ಕನ್ನಡ ಶಾಸನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನೂರಾರು ವಿದ್ವಾಂಸರು, ಸಂಶೋಧಕರು, ಶಾಸನ ತಜ್ಞರು ಇದ್ದಾರೆ. ಇವರ ಬಗ್ಗೆ ಸರಿಯಾದ ನಿಖರವಾದ ಮಾಹಿತಿಯನ್ನು ಕೊರತೆ ನಮ್ಮ ಮುಂದಿದೆ. ಈಗಾಗಲೇ ಭಾಷಾ ವಿಜ್ಞಾನಿಗಳನ್ನು ಕುರಿತಂತೆ ‘ಭಾಷಾ ಸಂಗಮ,’ ಜಾನಪದ ವಿದ್ವಾಂಸರನ್ನು ಕುರಿತಂತೆ ‘ಜಾನಪದ ತಲೆಮಾರು,’ ‘ಭತ್ತಿ ಬೆಲೆದವರು’ ಎಂಬ ಬಹಳ ಉಪಯುಕ್ತ ಕೃತಿಗಳು ಪ್ರಕಟಗೊಂಡಿವೆ. ಇದರಿಂದ ಆ ಮಹನೀಯರನ್ನು ಅವರ ಜೀವನ ವಿವರ, ಸಾಧನೆಗಳನ್ನು ಅರ್ಥೈಸಿಕೊಳ್ಳಲು, ಆ ಮೂಲಕ ಅದು ಯುವ ವಿದ್ವಾಂಸರ ಮೇಲೆ ಪ್ರೇರಣೆ, ಪ್ರಭಾವ ಬಿರಲು ಸಾಧ್ಯವಾಗಿದೆ. ಹಾಗೂ ಇಂಥ ಗ್ರಂಥಗಳ ಅಧ್ಯಯನದಿಂದ ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತರು ಹೆಚ್ಚುತ್ತಾರೆ. ಅದರ ಜೊತೆಗೆ ಸಾಧನೆ ಮಾಡಿದವರಿಗೂ ಗೌರವ ಸಲ್ಲಿಸಿದಂತಾಗುತ್ತದೆ.

ಹಾಗಾಗಿ ಶಾಸನ ಕ್ಷೇತ್ರದಲ್ಲಿ ಕೆಲಸ ಮಾಡಿದ ಆಂಗ್ಲರು, ಕನ್ನಡ ವಿದ್ವಾಂಸರನ್ನೂ ಒಳಗೊಂಡ ಪ್ರತ್ಯೇಕ ಅಧ್ಯಯನಗಳು, ಮಾಹಿತಿ ಕೋಶಗಳನ್ನು ಸಿದ್ಧಗೊಳಿಸಲು ಅನೇಕ ಯುವ ವಿದ್ವಾಂಸರಿಗೆ, ಸಂಶೋಧಕರಿಗೆ ಇಲ್ಲಿ ಅವಕಾಶ ಇದೆ ಎಂಬುದನ್ನು ಮರೆಯಬಾರದು. ಉದಾ : ರೈಸ್, ಪ್ಲೀಟ್, ಮೊಗ್ಲಿಂಗ್, ಮೆಕೆಂಜಿ ಮುಂತಾದ ವಿದೇಶಿ ವಿದ್ವಾಂಸರ ಜೊತೆಗೆ ನಮ್ಮವರೇ ಆದ ಆರ್. ನರಸಿಂಹಾಚಾರ್, ಎಂ. ಎಚ್. ಕೃಷ್ಣ, ಎನ್. ಲಕ್ಷ್ಮಿ ನಾರಾಯಣರಾವ್, ಆರ್. ಎಸ್. ಪಂಚಮುಖಿ, ಪಿ. ಎಸ್. ದೇಸಾಯಿ, ಬಾ. ರಾ. ಗೋಪಲ್, ಶೇಷಾದ್ರಿ, ಜಿ. ಎಸ್. ಗಾಯಿ, ಶ್ರೀನಿವಾಸರಿತ್ತಿ, ನಂದಿಮಠ, ಕೆ. ಜಿ. ಕುಂದಣಕಾರ, ಎಂ. ಚಿದಾನಂದ ಮೂರ್ತಿ, ಎಂ. ಎಂ. ಕಲಬುರ್ಗಿ… ಹೀಗೆ ನೂರಾರು ವಿದ್ವಾಂಸರನ್ನು ಕುರಿತು ಅಧ್ಯಯನ ಮಾಡಬೇಕಿದೆ.