ಕಳೆದ ಹದಿನೈದು ವರ್ಷಗಳಿಂದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಅಧ್ಯಯನ, ವಿಜ್ಞಾನ ಇವುಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಇವುಗಳ ಪುನರ್ ರಚನೆಯ ಆಕರಗಳನ್ನು ಹೊಸಹೊಸ ರೀತಿಯಿಂದ ಪರಿಭಾವಿಸುವ ಪದ್ಧತಿ ರೂಢಿಯಾಗಿದೆ. ಇಂಥ ಆಕರಗಳ ಶೋಧಕ್ಕಾಗಿ, ಮೌಖಿಕ ಕಥನಗಳು, ಜಾನಪದ ವೈವಿಧ್ಯಗಳು, ಶಾಸನಗಳು, ತಾಳೆಗರಿ, ಓಲೆಗರಿ, ಕೋಟೆ, ಕೊತ್ತಲ, ದೇವಾಲಯ, ಮಠ, ಮಂದಿರ, ಕೆರೆ, ಕಾಲುವೆ, ಕಣಿವೆ, ಗುಹೆ, ವರ್ಣಚಿತ್ರ, ಶಿಲ್ಪಕಲೆ, ನಾಣ್ಯ, ಆಯುಧಗಳು, ತಾಮ್ರಪತ್ರಗಳು, ಆಭರಣ, ನಿರೂಪ, ಕಡತ, ಕೈಫಿಯತ್ತು, ಬಖೈರು, ಸ್ಮಾರಕ, ಸಮಾಧಿಗಳು ಪುರಾತತ್ವ ಶೋಧಗಳು….. ಹೀಗೆ ಇನ್ನೂ ಹತ್ತು ಹಲವು ಆಕರಗಳನ್ನು ಬಳಸಿಕೊಳ್ಳುವ ಪರಿಪಾಠ ನಡೆಯುತ್ತಿದೆ.

ಈ ರೀತಿಯ ಆಕರಗಳ ಬಳಕೆಯನ್ನೊಳಗೊಂಡ ಅಧ್ಯಯನ ಅಥವಾ ಸಂಶೋಶಧನೆಗಳಿಂದ ಮನುಷ್ಯನ ದಿನನಿತ್ಯದ ಬದುಕಿನಲ್ಲಿ ಹೊಸ ಹೊಸ ಬದಲವಣೆಗಳು, ಆವಿಷ್ಕಾರಗಳು ಆಗುತ್ತಿವೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಪರಿಸರ, ಭೂಗೋಳ, ಜೀವವಿಜ್ಞಾನ, ಅರ್ಥಶಾಸ್ತ್ರ, ಸಮಾಜ ವಿಜ್ಞಾನಗಳನ್ನು ಏಕಮುಖವಾಗಿ ಅಧ್ಯಯನ ಮಾಡುವ ಕಾಲ ಮುಗಿದಿದ್ದು ಬಹುಮುಖಿ ನೆಲೆಯಲ್ಲಿ ಪರಿಭಾವಿಸುವ ಹಾಗೂ ಅದನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸುವ ಕಾಲಘಟ್ಟದಲ್ಲಿ ನಾವೆಲ್ಲಾ ಇದ್ದೇವೆ.

ಪ್ರಾಚೀನ ಕನ್ನಡ ಶಾಸನಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಆಕರವಾಗಿಟ್ಟುಕೊಂಡು ನಡೆಸಬಹುದಾದ ಅಧ್ಯಯನಗಳ ಸಾಧ್ಯತೆಯನ್ನು ಕುರಿತು ಇಲ್ಲಿ ಆಲೋಚಿಸುವುದು ನನ್ನ ಬಹುಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಸದ್ಯಕ್ಕೆ ಪ್ರಾಚೀನ ಕನ್ನಡ ಶಾಸನಗಳೇ ಇಲ್ಲಿ ಕೇಂದ್ರ. ಸಂಶೋಧನೆಯ ಪರಿಕಲ್ಪನೆ ಇಂದು ವ್ಯಾಪಕವಾಗಿ ಬೆಳೆಯುತ್ತಿದೆ. ಸಾಂಸ್ಕೃತಿಕ ಅಧ್ಯಯನ ಅಥವಾ ಸಂಶೋಧನೆ ಎಂಬುದು ಆಧುನಿಕ ಕಾಲಘಟ್ಟದ ಬಹುದೊಡ್ಡ ಕೊಡುಗೆ. ಹಾಗಾಗಿ ಇದರ ಉದ್ದೇಶ ಗತಕಾಲವನ್ನು ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಮರುಚಿಂತನೆ ಮಾಡುವುದು ಅತ್ಯವಶ್ಯಕ.

