ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಗೌರವಾನ್ವಿತ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಟಿ.ಎನ್. ಚತುರ್ವೇದಿ ಅವರೇ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಡಿ. ಮಂಜುನಾಥ್ ಅವರೇ, ಕನ್ನಡ ವಿಶ್ವವಿದ್ಯಾಲಯದ ಹದಿನಾಲ್ಕನೆಯ ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಭಾರತದ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳೂ ಭಾರತ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಆಗಿರುವ ಸನ್ಮಾನ್ಯ ಜಸ್ಟೀಸ್ ಡಾ. ಶಿವರಾಜ್ ವಿ. ಪಾಟೀಲ್ ಅವರೇ, ಈ ನುಡಿಹಬ್ಬದಲ್ಲಿ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಒಪ್ಪಿಕೊಂಡು ದಯಮಾಡಿಸಿರುವ ಕನ್ನಡದ ಹಿರಿಯ ನಿಘಂಟುಕಾರ ವಿದ್ವಾಂಸರಾದ ಪ್ರೊ. ಸಿ. ವೆಂಕಟಸುಬ್ಬಯ್ಯ ಅವರೇ, ಹಿರಿಯ ಸಮಾಜ ವಿಜ್ಞಾನಿ, ದಲಿತ ಹಾಗೂ ಮಹಿಳೆಯರ ಪರವಾದ ಕಾಳಜಿಯುಳ್ಳ ಪ್ರೊ. ಸಿ. ಪಾರ್ವತಮ್ಮ ಅವರೇ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಭಿನ್ನ ಸಾಂಸ್ಕೃತಿಕ ಧ್ವನಿಗಳನ್ನು ತಂದುಕೊಟ್ಟಿರುವ ಹಿರಿಯ ಲೇಖಕಿ ಶ್ರೀಮತಿ ಸಾರಾ ಅಬೂಬಕ್ಕರ್ ಅವರೇ, ಕನ್ನಡ ನಾಟಕ ರಂಗಭೂಮಿಯನ್ನು ಕಳೆದ ಎಂಬತ್ತು ವರ್ಷದಿಂದ ಸಚೇತನವಾಗಿ ಬೆಳೆಸಿದ ಕನ್ನಡ ಪರ ಹೋರಾಟಗಾರ ಹಿರಿಯ ನಾಟಕಕಾರ, ನಟ ಶ್ರೀ ಏಣಗಿ ಬಾಳಪ್ಪನವರೇ, ಕಾಷ್ಠ ಶಿಲ್ಪ ಕಲೆಗೆ ಜೀವಧಾತು ತುಂಬಿ ಮರದ ಕೆತ್ತನೆಗಳನ್ನು ಅಮರವಾಗಿಸಿರುವ ಧಾರು ವಿಶ್ವಕರ್ಮಿ ಶ್ರೀ ನಾಗಣ್ಣ ಮೋನಪ್ಪ ಬಡಿಗೇರ ಅವರೇ, ಹರಿಕಥೆಯ ಮಾಧ್ಯಮದಲ್ಲಿ ಕರ್ನಾಟಕದ ಕೀರ್ತನ ಸಾಹಿತ್ಯ ಮತ್ತು ಸಂಗೀತವನ್ನು ಮೌಖಿಕ ಪರಂಪರೆಯಲ್ಲಿ ಸುಮಾರು ಐದು ದಶಕಗಳ ಕಾಲ ಕನ್ನಡಿಗರಿಗೆ ಪರಿಣಾಮಕಾರಿಯಾಗಿ ಸಂವಹನ ಮಾಡಿರುವ ಹರಿದಾಸ ಶ್ರೀ ಭದ್ರಗಿರಿ ಅಚ್ಯುತದಾಸರೇ, ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಯ ಸದಸ್ಯರೇ, ಈ ಪರಿಸರದ ಎಲ್ಲ ಜನ ಪ್ರತಿನಿಧಿಗಳೇ, ಮಾಧ್ಯಮದ ಎಲ್ಲ ಗೆಳೆಯರೇ, ಕನ್ನಡ ವಿಶ್ವವಿದ್ಯಾಲಯ ವಿಶ್ವ ಕುಟುಂಬದ ಎಲ್ಲಾ ಪ್ರೀತಿಯ ಬಂಧುಗಳೇ, ಆಹ್ವಾನಿತರೇ ಮತ್ತು ಸ್ನೇಹಿತರೇ.

ಕನ್ನಡ ವಿಶ್ವವಿದ್ಯಾಲಯದ ಈ ಹದಿನಾಲ್ಕನೆಯ ನುಡಿಹಬ್ಬಕ್ಕೆ ತಮ್ಮೆಲ್ಲರನ್ನು ಪ್ರೀತಿ ಗೌರವದಿಂದ ಸ್ವಾಗತಿಸಲು ಬಹಳ ಸಂತೋಷ ಪಡುತ್ತೇನೆ.

ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಟಿ.ಎನ್. ಚರ್ತುವೇದಿ ಅವರು ಈ ನುಡಿಹಬ್ಬದ ಅಧ್ಯಕ್ಷತೆಯನ್ನು ವಹಿಸಿಕೊಂಡು ಆರು ಹಿರಿಯ ಸಾಧಕರಿಗೆ ನಾಡೋಜ ಗೌರವ ಪದವಿಗಳನ್ನು ಮತ್ತು ಅರ್ಹ ಅಭ್ಯರ್ಥಿಗಳಿಗೆ ಡಿ.ಲಿಟ್. ಮತ್ತು ಪಿಎಚ್.ಡಿ. ಪದವಿಗಳನ್ನು ನೀಡಲು ದಯಮಾಡಿ ಒಪ್ಪಿಕೊಂಡು ಬಂದಿರುತ್ತಾರೆ. ಸಾಹಿತ್ಯ ಮತ್ತು ಸಂಸ್ಕೃತಿ ಪ್ರೇಮಿಗಳೂ ಹಿರಿಯ ಮುತ್ಸದ್ಧಿಗಳೂ ಆಗಿರುವ ಸನ್ಮಾನ್ಯ ಕುಲಾಧಿಪತಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಕನ್ನಡ ವಿಶ್ವ ವಿದ್ಯಾಲಯವು ಸರ್ವತೋಮುಖ ಪ್ರಗತಿಯಲ್ಲಿ ಮುನ್ನಡೆಯುತ್ತಿದೆ. ಘನತೆವೆತ್ತ ಕುಲಾಧಿಪತಿಗಳಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಗೌರವಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಕರ್ನಾಟಕದ ಹಿರಿಯ ಅನುಭವಿ ರಾಜಕಾರಣಿಗಳೂ ಆಗಿರುವ ಸನ್ಮಾನ್ಯ ಶ್ರೀ ಡಿ. ಮಂಜುನಾಥ್ ಅವರು ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾಗಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಪಾಲ್ಗೊಂಡು ಎಂ.ಫಿಲ್ ಪದವೀಧರರಿಗೆ ಪದವಿಗಳನ್ನು ಪ್ರಧಾನ ಮಾಡಲಿದ್ದಾರೆ. ಮಾನ್ಯರು ಕನ್ನಡ ವಿಶ್ವವಿದ್ಯಾಲಯವು ಶಿಸ್ತು ಮತ್ತು ಸೃಜನಶೀಲತೆಯಿಂದ ಮುನ್ನಡೆಯಲು ಎಲ್ಲಾ ರೀತಿಯ ಬೆಂಬಲ ಸಹಕಾರಗಳನ್ನು ಕೊಡುತ್ತಿದ್ದಾರೆ. ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ ಡಿ. ಮಂಜುನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಗೌರವಪೂರ್ವಕವಾಗಿ ಸ್ವಾಗತವನ್ನು ಕೋರುತ್ತೇನೆ. ನುಡಿಹಬ್ಬದ ಈ ಸರ್ವೋನ್ನತ ನ್ಯಾಯಾಲಯದ ಹಿಂದಿನ ನ್ಯಾಯಮೂರ್ತಿಗಳೂ ಭಾರತ ಸರ್ಕಾರ ಮಾನವ ಹಕ್ಕುಗಳ ಆಯೋಗದ ಸದಸ್ಯರೂ ಆಗಿರುವ ಡಾ. ಜಸ್ಟೀಸ್ ಶಿವರಾಜ್ ವಿ. ಪಾಟೀಲ್ ಅವರು ಆಗಮಿಸಿದ್ದಾರೆ. ಕನ್ನಡಿಗರಾದ ಡಾ ಶಿವರಾಜ್ ವಿ. ಪಾಟೀಲ್ ಅವರು ರಾಯಚೂರು ಜಿಲ್ಲೆಯ ಮಳದಕಲ್ಲಿನಲ್ಲಿ ೧೯೪೦ರ ಜನವರಿ ೧೨ರಂದು ಜನಿಸಿದರು. ೧೯೬೨ ರಲ್ಲಿ ಗುಲಬರ್ಗಾದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ಉತ್ತಮ ನ್ಯಾಯವಾದಿ ಎಂದು ಹೆಸರು ಪಡೆದರು. ಗುಲ್ಬರ್ಗಾದ ಸೇಠ್ ಶಂಕರ್‌ಲಾಲ್ ಲಾಹೋಠಿ ಕಾನೂನು ಕಾಲೇಜಿನಲ್ಲಿ ೧೯೬೭-೭೫ ರವರೆಗೆ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದ ಅವರು ೧೯೭೫-೭೮ ರವರೆಗೆ ಕಾನೂನು ಕಾಲೇಜಿನ ಗೌರವ ಪ್ರಾಚಾರ್ಯರಾಗಿ ಕೆಲಸ ಮಾಡಿದರು. ೧೯೭೯ ರಲ್ಲಿ ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯವಾದಿಗಳಾಗಿ ಸೇವೆಯನ್ನು ಆರಂಭಿಸಿದ ಮಾನ್ಯ ಪಾಟೀಲರು ೧೯೮೦ ರಲ್ಲಿ ಬೆಲ್ಗ್ರೇಡ್ ಮತ್ತು ಬರ್ಲಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ನ್ಯಾಯವಾದಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ರು. ೧೯೮೭ ರಲ್ಲಿ ಸೋವಿಯಟ್ ರಷ್ಯಾ ಮತ್ತು ಯುರೋಪಿನ ದೇಶಗಳು, ೧೯೯೬ ರಲ್ಲಿ ಇಂಗ್ಲೆಂಡ್‌ನ್ನು ಸಂದರ್ಶಿಸಿ ಆ ದೇಶಗಳ ನ್ಯಾಯಾಲಯಗಳ ಕಾರ್ಯ ಸ್ವರೂಪವನ್ನು ಅಧ್ಯಯನ ಮಾಡಿದರು. ೧೯೯೦ ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಡಾ ಶಿವರಾಜ್ ವಿ. ಪಾಟೀಲ್ ಅವರು ೧೯೯೪ ರಿಂದ ೯೮ರವರೆಗೆ ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದು, ೧೯೯೯ ರಲ್ಲಿ ರಾಜಸ್ಥಾನದ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು. ಡಾ ಶಿವರಾಜ ವಿ. ಪಾಟೀಲ್ ಅವರು ೨೦೦೨ ಇಸವಿಯಲ್ಲಿ ಭಾರತದ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ್ದರು. ೨೦೦೫ ಜನವರಿವರೆಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಶ್ರೀ ಪಾಟೀಲ್ ಅವರು ೨೦೦೫ ಫೆಬ್ರವರಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ನೇಮಕಗೊಂಡರು. ಇವರಿಗೆ ೨೦೦೪ ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿಯುಳ್ಳ, ಸಂಸ್ಕೃತಿವಂತರಾದ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಅವರನ್ನು ಕನ್ನಡ ವಿಶ್ವವಿದ್ಯಾಲಯದ ಈ ನುಡಿಹಬ್ಬಕ್ಕೆ ಪ್ರೀತಿ ಆದರಗಳಿಂದ ಸ್ವಾಗತಿಸುತ್ತೇನೆ.

