ಶಾಸನಗಳ ವಸ್ತು ವಿಮರ್ಶೆ, ಸ್ಥಳನಾಮಗಳು, ವ್ಯಕ್ತಿನಾಮಗಳು, ಕಡತಗಳು, ಕೈಫಿಯತ್ತುಗಳು, ನಿರೂಪಗಳು, ಭಕೈರು, ದಿನಚರಿಗಳು, ನಾಮೆ, ಭಿನ್ನವತ್ತಳೆ, ಸ್ಮಾರಕಗಳು ಪುರಾತತ್ವ ಶೋಧಗಳು, ಸಮಾಧಿಗಳು, ಬೃಹತ್ ಶಿಲಾಯುಗದ ಸಮಾಧಿಗಳು ಐತಿಹ್ಯಗಳು ಇವೆಲ್ಲಾ ಒಂದೊಂದೂ ಪ್ರತ್ಯೇಕ ಅಧ್ಯಯನಗಳು. ಇವುಗಳನ್ನು ಸಾಂಸ್ಕೃತಿಕ ಚರಿತ್ರೆಯ ಸಂರಚನೆಯ ಸಂದರ್ಭದಲ್ಲಿ ಆಕರವಾಗಿ ಬಳಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಈ ಕ್ಷೇತ್ರದಲ್ಲಿ ಬಿಡಿ ಬಿಡಿ ಲೇಖನಗಳನ್ನು, ಪ್ರಸ್ತಾಪಗಳನ್ನೂ ಹೊರತುಪಡಿಸಿದರೆ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ಯುವ ವಿದ್ವಾಂಸರೂ, ಸಂಶೋಧಕರೂ ಆಸಕ್ತಿ ವಹಿಸಿದರೆ ಹತ್ತಾರು ಅವಕಾಶಗಳು ಅವರಿಗಾಗಿಯೇ ಇವೆ.

ಸ್ಥಳನಾಮಗಳು ಮತ್ತು ವ್ಯಕ್ತಿನಾಮಗಳು ಈಗ ಭಾಷಾವಿಜ್ಞಾನದ ಭಾಗವಾಗಿರುವುದು ಸತ್ಯವಾದರೂ ಐತಿಹಾಸಿಕ ಹಾಗೂ ಜಾನಪದದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲು ಬಹಳಷ್ಟು ಶಾಸನಗಳು, ಐತಿಹ್ಯಗಳು ಜನಪದ ಕಥನಗಳು ಆಕರಗಳಾಗಿ ಸಿಗುತ್ತವೆ. ಊರುಗಳ ಹೆಸರು, ನಗರ, ಪಟ್ಟಣ, ಅಗ್ರಹಾರ, ದೇವಾಲಯ ನಿರ್ಮಾಣ. ಅವುಗಳ ಹೆಸರುಗಳನ್ನು ಚಾರಿತ್ರಿಕವಾಗಿ, ಅವುಗಳ ಸೃಷ್ಟಿಕಾರಣ, ಹಿನ್ನೆಲೆ, ಘಟನೆ, ಅದರ ಭೌಗೋಳಿಕತೆ, ಗಡಿರೇಖೆಗಳು, ಅಲ್ಲಿ ವಾಸಿಸುತ್ತಿದ್ದ ಜನಸಮುದಾಯ ಮುಂತಾದವುಗಳನ್ನು ಸಂಶೋಧನೆ ಮಾಡಬೇಕಿದೆ. ಅನೇಕ ಸ್ಥಳನಾಮಗಳು ರಾಜರ ಸೋಲು ಗೆಲುವಿನೊಂದಿಗೆ ಬದಲಾಗುತ್ತಿದ್ದವು ಎಂಬುದನ್ನು ಮರೆಯುವಂತಿಲ್ಲ.

ಇವುಗಳನ್ನು ಅಧ್ಯಯನದ ಅನುಕೂಲಕ್ಕಾಗಿ, ರಾಜಮನೆತನ, ಪ್ರಾದೇಶಿಕ, ಕಾಲಘಟ್ಟ, ಧಾರ್ಮಿಕ ಹಿನ್ನೆಲೆ, ರಾಜಕೀಯ ಕಾರಣಗಳು ಹೀಗೆ ವಿಭಾಗ ಮಾಡಿಕೊಂಡು ಅಧ್ಯಯನ, ಸಂಶೋಧನೆ ಮಾಡಲು ಅವಕಾಸವಿದೆ.