ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಗೌರವಾನ್ವಿತ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಟಿ.ಎನ್. ಚತುರ್ವೇದಿ ಅವರೇ, ಕರ್ನಾಟಕ ರಾಜ್ಯದ ಉನ್ನತಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಡಿ. ಮಂಜುನಾಥ್ ಅವರೇ, ಕನ್ನಡ ವಿಶ್ವವಿದ್ಯಾಲಯದ ಹದಿಮೂರನೆಯ ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ ಉಪಾಧ್ಯಕ್ಷರಾಗಿರುವ ಸನ್ಮಾನ್ಯ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೈ ಅವರೇ, ಈ ನುಡಿಹಬ್ಬದಲ್ಲಿ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಒಪ್ಪಿಕೊಂಡು ದಯಮಾಡಿಸಿರುವ ಕನ್ನಡದ ಹಿರಿಯ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಅವರೇ, ಕರ್ನಾಟಕದ ಹಿರಿಯ ಚಿತ್ರ ಕಲಾವಿದರಾದ ಪ್ರಾಧ್ಯಾಪಕ ಜೆ.ಎಸ್. ಖಂಡೇರಾವ್ ಅವರೇ, ಜಾನಪದ ಹಾಡುಗಳ ಭಂಡಾರದಿಂದಲೇ ನಮಗೆ ಸದಾ ಸ್ಫೂರ್ತಿಯಾಗಿರುವ ಶ್ರೀಮತಿ ಸಿರಿಯಜ್ಜಿ ಅವರೇ, ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಯ ಸದಸ್ಯರೇ, ಈ ಪ್ರದೇಶದ ಎಲ್ಲ ಜನ ಪ್ರತಿನಿಧಿಗಳೇ, ಮಾಧ್ಯಮದ ಎಲ್ಲ ಸ್ನೇಹಿತರೆ, ವಿಶ್ವವಿದ್ಯಾಲಯ ಕೂಡು ಕುಟುಂಬದ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ವಿದ್ಯಾರ್ಥಿ ಸಮುದಾಯಗಳ ಆತ್ಮೀಯ ಸದಸ್ಯರೇ, ಆಹ್ವಾನಿತ ಬಂಧುಗಳೇ.

ಕನ್ನಡ ವಿಶ್ವವಿದ್ಯಾಲಯದ ಈ ಹದಿಮೂರನೆಯ ನುಡಿಹಬ್ಬಕ್ಕೆ ತಮ್ಮೆಲ್ಲರನ್ನು ಪ್ರೀತಿ ಗೌರವದಿಂದ ಸ್ವಾಗತಿಸಲು ಬಹಳ ಸಂತೋಷ ಪಡುತ್ತೇನೆ.

ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಟಿ.ಎನ್. ಚರ್ತುವೇದಿ ಅವರು ನುಡಿಹಬ್ಬದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮೂವರು ಹಿರಿಯ ಸಾಧಕರಿಗೆ ನಾಡೋಜ ಗೌರವ ಪದವಿಗಳನ್ನು ಮತ್ತು ಅರ್ಹ ಅಭ್ಯರ್ಥಿಗಳಿಗೆ ಡಿ.ಲಿಟ್. ಮತ್ತು ಪಿಎಚ್.ಡಿ. ಪದವಿಗಳನ್ನು ನೀಡಲು ದಯಮಾಡಿ ಒಪ್ಪಿಕೊಂಡು ಬಂದಿರುತ್ತಾರೆ. ಸಾಹಿತ್ಯ ಮತ್ತು ಸಂಸ್ಕೃತಿ ಪ್ರೇಮಿಗಳೂ ಹಿರಿಯ ಮುತ್ಸದ್ಧಿಗಳೂ ಆಗಿರುವ ಸನ್ಮಾನ್ಯ ಕುಲಾಧಿಪತಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಕನ್ನಡ ವಿಶ್ವ ವಿದ್ಯಾಲಯವು ಸರ್ವತೋಮುಖ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಘನತೆವೆತ್ತ ಕುಲಾಧಿಪತಿಗಳಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಗೌರವಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಕರ್ನಾಟಕದ ಹಿರಿಯ ಅನುಭವಿ ರಾಜಕಾರಣಿಗಳೂಆಗಿರುವ ಸನ್ಮಾನ್ಯ ಶ್ರೀ ಡಿ. ಮಂಜುನಾಥ್ ಅವರು ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾಗಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಪಾಲ್ಗೊಂಡು ಎಂ.