ಈ ನುಡಿಹಬ್ಬದಲ್ಲಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಒಪ್ಪಿಕೊಂಡು ಬಂದಿರುವ ಆರು ಹಿರಿಯ ಸಾಧಕರು ನಮ್ಮೊಂದಿಗಿದ್ದಾರೆ.

ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕಳೆದು ಸುಮಾರು ಎಪ್ಪತ್ತು ವರ್ಷಗಳಿಂದ ಕನ್ನಡ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯದಂತಹ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ವಾಂಸರು. ಕನ್ನಡ ನಿಘಂಟು ಶಾಸ್ತ್ರದ ಬ್ರಹ್ಮ ಮತ್ತು ಸಾರ್ವಭೌಮ ಆಗಿರುವ ಪ್ರೊ. ಜಿ.ವಿ. ಅವರು ಕನ್ನಡದ ಪದಕೋಶ ಜೀವಿ. ಪಂಡಿತ ಪಾಮರರಿಗೆ ಕನ್ನಡ ಪದಗಳನ್ನು ‘ಇಗೋ’ ಎಂದು ತೆಗೆದುಕೊಡುತ್ತಿರುವ ಬತ್ತದ ಶಬ್ದಸಾಗರ ಪ್ರೊ. ಜಿ.ವೆಂಕಟಸುಬ್ಬಯ್ಯ.

ಪ್ರೊ. ಸಿ. ಪಾರ್ವತಮ್ಮ ಅವರು ಕರ್ನಾಟಕದ ಸಮಾಜವಿಜ್ಞಾನ ಕ್ಷೇತ್ರದಲ್ಲಿ ದಲಿತ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿಶಿಷ್ಟ ಸಂಶೋಧನೆಯನ್ನು ನಡೆಸಿ ಜನಪರ ಅಧ್ಯಯನ ಮಾಡಿರುವ ಹಿರಿಯ ಪ್ರಾಧ್ಯಾಪಕ ವಿದ್ವಾಂಸರು. ಶೈಕ್ಷಣಿಕ ಅಧ್ಯಯನ ಮತ್ತು ಸಾಮಾಜಿಕ ಅಧ್ಯಯನಗಳು, ಸಂವೇದನೆಯ ಆಂಧೋಲನವಾಗಿ ರೂಪಾಂತರಗೊಳ್ಳಬೇಕು ಎನ್ನುವುದನ್ನು ತಮ್ಮ ಬರಹ ಮತ್ತು ಬದುಕಿನಲ್ಲಿ ಮಾಡಿ ತೋರಿಸಿದ ಅಂತಾರಾಷ್ಟ್ರೀಯ ಖ್ಯಾತಿ ಸಮಾಜವಿಜ್ಞಾನಿ ಪ್ರೊ. ಸಿ. ಪಾರ್ವತಮ್ಮ ಅವರು.

ಶ್ರೀಮತಿ ಸಾರಾ ಅಬೂಬಕ್ಕರ್ ಅವರು ಆಧುನಿಕ ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಮಹಿಳೆಯರ ಸಂವೇದನೆಯನ್ನು ಮೊಟ್ಟಮೊದಲಿಗೆ ತಂದುಕೊಟ್ಟು, ತಮ್ಮ ಕಾದಂಬರಿಗಳು ಸಣ್ಣ ಕಥೆಗಳು ಹಾಗೂ ವೈಚಾರಿಕ ಬರಹಗಳ ಮೂಲಕ ಮಹಿಳೆಯರ ವಿಮೋಚನೆಯನ್ನು ಒಂದು ಕಾಯಕ ಎಂಬಂತೆ ಸಾಧಿಸಿ  ತೋರಿಸಿದವರು. ಏಳು ಭಾಷೆಗಳಿಗೆ ಅನುವಾದಗೊಂಡ ಅವರ ಮೊದಲನೆಯ ಕಾದಂಬರಿ ಚಂದ್ರಗಿರಿಯ ತೀರದಲ್ಲಿ. ಕನ್ನಡದ ಸಾಹಿತ್ಯ ಕೃತಿಯೊಂದು ಭಾರತೀಯ ಭಾಷೆಗಳಲ್ಲಿ ಅನುರಣಗೊಂಡ ಅನನ್ಯ ಪ್ರತೀಕವಾಗಿದೆ. ಸಾಹಿತ್ಯ ನಿರ್ಮಾಣ ಮತ್ತು ಮಹಿಳೆಯರ ಆಂದೋಲನಗಳನ್ನು ಅಭಿನ್ನವಾಗಿ ನಡೆಸಿಕೊಂಡು ಬರುತ್ತಿರುವವರು ಶ್ರೀಮತಿ ಸಾರಾ ಅಬೂಬಕ್ಕರ್ ಅವರು.

ಶ್ರೀ ಏಣಗಿ ಬಾಳಪ್ಪನವರು ಸುಮಾರು ಎಂಬತ್ತು ವರ್ಷಗಳ ಕಾಲ ಕನ್ನಡದ ನಾಟಕ ರಂಗಭೂಮಿಯಲ್ಲಿ ನಟರಾಗಿ, ನಾಟಕಕಾರರಾಗಿ ಜನಮನ್ನಣೆಯನ್ನು ಪಡೆದಿರುವ ಶ್ರೇಷ್ಠ ಕಲಾವಿದರು. ವೃತ್ತಿ ರಂಗಭೂಮಿಗೆ ಗುರುತನ್ನು ಮತ್ತು ಗೌರವವನ್ನು, ಅಭಿಮಾನವನ್ನು ಮತ್ತು ಅನ್ನವನ್ನು ತಂದುಕೊಟ್ಟವರು ಶ್ರೀ ಏಣಗಿ ಬಾಳಪ್ಪನವರು. ಬೆಳಗಾವಿಯನ್ನು ಕರ್ನಾಟಕದ ಅವಿಭಾಜ್ಯ ಅಂಗವೆಂದು ಸ್ಥಾಪಿಸಲು ಕನ್ನಡ ನಾಟಕಗಳ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಕನ್ನಡದ ಅಪ್ಪಟ ಹೋರಾಟಗಾರ ಶ್ರೀ ಏಣಗಿ ಬಾಳಪ್ಪನವರು.

ಶ್ರೀ ನಾಗಣ್ಣ ಮೋನಪ್ಪ ಬಡಿಗೇರ ಅವರು ಕಾಷ್ಠ ಶಿಲ್ಪ ಕಲೆಯಲ್ಲಿ ಸೃಜನಶೀಲ ಕಲಾಕೃತಿಯನ್ನು ನೋಂಪಿಯಂತೆ ಕಳೆದ ಎಪ್ಪತ್ತೈದು ವರ್ಷಗಳಿಂದ ನಡೆಸಿಕೊಂಡು ಬಂದ ಹಿರಿಯ ಕಲಾವಿದರು. ಶ್ರೀ ನಾಗಣ್ಣ ಮೋನಪ್ಪ ಬಡಿಗೇರ ಅವರಿಂದ ಮರ ಅಮರವಾಯಿತು. ಗ್ರಾಮದೇವತೆಗಳಿಂದ ತೊಡಗಿ ದೇವಾಲಯಗಳವರೆಗೆ, ರಥ ಪಲ್ಲಕ್ಕಿಗಳಿಂದ ತೊಡಗಿ ಕಂಬ ತೋರಣಗಳವರೆಗೆ ಮರದ ಕುಸರಿ ಕೆಲಸವನ್ನು ಅದ್ಭುತವಾಗಿ ಸಾಧಿಸಿದ ಅಮರ ವಿಶ್ವಕರ್ಮಿ ಶ್ರೀ ನಾಗಣ್ಣ ಬಡಿಗೇರ ಅವರು.

ಶ್ರೀ ಭದ್ರಗಿರಿ ಅಚ್ಯುತದಾರು ಕರ್ನಾಟಕದ ಸ್ವಾತಂತ್ರೋತ್ತರ ಹರಿದಾಸ ಸಾಹಿತ್ಯ ಪರಂಪರೆಯನ್ನು ಸಮಾಜಮುಖಿಯಾಗಿ ಮಾಡಿದ ಜನಮುಖಿ ಹರಿದಾಸರು. ‘ದಾಸರೆಂದರೆ ಶ್ರೀ ಭದ್ರಗಿರಿ ಅಚ್ಯುತದಾಸರಯ್ಯ’ ಎನ್ನುವಂತೆ ಸರ್ವಧರ್ಮ ಸಮನ್ವಯವನ್ನು ಜನಪರ ಚಿಂತನೆಯನ್ನು ಹರಿಕಥೆಯ ಮಾಧ್ಯಮದ ಮುಲಕ ಜನಸಾಮಾನ್ಯರಿಗೆ ಕಾಂತಾಸಮ್ಮಿತ ಮಾದರಿಯಲ್ಲಿ ಸಂವಹನ ಮಾಡಿದರು ಹರಿದಾಸ ಸಾಹಿತ್ಯ ಮತ್ತು ಕೀರ್ತನೆಗಳನ್ನು ಕರ್ನಾಟಕದ ಸಂಗೀತ ಪರಂಪರೆ ಮೂಲಕ ಬೆಸುಗೆ ಮಾಡಿ ಮುಂದುವರಿಸಿಕೊಂಡು ಬಂದವರು ಹರಿದಾಸ ಶ್ರೀ ಭದ್ರಗಿರಿ ಅಚ್ಯುತದಾಸರು.

ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಯ ಸದಸ್ಯರನ್ನು, ನುಡಿಹಬ್ಬಕ್ಕೆ ಆಗಮಿಸಿರುವ ಗೌರವಾನ್ವಿತ ಜನಪ್ರತಿನಿಧಿಗಳನ್ನು, ವಿಶ್ವವಿದ್ಯಾಲಯದ ಪ್ರಗತಿಗೆ ಸದಾ ಬೆಂಬಲವನ್ನು ಕೊಡುತ್ತಿರುವ ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸ್ನೇಹಿತರನ್ನು, ವಿಶ್ವವಿದ್ಯಾಲಯದ ವಿಶ್ವ ಕುಟುಂಬದ ಸದಸ್ಯರನ್ನು-ಅಧ್ಯಾಪಕರು, ಆಡಳಿತ ಸಿಬ್ಬಂದಿಯವರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಎಲ್ಲ ಆಹ್ವಾನಿತರನ್ನು ಆದರ ಪೂರ್ವಕವಾಗಿ ಬರಮಾಡಿಕೊಳ್ಳುತ್ತಿದ್ದೇನೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳಾಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ನುಡಿಹಬ್ಬದಿಂದ ಈ ನುಡಿಹಬ್ಬದ ನಡುವಿನ ಸುಮಾರು ಒಂದು ವರ್ಷ ಒಂದು ತಿಂಗಳ ಅವಧಿಯಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ವಿಶಿಷ್ಟವಾಗಿ ನಡೆದಿವೆ. ಭೌತಿಕ ಮತ್ತು ಬೌದ್ಧಿಕವಾಗಿ ಕನ್ನಡ ವಿಶ್ವವಿದ್ಯಾಲಯ ಹೆಚ್ಚು ವಿಸ್ತಾರಗೊಂಡಿದೆ. ಕಾಲ ಮತ್ತು ಅವಕಾಶಗಳನ್ನು ನಿರ್ಮಿಸುವುದು, ತುಂಬುವುದು, ವಿಸ್ತರಿಸುವುದು ಬಹು ಬಗೆಗಳಲ್ಲಿ, ಬಹುನೆಲೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಎಲ್ಲ ಹದಿನೈದು ಅಧ್ಯಯನ ವಿಭಾಗಗಳು ಅಧ್ಯಯನ, ಪ್ರಕಟಣೆ ಮತ್ತು ವಿಸ್ತರಣೆಯ ಕೆಲಸವನ್ನು ತುಂಬ ಉತ್ಸಾಹ ಮತ್ತು ವ್ಯವಸ್ಥಿತವಾಗಿ ನಡೆಸಿವೆ. ವಿಚಾರ ಸಂಕಿರಣ, ಕಮ್ಮಟ, ವಿಶೇಷ ಉಪನ್ಯಾಸ, ವೈಯಕ್ತಿಕ ಮತ್ತು ಸಾಂಸ್ಥಿಕ ಸಂಶೋಧನಾ ಯೋಜನೆಗಳು ಎಲ್ಲಾ ವಿಭಾಗಗಳಲ್ಲೂ ಪೂರ್ಣಪ್ರಮಾಣದಲ್ಲಿ ನಡೆದಿವೆ. ಕನ್ನಡ ಸಾಹಿತ್ಯ ಮತ್ತು ಚರಿತ್ರೆ ವಿಷಯಗಳಲ್ಲಿ ಎರಡು ಪುನರ್ಮನನ ಶಿಬಿರಗಳನ್ನು ನಡೆಸಲಾಗಿದೆ. ಸಂಶೋಧನೆಯನ್ನು ತನ್ನ ಪ್ರಧಾನ ಕಾಳಜಿಯನ್ನಾಗಿಟ್ಟುಕೊಂಡಿರುವ ಕನ್ನಡ ವಿಶ್ವವಿದ್ಯಾಲಯವು ಡಿ.ಲಿಟ್ ಮತ್ತು ಪಿಎಚ್.ಡಿಯನ್ನು ಇನ್ನಷ್ಟು ಖಚಿತಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಮಾಡುವ ದೃಷ್ಟಿಯಿಂದ ಅವುಗಳ ನಿಯಮಾವಳಿಯನ್ನು ಪರಿಷ್ಕರಿಸಿ ಈ ವರ್ಷದಿಂದಲೇ ಜಾರಿಗೆ ತಂದಿದೆ. ಸಂಶೋಧನೆಯ ವಿನ್ಯಾಸ ಮತ್ತು ಗುಣಗಳನ್ನು ಹೆಚ್ಚು ಪಾರದರ್ಶಕವಾಗಿ ಮತ್ತು ಉತ್ತಮಿಕೆಯ ಮಾದರಿಯಾಗಿ ಇರುವಂತೆ ಈ ನಿಯಮಾವಳಿಗಳನ್ನು ರೂಪಿಸಲಾಗಿದೆ.

