ಪ್ರಾಚೀನ ಬದುಕು ಬಹಳ ವೈಶಿಷ್ಠವಾದುದು. ಪ್ರಾದೇಶಿಕ ಅಥವಾ ಸ್ಥಳೀಯ ನೆಲೆಯ ಮಿತಿಯಲ್ಲೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಈ ಬದುಕು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತಿತ್ತು. ಅಂಥಹ ಭಿನ್ನತೆಯಿಂದ ಕೂಡಿದ ಸಮಾಜದಲ್ಲಿ ಸಮಜದ ತಳದಲ್ಲಿದ್ದುಕೊಂಡೇ ಅದರ ಮೇಲ್ಮಗೆ ದುಡಿದ ಜನವರ್ಗಗಳಿದ್ದವು. ಇವುಗಳನ್ನು ಪ್ರತಿಯೊಬ್ಬರ ಬದುಕು ಒಂದಲ್ಲಾ ಒಂದು ರೀತಿ ಅವಲಂಬಿಸಿತ್ತು, ಅಂತಹವರ ಬಗ್ಗೆ ಶಾಸನಗಳು ಹಲವಾರು ಪ್ರಾಚೀನ ‘ಕುಲಕಸುಬುಗಳನ್ನ,’ ಕುರಿತಾದ ವಿವರಗಳನ್ನು ಒಳಗೊಂಡಿವೆ. ಇವುಗಳಿಗೆ ಸಂಬಂಧಿಸಿದ ಸಂಶೋಧನೆ, ಅಧ್ಯಯನಗಳು ನಡೆದೇ ಇಲ್ಲ ಎನ್ನಬಹುದು. ಅಲ್ಲಲ್ಲಿ ಪ್ರಾಸಂಗಿಕವಾದ ಬರಹಗಳು ದೊರೆತರು ಸಮಗ್ರವಾದ ಬರಹಗಳು ಬಂದಿಲ್ಲ.

ಕಾಲ ಕಾಲದಲ್ಲಾದ ಪಲ್ಲಟಗಳು, ಆಕ್ರಮಣಗಳು, ಈ ವರ್ಗದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡಿದವು ಇತ್ಯಾದಿ ವಿವರಗಳನ್ನು ತಿಳಿಯಬೇಕಾದರೆ ಸಂಶೋಧಕರು ಈ ದಿಕ್ಕಿನಲ್ಲಿ ಗಮನಹರಿಸಬೇಕು. ಪ್ರಾಚೀನ ಕರ್ನಾಟಕದ ಜನರು ಬದುಕಿನ ಅವಿಭಾಜ್ಯ ಅಂಗವಾಗಿದ್ದ ಈ ಕುಲಕಸುಬುಗಳು, ಕುಲವೃತ್ತಿಗಳು ಜೀವನೋಪಾಯದ ಮಾರ್ಗಗಳಾಗಿದ್ದವು. ಇವರು ವಿವಿಧ ಸಮುದಾಯದ ಜನರೊಂದಿಗೆ ಹೊಂದಿದ್ದು ಬಾಂಧವ್ಯ ಬಹಳ ಮುಖ್ಯವಾದದ್ದು. ಸಮಾಜದ ಜನರ ಏಳಿಗೆಗೆ ದುಡಿದ ಈ ವರ್ಗದ ಬದುಕಿನ ವಿವರಗಳು ಅಥವಾ ಈ ನಿಟ್ಟಿನ ಅಧ್ಯಯನ ಆಗಬೇಕಿದೆ. ಆಸಕ್ತರು ಈ ಕ್ಷೇತ್ರದಲ್ಲಿ ವಿಪುಲವಾದ ಕೆಲಸ ಮಾಡಲು ಅವಕಾಶವಿದೆ. ಉದಾ: ನಾಯಿಂದರು ದುಂಬಾರರು, ಪಾತರದವರು, ಭೋವಿಗಳು, ಅಗಸರು, ಆಚಾರಿಗಳು, ಗಾಣಿಗರು, ತೋಟಿಗರು, ತಳವಾರರು, ನೀರಗಂಟಿ, ಹೆಳವರು, ಉಪ್ಪಾರರು, ಚಮ್ಮಾರರು, ಕಮ್ಮಾರರು, ದರ್ಜಿಗಳು, ನೇಯ್ಗೆಯವರು, ಕುಶಲಕರ್ಮಿಗಳು, ಪಶುಪಾಲಕರು ಮುಂತಾದ ಸಮುದಾಯಗಳು ಕುಲಕಸುಬುಗಳನ್ನು ನಂಬಿಯೇ ಬದುಕಿದವರು. ಹಾಗಾಗಿ ಅವರ ಕಸುಬಿನ ವಿವಿಧ ಮುಖಗಳನ್ನು ಅದರ ನೆಲೆ ಬೆಲೆಗಳನ್ನು ಅವು ಸಮಾಜಕ್ಕೆ ಅನಿವಾರ್ಯವಾಗಿದ್ದ ಸಂಗತಿಗಳನ್ನು ಹೊರತೆಗೆಯುವ ಸಂಶೋಧನೆಗಳು ಆಗಬೇಕಾಗಿದೆ. ಆಸಕ್ತರಿಗೆ ಇದೂ ಒಂದು ಉತ್ತಮ ಸವಾಲು ಮತ್ತು ಅವಕಾಶ ಎನ್ನಬಹುದು.