ಸಾಹಿತ್ಯದ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು, ಶಾಸನಗಳನ್ನು ತಮ್ಮ ಅಧ್ಯಯನಗಳಿಗೆ ಬಳಸಿಕೊಳ್ಳುವುದರೊಂದಿಗೆ ಶಾಸನಗಳ ಅಧ್ಯಯನದ ಹೊಸ ಹೊಸ ಆಯಾಮಗಳು ಸೃಷ್ಟಿಯಾದವು. ಕೇವಲ ರಾಜಕೀಯ ಮತ್ತು ಇತಿಹಾಸಕ್ಕೆ ಬುನಾದಿಯಗಿದ್ದ ಶಾಸನಗಳನ್ನು ರಾಜಕೀಯೇತರ ಅಧ್ಯಯನಗಳಿಗೆ ಇವರು ಪರಿಣಾಮಕಾರಿಯಾಗಿ ಬಳಸಿಕೊಳ್ಳತೊಡಗಿದರು. ಜಾಗತೀಕರಣದ ಅಬ್ಬರದ ಈ ದಿನಗಳಲ್ಲಿ ದೇಸೀ ಚಿಂತನೆಯ ಹಾಗೂ ಸ್ಥಳೀಯ ಸಾಂಸ್ಕೃತಿಕ ಅಧ್ಯಯನಗಳ ಕಡೆ ವಿದ್ವಾಂಸರು ಹೆಚ್ಚು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಪ್ರಪಂಚದ ಎಲ್ಲಾಕ್ಷೇತ್ರಗಳಲ್ಲೂ ಭಾಷೆಗಳಲ್ಲಿಯೂ ಈ ರೀತಿಯ ಚಿಂತನೆ ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿದೆ. ಅದಕ್ಕೆ ಕರ್ನಾಟಕ ಕನ್ನಡವೇನೂ ಹೊರತಲ್ಲ.

ಕನ್ನಡ ಶಾಸನ ಸಂಸ್ಕೃತಿ ಚರಿತ್ರೆ ಎಂದರೆ ಕೇವಲ ಕನ್ನಡ ಭಾಷೆಯ ಹಳಮೆಯನ್ನು ಸಾಧಿಸುವುದು ಎಂದಲ್ಲ. ಅಖಂಡ ಕರ್ನಾಟಕದ ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದ ಸಾಂಸ್ಕೃತಿಕ ಬದುಕನ್ನು, ಜನರ ಜೀವನ ವಿಧಾನಗಳನ್ನು, ವಿವರಗಳನ್ನು ಅವು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿವೆ ಎನ್ನುವುದನ್ನು ಮರೆಯುವಂತಿಲ್ಲ. ಅಂದರೆ ಪ್ರಾಚೀನ ಕರ್ನಾಟಕದ ಜನಜೀವನದ ಭಾಗವಾದ ರಾಜಕೀಯ, ಧರ್ಮ, ಕಲೆ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಾಹಿತ್ಯ, ಭಾಷೆ, ಛಂದಸ್ಸು, ಇತಿಹಾಸ, ಸಮಾಜ, ಸಂಗೀತ, ವಾಸ್ತು, ಶಿಲ್ಪ, ಜೀವಶಾಸ್ತ್ರ, ಖಗೋಳ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರ, ಭೂಗರ್ಭಶಾಸ್ತ್ರ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ ಇತರ ಜೀವಸಂಕುಲದ ವಿವರಗಳು ಮುಂತಾದ ವೈವಿಧ್ಯಮಯ ವಿಚಾರಗಳನ್ನು ಈ ಶಾಸನಗಳ ಅಧ್ಯಯನದಿಂದ ಅರಿತುಕೊಳ್ಳಬಹುದಾಗಿದೆ.