ಕನ್ನಡ ಭಾಷಾಧ್ಯಯನ ವಿಭಾಗದಿಂದ, ಭಾಷೆ ಮತ್ತು ತಂತ್ರಜ್ಞಾನ ರಾಷ್ಟ್ರೀಯ ವಿಚಾರ ಸಂಕಿರಣ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಅಕ್ಕಮಹಾದೇವಿ ವಚನಗಳು: ಸಾಂಸ್ಕೃತಿ ಮುಖಾಮುಖಿ (ಚಿತ್ರದುರ್ಗ), ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಿಂದ ದ್ರಾವಿಡ ಛಂದಸ್ಸು (ಕಾಸರಗೋಡು), ಮೌಖಿಕ  ಪರಂಪರೆ ಮತ್ತು ದಕ್ಷಿಣ ಭಾರತದ ಇತಿಹಾಸ (ದೆಹಲಿ), ಭಾಷಾಂತರ ವಿಭಾಗದಿಂದ ಭಾಷಾಂತರ ಕಮ್ಮಟ ಮತ್ತು ಭಾಷಾಂತರ ಉಪನ್ಯಾಸ ಮಾಲೆ, ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗದಿಂದ ಕನ್ನಡ ಹಸ್ತಪ್ರತಿ ಸಮ್ಮೇಳನ (ಬಿಜಾಪುರ), ಡಿ.ಎಲ್. ನರಸಿಂಹಾಚಾರ್: ಶತಮಾನದ ಸ್ಮರಣೆ (ಬೆಂಗಳೂರು), ಹಸ್ತಪ್ರತಿ ತರಬೇತಿ ಶಿಬಿರಗಳು ಮತ್ತು ಜಾಗೃತಿ ಶಿಬಿರಗಳನ್ನು ನಡೆಸಲಾಗಿದೆ. ಈ ವಿಭಾಗದಲ್ಲಿರುವ ಹಸ್ತಪ್ರತಿ ಸಂಪನ್ಮೂಲ ಕೇಂದ್ರವು ನ್ಯಾಷನಲ್ ಮ್ಯಾನ್‌ಸ್ಕ್ರಿಪ್ಟ್ ಮಿಷನ್‌ನ ನೆರವಿನಿಂದ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಹಸ್ತಪ್ರತಿ ಜಾಗೃತಿ ಶಿಬಿರಗಳನ್ನು ನಡೆಸಿ ಹಸ್ತಪ್ರತಿಗಳನ್ನು ಸಂಗ್ರಹಿಸಿದೆ. ಈ ಯೋಜನೆಯ ಭಾಗವಾಗಿ ಸುಮಾರು ೧೪೦೦ ಹಸ್ತಪ್ರತಿಗಳ ಸೂಚೀಕರಣದ ಕೆಲಸ ನಡೆದಿದೆ. ಈ ಕೇಂದ್ರದ ಪ್ರಗತಿಗೆ ನ್ಯಾಷನಲ್ ಮ್ಯಾನ್‌ಸ್ಕ್ರೀಪ್ಟ್ ಮಿಷನ್ ಮೆಚ್ಚುಗೆ ವ್ಯಕ್ತಪಡಿಸಿದೆ. ಮಹಿಳಾ ಅಧ್ಯಯನ ವಿಭಾಗದಿಂದ ಮಹಿಳಾ ಅಧ್ಯಯನ ಮತ್ತು ಅನ್ಯ ಜ್ಞಾನಶಿಸ್ತುಗಳ ಕಮ್ಮಟ (ಗುಲ್ಬರ್ಗಾ), ಜಾನಪದ ಅಧ್ಯಯನ ವಿಭಾಗದಿಂದ ದೇಸಿ ಸಮ್ಮೇಳನ (ಹಾಸನ), ಚರಿತ್ರೆ ವಿಭಾಗದಿಂದ ಕರ್ನಾಟಕ ಚರಿತ್ರೆಯ ಚಿಂತನಾ ನೆಲೆಗಳು ವಿಚಾರ ಸಂಕಿರಣ, ಶಾಸನಶಾಸ್ತ್ರದ ವಿಧಿ ವಿಧಾನಗಳು (ಕಾರ್ಕಳ) ವಿಚಾರ ಸಂಕಿರಣ ನಡೆದಿವೆ. ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಯ ಶಾಸನ ಸಂಪುಟಗಳು ಪ್ರಕಟಣೆಗೆ ಸಿದ್ದವಾಗಿದ್ದು, ಅವು ೨೦೦೬ ರಲ್ಲಿ ಪ್ರಕಟವಾಗುತ್ತವೆ. ಮುಂದಿನ ಯೋಜನೆಯಾಗಿ ಗುಲ್ಬರ್ಗಾ ಮತ್ತು ಉತ್ತರ ಕರ್ನಾಟಕದ ಇತರೆ ಜಿಲ್ಲೆಗಳ ಶಾಸನ ಸಂಗ್ರಹ ಆರಂಭವಾಗುತ್ತದೆ. ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಶಾಲಾಶಿಕ್ಷಕರಿಗೆ ಪಠ್ಯಪುಸ್ತಕ ಕಮ್ಮಟ, ಪೊಲೀಸ್‌ರಿಗೆ ಮಾನವ ಹಕ್ಕುಗಳ ಕಮ್ಮಟ, ಬುಡಕಟ್ಟು ಅಧ್ಯಯನ ವಿಭಾಗದಿಂದ ಬುಡಕಟ್ಟು ಪ್ರತಿನಿಧಿಗಳ ಕಮ್ಮಟ, ಬಾದಾಮಿ ಶಿಲ್ಪ ಮತ್ತು ವರ್ಣ ಚಿತ್ರಕಲಾ ವಿಭಾಗದಿಂದ ಲಲಿತಕಲಾ ಅಕಾಡೆಮಿ ಮತ್ತು ಶಿಲ್ಪಕಲಾ ಅಕಾಡೆಮಿಗಳ ಸಹಯೋಗದಲ್ಲಿ ಸಾಂಪ್ರದಾಯಿಕ ಶಿಲ್ಪ ಮತ್ತು ಚಿತ್ರಕಲಾ ನಡೆದಿದೆ. ಸಂಗೀತ ವಿಭಾಗದಿಂದ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಸಂಗೀತ ಯಾತ್ರೆ ಅಭಿಯಾನ ನಡೆದಿದೆ. ಪುರಂದರದಾಸ ಅಧ್ಯಯನ ಪೀಠದಿಂದ ಕನಕದಾಸ ಸಾಹಿತ್ಯ – ಮರು ಓದು ವಿಚಾರ ಸಂಕಿರಣ (ಮಂಗಳೂರು ವಿ.ವಿ.) ಮತ್ತು ದಾಸಸಂತ ರಾಷ್ಟ್ರೀಯ ಸಮ್ಮೇಳನ (ಪಂಢರಾಪುರ); ದಲಿತ ಅಧ್ಯಯನ ಪೀಠದಿಂದ ದಲಿತರು ಮತ್ತು ಪರ್ಯಾಯ ರಾಜಕಾರಣ ವಿಚಾರ ಸಂಕಿರಣ (ಮೈಸೂರು); ಶಂಬಾಜೋಶಿ ಅಧ್ಯಯನ ಪೀಠದಿಂದ ಸಂಶೋಧನಾ ಕಮ್ಮಟ ಮತ್ತು ಅಧ್ಯಯನದ ವಿಧಿವಿಧಾನಗಳು ಕಮ್ಮಟಗಳು ನಡೆದಿವೆ. ಯುಜಿಸಿ ಆರ್ಥಿಕ ನೆರವಿನ ವಿಶೇಷ ಸಹಾಯ ಯೋಜನೆಯಡಿ ಯಲ್ಲಿ ಬುಡಕಟ್ಟು ಅಧ್ಯಯನ ವಿಭಾಗದಿಂದ ಸುಮಾರು ೫೦ ಬುಡಕಟ್ಟುಗಳ ಸಮೀಕ್ಷೆ ಮತ್ತು ಅಧ್ಯಯನ ಪ್ರಗತಿಯಲ್ಲಿದೆ. ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯವು ಪರಿಶಿಷ್ಟ ವರ್ಗಗಳ ಸಂಶೋಧನೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಪಟ್ಟಂತೆ ಬುಡಕಟ್ಟು ಅಧ್ಯಯನ ವಿಭಾಗವನ್ನು ಸಂಪನ್ಮೂಲ ಕೇಂದ್ರವಾಗಿ ಗುರುತಿಸಿ ಈ ವಿಭಾಗದ ಮೂಲಕ ಯೋಜನೆಗಳು ಆರಂಭವಾಗಿವೆ. ಯುಜಿಸಿ ಆರ್ಥಿಕ ನೆರವಿನಿಂದ ಸ್ಥಾಪನೆಗೊಂಡ ಮಹಿಳಾ ಅಧ್ಯಯನ ಕೇಂದ್ರವು ಮಾರ್ಚ್ ೨೦೦೫ ರಂದು ಉದ್ಘಾಟನೆಗೊಂಡು ಮಹಿಳಾ ಅಧ್ಯಯನಗಳು ಮತ್ತು ಮಹಿಳಾ ಚಳುವಳಿಗಳು ಸಂವಾದ ಕಾರ್ಯಕ್ರಮವನ್ನು ನಡೆಸಿದೆ. ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಕಮಲಾಪುರದ ಪ್ರಾಥಮಿಕ ಆರೋಗ್ಯಕೇಂದ್ರದ ಸಹಾಯದಿಂದ ಪರಿಸರದ ಮಹಿಳೆಯರಿಗಾಗಿ ಸಂತಾನಾರೋಗ್ಯ ಸಲಹಾ ಕೇಂದ್ರವನ್ನು ಆರಂಭಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಮಹಿಳಾ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಈ ಕೇಂದ್ರದ ಆಶ್ರಯದಲ್ಲಿ ಮಹಿಳಾ ಅಧ್ಯಯನ ಸ್ನಾತಕೋತ್ತರ ಡಿಪ್ಲೋಮಾ ಆರಂಭವಾಗಿದೆ. ಮಹಿಳಾ ಅಧ್ಯಯನದ ಪಾರಿಭಾಷಿಕ ಪದಕೋಶ, ಮಹಿಳಾ ಅಧ್ಯಯನ ವಿಶ್ವಕೋಶ, ಮಹಿಳಾ ಅಧ್ಯಯನ ಸರ್ಟಿಫಿಕೇಟ್ ಕೋರ್ಸ್, ಮಹಿಳಾ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಕಿರು ಪುಸ್ತಕ ಪ್ರಕಟಣೆ ಮುಂದಿನ ಮುಖ್ಯ ಯೋಜನೆಗಳಾಗಿವೆ. ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ಪ್ರಸ್ತುತ ಕನ್ನಡ ಸಾಹಿತ್ಯ ಎಂ.ಎ. ಪದವಿ, ಹದಿನೈದು ವಿವಿಧ ಸ್ನಾತಕೋತ್ತರ ಡಿಪ್ಲೋಮಾಗಳು ಮತ್ತು ನಾಲ್ಕು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುತ್ತಿದೆ. ಈ ವರ್ಷ ಚರಿತ್ರೆ, ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣ ಎನ್ನುವ ಇನ್ನೆರಡು ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಿದೆ. ದೂರಶಿಕ್ಷಣ ಕೇಂದ್ರವು ಪ್ರಾದೇಶಿಕ ಅಧ್ಯಯನ ಕೇಂದ್ರಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ತೆರೆಯುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಿದ ಭಾಷಾಂತರ ಕೇಂದ್ರದಿಂದ ಕನ್ನಡದ ಮಹತ್ವದ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸುವ ಕಾರ್ಯ ಆರಂಭವಾಗಿದೆ. ಕನ್ನಡದ ಐದುನೂರು ವಚನಗಳ ಇಂಗ್ಲಿಷ್ ಅನುವಾದ ಪ್ರಗತಿಯಲ್ಲಿದ್ದು ಮಾರ್ಚ್ ೨೦೦೬ ರಲ್ಲಿ ಪೂರ್ಣಗೊಳ್ಳುತ್ತದೆ. ಕನ್ನಡ ಜನಪದ ಮಹಾಕಾವ್ಯಗಳ ಮುಖ್ಯ ಭಾಗಗಳ ಸಂಕಲನದ ಇಂಗ್ಲೀಷ್ ಅನುವಾದದ ಕಾರ್ಯ ಆರಂಭದ ಹಂತದಲ್ಲಿದೆ. ಕನ್ನಡದ ಮೊತ್ತ ಮೊದಲ ಗದ್ಯ ಗ್ರಂಥ ವಡ್ಡಾರಾಧನೆ ಇಂಗ್ಲಿಷ್ ಅನುವಾದವು ಭಾಷಾಂತರ ಕೇಂದ್ರದ ಮುಂದಿನ ವರ್ಷದ ಇನ್ನೊಂದು ಮುಖ್ಯ ಯೋಜನೆ.

ಕನ್ನಡ ಸಂಶೋಧನೆಗೆ ಸಂಬಂಧಿಸಿದಂತೆ ಈವರೆಗೆ ನಡೆದಿರುವ ಕೆಲಸಗಳನ್ನು ಶೇಖರಿಸುವ ಮತ್ತು ವ್ಯವಸ್ಥಿತಗೊಳಿಸುವ ನವೀನ ಯೋಜನೆಗಳನ್ನು ಸಿರಿಗಿನ್ನಡ ಗ್ರಂಥಾಲಯದಲ್ಲಿ ಸಂಶೋಧನಾ ಕರ್ನಾಟಕ ಎನ್ನುವ ಹೆಸರಿನಲ್ಲಿ ಆರಂಭಿಸಲಾಗಿದೆ. ಕನ್ನಡ ಭಾಷೆ, ಸಾಹಿತ್ಯ, ವಿಜ್ಞಾನ, ಸಮಾಜ ವಿಜ್ಞಾನ, ಆಡಳಿತ ನಿರ್ವಹಣೆ ಮುಂತಾದ ಕರ್ನಾಟಕ ಸಂಬಂಧಿಯಾದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಜಗತ್ತಿನ ಯಾವುದೇ ವಿಶ್ವವಿದ್ಯಾಲಯದಲ್ಲಿ ಯಾವುದೇ ಭಾಷೆಯಲ್ಲಿ ಪಿಎಚ್.ಡಿ., ಎಂ.ಫಿಲ್ ಅಧ್ಯಯನ ನಡೆದಿದ್ದರೂ ಅದನ್ನು ಸಂಗ್ರಹಿಸಿಡುವ ಕೆಲಸ ಆರಂಭವಾಗಿದೆ.

