ಸಂಸ್ಕೃತಿ ಎಂಬ ಮಾತೇ ಇತ್ತೀಚಿನದು. ಬಹುಶಃ ಇಂಗ್ಲೀಷ್‌ನ culture ಎಂಬ ಪದಕ್ಕೆ ಸಂವಾದಿಯಾಗಿ ಸಂಸ್ಕೃತಿ ಎಂಬ ಈ ಪದ ಬಳಕೆಯಾಗತೊಡಗಿ ಒಂದು ಶತಮಾನವಾಗಿರಬಹುದು. ಸಂಸ್ಕೃತಿ ಎಂಬ ಪದವನ್ನು ಕುರಿತು ಈ ಕಳೆದ ಶತಮಾನದಲ್ಲಿ ಚರ್ಚೆ ನಡೆದು ಸಾಕಷ್ಟು ವ್ಯಾಖ್ಯಾನಗಳು ಹುಟ್ಟಿಕೊಂಡಿವೆ.

ಮನುಷ್ಯನನ್ನು ಪ್ರಾಣಿಗಳಿಂದ ಬೇರ್ಪಡಿಸುವ ಲಕ್ಷಣವೇ ಸಂಸ್ಕೃತಿ- ಎನ್ನುವುದು ಈ ಕುರಿತ ಚಿಂತನೆಯ ಮೊದಲ ನಿರ್ವಚನ. ಪ್ರಾಣಿಗಳಿಗೆ ವಾಕ್ ಶಕ್ತಿಯಿಲ್ಲ, ಸಾಮಾಜಿಕ ಸಂಘಟನೆಯಿಲ್ಲ, ಹಿಂದಿನ ತಿಳುವಳಿಕೆಯನ್ನು ಗ್ರಹಿಸಿ ತಮ್ಮ ವರ್ತಮಾನವನ್ನು ರೂಪಿಸಿಕೊಳ್ಳಬಹುದೆನ್ನುವ ವಿವೇಚನೆಯಿಲ್ಲ. ಮನುಷ್ಯನಿಗಾದರೋ ಈ ಮೂರೂ ಇವೆ. ಹೀಗೆ ಈ ಮೂರರ ಇರುವಿಕೆಯನ್ನೇ ‘ಸಂಸ್ಕೃತಿ’ ಎಂದು ಹೇಳಬಹುದು.

ಸಂಸ್ಕೃತಿಯ ವ್ಯಾಖ್ಯಾನಕಾರರು ಮನುಷ್ಯ ತನ್ನನ್ನು ತಾನು ಉತ್ತಮಗೊಳಿಸಿ- ಕೊಳ್ಳಲು ನಡೆಯಿಸುವ ಪ್ರಯತ್ನದ ಪರಿಣಾಮವೇ ಸಂಸ್ಕೃತಿ ಎನ್ನುತ್ತಾರೆ. ಹೀಗಾಗಿ ಸಂಸ್ಕೃತಿ ಎನ್ನುವುದು ಮನುಷ್ಯನ ಅಂತರಂಗದ ಪರಿಷ್ಕಾರವನ್ನು ಕುರಿತದ್ದು. ಮ್ಯಾಥ್ಯೂ ಆರ‍್ನಾಲ್ಡ್, ಎಮರ್ಸನ್, ಡಿ.ವಿ.ಜಿ. ಮೊದಲಾದವರು ಈ ನಿಲುವನ್ನು ಪ್ರತಿಪಾದಿಸುತ್ತಾರೆ.

