ಕರ್ನಾಟಕದಲ್ಲಿ ಸಿಕ್ಕಿರುವ ಅಸಂಖ್ಯಾತ ಶಾಸನಗಳ ಅಧ್ಯಯನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಅವುಗಳ ‘ಶಿಲ್ಪ’ದ ಅಧ್ಯಯನ. ಶಾಸನ ಪಾಠಕ್ಕೆ ಇರುವಷ್ಟು ಮಹತ್ವ ಅದರ ಶಿಲ್ಪಕ್ಕೂ ಇದೆ. ಅದು ಶಾಸನಗಳವನ್ನು ಅರ್ಥೈಸಲು ಇರುವ ಇನ್ನೊಂದು ಮುಖ ಎಂಬುದನ್ನು ಡಾ. ಡಿ. ವಿ. ಪರಮಶಿವಮೂರ್ತಿಯರು ‘ಕನ್ನಡ ಶಾಸನ ಶಿಲ್ಪ’ ಎನ್ನುವ ಕೃತಿಯಲ್ಲಿ ತೋರಿಸಿ ಕೊಟ್ಟಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಇತಿಹಾಸ ರಚನೆಗೆ ಪೂರಕ ಆಕರವಾಗಿ ಅಷ್ಟೇ ಸಂಖ್ಯೆ ಶಿಲ್ಪಗಳು ನಮ್ಮ ಮುಂದೆ ಸವಾಲಾಗಿ ನಿಂತಿವೆ. ಹಾಗಾಗಿ ಇದರ ಅಧ್ಯಯನವೂ ಬಹಳ ಮಹತ್ವದ್ದು. ಶಾಸನ ಶಿಲ್ಪಗಳ ಸ್ವರೂಪ ಅವುಗಳ ಹಿನ್ನೆಲೆ, ಉದ್ದೇಶ, ದಾನಶಾಸನ ಶಿಲ್ಪ, ವೀರಶಾಸನ ಶಿಲ್ಪ, ಬಲಿದಾನದ ಶಿಲ್ಪಗಳು, ಮಹಾಸತಿ ಶಿಲ್ಪಗಳು, ತುರುಕಾಳಗ ಶಿಲ್ಪಗಳು, ಪೆಣ್ಬುಯಲ್ ಶಿಲ್ಪಗಳು, ಉಬ್ಬುಶಿಲ್ಪ ಅವುಗಳ ವಸ್ತು, ಬಂಡೆ, ಲೋಹ, ಮಣ್ಣು, ಇತ್ಯಾದಿಯಾಗಿ ವಿಭಾಗಿಸಿಕೊಂಡು ಅಧ್ಯಯನ ಮಾಡಲು ಇನ್ನೂ ಹೆಚ್ಚು ಹೆಚ್ಚು ಅವಕಾಶಗಳಿವೆ.

‘ಕನ್ನಡ ಶಾಸನ ಶಿಲ್ಪ’ ಕೆಲವು ಬಿಡಿಲೇಖನಗಳು ಈ ಅಧ್ಯಯನ ಮಾರ್ಗದಲ್ಲಿ ಹತ್ತಾರು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿವೆ ಎಂದರೆ ತಪ್ಪಾಗಲಾರದು. ಕಾಲ ಘಟ್ಟಗಳನ್ನು ಆಧರಿಸಿ, ಧರ್ಮಗಳನ್ನು ಆಧರಿಸಿ ವಿಷಯ ವಸ್ತುವನ್ನಾಧರಿಸಿ ವಿಭಾಗ ಮಾಡಿಕೊಂಡೂ ಅಧ್ಯಯನ ಮಾಡಬಹುದು. ಇಲ್ಲಿ ಅವು ಜನರಿಗೆ ಹೇಗೆ ಸಂವಹನವಾಗುತ್ತಿದ್ದವು. ಜನರು ಅವುಗಳನ್ನು ಹೇಗೆ ಗ್ರಹಿಸುತ್ತಿದ್ದರು ಅದರ ರೀತಿ ನೀತಿಗಳು ಜನಪದ ನಂಬಿಕೆಗಳನ್ನು, ಕಥನಗಳನ್ನು ಆಕರಗಳಾಗಿ ಬಳಸಿಕೊಂಡು ಅಧ್ಯಯನ ಮಾಡಬೇಕಾಗಿದೆ.

ಹಾಗೆಯೇ ಈ ‘ಶಿಲ್ಪ’ ಗಳ ಅಧ್ಯಯನದಲ್ಲಿ ಗಮನೀಸಬೇಕಾದ ಇನ್ನೊಂದು ಸಂಗತಿ ಎಂದರೆ ವೇಷ ಭೂಷಣಗಳು. ಇವು ಬೇರೆ ಬೇರೆ ವರ್ಗದವರಿಗೆ ಬೇರೆಯೇ ಆಗಿರುತ್ತಿದ್ದವು. ವೀರರ ಉಡುಪು, ರಾಜರ ಉಡುಪು, ಸಾಮಾನ್ಯರ ಉಡುಪು, ಅವರು ಧರಿಸುತ್ತಿದ್ದ ವಿವಿಧ ರೀತಿಯ ಆಭರಣಗಳು ಬಳಸುತ್ತಿದ್ದ ಆಯುಧಗಳ ಶಿಲ್ಪಗಳು, ಯುದ್ಧದ ಉಡುಪುಗಳು, ಅದಕ್ಕೆ ಬಳಸುತ್ತಿದ್ದ ಕುದುರೆ, ಆನೆ, ರಥ, ವಾದ್ಯಗಳು ಇತ್ಯಾದಿ ಶಿಲ್ಪಗಳು ಅಸಂಖ್ಯಾತವಾಗಿ ಕಂಡುಬರುತ್ತವೆ. ಗಿಡಮರಗಳು, ಪ್ರಾಣಿ-ಪಕ್ಷಿಗಳು, ಬೇಟೆ ಚಿತ್ರಣಗಳು, ದೇವರು, ದೇವತೆಗಳು, ಯಕ್ಷ-ಯಕ್ಷಿಣಿ, ಹೋರಾಟ ಶಿಲ್ಪಗಳು, ಕೀಟ, ಹಾವು, ಮೊಸಳೆ, ಚೇಳು, ಜಿಂಕೆ, ನಾಯಿ, ಹಂದಿ, ಸಿಂಹ, ಮುದ್ರೆಗಳು ಲಾಂಛನಗಳು, ಧ್ವಜಗಳು ಹೀಗೆ ಒಂದು ದೊಡ್ಡ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ವೈವಿಧ್ಯಮಯವಾದ ಶಾಸನ ಶಿಲ್ಪಗಳನ್ನು ಆಧ್ಯಯನ, ಸಂಶೋಧನೆ ಮಾಡುವುದಕ್ಕೆ ಹತ್ತಾರು ಅವಕಾಶಗಳು ಸಂಶೋಧಕರಿಗೆ, ವಿದ್ವಾಂಸರಿಗೆ ಕಾದಿವೆ ಎಂದರೆ ತಪ್ಪಾಗಲಾರದು.