ಕೋಟಿ ಕೋಟಿ ಕನ್ನಡಿಗರ ಹಲವು ವರ್ಷಗಳ ಅಭೀಪ್ಸೆ ಮತ್ತು ಪ್ರಯತ್ನಗಳಿಂದಾಗಿ ಈ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕನ್ನಡ ವಿಶ್ವವಿದ್ಯಾಲಯ ಆರಂಭಗೊಂಡು ಇದೀಗ ೧೧ ವರ್ಷಗಳು ತುಂಬುತ್ತಿವೆ. ಈ ಸಂತೋಷದ, ಸಂಭ್ರಮದ ಸಂದರ್ಭದಲ್ಲಿ ಜರುಗುತ್ತಿರುವ ೧೧ನೆಯ ನುಡಿಹಬ್ಬಕ್ಕೆ ಆಗಮಿಸಿರುವ ಘನತೆವೆತ್ತ ಕರ್ನಾಟಕದ ರಾಜ್ಯಪಾಲರೂ ಕುಲಾಧಿಪತಿಗಳೂ, ಆಡಳಿತದ ನಾನಾ ಶ್ರೇಣಿಗಳಲ್ಲಿ ಅಪುರೂಪದ ದಕ್ಷತೆಯನ್ನು ಮೆರೆದು ಸರ್ವರ ಗೌರವಕ್ಕೆ ಪಾತ್ರರಾದ ಆದರಣೀಯ ಶ್ರೀ ಟಿ.ಎನ್. ಚರ್ತುವೇದಿ ಅವರೇ, ವಿಶ್ವ ವಿದ್ಯಾಲಯಗಳ ಸಮ ಕುಲಾಧಿಪತಿಗಳೂ ಶ್ರೇಷ್ಟ ಶಿಕ್ಷಣ ತಜ್ಞರೂ ಮತ್ತು ದಕ್ಷ ಆಡಳಿತಗಾರರು ಆದ ಸನ್ಮಾನ್ಯ ಡಾ. ಜಿ. ಪರಮೇಶ್ವರ ಅವರೇ, ನಮ್ಮ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿಭೂಷಿತರಾಗಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ, ಕರ್ನಾಟಕದ ಸುಪುತ್ರ ಡಾ. ಸಿ.ಎನ್.ಆರ್‌. ರಾವ್‌ ಅವರೇ, ಕನ್ನಡ ಕಂಡ ಅಪುರೂಪದ ಭಾವಶೀಲ ಮತ್ತು ಚಿಂತನಶೀಲ ಕವಿವರ್ಯರಾದ, ಪಂಪ ಪ್ರಶಸ್ತಿ ವಿಜೇತ ಶ್ರೀ ಚೆನ್ನವೀರ ಕಣವಿ ಅವರೇ ಮತ್ತು ಕರ್ನಾಟಕ ಆಡಳಿತದ ನಾನಾ ಕ್ಷೇತ್ರಗಳಲ್ಲಿ ಅರ್ಪಣಾ ಮನೋಧರ್ಮದ ಜನಸಮ್ಮುಖಿ ಆಡಳಿತವನ್ನು ನಡೆಸಿ ಖ್ಯಾತರಾದ ಹಾಗೂ ಕರ್ನಾಟಕ ಜಾನಪದ ಜಗತ್ತಿನಲ್ಲಿ ಸುಮಾರು ನಾಲ್ಕು ದಶಕಗಳ ಅವಿಶ್ರಾಂತವಾದ ಅನನ್ಯವಾದ ಸೇವೆಯನ್ನು ಸಲ್ಲಿಸಿ ಏಷಿಯಾದಲ್ಲಿ ಅತ್ಯಂತ ವಿಶಿಷ್ಟವಾದ ಜಾನಪದ ಲೋಕ ಎಂಬ ಅನನ್ಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿ ಕರ್ನಾಟಕಕ್ಕೆ ಕೀರ್ತಿ ತಂದಿರುವ ಸನ್ಮಾನ್ಯ ಶ್ರೀ ಎಚ್.ಎಲ್.ನಾಗೇಗೌಡ ಅವರೇ, ಗೌರವಾನ್ವಿತ ಅತಿಥಿ ಬಂಧುಗಳೇ, ಶಾಸಕರೇ, ನಮ್ಮ ವಿಶ್ವವಿದ್ಯಾಲಯದ ಕಾರ್ಯಕಾರಿ ಮತ್ತು ಆಡಳಿತ ಮಂಡಳಿಯ ಸನ್ಮಾನ್ಯ ಸದಸ್ಯರೇ, ಈ ಅನನ್ಯ ವಿಶ್ವವಿದ್ಯಾಲಯದ ಕ್ಷಿಪ್ರ ಪ್ರಗತಿಯಲ್ಲಿ ಕ್ರಿಯಾಪೂರ್ಣವಾದ ಪಾತ್ರವನ್ನು ವಹಿಸಿದ್ದ ಎಲ್ಲ ಮಹನೀಯರೇ, ಮಹಿಳೆಯರೇ, ಸರ್ವ ಸುದ್ದಿ ಮಾಧ್ಯಮಗಳ ಆತ್ಮೀಯ ಗೆಳೆಯರೇ ಹಾಗೂ ಈ ವಾರ್ಷಿಕ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಗಳಾಗಿ ಪಿಎಚ್.ಡಿ., ಎಂ.ಫಿಲ್, ಮತ್ತು ಡಿ.ಲಿಟ್‌. ಪದವಿಗಳನ್ನು ಪಡೆಯಲಿರುವ ಎಲ್ಲ ವಿದ್ವಾಂಸರೆ, ತಮ್ಮೆಲ್ಲರನ್ನೂ ಈ ವಿಶಿಷ್ಟ ಸಮಾರಂಭಕ್ಕೆ ಗೌರವಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.

ತಮ್ಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಈ ಕನ್ನಡ ವಿಶ್ವವಿದ್ಯಾಲಯ ಭಾರತದಲ್ಲೇ ಒಂದು ಅನನ್ಯ ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದೆ. ತನ್ನ ಪರಿಸರದ ಮತ್ತು ಮೂಲದ ದೇಶೀಯ ಸಂಸ್ಕೃತಿಯನ್ನು ಎಲ್ಲ ನಿಟ್ಟುಗಳಲ್ಲಿ ಸಂರಕ್ಷಿಸುತ್ತಲೇ, ಅಭಿವೃದ್ಧಿ ಪಡಿಸುತ್ತಲೇ ರಾಷ್ಟ್ರದ ಮತ್ತು ವಿಶ್ವದ ಎಲ್ಲ ಜ್ಞಾನ ವಿಜ್ಞಾನಗಳ ಬೆಳಕುಗಳನ್ನು ತನ್ನೊಳಗೆ ಆಹ್ವಾನಿಸುತ್ತ, ತನ್ನಲ್ಲಿ ಸಂಲಗ್ನಗೊಳಿಸುತ್ತ, ಅದರ ಫಲಿತಗಳನ್ನು ದಿಕ್ಕು ದಿಕ್ಕಿಗೆ ಎತ್ತಿಹಿಡಿಯುವ ಮಹಾನ್ ಕಾಯಕದೊಡನೆ ಈ ವಿಶ್ವವಿದ್ಯಾಲಯ ಆರಂಭವಾಗಿದೆ. ಕನ್ನಡ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯನ್ನಾಗಿಸಿ ಮತ್ತು ವಿಶ್ವ ಪ್ರಜ್ಞೆಯನ್ನು ಕನ್ನಡ ಪ್ರಜ್ಞೆಯನ್ನಾಗಿಸಿ ಕನ್ನಡ ಭಾಷೆಯ ಮೂಲಕ ಕನ್ನಡಿಗರಿಗೆ ದಕ್ಕಿಸಿ ಕೊಡುವ ವಿಶಿಷ್ಟ ಉನ್ನತ ಧ್ಯೇಯದೊಡನೆ ಆರಂಭವಾದ ಈ ವಿಶ್ವವಿದ್ಯಾಲಯ ತನ್ನ ಈ ಗುರುತರ ಹೊಣೆಯನ್ನು ಧಾರಣ ಮಾಡಿಕೊಂಡು ಈ ೧೧ ವರ್ಷಗಳ ಅವಧಿಯನ್ನು ಸಾರ್ಥಕವಾಗಿ ಕ್ರಮಿಸಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ. ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು ಮತ್ತು ಕನ್ನಡ ವಿಶ್ವವಿದ್ಯಾಲಯ ನೋಡಿದಲ್ಲದೆ ಸಮಗ್ರ ಕರ್ನಾಟಕದ ವಿಶಿಷ್ಟ ದರ್ಶನ ಪರಿಪೂರ್ಣವಾಗದು ಎಂಬಂತೆ ಈ ಮಹಾನ್ ಸಂಸ್ಥೆಯನ್ನು ರೂಪುಗೊಳಿಸುವ ಅರ್ಥಪೂರ್ಣ ದೀಕ್ಷೆಯನ್ನು ನಾವು ವಹಿಸಿದ್ದೇವೆ.

ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾಭಿವೃದ್ಧಿ, ಕನ್ನಡ ಭಾಷೆ ಮತ್ತು ಸಾಹಿತ್ಯ, ದ್ರಾವಿಡ ಸಂಸ್ಕೃತಿ ಅಧ್ಯಯನ, ಮಹಿಳಾ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಭಾಷಾಂತರ ಅಧ್ಯಯನ, ಜಾನಪದ, ಬುಡಕಟ್ಟು, ಶಾಸನ, ಹಸ್ತಪ್ರತಿ, ಇತಿಹಾಸ, ಪುರಾತತ್ವ, ವಿಜ್ಞಾನ ಇತಿಹಾಸ, ಸಂಗೀತ ಮತ್ತು ನೃತ್ಯ, ಚಿತ್ರಕಲೆ, ಶಿಲ್ಪಕಲೆ ವಿಭಾಗಗಳು ಅಸ್ತಿತ್ವದಲ್ಲಿದ್ದು, ತಮ್ಮ ತಮ್ಮ ವಿಷಯಗಳಲ್ಲಿ ವಿಶಿಷ್ಟವೂ ನವೀನವೂ ಆದ ಸಂಶೋಧನೆಗಳನ್ನು ಕೈಗೊಂಡಿವೆ.

ಮಾತೆಂಬುದು ಜ್ಯೋತಿರ್ಲಿಂಗ ಎಂಬ ಧ್ಯೇಯ ವಾಕ್ಯವನ್ನು ಧಾರಣೆ ಮಾಡಿರುವ ನಮ್ಮ ವಿಶ್ವವಿದ್ಯಾಲಯ ಕನ್ನಡ ಭಾಷೆಯನ್ನು ಸಮಗ್ರ ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತೆ ಸಮರ್ಥಗೊಳಿಸುವ ಮತ್ತು ಕನ್ನಡ ಬದುಕು ವಿಶ್ವ ವಿಸ್ತೃತವಾಗುವಂತೆ ಮಾಡುವ ಗುರಿಗಳನ್ನು ಮುಟ್ಟುವ ದಾರಿಯಲ್ಲಿ ಆಶಾದಾಯಕವಾಗಿ ಕ್ರಮಿಸುತ್ತದೆ. ಇದರಿಂದಾಗಿ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಜಾನಪದ, ಬುಡಕಟ್ಟು ಮುಂತಾದ ನೆಲೆಗಳಲ್ಲಿ ಕಣ್ಣು ಕೋರೈಸುವ ಹೊಸ ಫಲಿತಗಳನ್ನು ಹಡೆಯುತ್ತ, ಸಮಗ್ರ ಕನ್ನಡದ ಸಮೃದ್ಧಿಯನ್ನು ಹೆಚ್ಚಿಸುತ್ತಿದೆ. ಮೇಲೆ ಉಲ್ಲೇಖಿಸಿದ ವಿಭಾಗಗಳಲ್ಲದೆ ವಿಶಿಷ್ಟ ಕ್ಷೇತ್ರದ ಅಧ್ಯಯನಕ್ಕೆ ಒತ್ತುಕೊಡುವ ಅಧ್ಯಯನ ಪೀಠಗಳನ್ನು ಪ್ರಾರಂಭಿಸುವ ಮೂಲಕ ಆ ಕ್ಷೇತ್ರದ ಸೂಕ್ಷ್ಮವಾದ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗಳಿಗೆ ಹೊಸ ದಾರಿಯನ್ನು ಕಲ್ಪಿಸಲಾಗಿದೆ. ಈ ದಿಸೆಯಲ್ಲಿ ಈಗಾಗಲೇ ಲೋಹಿಯಾ ಅಧ್ಯಯನ ಪೀಠ, ದಲಿತ ಅಧ್ಯಯನ ಪೀಠ, ಪುರಂದರದಾಸ ಅಧ್ಯಯನ ಪೀಠ, ಡಾ. ಶಂಬಾ ಜೋಶಿ ಅಧ್ಯಯನ ಪೀಠ ಮತ್ತು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ. ಈ ವರ್ಷ ವಾಲ್ಮೀಕಿ ಅಧ್ಯಯನ ಪೀಠವನ್ನು ಸರ್ಕಾರ ಮಂಜೂರು ಮಾಡಿದ್ದು, ಮುಂದಿನ ತಿಂಗಳು ಅದು ಉದ್ಘಾಟನೆಗೊಳ್ಳುತ್ತಿದೆ. ಈ ಪೀಠಗಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಜೊತೆಗೆ ಬದುಕಿಗೆ ನೇರವಾಗಿ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ದಾರಿ ಮಾಡಿಕೊಡುತ್ತಲಿವೆ. ಇವಲ್ಲದೆ ದೊಡ್ಡಾಟದ ಅಧ್ಯಯನ ಪೀಠ, ಪತ್ರಿಕೋಧ್ಯಮ ಅಧ್ಯಯನ ಪೀಠ, ವಚನ ಸಂಸ್ಕೃತಿ ಅಧ್ಯಯನ ಪೀಠ, ಜೈನ ಸಂಸ್ಕೃತಿ ಅಧ್ಯಯನ ಕೇಂದ್ರ, ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರ, ಕನ್ನಡ ತೆಲುಗು ತೌಲನಿಕ ಅಧ್ಯಯನ ಪೀಠ, ಕನ್ನಡ ತಮಿಳು ತೌಲನಿಕ ಅಧ್ಯಯನ ಪೀಠ, ಕನ್ನಡ ಮಲಯಾಳಂ ತೌಲನಿಕ ಅಧ್ಯಯನ ಪೀಠ, ಕನ್ನಡ ಮರಾಠಿ ತೌಲನಿಕ ಅಧ್ಯಯನ ಪೀಠ ಹಾಗೂ ಕನ್ನಡ ಉರ್ದು ತೌಲನಿಕ ಅಧ್ಯಯನ ಪೀಠ, ಮಲೆನಾಡು ಸಂಸ್ಕೃತಿ ಅಧ್ಯಯನ ಪೀಠ, ಹಾಗೂ ಕುವೆಂಪು ಅಧ್ಯಯನ ಪೀಠ, ಹಕ್ಕಬುಕ್ಕ ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಬಗ್ಗೆ ತೀವ್ರವಾದ ಪ್ರಯತ್ನವನ್ನು ಮಾಡಲಾಗುತ್ತಿದೆ. ಗಾಂಧಿ ಹಾಗೂ ನೆಹರು ಅಧ್ಯಯನ ಪೀಠಗಳನ್ನು ಸ್ಥಾಪಿಸುವ ಸಲುವಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಹಾಯವನ್ನು ಕೋರಲಾಗಿದೆ.

ಇದುವರೆಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ೫೭ ವಿದ್ಯಾರ್ಥಿಗಳು ಪಿ.ಎಚ್.ಡಿ. ಪದವಿಯನ್ನು, ೪೪ ವಿದ್ಯಾರ್ಥಿಗಳು ಎಂ.ಫಿಲ್. ಪದವಿಯನ್ನು ಹಾಗೂ ೧೩ ಜನ ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ. ಇದುವರೆಗೆ ೨೦೦ ಜನ ಪಿ.ಎಚ್.ಡಿ. ನೋಂದಣಿ ಮಾಡಿಸಿದ್ದು, ಈ ದಿನ ೨೪ ಜನ ಪಿಎಚ್.ಡಿ. ಪದವಿ ಮತ್ತು ೩ ಜನ ಡಿ.ಲಿಟ್ ಪದವಿ ಹಾಗೂ ೨೧ ಜನ ಎಂ.ಫಿಲ್. ಪದವಿಯನ್ನು ಪಡೆಯಲಿದ್ದಾರೆ. ಈ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದು ದೊಡ್ಡ ಸಂಖ್ಯೆಯಾಗಿದ್ದು, ಪ್ರೌಢ ಸಂಶೋಧನಾಸಕ್ತರ, ಗಮನ, ಗೌರವಗಳನ್ನು ಇದು ಅಧಿಕ ಪ್ರಮಾಣದಲ್ಲಿ ಗಳಿಸಿಕೊಳ್ಳುತ್ತಿರುವುದರ ದ್ಯೋತಕವಾಗಿದೆ.