ಟಿ.ಎಸ್. ಇಲಿಯಟ್ ಮುಂತಾದವರು ಮಾನವಶಾಸ್ತ್ರೀಯ ಹಾಗೂ ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತ, ‘ಒಂದು ಪ್ರದೇಶದಲ್ಲಿ ಪ್ರಚಲಿತವಾಗಿರುವ ಒಂದು ಜನಾಂಗದ ಜೀವನ ವಿಧಾನವೇ ಸಂಸ್ಕೃತಿ’ ಎಂದು ಹೇಳುತ್ತ, ಅದು ಆ ಜನತೆಯ ಸಾಮಾಜಿಕ ವ್ಯವಸ್ಥೆಯಲ್ಲಿ, ಅವರ ಆಚಾರವಿಚಾರಗಳಲ್ಲಿ, ಅವರ ಕಲೆ ಸಾಹಿತ್ಯಾದಿಗಳಲ್ಲಿ, ಧರ್ಮದಲ್ಲಿ ಅಭಿವ್ಯಕ್ತವಾಗುತ್ತದೆ ಎನ್ನುತ್ತಾರೆ. ಈ ಅರ್ಥದಲ್ಲಿ ಪ್ರತಿಯೊಂದು ದೇಶಕ್ಕೂ ಪ್ರತಿಯೊಂದು ಜನಾಂಗಕ್ಕೂ ಅದರದೇ ಆದ ಸಂಸ್ಕೃತಿಯಿರುತ್ತದೆ. ಈ ಸಂಸ್ಕೃತಿಗಳಲ್ಲಿ ಯಾವುದೇ ಒಂದನ್ನು ಶ್ರೇಷ್ಠ, ಮತ್ತೊಂದನ್ನು ಕನಿಷ್ಠ ಎಂದು ತರತಮಗಳನ್ನು ಮಾಡುವುದು ಅನುಚಿತವಾದದ್ದು; ಅಷ್ಟೇ ಅಲ್ಲ, ಅವೈಚಾರಿಕವಾದದ್ದು ಕೂಡ.

ಕರ್ನಾಟಕಕ್ಕೆ ತನ್ನದೇ ಅದೊಂದು ಸಂಸ್ಕೃತಿ ಇದೆ. ಕರ್ನಾಟಕ ಭಾರತದ ಒಂದು ಅವಿನಾ ಭಾಗವಾದರೂ ಅದಕ್ಕೆ ತನ್ನದೇ ಆದೊಂದು ವಿಶಿಷ್ಟವಾದ ಸಾಂಸ್ಕೃತಿಕ ವ್ಯಕ್ತಿತ್ವವಿದೆ. ಕುವೆಂಪು ಅವರು ತಮ್ಮ ಸುಪ್ರಸಿದ್ಧ ರಾಷ್ಟ್ರಗೀತೆಯಲ್ಲಿ ‘ಕರ್ನಾಟಕಮಾತೆ’ಯನ್ನು ‘ಭಾರತಜನನಿಯ ತನುಜಾತೆ’ ಎಂದು ವರ್ಣಿಸಿದರೂ, ಈ ತನುಜಾತೆ, ತನ್ನ ಜನನಿಯ ಯಥಾಪ್ರತಿಯೇನೂ ಅಲ್ಲ. ಈ ‘ತನುಜಾತೆ’ಗೆ ತನ್ನದೇ ಆದ ಭೌಗೋಲಿಕ ಶಾರೀರಿಕ ಲಕ್ಷಣವಿದೆ. ತನ್ನದೇ ಆದೊಂದು ಒಳಮನಸ್ಸಿದೆ. ತನ್ನದೇ ಆದ ಚಹರೆಗಳೂ ಚಿಂತನೆಗಳೂ ಇವೆ. ಈ ದೃಷ್ಟಿಯಿಂದ ಕರ್ನಾಟಕವೂ ಭಾರತವೂ ಸಮಾನಾರ್ಥಕಗಳಲ್ಲ. ಕರ್ನಾಟಕ ಸಂಸ್ಕೃತಿ ಭಾರತೀಯ ಸಂಸ್ಕೃತಿ ಒಂದೇ ಅಲ್ಲ. ಕನ್ನಡದ ಮೊಟ್ಟಮೊದಲ ಕೃತಿ ಕವಿರಾಜಮಾರ್ಗದಲ್ಲಿ (ಕ್ರಿ.