ಕೋಟಿ ಕೋಟಿ ಕನ್ನಡಿಗರ ಹಲವು ವರ್ಷಗಳ ಅಭೀಪ್ಸೆ ಮತ್ತು ಪ್ರಯತ್ನಗಳಿಂದಾಗಿ ಈ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕನ್ನಡ ವಿಶ್ವವಿದ್ಯಾಲಯ ಆರಂಭಗೊಂಡು ಇದೀಗ ೧೦ ವರ್ಷಗಳು ತುಂಬುತ್ತಿವೆ. ಈ ಸಂತೋಷದ, ಸಂಭ್ರಮದ ದಶಮಾನೋತ್ಸವ ಸಂದರ್ಭದಲ್ಲಿ ಜರುಗುತ್ತಿರುವ ೧೦ನೆಯ ನುಡಿಹಬ್ಬಕ್ಕೆ ಆಗಮಿಸಿರುವ ಘನತೆವೆತ್ತ ಸಮಕುಲಾಧಿಪತಿಗಳೂ ಶ್ರೇಷ್ಟ ಶಿಕ್ಷಣ ತಜ್ಞರೂ ಆದ ಸನ್ಮಾನ್ಯ ಡಾ. ಜಿ. ಪರಮೇಶ್ವರ ಅವರೇ, ನಾಡೋಜ ಗೌರವ ಪದವಿ ವಿಭೂಷಿತರಾಗಲಿರುವ ನಾಡಿನ ಪ್ರಥಮ ದರ್ಜೆಯ ಪ್ರತಿಭಾನ್ವಿತ ಕವಿ, ವಿಮರ್ಶಕ, ಪ್ರಾಧ್ಯಾಪಕ, ಚಿಂತಕ ಡಾ. ಜಿ.ಎಸ್. ಶಿವರುದ್ರಪ್ಪ ಅವರೇ, ರಾಷ್ಟ್ರೀಯ ಖ್ಯಾತಿಯ ಸರ್ವಶ್ರೇಷ್ಠ ಭರತನಾಟ್ಯ ಕಲಾವಿದ ಪದ್ಮಭೂಷಣ ಡಾ. ಕೆ.ವೆಂಕಟಲಕ್ಷ್ಮಮ್ಮ ಅವರೇ, ಮುಖ್ಯಅತಿಥಿಗಳಾದ ಜಾನಪದ ವಿದ್ವಾಂಸ ಶ್ರೀ ಮುದೇನೂರು ಸಂಗಣ್ಣ ಅವರೇ, ಗೌರವಾನ್ವಿತ ಅತಿಥಿಗಳೇ, ಶಾಸಕರೇ, ಸದಸ್ಯರೇ, ವಿಶ್ವವಿದ್ಯಾಲಯದ ಕಾರ್ಯಕಾರಿ ಮತ್ತು ಆಡಳಿತ ಮಂಡಳಿಯ ವಾದ್ಯ ಸದಸ್ಯರೇ, ಈ ವಿಶ್ವವಿದ್ಯಾಲಯದ ಪ್ರಗತಿಯಲ್ಲಿ ಕ್ರಿಯಾಪೂರ್ಣವಾದ ಪಾತ್ರವನ್ನು ವಹಿಸಿದ್ದ ಎಲ್ಲ ಮಹನೀಯರೇ, ಮಹಿಳೆಯರೇ, ಸುದ್ದಿ ಮಾಧ್ಯಮಗಳ ಮಿತ್ರರೆ, ತಮ್ಮೆಲ್ಲರನ್ನು ಈ ವಿಶಿಷ್ಟ ಸಮಾರಂಭಕ್ಕೆ ಗೌರವಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.

ತಮ್ಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಈ ಕನ್ನಡ ವಿಶ್ವವಿದ್ಯಾಲಯ ಭಾರತದಲ್ಲೇ ಒಂದು ಅನನ್ಯ ವಿಶ್ವವಿದ್ಯಾಲಯವಾಗಿದೆ. ತನ್ನ ಪರಿಸರದ ಮತ್ತು ಮೂಲದ ದೇಶೀಯ ಸಂಸ್ಕೃತಿಯನ್ನು ಎಲ್ಲ ನಿಟ್ಟುಗಳಲ್ಲಿ ಸಂರಕ್ಷಿಸುತ್ತಲೇ ಅಭಿವೃದ್ಧಿ ಪಡಿಸುತ್ತಲೇ ರಾಷ್ಟ್ರದ ಮತ್ತು ವಿಶ್ವದ ಎಲ್ಲ ಜ್ಞಾನ ವಿಜ್ಞಾನಗಳ ಬೆಳಕುಗಳನ್ನು ತನ್ನೊಳಗೆ ಆಹ್ವಾನಿಸುತ್ತ, ತನ್ನಲ್ಲಿ ಸಂಲಗ್ನಗೊಳಿಸುತ್ತ, ಅದರ ಫಲಿತಗಳನ್ನು ದಿಕ್ಕು ದಿಕ್ಕಿಗೆ ಎತ್ತಿಹಿಡಿಯುವ ಮಹಾನ್ ಕಾಯಕದೊಡನೆ ಈ ವಿಶ್ವವಿದ್ಯಾಲಯ ಆರಂಭವಾಗಿದೆ. ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯನ್ನು ಕನ್ನಡ ಪ್ರಜ್ಞೆಯನ್ನಾಗಿಸಿ ಕನ್ನಡ ಭಾಷೆಯ ಮೂಲಕ ಕನ್ನಡಿಗರಿಗೆ ದಕ್ಕಿಸಿಕೊಡುವ ವಿಶಿಷ್ಟ ಉನ್ನತ ಧ್ಯೇಯದೊಡನೆ ಆರಂಭವಾದ ಈ ವಿಶ್ವವಿದ್ಯಾಲಯ ತನ್ನ ಈ ಗುರುತರ ಹೊಣೆಯನ್ನು ಧಾರಣಮಾಡಿಕೊಂಡು ಈ ೧೦ ವರ್ಷಗಳ ಅವಧಿಯನ್ನು ಸಾರ್ಥಕವಾಗಿ ಕ್ರಮಿಸಿದೆ ಎಂದು ತಿಳಿಸಲು ಸಂತೋಷಸುತ್ತೇನೆ. ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡುವ ಮತ್ತು ಕನ್ನಡ ವಿಶ್ವವಿದ್ಯಾಲಯ ನೋಡಿದಲ್ಲದೆ ಸಮಗ್ರ ಕರ್ನಾಟಕದ ವಿಶಿಷ್ಟ ದರ್ಶನ ಪರಿಪೂರ್ಣವಾಗದು ಎಂಬಂತೆ ಈ ಮಹಾನ್ ಸಂಸ್ಥೆಯನ್ನು ರೂಪುಗೊಳಿಸುವ ಅರ್ಥಪೂರ್ಣ ದೀಕ್ಷೆಯನ್ನು ನಾವು ವಹಿಸಿದ್ದೇವೆ.

ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾಭಿವೃದ್ಧಿ, ಕನ್ನಡ ಭಾಷೆ ಮತ್ತು ಸಾಹಿತ್ಯ, ದ್ರಾವಿಡಸಂಸ್ಕೃತಿ ಅಧ್ಯಯನ, ಮಹಿಳಾ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಭಾಷಾಂತರ, ಜಾನಪದ, ಬುಡಕಟ್ಟು, ಶಾಸನಶಾಸ್ತ್ರ, ಹಸ್ತಪ್ರತಿ, ಇತಿಹಾಸ, ಪುರಾತತ್ವ ವಿಭಾಗಗಳು ಅಸ್ತಿತ್ವದಲ್ಲಿದ್ದು, ತಮ್ಮ ತಮ್ಮ ವಿಷಯಗಳಲ್ಲಿ ವಿಶಿಷ್ಟವೂ ನವೀನವೂ ಆದ ಸಂಶೋಧನೆಗಳನ್ನು ಕೈಗೊಂಡಿವೆ.

ಮಾತೆಂಬುದು ಜ್ಯೋರ್ತಿಲಿಂಗ ಎಂಬ ಧ್ಯೇಯ ವಾಕ್ಯವನ್ನು ಧಾರಣೆ ಮಾಡಿರುವ ನಮ್ಮ ವಿಶ್ವವಿದ್ಯಾಲಯ ಕನ್ನಡ ಭಾಷೆಯನ್ನು ಸಮಗ್ರ ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತೆ ಸಮರ್ಥಗೊಳಿಸುವ ಮತ್ತು ಕನ್ನಡ ಬದುಕು ವಿಶ್ವ ವಿಸ್ತೃತವಾಗುವಂತೆ ಮಾಡುವ ಗುರಿಗಳನ್ನು ಮುಟ್ಟುವ ದಾರಿಯಲ್ಲಿ ಆಶಾದಾಯಕವಾಗಿ ಕ್ರಮಿಸುತ್ತದೆ. ಇದರಿಂದಾಗಿ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಜಾನಪದ, ಬುಡಕಟ್ಟು ಮುಂತಾದ ನೆಲೆಗಳಲ್ಲಿ ಕಣ್ಣು ಕೋರೈಸುವ ಹೊಸ ಫಲಿತಗಳನ್ನು ಪಡೆಯುತ್ತ, ಸಮಗ್ರ ಕನ್ನಡದ ಸಮೃದ್ಧಿಯನ್ನು ಹೆಚ್ಚಿಸುತ್ತವೆ. ಮೇಲೆ ಉಲ್ಲೇಖಿಸಿದ ವಿಭಾಗಗಳಲ್ಲದೆ ವಿಶಿಷ್ಟ ಕ್ಷೇತ್ರದ ಅಧ್ಯಯನಕ್ಕೆ ಒತ್ತುಕೊಡುವ ಅಧ್ಯಯನ ಪೀಠಗಳನ್ನು ಪ್ರಾರಂಭಿಸುವ ಮೂಲಕ ಆ ಕ್ಷೇತ್ರದ ಸೂಕ್ಷ್ಮವಾದ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗಳಿಗೆ ಹೊಸ ದಾರಿಯನ್ನು ಕಲ್ಪಿಸಲಾಗಿದೆ. ಈ ದಿಸೆಯಲ್ಲಿ ಈಗಾಗಲೇ ಲೋಹಿಯಾ ಅಧ್ಯಯನ ಪೀಠ, ದಲಿತ ಅಧ್ಯಯನ ಪೀಠ, ಪುರಂದರದಾಸ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ. ಈ ವರ್ಷ ಶಂಬಾ ಜೋಷಿ ಅಧ್ಯಯನ ಪೀಠವನ್ನು ಆರಂಭಿಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಅಧ್ಯಯನ ಪೀಟ, ಕೆರೆ ನೀರಾವರಿ ಅಧ್ಯಯನ ಪೀಠಗಳು ಕೆಲವು ತಿಂಗಳುಗಳಲ್ಲಿ ಆರಂಭವಾಗಲಿದ್ದು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಜೊತೆಗೆ ಬದುಕಿಗೆ ನೇರವಾಗಿ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ದಾರಿ ಮಾಡಿಕೊಡುತ್ತಲಿವೆ. ಇವಲ್ಲದೆ ಸಹಕಾರಿ ಅಧ್ಯಯನ ಪೀಠ, ಪತ್ರಿಕೋಧ್ಯಮ ಅಧ್ಯಯನ ಪೀಠ, ಕರ್ನಾಟಕ ಚಲನಚಿತ್ರ ಅಭಿವೃದ್ಧಿ ಅಧ್ಯಯನ ಪೀಠ, ವಿಚಾರ ಸಾಹಿತ್ಯ ಅಧ್ಯಯನ ಪೀಠ, ಜೈನ ಸಂಸ್ಕೃತಿ ಅಧ್ಯಯನ ಪೀಠ, ಕನ್ನಡ ತೆಲುಗು ತೌಲನಿಕ ಅಧ್ಯಯನ ಪೀಠ, ಕನ್ನಡ ತಮಿಳು ತೌಲನಿಕ ಅಧ್ಯಯನ ಪೀಠ, ಕನ್ನಡ ಮಲಯಾಳಂ ತೌಲನಿಕ ಅಧ್ಯಯನ ಪೀಠ, ಕನ್ನಡ ಮರಾಠಿ ತೌಲನಿಕ ಅಧ್ಯಯನ ಪೀಠ ಹಾಗೂ ಕನ್ನಡ ಉರ್ದು ತೌಲನಿಕ ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗಾಂಧಿ, ನೆಹರು, ಬುದ್ಧ, ಅಂಬೇಡ್ಕರ್‌ಪೀಠಗಳನ್ನು ಸ್ಥಾಪಿಸುವ ಸಲುವಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಾಗಿದೆ.

ನಮ್ಮ ವಿಶ್ವವಿದ್ಯಾಲಯದಲ್ಲಿ ಇದುವರೆಗೆ ೩೬ ಜನ ಪಿ.ಎಚ್.ಡಿ. ಪದವಿಯನ್ನು ೪೪ ಜನ ಎಂ.ಫಿಲ್. ಪದವಿಯನ್ನು ಹಾಗೂ ೧೦ ಜನ ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ. ಇದುವರೆಗೆ ೨೦೦ ಜನ ಪಿ.ಎಚ್.ಡಿ. ಪದವಿಗಾಗಿ ನೋಂದಣಿ ಮಾಡಿಸಿದ್ದು, ಈ ದಿನ ೧೯ ಜನ ಪಿಎಚ್.ಡಿ. ಪದವಿಯನ್ನು ಮತ್ತು ೨ ಜನ ಡಿ.ಲಿಟ್ ಪದವಿಯನ್ನು ಪಡೆಯಲಿದ್ದಾರೆ.