ಇದುವರೆಗೆ ಸಂಶೋಧನೆಯನ್ನೇ ತನ್ನ ಪ್ರಥಮ ಮತ್ತು ಅಂತಿಮ ಗುರಿಯಾಗಿ ಅವಲಂಬಿಸಿದ್ದ ನಮ್ಮ ವಿಶ್ವವಿದ್ಯಾಲಯ ಇದೀಗ ಶೋಧನೆಯ ಜೊತೆಗೆ ಬೋಧನೆಯ ದಾರಿಯನ್ನು ಒಳಗೊಳ್ಳುತ್ತಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ. ಇತರ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗದಿರುವ ಅಸಾಂಪ್ರದಾಯಕವಾದ, ಆದರೆ ಆಧುನಿಕ ಬದುಕಿಗೆ ಅಗತ್ಯವಾದ ಜ್ಞಾನವನ್ನು ಒದಗಿಸುವ ದೂರಶಿಕ್ಷಣ ವಿಧಾನದ ೭ ಡಿಪ್ಲೋಮಾ ಅಧ್ಯಯನಗಳನ್ನು ಕಳೆದ ವರ್ಷ ಆರಂಭಿಸಲಾಗಿದೆ. ಕರ್ನಾಟಕ ಅಧ್ಯಯನ ಡಿಪ್ಲೋಮಾ, ಆಡಳಿತ ಕನ್ನಡ ಡಿಪ್ಲೋಮಾ, ಕ್ರಿಯಾತ್ಮಕ ಕನ್ನಡ ಡಿಪ್ಲೋಮಾ, ದಲಿತ ಅಧ್ಯಯನ ಡಿಪ್ಲೋಮಾ, ಮತ್ತು ಪುರಾತತ್ವ, ಸಂಸ್ಕೃತಿ, ಮಹಿಳಾ ಅಧ್ಯಯನ ಡಿಪ್ಲೋಮಾ, ಜನಪದ ಕಲಾ ಡಿಪ್ಲೋಮಾ ಮತ್ತು ಪ್ರವಾಸೋದ್ಯಮ ಅಧ್ಯಯನ ಡಿಪ್ಲೋಮಾ ತರಗತಿಗಳನ್ನು ಆರಂಭಿಸಲಾಗಿದ್ದು, ಸುಮಾರು ೮೦ ಜನ ವಿದ್ಯಾರ್ಥಿಗಳು ಮೊದಲನೆಯ ವರ್ಷವೇ ವಿವಿಧ ತರಗತಿಗಳಿಗೆ ಪ್ರವೇಶ ಪಡೆದಿದ್ದು ಈಗ ಅವುಗಳಿಗೆ ಸಂಬಂಧಿಸಿದ ಪರೀಕ್ಷೆಗಳು ನಡೆಯುತ್ತಿವೆ. ಬೇರೆ ಬೇರೆ ಉದ್ಯೋಗಗಳಲ್ಲಿದ್ದೂ ಹೊಸ ಜ್ಞಾನ ದಿಗಂತಗಳನ್ನು ದರ್ಶಿಸಬೇಕೆನ್ನುವ, ಸ್ಪರ್ಶಿಸಬೇಕೆನ್ನುವ ಜ್ಞಾನದಾಹಿಗಳಿಗೆ ಇದು ಅತ್ಯಂತ ಉಪಯುಕ್ತವಾಗಿದ್ದು, ಪ್ರಥಮ ವರ್ಷದ ಪ್ರತಿಕ್ರಿಯೆ ತುಂಬ ಉತ್ಸಾಹದಾಯಕವಾಗಿದೆ. ತಮ್ಮ ತಮ್ಮ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತವಾಗಿದ್ದ ನಮ್ಮ ಬೋಧಕ ವರ್ಗಕ್ಕೆ ಈ ಅಧ್ಯಯನಗಳಿಗೆ ಪಾಠ ಹೇಳುವ, ಪಾಠ ಬರೆಯವ ಸದಾವಕಾಶ ದೊರೆತದ್ದರಿಂದ ಅವರ ಚಿಂತನೆ ಮತ್ತು ಪ್ರತಿಭೆಗಳ ವಿಸ್ತರಣಕ್ಕೆ ಹೊಸ ಆಯಾಮ ದೊರೆತಂತಾಗಿದೆ. ಆರಂಭದ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದಾಗಿ ಈ ವರ್ಷ ಜನಪದ ಸಂಗೀತ, ಜನಪದ ಕರಕುಶಲ ಕಲೆಗಳು, ನಾಟಕ, ಕಲೆ, ಅಭಿವೃದ್ಧಿ ಸಂವಹನ, ಪಾರಂಪರಿಕ ಜ್ಞಾನ, ಬುಡಕಟ್ಟು ಅಧ್ಯಯನ, ಭಾಷಾಂತರ ಅಧ್ಯಯನ ಡಿಪ್ಲೋಮಾಗಳನ್ನು ಆರಂಭಿಸಲಾಗುತ್ತಿದೆ. ಈ ಡಿಪ್ಲೋಮಾ ತರಗತಿಗಳಲ್ಲದೆ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪದವಿ ತರಗತಿಗಳೂ ಸಹ ಕಳೆದ ವರ್ಷ ಪ್ರಾರಂಭವಾಗಿವೆ. ನಮ್ಮ ಬಾದಾಮಿಯ ಕೇಂದ್ರದಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆಗಳಲ್ಲಿ ೫ ವರ್ಷದ ಪದವಿ ತರಗತಿಗಳನ್ನು ಆರಂಭ ಮಾಡಿರುವುದರಿಂದ ಈ ಕಲೆಗಳ ಅಭ್ಯಾಸಿಗಳಿಗೆ ಹಾಗೂ ಆ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಅರಸಬೇಕೆನ್ನುವವರಿಗೆ ಆಶಾದಾಯಕವಾದ ಮಾರ್ಗವೊಂದು ತೆರೆದಂತಾಗಿದೆ. ಪದವಿ ತರಗತಿಗಳಲ್ಲಿ ಹೊಸ ಕಾಲದ ಅಗತ್ಯಗಳಲ್ಲಿ ಹೊಸ ಆವಿಷ್ಕಾರಗಳನ್ನು ಮತ್ತು ನವೀನ ಜ್ಞಾನ ಶಾಖೆಗಳನ್ನು ಅಂತರ್‌ಶಿಸ್ತೀಯವಾಗಿ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸುವುದು ವಿದ್ಯಾರ್ಥಿಗಳ ಮಾನಸಿಕ ಜ್ಞಾನ ದೃಷ್ಟಿಯಿಂದ ಅತ್ಯವಶ್ಯಕವೆಂಬುದನ್ನು ಮನಗಂಡು ಎಂ.ಎ., ಪಿ.ಎಚ್.ಡಿ. (೪ ವರ್ಷಗಳ ಸಂಯೋಜಿತ ಅಧ್ಯಯನ)ಯನ್ನು ಕನ್ನಡ ಸಾಹಿತ್ಯ ಮತ್ತು ಜಾನಪದ ವಿಷಯಗಳಲ್ಲಿ ಆರಂಭಿಸಲಾಗಿದ್ದು, ೩೦ ಜನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡು ಸೆಮಿಸ್ಟರ್‌ಪದ್ಧತಿಯ ವ್ಯಾಸಾಂಗದಲ್ಲಿ ನಿರತರಾಗಿದ್ದಾರೆ. ಇದು ರಾಜ್ಯ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಮೊದಲನೆಯ ಪ್ರಯೋಗವಾಗಿದೆ. ಇವುಗಳನ್ನು ಆರಂಭಿಸುವ ಮೂಲಕ ನಮ್ಮ ವಿಶ್ವವಿದ್ಯಾಲಯ ಹೊಸ ಜ್ಞಾನ ಶಿಸ್ತುಗಳ ಕಡೆಗೆ ಬಾಗಿಲು ತೆರೆದಿದೆ. ಹೀಗೆ ತೆರೆಯಲಾಗಿರುವ ಹೊಸ ಅಧ್ಯಯನ ವಿಭಾಗಗಳಿಗೆ ಹೊಸ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳದೆಯೇ ನಮ್ಮ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳ ವಿದ್ವತ್ ಮತ್ತು ಅನುಭವನ್ನೇ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನಾನು ಈ ಸಂದರ್ಭದಲ್ಲಿ ತಿಳಿಸಲು ಇಚ್ಚಿಸುತ್ತೇನೆ. ಈಗಾಗಲೇ ವಿಶ್ವವಿದ್ಯಾಲಯದಿಂದ ಕನ್ನಡ ಅಧ್ಯಯನ, ಮಹಿಳಾ ಅಧ್ಯಯನ, ನಮ್ಮ ಕನ್ನಡ, ಚೆಲುವ ಕನ್ನಡ, ಪುಸ್ತಕ ಮಾಹಿತಿ, ವಿಜ್ಞಾನ ಸಂಗಾತಿ ಎಂಬ ಆರು ನಿಯತಕಾಲಿಕೆಗಳನ್ನು ಪ್ರಕಟಿಸಲಾಗುತ್ತಿದ್ದು, ಅವೆಲ್ಲ ಆಯಾ ಕ್ಷೇತ್ರದ ಓದುಗರಿಗೆ ಅತ್ಯಂತ ಪ್ರಿಯವಾಗಿವೆ. ಹಾಗೆಯೇ ವಿಶ್ವವಿದ್ಯಾಲಯದಿಂದ ಶೋಧಿತವಾಗುವ ಹೊಸ ಹೊಸ ಜ್ಞಾನದ ಬೆಳಕಿಂಡಿಗಳಾಗಿಯೂ ಇವು ಕಾರ್ಯ ನಿರ್ವಹಿಸುತ್ತಿವೆ. ಇವಲ್ಲದೆ ಕಳೆದ  ದಶಮಾನೋತ್ಸವ ಸಂದರ್ಭದಲ್ಲಿ ಅಭಿವೃದ್ಧಿ ಅಧ್ಯಯನ, ದ್ರಾವಿಡ ಅಧ್ಯಯನ ಮತ್ತು ಜಾನಪದ ಕರ್ನಾಟಕ ಎಂಬ ಹೊಸ ನಿಯತಕಾಲಿಕೆಗಳನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಇವು ಆಯಾ ಹೊಸ ಕ್ಷೇತ್ರದ ಸಂಶೋಧಕರ ವಿಶಿಷ್ಟ ಬಗೆಯ ಹೊಸ ಬರಹಗಳನ್ನು ಪ್ರಕಟಿಸುವ ಮೂಲಕ ಕನ್ನಡ ಜ್ಞಾನ ಬಹುಮುಖವಾಗಿ ಅರಳಲು ಸಾಧನವಾಗಿವೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಬುಡಕಟ್ಟು ಕರ್ನಾಟಕ ಮತ್ತು ಕಲಾ ಕರ್ನಾಟಕ ನಿಯತಕಾಲಿಕೆಗಳನ್ನು ಪ್ರಕಟಿಸಲು ಯೋಜಿಸಲಾಗುತ್ತಿದೆ. ಇದೇ ವರ್ಷ ಪಿ.ಯು.ಸಿ. ತರಗತಿಯಿಂದ ಹಿಡಿದು ಸ್ನಾತಕೋತ್ತರ ತರಗತಿವರೆಗೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಕಲಿಯಲು ಸಾಧ್ಯವಾಗುವಂತೆ ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕಗಳಲ್ಲಿ ಪೂರಕ ಪಠ್ಯಗಳನ್ನು ಪರಿಣಿತರಿಂದ ಬರೆಯಿಸಿ ಪ್ರಕಟಿಸಲು ಪಠ್ಯಪುಸ್ತಕ ವಿಭಾಗವನ್ನು ಮತ್ತು ವಿಜ್ಞಾನ ಲೋಕದ ಅಮಿತ ಸಾಧನೆಗಳನ್ನು ಸಾದರ ಪಡಿಸುವ ವಿಜ್ಞಾನ ಇತಿಹಾಸಕ್ಕೆ ಸಂಬಂಧಿಸಿದ ವಿಜ್ಞಾನ ಇತಿಹಾಸ ವಿಭಾಗವನ್ನು ಆರಂಭಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಂಗೀತ, ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ (ಎಂ.ಎಫ್.ಎ) ಅನುವು ಮಾಡಿಕೊಡಲು ಸಿದ್ಧತೆ ನಡೆಯುತ್ತಿದೆ. ಬಳ್ಳಾರಿಯಲ್ಲಿ ಲಲಿತಕಲೆಗಳಿಗೆ ಸಂಬಂಧಿಸಿದ ವ್ಯಾಸಂಗ ಮತ್ತು ತರಬೇತಿ ಕೇಂದ್ರವೊಂದನ್ನು ಸ್ಥಳೀಯರ ನೆರವಿನಿಂದ ಆರಂಭಿಸಲು ಸಹ ಯೋಜನೆಯನ್ನು ತಯಾರಿಸಲಾಗಿದೆ.