ಫಿಲ್ ಪದವೀಧರರಿಗೆ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ಮಾನ್ಯರು ಕನ್ನಡ ವಿಶ್ವವಿದ್ಯಾಲಯವು ಶಿಸ್ತು ಮತ್ತು ಸೃಜನಶೀಲತೆಯಿಂದ ಮುನ್ನಡೆಯಲು ಎಲ್ಲಾ ರೀತಿಯ ಬೆಂಬಲ ಸಹಕಾರಗಳನ್ನು ಕೊಡುತ್ತಿದ್ದಾರೆ. ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ ಡಿ. ಮಂಜುನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಗೌರವಪೂರ್ವಕ ಸ್ವಾಗತವನ್ನು ಕೋರುತ್ತೇನೆ. ನುಡಿಹಬ್ಬದ ಈ ವರ್ಷದ ಮುಖ್ಯ ಅತಿಥಿಯಾಗಿ ಪ್ರಧಾನ ಭಾಷಣ ಮಾಡಲು ವಿಶ್ವವಿದ್ಯಾಲಯ ಅನುದಾನ ಆಯೋಗದ ಉಪಾಧ್ಯಕ್ಷರೂ ಹಿರಿಯ ಶಿಕ್ಷಣ ತಜ್ಞರೂ ಆಗಿರುವ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೈ ಅವರು ಆಗಮಿಸಿದ್ದಾರೆ. ಪ್ರೊ. ರಾಜಶೇಖರನ್ ಪಿಳ್ಳೈ ಅವರು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ನಿರ್ಣಾಯಕ ಸ್ಥಾನಗಳಲ್ಲಿದ್ದು, ಸಕ್ರಿಯವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ, ರಾಷ್ಟ್ರೀಯ ಮೌಲ್ಯಮಾಪನ ಸಮಿತಿಯ (NAAC) ಅಧ್ಯಕ್ಷರಾಗಿ ಈಗ ಯುಜಿಸಿಯ ಉಪಾಧ್ಯಕ್ಷರಾಗಿ ಪ್ರೊ. ಪಿಳ್ಳೈಯವರು ಉನ್ನತ ಶಿಕ್ಷಣದ ಅನೇಕ ಪ್ರಗತಿಪರ ಬದಲಾವಣೆಗಳ ನೇತಾರರಾಗಿದ್ದಾರೆ. ಕನ್ನಡ ವಿಶ್ವವಿದ್ಯಾಲಯದಂತಹ ಸಾಂಸ್ಕೃತಿಕ ವಿಶ್ವವಿದ್ಯಾಲಯವೊಂದನ್ನು ಇನ್ನಷ್ಟು ಎತ್ತರಕ್ಕೆ ಮತ್ತು ಬಿತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರೊ. ರಾಜಶೇಖರನ್ ಪಿಳ್ಳೈ ಅವರ ಮಾರ್ಗದರ್ಶನ, ಸಲಹೆ ಸಹಕಾರಗಳು ನಮಗೆ ಬಹಳ ಮುಖ್ಯವಾಗಿವೆ. ಪ್ರೊ. ರಾಜಶೇಖರನ್ ಪಿಳ್ಳೈ ಅವರಿಗೆ ಪ್ರೀತಿ ಆದರಗಳ ಸ್ವಾಗತವನ್ನು ಬಯಸುತ್ತೇನೆ.

ಈ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಒಪ್ಪಿಕೊಂಡು ಬಂದಿರುವ ಮೂವರು ಹಿರಿಯ ಸಾಧಕರು ನಮ್ಮೊಂದಿಗಿದ್ದಾರೆ. ಡಾ. ಎಂ. ಚಿದಾನಂದಮೂರ್ತಿ ಅವರು ಕನ್ನಡ ಸಂಶೋಧನೆಯ ಕ್ಷೇತ್ರಕ್ಕೆ ಶಿಸ್ತು, ಆಳ, ವಿಸ್ತಾರಗಳನ್ನು ತಂದುಕೊಟ್ಟವರು. ಕನ್ನಡ ಭಾಷೆ, ಸಾಹಿತ್ಯ, ಶಾಸನ, ಜಾನಪದ, ಇತಿಹಾಸ, ಸಂಸ್ಕೃತಿ ಹೀಗೆ ಅನೇಕ ನೆಲೆಗಳಲ್ಲಿ ಕನ್ನಡದ ಶೋಧವನ್ನು ನಡೆಸಿ ಕನ್ನಡ ನಾಡು ನುಡಿಗಳ ಬಗ್ಗೆ ಕನ್ನಡಿಗರಲ್ಲಿ ಪ್ರೀತಿ ಅಭಿಮಾನಗಳು ಉಂಟಾಗಲು ಕಾರಣೀಭೂತರಾದರು. ಕನ್ನಡ ಪ್ರಾಧ್ಯಾಪಕರಾಗಿ ಸಾವಿರಾರು ಮಂದಿ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಕುರಿತು ಎಚ್ಚರವನ್ನು ಮೂಡಿಸಿದರು. ಕನ್ನಡ ಚಳುವಳಿಯನ್ನು ಒಂದು ನೋಂಪಿಯಂತೆ ನಿರಂತರವಾಗಿ ಪಾಲಿಸಿಕೊಂಡು ಬಂದವರು.

