ಕನ್ನಡ ಶಾಸನ ಸಂಪುಟಗಳು ಈಗಾಗಲೇ ಬಂದಿವೆ. ಅವುಗಳೂ ಸಹ ಉತ್ತಮ ಸಂಪುಟಗಳೇ ಆಗಿವೆ. ಆದರೂ ಕೆಲವು ಕೊರತೆಗಳು ಈ ಕ್ಷೇತ್ರದಲ್ಲಿ ಇಲ್ಲದಿಲ್ಲ. ವಸ್ತು ಭೇದದ ಶಾಸನ ಸಂಪುಟಗಳು ರಚನೆಯಾಗಬೇಕಿದೆ. ಅರಸು ಮನೆತನಗಳನ್ನು ಆಧಾರವಾಗಿಟ್ಟುಕೊಂಡು, ಶಾಸನಗಳ ತೇದಿ ಅಥವಾ ಕಾಲದ ಆಧಾರಿತ ಶಾಸನ ಸಂಪುಟಗಳು, ನಿಷಧಿಶಾಸನ ಸಂಪುಟಗಳು, ಪ್ರಶಸ್ತಿ ಶಾಸನ ಸಂಪುಟ, ದಾನ ಶಾಸನ ಸಂಪುಟ, ವೀರಗಲ್ಲು, ಮಾಸ್ತಿಕಲ್ಲುಗಳು ಇತ್ಯಾದಿ ಸಂಪುಟಗಳು ಪ್ರತ್ಯೇಕವಾಗಿ ರಚನೆ ಆಗಬೇಕಿದೆ. ಇದು ಕಷ್ಟ ಅಥವಾ ಸಂಕೀರ್ಣ ಸಮಸ್ಯೆಗಳನ್ನು ಒಳಕೊಂಡಿದೆಯಾದರೂ ಮುಂದಿನ ಸಂಶೋಧನೆಗಳಿಗೆ ಅಧ್ಯಯನಗಳಿಗೆ ಬಹು ಅವಶ್ಯಕವಾದುದ್ದಾಗಿದೆ.

ಹಾಗೆಯೇ ಕರ್ನಾಟಕದಲ್ಲಿ ಹತ್ತಾರು ಪಾಳೆಪಟ್ಟುಗಳು ಆಳಿ ಅಳಿದು ಹೋಗಿವೆ. ಅವರ ಕಾಲದ ಶಾಸನಗಳನ್ನೂ ಪಾಳೆಗಾರರ ಸಂಪುಟಗಳ ಹೆಸರಿನಲ್ಲಿ ತರುವುದೂ ಒಂದು ಉತ್ತಮ ಕೆಲಸವೇ ಆಗಿದೆ. ಹೀಗೆ ಸಂಪುಟಗಳ ಸಿದ್ಧತೆಯ ಸಂದರ್ಭದಲ್ಲಿ ಅವುಗಳಿಗೆ ಉತ್ತಮವಾದ ಪೀಠಿಕೆ, ವಿಶೇಷ ಪ್ರಸ್ತಾವನೆ, ವಿಮರ್ಶೆ, ವಿವರಣೆಗಳು ಇದ್ದರೆ ಮುಂದಿನ ಸಂಶೋಧಕರಿಗೂ, ಉತ್ತಮ ಚರಿತ್ರೆ ನಿರ್ಮಾಣಕ್ಕೂ ಅನುಕೂಲವಾಗುತ್ತದೆ ಎಂಬುದು ನನ್ನ ಭಾವನೆ. ಅನೇಕ ವಿದ್ವಾಂಸರು, ವಿಶ್ವವಿದ್ಯಾಲಯಗಳು ಈ ಕೆಲಸ ಮಾಡಬೇಕಿದೆ. ಇದು ಸಾಂಘಿಕ ಸಂಶೋಧನೆ. ಕೇವಲ ಒಬ್ಬ ವ್ಯಕ್ತಿ ಒಂದು ಸಂದರ್ಭದಲ್ಲಿ ಕುಳಿತು ಮಾಡಲಾರದ್ದು ಎನ್ನುವುದನ್ನು ಮರೆಯುವಂತಿಲ್ಲ. ಆದರು ಆಗಲೇ ಬೇಕಾದ ಕೆಲಸ ಇದು.