ಈ ಯೋಜನೆಯಲ್ಲಿ ಈ ವರೆಗೆ ೬೫೦೦ ಸಂಶೋಧನಾ ಪ್ರಬಂಧಗಳ ಮಾಹಿತಿಗಳನ್ನು ಸಂಗ್ರಹಿಸುವುದರ ಜೊತೆಗೆ ಅದರ ಸಾರಾಂಶವನ್ನು ಸಂಗ್ರಹಿಸುವ ಕೆಲಸ ನಡೆದಿದೆ. ೨೦೦೬ ನವೆಂಬರ್ ವೇಳೆಗೆ ಈ ಯೋಜನೆಯನ್ನು ಬಹುಮಟ್ಟಿಗೆ ಪೂರ್ಣಗೊಳಿಸಿ ಅಂತರ್ಜಾಲದಲ್ಲಿ ಅಳವಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನಮ್ಮ ವಿಶ್ವವಿದ್ಯಾಲಯದ ಮಾಹಿತಿಕೇಂದ್ರದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಮಾಹಿತಿಗಳನ್ನು ಕೆಲಹಾಕಿ ದತ್ತಕಣಜದ ಮಾದರಿಯಲ್ಲಿ ಕಾರ್ಯಕ್ರಮ ರೂಪಿಸುವ ಕೆಲಸ ಆರಂಭವಾಗಿದೆ. ಮೊದಲ ಹಂತವಾಗಿ ಕರ್ನಾಟಕದ ಕಲಾವಿದರು, ಕರ್ನಾಟಕದ ಬರಹಗಾರರು, ಕರ್ನಾಟಕದ ಜಲಸಂಬಂಧಿ ಯೋಜನೆ, ಕರ್ನಾಟಕದ ಪ್ರಾಣಿ ಪಕ್ಷಿಗಳು ಎನ್ನುವ ಯೋಜನೆಗಳನ್ನು ಆರಂಭಿಸಲಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ವರ್ಷ ಈ ಯೋಜನೆಗಳನ್ನು ವಿಸ್ತರಿಸುವ ಮತ್ತು ಅಂತರ್ಜಾಲದಲ್ಲಿ ಸೇರಿಸುವ ಕಾರ್ಯ ನಡೆಯುತ್ತಿದೆ. ಕುಪ್ಪಳ್ಳಿಯಲ್ಲಿ ಇರುವ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಕುವೆಂಪು ಅವರ ಬರಹ ಮತ್ತು ಭಾವಚಿತ್ರಗಳ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗಿದೆ. ಕಳೆದ ವರ್ಷ ಕುವೆಂಪು ನಾಟಕಗಳ ಸಮಗ್ರ ಸಂಪುಟವನ್ನು ಪ್ರಕಟಿಸಲಾಗಿದೆ. ಮುಂದಿನ ವರ್ಷ ಕುವೆಂಪು ಅವರ ಗದ್ಯ ಬರಹಗಳ ಮತ್ತು ಪತ್ರಗಳ ಎರಡು ಸಂಪುಟಗಳನ್ನು ಪ್ರಕಟಿಸಲು ಸಂಪಾದನಾಕಾರ್ಯ ನಡೆದಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಘಟಕದಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಸತಿ ನಿಲಯ ವೇತನವನ್ನು ಸಮರ್ಪಕವಾಗಿ, ಸಕಾಲದಲ್ಲಿಸ ಒದಗಿಸಲಾಗಿದೆ. ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ೨೦೦೫ ರಿಂದ ಪಿಎಚ್.ಡಿ., ಎಂ.ಫಿಲ್ ಶಿಷ್ಯವೇತನವನ್ನು ಹೆಚ್ಚಿಸಿ ವಿಶ್ವವಿದ್ಯಾಲಯದ ವತಿಯಿಂದ ಕೊಡಲು ನಿರ್ಧರಿಸಿದ್ದಾರೆ. ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾಹಿತಿ ಕೊಡಲು ಅರಿವಿನ ಶಿಬಿರವನ್ನು ಈ ಘಟಕದ ಮೂಲಕ ನಡೆಸಲಾಗಿದೆ. ಯುಜಿಸಿ ನೆರವಿನಿಂದ ಕಳೆದ ವರ್ಷ ನಮ್ಮ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ನಡೆಸುವ ಘಟಕ ಸ್ಥಾಪಿಸಲಾಗಿದೆ. ಇದರ ವತಿಯಿಂದ ಜೂನ್ ೨೦೦೫ ರಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಸಿದ್ಧತೆಯ ತರಬೇತಿಯನ್ನು ಸಮರ್ಪಕವಾಗಿ ನಡೆಸಲಾಗಿದ್ದು, ಮೊದಲ ತಂಡದಲ್ಲಿಯೇ ಏಳು ಮಂದಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದಲ್ಲಿ ಎನ್‌ಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದು ಸಂತೋಷದ ಸಂಗತಿ.

ಕನ್ನಡ ವಿಶ್ವವಿದ್ಯಾಲಯವು ೨೦೦೫ ರಲ್ಲಿ ಎರಡು ಶೈಕ್ಷಣಿಕ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ಜೂನ್ ೭, ೨೦೦೫ ರಂದು ಜರ್ಮನಿಯ ವೂಜ್‌ಬರ್ಗ್ ವಿಶ್ವವಿದ್ಯಾಲಯದೊಂದಿಗೆ ಕನ್ನಡ ವಿಶ್ವವಿದ್ಯಾಲಯವು ಶೈಕ್ಷಣಿಕೆ ಕೊಡುಕೊಳ್ಳುವಿಕೆಯ ಒಡಂಬಡಿಕೆಗೆ ಸಹಿ ಹಾಕಿದೆ. ಇದರ ಮುಂದುವರಿಕೆಯಾಗಿ ಜರ್ಮನಿಯ ವೂಜ್‌ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಕ್ಟೋಬರ್‌ನಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟು ಸಮಾಲೋಚನೆ ನಡೆಸಿದ್ದಾರೆ. ದಕ್ಷಿಣ ಭಾರತದ ಭಾಷೆಗಳಿಗೆ ಸಂಬಂಧಪಟ್ಟ ನಾಲ್ಕು ವಿಶ್ವವಿದ್ಯಾಲಯಗಳ ಕುಲಪತಿಗಳು-ಕನ್ನಡ ವಿಶ್ವವಿದ್ಯಾಲಯ ಹಂಪಿ, ತಮಿಳು ವಿಶ್ವವಿದ್ಯಾಲಯ ತಂಜಾವೂರು, ತೆಲುಗು ವಿಶ್ವವಿದ್ಯಾಲಯ ಹೈದರಬಾದ್, ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ-ತಂಜಾವೂರಿನಲ್ಲಿ ಆಗಸ್ಟ್ ೨೦೦೫ ರಲ್ಲಿ ಸಭೆ ಸೇರಿ ಈ ನಾಲ್ಕು ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಯೋಗಕ್ಕೆ ಸಂಬಂಧಪಟ್ಟಂತೆ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಇದರ ಮುಂದುವರಿಕೆಯಾಗಿ ದ್ರಾವಿಡ ಭಾಷೆ ಸಾಹಿತ್ಯ ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಮ್ಮಟ, ಪ್ರಕಟಣೆಗಳು, ಸಹಯೋಗದ ರೂಪದಲ್ಲಿ ನಡೆಯಲಿವೆ.

ನಮ್ಮ ಪ್ರಸಾರಾಂಗವು ಕಳೆದ ಒಂದು ವರ್ಷದಲ್ಲಿ ಸುಮಾರು ೫೦ ರಷ್ಟು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಟಿಸಿದೆ. ಈ ವರ್ಷ ಹಂಪಿ ಉತ್ಸವ ಸಂದರ್ಭದಲ್ಲಿ ಬಿಡುಗಡೆಗೊಂಡ ‘ಪ್ರವಾಸಿ ಕಂಡ ವಿಜಯನಗರ ಸಹಿತ ನಮ್ಮ ಅಧ್ಯಾಪಕರ ಸಂಶೋಧನಾ ಯೋಜನೆಗಳ ವಿಶಿಷ್ಟ ಪ್ರಕಟಣೆಗಳೂ ಸೇರಿದೆ. ನಿನ್ನೆ ತಾನೇ ಪ್ರಸಾರಾಂಗದ ವತಿಯಿಂದ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಪಟ್ಟಂತೆ ೧೦ ಪುಸ್ತಕಗಳು, ವಿಜ್ಞಾನ-ಸಮಾಜವಿಜ್ಞಾನಕ್ಕೆ ಸಂಬಂಧಪಟ್ಟಂತೆ ೧೦ ಪುಸ್ತಕಗಳು ಬಿಡುಗಡೆಯಾಗಿವೆ. ಪದವಿಪೂರ್ವ ಶಿಕ್ಷಣದ ತರಗತಿಗಳಿಗೆ ವಿಜ್ಞಾನ ಮತ್ತು ಸಮಾಜವಿಜ್ಞಾನದ ಪಠ್ಯಪುಸ್ತಕಗಳನ್ನು ಕನ್ನಡ ಮಾಧ್ಯಮದಲ್ಲಿ ಸಿದ್ದಗೊಳಿಸಿ ಪ್ರಕಟಿಸಲಾಗಿದೆ. ಸುವರ್ಣ ಕರ್ನಾಟಕದ ನೆನಪಿಗಾಗಿ ಕರ್ನಾಟಕದ ಬೇರೆ ಬೇರೆ ಅರಿವಿನ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ೫೦ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಆರಂಭವಾಗಿದೆ. ಕನ್ನಡವನ್ನು ಕಟ್ಟಿದ ಹಿರಿಯರ ಒಂದೊಂದು ಕೃತಿಯನ್ನು ಪ್ರಕಟಿಸುವ ಹಿರಿಯರ ಕರ್ನಾಟಕ ಯೋಜನೆ ೨೦೦೬ರೊಳಗೆ ಪೂರ್ಣಗೊಳ್ಳಲಿದೆ. ಕನ್ನಡದ ಪ್ರಾಚೀನ ಜೈನಸಾಹಿತ್ಯ ಕೃತಿಗಳನ್ನು ಸಂಪುಟಗಳ ರೂಪದಲ್ಲಿ ಪ್ರಕಟಿಸುವ ಯೋಜನೆಗೆ ಕರ್ನಾಟಕ ಸರ್ಕಾರವು ೨೫ ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆ. ಇದರಲ್ಲಿ ೨೧ ಲಕ್ಷ ಪ್ರಾಚೀನ ಜೈನಸಾಹಿತ್ಯ ಸಂಪುಟಗಳನ್ನು ಸಂಪಾದಿಸಿ ಪ್ರಕಟಿಸುವ ಕೆಲಸ ಆರಂಭವಾಗಿದೆ. ಐದು ಸಂಪುಟಗಳನ್ನು ಫೆಬ್ರವರಿ ೨೦೦೬ರೊಳಗೆ ಹೊರತರುವ  ಕೆಲಸ ಪ್ರಗತಿಯಲ್ಲಿದೆ. ಇದನ್ನು ವಿಶ್ವವಿದ್ಯಾಲಯವು ಜೈನ ಸಂಸ್ಕೃತಿ ಅಧ್ಯಯನ ಪೀಠ ಮತ್ತು ಪ್ರಸಾರಾಂಗದ ಮೂಲಕ ಕಾರ್ಯಗತಗೊಳಿಸಲಿದೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಕರ್ನಾಟಕದ ಹಿರಿಯ ಮುತ್ಸದ್ಧಿಗಳು, ಕನ್ನಡದ ಹಿರಿಯ ಲೇಖಕರು, ಚಿಂತಕರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ವಾಂಸರು ಆಗಮಿಸಿ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರದ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಎಂ. ಪಿ. ಪ್ರಕಾಶ್, ಉನ್ನತ ಶಿಕ್ಷಣ ಸಚಿವರಾದ ಶ್ರೀ ಡಿ. ಮಂಜುನಾಥ್, ಮಾಜಿ ಸಚಿವೆಯರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್, ಶ್ರೀಮತಿ ಮೋಟಮ್ಮ, ಹಿರಿಯ ರಾಜಕಾರಣಿ ಶ್ರೀ ಎನ್. ತಿಪ್ಪಣ್ಣ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಹನುಮಯ್ಯ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶೋಭಾ ನಂಬೀಶನ್, ಕರ್ನಾಟಕ ಸರ್ಕಾರದ ಅನೇಕ ಉನ್ನತ ಅಧಿಕಾರಿಗಳು ವಿಶ್ವವಿದ್ಯಾಲಯವನ್ನು ಸಂದರ್ಶಿಸಿ ಮಾರ್ಗದರ್ಶನ ನೀಡಿದ್ದಾರೆ. ಅಮೇರಿಕಾದ ಮಾನವವಿಜ್ಞಾನಿ ಪ್ರೊ. ಪೀಟರ್ ಜೆ. ಕ್ಲಾಸ್, ಜರ್ಮನಿಯ ಭಾರತಶಾಸ್ತ್ರಜ್ಞೆ ಪ್ರೊ. ಹೈಡ್ರೂನ್ ಬ್ರೂಕ್ನರ್, ಸ್ವಿಜರ್‌ಲ್ಯಾಂಡಿನ ಬಾಸೆಲ್‌ನ ಇತಿಹಾಸಕಾರ ಪ್ರೊ. ಪೌಲ್ ಜೆನ್ಕಿನ್ಸ್, ಸಾಹಿತಿಗಳಾದ ಡಾ.ಯು. ಆರ್. ಅನಂತಮೂರ್ತಿ, ಪ್ರೊ. ಜಿ. ವೆಂಕಟಸುಬ್ಬಯ್ಯ, ಶ್ರೀಮತಿ ಗೀತಾನಾಗಭೂಷಣ, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಸಿ.ಎನ್. ರಾಮಚಂದ್ರನ್, ಡಾ. ಭಕ್ತವತ್ಸಲ ರೆಡ್ಡಿ, ಡಾ. ರಾಘವನ್ ಪಯ್ಯನಾಡ್, ಪ್ರೊ. ವೆಲೇರಿಯನ್ ರೋಡ್ರಿಗಸ್, ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಪುರುಷೋತ್ತಮ ಬಿಳಿಮಲೆ, ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ, ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ. ಪ್ರೊ. ಕಿ.ರಂ. ನಾಗರಾಜ, ಡಾ. ಪ್ರಧಾನ್ ಗುರುದತ್ತ, ಡಾ. ಶಿವರಾಮ ಪಡಿಕ್ಕಲ್, ಡಾ. ಎಚ್.ಎಸ್. ರಾಘವೇಂದ್ರರಾವ್, ಹಂಪಿಯ ವಿಶ್ವ ಪರಂಪರೆಯ ಸಮಿತಿಯ ತಜ್ಞರು ಮತ್ತು ಅನೇಕ ಅಧಿಕಾರಿಗಳು, ಶ್ರೀ ಅನುರಾಗ ಅರೋರ, ರಾಷ್ಟ್ರೀಯ ಹಸ್ತಪ್ರತಿ ಮಿಷನ್, ನವದೆಹಲಿ ಮತ್ತು ಅನೇಕ ಸಾಹಿತಿಗಳು ಹಾಗೂ ಚಿಂತಕರು ಉಪನ್ಯಾಸ ಮತ್ತು ಸಂವಾದಗಳಲ್ಲಿ ಭಾಗವಹಿಸಿದ್ದಾರೆ.