ಪ್ರೊ. ಜೆ.ಎಸ್. ಖಂಡೇರಾವ್ ಅವರು ಕರ್ನಾಟಕದ ದೃಶ್ಯ ಕಲಾವಿದರಲ್ಲಿ ಪ್ರಮುಖರು. ಕರ್ನಾಟಕದ ದೃಶ್ಯಕಲೆಯ ಮೊದಲ ಘಟ್ಟದ ಪ್ರಮುಖ ಕಲಾವಿದರಾಗಿ ಬೆಳೆದುಬಂದು ಸೃಜನಶೀಲ ದೃಶ್ಯಾನುಭವದಲ್ಲಿ ಅನನ್ಯತೆ ಸಾಧಿಸಿದರು. ವಿಂಡೋ ಸರಣಿಯ ಅಮೂರ್ತಶೈಲಿಯ ಕಲಾಕೃತಿಗಳಿಂದ ಛಾಪು ಮೂಡಿಸಿ ದೃಶ್ಯ ಮಾಧ್ಯಮಕ್ಕೆ ವಿಶಿಷ್ಟ ಪರಿಭಾಷೆ ಒದಗಿಸಿದವರು. ಆರಂಭದಿಂದಲೂ ಭಾವಚಿತ್ರ, ಭೂದೃಶ್ಯ ರಚನೆಯಲ್ಲಿ ಸಿದ್ಧಹಸ್ತರಾಗಿರುವ ಇವರು ಅದಕ್ಕೆ ಪೂರಕವಾದ ಶಕ್ತಿ, ಸತ್ವ ಮತ್ತು ಸಹನೆಯನ್ನು ಉಳಿಸಿಕೊಂಡು ಬಂದವರು.

ಶ್ರೀಮತಿ ಸಿರಿಯಜ್ಜಿ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟಿ ಗೊಲ್ಲರಹಟ್ಟಿಯಲ್ಲಿ ಇದ್ದುಕೊಂಡೇ ಕರ್ನಾಟಕದ ಪ್ರಮುಖ ಜನಪದ ಹಾಡುಗಾರ್ತಿಯಾಗಿದ್ದಾರೆ. ಮೂಲತಃ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಇವರು ನಾಲ್ಕಾರು ರಾತ್ರಿಯವರೆಗೆ ನಿರರ್ಗಳವಾಗಿ ಹಾಡಬಲ್ಲ ಅಸಾಧಾರಣ ನೆನಪಿನ ಶಕ್ತಿ ಉಳ್ಳವರು. ಅನೇಕ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜಾನಪದ ಸಾಹಿತ್ಯ ಕುರಿತ ಸಂಸ್ಕೃತಿ ಚಿಂತಕರ ಸಂಶೋಧನೆಗೆ ಇವರು ದೊಡ್ಡ ಕಣಜವಾಗಿದ್ದಾರೆ. ಒಂದು ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟಿಕೊಡುವ ಜನಸಾಮಾನ್ಯರ ವೇದಗಳೆನಿಸಿದ ಜನಪದ ಹಾಡುಗಳ ಮರು ಅನುರಣನಕ್ಕೆ ಶ್ರೀಮತಿ ಸಿರಿಯಜ್ಜಿ ಸಾಕ್ಷಿಯಾಗಿದ್ದಾರೆ.

ಈ ಮೂವರು ಹಿರಿಯ ಸಾಧಕರಾದ ಡಾ. ಎಂ. ಚಿದಾನಂದಮೂರ್ತಿ, ಪ್ರೊ. ಜೆ.ಎಸ್. ಖಂಡೇರಾವ್ ಹಾಗೂ ಶ್ರೀಮತಿ ಸಿರಿಯಜ್ಜಿ ಅವರನ್ನು ಪ್ರೀತಿ ಗೌರವ ಪೂರ್ವಕವಾಗಿ ಸ್ವಾಗತಿಸುತ್ತೇನೆ.

ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು, ನುಡಿಹಬ್ಬಕ್ಕೆ ಆಗಮಿಸಿರುವ ಗೌರವಾನ್ವಿತ ಜನಪ್ರತಿನಿಧಿಗಳನ್ನು, ವಿಶ್ವವಿದ್ಯಾಲಯದ ಪ್ರಗತಿಗೆ ಸದಾ ಬೆಂಬಲವನ್ನು ಕೊಡುತ್ತಿರುವ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸ್ನೇಹಿತರನ್ನು, ವಿಶ್ವವಿದ್ಯಾಲಯದ ಕೂಡುಕುಟುಂಬದ ಸದಸ್ಯರಾದ ಅಧ್ಯಾಪಕ, ಅಧ್ಯಾಪಕೇತರ ಮತ್ತು ವಿದ್ಯಾರ್ಥಿ ಸಮುದಾಯವನ್ನೂ, ಎಲ್ಲ ಆಹ್ವಾನಿತರನ್ನು ಆದರಪೂರ್ವಕವಾಗಿ ಬರಮಾಡಿಕೊಳ್ಳುತ್ತಿದ್ದೇನೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕಳೆದ ಜನವರಿಯಲ್ಲಿ ನಡೆದ ನುಡಿಹಬ್ಬದಿಂದ ಈ ನುಡಿಹಬ್ಬದ ನಡುವಿನ ಸುಮಾರು ಹತ್ತು ತಿಂಗಳ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ. ಶ್ರೀ ಅಭೇರಾಜ್. ಎಚ್.ಬಲ್ಡೋಜ ಜೈನ ಸಂಸ್ಕೃತಿ ಅಧ್ಯಯನ ಕೇಂದ್ರ ಸ್ಥಾಪನೆ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಆದಿಪುರಾಣ ಸಾಂಸ್ಕೃತಿಕ ಮುಖಾಮುಖಿ ಕುರಿತ ವಿಚಾರಸಂಕಿರಣ, ಕನ್ನಡ ಭಾಷಾಧ್ಯಯನ ವಿಭಾಗದಿಂದ ಕನ್ನಡ ಭಾಷಾ ರಚನೆ ಅಧ್ಯಯನ ಕಮ್ಮಟ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಮೈಲಾರ ಕುರಿತ ವಿಚಾರಸಂಕಿರಣ, ಶಾಸನಶಾಸ್ತ್ರ ವಿಭಾಗದಿಂದ ಶಾಸನಶಾಸ್ತ್ರ ಕಾರ್ಯಾಗಾರ, ವಾಲ್ಮೀಕಿ ಅಧ್ಯಯನ ಪೀಠ ಮತ್ತು ದಲಿತ ಅಧ್ಯಯನ ಪೀಠದಿಂದ ದಲಿತರು ಮತ್ತು ಭಾರತದ ಸಂವಿಧಾನ ಹಾಗೂ ಅಸ್ಪೃಶ್ಯತೆ ಮತ್ತು ಜಾಗತೀಕರಣ ಕುರಿತು ಸಮ್ಮೇಳನಗಳು, ಶಂಬಾ ಅಧ್ಯಯನ ಪೀಠದಿಂದ ಸಂಶೋಧನ ವಿದ್ಯಾರ್ಥಿಗಳಿಗೆ ಸಂಶೋಧನ ಕಾರ್ಯಾಗಾರ, ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಅಭಿವೃದ್ಧಿ ಸಂವಾದ, ರೈತರು ಮತ್ತು ಮಾರುಕಟ್ಟೆ, ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ ಕಾರ್ಯಾಗಾರ, ದೃಶ್ಯಕಲಾ ವಿಭಾಗದಿಂದ ದೃಶ್ಯ ಕಲಾ ಪ್ರದರ್ಶನ, ಪುರಂದರ ಅಧ್ಯಯನ ಪೀಠದಿಂದ ಮೂರನೇ ದಾಸ ಸಂಸ್ಕೃತಿ ಅಧ್ಯಯನ ಕುರಿತ ರಾಜ್ಯಮಟ್ಟದ ಸಮ್ಮೇಳನ, ಆಡಳಿತಾಂಗದಿಂದ ಸಂಶೋಧನ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಅಧ್ಯಯನ ಸಂಶೋಧನ ಸಮಾವೇಶ ಹಾಗೂ ಕುವೆಂಪು ಚಿಂತನೆ ಕುರಿತು ವಿಚಾರ ಸಂಕಿರಣ ಇಂತಹ ಅನೇಕ ಬೌದ್ಧಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಬಹುತೇಕ ಎಲ್ಲ ವಿಭಾಗಗಳು ಜನಸಾಮಾನ್ಯರ ಜೊತೆಗೆ ಸೇರಿಕೊಂಡು ಪರಸ್ಪರ ಕಲೆತು ಅಭಿವೃದ್ಧಿಪರ ಚಿಂತನೆಗಳನ್ನು ನಡೆಸಿವೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಕಳೆದ ಸುಮಾರು ಹತ್ತು ತಿಂಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ಮತ್ತಿತರ ಸಂಪನ್ಮೂಲ ಕೇಂದ್ರಗಳಿಂದ ಉತ್ತಮ ಬೆಂಬಲ, ಪ್ರೋತ್ಸಾಹ ದೊರೆತಿದೆ. ಯು.ಜಿ.ಸಿ.ಯಿಂದ ಯುವ ವಿಶ್ವವಿದ್ಯಾಲಯ ಯೋಜನೆಯಲ್ಲಿ ರೂ. ಇಪ್ಪತ್ತು ಲಕ್ಷ, ಡೇ ಕೇರ್ ಕೇಂದ್ರಕ್ಕೆ ರೂ. ಮೂರು ಲಕ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ರೂ. ಹನ್ನೆರಡು ಲಕ್ಷ ಐವತ್ತು ಸಾವಿರ ದೊರೆತಿದೆ. ಈ ತಿಂಗಳಷ್ಟೆ ಯು.ಜಿ.ಸಿ.ಯಿಂದ ನಮ್ಮ ವಿಶ್ವವಿದ್ಯಾಲಯಕ್ಕೆ ಕೆಲವು ಮಹತ್ವದ ಯೋಜನೆಗಳು ಮಂಜೂರಾಗಿವೆ. ಅವುಗಳಲ್ಲಿ ಬಹು ಮುಖ್ಯವಾದವು ಸುಮಾರು ರೂ. ಐವತ್ತು ಲಕ್ಷ ಅನುದಾನವುಳ್ಳ ಮಹಿಳಾ ಅಧ್ಯಯನ ಕೇಂದ್ರ, ಬುಡಕಟ್ಟು ಅಧ್ಯಯನ ವಿಭಾಗಕ್ಕೆ ರೂ. ಇಪ್ಪತ್ತೆರಡು ಲಕ್ಷದ ವಿಶೇಷ ಅನುದಾನ ಯೋಜನೆಯಲ್ಲಿ ಕಾರ್ಯಕ್ರಮ, ಕನ್ನಡ ಸಾಹಿತ್ಯ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ, ಶಾಸನಶಾಸ್ತ್ರ, ಹಸ್ತಪ್ರತಿಶಾಸ್ತ್ರ ವಿಭಾಗಗಳ ನಾಲ್ವರು ಪ್ರಾಧ್ಯಾಪಕರಿಗೆ ನಾಲ್ಕು ಬೃಹತ್ ಸಂಶೋಧನ ಯೋಜನೆ, ಸಾಂಸ್ಕೃತಿಕ ಅಧ್ಯಯನಕ್ಕಾಗಿ ಒಬ್ಬರಿಗೆ ಕಿರು ಸಂಶೋಧನ ಯೋಜನೆ, ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಿಂದ ಹಸ್ತಪ್ರತಿ  ಮಿಶನ್ ಯೋಜನೆಯಲ್ಲಿ ರೂ. ಹತ್ತು ಲಕ್ಷ, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಸ್ಥಳೀಯ ವಸ್ತುಸಂಗ್ರಹಾಲಯದ ಸ್ಥಾಪನೆಗಾಗಿ ರೂ. ಐದು ಲಕ್ಷ ಎಪ್ಪತ್ತು ಸಾವಿರ, ದೂರಶಿಕ್ಷಣ ಕೌನ್ಸಿಲ್‌ನಿಂದ ದೂರಶಿಕ್ಷನ ಕಾರ್ಯಕ್ರಮಗಳಿಗಾಗಿ ರೂ. ಹತ್ತು ಲಕ್ಷ ಇವು ಕೆಲವು ಮುಖ್ಯ ಶೈಕ್ಷಣಿಕ ಕೊಡುಗೆಗಳು. ಜೊತೆಗೆ ಭಾರತೀಯ ಚಾರಿತ್ರಿಕ ಸಂಶೋಧನ ಕೇಂದ್ರದಿಂದಲೂ ನೆರವು ದೊರೆತಿದೆ.

