ಭಾರತದಲ್ಲಿ ಅತಿಹೆಚ್ಚು ಶಾಸನಗಳು ಸಿಕ್ಕುವುದು (ಸಂಖ್ಯೆಯ ದೃಷ್ಟಿಯಿಂದ) ತಮಿಳು ನಾಡಿನಲ್ಲಿ ಅದನ್ನು ಬಿಟ್ಟರೆ ವೈವಿಧ್ಯಮಯ ಶಾಸನಗಳು ದೊರಕುವುದು ಕರ್ನಾಟಕದಲ್ಲಿ ಮಾತ್ರ. ಇಂಥ ವೈವಿಧ್ಯಮಯ ಶಾಸನಗಳ ಕ್ರಮಬದ್ಧ ಅಧ್ಯಯನ ಇದುವರೆಗೂ ಸಾಧ್ಯವಾಗಿಲ್ಲ. ಅಂದರೆ ‘ಸಮಗ್ರಕನ್ನಡ ಸಾಹಿತ್ಯ ಚರಿತ್ರೆ’ಗಳು ರಚನೆಯಾದಂತೆ ‘ಕನ್ನಡ ಶಾಸನಶಾಸ್ತ್ರದ ಚರಿತ್ರೆ’ಯೂ ರಚನೆಯಾಗಬೇಕಿದೆ. ಈ ರೀತಿಯ ಚರಿತ್ರೆ ನಿರ್ಮಾಣವಾದಲ್ಲಿ ಸಂಶೋಧಕರಿಗೆ, ಆಸಕ್ತರಿಗೆ ಒಂದು ಹೊಸದಾರಿಯನ್ನು ಹಾಕಿಕೊಂಟ್ಟಂತೆ ಅಗುತ್ತದೆ. ಇದರಿಂದ ಕನ್ನಡ ಶಾಸನಗಳು ಒಳಗೊಂಡ ವಿವಿಧ ಮುಖಗಳನ್ನು, ದೃಷ್ಟಿಕೋನಗಳನ್ನು ಅರಿಯಲು ಅನುಕೂಲವಾಗುತ್ತದೆ. ಈ ರೀತಿಯ “ಸಮಗ್ರ ಕನ್ನಡ ಶಾಸನ ಚರಿತ್ರೆ” ಯನ್ನು ರಚಿಸಲು ಅನುಸರಿಸಬಹುದಾದ ವಿಧಾನಗಳನ್ನು ಈ ತಕ್ಷಣಕ್ಕೆ ಹೀಗೆ ಗುರ್ತಿಸಬಹುದು.

೧. ಶಾಸನಗಳಲ್ಲಿ ಉಲ್ಲೇಖಗೋಂಡಿರುವ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ೧. ಪ್ರಶಸ್ತಿ ಶಾಸನ, ೨. ದಾನ-ದತ್ತಿ ಶಾಸನಗಳು, ೩. ವೀರಗಲ್ಲುಗಳು ೪. ಮಾಸ್ತಿಕಲ್ಲುಗಳು ೫. ವಿಗ್ರಹದ ಮೇಲಿನ ಬರಹಗಳು ೬. ಸಲ್ಲೇಖ ವ್ರತಕ್ಕೆ ಸಂಬಂಧಿಸಿದ ಶಾಸನಗಳು ೭. ಕಾವ್ಯ, ನಾಟಕ, ಸಂಗೀತ ಇತರೆ ವಿಷಯಗಳಿಗೆ ಸಂಬಂಧಿಸಿದ ಶಾಸನಗಳು.

೨. ರಾಜ ಮನೆತನಗಳನ್ನು ಆಧಾರವಾಗಿಟ್ಟುಕೊಂಡು ಸಹ ‘ಶಾಸನ ಚರಿತ್ರೆ’ಯನ್ನು ನಿರ್ಮಿಸುವ ಪ್ರಯತ್ನ ಮಾಡಬಹುದು. ಉದಾ: ಚಾಲುಕ್ಯರ ಶಾಸನಗಳು, ರಾಷ್ಟ್ರಕೂಟರ ಶಾಸನಗಳು. ಕಲ್ಯಾಣಿ ಚಾಲುಕ್ಯರ ಶಾಸನಗಳು, ಹೊಯ್ಸಳರ ಶಾಸನಗಳು, ವಿಜಯನಗರ ಕಾಲದ ಶಾಸನಗಳು, ಪಾಳೆಯಗಾರರ ಶಾಸನಗಳು ಉದಾ: ನಿಡುಗಲ್ಲು ಪಾಳೆಗಾರರು, ಚಿತ್ರದುರ್ಗದ ಪಾಳೆಗಾರರು ಇತ್ಯಾದಿ. ಹೀಗೆ ವಿವಿಧ ರಾಜ ಮನೆತನಗಳನ್ನು ಪರಿಗಣಿಸಿಯೂ ಕನ್ನಡ ಶಾಸನಗಳ ಚರಿತ್ರೆಯನ್ನು ಪುನರ್ ನಿರ್ಮಿಸಲು ಪ್ರಯತ್ನಿಸುವವರಿಗೆ ಸಾಕಷ್ಟು ಅವಕಾಶಗಳು ಈ ಕ್ಷೇತ್ರದಲ್ಲಿ ತೆರೆದುಕೊಂಡಿವೆ.

೩. ರಾಜಕೀಯ/ಆಡಳಿತಕ್ಕೆ ಸಂಬಂಧಿಸಿದ ಶಾಸನಗಳು, ಧಾರ್ಮಿಕ ಶಾಸನಗಳು ಉದಾ: ಜೈನಶಾಸನಗಳು, ಬೌದ್ಧಧರ್ಮೀಯ ಶಾಸನ, ವೈಷ್ಣವಶಾಸನ, ಶೈವಶಾಸನ ಇತ್ಯಾದಿ. ಹಾಗೆಯೇ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಶಾಸನಗಳು, ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ಶಾಸನಗಳು, ಶೈಕ್ಷಣಿಕ ವಿಚಾರಗಳಿಗೆ ಸಂಭಂಧಿಸಿದ ಶಾಸನಗಳು ಇತ್ಯಾದಿ.

೪. ಇವುಗಳ ಜೊತೆಗೆ ಶತಮಾನಗಳನ್ನು ಆಧರಿಸಿ ಚಾರಿತ್ರಿಕವಾಗಿಯೂ ಅಧ್ಯಯನ ನಡೆಸಬಹುದು. ಹಾಗೆಯೇ ವಸ್ತು ಆಧರಿಸಿ, ಭಾಷೆಯನ್ನು ಆಧರಿಸಿ, ಪ್ರದೇಶಾಧಾರಿತವಾಗಿಯೂ ಶಾಸನಗಳ ಸಂಶೋಧನೆ ಮಾಡಬಹುದಾಗಿದೆ. ಒಟ್ಟಾರೆ ಶಾಸನಗಳ ಕಾಲ, ರಾಜಮನೆತನ, ಶಾಸನ ಒಳಗೊಂಡ ವಿಷಯ ಅಥವಾ ವಸ್ತುವನ್ನಾಧರಿಸಿದ ‘ಸಮಗ್ರ ಕನ್ನಡ ಶಾಸನ ಚರಿತ್ರೆ’ ಯ ರಚನೆ ಆಗಬೇಕಿದೆ.