ಇದುವರೆಗೆ ಸಂಶೋಧನೆಯನ್ನೇ ತನ್ನ ಪ್ರಥಮ ಮತ್ತು ಅಂತಿಮ ಗುರಿಯಾಗಿ ಅವಲಂಬಿಸಿದ್ದ ನಮ್ಮ ವಿಶ್ವವಿದ್ಯಾಲಯ ಇದೀಗ ಶೋಧನೆಯ ಜೊತೆಗೆ ಬೋಧನೆಯ ದಾರಿಯನ್ನು ಒಳಗೊಳ್ಳುತ್ತಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ.

ಇತರ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗದಿರುವ ಅಸಾಂಪ್ರದಾಯಕವಾದ, ಆದರೆ ಆಧುನಿಕ ಬದುಕಿಗೆ ಅಗತ್ಯವಾದ ಜ್ಞಾನವನ್ನು ಒದಗಿಸುವ ದೂರಶಿಕ್ಷಣ ವಿಧಾನದ ೭ ಡಿಪ್ಲೋಮಾ ಅಧ್ಯಯನಗಳನ್ನು ಈ ವರ್ಷ ಆರಂಭಿಸಲಾಗಿದೆ. ಕರ್ನಾಟಕ ಅಧ್ಯಯನ ಡಿಪ್ಲೋಮಾ, ಆಡಳಿತ ಕನ್ನಡ ಡಿಪ್ಲೋಮಾ, ಕ್ರಿಯಾತ್ಮಕ ಕನ್ನಡ ಡಿಪ್ಲೋಮಾ, ದಲಿತ ಅಧ್ಯಯನ ಡಿಪ್ಲೋಮಾ, ಮಹಿಳಾ ಅಧ್ಯಯನ ಡಿಪ್ಲೋಮಾ, ಜನಪದ ಕಲಾ ಡಿಪ್ಲೋಮಾ ಮತ್ತು ಪುರಾತತ್ವ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಅಧ್ಯಯನ ಡಿಪ್ಲೋಮಾ ತರಗತಿಗಳನ್ನು ಆರಂಭಿಸಲಾಗಿದ್ದು, ಸುಮಾರು ೮೦ ಜನ ವಿದ್ಯಾರ್ಥಿಗಳು ಮೊದಲನೆಯ ವರ್ಷವೇ ವಿವಿಧ ತರಗತಿಗಳಿಗೆ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಾರೆ. ಬೇರೆ ಬೇರೆ ಉದ್ಯೋಗಗಳಲ್ಲಿದ್ದೂ ಹೊಸ ಜ್ಞಾನ ದಿಗಂತಗಳನ್ನು ದರ್ಶಿಸಬೇಕೆನ್ನುವ, ಸ್ಪರ್ಶಿಸಬೇಕೆನ್ನುವ ಜ್ಞಾನ ದಾಯಿಗಳಿಗೆ ಇದು ಅತ್ಯಂತ ಉಪಯುಕ್ತವಾಗಿದ್ದು, ಪ್ರಥಮ ವರ್ಷದ ಪ್ರತಿಕ್ರಿಯೆ ತುಂಬ ಉತ್ಸಾಹದಾಯಕವಾಗಿದೆ. ತಮ್ಮ ತಮ್ಮ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತವಾಗಿದ್ದ ನಮ್ಮ ಬೋಧಕ ವರ್ಗಕ್ಕೆ ಈ ಅಧ್ಯಯನಗಳಿಗೆ ಪಾಠ ಹೇಳುವ, ಪಾಠ ಬರೆಯವ ಸದಾವಕಾಶ ದೊರೆತದ್ದರಿಂದ ಅವರ ಚಿಂತನೆ ಮತ್ತು ಪ್ರತಿಭೆಗಳ ವಿಸ್ತರಣಕ್ಕೆ ಹೊಸ ಆಯಾಮ ದೊರೆತಂತಾಗಿದೆ. ಈ ಡಿಪ್ಲೋಮಾ ತರಗತಿಗಳಲ್ಲದೆ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪದವಿ ತರಗತಿಗಳೂ ಸಹ ಈ ವರ್ಷ ಪ್ರಾರಂಭವಾಗಿವೆ. ನಮ್ಮ ಬಾದಾಮಿಯ ಕೇಂದ್ರದಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆಗಳಲ್ಲಿ ೫ ವರ್ಷದ ಪದವಿ ತರಗತಿಗಳನ್ನು ಆರಂಭ ಮಾಡಿರುವುದರಿಂದ ಈ ಕಲೆಗಳ ಅಭ್ಯಾಸಿಗಳಿಗೆ ಹಾಗೂ ಈ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಅರಸಬೇಕೆನ್ನುವವರಿಗೆ ಆಶಾದಾಯಕವಾದ ಮಾರ್ಗವೊಂದು ತೆರೆದಂತಾಗಿದೆ. ಆರಂಭದ ಈ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದಾಗಿ ಮುಂದಿನ ವರ್ಷ ಜಾನಪದ ಸಂಗೀತ, ಜನಪದ ಕರಕುಶಲ ಕಲೆಗಳು, ನಾಠಕ ಕಲೆ, ಸಂವಹನ ಅಧ್ಯಯನ, ಪತ್ರಿಕೋದ್ಯಮ ಡಿಪ್ಲೋಮಾಗಳನ್ನು ತೆರೆಯಲು ಆಲೋಚಿಸಲಾಗಿದೆ. ಹೊಸ ಕಾಲದ ಅಗತ್ಯಗಳಿಗೆ ಮತ್ತು ಅಭೀಪ್ಸೆಗಳಿಗೆ ತಕ್ಕಂತೆ ಪದವಿ ತರಗತಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಮತ್ತು ನವೀನ ಜ್ಞಾನ ಶಾಖೆಗಳನ್ನು ಅಂತರ್‌ಶಿಸ್ತೀಯವಾಗಿ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸುವುದು ವಿದ್ಯಾರ್ಥಿಗಳ ಮಾನಸಿಕ ಜ್ಞಾನ ವಿಕಾಸದ ದೃಷ್ಟಿಯಿಂದ ಅತ್ಯವಶ್ಯಕವೆಂಬುದನ್ನು ಮನಗಂಡು ಎಂ.