ಕೋಟಿ ಕೋಟಿ ಕನ್ನಡಿಗರ ಹಲವು ವರ್ಷಗಳ ಅಭೀಪ್ಸೆ ಮತ್ತು ಪ್ರಯತ್ನಗಳಿಂದಾಗಿ ಈ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕನ್ನಡ ವಿಶ್ವವಿದ್ಯಾಲಯ ಆರಂಭಗೊಂಡು ಇದೀಗ ೧೨ ವರ್ಷಗಳು ತುಂಬುತ್ತಿವೆ. ಈ ಸಂತೋಷದ, ಸಂಭ್ರಮದ ಸಂದರ್ಭದಲ್ಲಿ ಜರುಗುತ್ತಿರುವ ೧೨ನೆಯ ನುಡಿಹಬ್ಬಕ್ಕೆ ಆಗಮಿಸಿರುವ ಘನತೆವೆತ್ತ ಕರ್ನಾಟಕದ ರಾಜ್ಯಪಾಲರೂ ಕುಲಾಧಿಪತಿಗಳೂ, ಆಡಳಿತದ ನಾನಾ ಶ್ರೇಣಿಗಳಲ್ಲಿ ಅಪರೂಪದ ದಕ್ಷತೆಯನ್ನು ಮೆರೆದು ಸರ್ವರ ಗೌರವಕ್ಕೆ ಪಾತ್ರರಾದ ಆದರಣೀಯ ಶ್ರೀ ಟಿ.ಎನ್. ಚರ್ತುವೇದಿ ಅವರೇ, ವಿಶ್ವ ವಿದ್ಯಾಲಯಗಳ ಸಮ ಕುಲಾಧಿಪತಿಗಳೂ ಶ್ರೇಷ್ಠ ಶಿಕ್ಷಣ ತಜ್ಞರೂ ಮತ್ತು ದಕ್ಷ ಆಡಳಿತಗಾರರೂ ಆದ ಸನ್ಮಾನ್ಯ ಡಾ. ಜಿ. ಪರಮೇಶ್ವರ ಅವರೇ, ಕಾನೂನು ಕ್ಷೇತ್ರದಲ್ಲಿ ಮಹಾತಜ್ಞರಾದ, ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರೂ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅಪಾರವಾದ ಒಲವುಳ್ಳ ವಿಚಾರವಂತರಾದ ಸನ್ಮಾನ್ಯ ಶ್ರೀ ವಿ.ಎಸ್. ಮಳೀಮಠ ಅವರೇ, ನಮ್ಮ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿಭೂಷಿತರಾಗಲಿರುವ ನಾಡಿನ ಸುಪ್ರಸಿದ್ಧ ಕವಿಗಳೂ ನಾಟಕಕಾರರೂ ಮತ್ತು ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳೂ ಆದ ಡಾ. ಚಂದ್ರಶೇಖರ ಕಂಬಾರ ಅವರೇ, ಕನ್ನಡ ಕಂಡ ಅಪುರೂಪದ ಭಾವಶೀಲ ಮತ್ತು ಚಿಮತನಶೀಲ ಕವಿಗಳಾದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರೇ, ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯಗಳ ಕ್ರಿಯಾಶೀಲ ಅಭಿವೃದ್ಧಿಯ ಬಗ್ಗೆ ನಾಲ್ಕು ದಶಕಗಳಿಗಿಂತಲೂ ಅಧಿಕ ಕಾಲದಿಂದ ಸದ್ದುಗದ್ದಲವಿಲ್ಲದೆ ದುಡಿಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರರಾದ ಸನ್ಮಾನ್ಯ ಶ್ರೀ ಜಿ. ನಾರಾಯಣ ಅವರೇ, ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಸಹಜಕೃತಿಯ ಬಗ್ಗೆ ವಿನೂತನವಾದ ಪ್ರಯೋಗಗಳನ್ನು ಮಾಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವ ಕೃಷಿ ವಿಜ್ಞಾನಿ ಶ್ರೀ ಎಲ್. ನಾರಾಯಣರೆಡ್ಡಿ ಅವರೇ, ಕನ್ನಡ ರಂಗಭೂಮಿಯಲ್ಲಿ ತಮ್ಮ ಸಿರಿಕಂಠದಿಂದ ಮತ್ತು ಅದ್ಭುತ ವೈವಿಧ್ಯಮಯ ಪಾತ್ರಧಾರಿಯಾಗಿ ಕರ್ನಾಟಕದಲ್ಲಿ ಮನೆಮಾತಾಗಿರುವ ಸುಪ್ರಸಿದ್ದ ಕಲಾವಿದೆ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರೇ ಮತ್ತು ಕನ್ನಡ ಸಣ್ಣಕತೆ, ಮತ್ತು ಕಾದಂಬರಿ ಕ್ಷೇತ್ರಗಳಲ್ಲಿ ಮತ್ತು ವಿಶೇಷವಾಗಿ ದಲಿತ ಹಾಗೂ ಸ್ತ್ರೀ ಜೀವನ ಚಿತ್ರಣದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಾಗೂ ಉತ್ತರ ಕರ್ನಾಟಕದ ಹಳ್ಳಿಯ ಭಾಷೆಯ ಜೀವಂತಿಕೆ ಮತ್ತು ಅರ್ಥವಂತಿಕೆಗಳನ್ನು ತಮ್ಮ ಕೃತಿಗಳಲ್ಲಿ ಸಮರ್ಥವಾಗಿ ದುಡಿಸಿಕೊಂಡಿರುವ ಖ್ಯಾತ ಲೇಖಕಿ ಶ್ರೀಮತಿ ಗೀತಾ ನಾಗಭೂಷಣ ಅವರೇ, ನಮ್ಮ ವಿಶ್ವವಿದ್ಯಾಲಯದ ಕಾರ್ಯಕಾರಿ ಮತ್ತು ಆಡಳಿತ ಮಂಡಳಿಯ ಸನ್ಮಾನ್ಯ ಸದಸ್ಯರೇ, ಗೌರವಾನ್ವಿತ ಅತಿಥಿ ಬಂಧುಗಳೇ, ಶಾಸಕರೇ, ಈ ಅನನ್ಯ ವಿಶ್ವವಿದ್ಯಾಲಯದ ಕ್ಷಿಪ್ರ ಪ್ರಗತಿಯಲ್ಲಿ ಕ್ರಿಯಾಪೂರ್ಣವಾದ ಪಾತ್ರವನ್ನು ವಹಿಸಿದ ಎಲ್ಲ ಮಹನೀಯರೇ, ಮಹಿಳೆಯರೇ, ಸರ್ವ ಸುದ್ದಿ ಮಾಧ್ಯಮಗಳ ಆತ್ಮೀಯ ಗೆಳೆಯರೇ ಹಾಗೂ ಈ ವಾರ್ಷಿಕ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಗಳಾಗಿ ಡಿ.ಲಿಟ್., ಪಿಎಚ್.ಡಿ., ಮತ್ತು ಎಂ.ಫಿಲ್. ಪದವಿಗಳನ್ನು ಪಡೆಯಲಿರುವ ಎಲ್ಲ ವಿದ್ವಾಂಸರೆ, ತಮ್ಮೆಲ್ಲರನ್ನೂ ಈ ನುಡಿಹಬ್ಬದ ಸಮಾರಂಭಕ್ಕೆ ಗೌರವಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.