ಯು.ಜಿ.ಸಿ. ಅನುದಾನದಿಂದ ಚರಿತ್ರೆ ಮತ್ತು ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎರಡು ಪುನರ್ಮನನ ಶಿಬಿರಗಳನ್ನು ಇದೇ ನವಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಡೆಸಲು ಯೋಜಿಸಲಾಗಿದೆ. ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಿಂದ ಕಾಸರಗೋಡಿನಲ್ಲಿ ದ್ರಾವಿಡ ಛಂದಸ್ಸಿನ ಸಮ್ಮೇಳನ, ಜಾನಪದ ಅಧ್ಯಯನ ವಿಭಾಗದಿಂದ ಕೃಷಿ, ಸ್ಥಳೀಯ ಜ್ಞಾನಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ದೇಸಿ ಸಮ್ಮೇಳನ ಇವು ಡಿಸೆಂಬರ ತಿಂಗಳಿನಲ್ಲಿ ತಕ್ಷಣ ನಡೆಯುವ ಕಾರ್ಯಕ್ರಮಗಳು. ಜೊತೆಗೆ ಮುಂದಿನ ದಿನಗಳಲ್ಲಿ ಎಲ್ಲ ಅಧ್ಯಯನ ವಿಭಾಗಗಳು ಹಾಗೂ ಹತ್ತು ಅಧ್ಯಯನ ಪೀಠಗಳು ತಮ್ಮ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧತೆ ನಡೆಸಿವೆ. ನಿನ್ನೆ ತಾನೇ ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ನಲವತ್ತು ಗ್ರಂಥಗಳು ಬಿಡುಗಡೆಯಾಗಿವೆ. ಪ್ರಸಾರಾಂಗವು ವರ್ಷವಿಡೀ ನಡೆಸುವ ‘ಪುಸ್ತಕ ಪಯಣ’ ಎಂಬ ನಿರಂತರ ಯಾತ್ರೆಗೆ ನಿನ್ನೆ ಸನ್ಮಾನ್ಯ ಉನ್ನತಶಿಕ್ಷಣ ಸಚಿವರು ಚಾಲನೆ ಕೊಟ್ಟಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಎಂಟು ಸಂಶೋಧನ ಪತ್ರಿಕೆಗಳು ಸಕಾಲಕ್ಕೆ ಹೊಸ ಹೊಸ ವಸ್ತು ವಿಷಯಗಳನ್ನು ಒಳಗೊಂಡು ಸಕಾಲದಲ್ಲಿ ಪ್ರಕಟವಾಗುತ್ತಿವೆ. ಇದೇ ನವಂಬರ್ ೩ ರಂದು ನಡೆದ ಹಂಪಿ ಉತ್ಸವದಲ್ಲಿ ಕರ್ನಾಟಕ ಸರ್ಕಾರದ ನೆರವಿನಿಂದ ನಮ್ಮ ವಿಶ್ವವಿದ್ಯಾಲಯ ಪ್ರಕಟಿಸಿದ ‘ರಾಘವಾಂಕನ ಸಮಗ್ರಕಾವ್ಯ’ ಸಂಪುಟ ಬಿಡುಗಡೆಯಾಗಿದೆ. ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ತಿಂಗಳಿಗೊಮ್ಮೆ ಬೆಳುದಿಂಗಳ ಕಾರ್ಯಕ್ರಮ, ಬೌದ್ಧಿಕ ಚಟುವಟಿಕೆಗಳಿಗಾಗಿ ಹದಿನೈದು ದಿನಕ್ಕೊಮ್ಮೆ ವಿಚಾರ ಮಂಡನೆಯ ಕಾರ್ಯಕ್ರಮಗಳು ಆರಂಭವಾಗಿವೆ. ಕಾವ್ಯ ರಸಿಕರಿಗಾಗಿ ಮುಂದೆ ನಿಗದಿತವಾಗಿ ಕಾವ್ಯದ ಹಬ್ಬಗಳು ನಡೆಯುತ್ತವೆ. ವಿಶ್ವವಿದ್ಯಾಲಯದ ಆವರಣ ಅಭಿವೃದ್ಧಿಗಾಗಿ ಸಮಿತಿಯೊಂದು ರಚನೆಗೊಂಡು ಕಾರ್ಯಪ್ರವೃತ್ತವಾಗಿದೆ. ಬೌದ್ಧಿಕವಾಗಿ ಹಾಗೂ ಭೌತಿಕವಾಗಿ ಸಮಪ್ರಮಾಣದಲ್ಲಿ ಕನ್ನಡ ವಿಶ್ವವಿದ್ಯಾಲಯ ಬೆಳೆಯಬೇಕೆಂಬುದು ನಮ್ಮೆಲ್ಲರ ಹಂಬಲ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ‘ಕನ್ನಡ’ ಮತ್ತು ‘ಅಭಿವೃದ್ಧಿ’ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಬಳಕೆಯಲ್ಲಿ ತನ್ನನ್ನು ತೊಡಿಗಿಸಿಕೊಳ್ಳಲು ಬಯಸಿದೆ.

