‘ಕನ್ನಡ ಶಾಸನ ಶಾಸ್ತ್ರವು’ ಸಮಗ್ರ ಕನ್ನಡ ‘ಶಾಸನಗಳ ಸೂಚಿಯ’ ಕೊರತೆಯನ್ನು ಎದುರಿಸುತ್ತಿದೆ. ಕೆಲವು ತಾಲ್ಲೂಕು, ಜಿಲ್ಲೆಗಳ ‘ಶಾಸನ ಸೂಚಿ’ಗಳು ಲಭ್ಯವಿದ್ದರೂ ಪರಿಪೂರ್ಣವಾದ ಕರ್ನಾಟಕ, ತಮಿಳುನಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಹಂಚಿಹೋಗಿರುವ ಕನ್ನಡ ಶಾಸನಗಳ ‘ಸಮಗ್ರ ಸೂಚಿ’ ರಚಿಸಲು ವಿದ್ವಾಂಸರಿಗೆ, ಸಂಶೋಧಕರಿಗೆ ವಿಪುಲವಾದ ಅವಕಾಶಗಳಿವೆ. ಇದನ್ನು ಕಾಲ, ರಾಜವಂಶ, ಶಾಸನ ಒಳಗೊಂಡ ವಸ್ತು ವಿಷಯ ಇತ್ಯಾದಿಗಳಿಗೆ ಅನುಗುಣವಾಗಿಯೇ ಸಿದ್ಧತೆಗೊಲಿಸುವುದು ಮುಖ್ಯ. ಆಗ ಇಡೀ ಕನ್ನಡ ಶಾಸನಗಳ ಒಟ್ಟು ಸ್ವರೂಪ ಒಂದೇ ಕಡೆ ಲಭ್ಯವಾಗುತ್ತದೆ. ಇದರಿಂದ ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ವಾಂಸರಿಗೆ, ಸಂಶೋಧಕರಿಗೆ, ಯುವಕರಿಗೆ ಹೆಚ್ಚು ಹೆಚ್ಚು ಆಸಕ್ತಿ ಮೂಡಲು, ಅಧ್ಯಯನ ಮಾಡಲು ಅನುಕೂಲವಾಗುತ್ತದೆ.