ತಮ್ಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಈ ಕನ್ನಡ ವಿಶ್ವವಿದ್ಯಾಲಯ ಭಾರತದಲ್ಲೇ ಒಂದು ಅನನ್ಯ ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದೆ. ತನ್ನ ಪರಿಸರದ ಮತ್ತು ಮೂಲದ ದೇಶೀಯ ಸಂಸ್ಕೃತಿಯನ್ನು ಎಲ್ಲ ನಿಟ್ಟುಗಳಲ್ಲಿ ಸಂರಕ್ಷಿಸುತ್ತಲೇ ಅಭಿವೃದ್ಧಿ ಪಡಿಸುತ್ತಲೇ ರಾಷ್ಟ್ರದ ಮತ್ತು ವಿಶ್ವದ ಎಲ್ಲ ಜ್ಞಾನ ವಿಜ್ಞಾನಗಳ ಬೆಳಕುಗಳನ್ನು ತನ್ನೊಳಗೆ ಆಹ್ವಾನಿಸುತ್ತ, ತನ್ನಲ್ಲಿ ಸಂಲಗ್ನಗೊಳಿಸುತ್ತ, ಅದರ ಫಲಿತಗಳನ್ನು ದಿಕ್ಕು ದಿಕ್ಕಿಗೆ ಎತ್ತಿ ಹಿಡಿಯುವ ಮಹಾನ್ ಕಾಯಕದೊಡನೆ ಈ ವಿಶ್ವವಿದ್ಯಾಲಯ ಆರಂಭವಾಗಿದೆ. ಕನ್ನಡ ಪ್ರಜ್ಞೆಯನ್ನು ವಿಶ್ವ ಪ್ರಜ್ಞೆಯನ್ನಾಗಿಸಿ ಮತ್ತು ವಿಶ್ವ ಪ್ರಜ್ಞೆಯನ್ನು ಕನ್ನಡ ಪ್ರಜ್ಞೆಯನ್ನಾಗಿಸಿ ಕನ್ನಡ ಭಾಷೆಯ ಮೂಲಕ ಕನ್ನಡಿಗರಿಗೆ ದಕ್ಕಿಸಿಕೊಡುವ ವಿಶಿಷ್ಟ ಉನ್ನತ ಧ್ಯೇಯದೊಡನೆ ಆರಂಭವಾದ ಈ ವಿಶ್ವವಿದ್ಯಾಲಯ ತನ್ನ ಈ ಗುರುತರ ಹೊಣೆಯನ್ನು ಧಾರಣ ಮಾಡಿಕೊಂಡು ಈ ೧೨ ವರ್ಷಗಳ ಅವಧಿಯನ್ನು ಸಾರ್ಥಕವಾಗಿ ಕ್ರಮಿಸಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ. ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು ಮತ್ತು ಕನ್ನಡ ವಿಶ್ವವಿದ್ಯಾಲಯ ನೋಡಿದಲ್ಲದೆ ಸಮಗ್ರ ಕರ್ನಾಟಕದ ವಿಶಿಷ್ಟ ದರ್ಶನ ಪರಿಪೂರ್ಣವಾಗದು ಎಂಬಂತೆ ಈ ಮಹಾನ್ ಸಂಸ್ಥೆಯನ್ನು ರೂಪುಗೊಳಿಸುವ ಅರ್ಥಪೂರ್ಣ ದೀಕ್ಷೆಯನ್ನು ನಾವು ವಹಿಸಿದ್ದೇವೆ.

ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷಾಧ್ಯಯನ, ಕನ್ನಡ ಸಾಹಿತ್ಯಾಧ್ಯಯನ, ದ್ರಾವಿಡ ಸಂಸ್ಕೃತಿ ಅಧ್ಯಯನ, ಮಹಿಳಾ ಅಧ್ಯಯನ, ಅಭಿವೃದ್ಧಿ ಅಧ್ಯಯನ, ಭಾಷಾಂತರ ಅಧ್ಯಯನ, ಜಾನಪದ, ಬುಡಕಟ್ಟು, ಶಾಸನ, ಹಸ್ತಪ್ರತಿ, ಇತಿಹಾಸ, ಪುರಾತತ್ವ, ವಿಜ್ಞಾನ ಇತಿಹಾಸ, ಸಂಗೀತ ಮತ್ತು ನೃತ್ಯ, ಚಿತ್ರಕಲೆ, ಶಿಲ್ಪಕಲೆ, ವಿಜ್ಞಾನ, ವಿಭಾಗಗಳು ಅಸ್ತಿತ್ವದಲ್ಲಿದ್ದು, ತಮ್ಮ ತಮ್ಮ ವಿಷಯಗಳಲ್ಲಿ ವಿಶಿಷ್ಟವೂ ನವೀನವೂ ಆದ ಸಂಶೋಧನೆಗಳನ್ನು ಕೈಗೊಂಡಿವೆ.

“ಮಾತೆಂಬುದು ಜ್ಯೋತಿರ್ಲಿಂಗ” ಎಂಬ ಧ್ಯೇಯ ವಾಕ್ಯವನ್ನು ಧಾರಣೆ ಮಾಡಿರುವ ನಮ್ಮ ವಿಶ್ವವಿದ್ಯಾಲಯ ಕನ್ನಡ ಭಾಷೆಯನ್ನು ಸಮಗ್ರ ಕನ್ನಡಿಗರ ಬದುಕನ್ನು ಕಟ್ಟಿಕೊಡುವಂತೆ ಸಮರ್ಥಗೊಳಿಸುವ ಮತ್ತು ಕನ್ನಡ ಬದುಕು ವಿಶ್ವ ವಿಸ್ತೃತವಾಗುವಂತೆ ಮಾಡುವ ಗುರಿಗಳನ್ನು ಮುಟ್ಟುವ ದಾರಿಯಲ್ಲಿ ಆಶಾದಾಯಕವಾಗಿ ಕ್ರಮಿಸುತ್ತದೆ. ಇದರಿಂದಾಗಿ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಜಾನಪದ, ಮುಂತಾದ ನೆಲೆಗಳಲ್ಲಿ ಕಣ್ಣು ಕೋರೈಸುವ ಹೊಸ ಫಲಿತಗಳನ್ನು ಹಡೆಯುತ್ತ, ಸಮಗ್ರ ಕನ್ನಡದ ಸಮೃದ್ಧಿಯನ್ನು ಹೆಚ್ಚಿಸುತ್ತಿವೆ. ಮೇಲೆ ಉಲ್ಲೇಖಿಸಿದ ವಿಭಾಗಗಳಲ್ಲದೆ ವಿಶಿಷ್ಟ ಕ್ಷೇತ್ರದ ಅಧ್ಯಯನಕ್ಕೆ ಒತ್ತುಕೊಡುವ ಅಧ್ಯಯನ ಪೀಠಗಳನ್ನು ಪ್ರಾರಂಭಿಸುವ ಮೂಲಕ ಆ ಕ್ಷೇತ್ರದ ಸೂಕ್ಷ್ಮವಾದ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗಳಿಗೆ ಹೊಸ ದಾರಿಯನ್ನು ಕಲ್ಪಿಸಲಾಗಿದೆ. ಈ ದಿಸೆಯಲ್ಲಿ ಈಗಾಗಲೇ ಲೋಹಿಯಾ ಅಧ್ಯಯನ ಪೀಠ, ದಲಿತ ಅಧ್ಯಯನ ಪೀಠ, ಪುರಂದರದಾಸ ಅಧ್ಯಯನ ಪೀಠ, ಡಾ. ಶಂಬಾ ಜೋಶಿ ಅಧ್ಯಯನ ಪೀಠ ಮತ್ತು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಅಧ್ಯಯನ ಪೀಠ ಹಾಗೂ ವಾಲ್ಮೀಕಿ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗಿದೆ. ಮುಂದಿನ ತಿಂಗಳು ಜೈನ ಸಂಸ್ಕೃತಿ ಅಧ್ಯಯನ ಪೀಠ ಉದ್ಘಾಟನೆಯಾಗಲಿದೆ. ಈ ಪೀಠಗಳು ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಜೊತೆಗೆ ಬದುಕಿಗೆ ನೇರವಾಗಿ ಸಂಬಂಧಿಸಿದ ಜ್ವಲಂತ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ದಾರಿ ಮಾಡಿಕೊಡುತ್ತಲಿವೆ.

ಇದುವರೆಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ೧೨೩ ವಿದ್ಯಾರ್ಥಿಗಳು ಪಿ.ಎಚ್.ಡಿ. ಪದವಿಯನ್ನು, ೧೧೧ ವಿದ್ಯಾರ್ಥಿಗಳು ಎಂ.ಫಿಲ್. ಪದವಿಯನ್ನು ಹಾಗೂ ೧೫ ಜನ ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ. ಇದುವರೆಗೆ ೨೦೦ ಜನ ಪಿ.ಎಚ್.ಡಿ.ಗೆ ನೋಂದಣಿ ಮಾಡಿಸಿದ್ದು, ಈ ದಿನ ೪೪ ಜನ ಪಿಎಚ್.ಡಿ. ಪದವಿ ಮತ್ತು ಇಬ್ಬರು ಡಿ.ಲಿಟ್ ಪದವಿ ಹಾಗೂ ೨೩ ಜನ ಎಂ.ಫಿಲ್. ಪದವಿಯನ್ನು ಪಡೆಯಲಿದ್ದಾರೆ. ಈ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದು ದೊಡ್ಡ ಸಂಖ್ಯೆಯಾಗಿದ್ದು, ಪ್ರೌಢ ಸಂಶೋಧನಾಸಕ್ತರ, ಗಮನ, ಗೌರವಗಳನ್ನು ಇದು ಅಧಿಕ ಪ್ರಮಾಣದಲ್ಲಿ ಗಳಿಸಿಕೊಳ್ಳುತ್ತಿರುವುದರ ದ್ಯೋತಕವಾಗಿದೆ.

ಇದುವರೆಗೆ ಸಂಶೋಧನೆಯನ್ನೇ ತನ್ನ ಪ್ರಥಮ ಮತ್ತು ಅಂತಿಮ ಗುರಿಯಾಗಿ ಅವಲಂಬಿಸಿದ್ದ ನಮ್ಮ ವಿಶ್ವವಿದ್ಯಾಲಯ ಇದೀಗ ಶೋಧನೆಯ ಜೊತೆಗೆ ಬೋಧನೆಯ ದಾರಿಯನ್ನು ಒಳಗೊಳ್ಳುತ್ತಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ. ಇತರ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾಗದಿರುವ ಅಸಾಂಪ್ರದಾಯಕವಾದ, ಆದರೆ, ಆಧುನಿಕ ಬದುಕಿಗೆ ಅಗತ್ಯವಾದ ಜ್ಞಾನವನ್ನು ಒದಗಿಸುವ ದೂರಶಿಕ್ಷಣ ವಿಧಾನದ ೭ ಡಿಪ್ಲೋಮಾ ಅಧ್ಯಯನಗಳನ್ನು ಕಳೆದ ವರ್ಷ ಆರಂಭಿಸಲಾಗಿದೆ. ಬೇರೆ ಬೇರೆ ಉದ್ಯೋಗಗಳಲ್ಲಿದ್ದೂ ಹೊಸ ಜ್ಞಾನ ದಿಗಂತಗಳನ್ನು ದರ್ಶಿಸಬೇಕೆನ್ನುವ, ಸ್ಪರ್ಶಿಸಬೇಕೆನ್ನುವ ಜ್ಞಾನದಾಹಿಗಳಿಗೆ ಅತ್ಯಂತ ಉಪಯುಕ್ತವಾಗಿವೆ. ಆರಂಭದ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯಿಂದಾಗಿ ಈ ವರ್ಷ ಜನಪದ ಸಂಗೀತ, ಜನಪದ ಕರಕುಶಲ ಕಲೆಗಳು, ನಾಟಕ ಕಲೆ, ಅಭಿವೃದ್ಧಿ ಸಂವಹನ, ಪಾರಂಪರಿಕ ಜ್ಞಾನ, ಬುಕಡಟ್ಟು ಅಧ್ಯಯನ, ಭಾಷಾಂತರ ಅಧ್ಯಯನ ಡಿಪ್ಲೋಮಾ ತರಗತಿಗಳಲ್ಲದೆ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಪದವಿ ತರಗತಿಗಳೂ ಆರಂಭವಾಗಿದ್ದು ಈ ವರ್ಷ ಸ್ನಾತಕೋತ್ತರ ಚಿತ್ರಕಲೆ ಮತ್ತು ಸಂಗೀತ ಕೋರ್ಸ್‌‌ಗಳನ್ನು ಆರಂಭಿಸಲಾಗಿವೆ. ಬಾದಾಮಿಯ ಕೇಂದ್ರದಲ್ಲಿ ಶಿಲ್ಪಕಲೆ ಮತ್ತು ಚಿತ್ರಕಲೆಗಳಲ್ಲಿ ೫ ವರ್ಷದ ಪದವಿ ತರಗತಿಗಳನ್ನು ಆರಂಭ ಮಾಡಿರುವುದರಿಂದ ಈ ಕಲೆಗಳ ಅಭ್ಯಾಸಿಗಳಿಗೆ ಹಾಗೂ ಆ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಅರಸಬೇಕೆನ್ನುವವರಿಗೆ ಆಶಾದಾಯಕವಾದ ಮಾರ್ಗವೊಂದು ತೆರೆದಂತಾಗಿದೆ. ಹೊಸ ಕಾಲದ ಅಗತ್ಯಗಳಿಗೆ ಮತ್ತು ಅಭೀಪ್ಸೆಗಳಿಗೆ ತಕ್ಕಂತೆ ಪದವಿ ತರಗತಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಮತ್ತು ನವೀನ ಜ್ಞಾನ ಶಾಖೆಗಳನ್ನು ಅಂತರ್‌ಶಿಸ್ತೀಯವಾಗಿ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸುವುದು ವಿದ್ಯಾರ್ಥಿಗಳ ಮಾನಸಿಕ ಜ್ಞಾನ ವಿಕಾಸದ ದೃಷ್ಟಿಯಿಂದ ಅತ್ಯವಶ್ಯಕವೆಂಬುದನ್ನು ಮನಗಂಡು ಎಂ.ಎ., ಪಿ.ಎಚ್.ಡಿ. (೪ ವರ್ಷಗಳ ಸಂಯೋಜಿತ ಅಧ್ಯಯನ)ಯನ್ನು ಕನ್ನಡ ಸಾಹಿತ್ಯ, ಜಾನಪದ ಮತ್ತು ಮಹಿಳಾ ಅಧ್ಯಯನ ವಿಷಯಗಳನ್ನು ನಮ್ಮ ಕನ್ನಡ, ಚೆಲುವ ಕನ್ನಡ, ಪುಸ್ತಕ ಮಾಹಿತಿ, ವಿಜ್ಞಾನ ಸಂಗಾತಿ ನಿಯತಕಾಲಿಕೆಗಳನ್ನು ಪ್ರಕಟವಾಗುತ್ತಿದ್ದು ಇವುಗಳ ಜೊತೆಗೆ ಜಾನಪದ ಕರ್ನಾಟಕ, ಅಭಿವೃದ್ಧಿ ಅಧ್ಯಯನ, ದ್ರಾವಿಡ ಅಧ್ಯಯನ, ಬುಡಕಟ್ಟು ಅಧ್ಯಯನ, ಶಾಸನ ಅಧ್ಯಯನ, ಹಸ್ತಪ್ರತಿ ಅಧ್ಯಯನ ಎಂಬ ಆರು ನಿಯತಕಾಲಿಕೆಗಳನ್ನು ಪ್ರಕಟಸಿಲಾಗುತ್ತಿದ್ದು, ಅವೆಲ್ಲ ಆಯಾ ಕ್ಷೇತ್ರದ ಓದುಗರಿಗೆ ಅತ್ಯಂತ ಪ್ರಿಯವಾಗಿವೆ. ಇವು ಆಯಾ ಕ್ಷೇತ್ರದ ಸಂಶೋಧಕರ ವಿಶಿಷ್ಟ ಬಗೆಯ ಹೊಸ ಬರಹಗಳನ್ನು ಪ್ರಕಟಿಸುವ ಮೂಲಕ ಕನ್ನಡ ಜ್ಞಾನ ಬಹುಮುಖವಾಗಿ ಅರಳಲು ಸಾಧನವಾಗಿವೆ. ಇದೇ ವರ್ಷ ಪಿ.ಯು.ಸಿ. ತರಗತಿಯಿಂದ ಹಿಡಿದು ಸ್ನಾತಕೋತ್ತರ ತರಗತಿವರೆಗೆ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಕಲಿಯಲು ಸಾಧ್ಯವಾಗುವಂತೆ ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವಿಕಗಳಲ್ಲಿ ಪೂರಕ ಪಠ್ಯಗಳನ್ನು ಪರಿಣಿತರಿಂದ ಬರೆಯಿಸಿ ಪ್ರಕಟಿಸಲು ಪಠ್ಯಪುಸ್ತಕ ವಿಭಾಗವನ್ನು ಮತ್ತು ವಿಜ್ಞಾನ ಲೋಕದ ಅಮಿತ ಸಾಧನೆಗಳನ್ನು ಸಾದರ ಪಡಿಸುವ ವಿಜ್ಞಾನ ಇತಿಹಾಸಕ್ಕೆ ಸಂಬಂಧಿಸಿದ ವಿಜ್ಞಾನ ಇತಿಹಾಸ ವಿಭಾಗವನ್ನು ಆರಂಭಿಸಲಾಗುತ್ತಿದೆ.

