ಪ್ರಾಚೀನ ಕನ್ನಡ ಭಾಷೆಯನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದಲ್ಲಿ ಈಗಾಗಲೇ ಹಲವಾರು ಪ್ರಯತ್ನಗಳು ನಡೆದಿವೆ. ಜಾನಪದ ವಿಶ್ವಕೋಶ ಸಂಪುಟಗಳು, ಕನ್ನಡ ನಿಘಂಟುಗಳು, ಕನ್ನಡ ಶಬ್ದಕೋಶಗಳು, ಕನ್ನಡ ವಿಷಯ ವಿಶ್ವಕೋಶಗಳು. ಕನ್ನಡ ಇಂಗ್ಲಿಷ್ ಅರ್ಥಕೋಶಗಳು, ಮುಂತಾದ ರಚನನೆಗಳು ಪ್ರಕಟಗೊಂಡು ನಮ್ಮ ಮುಂದಿವೆ. ಇವು ಭಾಷೆಯಲ್ಲಿ ಬಳಕೆಯಾಗಿರುವ ವಿಶಿಷ್ಟ ಪದಗಳನ್ನು, ಶಬ್ದಗಳನ್ನು, ಶಬ್ದಾರ್ಥಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ. ಆದರೆ ಪ್ರಾಚೀನ ಕನ್ನಡ ಶಾಸನಶಾಸ್ತ್ರಕ್ಕೆ ಸಂಬಂಧಿಸಿದಂತೆ ಇದುವರಿಗೂ ಅಂಥ ಕೆಲಸ ನಡೆದಿಲ್ಲವಾದ್ದರಿಂದ ಬಹಳ ಮುಖ್ಯವಾಗಿ ಈ ಕೆಲಸ ಅಗಬೇಕಿದೆ. ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಆ ನಂತರದ ಕನ್ನಡ ಭಾಷಾ ಸ್ವರೂಪ ಅರಿತುಕೊಳ್ಳಲು ಬೇಕಾದ ಮೂಲ ಸಾಮಾಗ್ರಿ ಕನ್ನಡ ಶಾಸನಗಳಲ್ಲಿ ದೊರಕುತ್ತದೆ.

ಹಾಗಾಗಿಯೆ ಶಾಸನಗಳ ಪಾರಿಭಾಷಿಕ ಪದಕೋಶಗಳು ರಚನೆ ಆಗಬೇಕು. ಅಸಂಖ್ಯಾ ಶಾಸನಗಳು ಲಭ್ಯವಿದ್ದರೂ ಅದರ ಪರಿಭಾಷೆಯನ್ನು ನಾವು ಇನ್ನೂ ಸಮಗ್ರವಾಗಿ ಗ್ರಹಿಸಲು ಸಾದ್ಯವಾಗಿಲ್ಲ. ಕೆಲವು ಬಿಡಿ ಬಿಡಿ ಅಧ್ಯಯನಗಳು ನಡೆದಿರಬಹುದಾದರೂ ಅದು ತೀರಾ ಕಡಿಮೆ ಎಂದೇ ಹೇಳಬೆಕು. ಪ್ರಾಚೀನ ಕರ್ನಾಟಕ, ಅದರ ಸಂಸ್ಕೃತಿ, ಭಾಷೆ, ರೀತಿ ನೀತಿಗಳನ್ನು ಅರ್ಥಮಾಡಿಕೊಳ್ಳಲು ಈ ರೀತಿ ಅಧ್ಯಯನಗಳು ಸಹಕಾರಿಯಾಗುತ್ತವೆ. ಕರ್ನಾಟಕವನ್ನು ವಿವಿಧ ರಾಜರು, ಸಾಮಂತರು, ಪಾಳಯಗಾರರು ಆಳ್ವಿಕೆ ಮಾಡಿರುವುದರಿಂದ ಭಾಷೆ ಅನೇಕ ಅವಸ್ಥಾಂತರಗಳನ್ನು, ಘಟ್ಟಗಳನ್ನು ಎದುರಿಸಿಕೊಂಡು ರೂಪುಗೊಂಡಿರುವುದು ಸತ್ಯ. ಹಾಗಾಗಿ ಅಂಥ ಭಾಷೆಯಲ್ಲಿರುವ ಪರಿಭಾಷೆಯನ್ನು ಈ ಮುಂದಿನಂತೆ ವಿಭಾಗಿಸಿಕೊಂಡು ಅಧ್ಯಯನ ಅಥವಾ ಸಂಶೋಧನೆ ಮಾಡಬಹುದಾಗಿದೆ.

೧. ರಾಜರ ಬಿರುದಾವಳಿಗಳು ೨. ಅಧಿಕಾರ -ಆಡಳಿತ ಸೂಚಕ ಪಾರಿಭಾಷಿಕ ಪದಗಳು೩. ಅಲತೆ, ಮಾನ, ಮಾಪನ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳು ೪. ವಿವಿಧ ವೃತ್ತಿ, ತೆರಿಗೆ ಸೂಚಕ ಪದಕೋಶಗಳು ೫. ದಾನ, ದತ್ತಿ, ಮಾನ್ಯ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಪಾರಿಭಾಷಿಕ ಪದಕೋಶಗಳು ೬. ಪ್ರಾಂತೀಯ, ವಿಭಾಗ ಸೂಚಕ ಪದಕೋಶಗಳು ೭. ಪ್ರಾಚೀನ ನ್ಯಾಯ ತೀರ್ಮಾನಗಳಿಗೆ ಸಂಬಂಧಿಸಿದ ಪದಕೋಶಗಳು ೮. ಕರ್ನಾಟಕ ಭೌಗೋಳಿಕ, ಸ್ಥಳನಾಮ, ವ್ಯಕ್ತಿ ನಾಮ ಇತ್ಯಾದಿ ೯. ಪ್ರಾಚೀನ ಕರ್ನಾಟಕದ ವಿದ್ಯಾಭ್ಯಾಸ, ವೈದ್ಯೆ, ಸಂಗೀತ, ಕಲೆ, ವಸ್ತು ಇತ್ಯಾದಿಗೆ ಸಂಬಂಧಿಸಿದ ಪದಕೋಶ. ಹೀಗೆ ಕಾಲಕಾಲಕ್ಕೆ ಬಳಸಿಕೊಂಡು ಬಂದಿರುವ ಪರಿಭಾಷೆಗೆ ಸಂಬಂಧಿಸಿದಂತೆ ಸಮಗ್ರ ರೀತಿಯ ಪದಕೋಶಗಳು ಸಿದ್ದ ಆಗಬೇಕಿದೆ. ಇದು ಸಹ ಕಾಲಮಾನ, ರಾಜ ವಂಶ, ಇತ್ಯಾದಿಗಳ ಆಧಾರದ ಮೇಲೆ ರಚಿತವಾದರೆ ಒಳ್ಳೆಯದು. ಹಾಗೆಯೇ ಶಾಸನಗಳಿಗೆ ಸಂಬಂಧಿಸಿದ ನಿಘಂಟುಗಳು ವಿಶ್ವಕೋಶ ಮಾದರಿಯ ‘ಶಾಸನ ಕೋಶ’ ಶಾಸನಗಳ ಸಾಂಸ್ಕೃತಿಕ ಪದಕೋಶಗಳು ಸಿದ್ದಗೊಳ್ಳಬೇಕಿದೆ.