ಕರ್ನಾಟಕದ ಅನೇಕ ಶಾಸನಗಳಲ್ಲಿ ಮುಸಲ್ಮಾನರನ್ನು ಕುರಿತು ಉಲ್ಲೇಖಗಳಿವೆ. ಅವರು ರಾಜರಾಗಿ, ಮಂತ್ರಿಗಳಾಗಿ, ಸೈನಿಕರಾಗಿ, ಅಧಿಕರಿಗಳಾಗಿ, ಊರಿನ ಪ್ರಮುಖರಾಗಿ ವ್ಯಾಪಾರಿಗಳಾಗಿ ಕಾರ್ಯ ನಿರ್ವಹಿಸಿರುವ ವಿವರಗಳು ಬೇಕಾದಷ್ಟು ಸಿಗುತ್ತವೆ. ಹಾಗಾಗಿ ಅವರ ಆಡಳಿತ ಕ್ರಮಗಳು, ನ್ಯಾಯತೀರ್ಮಾನಗಳು, ದಾನ-ದತ್ತಿಗಳು, ದೇವಾಲಯ, ಮಸೀದಿ, ಬಸದಿಗಳನ್ನು ನಿರ್ಮಾಣ ಮಾಡಿರುವುದು ಅಥವಾ ಅವುಗಳಿಗೆ ಹಿಂದೂ, ವೈಷ್ಣವ, ಶೈವ, ಜೈನಧರ್ಮದ ದೇವಾಲಯಗಳಿಗೆ, ಬಸದಿಗಳಿಗೆ ನೀಡಿದ ದಾನದತ್ತಿ, ಕಾಣಿಕೆಗಳು, ಪುರಸ್ಕಾರಗಳು. ಅವರ ಕಾಲದ ತೆರಿಗೆಗಳು ಇತ್ಯಾದಿಗಳನ್ನು ಕುರಿತಂತೆ ಸಂಶೋಧನೆ ನಡೆಸಿದರೆ ಶಾಸನ ಕ್ಷೇತ್ರಕ್ಕೆ ಹೊಸ ಆಯಾಮ ತಂದುಕೊಟ್ಟಂತಾಗುತ್ತದೆ.

ಹಾಗೆಯೇ ಇತರ ಸಮುದಾಯಗಳೊಂದಿಗಿನ ಸಾಮರಸ್ಯ, ಸಂಘರ್ಷ ಅದಕ್ಕೆ ಕಾರಣ, ಪರಿಣಾಮ, ಹಿನ್ನೆಲೆ ಅಂಥವುಗಳಿಂದ ಸಮಾಜದಲ್ಲಿ ಉಂಟಾಗುತ್ತಿದ್ದ ಬಿಕ್ಕಟ್ಟುಗಳನ್ನು ಇನ್ನೂ ಮುಂತಾದ ವಿಷಯಗಳನ್ನು ಕುರಿತು ಸಂಶೋಧನೆ ನಡೆಸಬಹುದಾಗಿದೆ.