ವಿಶ್ವವಿದ್ಯಾಲಯದ ಅತ್ಯಂತ ಪ್ರಮುಖ ಭಾಗಗಳಲ್ಲಿ ಒಂದಾದ ಪ್ರಸಾರಾಂಗ ಇದುವರೆಗೆ ಬಗೆ ಬಗೆಯ ಜ್ಞಾನ ಕ್ಷೇತ್ರಗಳ ಅರಿವನ್ನು ಸಂಚಯಿಸುವ, ಪ್ರಸಾರ ಮಾಡುವ ಸುಮಾರು ೮೦೦ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಪ್ರಕಟಣಾ ಇತಿಹಾಸದಲ್ಲಿ ಒಂದು ಹೆದ್ದಾರಿಯನ್ನೇ ತೆರೆದಿದೆ ಎಂಬುದು ಅಭಿಮಾನದ ಸಂಗತಿಯಾಗಿದೆ. ಪಿ.ಯು.ಸಿ. ಮತ್ತು ಪದವಿ ತರಗತಿಗಳಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಕಲಿಸಲು ಅನುಕೂಲವಾಗುವಂತೆ ಕನ್ನಡ ವಿಜ್ಞಾನ ಪಠ್ಯಗಳನ್ನು ತಯಾರಿಸಲು ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯವನ್ನು ಕೋರಿದ್ದು, ಈಗಾಗಲೇ ಪಿ.ಯು.ಸಿ. ಮಟ್ಟದ ಎಂಟು ವಿಜ್ಞಾನ ಪಠ್ಯಗಳನ್ನು ಪರಿಣಿತರಿಂದ ಸಿದ್ಧಪಡಿಸಲಾಗಿದೆ; ವಿಜ್ಞಾನದ ಈಚಿನ ಬೆಳವಣಿಗೆಯನ್ನು ಕುರಿತ ವಿಜ್ಞಾನ ಇತಿಹಾಸ, ವಿಜ್ಞಾನಿಗಳ ಇತಿಹಾಸ ಬೃಹತ್ ಸಂಪುಟಗಳ ಸಿದ್ಧವಾಗುತ್ತಿವೆ. ಪ್ರಾಥಮಿಕ ತರಗತಿಯಿಂದ ಸ್ನಾತಕೋತ್ತರ ತರಗತಿಗಳವರೆಗೆ ಉಪಯುಕ್ತವಾಗುವ ವಿಜ್ಞಾನ ಮತ್ತು ಸಮಾಜವಿಜ್ಞಾನ ಗ್ರಂಥಗಳ ಸಿದ್ಧತೆಗಾಗಿ ಪ್ರತ್ಯೇಕ ಪಠ್ಯಪುಸ್ತಕ ರಚನಾ ವಿಭಾಗವನ್ನು ರಚಿಸಲಾಗುತ್ತಿದೆ. ‘ಸಾಮಾನ್ಯರಿಗಾಗಿ ಕಾನೂನು’ ಮಾಲೆಯಲ್ಲಿ ಜನಸಾಮಾನ್ಯರಿಗೆ ಕಾನೂನು ಜ್ಞಾನ ನೀಡುವ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ.

ಅತ್ಯಂತ ಮಹತ್ತರವಾದ ೨೫ ಹೊಸ ಪುಸ್ತಕಗಳನ್ನು ಮತ್ತು ೫ ನಿಯತಕಾಲಿಕೆಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ. ಕೃಷ್ಣ ಅವರು ಕಳೆದ ತಿಂಗಳು ಬಿಡುಗಡೆ ಮಾಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಜರ್ನಲ್ ಆಫ್‌ಕರ್ನಾಟಕ ಸ್ಟಡೀಸ್ ‘ಇಂಗ್ಲಿಷ್‌’ ಎಂಬ ನಿಯತಕಾಲಿಕೆಯನ್ನು ಆರಂಭಿಸಲಾಗಿದೆ. ಒಟ್ಟಿನಲ್ಲಿ ಕರ್ನಾಟಕದ ಹಾಗೂ ವಿಶ್ವದ ಸಮಗ್ರ ಜ್ಞಾನ ಸಂಪತ್ತನ್ನು ಕನ್ನಡದ ಮೂಲಕ ಕನ್ನಡಿಗರಿಗೆ ದೊರಕಿಸುವ ಮಹದಾಶಯ ನಮ್ಮದು. ಇದನ್ನು ಸಾಕಾರಗೊಳಿಸಲು ಸರ್ಕಾರದ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಂಸತ್ ಸದಸ್ಯರ, ಶಾಸಕರ ಮತ್ತು ಉದಾರಿಗಳಾದ ಸಂಸ್ಕೃತಿ ಶ್ರೀಮಂತರ ಸಹಾಯವನ್ನು ವಿಶ್ವವಿದ್ಯಾಲಯ ಭರವಸೆಯ ಕಣ್ಣುಗಳಿಂದ ನಿರೀಕ್ಷಿಸುತ್ತಿದೆ.