ಅದಷ್ಟೇ ಅಲ್ಲದೆ ಪ್ರಾಚೀನ ಕರ್ನಾಟಕದ ಬೇಟೆ, ಆಹಾರ, ಉಡುಗೆ-ತೊಡುಗೆ, ಕ್ರೀಡೆ-ಮನರಂಜನೆ, ಆಚರಣೆಗಳು, ರೂಢಿ, ಸಂಪ್ರದಾಯಗಳು, ಪಾನೀಯಗಳು, ಯುದ್ಧದ ಚಿತ್ರಣಗಳು, ರಾಜ್ಯದ ಆಡಳಿತ ವಿಧಾನಗಳು, ಆದಾಯ, ಖರ್ಚು, ತೆರಿಗೆ ವಿದ್ಯಾಭ್ಯಾಸ, ಸಾಮಾಜಿಕ ಜನಜೀವನ, ಸ್ತ್ರೀಯರ ಆಭರಣಗಳು, ಜತಿ, ವರ್ಗದ ವಿವರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಅದರ ಜೊತೆಗೆ ಈಗಾಗಲೇ ಅಲ್ಲಲ್ಲಿ ಅಧ್ಯಯನಗಳು ನಡೆದಿರಬಹುದಾದ ಪ್ರಾಚೀನ ಕರ್ನಾಟಕದ ದಾನ, ದತ್ತಿ, ಪ್ರಶಸ್ತಿ, ವಿಜಯನಶಾಸನ, ಸ್ಮಾರಕಗಳು, ವೀರಗಲ್ಲು, ಮಾಸ್ತಿಕಲ್ಲು, ಆತ್ಮಬಲಿ, ಗಡಿಕಲ್ಲು, ಕರೆಗಳ ನಿರ್ಮಾಣ, ಸಂತೆ, ಜತ್ರೆ, ವ್ಯಾಪಾರ, ರಥೋತ್ಸವಗಳು, ಸಸ್ಯ ಸಮಕುಲಗಳು, ತುರುಕಳಗ, ಊರಳಿವು, ಪೆಣ್ಬುಯಲ್, ದೇವಾಲಯಗಳ ನಿರ್ಮಾಣ ಇತ್ಯಾದಿ ಹೀಗೆ ಪಟ್ಟು ಮಾಡುತ್ತಾ ಹೋಗಬಹುದು. ಇಂಥ ಬಹುತ್ವದ, ಬಹು ವೈವಿಧ್ಯಮಯವಾದ ಅಧ್ಯಯನದ ನೆಲೆಗಳಿಗೆ ಶಾಸನಗಳನ್ನು ಆಕರವಾಗಿ ಬಳಸಿಕೊಳ್ಳಲು ವಿಪುಲ ಅವಕಾಶಗಳಿವೆ. ಅವುಗಳನ್ನು ಕುರಿತು ಮುಂದೆ ಚರ್ಚಿಸಲಾಗುವುದು.

ಪ್ರಾಚೀನ ಕನ್ನಡ ಶಾಸನಗಳ ಅಧ್ಯಯನದ ಇತಿಹಸವನ್ನು ಗಮನಿಸಿದರೆ ಸುಮಾರು ನೂರೈವತ್ತು ವರ್ಷಗಳಿಗೂ ಅಧಿಕವಾದ ದೀರ್ಘಿಕೆಯಿದೆ. ಬೇರೆ ಬೇರೆ ಮಾನವಿಕ ಕ್ಷೇತ್ರಗಳಷ್ಟೇ ಕೆಲಸ ಶಾಸನ ಅಧ್ಯಯನ ಕ್ಷೇತ್ರದಲ್ಲಿಯೂ ನಡೆದಿದೆ. ಇದು ಒಂದು ಸಾಧನೆಯ ಸಂಗತಿಯಾದರೂ ಅನೇಕ ಕೊರತೆಗಳು, ನ್ಯೂನ್ಯತೆಗಳೂ ಇಲ್ಲದಿಲ್ಲ. ಬೇರೆ ಬೇರೆ ಅಧ್ಯಯನ ಶಿಸ್ತುಗಳ ಬೆಳವಣಿಗೆಯನ್ನು ಕಂಡಾಗ ಶಾಸನ ಶಾಸ್ತ್ರವು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗಲಿಲ್ಲವೆಂಬುದು ಸತ್ಯ ಸಂಗತಿ. “ಶಾಸನ, ಇತಿಹಾಸ, ಪುರಾತತ್ವ ಶಾಸ್ತ್ರಗಳ ಕುರಿತು ಪಶ್ಚಾತ್ಯರ ವಿಭಿನ್ನ ಅಧ್ಯಯನ ನೆಲೆಗಳು ಕಂಡುಕೊಂಡ ನೂತನ ತತ್ವಗಳನ್ನು ನಾವು ಇನ್ನೂ ತಲುಪಿಲ್ಲ” ಎನ್ನುವ ಡಿ. ವಿ. ಪರಮಶಿವಮೂರ್ತಿಯವರ ಮಾತು ಸತ್ಯವಾದದ್ದು. ಅಂದರೆ ನಡೆದಿರುವ ಹೆಚ್ಚು ಅಧ್ಯಯನಗಳು ಶಾಸನಗಳ ವೈಭವೀಕರಣ ಅಥವಾ ವರ್ಣನಾ ಪ್ರಧಾನ ಅಧ್ಯಯನಗಳೇ ಆಗಿವೆ. ಇಂದಿಗೂ ಬಹುತೇಕ ಅಧ್ಯಯನಗಳು ಇದೇ ಮಾದರಿಯಲ್ಲೇ ಸಾಗಿವೆ. ಹಾಗಾಗಿ ಶಾಸನ ಅಧ್ಯಯನದ ಇತಿಹಾಸವನ್ನು ಕ್ರಮವಾಗಿ “ಪಠ್ಯ ಪ್ರಕಟಣಾ ಕಾಲ, ಪಠ್ಯ ವೈಭವಕಾಲ, ಪಠ್ಯ ಅಧ್ಯಯನ ಕಾಲ ಪಠ್ಯ ವಿಮರ್ಶನಕಾಲ” ಎಂದು ವರ್ಗೀಕರಿಸಬಹುದಾಗಿದೆ.