ಮಾಹಿತಿ ತಂತ್ರಜ್ಞಾನವು ಜಾಗತೀಕರಣದ ಪ್ರಮುಖ ಅಸ್ತವಾಗಿ ಪ್ರಯೋಗವಾಗುತ್ತಿರುವಾಗ ಈ ಅಸ್ತ್ರವನ್ನು ಕನ್ನಡದ ಅಭಿವೃದ್ಧಿಗಾಗಿ ಬಳಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯದ ಮೇಲೆ ಇದೆ. ಕನ್ನಡ ತಂತ್ರಾಂಶಗಳ ಅಭಿವೃದ್ಧಿಯ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬೇಕೆನ್ನುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ ಈ ಸಂಬಂಧ ಸಾಹಿತಿಗಳ, ಭಾಷಾತಜ್ಞರ, ತಂತ್ರಜ್ಞರ ಸಮಾಲೋಚನೆಯನ್ನು ನಡೆಸಿ ಕನ್ನಡವು ಸರ್ವವ್ಯಾಪಿಯಾಗಿ ಬೆಳೆಯಲು ಶ್ರಮಿಸುತ್ತಿದೆ. ಕೇಂದ್ರ ಸರ್ಕಾರವು ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಮಾನ್ಯ ಮಾಡುವ ದೃಷ್ಟಿಯಿಂದ ಅದಕ್ಕೆ ಸಂಬಂಧಿಸಿದ ಶೈಕ್ಷಣಿಕ ಸಾಮರ್ಥ್ಯದ ವರದಿಯನ್ನು ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿದೆ.

ಕನ್ನಡ ವಿಶ್ವವಿದ್ಯಾಲಯವು ಜನಪರ ಕಾರ್ಯಕ್ರಮಗಳನ್ನು ಇನ್ನಷ್ಟು ಪ್ರಮಾಣದಲ್ಲಿ ಹಮ್ಮಿಕೊಂಡು ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನೆರವಾಗುವ ಉದ್ದೇಶವನ್ನು ಹೊಂದಿದೆ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯನ್ನು ಕುರಿತ ನೀಲಿ ನಕಾಶೆಯೊಂದನ್ನು ಸಿದ್ಧಪಡಿಸಲು ಯೋಜನೆಯೊಂದನ್ನು ರೂಪಿಸಲಾಗಿದ್ದು ಕನ್ನಡ ಸಾಹಿತ್ಯವನ್ನು ಸಮಗ್ರವಾಗಿ ಅಂತರ್‌ಜಾಲದಲ್ಲಿ ಅಳವಡಿಕೆ, ಆನ್ವಯಿಕ ವಿಜ್ಞಾನಗಳ ಅಧ್ಯಯನ ಹಾಗೂ ಪ್ರಸರಣ ಕೇಂದ್ರ, ಪ್ರದರ್ಶನಾತ್ಮಕ ಜನಪದ ಕಲೆಗಳ ತರಬೇತಿ ಕೇಂದ್ರ, ರಂಗಭೂಮಿ ಪ್ರದರ್ಶನ ಕಲೆಯ ಕೇಂದ್ರ, ವಿದೇಶಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯಲ್ಲಿ ತರಬೇತಿ ಕೊಡುವ ಕೇಂದ್ರ ಇವು ಕನ್ನಡ ವಿಶ್ವವಿದ್ಯಾಲಯದ ಮುಂದಿನ ಕೆಲವು ಯೋಜನೆಗಳು. ಕನ್ನಡದಿಂದ ಬೇರೆ ಭಾಷೆಗಳಿಗೆ ಮತ್ತು ಬೇರೆ ಭಾಷೆಗಳಿಂದ ಕನ್ನಡಕ್ಕೆ ಅಮೂಲ್ಯ ಕೃತಿಗಳನ್ನು ಅನುವಾದ ಮಾಡುವ ಉದ್ದೇಶದಿಂದ ಅನುವಾದ ಕೇಂದ್ರವೊಂದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಆರಂಭಿಸಬೇಕು ಎಂಬ ಹಂಬಲ ನಮ್ಮದು. ನಮ್ಮ ದೇಶದ ಒಳಗೆ ಮತ್ತು ಹೊರಗಿರುವ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಮತ್ತು ಅಧ್ಯಯನ ಕೇಂದ್ರಗಳ ಜೊತೆಗೆ ಸಂಪರ್ಕ ಜಾಲವೊಂದನ್ನು ನಿರ್ಮಾಣ ಮಾಡುವುದು ತೀರ ತುರ್ತಾಗಿ ಮಾಡಬೇಕಾದ ಕೆಲಸ. ಭಾಷೆ ಹಾಗೂ ಸಂಸ್ಕೃತಿ ಕೇಂದ್ರಿತ ವಿಶ್ವವಿದ್ಯಾಲಯಗಳು ಪರಸ್ಪರ ಕಲೆಯುವ ಮತ್ತು ಕಲಿಯುವ ಪ್ರಕ್ರಿಯೆ ನಡೆಯಲು ಕನ್ನಡ ವಿಶ್ವವಿದ್ಯಾಲಯವು ಒಂದು ಚಾಲನಶಕ್ತಿಯಾಗಿ ಕೆಲಸ ಮಾಡಲು ಉದ್ದೇಶಿಸಿದೆ. ಕರ್ನಾಟಕದ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವ ಹಾಗೂ ಕ್ರಿಯಾಶೀಲಗೊಳಿಸುವ ಮತ್ತು ಹೊರಜಗತ್ತಿಗೆ ತೋರ್ಪಡಿಸುವ ಉದ್ದೇಶದಿಂದ ಸೂಕ್ತ ಅನುದಾನ ಸಂಸ್ಥೆಗಳ ನೆರವಿನಿಂದ ಸಂಸ್ಕೃತಿ ಗ್ರಾಮ ಹಾಗೂ ಕರಕುಶಲ ಗ್ರಾಮಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಕನ್ನಡ ವಿಶ್ವವಿದ್ಯಾಲಯ ಸಿದ್ಧವಿದೆ.