ಮೂಲಭೂತ ಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿದ್ದ ವಿಶ್ವವಿದ್ಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳ ಡಾಂಬರೀಕರಣ, ಉಪಾಹಾರ ಗೃಹ ಸೌಲಭ್ಯ, ಹೊಸ ರಸ್ತೆಗಳ ನಿರ್ಮಾಣ, ವಿದ್ಯುದ್ದೀಕರಣ, ಕುಡಿಯುವ ನೀರಿನ ಸೌಲಭ್ಯ, ವಾಹನ ವ್ಯವಸ್ಥೆ, ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೊಡುಗೆಯಾಗಿ ಹೊಸ ಬಸ್ಸು ಮುಂತಾದವುಗಳನ್ನು ಒದಗಿಸಲಾಗಿದೆ. ತ್ರಿಪದಿ, ತುಂಗಭದ್ರ, ಕೂಡಲ ಸಂಗಮ, ಘಟಿಕಾಲಯ, ಗಿರಿಸೀಮೆ, ಕಾಯಕದ ಮನೆ, ನವರಂಗ, ಜಕ್ಕಣ ಮಂಟಪ ಮುಂತಾದ ಹಳೆಯ ಕಟ್ಟಡಗಳನ್ನು ನವೀಕರಿಸಿ ಸುಸಜ್ಜಿತ ಗೊಳಿಸಲಾಗಿದೆ. ವಿಭಾಗಗಳ ವ್ಯವಸ್ಥೆಗಾಗಿ ಕೇಶಿರಾಜ, ಅಕ್ಕ, ಅಲ್ಲಮ್ಮ, ಹರಿಹರ, ನಾಗವರ್ಮ ಎಂಬ ಹೆಸರಿನ ಐದು ದಶಮಾನೋತ್ಸವ ನೆನಪಿನ ಅಧ್ಯಯನ ವಿಭಾಗ ಕಟ್ಟಡಗಳನ್ನು ಸುಮಾರು ೬೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರಿಂದ ಉದ್ಘಾಟಿಸಲಾಗಿದೆ. ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ನಿರ್ಮಿಸಲಾಗಿದೆ. ಸುಮಾರು ೯೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ‘ಸರ್ವಜ್ಞ’ ಸಿರಿಗನ್ನಡ ಗ್ರಂಥಾಲಯ ಕಟ್ಟಡವನ್ನು ಮತ್ತು ನೃಪತುಂಗ ನಗರದಲ್ಲಿ ನಿರ್ಮಿಸಿರುವ ಆಡಳಿತಾಂಗ ಸಿಬ್ಬಂದಿ ವಸತಿಗೃಹಗಳನ್ನು ಘನತೆವೆತ್ತ ಕರ್ನಾಟಕದ ರಾಜ್ಯಪಾಲರೂ ಕುಲಾಧಿಪತಿಗಳು ಆದ ಸನ್ಮಾನ್ಯ ಶ್ರೀ ಟಿ.ಎನ್. ಚತುರ್ವೇದಿ ಅವರು ಈಗ ಉದ್ಘಾಟಿಸಿ ಇಲ್ಲಿಗೆ ಆಗಮಿಸಿದ್ದಾರೆ. ಮೊದಲನೆಯ ಕುಲಪತಿಗಳ ಕಾಲದಲ್ಲಿ ಆರಂಭಗೊಂಡು ಸ್ಥಗಿತವಾಗಿದ್ದ ಶಿಲ್ಪವನವನ್ನು ವಿಸ್ತರಿಸಿ ಅದಕ್ಕೆ ಆಕರ್ಷಕ ರೂಪವನ್ನು ನೀಡಲಾಗಿದೆ. ಸಂಸತ್ ಸದಸ್ಯರ ಅನುದಾನದಿಂದ ಸುಮಾರು ೨೦ ಲಕ್ಷ ರೂಪಾಯಿಗಳ ವೆಚ್ಚದ ‘ಪಂಪ ಸಭಾಂಗಣ’ದ ನಿರ್ಮಾಣದ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಮುಂದಿನ ವರ್ಷ ಮತ್ತಷ್ಟು ಅಧ್ಯಾಪಕರ ವಸತಿ ಗೃಹಗಳನ್ನು ವಿಭಾಗೀಯ ಕಟ್ಟಡಗಳನ್ನು ಹಾಗೂ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ವಿಶ್ವವಿದ್ಯಾಲಯ ಈ ವರ್ಷ ಹಮ್ಮಿಕೊಂಡಿರುವ ಮತ್ತೊಂದು ದಾಖಲಾರ್ಹ ಯೋಜನೆಯೆಂದರೆ ‘ಸಿರಿಗನ್ನಡ ಗ್ರಂಥಾಲಯ’ ಎಂಬ ದೇಶದಲ್ಲೇ ವಿಶಿಷ್ಟವಾದ ಪರಾಮರ್ಶನ ಗ್ರಂಥಾಲಯ. ಕನ್ನಡ ಲಿಪಿ ಉಗಮವಾದಂದಿನಿಂದ ಇಲ್ಲಿಯವರೆಗೆ ಪ್ರಕಟವಾದ ಎಲ್ಲ ಪುಸ್ತಕಗಳನ್ನು ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಭಾಷೆಯ ಗ್ರಂಥಗಳನ್ನು ಹಾಗೂ ಇತರ ಮಾಹಿತಿ ದಾಖಲೆಗಳನ್ನು ಸಂಗ್ರಹಿಸಿ ಈ ಗ್ರಂಥಾಲಯದಲ್ಲಿ ವ್ಯವಸ್ಥೆಗೊಳಿಸಲು ಯೋಜಿಸಲಾಗಿದೆ. ನಾಡಿನಾದ್ಯಂತ ಲೇಖಕರನ್ನು, ಪುಸ್ತಕ ಪ್ರಕಾಶಕರನ್ನು, ಸಂಸ್ಥೆಗಳನ್ನು, ಪುಸ್ತಕ ಪ್ರಿಯರನ್ನು ಭೇಟಿ ಮಾಡಿ ಅಖಂಡ ಕರ್ನಾಟಕದ ಜನಸ್ತೋಮದ ನೆರವಿನಿಂದ ಈ ಗ್ರಂಥಾಲಯವನ್ನು ಮಹತ್ತಾಗಿ ರೂಪಿಸುವುದು ಹಾಗೂ ಕನ್ನಡ ವಿಶ್ವವಿದ್ಯಾಲಯದ ಈ ಗ್ರಂಥ ಭಂಡಾರದಲ್ಲಿ ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿ ಇಲ್ಲದ ಗ್ರಂಥಗಳೇ ಇಲ್ಲ ಎಂಬಂತೆ ಇದನ್ನು ಸಜ್ಜುಗೊಳಿಸುವುದು ಕಾರ್ಯ ಆರಂಭವಾಗಿದೆ. ಈ ಯೋಜನೆ ಪೂರ್ಣಗೊಂಡಾಗ ಇದು ಕನ್ನಡ ಕರ್ನಾಟಕ ಬಗೆಗಿನ ಆಸಕ್ತರ ಮತ್ತು ಸಂಶೋಧಕರ ಮಹತ್ವದ ಯಾತ್ರಾ ಕೇಂದ್ರವಾಗುತ್ತಿದೆ. ಬಳ್ಳಾರಿ ಜಿಲ್ಲಾ ಪಂಚಾಯತ್ ನೆರವಿನಿಂದ ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಸಿದ್ಧತೆಗಳು ನಡೆದಿವೆ. ಇಲ್ಲಿನ ನಿವಾಸಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಿಶುವಿಹಾರ ಮತ್ತು ಕಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದ್ದು, ಶಿಕ್ಷಣ ಇಲಾಖೆ ಶಾಲಾ ಕಟ್ಟಡದ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಅದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಪ್ರೊ. ಬಿ.ಕೆ. ಚಂದ್ರಶೇಖರ್ ಅವರು ಇದೇ ಜನವರಿ ೧೭ರಂದು ಶಿಲಾನ್ಯಾಸವನ್ನು ಮಾಡಲಿದ್ದಾರೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಕಳೆದ ಮೂರು ವರ್ಷಗಳಲ್ಲಿ ೧೯೦ ಲಕ್ಷ ನೀಡಿದ್ದು, ಈ ಯೋಜನಾ ಅವಧಿಯಲ್ಲಿ ಅದು ಹೆಚ್ಚಾಗುವ ಭರವಸೆ ಇದೆ. ಸಂಸ್ಕೃತಿ ಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಎಂ. ಕೃಷ್ಣ ಅವರು ಹಾಗೂ ನಮ್ಮ ಜನಪ್ರಿಯ ಉನ್ನತ ಶಿಕ್ಷಣ ಸಚಿವರಾದ ಡಾ. ಜಿ. ಪರಮೇಶ್ವರ ಅವರು, ಈ ವಿಶ್ವವಿದ್ಯಾಲಯಕ್ಕೆ ಹಿಂದೆ ದೊರೆಯುತ್ತಿದ್ದ ೩ ಕೋಟಿ ರೂಪಾಯಿಗಳ ಅನುದಾನವನ್ನು ೪ ಕೋಟಿಗೆ ಏರಿಸುವ ಮೂಲಕ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಿಗೆ ಹೊಸ ಚಾಲನೆಯನ್ನು ದೊರೆಕಿಸಿಕೊಟ್ಟಿದ್ದಾರೆ. ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಈ ಭಾಗದ ಸಂಸತ್ ಸದಸ್ಯರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಕೋರಿಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ವಿಶ್ವವಿದ್ಯಾಲಯದ ನೇರ ಅನುದಾನವಲ್ಲದೆ ಸುಮಾರು ಮೂರೂವರೆ ಕೋಟಿಗೂ ಹೆಚ್ಚು ಹಣವನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಈ ಎಲ್ಲ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ವಿಶ್ವವಿದ್ಯಾಲಯ ಋಣಿಯಾಗಿದೆ.