ವಿಶ್ವವಿದ್ಯಾಲಯದ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದಾದ ಪ್ರಸಾರಾಂಗ ಇದುವರೆಗೆ ಬಗೆ ಬಗೆಯ ಜ್ಞಾನ ಕ್ಷೇತ್ರಗಳ ಅರಿವನ್ನು ಸಂಚಯಿಸುವ, ಪ್ರಸಾರ ಮಾಡುವ ಸುಮಾರು ೭೦೦ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಪ್ರಕಟಣಾ ಇತಿಹಾಸದಲ್ಲಿ ಒಂದು ಹೆದ್ದಾರಿಯನ್ನೇ ತೆರೆದಿದೆ ಎಂಬುದು ಅಭಿಮಾನದ ಸಂಗತಿಯಾಗಿದೆ. ವಿವಿಧ ಜ್ಞಾನ ಶಾಖೆಗಳ ಬಗೆಗಿನ ಪುಸ್ತಕಗಳನ್ನು ಪ್ರಕಟಿಸುವುದಲ್ಲದೆ, ಈ ವಿಶ್ವದಲ್ಲಿ ಸಹಸ್ರಾರು ವರ್ಷಗಳಿಂದ ಮಹಾ ಚಿಂತಕರು, ಜಿಜ್ಞಾಸಕರು, ವಿಚಾರವಾದಿಗಳು ನಡೆಸಿದ ಚಿಂತನೆಯ ಫಲವನ್ನು ಶತಮಾನಗಳ ಚಿಂತನೆ ಎಂಬ ಮಾಲೆಯಡಿ ಪ್ರಕಟಿಸಲು, ಕನ್ನಡ ಸಾಹಿತ್ಯ ಚರಿತ್ರೆ, ಇತಿಹಾಸವನ್ನು ೩ ಸಂಪುಟಗಳಲ್ಲಿ ಪ್ರಕಟಿಸಲು ಮತ್ತು ಪರಾಮರ್ಶನ ಗ್ರಂಥ ಮಾಲೆಯ ಮೂಲಕ ಸುಮಾರು ೫೦ ಪುಸ್ತಕಗಳನ್ನು ಪ್ರಕಟಿಸಲು, ಕಾನೂನು ಇಲಾಖೆಯ ನೆರವಿನೊಡನೆ ಸಾಮಾನ್ಯರಿಗೆ ಕಾನೂನು ಎಂಬ ಮಾಲೆಯಲ್ಲಿ ೫೦ ಪುಸ್ತಕಗಳನ್ನು, ಮಹಿಳಾ ಕಲ್ಯಾಣ ಇಲಾಖೆಯ ನೆರವಿನೊಡನೆ ಮಹಿಳಾ ಲೋಕದ ಸಾಧನೆ, ಚಿಂತನೆ ಸಮಸ್ಯೆಗಳನ್ನು ಕುರಿತ ೫೦ ಪುಸ್ತಕಗಳನ್ನು ಹಾಗೂ ವಿವಿಧ ವಿಜ್ಞಾನ ವಿಷಯಗಳನ್ನು ಕುರಿತ ಸುಮಾರು ೨೦ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದ್ದು ಕೆಲವು ಮುದ್ರಣದ ಅಂತಿಮ ಹಂತದಲ್ಲಿವೆ. ಇದಲ್ಲದೆ ವಿಜ್ಞಾನಿಗಳ ವಿಶ್ವಕೋಶ ಮತ್ತು ವಿಜ್ಞಾನ ಸಾಹಿತ್ಯ ಚರಿತ್ರೆಯನ್ನು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ತಯಾರಿಸಲಾಗುತ್ತಿದೆ. ಕನ್ನಡ ಪಿಎಚ್.ಡಿ. ವಿವರಣ ಕೋಶ, ಕರ್ನಾಟಕ ಪಿಎಚ್.ಡಿ. ವಿವರಣ ಕೋಶ, ಜಾನಪದ ಸಮಗ್ರ ಸೂಚಿ, ಜಾನಪದ ಅಧ್ಯಯನ, ಇತಿಹಾಸ ಹಾಗೂ ಕನ್ನಡದ ಪ್ರಾಚೀನ ಸಂಸ್ಕೃತಿಯ ವಿವಿಧ ನೆಲೆಗಳನ್ನು ಬಿಂಬಿಸುವ ಶಾಸನ ಸಂಪುಟಗಳನ್ನು, ನಿಘಂಟುಗಳನ್ನು ಪ್ರಕಟಿಸುವ ಯೋಜನೆ ಪ್ರಗತಿಯಲ್ಲಿದೆ. ಜನ ಸಾಮಾನ್ಯರಿಗೆ ತಲುಪಲು ಮಂಟಪ ಮಾಲೆಯ ವಿಶೇಷ ಉಪನ್ಯಾಸಗಳನ್ನೂ ನಡೆಸಲಾಗುತ್ತಿದೆ ಮತ್ತು ಈ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ಪ್ರಕಾಶನ ಪಡಿಸಲಾಗುತ್ತಿದೆ. ಪಿ.ಯು.ಸಿ. ಮತ್ತು ಪದವಿ ತರಗತಿಗಳಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಕಲಿಸಲು ಅನುಕೂಲವಾಗುವಂತೆ ಕನ್ನಡ ವಿಜ್ಞಾನ ಪಠ್ಯಗಳನ್ನು ತಯಾರಿಸಲು ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯವನ್ನು ಕೋರಿದ್ದು, ಈಗಾಗಲೇ ಪಿ.ಯು.ಸಿ. ಮಟ್ಟದ ಏಳು ವಿಜ್ಞಾನ ಪಠ್ಯಗಳನ್ನು ಪರಿಣಿತರಿಂದ ಸಿದ್ಧಪಡಿಸಲಾಗಿದೆ.

