಲ್ಲಿನ ಮಣ್ಣಿನ ಗುಣ, ತೋಟ-ತುಡಿಕೆ, ಪಶುಪಾಲನೆ ಅದಕ್ಕೆ ಸಂಬಂಧಿಸಿದ ಹೈನುಗಾರಿಕೆ, ಕುರಿಸಾಕಾಣಿಕೆ, ಬಾವಿ ಕೆರೆಗಳ ನಿರ್ಮಾಣ, ಕಾಲುವೆಗಳು, ಚಿಕ್ಕ ಪುಟ್ಟ ಅಣೆಕಟ್ಟೆಗಳು, ಅವುಗಳ ತಂತ್ರಜ್ಞಾನ, ವಾಸ್ತು ರಚನೆ. ಇತ್ಯಾದಿಗಳ ಅಧ್ಯಯನಗಳು ಪ್ರತ್ಯೇಕ ಅಧ್ಯಯನಗಳಾಗುತ್ತವೆ. ಕೃಷಿಗೆ ಬಳಸುತ್ತಿದ್ದ ಪರಿಕರಗಳು, ದೇಶೀಯವಾದ ಕ್ರಿಮಿನಾಶಕಗಳು, ಗೊಬ್ಬರ ಇತ್ಯಾದಿ. ಹಾಗೆಯೇ ವಿವಿಧ ರಾಜರು ವ್ಯವಸಾಯೋತ್ಪನ್ನಗಳ ಮೇಲೆ ವಿಧಿಸುತ್ತಿದ್ದ ತೆರಿಗೆಗಳು, ವಿನಾಯಿತಿಗಳೂ ಅಷ್ಟೇ ಮುಖ್ಯ ಇಂಥ ಅಧ್ಯಯನದಿಂದ ಆ ರಾಜನ ಜನಮುಖಿಯಾದ ಧೋರಣೆ ಹೇಗಿತ್ತು ಎಂಬುದು ಅದರಿಂದ ವ್ಯವಸಾಯದಲ್ಲಾದ ಬದಲಾವಣೆಗಳೇನು ಎನ್ನುವುದನ್ನು ಶೋಧಿಸಬೇಕಾಗಿದೆ. ಸಂತೆ, ಜಾತ್ರೆಗಳು, ಅಂದಿನ ಮಾರುಕಟ್ಟೆ ವ್ಯವಸ್ಥೆ, ಬಳೆಗಳಿಗೆ ತಗುಲುತ್ತಿದ್ದ ರೋಗ- ರುಜಿನ, ಅವುಗಳ ನಿವಾರಣೆ. ಅದಕ್ಕೆ ಸಂಬಂಧಿಸಿದ ದಾನ-ದತ್ತಿಗಳು. ಉಂಬಳಿ ಇತ್ಯಾದಿಗಳನ್ನು ಪ್ರತ್ಯೇಕ ಅಧ್ಯಯನಗಳಾಗಿ ನೋಡಬೇಕು. ಹಾಗೆಯೇ ಕೃಷಿಕರು, ಕೃಷಿಕಾರ್ಮಿಕರು ಅವರ ಜೀವನ ವಿವಿರಗಳು, ಹೂದೋಟಗಳು ಮಾಲೆಗಾರರು ಹೀಗೆ ಹಲವಾರು ತೆರೆನಾದ ಅಧ್ಯಯನಗಳಿಗೆ ಅವಕಾಶವಿದೆ. ಉದಾ: ಕೆಳದಿ ಶಿವಪ್ಪನಾಯಕನ ಕಾಲದ ಶಾಸನಗಳಲ್ಲಿ ಕೃಷಿ ವ್ಯವಸ್ಥೆ, ಮೈಸೂರು ಅರಸರ ಕಾಲದ ನೀರಾವರಿ ವ್ಯವಸ್ಥೆ, ತೆರಿಗೆ ಪದ್ಧತಿ ಇತ್ಯಾದಿ ಇತ್ಯಾದಿ… ಹೀಗೆ ವೈವಿಧ್ಯಮಯವಾದ ಸಂಗತಿಗಳನ್ನು ಶಾಸನಗಳು ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಿವೆ. ಅವುಗಳನ್ನು ಶೋಧಿಸುವ ಕೆಲಸ ಇಂದಿನ ಯುವ ವಿದ್ವಾಂಸರ ಮುಂದೆ. ಆಸಕ್ತರ ಮುಂದೆ ಇದೆ.