ಕರ್ನಾಟಕದ ಸಮಗ್ರಾಭಿವೃದ್ಧಿಗೆ ಸಂಬಂಧಪಟ್ಟ ಸಾಹಿತ್ಯ ಮತ್ತು ಸಾಹಿತ್ಯೇತರ ವಿಷಯಗಳಲ್ಲಿ ಆಸಕ್ತಿ, ಜಿಜ್ಞಾಸುತನವನ್ನು, ವಿಚಾರಶೀಲತೆಯನ್ನು ಬೆಳೆಸಲು ವಿಚಾರ ಸಂಕಿರಣ, ಕಮ್ಮಟ, ವಿಶೇಷೋಪನ್ಯಾಸ ಮತ್ತು ಬಗೆ ಬಗೆಯ ಸಮಾವೇಶಗಳನ್ನೂ ಸಹ ವಿಶ್ವವಿದ್ಯಾಲಯ ನಡೆಸುತ್ತಿದೆ. ಈ ವರ್ಷ ಬೀದರ್‌ಜಿಲ್ಲಾ ಕೇಂದ್ರದಲ್ಲಿ ದೇಶಿ ಸಮ್ಮೇಳನವನ್ನು ನಡೆಸಲಾಗಿದೆ. ಮದ್ದೂರಿನಲ್ಲಿ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮಾವೇಶವನ್ನು ನಡೆಸಲಾಗಿದೆ. ಬುಡಕಟ್ಟು ಲೇಖಕರ ರಾಷ್ಟ್ರೀಯ ಸಮಾವೇಶವನ್ನು ಮತ್ತು ಸಂಸ್ಕಾರ ಭಾರತಿ ಸಹಯೋಗದೊಡನೆ ರಾಷ್ಟ್ರೀಯ ಚಿತ್ರಕಲಾ ಶಿಬಿರವನ್ನು ಮತ್ತು ರಾಷ್ಟಮಟ್ಟದ ಹಸ್ತಪ್ರತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ರಾಜ್ಯಮಟ್ಟದ ಹಸ್ತಪ್ರತಿ ಸಮ್ಮೇಳನವನ್ನು ಮಂಗಳೂರಿನಲ್ಲಿ ನಡೆಸಲಾಗಿದೆ. ಇದೇ ಜನವರಿ ೩೧ ರಂದು ರಾಜ್ಯಮಟ್ಟದ ದಾಸ ಸಂಸ್ಕೃತಿ ಸಾಹಿತ್ಯ ಸಮಾವೇಶವನ್ನು ರಾಯಚೂರಿನಲ್ಲಿ ನಡೆಸಲಾಗುತ್ತದೆ. ರಾಜ್ಯಮಟ್ಟದ ಕನ್ನಡ ಅಧ್ಯಯನಗಳು ಎಂಬ ಸಂಶೋಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇವಲ್ಲದೆ ಪ್ರತಿಯೊಂದು ವಿಭಾಗವು ತನ್ನ ವಿಭಾಗೀಯ ವಿಷಯಗಳನ್ನು ಕುರಿತು ಹಲವು ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನೂ ಕೂಡ ನಡೆಸುತ್ತಿವೆ. ಹೀಗಾಗಿ ರಾಜ್ಯದ ಉದ್ದಗಲಕ್ಕೂ ಕನ್ನಡ ವಿಶ್ವವಿದ್ಯಾಲಯ ತನ್ನ ವಿಶಿಷ್ಟ ಬಗೆಯ ಸಂಶೋಧನೆ, ಬೋಧನೆ ಹಾಗೂ ಚಿಂತನೆಗಳ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ತನ್ನ ಸ್ಥಾಪನೆಯ ಉದ್ದೇಶವನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಲು ಅಭಿಮಾನ ಪಡುತ್ತೇನೆ.

೮೦೦ ಎಕರೆಗಳ ಭೂ ವಿಸ್ತಾರವನ್ನು ಹೊಂದಿರುವ ಈ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಸ್ಯಗಳನ್ನು ನೆಟ್ಟು ಇಡೀ ವಾತಾವರಣಕ್ಕೆ ಹಸಿರು ಶ್ರೀಮಂತಿಕೆಯ ಶೋಭೆಯನ್ನು ತರಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಇಲಾಖೆಯ ಮತ್ತು ತೋಟಗಾರಿಕೆ ಇಲಾಖೆಯ ನೆರವಿನೊಡನೆ ಸುಮಾರು ೨೦ ಸಾವಿರ ಬಗೆ ಬಗೆಯ ಗಿಡಗಳನ್ನು ನೆಡಿಸಲಾಗಿದೆ. ದಶಮಾನೋತ್ಸವ ವನ, ವಿಜಯ ವನ, ಕುಮಾರ ರಾಮ ಉದ್ಯಾನ, ಚರಕ ವನಗಳನ್ನು ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾಗಿದ್ದ ವನಗಳಿಗೆ ಪಂಪವನ, ನೃಪತುಂಗ ವನ, ಹಕ್ಕಬುಕ್ಕ ವನ, ಅಕ್ಷರೋದ್ಯಾನ. ಕದಂಬ ವನ, ಹೊಯ್ಸಳ ವನ, ಚಾಲುಕ್ಯ ವನ, ಕೃಷ್ಣರಾಜ ವನ, ಮಾನಸ ವನ ಮುಂತಾಗಿ ಕರ್ನಾಟಕದ ಸಂಸ್ಕೃತಿಯನ್ನು ವಿಸ್ತರಿಸಿದ ರಾಜ ಮನೆತನಗಳ ಹೆಸರುಗಳನ್ನು ಇಡುವ ಮೂಲಕ ಇತಿಹಾಸ ಈ ನೆಲದಲ್ಲಿ ಮತ್ತೊಮ್ಮೆ ಕಣ್ತುಂಬುವಂತೆ ಮಾಡಲಾಗಿದೆ. ಕುವೆಂಪು ಶತಮಾನೋತ್ಸವ ಸ್ಮರಣೆಗಾಗಿ ಕುವೆಂಪು ಶತಮಾನೋತ್ಸವ ಮಕ್ಕಳ ವನ್ಯ ಪಕ್ಷಿಕಾಶಿ ನಾಳೆ ಉದ್ಘಾಟನೆಯಾಗಲಿದೆ.

ನಮ್ಮ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಹಲವು ಲೇಖಕರ ಸಾಹಿತ್ಯ ಮತ್ತು ಸಂಶೋಧನಾ ಸಾಧನೆ ಅಭಿಮಾನ ಪಡುವಂಥದಾಗಿದ್ದು, ಅವರು ಇದುವರೆಗೆ ಹತ್ತಾರು ವಿಶಿಷ್ಟ ಪ್ರಶಸ್ತಿಗಳನ್ನು, ಬಹುಮಾನಗಳನ್ನು ತಮ್ಮ ಕೃತಿಗಳಿಗಾಗಿ ಪಡೆದಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ವಿವಿಧ ವಿದ್ವಾಂಸರು ಮತ್ತು ಸೆನೆಟ್ ಪಡೆದಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ವಿವಿಧ ಸಾಹಿತ್ಯಕ, ಸಾಂಸ್ಕೃತಿಕ ಗೌರವ ಪ್ರಶಸ್ತಿ ಮತ್ತು ಪ್ರತಿಷ್ಠಿತ ಸದಸ್ಯತ್ವದ ಸನ್ಮಾನಗಳನ್ನು ಪಡೆದಿರುವುದು ನಮ್ಮ ಘನತೆಯನ್ನು ಹೆಚ್ಚಿಸಿದೆ. ಡಾ. ಕರೀಗೌಡ ಬೀಚನಹಳ್ಳಿಯವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಿತರಾಗಿದ್ದಾರೆ. ಡಾ. ಹಿ.ಚಿ. ಬೋರಲಿಂಗಯ್ಯನವರು, ಡಾ. ಶ್ರೀಕಂಠ ಕೂಡಿಗೆ ಯವರು ಮತ್ತು ಡಾ. ಎಂ.ಜಿ. ಈಶ್ವರಪ್ಪನವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿಯನ್ನು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ದೇವರಕೊಂಡಾರೆಡ್ಡಿ ಅವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು, ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ.ಕೆ. ರವೀಂದ್ರನಾಥ, ಡಾ. ವೆಂಕಟೇಶ ಇಂದ್ವಾಡಿ ಇವರು ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರೊ. ಲಕ್ಷ್ಮಣ್ ತೆಲಗಾವಿಯವರು ರಾಷ್ಟ್ರಮಟ್ಟದ ದಲಿತ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಔನ್ನತ್ಯವನ್ನು ಹೆಚ್ಚಿಸಲು ಕಾರಣರಾದ ಈ ವಿದ್ವಾಂಸರಿಗೆ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ.