ನಮ್ಮ ವಿಶ್ವವಿದ್ಯಾಲಯದ ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಗೆ ದೆಹಲಿ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಮಹಾತ್ಮ ಜ್ಯೋತಿಬಾ ಪುಲೆ ರಾಷ್ಟ್ರೀಯ ಪ್ರಶಸ್ತಿ, ಎ.ವಿ.ನಾವಡ ಅವರಿಗೆ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ ವಿ.ಎಂ. ಇನಾಂದರ್ ವಿಮರ್ಶಾ ಪ್ರಶಸ್ತಿ, ಡಾ. ಎಚ್.ಎಸ್. ಶ್ರೀಮತಿ ಅವರಿಗೆ ಶಾಶ್ವತಿ ಪ್ರಶಸ್ತಿ, ಡಾ. ಟಿ. ಆರ್. ಚಂದ್ರಶೇಖರ ಅವರಿಗೆ ಕಾವ್ಯಾನಂದ ಪುರಸ್ಕಾರ, ಡಾ. ಕೆ.ಎಂ. ಮೈತ್ರಿ ಅವರಿಗೆ ಕರ್ನಾಟಕ ಬುಡಗಜಂಗಮ ಕ್ಷೇಮಾಭಿವೃದ್ಧಿ ಸಂಘ ಕೊಡಮಾಡಿರುವ ಬುಡಗರತ್ನ ಪ್ರಶಸ್ತಿ ಡಾ. ಎಸ್.ಸಿ.ಪಾಟೀಲ್ ಅವರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಡಾ ಶೈಲಜ ಇಂ. ಹಿರೇಮಠ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಸಾಹಿತ್ಯ ಪುರಸ್ಕಾರ ಮತ್ತು ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಸಾವಿತ್ರಮ್ಮ ದತ್ತಿನಿಧಿ ಸಾಹಿತ್ಯ ಪ್ರಶಸ್ತಿ, ಡಾ ಎಫ್.ಟಿ. ಹಳ್ಳಿಕೇರಿ ಮತ್ತು ಶ್ರೀ ಸುಜ್ಞಾನಮೂರ್ತಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನಗಳು ಬಂದಿವೆ. ಈ ಎಲ್ಲ ಪ್ರಶಸ್ತಿ, ಗೌರವ, ಬಹುಮಾನ ಪಡೆದು ಕನ್ನಡ ವಿಶ್ವವಿದ್ಯಾಲಯಕ್ಕೆ ಗೌರವದ ಗರಿಗಳನ್ನು ಜೋಡಿಸಿದ ನಮ್ಮ ಸಾಧಕರಿಗೆ ಹಾರ್ದಿಕ ಅಭಿನಂದನೆಗಳು. ನಮ್ಮ ವಿಶ್ವವಿದ್ಯಾಲಯದ ಅನೇಕ ಅಧ್ಯಾಪಕರ ಪುಸ್ತಕಗಳು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳಿಂದ ಪ್ರಕಟವಾಗಿ ಮೆಚ್ಚುಗೆ ಪಡೆದಿದೆ. ನಮ್ಮ ಅನೇಕ ಅಧ್ಯಾಪಕರು ತಮ್ಮ ಸೃಜನಶೀಲ ಬರವಣಿಗೆಗಳಿಂದ (ಕವನ, ಕಥೆ, ಕಾದಂಬರಿ) ನಮ್ಮ ವಿಶ್ವವಿದ್ಯಾಲಯಕ್ಕೆ ವಿಶೇಷ ಮನ್ನಣೆಯನ್ನು ತಂದುಕೊಟ್ಟಿದ್ದಾರೆ. ನಮ್ಮವರು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣ, ಕಮ್ಮಟ, ವಿಶೇಷ ಉಪನ್ಯಾಸಗಳಲ್ಲಿ ಪಾಲ್ಗೊಂಡು ಕನ್ನಡ ವಿಶ್ವವಿದ್ಯಾಲಯಕ್ಕೆ ಅನನ್ಯ, ಬೌದ್ಧಿಕ ಕೇಂದ್ರ ಎಂಬ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಆವರಣ ವಿದ್ಯಾರಣ್ಯವು ಕಳೆದ ಒಂದು ವರ್ಷದಲ್ಲಿ ಮಲೆಯ ನೀರನ್ನು ತುಂಬ ಸಂತೋಷದಿಂದ ತುಂಬಿಕೊಂಡಿವೆ. ಮರಗಿಡಗಳು ಬಹುಕಾಲದ ಬಳಿಕ ಹಸನಾಗಿ ಸಾವಿರ ಗಿಡಗಳನ್ನು ಮತ್ತೆ ನೆಡಲಾಗಿದೆ. ಹೊಸ ಕೊಳವೆಬಾವಿಗಳ ನೀರು ವಿಶ್ವವಿದ್ಯಾಲಯದ ನೀರಿನ ಕೊರತೆಯನ್ನು ಬಹುಮಟ್ಟಿಗೆ ನೀಗಿಸಿದೆ. ವಾಣಿಜ್ಯ ಸಂಕೀರ್ಣ ಕಟ್ಟಡ, ಆಡಳಿತ ಸಿಬ್ಬಂದಿ ವಸತಿಗೃಹಗಳ ನಾಲ್ಕು ಮನೆಗಳು ಮತ್ತು ನರ್ಸರಿ ಶಾಲೆ ಕಟ್ಟಡ – ಇವು ಪೂರ್ಣಗೊಂಡಿದೆ. ಸಂಗೀತ ವಿಭಾಗದ ಕಟ್ಟಡವನ್ನು ಪೂರ್ಣಗೊಳಿಸಿ ವಿಭಾಗದ ಚಟುವಟಿಕೆಗಳಿಗೆ ಒಪ್ಪಿಸಲಾಗಿದೆ. ಬಹುಕಾಲದ ಬೇಡಿಕೆಯಾದ ಪಾಪಿನಾಯಕನಹಳ್ಳಿ ರಸ್ತೆಯಿಂದ ವಿದ್ಯಾರಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆ ಬಳ್ಳಾರಿ ಜಿಲ್ಲಾ ಪಂಚಾಯತ್‌ನವರ ಪೂರ್ಣ ಸಹಕಾರದಿಂದ ನಿರ್ಮಾಣಗೊಂಡು ಡಾಂಬರೀಕರಣವಾಗಿ ಸಂಚಾರಕ್ಕೆ ತೆರೆದುಕೊಂಡಿರುವುದು ಸಂತೋಷದ ಸಂಗತಿ. ಗುಲ್ಬರ್ಗಾ ವಿದ್ಯುತ್ ಪೂರೈಕೆಯ ಸಂಪರ್ಕ ಕಲ್ಪಿಸಲಾಗಿದ್ದು, ಇಪ್ಪತ್ತನಾಲ್ಕು ಗಂಟೆಗಳ ವಿದ್ಯುತ್ ಪೂರೈಕೆಯ ಸಮೃದ್ಧಿ ಪ್ರಾಪ್ತವಾಗಿದೆ.