ಕನ್ನಡ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ, ಪ್ರಸರಣದ ಕೆಲಸಗಳ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಕುರಿತ ಸೃಜನಶೀಲ ವಿನ್ಯಾಸಗಳನ್ನು ರೂಪಿಸುವ ಮತ್ತು ಅವುಗಳಿಗೆ ಸೂಕ್ತ ಪ್ರಮಾಣದ ದಾರಿಗಳನ್ನು ಕಂಡುಕೊಳ್ಳುವ ಆಸಕ್ತಿಯನ್ನು ಹೊಂದಿದೆ. ವಿಶ್ವ ಪರಂಪರೆಯ ಕೇಂದ್ರವಾಗಿ ‘ಹಂಪಿ’ ಇರುವಂತೆ ಕನ್ನಡ ಸಂಸ್ಕೃತಿಯ ಶಕ್ತಿ ಕೇಂದ್ರವಾಗಿ ‘ಕನ್ನಡ ವಿಶ್ವವಿದ್ಯಾಲಯ’ವು ವಿಶ್ವ ಸಾಂಸ್ಕೃತಿಕ ನಕ್ಷೆಯಲ್ಲಿ ಸ್ಥಾನ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ಯು.ಜಿ.ಸಿ.ಯ ಎಲ್ಲಾ ಜನವರ್ಗದವರ ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲವನ್ನು ಪಡೆಯಲು ಹಂಬಲಿಸುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ಹನ್ನೆರಡು ಸಾರ್ಥಕ ಸಂವತ್ಸರಗಳನ್ನು ಪೂರ್ಣ ಗೊಳಿಸುವ ಮೂಲಕ ಮತ್ತೆ ಹೊಸ ಪಯಣಕ್ಕೆ ಸಿದ್ಧವಾಗಿದೆ. ಜಾಗತೀಕರಣಕ್ಕೆ ಪ್ರತಿಯಾಗಿ ಮತ್ತು ಪ್ರತಿಕ್ರಿಯೆಯಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಹೊಸದಾಗಿ ಕಟ್ಟುವ ಕಾಯಕಕ್ಕೆ ಕನ್ನಡ ವಿಶ್ವವಿದ್ಯಾಲಯವನ್ನು ಸಿದ್ಧಗೊಳಿಸುವಲ್ಲಿ ಎಲ್ಲರ ಸಹಕಾರವನ್ನು ಕೋರುತ್ತೇನೆ.

‘ಓ ನನ್ನ ಚೇತನ, ಆಗು ನಿ ಅನಿಕೇತನ’ ಎನ್ನುವ ಕುವೆಂಪು ಅವರ ಕವಿವಾಣಿಯನ್ನು ಕನ್ನಡ ವಿಶ್ವವಿದ್ಯಾಲಯವು ಒಂದು ಆದರ್ಶ ಮತ್ತು ವಾಸ್ತವವಾಗಿ ಸ್ವೀಕರಿಸಿದೆ. ವಿಶ್ವವಿದ್ಯೆಯ ಆಲಯವನ್ನು ಬಯಲಿಗೊಯ್ಯುವ ಬಯಲೇ ಆಲಯವಾಗುವ ಪ್ರಕ್ರಿಯೆಯಲ್ಲಿ ತನ್ನನ್ನು ಪುನಶ್ಚೇತನಗೊಳಿಸಿಕೊಳ್ಳಲು ಈ ನುಡಿಹಬ್ಬ ಪ್ರೇರಕವಾಗಲೆಂದು ಆಶಿಸುತ್ತೇನೆ.

ನಮಸ್ಕಾರ

೨೪ ನವೆಂಬರ್ ೨೦೦೪