ಇಲ್ಲಿ ಮತ್ತೊಂದು ಸ್ವಾರಸ್ಯಕರ ಸಂಗತಿ(ಘಟನೆ)ಯನ್ನು ಹೇಳಬೇಕು ಎನಿಸುತ್ತದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗುಂಡ್ಲಹಳ್ಳಿ ಗೋಪಾಲಸ್ವಾಮಿ ದೇವಾಲಯದ ಬಳಿ ಇರುವ ಕಲ್ಯಾಣಿಯಲ್ಲಿ ಒಂದು ಶಾಸನ ಮತ್ತು ಶಿಲ್ಪ ಇದೆ. ಇದನ್ನು ‘ಜಿರಲೆ ಮಲ್ಲಮ್ಮನ ಶಾಸನ’ವೆಂದು ಕರೆಯುತ್ತಾರೆ. ಈಕೆ ‘ಪಶುಪಾಲನಾ’ ವೃತ್ತಿಗೆ ಸೇರಿದವಳು. ಈ ಶಾಸನ ತಿಳಿಸುವಂತೆ ಈಕೆ ದಿನ ನಿತ್ಯ ತನ್ನ ಎಮ್ಮೆ, ಹಸುಗಳನ್ನು ಕರೆದು ಹಾಲು, ತುಪ್ಪ ಮಾರಾಟ ಮಾಡುತ್ತಿರುತ್ತಾಳೆ. ಇವಳಿಗೆ ‘ಜಿರಲೆ ಮಲ್ಲಮ್ಮ’ ಎಂದು ಹೆಸರು ಬರಲು ಕಾರಣ ದಿನನಿತ್ಯ ಮೊಸರಿನಲ್ಲಿ ಜಿರಲೆ ಬಿದ್ದಿದೆ, ತಿನ್ನಬಾರದು ಎಂದು ತನ್ನ ಮನೆಯಲ್ಲಿರುವ ಮಕ್ಕಳಿಗೆ ಹೇಳುತ್ತಲೆ ಹೆಚ್ಚು ಹೆಚ್ಚು ಬೆಣ್ಣೆ, ತುಪ್ಪವನ್ನು ಉತ್ಪಾದಿಸುತ್ತಾಳೆ. ಹೀಗೆ ಉತ್ಪಾದಿಸಿದ ಬೆಣ್ಣೆ ತುಪ್ಪವನ್ನು ಮಧುಗಿರಿ, ಬಿಜ್ಜವರ ಪ್ರದೇಶಗಳಲ್ಲಿ ಮಾರಾಟಮಾಡಿ ಹಣ ಸಂಪಾದಿಸುತ್ತಾಳೆ. ಹೀಗಿರುವಾಗ ಬಿಜ್ಜವರ ಪ್ರದೇಶದಲ್ಲಿ ಬರಗಾಲ ಬಂದಾಗ, ಅಲ್ಲಿನ ಕೋಟೆ ನಿರ್ಮಿಸುವ ಸಂದರ್ಭದಲ್ಲಿ ರಾಜನಲ್ಲಿಯೂ ಸಂಪತ್ತು ಕ್ಷೀಣಿಸಿರುತ್ತದೆ. ಹಾಗಾಗಿ ಈ “ಜಿರಲೆ ಮಲ್ಲಮ್ಮನಿಂದ ಸಾಲ ಪಡೆಯುತ್ತಾನೆ” ಬಿಜ್ಜವರದ ಅರಸ.

ಈ ಶಾಸನ ಏಕೆ ಮುಖ್ಯವಾಗುತ್ತದೆ ಎಂದರೆ ಪಶುಪಾಲನಾ ವೃತ್ತಿ ಮಾಡಿಕೊಂಡಿದ್ದವಳೊಬ್ಬಳು ಆ ಸಮಾಜದಲ್ಲಿ ವಹಿಸಿದ ಪಾತ್ರ ಎಂಥಹುದು ಎಂಬುದಕ್ಕೆ ಈ ರೀತಿಯ ಶಾಸನಗಳು ಮುಖ್ಯವಾಗುತ್ತವೆ. ಇಂಥ ಶಾಸನಗಳು ಕರ್ನಾಟಕದಲ್ಲಿವೆ. ಈ ನಿಟ್ಟಿನಲ್ಲಿ ಸಂಶೋಧಕರು ಕೆಲಸ ಮಾಡಬಹುದು.