ಶ. ೯ನೆಯ ಶತಮಾನ) ಮಾರ್ಗಕಾರ ಕರ್ನಾಟಕ ಅಥವಾ ಕನ್ನಡ ನಾಡನ್ನು ಕುರಿತು ವರ್ಣಿಸುತ್ತಾ ‘ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ’ ಎನ್ನುತ್ತಾನೆ. ಕನ್ನಡವೆಂಬ ಈ ವಿಶೇಷ ಸ್ವರೂಪದ ಈ ನಾಡು (ವಿಷಯ), ಈ ವಸುಧಾ ವಲಯದಲ್ಲಿ ಅಥವಾ ಈ ಜಗತ್ತಿನಲ್ಲಿ, ಅದರದೊಂದು ಭಾಗವಾಗಿ ವಿಲೀನಗೊಂಡರೂ, ಅದು ತನ್ನ ಪ್ರತ್ಯೇಕವಾದ ಚಹರೆಯಿಂದ ‘ವಿಶದ’ವಾಗಿ ಅಥವಾ ಪ್ರತ್ಯೇಕ ಲಕ್ಷಣವನ್ನುಳ್ಳದ್ದಾಗಿ ಇರುವ ಸ್ವರೂಪದ್ದು ಎಂದು ವರ್ಣಿಸುತ್ತಾನೆ. ಈ ದೃಷ್ಟಿಯಿಂದ ಕರ್ನಾಟಕ ಭಾರತದ ಒಂದು ಭಾಗವೂ ಹೌದು. ಪ್ರತ್ಯೇಕವಾದ ಅಸ್ತಿತ್ವವೊಂದನ್ನು ಪಡೆದುಕೊಂಡ ಪ್ರದೇಶವೂ ಹೌದು. ನಿಜವಾಗಿ ಗಮನಿಸಬೇಕಾದ ಸಂಗತಿಯೆಂದರೆ ಈ ಪ್ರತ್ಯೇಕವಾದ ಅಸ್ತಿತ್ವ ಕರ್ನಾಟಕಕ್ಕೆ ಮಾತ್ರವಲ್ಲ. ಇನ್ನುಳಿದ ಬಹುಭಾಷಿಕ ಬಹು ಸಾಂಸ್ಕೃತಿಕ ಪ್ರದೇಶಗಳಿಗೂ ಇದೆ. ಯಾಕೆಂದರೆ ಭಾರತ ಎನ್ನುವುದು ಕೇವಲ ಒಂದು ಅಖಂಡವಾದ ದೇಶವಲ್ಲ. ಬಹುಭಾಷಿಕ ಬಹುಸಾಂಸ್ಕೃತಿಕ ಸಮುಚ್ಚಯಗಳ ಒಂದು ಒಕ್ಕೂಟ. ಭಾರತೀಯ ಸಂಸ್ಕೃತಿಯ ಲಕ್ಷಣವೇ ಅದರ ಬಹುಮುಖತ್ವದಲ್ಲಿದೆ. ಈ ಭಾರತದ ಎಲ್ಲ ಪ್ರದೇಶಗಳಿಗೂ ಸಮಾನವಾದ ಕೆಲವು ನಂಬಿಕೆಗಳೂ ಲಕ್ಷಣಗಳು ಇದ್ದರೂ, ಪ್ರತಿಯೊಂದು ಪ್ರಾದೇಶಿಕ ಸಂಸ್ಕೃತಿಗೂ ತನ್ನದೇ ಆದ ಚರಿತ್ರೆಯೂ, ಪರಂಪರೆಯೂ, ಪ್ರತ್ಯೇಕವಾಗಿ ಗುರುತಿಸಬಹುದಾದ ವ್ಯಕ್ತಿ ವಿಶಿಷ್ಟತೆಯೂ ಇದೆ. ಒಂದು ಕಾಲಕ್ಕೆ ಸಂಸ್ಕೃತದಲ್ಲಿ ರಚಿತವಾದ ಸಾಹಿತ್ಯವನ್ನೇ ‘ಭಾರತೀಯ ಸಾಹಿತ್ಯ’ವೆಂದೂ ಸಂಸ್ಕೃತದಲ್ಲಿ ರಚಿತವಾದ ವೇದ, ಶಾಸ್ತ್ರ ಪುರಾಣ- ಆಗಮ- ಕಾವ್ಯಾದಿಗಳು ಪ್ರತಿಪಾದಿಸುವ ಜೀವನ ವಿಧಾನ ಮತ್ತು ಮೌಲ್ಯಗಳ ಮೊತ್ತವನ್ನೇ ‘ಭಾರತೀಯ ಸಂಸ್ಕೃತಿ’ ಎಂದೂ ಪಾಶ್ಚಾತ್ಯ ವಿದ್ವಾಂಸರಾದ ಮ್ಯಾಕ್ಸ್‌ಮುಲ್ಲರ್ ಮೊದಲಾದವರು ಕರೆದದ್ದನ್ನು ನಮ್ಮ ಬಹುತೇಕ ಜ್ಞಾನ ಕೇಂದ್ರಗಳು ಒಪ್ಪಿಕೊಂಡು ಬಹುಕಾಲ ಈ ಅಭಿಪ್ರಾಯಗಳನ್ನೇ ಪುನರಾವರ್ತನೆ ಮಾಡಿದ್ದುಂಟು. ಆದರೆ ಈ ದಿನ, ಭಾರತೀಯ ಸಾಹಿತ್ಯ ಸಂಸ್ಕೃತಿಗಳನ್ನು ಕುರಿತು ಭಾರತದ ಬಹುಭಾಷಿಕ, ಬಹುಸಾಂಸ್ಕೃತಿಕ ಸಮೃದ್ಧಿಯ ತಿಳಿವಳಿಕೆಯ ಹಿನ್ನೆಲೆಯಿಂದ ಬೇರೆಯೇ ಆದ ನಿಟ್ಟಿನಲ್ಲಿ ಪುನರಾಲೋಚಿಸುವ ಹಂತದಲ್ಲಿ ನಾವಿದ್ದೇವೆ. ಈ ದೃಷ್ಟಿಯಿಂದ ನೋಡಿದರೆ ಭಾರತದಲ್ಲಿ ವಿವಿಧ ಪ್ರಾದೇಶಿಕ ಸಾಹಿತ್ಯಗಳಿವೆ; ವಿವಿಧ ಪ್ರಾದೇಶಿಕ ಸಂಸ್ಕೃತಿಗಳಿವೆ ಎಂಬುದು ನಿಚ್ಚಳವಾದ ಸತ್ಯವಾಗಿದೆ. ಆದಕಾರಣ ಕಾಲ್ಪನಿಕವಾದ ಭಾರತದ ಏಕತೆಯ ಬಗ್ಗೆ ಮಾತನಾಡುವುದಕ್ಕಿಂತ, ಅದರ ಬಹುಮುಖೀ ಪ್ರಾದೇಶಿಕ ವೈಶಿಷ್ಟ ಗಳನ್ನು ಕುರಿತು ಮಾತನಾಡುವುದು ಒಳ್ಳೆಯದು.

ಈ ಪ್ರಾದೇಶಿಕತೆಗಳು, ನಾವು ಯಾವುದನ್ನು ‘ಭಾರತೀಯ’ ಎಂದು ಬಹುಕಾಲದಿಂದ ತಿಳಿದುಕೊಂಡಿದ್ದೇವೆಯೋ ಅದಕ್ಕೆ ತೋರಿದ ಪ್ರತಿಕ್ರಿಯೆ ಮತ್ತು ಹೊಂದಾಣಿಕೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರ ಮೂಲಕ, ಭಾರತೀ- ಯತೆಯ ಅರ್ಥವನ್ನು ಹೊಸತಾಗಿ ಗ್ರಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಕುರಿತು ವಿಚಾರ ಮಾಡಬೇಕು.