ಶಾಸನಗಳನ್ನು ಇಂದು ಸಾಹಿತ್ಯಕ, ಸಾಮಾಜಿಕ, ವೈಜ್ಞಾನಿಕ, ವೈಚಾರಿಕ, ಹಾಗೂ ತೌಲನಿಕ ವಿಮರ್ಶೆಯ ವಿಸ್ತೃತ ಅಧ್ಯಯನಕ್ಕೆ ಬಳಸಿಕೊಳ್ಳಬೇಕಾಗಿದೆ. ಪ್ರಾಚೀನ ಕನ್ನಡ ಶಾಸನಗಳು ಮಾಹಿತಿ ಕಣಜವಿದ್ದಂತೆ. ಈಗಾಗಲೇ ಹೇಳಿದ ಹಾಗೆ ಸಾಹಿತ್ಯದ ಅಧ್ಯಾಪಕರು, ಸಂಶೋಧಕರು, ಹಾಗೂ ವಿದ್ಯಾರ್ಥಿಗಳು ಶಾಸನಗಳನ್ನು ಕುರಿತು ಅಧ್ಯಯನಗಳನ್ನು ಕೈಗೊಂಡ ನಂತರ ಅದರ ದಿಕ್ಕು ಬದಲಾಗಿದೆ. ರಾಜಕೀಯ ಅಧ್ಯಯನದಿಂದ ಬಿಡಿಸಿಕೊಂಡು ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಧ್ಯಯನಗಳತ್ತ ಅದು ಹೊರಳಿತು. ಶಾಸನಗಳ ಆಕರಗಳನ್ನು ಹಲವು ರೂಪದಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು. ಶಾಸನಗಳಂತಹ ಆಕರಗಳನ್ನು ಕುರಿತು ಸಾಂಸ್ಕೃತಿಕ ಅಧ್ಯಯನದಲ್ಲೇ ಮಾಹಿತಿಗಳನ್ನು “ಯಾಜಮಾನ್ಯ ದೃಷ್ಟಿಯಿಂದ” ಪರಿಗಣಿಸಿದೆ, ಜನಪದ ದೃಷ್ಟಿಯಿಂದ ಗ್ರಹಿಸುವ ಸಾಮಾನ್ಯ ಮನುಷ್ಯನ ಜೀವನ ಕ್ರಮಗಳನ್ನು ಗ್ರಹಿಸುವ ಹಾಗೂ ಘಟನೆಗಳ ಹಿಂದೆ ಅಡಗಿರುವ “ನೋವಿನ ನೆಲೆ”ಗಳನ್ನು ಗ್ರಹಿಸುವ, ಶೋಧಿಸುವ ವಿಧಾನ ಇಂದು ಆಗಬೇಕಿದೆ.

ಶಾಸನಗಳ ಅಧ್ಯಯನ, ಸಂಶೋಧನೆ ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿರುವ ಇಂದು ಅದಕ್ಕಿರುವ ಸಾಧ್ಯತೆಗಳನ್ನು ಕುರಿತು ಆಲೋಚಿಸುವುದು ಬಹಳ ಮುಖ್ಯವಾದುದು ಎಂಬುದು ನನ್ನ ಭಾವನೆ.