ಕಳೆದ ದಶಮಾನೋತ್ಸವದ ಸಂದರ್ಭದಲ್ಲಿ ಅತ್ಯಂತ ಮಹತ್ತರವಾದ ೨೫ ಹೊಸ ಪುಸ್ತಕಗಳನ್ನು ಮತ್ತು ನಮ್ಮ ಎಲ್ಲ ನಿಯತಕಾಲಿಕೆಗಳ ದಶಮಾನೋತ್ಸವ ವಿಶೇಷ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ವಿಶೇಷ ಸಂಚಿಕೆಗಳು ಆಯಾ ಕ್ಷೇತ್ರದ ಸಮೀಕ್ಷೆಯ ಮುಖ್ಯ ಆಕರಗ್ರಂಥಗಳಾಗಿವೆ. ಈ ಮಧ್ಯೆ ಹಲವಾರು ಗ್ರಂಥಗಳನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ‘ಚರಿತ್ರೆ’ ವಿಶ್ವಕೋಶ ಮಹತ್ತರವಾದುದಾಗಿದೆ. ಜಗತ್ತಿನ ಚರಿತ್ರೆಯ ಬಗೆಗೆ ಅಗತ್ಯವಿರುವ ಮತ್ತು ದೊರೆಯಬಹುದಾದ ಎಲ್ಲ ಮಾಹಿತಿಗಳನ್ನು ದೊರಕಿಸಿಕೊಡುವ ಚರಿತ್ರೆ ವಿಶ್ವಕೋಶ ಎಂಬ ಬೃಹತ್ ಗ್ರಂಥವನ್ನು ಬಿಡುಗಡೆ ಮಾಡಲಾಗಿದ್ದು ಇದು ಈ ಕ್ಷೇತ್ರದ ಪ್ರಾತಿನಿಧಿಕ ಗ್ರಂಥವಾಗಿದ್ದು ವಿದ್ವತ್ ಜನರ ಅಪಾರ ಮನ್ನಣೆಗೆ ಪಾತ್ರವಾಗಿದೆ. ಕರ್ನಾಟಕ ಪ್ರಾಣಿ ಪಕ್ಷಿ ಸಂಪುಟ ಎಂಬ ಹೆಸರಿನ ಮತ್ತೊಂದು ಬೃಹತ್ ಸಂಪುಟ ಅಚ್ಚಿನಲ್ಲಿದೆ. ಪರಿಸರ ವಿಶ್ವಕೋಶ ಅಂತಿಮ ಹಂತದಲ್ಲಿದೆ. ಹೊಸಪೇಟೆಯ ತಾಲ್ಲೂಕಿನ ಎಲ್ಲ ಪ್ರಗತಿಯ ಮತ್ತು ವಸ್ತು ಸ್ಥಿತಿಯ ಮಗ್ಗುಲುಗಳನ್ನು ವಾಸ್ತವಿಕವಾಗಿ ಅನಾವರಣ ಮಾಡುವ ಹೊಸಪೇಟೆ ತಾಲ್ಲೂಕು ದರ್ಶನ ಎಂಬ ಅಭ್ಯಾಸಪೂರ್ಣ ಮಹತ್ವದ ಗ್ರಂಥವನ್ನು ಪ್ರಕಟಿಸಲಾಗಿದ್ದು ಇದು ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಎಲ್ಲ ಅಧಿಕಾರಿಗಳ ರಾಜಕೀಯಸ್ಥರ ಮತ್ತು ಸಮಾಜ ವಿಜ್ಞಾನಿಗಳ ಕೈಪಿಡಿಯಂತಿದೆ. ಕರ್ನಾಟಕದ ಸಮಗ್ರಮುಖ ಚಿಂತನೆ ಮತ್ತು ಸಾಧನೆಗಳನ್ನು ಬಿಂಬಿಸುವ ಕರ್ನಾಟಕ ಸ್ಟಡೀಸ್ ಎಂಬ ಅರ್ಧವಾರ್ಷಿಕ ಪತ್ರಿಕೆಯನ್ನು ಇಂಗ್ಲೀಷ್‌ನಲ್ಲಿ ಪ್ರಕಟಿಸಲು ಎಲ್ಲ ಸಿದ್ಧತೆಗಳು ಮುಗಿದಿದ್ದು ಅಚ್ಚಿನಲ್ಲಿದೆ. ಈ ನಿಯತಕಾಲಿಕೆ ಕನ್ನಡ ನಾಡಿಗೂ ಮತ್ತಿತ್ತರ ಭಾಷಾ ಪ್ರಾಂತ್ಯಗಳಿಗೂ ಒಂದು ಚಿಂತನ ಸೇತುವೆಯಾಗಿ ಪರಿಣಮಿಸಲಿದೆ ಎಂಬ ಭರವಸೆ ನಮ್ಮದು. ಇವಲ್ಲದೆ ವಿಶ್ವವಿದ್ಯಾಲಯ ಪ್ರಕಟಿಸಿರುವ ಕರ್ನಾಟಕ ಚರಿತ್ರೆಯ ೭ ಸಂಪುಟಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸುವ ಹಾಗೂ ಈ ಕನ್ನಡ ಸಂಪುಟಗಳ ವಿದ್ಯಾರ್ಥಿ ಆವೃತ್ತಿಗಳನ್ನು ಹೊರತರುವ ಸಂಕಲ್ಪ ಈಗ ಈಡೇರದಿದ್ದರೂ ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಕರ್ನಾಟಕದ ಸಮಗ್ರ ಮುಖಗಳ ಸಾಧನಾ ಸೌಂದರ್ಯವನ್ನು ಚಿತ್ರಗಳ ಮೂಲಕ ಪರಿಚಯಿಸುವ ಬಹುವರ್ಣಮಯ ‘ಸಚಿತ್ರ ಕರ್ನಾಟಕ’ ಸಂಪುಟ ಸಿದ್ಧವಾಗಿದ್ದು ಅಚ್ಚಿನ ಮನೆಗೆ ಹೋಗುತ್ತಿದೆ. ಇದು ಪ್ರವಾಸಿಗರಿಗೆ ಮತ್ತು ಕರ್ನಾಟಕವನ್ನು ಅದರ ವಿವಿಧ ರೂಪಗಳಲ್ಲಿ ದರ್ಶಿಸ ಬೇಕೆನ್ನುವವರಿಗೆ ಮತ್ತು ಕರ್ನಾಟಕವನ್ನು ಅದರ ವಿವಿಧ ರೂಪಗಳಲ್ಲಿ ದರ್ಶಿಸ ಬೇಕೆನ್ನುವರಿಗೆ ಒಂದು ಅಧಿಕೃತ ಮಾಹಿತಿ ಗ್ರಂಥವಾಗಲಿದೆ. ಒಟ್ಟಿನಲ್ಲಿ ಕರ್ನಾಟಕದ ಹಾಗೂ ವಿಶ್ವದ ಸಮಗ್ರ ಜ್ಞಾನ ಸಂಪತ್ತನ್ನು ಕನ್ನಡದ ಮೂಲಕ ಕನ್ನಡಿಗರಿಗೆ ದೊರಕಿಸುವ ಮಹದಾಶಯ ನಮ್ಮದು. ಇದನ್ನು ಸಾಕಾರಗೊಳಿಸಲು ಸರ್ಕಾರದ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಂಸತ್ ಸದಸ್ಯರ, ಶಾಸಕರ ಮತ್ತು ಉದಾರಿಗಳಾದ ಸಂಸ್ಕೃತಿ ಶ್ರೀಮಂತರ ಸಹಾಯವನ್ನು ವಿಶ್ವವಿದ್ಯಾಲಯ ಭರವಸೆಯ ಕಣ್ಣುಗಳಿಂದ ನಿರೀಕ್ಷಿಸುತ್ತಿದೆ.

ಮೇಲ್ಕಂಡ ಯೋಜನೆಗಳಲ್ಲದೆ ಸಮಗ್ರ ಕರ್ನಾಟಕವನ್ನು ಅದರೆಲ್ಲ ಪ್ರಕಾಶಮಾನ ಮುಖಗಳೊಂದಿಗೆ ಬಿಂಬಿಸುವ ವಿಸ್ತಾರ ನೆಲೆಯ ‘ಕನ್ನಡಲೋಕ’ ಎಂಬ ಬೃಹತ್ ವಸ್ತುಸಂಗ್ರಹಾಲಯವನ್ನು ಕನಿಷ್ಟ ೫೦ ಎಕರೆಗಳ ಇಲ್ಲಿನ ಆವರಣದಲ್ಲಿ ಸ್ಥಾಪಿಸುವ ನಮ್ಮ ಯೋಜನೆಗೆ ಅಂತಹ ಉತ್ಸಾಹಪೂರ್ಣ ಪ್ರತಿಕ್ರಿಯೆ ಸಂಬಂಧಿಸಿದ ಕ್ಷೇತ್ರಗಳಿಂದ ವ್ಯಕ್ತವಾಗದಿರುವುದರಿಂದ ನಿಧಾನಗತಿಯಲ್ಲಿದೆ. ಇದರ ಕ್ರಿಯಾಕರಣಕ್ಕಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಯೋಜನೆ ಅಡಿಯಲ್ಲಿ ಈ ಮಹತ್ವದ ಯೋಜನೆಯನ್ನು ಸೇರಿಸಿಕೊಳ್ಳಲು ಸರ್ಕಾರವನ್ನು ವಿನಂತಿಸಲಾಗಿದೆ. ನಮ್ಮ ಆಶಯ ಈಡೇರಿದಲ್ಲಿ ಇದು ಭಾರತದಲ್ಲಿ ಮೊಟ್ಟಮೊದಲ ಮತ್ತು ಬಹುಮುಖಿ ವಿನ್ಯಾಸದ ಮಾದರಿ ವಸ್ತು ಸಂಗ್ರಹಾಲಯವಾಗಿರುತ್ತದೆ ಎಂದು ಭರವಸೆ ನಮಗಿದೆ.

