ಕನ್ನಡ ಶಾಸನಗಳ ಸಾಮಾಜಿಕ ಅಧ್ಯಯನ ನಡೆದೇ ಇಲ್ಲ ಎನ್ನಿಸುತ್ತದೆ. ಮನುಷ್ಯನ ಬದುಕಿಗೂ ಶಾಸನಗಳಿಗೂ ಸಂಬಂಧವಿದೆ ಎನ್ನುವುದಾದರೆ ಸಮಾಜಕ್ಕೂ ಶಾಸನಗಳಿಗೂ ಸಂಬಂಧವಿದೆ ಎಂದೇ ಅರ್ಥ. ಆ ಕಾರಣವಾಗಿ ಶಾಸನಗಳು ಉತ್ತಮ ಆಕರಗಳು. ರಾಜರು ಸಾಮಂತರು, ಪಾಳೇಗಾರರು ಹಾಗೂ ಅಧಿಕಾರಿಗಳ ಜೀವನ ಚಿತ್ರಣವನ್ನು ಸಂಬಂಧಿಸಿದ ಕೆಲವು ಸಮಗ್ರ ಬರಹಗಳು, ಬಿಡಿ ಬರಹಗಳು ಕಂಡುಬರುತ್ತವೆ. ಆದರೂ ಆಯಾ ಕಾಲದ ಜನ ಜೀವನದ ಕೇಂದ್ರ ವ್ಯಕ್ತಿಯಾದ ಸಾಮಾನ್ಯ ಮನುಷ್ಯನ ಬದುಕಿನ ವಿವರಗಳು ಹೇಗಿದ್ದಿರಬೇಕು ಎಂಬುದರ ಅಧ್ಯಯನ ಬಹಳ ಕುತೂಹಲಕರವಾದುದು. ಸಾಮಾನ್ಯ ಮನುಷ್ಯ ಎಂದರೆ ಬಡವ, ಅವಿದ್ಯಾವಂತ, ಅಸ್ಪೃಶ್ಯ, ಶೋಷಿತ ಅಥವಾ ಆಕಾಲದ ಜಾತಿ ಸಂಕರ, ವರ್ಗ ಹಾಗೂ ಧರ್ಮ ಸಂಘರ್ಷಗಳು, ಕಲಾವಿದರು, ಕೂಲಿಕಾರ್ಮಿಕರು, ರಾಣಿಯರು, ದಾಸಿಯರು ಯಾರಾದರೂ ಆಗಿರಬಹುದು. ಇವರ ಜೀವನ ವಿಧಾನ ಹೇಗಿತ್ತು ಅವರ ಕಷ್ಟ ಸುಖಗಳೇನು, ಸಮಾಜಲ್ಲಿ ಇವರ ಸ್ಥಾನಮಾನಗಳೇನು. ಸಮಾಜ ಇವರನ್ನು ಹೇಗೆ ನಡೆಸಿಕೊಳ್ಳುತ್ತಿತ್ತು ಎಂಬುದರ ಅಧ್ಯಯನಗಳು ಇಂದಿಗೂ ಸಂಶೋಧಕರನ್ನು ಕೈಬೀಸಿ ಕರೆಯುತ್ತಿವೆ.

ಇದರ ಜೊತೆ ಜೊತೆಯಲ್ಲೇ ಸಮಾಜ ಯಾರ ಕಣ್ಣಿಗೂ ಕಾಣಸಿಗುವುದಿಲ್ಲ. ಆದರೆ ರಾಜ್ಯದ ಬಹು ಮುಖ್ಯ ಭಾಗ ಇವರು. ಆನೆ ಲಾಯಗಳಲ್ಲಿ ಕೆಲಸ ಮಾಡುವವರು, ಮಾವುತರು, ಕುದುರೆ ಲಾಯದಲ್ಲಿ ಕೆಲಸ ಮಾಡುವವರು, ಕುದುರೆ ಸವಾರರು, ಸೈನ್ಯಕ್ಕೆ, ಯುದ್ಧಕ್ಕೆ ಬೇಕಾದ ಮದ್ದುಗುಂಡು ತಯಾರಿಸುವವರು, ಹಾಗೆಯೇ ವಿವಿಧ ಆಯುಧಗಳಾದ ಕಟಾರಿ, ಬಾಕು, ಭರ್ಜಿ ಇತ್ಯಾದಿ ಆಯುಧಗಳನ್ನು ತಯಾರು ಮಾಡುವವರು, ಸಿಪಾಯಿಗಳು, ಕಳ್ಳರು, ದರೋಡೆಕೋರರು, ಪರಿಚಾರಕರು, ಕುಡುಕರು, ಜೂಜುಕೋರರು, ರೋಗಿಗಳು, ರೋಗ ರುಜಿನಗಳು ಇತ್ಯಾದಿಗಳನ್ನು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದರೆ ಅದಕ್ಕೂ ವಿಪುಲವಾದ ಮಾಹಿತಿಗಳು ಶಾಸನಗಳಿಂದ ಲಭ್ಯವಾಗುತ್ತವೆ. ಸಂಶೋಧಕರು ಈ ಅವಕಾಶವನ್ನು ಬಳಸಿಕೊಂಡು ಒಂದು ಹೊಸ ದೃಷ್ಠಯನ್ನು ಶಾಸನ ಕ್ಷೇತ್ರಕ್ಕೆ ನೀಡಲು ಅವಕಾಶವಿದೆ. ಇದರ ಜೊತೆಗೆ ಪ್ರಾಚೀನ ಸಾಹಿತ್ಯ ಕೃತಿಗಳನ್ನು ಗಮನಿಸಿದರೆ ಇನ್ನೂ ಉತ್ತಮ ಅಧ್ಯಯನಗಳಾಗುವುದರಲ್ಲಿ ಸಂದೇಹವಿಲ್ಲ