ಕನ್ನಡ ಎನ್ನುವುದು ಏಕಕಾಲಕ್ಕೆ ಒಂದು ಭಾಷೆಯ ಹೆಸರೂ ಹೌದು, ದೇಶದ ಹೆಸರೂ ಹೌದು. ಈ ಕನ್ನಡ ಎನ್ನುವ ನಾಡಿನ ಭಾಷೆಯಾದ ಕನ್ನಡಕ್ಕೆ ಅನೇಕ ಶತಮಾನಗಳ ಒಂದು ಸುದೀರ್ಘ ಚರಿತ್ರೆಯಿದೆ. ಪರಂಪರೆಯಿದೆ. ಈ ಚರಿತ್ರೆಯನ್ನು, ಈ ಪರಂಪರೆಯನ್ನು ಕಟ್ಟಿ ಬೆಳೆಯಿಸಿದ ಒಂದು ಜನ ಸಮುದಾಯವಿದೆ; ಈ ಸಮುದಾಯದೊಳಗಿನ ಮನಸ್ಸು ಅನೇಕ ಶತಮಾನಗಳಿಂದ ಕಟ್ಟಿಕೊಂಡು ಬಂದ ಕನಸುಗಳೂ, ಇಟ್ಟುಕೊಂಡ ಆದರ್ಶಗಳೂ, ನಡೆಯಿಸಿದ ಚಿಂತನೆಗಳೂ, ಎದುರಿಸಿದ ಸವಾಲುಗಳೂ, ಸಾಧಿಸಿದ ಸಾಧನೆಗಳೂ- ಇತ್ಯಾದಿಗಳಿಂದ ರೂಪಿತವಾದ ಒಂದು ಮನೋಧರ್ಮ ಹಾಗೂ ಜೀವನಕ್ರಮವನ್ನು ಕನ್ನಡ ಸಂಸ್ಕೃತಿ ಎಂದು ಕರೆಯಬಹುದು. ಹೀಗೆ ಇದನ್ನು ಕಟ್ಟಿದವರು ಕರ್ನಾಟಕವನ್ನು ಆಳಿದ ರಾಜರು-ಕವಿಗಳು- ಸಂತರು- ಶಿಲ್ಪಿಗಳು- ಗಾಯಕರು- ಆಚಾರ್ಯರು- ಚಿಂತಕರು- ಮತ್ತು ಬಹುಸಂಖ್ಯಾತ ಶ್ರೀಸಾಮಾನ್ಯರು. ಇವರೆಲ್ಲರ ಕೊಡುಗೆಗಳನ್ನು ನಾವು ಲಿಪಿಗಳಲ್ಲಿ, ಕಲ್ಲುಗಳಲ್ಲಿ, ಬಣ್ಣಗಳಲ್ಲಿ, ರಾಗಗಳಲ್ಲಿ ಹಾಗೂ ಸಮಾನಾಂತರವಾಗಿ ಪ್ರವಹಿಸಿಬಂದ ಅಲಿಖಿತ ಧ್ವನಿಗಳಲ್ಲಿ ಗುರುತಿಸಬಹುದು.

ಕನ್ನಡದ್ದೇ ಎಂದು ಹೇಳಬಹುದಾದ ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ವಾಸ್ತುಶಿಲ್ಪವಿದೆ; ಭಾರತೀಯ ಸಂಗೀತಕ್ಕೆ ಕೊಡುಗೆಯಾದ ಕರ್ನಾಟಕ ಸಂಗೀತವೆಂಬ ಪ್ರಕಾರವಿದೆ; ಬೇರಾವ ಭಾಷಾ ಸಾಹಿತ್ಯಗಳಲ್ಲೂ ಇಲ್ಲದ, ಇದು ಅಚ್ಚಗನ್ನಡದ ಬೇಸಾಯದ ಫಲವೆಂಬಂಥ ವಚನ ಸಾಹಿತ್ಯವಿದೆ; ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದ ಜೈನ, ವೀರಶೈವ, ಶ್ರೀವೈಷ್ಣವ ಮತ್ತು ಮಾಧ್ವ ಮತಧರ್ಮಗಳಿವೆ; ಮತ್ತು ಈ ಧರ್ಮಗಳ ಪ್ರೇರಣೆಯಿಂದ ನಿರಂತರತೆಯನ್ನು ಪಡೆದುಕೊಂಡ ಸಾಹಿತ್ಯವಿದೆ. ಈ ಸಾಹಿತ್ಯವು, ನಾವು ಯಾವುದನ್ನು ಮಹತ್ ಪರಂಪರೆ ಎಂದು ತಿಳಿದುಕೊಂಡಿದ್ದೇವೆಯೋ ಅದಕ್ಕೆ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಯ ಪರಿಣಾಮವಾಗಿದೆ. ಅನ್ಯ ಪ್ರಭಾವ ಹಾಗೂ ಪ್ರೇರಣೆಗಳನ್ನು ಕನ್ನಡದ ಪ್ರತಿಭೆ ತನ್ನೊಳಗೆ ಕರಗಿಸಿಕೊಳ್ಳುತ್ತ ಅರಗಿಸಿಕೊಳ್ಳುತ್ತ, ತನ್ನ ಅಗತ್ಯಕ್ಕೆ ತಕ್ಕ ಹಾಗೆ ಬಳಸಿಕೊಳ್ಳುತ್ತ, ತನ್ನ ಪ್ರಾದೇಶಿಕತೆಯಲ್ಲಿ ಅನುಸೃಷ್ಟಿ ಮತ್ತು ಪ್ರತಿಸೃಷ್ಟಿ ವಿಧಾನಗಳ ಮೂಲಕ ಹೊಸಹುಟ್ಟನ್ನು ತಂದಿತೆಂಬುದು ಮುಖ್ಯವಾಗಿ  ಗಮನಿಸಬೇಕಾದ ಸಂಗತಿಯಾಗಿದೆ. ಜತೆಗೆ ಉದ್ದಕ್ಕೂ ಕನ್ನಡದಲ್ಲಿ ಗುರುತಿಸಿದರೆ ಕಾಣುವಂತೆ ಸಾಂಪ್ರದಾಯಿಕವಾದ ಹಿಂದೂ-ವೈದಿಕ ಧೋರಣೆಯ ವಿರೋಧದ ಒಂದು ಧ್ವನಿಯೂ, ಪ್ರಭುತ್ವ ವಿರೋಧೀ ನಿಲುವುಗಳೂ, ಸರ್ವಧರ್ಮ ಸಹಿಷ್ಣುತೆಯ ವಿವೇಕವೂ, ಕಾಲದಿಂದ ಕಾಲಕ್ಕೆ ನಿಷ್ಪನ್ನವಾದ ಮನುಷ್ಯತ್ವದ ಕಲ್ಪನೆಗಳೂ- ಇವು ಕನ್ನಡ ಸಂಸ್ಕೃತಿಯ ಮುಖ್ಯ ಲಕ್ಷಣಗಳಾಗಿವೆ.

ಸಂಸ್ಕೃತಿಯೊಳಗಿನ ಈ ತಿಳಿವಳಿಕೆಯೆಲ್ಲವೂ ನಮ್ಮ ಅರಿವಿಗೆ ಬರುವ ಸಾಧನಗಳಲ್ಲಿ ಭಾಷೆ ಮುಖ್ಯವಾದದ್ದು. ಈ ಅರ್ಥದಲ್ಲಿ ಭಾಷೆಯನ್ನು ಸಂಸ್ಕೃತಿಯ ವಾಹಕ ಎಂದು ಕರೆಯಲಾಗಿದೆ. ವಾಸ್ತವವಾಗಿ ಭಾಷೆ ಎಂದರೆ ಜನವೇ. ಒಂದು ಭಾಷೆಯನ್ನು ಕಲಿಯುವುದು ಎಂದರೆ ಒಂದು ಜನಮನದೊಂದಿಗೆ ನಮ್ಮ ಸಂಬಂಧವನ್ನು ವಿಸ್ತರಿಸಿಕೊಳ್ಳುವುದು ಎಂದೇ ಅರ್ಥ. ಹಾಗೂ ಒಂದು ಭಾಷೆಯನ್ನು ಗೌರವಿಸುವುದು ಎಂದರೆ ಒಂದು ಜನವನ್ನು, ಒಂದು ಸಂಸ್ಕೃತಿಯನ್ನು ಗೌರವಿಸುವುದು ಎಂದು ಅರ್ಥ. ಆದುದರಿಂದ ಯಾವುದೇ ಒಂದು ಭಾಷೆಯ ಸಾಹಿತ್ಯಕ ಸಾಧನೆಯ ಮೂಲಕ ಆಯಾ ಸಂಸ್ಕೃತಿಯನ್ನು ನಾವು ಅರ್ಥಮಾಡಿ- ಕೊಳ್ಳಬಹುದು. ಯಾಕೆಂದರೆ ಶತಶತಮಾನಗಳ ತಿಳಿವಳಿಕೆಯೆಲ್ಲವೂ ನಮಗೆ ಹರಿದು ಬರುವುದು ಒಂದು ಭಾಷೆಯ ಮೂಲಕವೇ. ಈ ಹಿನ್ನೆಲೆಯಿಂದ ಕನ್ನಡಿಗರಾದ ಈ ನಾವು, ಈ ಕನ್ನಡ ಅನ್ನುವುದು ಯಾವುದಕ್ಕೆ ಸಂಕೇತ, ಅದಕ್ಕೆ ಇರುವ ಪರಂಪರೆ ಏನು? ಕಾಲದಿಂದ ಕಾಲಕ್ಕೆ ಅದು ಎದುರಿಸಿದ ಸವಾಲುಗಳು ಯಾವುವು, ಅದರ ಸಾಧನೆಗಳೇನು, ಇತ್ಯಾದಿಗಳ ಅರಿವಿಲ್ಲದೆ ನಾವು ನಿಜವಾದ ಕನ್ನಡಿಗರಾಗಲಾರೆವು. ಆದರೆ ನಮ್ಮ ವರ್ತಮಾನವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲಗತ್ಯವಾದ, ನಮ್ಮ ಬೆನ್ನ ಹಿಂದಿನ ಸಾಂಸ್ಕೃತಿಕ ಸ್ಮರಣೆಗಳ ಅರಿವೇ ಇಲ್ಲದವರಂತೆ ನಾವು ಬದುಕುತ್ತಿದ್ದೇವೆ. ಈ ಬಗೆಯ ಸಾಂಸ್ಕೃತಿಕ ಸ್ಮರಣೆಗಳನ್ನು ನಮ್ಮ ಅರಿವಿಗೆ ತಂದುಕೊಡುವಷ್ಟು ನಮ್ಮ ಪ್ರಸ್ತುತ ಶಿಕ್ಷಣವು ಜವಾಬ್ದಾರಿಯನ್ನು ವಹಿಸಿಕೊಂಡಂತೆ ತೋರುವುದಿಲ್ಲ. ನಾವು ನಿಂತ ನೆಲಕ್ಕೆ, ಅದರ ಚರಿತ್ರೆಗೆ, ಪುರಾಣಕ್ಕೆ  ಮತ್ತು ಪರಂಪರೆಗೆ ನಾವು ಸ್ಪಂದಿಸಲಾರದವರಾಗಿದ್ದೇವೆ. ಹೀಗಾಗಿ ನಮಗೆ ನಮ್ಮ ಚರಿತ್ರೆ ಗೊತ್ತಿಲ್ಲ, ಪುರಾಣ ಗೊತ್ತಿಲ್ಲ, ಕಲೆ ಗೊತ್ತಿಲ್ಲ, ಸಂಸ್ಕೃತಿಯೂ ಗೊತ್ತಿಲ್ಲ. ಹೀಗೆ ಗೊತ್ತಿಲ್ಲದಿರುವುದು ಒಂದು ನಷ್ಟ ಎಂದೂ ಗೊತ್ತಿಲ್ಲ! ಕನ್ನಡದ ಹಿರಿ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಹೇಳಿದಂತೆ;

ಅಪ್ಪ ನಟ್ಟ ಆಲದ ಗಿಡ
ಮಗನ ಕಾಲಕ್ಕೆ ಬರಿಯ ಬುಡ
ಮೊಮ್ಮಗನಿಗಿರಲಿಲ್ಲ ಅದರ ಕಲ್ಪನೆ ಕೂಡ
ಹೀಗೆ ಬೆಳೆದಿದ್ದೇವೆ ನಾವು.

ಯಾವುದೂ ಸಣ್ಣದಲ್ಲ : ೨೦೦೪