ಮೂಲಭೂತ ಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿದ್ದ ವಿಶ್ವವಿದ್ಯಾಲಯದಲ್ಲಿ ಕಳೆದೆರಡು ವರ್ಷಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳ ಡಾಂಬರೀಕರಣ, ಉಪಾಹಾರ ಗೃಹ ಸೌಲಭ್ಯ, ಹೊಸ ರಸ್ತೆಗಳ ನಿರ್ಮಾಣ, ವಿದ್ಯುದ್ದೀಕರಣ, ಕುಡಿಯುವ ನೀರಿನ ಸೌಲಭ್ಯ, ವಾಹನ ವ್ಯವಸ್ಥೆ, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೊಡುಗೆಯಾಗಿ ಹೊಸ ಬಸ್ಸು ಮುಂತಾದವುಗಳನ್ನು ಒದಗಿಸಲಾಗಿದೆ. ತ್ರಿಪದಿ, ತುಂಗಭದ್ರ, ಕೂಡಲ ಸಂಗಮ, ಘಟಿಕಾಲಯ, ಗಿರಿಸೀಮೆ, ಕಾಯಕದ ಮನೆ, ನವರಂಗ, ಜಕ್ಕಣ ಮಂಟಪ ಮುಂತಾದ ಹಳೆಯ ಕಟ್ಟಡಗಳನ್ನು ನವೀಕರಿಸಿ ಸುಸಜ್ಜಿತ ಗೊಳಿಸಲಾಗಿದೆ. ವಿಭಾಗಗಳ ವ್ಯವಸ್ಥೆಗಾಗಿ ೫ ವಿಭಾಗೀಯ ಕಟ್ಟಡಗಳನ್ನು ಸುಮಾರು ೬೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯಾರ್ಥಿನಿಯರ ವಸತಿ ನಿಲಯ ಇನ್ನೇನು ಮುಗಿಯುತ್ತಿದೆ. ಸುಮಾರು ೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೊಸ ಗ್ರಂಥಾಲಯ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದ್ದು ಅದು ಅಂತಿಮ ಹಂತದಲ್ಲಿದೆ. ದಾಸ್ತಾನು ಸಂಗ್ರಹಕ್ಕಾಗಿ ಒಂದು ದಾಸ್ತಾನು ಭವನವನ್ನು ಹಾಗೂ ಸಸ್ಯಗಳ ಸಂರಕ್ಷಣೆಗಾಗಿ ಹಸಿರು ಮನೆಯೊಂದನ್ನು ನಿರ್ಮಿಸಲಾಗಿದೆ. ಅಭಿರುಚಿ ಎಂಬ ಉಪಾಹಾರಗೃಹ ವನ್ನು ಆರಂಭಿಸಲಾಗಿದೆ. ಮೊದಲನೆಯ ಕುಲಪತಿಗಳ ಕಾಲದಲ್ಲಿ ಆರಂಭಗೊಂಡು ಸ್ಥಗಿತವಾಗಿದ್ದ ಶಿಲ್ಪವನವನ್ನು ವಿಸ್ತರಿಸಿ ಅದಕ್ಕೆ ಆಕರ್ಷಕ ರೂಪವನ್ನು ನೀಡಲಾಗಿದೆ. ಸುಮಾರು ೨೦ ಲಕ್ಷ ರೂಪಾಯಿಗಳ ವೆಚ್ಚದ ಪಂಪ ಸಭಾಂಗಣವನ್ನು ಸಂಸತ್ ಸದಸ್ಯರಾದ ಸನ್ಮಾನ್ಯ ಶ್ರೀ ಹೆಚ್.ಜಿ. ರಾಮುಲು ಮತ್ತು ಸನ್ಮಾನ್ಯ ಶ್ರೀ ರೆಹಮಾನ್ ಖಾನ್‌ಅವರ ನೆರವಿನಿಂದ ನಿರ್ಮಿಸಲು ಆರಂಭಿಸಲಾಗಿದೆ. ಸುಮಾರು ೪೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬೋಧಕೇತರ ನೌಕರಿಗಾಗಿ ನೃಪತುಂಗನಗರ ಎಂಬ ಹೆಸರಿನಲ್ಲಿ ವಸತಿಗೃಹಗಳನ್ನು ಕಟ್ಟಲು ಆರಂಭಿಸಲಾಗಿದೆ. ಮುಂದಿನ ವರ್ಷ ಮತ್ತಷ್ಟು ಅಧ್ಯಾಪಕರ ವಸತಿ ಗೃಹಗಳನ್ನು ವಿಭಾಗೀಯ ಕಟ್ಟಡಗಳನ್ನು ಹಾಗೂ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾಲಯ ಈ ವರ್ಷ ಹಮ್ಮಿಕೊಂಡಿರುವ ಮತ್ತೊಂದು ದಾಖಲಾರ್ಹ ಯೋಜನೆಯೆಂದರೆ ಸಿರಿಗನ್ನಡ ಗ್ರಂಥಾಲಯ ಎಂಬ ದೇಶದಲ್ಲೇ ವಿಶಿಷ್ಟವಾದ ಪರಾಮರ್ಶನ ಗ್ರಂಥಾಲಯ. ಕನ್ನಡ ಲಿಪಿ ಉಗಮವಾದಂದಿನಿಂದ ಇಲ್ಲಿಯವರೆಗೆ ಪ್ರಕಟವಾದ ಎಲ್ಲ ಪುಸ್ತಕಗಳನ್ನು ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಭಾಷೆಯ ಗ್ರಂಥಗಳನ್ನು ಹಾಗೂ ಇತರ ಮಾಹಿತಿ ದಾಖಲೆಗಳನ್ನು ಸಂಗ್ರಹಿಸಿ ಈ ಗ್ರಂಥಾಲಯದಲ್ಲಿ ವ್ಯವಸ್ಥೆಗೊಳಿಸಲು ಯೋಜಿಸಲಾಗಿದೆ. ನಾಡಿನಾದ್ಯಂತ ಲೇಖಕರನ್ನು, ಪುಸ್ತಕ ಪ್ರಕಾಶಕರನ್ನು, ಸಂಸ್ಥೆಗಳನ್ನು, ಪುಸ್ತಕಗಳನ್ನು, ಪುಸ್ತಕಪ್ರಿಯರನ್ನು ಭೇಟಿ ಮಾಡಿ ಅಖಂಡ ಕರ್ನಾಟಕದ ಜನಸ್ತೋಮದ ನೆರವಿನಿಂದ ಈ ಗ್ರಂಥಾಲಯವನ್ನು ಮಹತ್ತಾಗಿ ರೂಪಿಸುವುದು ಹಾಗೂ ಕನ್ನಡ ವಿಶ್ವವಿದ್ಯಾಲಯದ ಈ ಗ್ರಂಥ ಭಂಡಾರದಲ್ಲಿ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿ ಇಲ್ಲದ ಗ್ರಂಥಗಳೇ ಇಲ್ಲ ಎಂಬಂತೆ ಇದನ್ನು ಸಜ್ಜುಗೊಳಿಸುವುದು ನಮ್ಮ ಆಶಯ. ಮಾರ್ಚ್‌ತಿಂಗಳಿನಿಂದ ಈ ಮಹದಾಶಯದ ಯೋಜನೆ ಕ್ರಿಯಾರೂಪವನ್ನು ತಳೆಯುತ್ತಾ ಹೋಗುತ್ತಿದೆ. ಈ ಯೋಜನೆ ಪೂರ್ಣಗೊಂಡಾಗ ಇದು ಕನ್ನಡ ಕರ್ನಾಟಕ ಬಗೆಗಿನ ಆಸಕ್ತರ ಮತ್ತು ಸಂಶೋಧಕರ ಮಹತ್ವದ ಯಾತ್ರಾಕೇಂದ್ರವಾಗುತ್ತಿದೆ. ಬಳ್ಳಾರಿ ಜಿಲ್ಲಾ ಪಂಚಾಯತ್ ನೆರವಿನಿಂದ ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಸಿದ್ಧತೆಗಳು ನಡೆದಿವೆ. ಇಲ್ಲಿನ ನಿವಾಸಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಶುವಿಹಾರ ಮತ್ತು ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದ್ದು, ಶಿಕ್ಷಣ ಇಲಾಖೆ ಶಾಲಾ ಕಟ್ಟಡವನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಕಳೆದ ಮೂರು ವರ್ಷಗಳಲ್ಲಿ ೯೦ ಲಕ್ಷ ನೀಡಿದ್ದು, ಈ ಯೋಜನಾ ಅವಧಿಯಲ್ಲಿ ಅದು ಹೆಚ್ಚಾಗುವ ಭರವಸೆ ಇದೆ. ಸಂಸ್ಕೃತಿಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಎಂ. ಕೃಷ್ಣ ಅವರು ಹಾಗೂ ನಮ್ಮ ಜನಪ್ರಿಯ ಉನ್ನತ ಶಿಕ್ಷಣ ಸಚಿವರಾದ ಡಾ. ಜಿ. ಪರಮೇಶ್ವರ ಅವರು, ಈ ವಿಶ್ವವಿದ್ಯಾಲಯಕ್ಕೆ ಹಿಂದೆ ದೊಎರೆಯುತ್ತಿದ್ದ ೩ ಕೋಟಿ ರೂಪಾಯಿಗಳ ಅನುದಾನವನ್ನು ೪ ಕೋಟಿಗೆ ಏರಿಸುವ ಮೂಲಕ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಿಗೆ ಹೊಸ ಚಾಲನೆಯನ್ನು ದೊರೆಕಿಸಿಕೊಟ್ಟಿದ್ದಾರೆ. ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಈ ಭಾಗದ ಸಂಸತ್ ಸದಸ್ಯರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಕೋರಿಕೊಳ್ಳಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ವಿಶ್ವವಿದ್ಯಾಲಯದ ನೇರ ಅನುದಾನವಲ್ಲದೆ ಸುಮಾರು ೨ ಕೋಟಿಗೂ ಹೆಚ್ಚು ಹಣವನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಈ ಎಲ್ಲ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ವಿಶ್ವವಿದ್ಯಾಲಯ ಋಣಿಯಾಗಿದೆ.

ಕರ್ನಾಟಕದ ಸಮಗ್ರಾಭಿವೃದ್ಧಿಗೆ ಸಂಬಂಧಪಟ್ಟ ಸಾಹಿತ್ಯ ಮತ್ತು ಸಾಹಿತ್ಯೇತರ ವಿಷಯಗಳಲ್ಲಿ ಆಸಕ್ತಿ, ಜಿಜ್ಞಾಸುತನವನ್ನು, ವಿಚಾರಶೀಲತೆಯನ್ನು ಬೆಳೆಸಲು ವಿಚಾರ ಸಂಕಿರಣ, ಕಮ್ಮಟ, ವಿಶೇಷೋಪನ್ಯಾಸ ಮತ್ತು ಬಗೆ ಬಗೆಯ ಸಮಾವೇಶಗಳನ್ನೂ ಸಹ ವಿಶ್ವವಿದ್ಯಾಲಯ ನಡೆಸುತ್ತಿದೆ. ಕಳೆದ ವರ್ಷ ಕನ್ನಡ ಗಡಿಭಾಗದ ಸಂಕ ಗ್ರಾಮದಲ್ಲಿ ದೇಸಿ ಸಮ್ಮೇಳನವನ್ನು ನಡೆಸಲಾಗಿದ್ದು ಈ ವರ್ಷ ದಾವಣಗೆರೆಯಲ್ಲಿ ಅದನ್ನು ನಡೆಸಲು ಯೋಜಿಸಲಾಗಿದೆ. ಈ ವರ್ಷ ಮಹಿಳಾ ಸಾಹಿತ್ಯ ಸಮಾವೇಶ, ದೇಶೀ ಸಮ್ಮೇಳನ, ವಿಮರ್ಶಾ ಸಮಾವೇಶ, ಸಂಶೋಧನಾ ಸಮಾವೇಶ ಮುಂತಾದ ರಾಜ್ಯಮಟ್ಟದ ಸಮಾವೇಶಗಳನ್ನು ಸ್ಥಳೀಯರ ನೆರವಿನೊಡನೆ ಹಮ್ಮಿಕೊಂಡು ನಡೆಸಲಾಗುತ್ತಿದೆ. ಇದೇ ತಿಂಗಳ ಕೊನೆಯ ವಾರದಲ್ಲಿ ರಾಷ್ಟ್ರಮಟ್ಟದ ಜಾನಪದ ಸಮಾವೇಶವನ್ನು, ಮುಂದಿನ ತಿಂಗಳು ಬುಡಕಟ್ಟು ಲೇಖಕರ ರಾಷ್ಟ್ರೀಯ ಸಮಾವೇಶವನ್ನು ಮತ್ತು ಸಂಸ್ಕಾರ ಭಾರತಿ ಸಹಯೋಗದೊಡನೆ ರಾಷ್ಟ್ರೀಯ ಚಿತ್ರಕಲಾ ಶಿಬಿರವನ್ನು ಮತ್ತು ರಾಷ್ಟ್ರಮಟ್ಟದ ಹಸ್ತಪ್ರತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲು ಸಿದ್ಧತೆಗಳು ಮುಗಿದಿವೆ. ಇವಲ್ಲದೆ ಪ್ರತಿಯೊಂದು ವಿಭಾಗವು ತನ್ನ ವಿಭಾಗೀಯ ವಿಷಯಗಳನ್ನು ಕುರಿತ ಹಲವು ವಿಚಾರ ಸಂಕಿರಣ ಮತ್ತು ಕಾರ್ಯಗಾರಗಳನ್ನೂ ಕೂಡ ನಡೆಸುತ್ತಿವೆ. ಹೀಗಾಗಿ ರಾಜ್ಯದ ಉದ್ದಗಲಕ್ಕೂ ಕನ್ನಡ ವಿಶ್ವವಿಶ್ವವಿದ್ಯಾಲಯ ತನ್ನ ವಿಶಿಷ್ಟ ಬಗೆಯ ಸಂಶೋಧನೆ, ಬೋಧನೆ ಹಾಗೂ ಚಿಂತನೆಗಳ ಕಾರ್ಯ ಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ತನ್ನ ಸ್ಥಾಪನೆಯ ಉದ್ದೇಶವನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಲು ಅಭಿಮಾನ ಪಡುತ್ತೇನೆ.

೮೦೦ ಎಕರೆಗಳ ಭೂ ವಿಸ್ತಾರವನ್ನು ಹೊಂದಿರುವ ಈ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಸ್ಯಗಳನ್ನು ನೆಟ್ಟು ಇಡೀ ವಾತಾವರಣಕ್ಕೆ ಹಸಿರು ಶ್ರೀಮಂತಿಕೆಯ ಶೋಭೆಯನ್ನು ತರಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಇಲಾಖೆಯ ಮತ್ತು ತೋಟಗಾರಿಕೆ ಇಲಾಖೆಯ ನೆರವಿನೊಡನೆ ಸುಮಾರು ೨೦ ಸಾವಿರ ಬಗೆ ಬಗೆಯ ಗಿಡಗಳನ್ನು ನೆಡೆಸಲಾಗಿದೆ. ದಶಮಾನೋತ್ಸವ ವನ, ವಿಜಯ ವನ, ಕುಮಾರ ರಾಮ ಉದ್ಯಾನ, ಚರಕ ವನಗಳನ್ನು ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾಗಿದ್ದ ವನಗಳಿಗೆ ಪಂಪವನ, ನೃಪತುಂಗ ವನ, ಹಕ್ಕಬುಕ್ಕ ವನ, ಅಕ್ಷರೋದ್ಯಾನ. ಕದಂಬ ವನ, ಹೊಯ್ಸಳ ವನ, ಚಾಲುಕ್ಯ ವನ, ಕೃಷ್ಣರಾಜ ವನ, ಮಾನಸ ವನ ಮುಂತಾಗಿ ಕರ್ನಾಟಕದ ಸಂಸ್ಕೃತಿಯನ್ನು ವಿಸ್ತರಿಸಿದ ರಾಜ ಮನೆತನಗಳ ಹೆಸರುಗಳನ್ನು ಇಡುವ ಮೂಲಕ ಇತಿಹಾಸ ಈ ನೆಲದಲ್ಲಿ ಮತ್ತೊಮ್ಮೆ ಕಣ್ತುಂಬುವಂತೆ ಮಾಡಲಾಗಿದೆ.

ನಮ್ಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಹಲವು ಲೇಖಕರ ಸಾಹಿತ್ಯ ಮತ್ತು ಸಂಶೋಧನಾ ಸಾಧನೆ ಅಭಿಮಾನಪಡುವಂಥದಾಗಿದ್ದು, ಅವರು ಇದುವರೆಗೆ ಹತ್ತಾರು ವಿಶಿಷ್ಟ ಪ್ರಶಸ್ತಿಗಳನ್ನು, ಬಹುಮಾನಗಳನ್ನು ತಮ್ಮ ಕೃತಿಗಳಿಗಾಗಿ ಪಡೆದಿದ್ದಾರೆ. ಡಾ. ಹಿ.ಚಿ. ಬೋರಲಿಂಗಯ್ಯ ಅವರು ಈ ವರ್ಷದಿಂದ ೩ ವರ್ಷಗಳವರೆಗೆ ದಕ್ಷಿಣ ವಲಯ ಸಾಂಸ್ಕೃತಿಕ  ಕೇಂದ್ರ, ತಂಜಾವೂರು ಇದರ ಸದಸ್ಯರಾಗಿದ್ದಾರೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ತಿಳಿವ ತೇಜದ ಮುಂದೆ ಕೃತಿಗೆ ೨೦೦೨ನೆಯ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಹಾಗೂ ಆರ್ಯಭಟ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಡಾ. ರಹಮತ್ ತರೀಕೆರೆ ಅವರು ಅಂಡಮಾನ್ ಕನಸು ಪ್ರವಾಸ ಕಥನಕ್ಕೆ ೨೦೦೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪಡೆದಿದ್ದಾರೆ. ಡಾ. ಕೆ.ಕೆ. ಮಾಧವ ಪರಾಜೆ ಅವರ ಯಕ್ಷಗಾನ ತಾಳಮದ್ದಲೆ ನಮ್ಯೋತ್ತರ ಸಂಕಥನ ಕೃತಿಗೆ ಗುಂಡ್ಮಿ ಚಂದ್ರಶೇಖರ ಐತಾಳ ಜಾನಪದ ಪ್ರಶಸ್ತಿ ಪಡೆದಿದ್ದಾರೆ. ಶ್ರೀ ಮೊಗಳ್ಳಿ ಗಣೇಶ್ ಅವರ ಭೂಮಿ ಕಥಾ ಸಂಕಲನಕ್ಕೆ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಹಾಗೂ ಯು.ಆರ್. ಅನಂತಮೂರ್ತಿ ಪ್ರಶಸ್ತಿಯನ್ನು ಪಡೆದು ಇವರೆಲ್ಲ ವಿಶ್ವವಿದ್ಯಾಲಯಕ್ಕೆ ಹೆಸರು ತಂದಿದ್ದಾರೆ.

ವಿಶ್ವವಿದ್ಯಾಲಯದ ಇದುವರೆಗಿನ ಪ್ರಗತಿಗೆ ನೈತಿಕವಾಗಿ, ಸಂಪತ್ತಿಕವಾಗಿ ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ನೆರವು ನೀಡಿದ ಔದಾರ್ಯ ನಿಧಿಗಳಾದ ಎಲ್ಲ ಮಹನೀಯರನ್ನು, ಇದರ ಅಭಿವೃದ್ಧಿಯ ಬಗ್ಗೆ ಆಶಾವಾದಿಗಳಾಗಿದ್ದು, ಸೃಜನಶೀಲ ಮತ್ತು ಕ್ರಿಯಾಶೀಲ ಸಲಹೆಗಳನ್ನು ನೀಡುತ್ತಿರುವ ಎಲ್ಲ ಹಿರಿಯರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನೆಯುತ್ತ ಅವರಿಗೆ ನೂರು ನಮನಗಳನ್ನು ಅರ್ಪಿಸುತ್ತಿದ್ದೇನೆ. ಹಾಗೆಯೇ ಕರ್ನಾಟಕ ಸರ್ಕಾರ ಕನ್ನಡ ನಾಡಿನ ಸಾಂಸ್ಕೃತಿಕ ಜೀವನಾಡಿಯಾಗಿರುವ ಈ ವಿಶ್ವವಿದ್ಯಾಲಯ ಮತ್ತಷ್ಟು ಉತ್ಕೃಷ್ಟವಾಗಲು ಪ್ರತಿವರ್ಷ ಕನಿಷ್ಟ ೬ ಕೋಟಿ ರೂಪಾಯಿಗಳ ಅನುದಾನವನ್ನು ನೀಡಬೇಕೆಂದು ಮತ್ತು ನಮ್ಮ ಶಿಕ್ಷಣ ತಜ್ಞರೂ ಹಾಗೂ ಆಡಳಿತ ದಕ್ಷರೂ ಆದ ಉನ್ನತ ಶಿಕ್ಷಣ ಸಚಿವರು ಇದನ್ನು ಪೂರೈಸಿ ಕೊಡಬೇಕೆಂದು ಭಿನ್ನವಿಸುತ್ತೇನೆ. ಇದೇ ಸಂದರ್ಭದಲ್ಲಿ ಎಂಟು ಹತ್ತು ವರ್ಷಗಳಿಂದ ಕೇವಲ ಕ್ರೋಢಿಕೃತ ನೌಕರರಾಗಿ ಅತಂತ್ರ ಸ್ಥಿತಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯವರನ್ನು ಖಾಯಂಗೊಳಿಸಬೇಕೆಂದು ಶಿಕ್ಷಣ ಸಚಿವರನ್ನು ವಿನಂತಿಸುತ್ತೇನೆ.

ಈ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ನಡೆದು ಬಂದಿರುವ ದಾರಿ ವಿಶಿಷ್ಟವಾದುದಾಗಿದೆ. ಆದರೆ, ನಾವು ಕ್ರಮಿಸಬೇಕಾದ ಹಾದಿ ಸಾಕಷ್ಟು ದೀರ್ಘವಾಗಿದೆ ಮತ್ತು ಮುಟ್ಟಬೇಕಾದ ಸಾಧನೆಯ ಶಿಖರಗಳು ಇನ್ನೂ ನೂರಾರಿವೆ ಎಂಬುದನ್ನು ವಿನಯಪೂರ್ವಕವಾಗಿ ಭಿನ್ನವಿಸಿಕೊಳ್ಳುತ್ತೇನೆ. ತಮ್ಮ ವಿಶಿಷ್ಟ ಪ್ರತಿಭೆ ಮತ್ತು ಪರಿಶ್ರಮಗಳಿಂದ ಹಾಗೂ ಅಸಾಧಾರಣವಾದ ಆಡಳಿತ ದಕ್ಷತೆಯಿಂದ ಭಾರತದ ಹತ್ತಾರು ಹುದ್ದೆಗಳನ್ನು ಅರ್ಥಪೂರ್ಣವಾಗಿ ಅಲಂಕರಿಸಿ ಆ ಸ್ಥಾನಗಳಿಗೆ ಮಹತ್ತರವಾದ ಶೋಭೆಯನ್ನು, ಅನನ್ಯತೆಯನ್ನು ತಂದುಕೊಟ್ಟು ಎಲ್ಲರ ಪ್ರೀತಿ, ಗೌರವಗಳಿಗೆ ಪಾತ್ರವಾಗಿರುವ ವಿದ್ವತ್‌ಪ್ರಿಯರು, ಸಂಸ್ಕೃತಿಪ್ರಿಯರು, ಪ್ರಗತಿಪರರು ಆದಂತಹ ಕರ್ನಾಟಕ ಗೌರವನ್ವಿತ ರಾಜ್ಯಪಾಲರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಟಿ.ಎನ್. ಚತುರ್ವೇದಿ ಅವರು ಈ ಘಟಿಕೋತ್ಸವದಲ್ಲಿ ಭಾಗವಹಿಸಿ ಪಿಎಚ್‌.ಡಿ. ಮತ್ತು ಡಿ.ಲಿಟ್. ಪದವಿಗಳನ್ನು ಹಾಗೂ ನಾಡೋಜ ಪ್ರಶಸ್ತಿಗಳನ್ನು ವಿತರಿಸಲು ಸಂತೋಷದಿಂದ ಒಪ್ಪಿಕೊಂಡು ಆಗಮಿಸಿರುವುದಕ್ಕಾಗಿ ಅವರನ್ನು ಹೃದಯದುಂಬಿ ವಿನಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಹಾಗೆಯೇ ಕರ್ನಾಟಕ ಕಂಡ ಶ್ರೇಷ್ಠ ಶಿಕ್ಷಣ ಸಚಿವರಲ್ಲಿ, ದಕ್ಷ ಮತ್ತು ಪಾರದರ್ಶಕ ಆಡಳಿತಗಾರರಲ್ಲಿ ಒಬ್ಬರಾದ ದೂರದರ್ಶಿತ್ವ ಮತ್ತು ಯೋಜನಾಶೀಲತೆಗಳನ್ನು ಮೈಗೂಡಿಸಿಕೊಂಡಿರುವ ನಮ್ಮ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ. ಜಿ. ಪರಮೇಶ್ವರ ಅವರನ್ನು ಈ ಮಹತ್ವದ ಸಮಾರಂಭಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಈ ವರ್ಷ ನಮ್ಮ ಕರೆಗೆ ಓಗೊಟ್ಟು ನಮ್ಮ ವಿಶ್ವವಿದ್ಯಾಲಯದ ಸರ್ವಶ್ರೇಷ್ಠ ಪ್ರಶಸ್ತಿಯಾದ ನಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ಬಂದಿರುವ ಅಂತರಾಷ್ಟ್ರೀಯ ಖ್ಯಾತೀಯ ನೂರಾರು ವಿಶಿಷ್ಟ ಸಾಧನೆಗಳ ಕರ್ನಾಟಕದ ಮಹಾ ವಿಜ್ಞಾನಿ ಪ್ರೊ. ಸಿ.ಎನ್.ಆರ್.ರಾವ್. ಅವರನ್ನು, ಕರ್ನಾಟಕದ ಹಲವಾರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ತಾವು ಏರಿದ ಪ್ರತಿಸ್ಥಾನಕ್ಕೂ ತಮ್ಮ ದಕ್ಷ, ಪಾರದರ್ಶಕ, ಸಮಾಜಮುಖಿ ಆಡಳಿತದಿಂದ ಜನಮಾನಸದಲ್ಲಿ ಹಸಿರಾಗಿರುವ ಹಾಗೂ ತಮ್ಮ ಏಕವ್ಯಕ್ತಿ ಸಾಹಸದಿಂದ ಏಷಿಯಾ, ಖಂಡದಲ್ಲಿ ಅಭೂತಪೂರ್ವ ಎನಿಸಿರುವ ಜಾನಪದ ವಸ್ತುಸಂಗ್ರಹಾಲಯ, ಜಾನಪದ ಲೋಕವನ್ನು ನಿರ್ಮಿಸಿ ಪ್ರಪಂಚದ ಜಾನಪದಾಸಕ್ತರ ಕಣ್ಣನ್ನು ರಾಮನಗರದ ಕಡೆಗೆ ತಿರುಗಿಸಿದ ಮಹಾ ಕನಸುಗಾರ, ಜಾನಪದ ವಿದ್ವಾಂಸ, ಹಿರಿಯ ಸಾಹಿತಿ ಶ್ರೀ ಎಚ್.ಎಲ್. ನಾಗೇಗೌಡ ಅವರನ್ನು ಮತ್ತು ಕನ್ನಡ ನಾಡಿನ ಶ್ರೇಷ್ಠ ಕವಿಗಳಲ್ಲಿ, ವಿಶಿಷ್ಟ ಚಿಂತಕರಲ್ಲಿ, ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ತಮ್ಮ ಕೃತಿಗಳ ಮೂಲಕ ಅನಾದೃಶ್ಯವಾಗಿ ಅಭಿವ್ಯಕ್ತಿಸಿರುವ ಚಿಂತನಶೀಲ ಕವಿ ಶ್ರೇಷ್ಠ ಶ್ರೀ ಚೆನ್ನವೀರಕಣವಿ ಅವರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ, ಅಖಂಡ ಕರ್ನಾಟಕದ ಸಮಸ್ತ ಸಂಸ್ಕೃತಿ ಚಿಂತಕರ ಪರವಾಗಿ, ಶಿಕ್ಷಣ ಲೋಕದ ಪರವಾಗಿ ಈ ವಿಶಿಷ್ಟ ಸಮಾರಂಭಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಪ್ರಗತಿಗೆ ಮೂಲ ಸೆಲೆಯಾಗಿರುವ ಸಮಸ್ತರನ್ನು ಮತ್ತು ಇಲ್ಲಿ ಉಪಸ್ಥಿತರಿರುವ ಸರ್ವರನ್ನು, ವಿಶ್ವವಿದ್ಯಾಲಯದ ನನ್ನ ಎಲ್ಲ ಸಹೋದ್ಯೋಗಿಗಳ, ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಪರವಾಗಿ ಮತ್ತು ವೈಯಕ್ತಿಕವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

೧೮ ಡಿಸೆಂಬರ್ ೨೦೦೨