ಎ., (ಅಂತರ್‌ಶಿಸ್ತೀಯ ಅಧ್ಯಯನ), ಎಂ.ಎ., ಪಿ.ಎಚ್.ಡಿ. ೪ ವರ್ಷಗಳ ಸಂಯೋಜಿತ ಅಧ್ಯಯನ ಇವುಗಳನ್ನು ಆರಂಭಿಸುವ ಮೂಲಕ ಹೊಸ ಶಿಸ್ತುಗಳ ಕಲಿಕೆಗೆ ಬಾಗಿಲು ತೆರೆಯಲು ಸಹ ಯೋಜಿಸಲಾಗಿದೆ. ಈ ವರ್ಷ ತೆರೆಯಲಾಗಿರುವ ಹೊಸ ಅಧ್ಯಯನ ವಿಭಾಗಗಳಿಗೆ ಹೊಸ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳದೆಯೇ ನಮ್ಮ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳ ವಿದ್ವತ್ತನ್ನೇ ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ನಾನು ಈ ಸಂದರ್ಭದಲ್ಲಿ ಸಂತೋಷದಿಂದ ತಿಳಿಸಲು ಇಚ್ಚಿಸುತ್ತೇನೆ. ಈಗಾಗಲೇ ವಿಶ್ವವಿದ್ಯಾಲಯದಿಂದ ಕನ್ನಡ ಅಧ್ಯಯನ, ಮಹಿಳಾ ಅಧ್ಯಯನ, ನಮ್ಮ ಕನ್ನಡ, ಚೆಲುವ ಕನ್ನಡ, ಪುಸ್ತಕ ಮಾಹಿತಿ, ವಿಜ್ಞಾನ ಸಂಗಾತಿ ಎಂಬ ಆರು ನಿಯತಕಾಲಿಕೆಗಳನ್ನು ಪ್ರಕಟಿಸಲಾಗುತ್ತಿದ್ದು, ಅವೆಲ್ಲ ಆಯಾ ಕ್ಷೇತ್ರದ ಓದುಗರಿಗೆ ಅತ್ಯಂತ ಪ್ರಿಯವಾಗಿವೆ. ಹಾಗೆಯೇ ವಿಶ್ವವಿದ್ಯಾಲಯದಿಂದ ಶೋಧಿತವಾಗುವ ಹೊಸ ಹೊಸ ಜ್ಞಾನದ ಬೆಳಕಿಂಡಿಗಳಾಗಿಯೂ ಇವು ಕಾರ್ಯನಿರ್ವಹಿಸುತ್ತಿವೆ. ಇವಲ್ಲದೆ ಮೊನ್ನೆಯ ದಶಮಾನೋತ್ಸವ ಸಂದರ್ಭದಲ್ಲಿ ಕರ್ನಾಟಕ ಅಭಿವೃದ್ಧಿ ಅಧ್ಯಯನ, ದ್ರಾವಿಡ ಅಧ್ಯಯನ ಮತ್ತು ಜನಪದ ಕರ್ನಾಟಕ ಎಂಬ ನಿಯತಕಾಲಿಕೆಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಇವು ಆಯಾ ಹೊಸ ಕ್ಷೇತ್ರದ ಸಂಶೋಧಕರ ವಿಶಿಷ್ಟ ಬಗೆಯ ಹೊಸ ಬರಹಗಳನ್ನು ಪ್ರಕಟಿಸುವ ಮೂಲಕ ಕನ್ನಡ ಜ್ಞಾನ ಬಹುಮುಖವಾಗಿ ಅರಳಲು ಸಾಧನವಾಗಿವೆ. ಮುಂದಿನ ವರ್ಷಗಳಲ್ಲಿ ಬುಡಕಟ್ಟು ಕರ್ನಾಟಕ, ಕಲಾ ಕರ್ನಾಟಕ, ನಿಯತಕಾಲಿಕೆಗಳನ್ನು ಪ್ರಕಟಿಸಲು ಯೋಚಿಸಲಾಗುತ್ತಿದೆ. ಇದೇ ವರ್ಷ ಪಿ.ಯು.ಸಿ. ತರಗತಿಯಿಂದ ಹಿಡಿದು ಸ್ನಾತಕೋತ್ತರ ತರಗತಿವರೆಗೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಕಲಿಯಲು ಸಾಧ್ಯವಾಗುವಂತೆ ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕಗಳಲ್ಲಿ ಪೂರಕ ಪಠ್ಯಗಳನ್ನು ಪರಿಣಿತರಿಂದ ಬರೆಯಿಸಿ ಪ್ರಕಟಿಸಲು ಪುರಾತತ್ವ ಸಂಸ್ಕೃತಿ ಹಾಗೂ ಪಠ್ಯಪುಸ್ತಕ ವಿಭಾಗವನ್ನು ಮತ್ತು ವಿಜ್ಞಾನ ಲೋಕದ ಅಮಿತ ಸಾಧನೆಗಳನ್ನು ಸಾದರ ಪಡಿಸುವ ವಿಜ್ಞಾನ ಇತಿಹಾಸಕ್ಕೆ ಸಂಬಂಧಿಸಿದ ವಿಜ್ಞಾನ ಇತಿಹಾಸ ವಿಭಾಗವನ್ನು ಆರಂಭಿಸಲಾಗುತ್ತಿದೆ.