ಅಭಿವೃದ್ಧಿ ಕಾರ್ಯದಲ್ಲೂ ವಿಶ್ವವಿದ್ಯಾಲಯ ಹಿಂದೆ ಬಿದ್ದಿಲ್ಲ. ವಾಹನ ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ, ಶಾಲಾ ಸೌಲಭ್ಯ, ರಸ್ತೆಗಳ ಡಾಂಬರೀಕರಣ, ಬೀದಿ ದೀಪಗಳ ವ್ಯವಸ್ಥೆ, ವಿದ್ಯಾರ್ಥಿಗಳಿಗೆ (ಪುರುಷ ಮತ್ತು ಸ್ತ್ರೀಯರು) ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಲ್ಲಿನ ಅಧ್ಯಾಪಕರಿಗೆ, ವಿಭಾಗಗಳಿಗೆ, ವಿದ್ಯಾರ್ಥಿಗಳಿಗೆ ಜಾಗದ ಕೊರತೆಯಿದ್ದುದನ್ನು ಮನಗಂಡು ಸರ್ಕಾರ, ಹೆಚ್.ಕೆ.ಡಿ.ಬಿ., ಯೋಜನಾ ಇಲಾಖೆ, ಸಂಸತ್ ಸದಸ್ಯರ ಅನುದಾನ ಮುಂತಾದವುಗಳಿಂದ ಸಹಾಯವನ್ನು ಪಡೆದು ೫ ವಿಭಾಗೀಯ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಮತ್ತೆ ೩ ಕಟ್ಟಡಗಳನ್ನು ಆರಂಭಿಸಲಾಗುತ್ತಿದೆ. ಸುಮಾರು ಒಂದು ಕೋಟಿ ವೆಚ್ಚದ ಸರ್ವಜ್ಞ ಗ್ರಂಥಾಲಯ ಕಟ್ಟಡ ನಿರ್ಮಾಣಕಾರ್ಯ ಅಂತಿಮ ಹಂತದಲ್ಲಿದೆ. ಆಡಳಿತ ಸಿಬ್ಬಂದಿಗೆ ಸ್ಥಳಾವಕಾಶದ ಕೊರತೆಯಿದ್ದುದರಿಂದ ಕ್ರಿಯಾಶಕ್ತಿ ಕಟ್ಟಡವನ್ನು ವಿಸ್ತರಿಸಲಾಗಿದೆ. ಬೋಧಕೇತರ ಸಿಬ್ಬಂದಿಗಾಗಿ ೧೨ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ‘ಶಿಲ್ಪವನ’ ವನ್ನು ಅಭಿವೃದ್ಧಿಪಡಿಸಿ ಆಕರ್ಷಣೀಯವನ್ನಾಗಿ ಮಾಡಲಾಗಿದೆ.

ವಿಶ್ವವಿದ್ಯಾಲಯ ಧನ ಸಹಾಯ ಆಯೋಗಕ್ಕೆ ಸಂಬಂಧಿಸಿದ ನ್ಯಾಕ್ ಪರಿಶೀಲನಾ ಸಮಿತಿಯು ನಮ್ಮ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟು ಸಂದರ್ಶಿಸಿ ಇದೊಂದು ಅನನ್ಯ ವಿಶಿಷ್ಟವಾದ ವಿಶ್ವವಿದ್ಯಾಲಯವೆಂದು ಮತ್ತು ಅತ್ಯಂತ ಕ್ಷಿಪ್ರ ಕಾಲದಲ್ಲಿ ಇದು ಅಪೂರ್ವವಾದ ಪ್ರಗತಿಯನ್ನು ಪಡೆದಿದೆಯೆಂದು ಮನತುಂಬಿ ನುಡಿದು ಈ ವಿಶ್ವವಿದ್ಯಾಲಯಕ್ಕೆ ಬಿ++(೮೫) ಸ್ಥಾನಮಾನವನ್ನು ನೀಡಿದೆ ಎಂದು ತಿಳಿಸಲು ಸಂತೋಷಿಸುತ್ತೇನೆ.

