ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಗೌರವಾನ್ವಿತ ಕುಲಾಧಿಪತಿಗಳೂ ಆಗಿರುವ ಸನ್ಮನ್ಯ ಶ್ರೀ ರಾಮೇಶ್ವರ ಠಾಕೂರ್ ಅವರೇ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಪ್ರಖ್ಯಾತ ಬರಹಗಾರರೂ ಹಾಗೂ ಭಾರತ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಸನ್ಮಾನ್ಯ ಶ್ರೀ ಎಂ.ವೀರಪ್ಪ ಮೊಯಿಲಿ ಅವರೇ, ನಮ್ಮ ಈ ಪ್ರತಿಷ್ಠಿತ ನುಡಿಹಬ್ಬದಲ್ಲಿ ನಾಡೋಜ ಗೌರವ ಪದವಿಗಳನ್ನು ಸ್ವೀಕರಿಸಲು ಒಪ್ಪಿಕೊಂಡು ದಯಮಾಡಿಸಿರುವ ಸನ್ಮಾನ್ಯ ಶ್ರೀ ಶಾಂತರಸ ಹೆಂಬೇರಾಳು ಅವರೇ, ಗೌರವಾನ್ವಿತ ನ್ಯಾಯಮೂರ್ತಿ ಎಸ್.ಆರ್.ನಾಯಕ ಅವರೇ, ಕನ್ನಡದ ಪ್ರಖ್ಯಾತ ದಲಿತ ಕವಿ ಡಾ. ಸಿದ್ಧಲಿಂಗಯ್ಯ ಅವರೇ ಹಾಗೂ ದೇಸಿ ಸಂಸ್ಕೃತಿಯ ಸಾಕ್ಷಿ ಪ್ರಜ್ಞೆಯಂತಿರುವ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರೇ, ಕನ್ನಡ ವಿಶ್ವವಿದ್ಯಾಲಯದ ವಿವಿಧ ಸಮಿತಿಯ ಎಲ್ಲ ಸದಸ್ಯರೇ, ವಿವಿಧ ಮಾಧ್ಯಮದವರೇ, ಹೊರಗಿನಿಂದ ಬಂದಿರುವ ಎಲ್ಲ ಜನಪ್ರತಿನಿಧಿಗಳೇ, ಕನ್ನಡ ವಿಶ್ವವಿದ್ಯಾಲಯದ ಎಲ್ಲ ಸಹೋದ್ಯೋಗಿ ಬಂಧುಗಳೇ, ಆಹ್ವಾನಿತರೆ ಮತ್ತು ಸಭಿಕರೇ,