ನಮ್ಮ ವಿಶ್ವವಿದ್ಯಾಲಯದ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದಾದ ಪ್ರಸಾರಾಂಗ ಇದುವರೆಗೆ ಬಗೆ ಬಗೆಯ ಜ್ಞಾನ ಕ್ಷೇತ್ರಗಳ ಅರಿವನ್ನು ಸಂಚಯಿಸುವ, ಪ್ರಸಾರ ಮಾಡುವ ಸುಮಾರು ೬೦೦ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಪ್ರಕಟಣಾ ಇತಿಹಾಸದಲ್ಲಿ ಒಂದು ಹೆದ್ದಾರಿಯನ್ನೇ ತೆರೆದಿದೆ ಎಂಬುದು ಅಭಿಮಾನದ ಸಂಗತಿಯಾಗಿದೆ. ವಿವಿಧ ಜ್ಞಾನ ಶಾಖೆಗಳ ಬಗೆಗಿನ ಪುಸ್ತಕಗಳನ್ನು ಪ್ರಕಟಿಸುವುದಲ್ಲದೆ, ಈ ವಿಶ್ವದಲ್ಲಿ ಸಹಸ್ರಾರು ವರ್ಷಗಳಿಂದ ಮಹಾ ಚಿಂತಕರು, ಜಿಜ್ಞಾಸಕರುಗಳು, ವಿಚಾರವಾದಿಗಳು ನಡೆಸಿದ ಚಿಂತನೆಯ ಫಲವನ್ನು ಶತಮಾನಗಳ ಚಿಂತನೆ ಎಂಬ ಮಾಲೆಯಡಿ ಪ್ರಕಟಿಸಲು, ಕನ್ನಡ ಸಾಹಿತ್ಯ ಚರಿತ್ರೆ, ಇತಿಹಾಸವನ್ನು ೩ ಸಂಪುಟಗಳಲ್ಲಿ ಪ್ರಕಟಿಸಲು ಮತ್ತು ಪರಾಮರ್ಶನ ಗ್ರಂಥ ಮಾಲೆಯ ಮೂಲಕ ಸುಮಾರು ೫೦ ಪುಸ್ತಕಗಳನ್ನು ಪ್ರಕಟಿಸಲು, ಕಾನೂನು ಇಲಾಖೆಯ ನೆರವಿನೊಡನೆ ಸಾಮಾನ್ಯರಿಗೆ ಕಾನೂನು ಎಂಬ ಮಾಲೆಯಲ್ಲಿ ೫೦ ಪುಸ್ತಕಗಳನ್ನು, ಮಹಿಳಾ ಕಲ್ಯಾಣ ಇಲಾಖೆಯ ನೆರವಿನೊಡನೆ ಮಹಿಳಾ ಲೋಕದ ಸಾಧನೆ, ಚಿಂತನೆ ಸಮಸ್ಯೆಗಳನ್ನು ಕುರಿತ ೫೦ ಪುಸ್ತಕಗಳನ್ನು ಪ್ರಕಟಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕನ್ನಡ ಪಿಎಚ್.ಡಿ. ವಿವರಣ ಕೋಶ, ಕರ್ನಾಟಕ ಪಿಎಚ್.ಡಿ. ವಿವರಣ ಕೋಶ, ಜಾನಪದ ಸಮಗ್ರ ಸೂಚಿ, ಜಾನಪದ ಅಧ್ಯಯನ ಇತಿಹಾಸ ಹಾಗೂ ಕನ್ನಡದ ಪ್ರಾಚೀನ ಸಂಸ್ಕೃತಿಯ ವಿವಿಧ ನೆಲೆಗಳನ್ನು ಬಿಂಬಿಸುವ ಶಾಶನ ಸಂಪುಟಗಳನ್ನು, ನಿಘಂಟುಗಳನ್ನು ಪ್ರಕಟಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಜನ ಸಾಮಾನ್ಯರಿಗೆ ತಲುಪುವ ಮಂಟಪ ಮಾಲೆಯ ವಿಶೇಷ ಉಪನ್ಯಾಸಗಳನ್ನೂ ನಡೆಸಲಾಗುತ್ತಿದೆ. ಇದೇ ದಶಮಾನೋತ್ಸವದ ಸಂದರ್ಭದಲ್ಲಿ ಅತ್ಯಂತ ಮಹತ್ತರವಾದ ೨೦ ಹೊಸ ಪುಸ್ತಕಗಳನ್ನು ಮತ್ತು ನಮ್ಮ ಎಲ್ಲ ನಿಯತಕಾಲಿಕೆಗಳ ದಶಮಾನೋತ್ಸವ ವಿಶೇಷ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಗಿದೆ. ಕರ್ನಾಟಕದ ಸಮಗ್ರಮುಖ ಚಿಂತನೆ ಮತ್ತು ಸಾಧನೆಗಳನ್ನು ಬಿಂಬಿಸುವ ಕರ್ನಾಟಕ ಸ್ಟಡೀಸ್ ಎಂಬ ಅರ್ಧವಾರ್ಷಿಕ ಪತ್ರಿಕೆಯನ್ನು ಇಂಗ್ಲೀಷ್‌ನಲ್ಲಿ ಪ್ರಕಟಿಸಲು ಎಲ್ಲ ಸಿದ್ಧತೆಗಳು ಮುಗಿದಿದೆ. ಇವಲ್ಲದೆ ವಿಶ್ವವಿದ್ಯಾಲಯ ಪ್ರಕಟಿಸಿರುವ ಕರ್ನಾಟಕ ಚರಿತ್ರೆಯ ೭ ಸಂಪುಟಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸುವ ಹಾಗೂ ಈ ಕನ್ನಡ ಸಂಪುಟಗಳ ವಿದ್ಯಾರ್ಥಿ ಆವೃತ್ತಿಗಳನ್ನು ಹೊರತರುವ ಸಂಕಲ್ಪವನ್ನು ಸಹ ನಾವು ಇಟ್ಟು ಕೊಂಡಿದ್ದೇವೆ. ಕರ್ನಾಟಕದ ಸಮಗ್ರ ಮುಖಗಳ ಸಾಧನಾ ಸೌಂದರ್ಯವನ್ನು ಚಿತ್ರಗಳ ಮೂಲಕ ಪರಿಚಯಿಸುವ ಸಚಿತ್ರ ಕರ್ನಾಟಕ ಸಂಪುಟವನ್ನು ಸಿದ್ಧಪಡಿಸಲಾಗುತ್ತಿದೆ. ಒಟ್ಟಿನಲ್ಲಿ ಕರ್ನಾಟಕದ ಹಾಗೂ ವಿಶ್ವದ ಸಮಗ್ರ ಜ್ಞಾನ ಸಂಪತ್ತನ್ನು ಕನ್ನಡದ ಮೂಲಕ ಕನ್ನಡಿಗರಿಗೆ ದೊರಕಿಸುವ ಮಹದಾಶಯ ನಮ್ಮದು. ಇದನ್ನು ಸಾಕಾರಗೊಳಿಸಲು ಸರ್ಕಾರದ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಂಸತ್ ಸದಸ್ಯರ, ಶಾಸಕರ ಮತ್ತು ಉದಾರಿಗಳಾದ ಸಂಸ್ಕೃತಿ ಶ್ರೀಮಂತರ ಸಹಾಯವನ್ನು ವಿಶ್ವವಿದ್ಯಾಲಯ ಭರವಸೆಯ ಕಣ್ಣುಗಳಿಂದ ನಿರೀಕ್ಷಿಸುತ್ತಿದೆ.

ಮೇಲ್ಕಂಡ ಯೋಜನೆಗಳಲ್ಲದೆ ಸಮಗ್ರ ಕರ್ನಾಟಕವನ್ನು ಅದರೆಲ್ಲ ಪ್ರಕಾಶಮಾನ ಮುಖಗಳೊಂದಿಗೆ ಬಿಂಬಿಸುವ ವಿಸ್ತಾರನೆಲೆಯ ‘ಕನ್ನಡ ಲೋಕ’ ಎಂಬ ಬೃಹತ್ ವಸ್ತುಸಂಗ್ರಹಾಲಯವನ್ನು ಕನಿಷ್ಟ ೫೦ ಎಕರೆಗಳ ಇಲ್ಲಿನ ಆವರಣದಲ್ಲಿ ಸ್ಥಾಪಿಸಲು ಯೋಜಿಸಲಾಗಿದ್ದು, ವಿವಿಧ ಸಂಪನ್ಮೂಲ ಕ್ಷೇತ್ರಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಸರ್ಕಾರದ ಮತ್ತು ಉದಾರಿ ಶ್ರೀಮಂತರ ನೆರವು ಪಡೆದು, ಇದನ್ನೊಂದು ಭಾರತದಲ್ಲೇ ಮೊತ್ತ ಮೊದಲ ಮತ್ತು ಬಹುಮುಖಿ ವಿನ್ಯಾಸದ ಮಾದರಿ ವಸ್ತು ಸಂಗ್ರಹಾಲಯವಾಗಿಸುತ್ತೇವೆ ಎಂದು ಭರವಸೆ ನಮಗಿದೆ.