ವಿಶ್ವವಿದ್ಯಾಲಯದ ಅಕ್ಷರ ಕಟ್ಟಡದಲ್ಲಿ ಪ್ರಸಾರಾಂಗದ ಹೊಸ ಪುಸ್ತಕ ಮಳಿಗೆ ಮತ್ತು ಕರಕುಶಲ ಕೇಂದ್ರಗಳನ್ನು ತೆರೆಯಲಾಗಿದೆ. ಅಕ್ಷರ ಸಂಸ್ಕೃತಿ ಮತ್ತು ಕಾಯಕ ಸಂಸ್ಕೃತಿಯ ಎರಡು ಮಳಿಗೆಗಳು ಕನ್ನಡ ವಿಶ್ವವಿದ್ಯಾಲಯದ ಆಶಯವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ವಿಶ್ವವಿದ್ಯಾಲಯದ ದೃಶ್ಯಕಲೆ ಮತ್ತು ಚಿತ್ರಕಲೆ ಹಾಗೂ ಶಿಲ್ಪಕಲೆ ವಿಭಾಗಗಳ ಚಿತ್ರಗಳು ಮತ್ತು ಶಿಲ್ಪಗಳು ಪ್ರದರ್ಶನ ಮತ್ತು ಮಾರಾಟಕ್ಕೆ ದೊರೆಯುತ್ತವೆ. ಕರ್ನಾಟಕದ ಕರಕುಶಲ ಕಲೆಗಳಿಗೆ ಪ್ರೋತ್ಸಾಹ ಕೊಡುವ ಮತ್ತು ವಿಶ್ವವಿದ್ಯಾಲಯವೇ ಕರಕುಶಲಕೇಂದ್ರವೊಂದನ್ನು ತೆರೆದು ಕರ್ನಾಟಕದ ದೇಸಿಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ದೃಷ್ಟಿಯಿಂದ ಈ ಕರಕುಶಲಕೇಂದ್ರವು ನಮ್ಮ ಅನನ್ಯತೆಯ ಪ್ರತೀಕ.

ವಿಶ್ವವಿದ್ಯಾಲಯದ ಆವರಣದಲ್ಲಿ ಕಂಪ್ಯೂಟರ್ ಸಂಪನ್ಮೂಲ ಕೇಂದ್ರವೊಂದರ ಹೊಸ ಕಟ್ಟಡದ ಕೆಲಸ ಆರಂಭವಾಗಿದೆ. ಇಲ್ಲಿ ವಿಶ್ವವಿದ್ಯಾಲಯದಲ್ಲಿ ಎಲ್ಲ ವಿಭಾಗಗಳ ನಡುವೆ ಅಂತರ್ ಸಂಬಂಧವನ್ನು ಏರ್ಪಡಿಸುವ ಮತ್ತು ಎಲ್ಲ ವಿಭಾಗಗಳಿಗು ಅಂತರ್ಜಾಲದ ಸೌಲಭ್ಯವನ್ನು ಒದಗಿಸುವ ಹಾಗೂ ತರಬೇತಿ ಕೊಡುವ ಕೆಲಸ ನಡೆಯುತ್ತದೆ. ಈ ವರ್ಷ ಎಲ್ಲ ವಿಭಾಗಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಮತ್ತು ತರಬೇತಿಯನ್ನು ಕೊಡಲಾಗಿದೆ.

ಮಹಿಳೆಯರ ವಸತಿಗೃಹ, ಸಂಶೋಧಕರ ವಸತಿಗೃಹ, ಆಡಳಿತ ಸಿಬ್ಬಂದಿಯ ವಸತಿಗೃಹ – ಇವು ಈಗ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಇತರ ಮೂರು ಕಟ್ಟಡಗಳು. ಪರಿಶಿಷ್ಟ ಜಾತಿ-ಪಂಗಡಗಳ ವಿದ್ಯಾರ್ಥಿ ವಸತಿ ನಿಲಯ, ಅಧ್ಯಯನ ವಿಭಾಗಗಳ ಮೂರು ಕಟ್ಟಡಗಳು ೨೦೦೬ ರಲ್ಲಿ ಆರಂಭವಾಗಿ ಪೂರ್ಣಗೊಳ್ಳುತ್ತವೆ. ಹೊಸಪೇಟೆ ಶಾಸಕರಾದ ಶ್ರೀ ಎಚ್.ಆರ್. ಗವಿಯಪ್ಪ ಅವರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದವರ್ಗಗಳ ವಸತಿ ನಿಲಯಗಳಿಗೆ ಪೀಠೋಪಕರಣಗಳನ್ನು ದಾನವಾಗಿ ಕೊಡಮಾಡಿರುವುದನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನಿಂದ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ತೆರೆಯುವ ಪ್ರಸ್ತಾವನೆಯೊಂದು ಸಿದ್ಧವಾಗಿದ್ದು ಅದನ್ನು ಸರ್ಕಾರದ ಅಂಗೀಕಾರಕ್ಕೆ ಕಳುಹಿಸಲಾಗುತ್ತಿದೆ.

ನಮ್ಮ ವಿಶ್ವವಿದ್ಯಾಲಯದ ಬಾದಾಮಿಯ ಕೇಂದ್ರದಲ್ಲಿ ಕಂದಾಯ ಇಲಾಖೆಯ ಭೂಮಿಯನ್ನು ವಿಶ್ವವಿದ್ಯಾಲಯ ಕೊಂಡುಕೊಂಡಿರುವುದಲ್ಲದೆ ಮೂರು ಕೊಳವೆ ಬಾವಿಗಳ ಮೂಲಕ ಸಮೃದ್ಧ ನೀರನ್ನು ಆವರಣಕ್ಕೆ ಒದಗಿಸಲಾಗಿದೆ. ಇದಲ್ಲದೆ ವಸತಿ ನಿಲಯಗಳು ಮತ್ತು ಆರ್ಟ್ ಗ್ಯಾಲರಿಯನ್ನು ನಿರ್ಮಿಸುವ ಸಿದ್ಧತೆ ನಡೆದಿದೆ. ಬಾದಾಮಿ ಕೇಂದ್ರದ ಚಿತ್ರ- ಶಿಲ್ಪಕಲೆ ವಿಭಾಗ ಮತ್ತು ವಿದ್ಯಾರಣ್ಯದ ದೃಶ್ಯಕಲಾ ವಿಭಾಗದ ವಿದ್ಯಾರ್ಥಿಗಳು ನಾಡಿನಾದ್ಯಂತ ತಮ್ಮ ಸೃಜನಶೀಲ ಚಿತ್ರಗಳನ್ನು ಪ್ರದರ್ಶಿಸಿ ಪ್ರತಿಭೆಯನ್ನು ಪ್ರಕಟಿಸಿದ್ದಾರೆ. ವಿಶ್ವವಿದ್ಯಾಲಯವನ್ನು ಬಣ್ಣರೇಖೆಗಳ ಮೂಲಕ ತುಂಬುವ, ಇಡೀ ಆವರಣವನ್ನು ಒಂದು ಭಿತ್ತಿಯಾಗಿ ಬಳಸಿಕೊಳ್ಳುವ ಯೋಜನೆಯನ್ನು ಅವರು ಕೈಗೊಂಡಿದ್ದಾರೆ.

೨೦೦೬ ಜನವರಿ ಮತ್ತು ಫೆಬ್ರವರಿಯಲ್ಲಿ ಯುಜಿಸಿ ಪ್ರಾಯೋಜಿತ ಎರಡು ಪುನರ್ಮನನ ಶಿಬಿರಗಳು ಕನ್ನಡ ಸಾಹಿತ್ಯ ಮತ್ತು ಚರಿತ್ರೆ ವಿಷಯಗಳಲ್ಲಿ ನಡೆಯಲಿವೆ. ಕನ್ನಡ ಸಾಹಿತ್ಯಾಧ್ಯಯನ ವಿಭಾಗದಿಂದ ಈ ಡಿಸೆಂಬರ್‌ನಲ್ಲಿ ಹರಿಶ್ಚಂದ್ರ ಚಾರಿತ್ರ: ಸಾಂಸ್ಕೃತಿಕ ಮುಖಾಮುಖಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಅನುಕ್ರಮವಾಗಿ ಧರ್ಮಾಮೃತ ಮತ್ತು ಮಲೆಮಹದೇಶ್ವರ: ಸಾಂಸ್ಕೃತಿಕ ಮುಖಾಮುಖಿ ವಿಚಾರ ಸಂಕಿರಣಗಳು ನಡೆಯುತ್ತವೆ. ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಿಂದ ಮಾರ್ಚ್‌ನಲ್ಲಿ ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ ಸಹಯೋಗದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ, ಭಾಷಾಂತರ ಅಧ್ಯಯನ ವಿಭಾಗದ ವತಿಯಿಂದ ಜನವರಿಯಲ್ಲಿ ಸಮಾಜ ವಿಜ್ಞಾನಗಳಲ್ಲಿ ಭಾಷಾಂತರ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಭಾಷಾಂತರ ವಿಭಾಗದಲ್ಲಿ ಕನ್ನಡದಿಂದ ಬೇರೆ ಭಾಷೆಗಳಿಗೆ ಬೇರೆ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಗೊಂಡಿರುವ ಕೃತಿಗಳ ಮಾಹಿತಿ ದತ್ತ ಕಣಜ ರೂಪಿಸುವ ಕೆಲಸ ಆರಂಭವಾಗಿ ಪ್ರಗತಿಯಲ್ಲಿದೆ. ಹಸ್ತಪ್ರತಿ ಅಧ್ಯಯನ ವಿಭಾಗದಿಂದ ಫೆಬ್ರವರಿಯಲ್ಲಿ ವಿಭಾಗದ ದಶಮಾನೋತ್ಸವ ಸಮಾರಂಭ ಮತ್ತು ಹತ್ತು ಪುಸ್ತಕಗಳ ಪ್ರಕಟಣೆ, ಭಾರತೀಯ ಗ್ರಂಥ ಸಂಪಾದನೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿವೆ. ಚರಿತ್ರೆ ವಿಭಾಗದಿಂದ ಚರಿತ್ರೆ ಪಠ್ಯಪುಸ್ತಕ ರಚನೆ ಮತ್ತು ಬೋಧನೆ ಎಂಬ ಕಮ್ಮಟ ಜನವರಿಯಲ್ಲಿ ನಡೆಯಲಿವೆ. ಅಭಿವೃದ್ಧಿ ಅಧ್ಯಯನ ವಿಭಾಗದಿಂದ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮಾನವ ಹಕ್ಕುಗಳ ಬಗ್ಗೆ ಪೊಲೀಸ್‌ರಿಗೆ, ಸ್ತ್ರೀಶಕ್ತಿ ಕುರಿತು, ಪೋಷಕರು ಹಾಗೂ ಶಿಕ್ಷಕರಿಗೆ ಲಿಂಗ ಸಮಾನತೆ ಕುರಿತು, ನಾಲ್ಕು ಕಮ್ಮಟಗಳನ್ನು ಹಮ್ಮಿಕೊಳ್ಳಲಾಗಿದೆ. ಸುವರ್ಣ ಕರ್ನಾಟಕದ ಈ ವರ್ಷ ‘ಭವಿಷ್ಯದ ಕರ್ನಾಟಕ’ವನ್ನು ಕುರಿತು ಮಹತ್ವದ ಅಭಿವೃದ್ಧಿ ಸಂವಾದವನ್ನು ೨೦೦೬ ರಲ್ಲಿ ನಡೆಸಲಾಗುವುದು. ಸ್ವಾತಂತ್ರೋತ್ತರ ಅಭಿವೃದ್ಧಿ ವಿಶ್ವಕೋಶ, ಅಭಿವೃದ್ಧಿ ಡಾಟಾ ಬ್ಯಾಂಕ್‌ಗಳ ಯೋಜನೆಗಳು ಈ ವಿಭಾಗದಿಂದ ಈ ವರ್ಷ ಕಾರ್ಯಾರಂಭ ಮಾಡುತ್ತವೆ. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗವು ಉತ್ತರ ಕರ್ನಾಟಕದ ಜಿಲ್ಲೆಗಳ ಜಿಲ್ಲಾವಾರು ದೇವಾಲಯಗಳ ಕೋಶ ಸಿದ್ಧಪಡಿಸುತ್ತಿದ್ದು, ಕಳೆದ ವರ್ಷ ಧಾರವಾಡ ಜಲ್ಲೆ, ಬಿಜಾಪುರ ಜಿಲ್ಲೆ, ಬಾಗಲಕೋಟೆ ಜಿಲ್ಲೆಗಳ ದೇವಾಲಯ ಕೋಶಗಳ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಗುಲ್ಬರ್ಗಾ ಮತ್ತು ಗದಗ ಜಿಲ್ಲೆಯ ದೇವಾಲಯ ಕೋಶಗಳ ಕೆಲಸ ಪ್ರಗತಿಯಲ್ಲಿದೆ. ಧಾರವಾಡ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ದೇವಾಲಯ ಕೋಶಗಳು ೨೦೦೬ ರಲ್ಲಿ ಪ್ರಕಟಗೊಳ್ಳುತ್ತವೆ. ಬುಡಕಟ್ಟು ಅಧ್ಯಯನ ವಿಭಾಗದ ವತಿಯಿಂದ ಬರುವ ಜನವರಿ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪರಿಶಿಷ್ಟ ವರ್ಗಗಳ ಸ್ವಸಹಾಯ ಸ್ತ್ರೀ ಗುಂಪುಗಳಿಗೆ ತರಬೇತಿ, ಸಮುದಾಯಗಳ ಅಧ್ಯಯನದಲ್ಲಿ ಕ್ಷೇತ್ರಕಾರ್ಯದ ಮಹತ್ವ, ಕರ್ನಾಟಕ ಪರಿಶಿಷ್ಟವರ್ಗಗಳ ಯುವಜನರ ತರಬೇತಿ, ಕರ್ನಾಟಕ ಬುಡಕಟ್ಟುಗಳ ಮುಂದಿರುವ ಸವಾಲುಗಳು, ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿ, ಸೋಲಿಗರು ಅಂದು-ಇಂದು ಕಮ್ಮಟಗಳು ನಡೆಯುತ್ತವೆ. ಜಾನಪದ ಅಧ್ಯಯನ ವಿಭಾಗದಿಂದ ದೇಸಿ ಸಮ್ಮೇಳನ, ಜೀ.ಶಂ. ಪರಮಶಿವಯ್ಯ ನೆನಪಿನ ವಿಚಾರಸಂಕಿರಣ, ಮರಳಿ ಹಳ್ಳಿಗೆ ಪಯಣ, ಜನಪದ ಕಲಾವಿದರೊಂದಿಗೆ ಸಂವಾದದಂತಹ ಕಾರ್ಯಕ್ರಮಗಳು ನಡೆಯುತ್ತವೆ. ದಲಿತ ಪೀಠದಿಂದ ದಲಿತರು ಮತ್ತು ಭಾಷೆ ವಿಚಾರ ಸಂಕಿರಣ, ಲೋಹಿಯಾ ಅಧ್ಯಯನ ಪೀಠದಿಂದ ಸಂಡೂರು ಮತ್ತು ಹೆಬ್ಬಳ್ಳಿ ಭೂ ಹೋರಾಟಗಳ ಬಗ್ಗೆ ಲೋಹಿಯಾ ಚಳುವಳಿಕಾರರೊಂದಿಗೆ ಸಂದರ್ಶನ ಸಂಪುಟಗಳ ಪ್ರಕಟಣೆ, ಶಂಬಾ ಅಧ್ಯಯನ ಪೀಠದಿಂದ ಜನವರಿಯಲ್ಲಿ ಸಂಶೋಧನಾ ಕಮ್ಮಟ, ವಾಲ್ಮೀಕಿ ಅಧ್ಯಯನ ಪೀಠದಿಂದ ಬೇಡ ಬುಡಕಟ್ಟಿನ ಚರಿತ್ರೆ ವಿಚಾರ ಸಂಕಿರಣ ಹಾಗೂ ಕರ್ನಾಟಕದಲ್ಲಿ ತಳವಾರಿಕೆ ಯೋಜನೆ ಇವು ತಕ್ಷಣದಲ್ಲಿ ಕಾರ್ಯರೂಪಕ್ಕೆ ಬರುವ ಕಾರ್ಯಕ್ರಮಗಳು. ಈ ಎಲ್ಲ ಕಮ್ಮಟ, ವಿಚಾರ ಸಂಕಿರಣ, ಶಿಬಿರಗಳ ಜೊತೆಗೆ ಎಲ್ಲಾ ಅಧ್ಯಾಪಕರು ತಮ್ಮ ಸಂಶೋಧನೆಯ ಫಲಿತಾಂಶಗಳನ್ನು ಪ್ರಕಟಣೆಯ ರೂಪದಲ್ಲಿ ಹೊರತಂದಿದ್ದಾರೆ. ಮತ್ತು ೨೦೦೬ ಜೂನ್ ಒಳಗೆ ತಮ್ಮ ಸಂಶೋಧನಾ ಯೋಜನೆಗಳನ್ನು ಮುಗಿಸಿ ಹೊಸ ಯೋಜನೆಗಳಿಗೆ ಸಿದ್ಧರಾಗುತ್ತಾರೆ.

ಕನ್ನಡ ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ, ಪ್ರಸರಣದ ಕೆಲಸಗಳ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಕುರಿತ ಸೃಜನಶೀಲ ವಿನ್ಯಾಸಗಳನ್ನು ರೂಪಿಸುವ ಮತ್ತು ಅವುಗಳಿಗೆ ಸೂಕ್ತ ಪ್ರಮಾಣದ ದಾರಿಗಳನ್ನು ಕಂಡುಕೊಳ್ಳುವ ಆಸಕ್ತಿಯನ್ನು ಹೊಂದಿದೆ. ವಿಶ್ವ ಪರಂಪರೆಯ ಕೇಂದ್ರವಾಗಿ ‘ಹಂಪಿ’ ಇರುವಂತೆ ಕನ್ನಡ ಸಂಸ್ಕೃತಿಯ ಶಕ್ತಿ ಕೇಂದ್ರವಾಗಿ ‘ಕನ್ನಡ ವಿಶ್ವವಿದ್ಯಾಲಯ’ವು ವಿಶ್ವ ಸಾಂಸ್ಕೃತಿಕ ನಕ್ಷೆಯಲ್ಲಿ ಸ್ಥಾನ ಪಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ, ಯು.ಜಿ.ಸಿ.ಯ ಎಲ್ಲಾ ಜನವರ್ಗದವರ ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲವನ್ನು ಕೋರುತ್ತೇನೆ.

ಕನ್ನಡ ವಿಶ್ವವಿದ್ಯಾಲಯವು ಹದಿನಾಲ್ಕು ಸಾರ್ಥಕ ಸಂವತ್ಸರಗಳನ್ನು ಪೂರ್ಣ ಗೊಳಿಸುವ ಮೂಲಕ ಮತ್ತೆ ಹೊಸ ಪಯಣಕ್ಕೆ ಸಿದ್ಧವಾಗಿದೆ. ಜಾಗತೀಕರಣಕ್ಕೆ ಪ್ರತಿಯಾಗಿ ಮತ್ತು ಪ್ರತಿಕ್ರಿಯೆಯಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಹೊಸದಾಗಿ ಕಟ್ಟುವ ಕಾಯಕಕ್ಕೆ ಕನ್ನಡ ವಿಶ್ವವಿದ್ಯಾಲಯವನ್ನು ಸಿದ್ಧಗೊಳಿಸುವಲ್ಲಿ ಎಲ್ಲರ ಸಹಕಾರವನ್ನು ಕೋರುತ್ತೇನೆ.

ಅಲ್ಲಮನ ಒಂದು ವಚನ ಈ ರೀತಿ ಹೇಳುತ್ತದೆ.

ಅರಿವು ಅರಿವೆನುತ್ತಿಪ್ಪಿರಿ ಅವರಿ ಸಾಮಾನ್ಯವೆ
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಬಾರದು
ಮುಂದಣ ಹೆಜ್ಜೆಯಳಿದಲ್ಲದೆ

ಒಂದು ಪಾದ ನೆಲೆಗೊಳ್ಳದು
ನೆಲನ ಬಿಟ್ಟು ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು
ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ

ಅರಿವಿನ ಕಾಯಕದ ಮುಂದಣ ಹೆಜ್ಜೆಗಳನ್ನು ಇಡಲು ಮತ್ತು ಪಾದಗಳನ್ನು ನೆಲೆಗೊಳಿಸಲು ಈ ನುಡಿಹಬ್ಬ ಹೊಸ ಚೈತನ್ಯವನ್ನು ಕೊಡಲಿ ಎಂದು ಹಾರೈಸುತ್ತೇನೆ.

ಎಲ್ಲರಿಗೂ ನಮಸ್ಕಾರ

೨೨ ಡಿಸೆಂಬರ್ ೨೦೦೫