ಕರ್ನಾಟಕವನ್ನು ಆಳಿದ ಅನೇಕ ರಾಜಮನೆತನಗಳಂತೆ ಸಣ್ಣಪುಟ್ಟ ಮನೆತನಗಳೂ ಇದ್ದವು. ಪಾಳೆಪಟ್ಟುಗಳೂ ಇದ್ದವು. ಕರ್ನಾಟಕ ಕವಿಚರಿತೆಕಾರ ಆರ್. ನರಸಿಂಹಾಚಾರ್ ಉಲ್ಲೇಖಿಸಿರುವ ಅನೇಕ ಸಣ್ಣಪುಟ್ಟ ಮನೆತನಗಳು, ಪಾಳೆಗಾರರ ಬಗ್ಗೆ ಅಧ್ಯಯನ ನಡೆದೇ ಇಲ್ಲ. ಹಾಗಲವಾಡಿ ಪಾಳೆಗಾರರು, ನಿಡುಗಲ್ಲು ಪಾಳೆಗಾರರು, ತರೀಕೆರೆ ಪಾಳೆಗಾರರು. . ಇಂಥ ಕೆಲವು ಅಧ್ಯಯನಗಳು ನಡೆದಿವೆ. ಆದರೂ ಇನ್ನೂ ಇಂಥ ಹತ್ತಾರು ಪಾಳೆಗಾರರ ಬಗ್ಗೆ ಅಧ್ಯಯನಗಳೇ ನಡೆದಿಲ್ಲ. ಉದಾ: ಹಿಲಿಕಲ್ಲು ಸ್ಥಾನಿಕರ ಚರಿತ್ರೆ, ಕಾಣಿಕಾರನ ಹಳ್ಳಿ ಪ್ರಭುಗಳು, ಮೂಲನಾಡು ಪ್ರಭುಗಳು, ಸೀಗಲನಾಡು ಪ್ರಭುಗಳು ಇತ್ಯಾದಿ

ಸ್ಥಳೀಯ ಚರಿತ್ರೆಯ ಕಡೆ ಇಡೀ ಜಗತ್ತೇ ಹೊರಳುತ್ತಿರುವ ಈ ದಿನಮಾನಗಳಲ್ಲಿ ನಾವು ನಮ್ಮ ಸ್ಥಳೀಯ ಪಾಳೆಗಾರರು, ಪ್ರಭುಗಳು, ಸೀಮೆಗಳನ್ನು, ಐತಿಹಾಸಿಕ ನಗರ, ಪಟ್ಟಣ, ಪಾಳೆಪಟ್ಟು, ಮನೆತನಗಳನ್ನು ಇಂದು ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಇದು ಸ್ಥಳೀಯ ಚರಿತ್ರೆಗೆ ಒಂದು ಉತ್ತಮ ಆಕರ ಎಂದು ಭಾವಿಸುತ್ತೇನೆ.