೭೦೦ ಎಕರೆಗಳ ಭೂವಿಸ್ತಾರವನ್ನು ಹೊಂದಿರುವ ಈ ವಿಶ್ವವಿದ್ಯಾಲಯದ ಪರಿಸರದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಸ್ಯಗಳನ್ನು ನೆಟ್ಟು ಇಡೀ ವಾತಾವರಣಕ್ಕೆ ಹಸಿರು ಶ್ರೀಮಂತಿಕೆಯ ಶೋಭೆಯನ್ನು ತರಲಾಗುತ್ತಿದೆ. ಈ ವರ್ಷವೇ ಇಲಾಖೆಯ ಮತ್ತು ತೋಟಗಾರಿಕೆ ಇಲಾಖೆಯ ನೆರವಿನೊಡನೆ ೧೦ ಸಾವಿರ ಗಿಡಗಳನ್ನು ನೆಡೆಸಲಾಗಿದೆ. ದಶಮಾನೋತ್ಸವ ವನ, ವಿಜಯ ವನ, ಕುಮಾರ ರಾಮ ಉದ್ಯಾನ, ಚರಕ ವನಗಳನ್ನು ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾಗಿದ್ದ ವನಗಳಿಗೆ ಪಂಪವನ, ನೃಪತುಂಗ ವನ, ಹಕ್ಕಬುಕ್ಕ ವನ, ಅಕ್ಷರೋದ್ಯಾನ. ಕದಂಬ ವನ, ಹೊಯ್ಸಳ ವನ, ಚಲುಕ್ಯ ವನ, ಕೃಷ್ಣರಾಜ ವನ, ಮಾನಸ ವನ ಮುಂತಾಗಿ ಕರ್ನಾಟಕದ ಸಂಸ್ಕೃತಿಯನ್ನು ವಿಸ್ತರಿಸಿದ ರಾಜ ಮನೆತನಗಳ ಹೆಸರುಗಳನ್ನು ಇಡುವ ಮೂಲಕ ಇತಿಹಾಸ ಈ ನೆಲದಲ್ಲಿ ಮತ್ತೊಮ್ಮೆ ಕಣ್ತುಂಬುವಂತೆ ಮಾಡಲಾಗಿದೆ. ಇಲ್ಲಿನ ಬೋಧನೆ ಮತ್ತು ಶೋಧನೆ ವಿಭಾಗಗಳ ವಿಸ್ತರಣೆಗಾಗಿ ಹೊಸ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ‘ಜಕ್ಕಣ್ಣ ಮಂಟಪ’ವನ್ನು ನವೀಕರಿಸಿ ವಿಶಿಷ್ಟ ಕಟ್ಟಡವನ್ನಾಗಿ ರೂಪಿಸಲಾಗಿದೆ. ಅಭಿರುಚಿ ಉಪಹಾರ ಮಂದಿರವನ್ನು ಸ್ಥಾಪಿಸಲಾಗಿದೆ. ದಶಮಾನೋತ್ಸವದ ನೆನಪಿಗಾಗಿ ಸುಮಾರು ೧.೨೫ ಕೋಟಿ ರೂಪಾಯಿ ಅಂದಾಜಿನಲ್ಲಿ ‘ದಶಮಾನೋತ್ಸವ ಭವನ’ದ ನಿರ್ಮಾಣವನ್ನು ಆರಂಭಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಮಂಜೂರು ಮಾಡಿರುವ ವಿದ್ಯಾರ್ಥಿ ನಿಲಯ ಕಟ್ಟಡ ಇನ್ನೇನು ತಲೆಯೆತ್ತಲಿದೆ. ಸರ್ವಜ್ಞ ಹೆಸರಿನ ಗ್ರಂಥಾಲಯ ಕಟ್ಟಡ ಶೀಘ್ರಗತಿಯಲ್ಲಿ ನಿರ್ಮಾಣವಾಗುತ್ತಿದೆ. ಬಳ್ಳಾರಿ ಜಿಲ್ಲಾ ಪಂಚಾಯತ್, ವೈದ್ಯಕೀಯ ಕೇಂದ್ರವೊಂದನ್ನು ನಿರ್ಮಿಸುವ ಭರವಸೆ ನೀಡಿದೆ. ಬೋಧಕರ ಮತ್ತು ಬೋಧಕೇತರರ ನಿವಾಸಗಳಿಗೆ ಅನುದಾನ ನೀಡಲು ಹೈದ್ರಾಬಾದ್ ಕರ್ನಾಟ ಪ್ರದೇಶ ಅಭಿವೃದ್ಧಿ ಮಂಡಲಿ, ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಈ ಆವರಣಕ್ಕೆ ವಿದ್ಯುತ್ ದೀಪಗಳ ಸೌಕರ್ಯ ಕಲ್ಪಿಸಲು, ರಸ್ತೆಯನ್ನು ಡಾಂಬರೀಕರಣ ಮಾಡಲು ನಮ್ಮ ಸಂಸತ್ ಸದಸ್ಯರು ಮುಂದೆ ಬಂದಿದ್ದಾರೆ. ಇಲ್ಲಿನ ಕಟ್ಟಡಗಳ ನಿರ್ಮಾಣಕ್ಕೆ, ಕುಡಿಯುವ ನೀರಿನ ಯೋಜನೆಗೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೆರವಾಗಲು ನಮ್ಮ ಮಾನ್ಯ ಸಂಸತ್ ಸದಸ್ಯರುಗಳನ್ನು ವಿನಂತಿಸಿಕೊಳ್ಳಲಾಗಿದೆ.  ಸನ್ಮಾನ್ಯ ಕೆ.ಸಿ. ಕೊಂಡಯ್ಯ ಅವರು, ಸನ್ಮಾನ್ಯ ಶ್ರೀ ಹೆಚ್.ಜಿ. ರಾಮುಲು ಅವರು ಅನುದಾನದ ಭರವಸೆ ನೀಡಿದ್ದಾರೆ. ಮಾನ್ಯ ಶ್ರೀ ಲಕ್ಷ್ಮಿಸಾಗರ್‌ಅವರು ದಶಮಾನೋತ್ಸವ ನೆನಪಿನ ಕಟ್ಟಡಕ್ಕಾಗಿ ೧೫ ಲಕ್ಷ ರೂಪಾಯಿಗಳನ್ನು ಮತ್ತು ಯೋಜನಾ ಸಚಿವರಾದ ಶ್ರೀಮತಿ ಸುಮಾ ವಸಂತ್ ಅವರು ೪೦ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಹಾಸನ ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಎಚ್.