ವಿಶ್ವವಿದ್ಯಾಲಯದ ಇದುವರೆಗಿನ ಪ್ರಗತಿಗೆ ನೈತಿಕವಾಗಿ, ಸಂಪತ್ತಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ನೆರವು ನೀಡಿದ ಔದಾರ್ಯ ನಿಧಿಗಳಾದ ಎಲ್ಲ ಮಹನೀಯರನ್ನು, ಇದರ ಅಭಿವೃದ್ಧಿಯ ಬಗ್ಗೆ ಆಶಾವಾದಿಗಳಾಗಿದ್ದು, ಸೃಜನಶೀಲ ಮತ್ತು ಕ್ರಿಯಾಶೀಲ ಸಲಹೆಗಳನ್ನು ನೀಡುತ್ತಿರುವ ಎಲ್ಲ ಹಿರಿಯರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ನೆನೆಯುತ್ತ ಅವರಿಗೆ ನೂರು ನೂರು ನಮನಗಳನ್ನು ಅರ್ಪಿಸುತ್ತಿದ್ದೇನೆ. ಹಾಗೆಯೇ ಕರ್ನಾಟಕ ಸರ್ಕಾರ ಕನ್ನಡ ನಾಡಿನ ಸಾಂಸ್ಕೃತಿಕ ಜೀವನಾಡಿಯಾಗಿರುವ ಈ ವಿಶ್ವವಿದ್ಯಾಲಯ ಮತ್ತಷ್ಟು ಉತ್ಕೃಷ್ಟವಾಗಲು ಪ್ರತಿ ವರ್ಷ ಕನಿಷ್ಟ ೬ ಕೋಟಿ ರೂಪಾಯಿಗಳ ಅನುದಾನವನ್ನು ನೀಡಬೇಕೆಂದು ಮತ್ತು ನಮ್ಮ ಶಿಕ್ಷಣ ತಜ್ಞರು ಹಾಗೂ ಆಡಳಿತ ದಕ್ಷರೂ ಆದ ಉನ್ನತ ಶಿಕ್ಷಣ ಸಚಿವರು ಇದನ್ನು ಪೂರೈಸಿ ಕೊಡಬೇಕೆಂದು ಭಿನ್ನವಿಸುತ್ತೇನೆ. ಇದೇ ಸಂದರ್ಭದಲ್ಲಿ ಎಂಟು ಹತ್ತು ವರ್ಷಗಳಿಂದ ಕೇವಲ ಕ್ರೋಢೀಕೃತ ನೌಕರರಾಗಿ ಅತಂತ್ರ ಸ್ಥಿತಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯವರನ್ನು ಖಾಯಂಗೊಳಿಸಲು ಚಾರಿತ್ರಿಕ ಸಹಾಯವನ್ನು ಮಾಡಿದ ಮಾನ್ಯ ಶಿಕ್ಷಣ ಸಚಿವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಈ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ವಿಶ್ವವಿದ್ಯಾಲಯ ನಡೆದು ಬಂದಿರುವ ದಾರಿ ವಿಶಿಷ್ಟವಾದುದಾಗಿದೆ. ಆದರೆ, ನಾವು ಕ್ರಮಿಸಬೇಕಾದ ಹಾದಿ ಸಾಕಷ್ಟು ದೀರ್ಘವಾಗಿದೆ ಮತ್ತು ಮುಟ್ಟಬೇಕಾದ ಸಾಧನೆಯ ಶಿಖರಗಳು ಇನ್ನೂ ನೂರಾರಿವೆ ಎಂಬುದನ್ನು ವಿನಯಪೂರ್ವಕವಾಗಿ ಭಿನ್ನವಿಸಿಕೊಳ್ಳುತ್ತೇನೆ. ತಮ್ಮ ವಿಶಿಷ್ಟ ಪ್ರತಿಭೆ ಮತ್ತು ಪರಿಶ್ರಮಗಳಿಂದ ಹಾಗೂ ಅಸಾಧಾರಣವಾದ ಆಡಳಿತ ದಕ್ಷತೆಯಿಂದ ಭಾರತದ ಹತ್ತಾರು ಹುದ್ದೆಗಳನ್ನು ಅರ್ಥಪೂರ್ಣವಾಗಿ ಅಲಂಕರಿಸಿ ಆ ಸ್ಥಾನಗಳಿಗೆ ಮಹತ್ತರವಾದ ಶೋಭೆಯನ್ನು, ಅನನ್ಯತೆಯನ್ನು ತಂದುಕೊಟ್ಟು ಎಲ್ಲರ ಪ್ರೀತಿ, ಗೌರವಗಳಿಗೆ ಪಾತ್ರವಾಗಿರುವ ವಿದ್ವತ್‌ಪ್ರಿಯರು, ಸಂಸ್ಕೃತಿಪ್ರಿಯರು, ಪ್ರಗತಿಪರರು ಆದಂತಹ ಕರ್ನಾಟಕ ಗೌರವನ್ವಿತ ರಾಜ್ಯಪಾಲರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಟಿ.ಎನ್. ಚತುರ್ವೇದಿ ಅವರು ಈ ಘಟಿಕೋತ್ಸವದಲ್ಲಿ ಭಾಗವಹಿಸಿ ನಾಡೋಜ, ಪಿಎಚ್‌.ಡಿ. ಮತ್ತು ಡಿ.ಲಿಟ್. ಪದವಿಗಳನ್ನು ವಿತರಿಸಲು ಸಂತೋಷದಿಂದ ಒಪ್ಪಿಕೊಂಡು ಆಗಮಿಸಿರುವುದಕ್ಕಾಗಿ ಅವರನ್ನು ಹೃದಯದುಂಬಿ ವಿನಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಹಾಗೆಯೇ ಕರ್ನಾಟಕ ಕಂಡ ಶ್ರೇಷ್ಠ ಶಿಕ್ಷಣ ಸಚಿವರಲ್ಲಿ, ದಕ್ಷ ಮತ್ತು ಪಾರದರ್ಶಕ ಆಡಳಿತಗಾರರಲ್ಲಿ ಒಬ್ಬರಾದ ದೂರದರ್ಶಿತ್ವ ಮತ್ತು ಯೋಜನಾಶೀಲತೆಗಳನ್ನು ಮೈಗೂಡಿಸಿಕೊಂಡಿರುವ ನಮ್ಮ ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಡಾ. ಜಿ. ಪರಮೇಶ್ವರ್ ಅವರನ್ನು ಈ ಮಹತ್ವದ ಸಮಾರಂಭಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಕಾನೂನು ಕ್ಷೇತ್ರದಲ್ಲಿ ಮಹಾತಜ್ಞರಾದ, ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರೂ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಅಪಾರವಾದ ಒಲವುಳ್ಳ ವಿಚಾರವೇತ್ತರಾದ ಸನ್ಮಾನ್ಯ ಶ್ರೀ ವಿ.ಎಸ್. ಮಳೀಮಠ ಅವರನ್ನೂ, ಈ ವರ್ಷ ನಮ್ಮ ಕರೆಗೆ ಓಗೊಟ್ಟು ನಮ್ಮ ವಿಶ್ವವಿದ್ಯಾಲಯದ ಸರ್ವಶ್ರೇಷ್ಠ ಪ್ರಶಸ್ತಿಯಾದ ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ಬಂದಿರುವ ನಾಡಿನ ಸುಪ್ರಸಿದ್ಧ ಕವಿಗಳೂ ನಾಟಕಕಾರರೂ ಮತ್ತು ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳೂ ಆದ ಡಾ. ಚಂದ್ರಶೇಖರ ಕಂಬಾರ ಅವರನ್ನು, ಕನ್ನಡ ಕಂಡ ಅಪರೂಪದ ಭಾವಶೀಲ ಮತ್ತು ಚಿಂತನಶೀಲ ಕವಿಗಳಾದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರನ್ನು, ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯಗಳ ಕ್ರಿಯಾಶೀಲ ಅಭಿವರದ್ಧಿಯ ಬಗ್ಗೆ ನಾಲ್ಕು ದಶಕಗಳಿಗಿಂತಲೂ ಅಧಿಕ ಕಾಲದಿಂದ ಸದ್ದುಗದ್ದಲವಿಲ್ಲದೆ ದುಡಿಯುತ್ತಿರುವ ಸ್ವಾತಂತ್ರ ಹೋರಾಟಗಾರರಾದ ಸನ್ಮಾನ್ಯ ಶ್ರೀ ಜಿ. ನಾರಾಯಣ ಅವರನ್ನು, ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಸಹಜಕೃತಿಯ ಬಗ್ಗೆ ವಿನೂತನವಾದ ಪ್ರಯೋಗಗಳನ್ನು ಮಾಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವ ಕೃಷಿ ವಿಜ್ಞಾನಿ ಶ್ರೀ ಎಲ್. ನಾರಾಯಣರೆಡ್ಡಿ ಅವರನ್ನು, ಕನ್ನಡ ರಂಗಭೂಮಿಯಲ್ಲಿ ತಮ್ಮ ಸಿರಿಕಂಠದಿಂದ ಮತ್ತು ಅದ್ಭುತ ವೈವಿಧ್ಯಮಯ ಪಾತ್ರದಾರಿಕೆಯಿಂದ ಕರ್ನಾಟಕದಲ್ಲಿ ಮನೆ ಮಾತಾಗಿರುವ ಸುಪ್ರಸಿದ್ಧ ಕಲಾವಿದ ಶ್ರೀಮತಿ ಸುಭದ್ರಮ್ಮ ಮನ್ಸೂರ್ ಅವರನ್ನು ಮತ್ತು ಕನ್ನಡ ಸಣ್ಣಕತೆ, ಮತ್ತು ಕಾದಂಬರಿ ಕ್ಷೇತ್ರಗಳಲ್ಲಿ ಮತ್ತು ವಿಶೇಷವಾಗಿ ದಲಿತ ಹಾಗೂ ಸ್ತ್ರೀ ಜೀವನ ಚಿತ್ರಣದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಾಗೂ ಉತ್ತರ ಕರ್ನಾಟಕದ ಹಳ್ಳಿಯ ಭಾಷೆಯ ಜೀವಂತಿಕೆ ಮತ್ತು ಅರ್ಥವಂತಿಕೆಗಳನ್ನು ತಮ್ಮ ಕೃತಿಗಳಲ್ಲಿ ಸಮರ್ಥವಾಗಿ ದುಡಿಸಿಕೊಂಡಿರುವ ಖ್ಯಾತ ಲೇಖಕಿ ಶ್ರೀಮತಿ ಗೀತಾ ನಾಗಭೂಷಣ ಅವರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ, ಅಖಂಡ ಕರ್ನಾಟಕದ ಸಮಸ್ತ ಸಂಸ್ಕೃತಿ ಚಿಂತಕರ ಪರವಾಗಿ, ಶಿಕ್ಷಣ ಲೋಕದ ಪರವಾಗಿ ಈ ವಿಶಿಷ್ಟ ಸಮಾರಂಭಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಪ್ರಗತಿಗೆ ಮೂಲ ಸೆಲೆಯಾಗಿರುವ ಸಮಸ್ತರನ್ನು ಮತ್ತು ಇಲ್ಲಿ ಉಪಸ್ಥಿತರಿರುವ ಸರ್ವರನ್ನು, ವಿಶ್ವವಿದ್ಯಾಲಯದ ನನ್ನ ಎಲ್ಲ ಸಹೋದ್ಯೋಗಿಗಳ, ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಪರವಾಗಿ ಮತ್ತು ವೈಯಕ್ತಿಕವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

೫ ಜನವರಿ ೨೦೦೪