ಕೆ. ಜವರೇಗೌಡ ಅವರು ತಮ್ಮ ಜಿಲ್ಲೆಯ ಗ್ರಂಥಾಲಯಗಳಿಗೆ ನಮ್ಮ ವಿಶ್ವವಿದ್ಯಾಲಯ ಪ್ರಕಟಿಸಿರುವ ೨.೫ ಲಕ್ಷ ರೂಪಾಯಿ ಬೆಲೆಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಜೈನ ಸಂಸ್ಕೃತಿ ಕೇಂದ್ರದ ಸ್ಥಾಪನೆಗಾಗಿ ಶ್ರೀ ಅಭೇರಾಜ ಬಲ್ಡೋಟಾ ಅವರು ೧೦ ಲಕ್ಷ ರೂಪಾಯಿಗಳನ್ನು, ಹೊಂಬುಜ ಮತ್ತು ಶ್ರವಣಬೆಳಗೊಳ ಶ್ರೀಮಠದ ಸ್ವಾಮೀಜಿಗಳು ತಲಾ ೫ ಲಕ್ಷ ರೂಪಾಯಿಗಳನ್ನು ಅನುದಾನವಾಗಿ ನೀಡಲು ಒಪ್ಪಿದ್ದಾರೆ. ಭಗವಾನ್ ಮಹಾವೀರರ ೨೬೦೦ ನೇ ಜಯಂತೋತ್ಸವದ ಕೇಂದ್ರ ಸಮಿತಿ ಈ ಕಟ್ಟಡಕ್ಕೆ ಸಹಾಯ ನೀಡುವ ಭರವಸೆ ನೀಡಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಕಳೆದ ೩ ವರ್ಷಗಳಲ್ಲಿ ೯೦ ಲಕ್ಷ ರೂಪಾಯಿಗಳ ಸಹಾಯ ಧನ ನೀಡಿದ್ದು, ಮುಂದಿನ ವರ್ಷಗಳಲ್ಲಿ ಅದು ಹೆಚ್ಚುವ ಭರವಸೆಯಿದೆ. ಸಂಸ್ಕೃತಿಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಎಂ.ಕೃಷ್ಣ ಅವರು ಹೆಚ್ಚುವರಿಯಾಗಿ ೨೦ ಲಕ್ಷ ರೂಪಾಯಿಗಳ ಅನುದಾನವನ್ನು ವಿಶ್ವವಿದ್ಯಾಲಯಕ್ಕೆ ಈ ವರ್ಷ ನೀಡಿದ್ದಾರೆ. ಮುಂಬವರು ವರ್ಷಗಳಲ್ಲಿ ತಲಾ ೧ ಕೋಟಿ ರೂಪಾಯಿಗಳ ಅಭಿವೃದ್ಧಿ ನಿಧಿ, ಸಂಶೋಧನೆ ನಿಧಿ ಮತ್ತು ಪ್ರಕಟಣಾ ನಿಧಿಗಳನ್ನು ನಮ್ಮ ಶಿಕ್ಷಣ ಮತ್ತು ಸಂಸ್ಕೃತಿ ಪ್ರಿಯರ ಸಹಕಾರದೊಂದಿಗೆ ಸ್ಥಾಪಿಸುವ ಯೋಜನೆಯನ್ನು ವಿಶ್ವವಿದ್ಯಾಲಯ ಹೊಂದಿದೆ.

ಕರ್ನಾಟಕ ಸಮಗ್ರಾಭಿವೃದ್ಧಿಗೆ ಸಂಬಂಧಪಟ್ಟ ಸಾಹಿತ್ಯ ಮತ್ತು ಸಾಹಿತ್ಯೇತರ ವಿಷಯಗಳಲ್ಲಿ ಆಸಕ್ತಿ, ಜಿಜ್ಞಾಸುತನವನ್ನು, ವಿಚಾರಶೀಲತೆಯನ್ನು ಬೆಳೆಸಲು ವಿಚಾರ ಸಂಕಿರಣ, ಕಮ್ಮಟ, ವಿಶೇಷೋಪನ್ಯಾಸ ಮತ್ತು ಬಗೆ ಬಗೆಯ ಸಮಾವೇಶಗಳನ್ನೂ ಸಹ ವಿಶ್ವವಿದ್ಯಾಲಯ ನಡೆಸುತ್ತಿದೆ. ಈ ವರ್ಷ ಮಹಿಳಾ ಸಬಲೀಕರಣ, ಸಮಾವೇಶ, ದೇಶೀ ಸಮ್ಮೇಳನ, ಸಂಶೋಧನಾ ಸಮಾವೇಶ, ದಾಸ ಸಂಸ್ಕೃತಿ ಸಮಾವೇಶ ಮುಂತಾದ ರಾಜ್ಯ ಮಟ್ಟದ ಸಮಾವೇಶಗಳನ್ನು ಸ್ಥಳೀಯರ ನೆರವಿನೊಡನೆ ಹಮ್ಮಿಕೊಂಡು ನಮ್ಮ ಈ ವಿಶ್ವವಿದ್ಯಾಲಯ ನಾಡಿನ ಜನ ಜೀವನದುದ್ದಕ್ಕೂ ಹಬ್ಬಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದೆ.

ನಮ್ಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಹಲವು ಲೇಖಕರು ಇದುವರೆಗೆ ಹತ್ತಾರು ವಿಶಿಷ್ಟ ಪ್ರಶಸ್ತಿಗಳನ್ನು ತಮ್ಮ ಕೃತಿಗಳಿಗಾಗಿ ಪಡೆದಿರುವುದು ಮತ್ತು ಈ ವರ್ಷ ಶ್ರೀಮತಿ ಎಚ್. ನಾಗವೇಣಿ ಅವರು ಸಂ.ಶೀ. ಭೂಸನೂರ ಮಠ ಪ್ರಶಸ್ತಿಯನ್ನು, ಡಾ. ವಿರೂಪಾಕ್ಷ ಪೂಜಾರಹಳ್ಳಿ ಅವರು ವೀರನಾಯಕ ಪ್ರಶಸ್ತಿಯನ್ನು, ಡಾ. ವಿರೂಪಾಕ್ಷ ನುಗಡೋಣಿ ಅವರು ಉಗ್ರಾಣ ಪ್ರಶಸ್ತಿಯನ್ನು ಪಡೆದಿರುವುದು ನಮ್ಮ ಹೆಮ್ಮೆಗೆ ಕೋಡು ಮೂಡಿಸಿದೆ. ಡಾ. ರಹಮತ್ ತರೀಕೆರೆ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಮತ್ತು ಡಾ. ಎಸ್.ಸಿ. ಪಾಟೀಲ್ ಅವರು ಲಲಿತಕಲಾ ಅಕಾಡೆಮಿಗೆ ಸದಸ್ಯರಾಗಿ ಮತ್ತು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕನ್ನಡ ಪುಸ್ತಕ ಪ್ರಾಧಿಕರದ ಅಧ್ಯಕ್ಷರಾಗಿ ನೇಮಕಗೊಂಡು ನಮ್ಮ ವಿಶ್ವವಿದ್ಯಾಲಯಕ್ಕೆ ಹೆಸರು ತಂದಿದ್ದಾರೆ.

ವಿಶ್ವವಿದ್ಯಾಲಯದ ಇದುವರೆಗೆ ಪ್ರಗತಿಗೆ ನೈತಿಕವಾಗಿ, ಸಂಪತ್ತಿಕವಾಗಿ ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ನೆರವು ನೀಡಿದ ಔದಾರ್ಯ ನಿಧಿಗಳಾದ ಎಲ್ಲ ಮಹನೀಯರನ್ನು, ಇದರ ಅಭಿವೃದ್ಧಿಯ ಬಗ್ಗೆ ಆಶಾವಾದಿಗಳಾಗಿದ್ದು, ಸೃಜನಶೀಲ ಮತ್ತು ಕ್ರಿಯಾಶೀಲ ಸಲಹೆಗಳನ್ನು ನೀಡುತ್ತಿರುವ ಎಲ್ಲ ಹಿರಿಯರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನೆಯುತ್ತ ಅವರಿಗೆ ನೂರು ನೂರು ನಮನಗಳನ್ನು ಅರ್ಪಿಸುತ್ತಿದ್ದೇನೆ. ಹಾಗೆಯೇ ಕರ್ನಾಟಕ ಸರ್ಕಾರ ಕನ್ನಡ ನಾಡಿನ ಸಾಂಸ್ಕೃತಿಕ ಜೀವನಾಡಿಯಾಗಿರುವ ಈ ವಿಶ್ವವಿದ್ಯಾಲಯ ಮತ್ತಷ್ಟು ಉತ್ಕೃಷ್ಟವಾಗಲು ಪ್ರತಿವರ್ಷ ಕನಿಷ್ಟ ೬ ಕೋಟಿ ರೂಪಾಯಿಗಳ ಅನುದಾನವನ್ನು ನೀಡಬೇಕೆಂದು ಮತ್ತು ನಮ್ಮ ಶಿಕ್ಷಣ ತಜ್ಞರು ಹಾಗೂ ಆಡಳಿತ ದಕ್ಷರು ಆದ ಉನ್ನತ ಶಿಕ್ಷಣ ಸಚಿವರು ಇದನ್ನು ಪೂರೈಸಿ ಕೊಡಬೇಕೆಂದು ಭಿನ್ನವಿಸುತ್ತೇನೆ.

ಈ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ನಡೆದು ಬಂದಿರುವ ದಾರಿ ವಿಶಿಷ್ಟವಾದುದಾಗಿದೆ. ಆದರೆ, ನಾವು ಕ್ರಮಿಸಬೇಕಾದ ಹಾದಿ ಸಾಕಷ್ಟು ದೀರ್ಘವಾಗಿದೆ. ಮತ್ತು ಮುಟ್ಟಬೇಕಾದ ಸಾಧನೆಯ ಶಿಖರಗಳು ಇನ್ನೂ ನೂರಾರಿವೆ ಎಂಬುದನ್ನು ವಿನಯಪೂರ್ವಕವಾಗಿ ಭಿನ್ನವಿಸಿಕೊಳ್ಳುತ್ತೇನೆ. ಈ ವರ್ಷ ನಮ್ಮ ಕರೆಗೆ ಓಗೊಟ್ಟು ನಾಡಿನ ಶ್ರೇಷ್ಠ ಪ್ರಶಸ್ತಿಯಾದ ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ಬಂದಿರುವ ಕನ್ನಡದ ಹಿರಿಮೆಯ ಕವಿ, ಶ್ರೇಷ್ಠ ಚಿಂತಕ ಮತ್ತು ಪ್ರಬುದ್ಧ ಪ್ರಾಧ್ಯಾಪಕ, ನೂರಾರು ಲೇಖಕರನ್ನು, ವಿಚಾರವಂತರನ್ನು ತಮ್ಮ ಕಮ್ಮಟದಲ್ಲಿ ರೂಪಿಸಿದ ಆಚಾರ್ಯ ಶಿಲ್ಪಿ ಡಾ. ಜಿ.ಎಸ್. ಶಿವರುದ್ರಪ್ಪ ಅವರನ್ನು ಮತ್ತು ಸಮಾಜದ ಅತ್ಯಂತ ತಳವರ್ಗದಲ್ಲಿ ಹುಟ್ಟಿ ತಮ್ಮ ಅವಿರತ ಸಾಧನೆಯ ಮೂಲಕ ಭರತನಾಟ್ಯ ಕ್ಷೇತ್ರದ ಅನುಪಮ ಕಲಾವಿದೆ ಎನಿಸಿದ ಕನ್ನಡ ನಾಡಿಗೆ ಕೀರ್ತಿ ತಂದಿರುವ ಡಾ. ವೆಂಕಟಲಕ್ಷ್ಮಮ್ಮ ಅವರನ್ನು ಹಾಗೂ ಹಿರಿಯರ ಜಾನಪದ ತಜ್ಞ, ಸಂಸ್ಕೃತಿ ಚಿಂತಕ ಮಾನ್ಯ ಶ್ರೀ ಮುದೇನೂರು ಸಂಗಣ್ಣ ಅವರನ್ನು ವಿಶ್ವವಿದ್ಯಾಲಯದ ಪರವಾಗಿ ಕನ್ನಡ ನಾಡಿನ ಸಮಸ್ತ ಸಂಸ್ಕೃತಿ ಚಿಂತಕರ ಪರವಾಗಿ ಈ ವಿಶಿಷ್ಟ ಸಮಾರಂಭಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಪ್ರಗತಿಗೆ ಮೂಲ ಸೆಲೆಯಾಗಿರುವ ಸಮಸ್ತರನ್ನು ಮತ್ತು ಇಲ್ಲಿ ಉಪಸ್ಥಿತರಿರುವ ಸರ್ವರನ್ನು ವಿಶ್ವವಿದ್ಯಾಲಯದ ನನ್ನ ಎಲ್ಲ ಸಹೋದ್ಯೋಗಿಗಳ, ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಪರವಾಗಿ ಮತ್ತು ವೈಯಕ್ತಿಕವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

೨೮ ಡಿಸೆಂಬರ್ ೨೦೦೧