ಕನ್ನಡ ವಿಶ್ವವಿದ್ಯಾಲಯದ ೧೬ನೇ ನುಡಿಹಬ್ಬಕ್ಕೆ ತಮ್ಮೆಲ್ಲರನ್ನೂ ಪ್ರೀತಿ ವಿಶ್ವಾಸದಿಂದ, ತುಂಬು ಗೌರವದಿಂದ ಸ್ವಾಗತಿಸಲು ಇಷ್ಟಪಡುತ್ತೇನೆ. ಭಾರತದ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಘನತೆವೆತ್ತ ರಾಜ್ಯಪಾಲರು ನುಡಿಹಬ್ಬದ ಅಧ್ಯಕ್ಷತೆಯನ್ನು ವಹಿಸಿಕೊಂಡು ನಾಲ್ಕು ಜನ ಹಿರಿಯರಿಗೆ ನಾಡೋಜ ಗೌರವ ಪದವಿ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಡಿ.ಲಿಟ್ ಮತ್ತು ಪಿಎಚ್‌.ಡಿ. ಪದವಿಗಳನ್ನು ನೀಡಲು ಒಪ್ಪಿ ಆಗಮಿಸಿದ್ದಾರೆ. ಸಾಹಿತ್ಯ ಮತ್ತು ಸಂಸ್ಕೃತಿ ಪ್ರೇಮಿಗಳೂ ಸಮಾಜವಾದದ ಪ್ರತಿಪಾದಕರೂ ಆದ  ಸನ್ಮಾನ್ಯ ಕುಲಾಧಿಪತಿಗಳ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾಲಯವು ಸುಗಮವಾಗಿ ಮುನ್ನಡೆಯುತ್ತಿದೆ. ದೇಸಿ ಭಾಷೆಗಳ ಬಗ್ಗೆ ಅಪಾರ ಪ್ರೀತಿಯಿಟ್ಟುಕೊಂಡಿರುವ ಘನತೆವೆತ್ತ ಕುಲಾಧಿಪತಿಗಳು ಕನ್ನಡ ವಿಶ್ವವಿದ್ಯಾಲಯವನ್ನು ಪ್ರೀತಿಯಿಂದ ಹರಸುತ್ತಾರೆಂಬ ನಂಬಿಕೆ ನನಗಿದೆ. ಅವರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಗೌರವಪೂರ್ವಕವಾಗಿ ಸ್ವಾಗತಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದ ಸನ್ಮಾನ್ಯ ಶ್ರೀ ಎಂ.ವೀರಪ್ಪ ಮೊಯಿಲಿ ಅವರು ನಾಡಿನ ಬಹು ದೊಡ್ಡ ಚಿಂತಕರೂ ಹೌದು. ಕನ್ನಡ ಸಾಹಿತ್ಯದ ಹಲವು ಕಾರ್ಯಗಳನ್ನು ತಮ್ಮ ಸೃಜನಶೀಲತೆಯ ಮೂಲಕ ಸಮೃದ್ಧಗೊಳಿಸಿರುವ ವೀರಪ್ಪ ಮೊಯಿಲಿ ಅವರು ಭಾರತ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅತ್ಯಂತ ಕ್ರಾಂತಿಕಾರಕವಾದ ಅಭಿವೃದ್ಧಿಪರ ಸಲಹೆಗಳನ್ನು ದೇಶಕ್ಕೆ ನೀಡುತ್ತಿದ್ದಾರೆ. ಇಂಥ ಮೇಧಾವಿಗಳು ಕನ್ನಡ ವಿಶ್ವವಿದ್ಯಾಲಯದ ೧೬ನೆಯ ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿಹಬ್ಬದ ಭಾಷಣವನ್ನು ನೀಡುತ್ತಿರುವುದು ನಮ್ಮೆಲ್ಲರ ಸುದೈವ ಎಂದು ಭಾವಿಸುತ್ತೇನೆ. ಅವರನ್ನು ಅತ್ಯಂತ ಹೃದಯಪೂರ್ವಕವಾಗಿ ತಮ್ಮೆಲ್ಲರ ಪರವಾಗಿ ಸ್ವಾಗತಿಸುತ್ತೇನೆ.

ನಾಡೋಜ ಪದವಿಯನ್ನು ಸ್ವೀಕರಿಸಲು ಬಂದಿರುವ ಈ ನಾಲ್ಕು ಜನ ಗಣ್ಯ ವ್ಯಕ್ತಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆಯನ್ನು ಮಾಡಿದವರು. ಹಿರಿಯರಾದ ಶ್ರೀ ಶಾಂತರಸ ಹೆಂಬೇರಾಳು ಅವರು ಕಾವ್ಯ, ಕಥೆ, ಕಾದಂಬರಿ, ಸಂಶೋಧನೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಅಪಾರವಾದ ಕೃಷಿ ಮಾಡಿದವರು. ಮೌಖಿಕ ಜ್ಞಾನ ಪರಂಪರೆ ಮತ್ತು ಜನ ಸಾಮಾನ್ಯರ ಪರಿಸರಗಳನ್ನು ಮೈಗೂಡಿಸಿಕಿಒಂಡು ಬೆಳೆದವರು. ಇಂಥ ಒಬ್ಬ ಹಿರಿಯ ಲೇಖಕರು ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪದವಿಯನ್ನು ಸ್ವೀಕರಿಸಲು ಇಂದು ಆಗಮಿಸಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ತುಂಬು ಹೃದಯದ ಸ್ವಾಗತವನ್ನು ಕೋರುತ್ತೇನೆ.

ಗೌರವಾನ್ವಿತ ನ್ಯಾಯಮೂರ್ತಿ ಸುಬ್ರಾಯ ರಾಮನಾಯಕ ಅವರು ಅತ್ಯಂತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿ ಬಡತನದ ಬೇಗೆಯಲ್ಲಿಯೇ ಓದು ಮುಂದುವರಿಸಿ ಇಂದು ಉನ್ನತ ಸ್ಥಾನವನ್ನು ಪಡೆದಿರುವವರು. ಕಾನೂನು ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮಾನವೀಯ ತೀರ್ಪುಗಳಿಗೆ ಹೆಸರಾದವರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ಶ್ರೀಯುತ ಎಸ್.ಆರ್.ನಾಯಕ ಅವರು ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪದವಿ ಸ್ವೀಕರಿಸಲು ಇಂದು ಆಗಮಿಸಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ತುಂಬು ಹೃದಯದ ಸ್ವಾಗತವನ್ನು ಕೋರುತ್ತೇನೆ.

ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಎಂದು ಹೆಸರಾಗಿರುವ ಪ್ರೊ. ಸಿದ್ಧಲಿಂಗಯ್ಯ ಅವರು ದಲಿತ ಕವಿ ಎಂದೇ ಪ್ರೀತಿಯಿಂದ ಕರೆಸಿಕೊಂಡವರು. ದಲಿತರ ಮತ್ತು ಶೋಷಿತರ ಅಂತಸ್ಥ ಜಗತ್ತಿನ ಭಾಗವೇ ಆಗಿ ಅವರ ಆಂತರ್ಯದ ಸ್ಫೋಟವನ್ನು ಕಾವ್ಯವನ್ನಾಗಿಸಿದ ಸೃಜನಶೀಲ ಬರಹಗಾರರಾದ ಡಾ. ಸಿದ್ಧಲಿಂಗಯ್ಯ ಅವರು. ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪದವಿ ಸ್ವೀಕರಿಸಲು ಇಂದು ಆಗಮಿಸಿದ್ದಾರೆ. ಅವರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.

ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯದ ಸಾಕ್ಷಿ ಪ್ರಜ್ಞೆಯಂತಿರುವ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರು ಕರ್ನಾಟಕ ಜನಪದ ಕಲಾವಿದರಲ್ಲಿ ಪ್ರತಿಭಾ ಸಂಪನ್ನೆಯಾದವರು. ಕಲಾವಿದೆಯಾಗಿ ಹತ್ತಾರು ಬಗೆಯ ಸೃಜನಶೀಲ ಮೌಖಿಕ ಪ್ರಕಾರಗಳನ್ನು ತನ್ನ ಎದೆಯಲ್ಲಿಟ್ಟುಕೊಂಡಿರುವ ಶ್ರೀಮತಿ ಸುಕ್ತಿ ಬೊಮ್ಮಗೌಡ ಅವರು ಪರಿಸರ ಚಳುವಳಿ, ಮಧ್ಯಪಾನ ವಿರೋಧಿ ಚಳುವಳಿ ಮುಂತಾದಂತೆ ಸಾಮಾಜಿಕ ಹೋರಾಟವನ್ನು ನಡೆಸಿದವರು. ಆದಿವಾಸಿ ಜಗತ್ತಿನ ಉಜ್ವಲ ಪ್ರತಿನಿಧಿಯಾದ ಶ್ರೀಮತಿ ಸುಕ್ರಿ ಬೊಮ್ಮಗೌಡ ಅವರು ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪದವಿಯನ್ನು ಸ್ವೀಕರಿಸಲು ಆಗಮಿಸಿದ್ದಾರೆ. ಅವರಿಗೆ ನನ್ನ ತುಂಬು ಹೃದಯದ ಸ್ವಾಗತವನ್ನು ಕೋರುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ವಿವಿಧ ಸಮಿತಿಯ ಸದಸ್ಯರನ್ನು, ನುಡಿಹಬ್ಬಕ್ಕೆ ಆಗಮಿಸಿರುವ ಗೌರವಾನ್ವಿತ ಜನಪ್ರತಿನಿಧಿಗಳನ್ನು, ವಿವಿಧ ಮಾಧ್ಯಮಗಳ ಸ್ನೇಹಿತರನ್ನು, ವಿವಿಧ ಇಲಾಖೆಗಳಿಂದ ಆಗಮಿಸಿರುವ ಅಧಿಕಾರಿಗಳನ್ನು, ವಿಶ್ವವಿದ್ಯಾಲಯದ ನನ್ನ ಎಲ್ಲ ಸಹೋದ್ಯೋಗಿಗಳನ್ನು, ವಿದ್ಯಾರ್ಥಿಗಳನ್ನು ಮತ್ತು ಸಭಿಕರನ್ನು ಪ್ರೀತಿಯಿಂದ ಸ್ವಾಗತಿಸುತ್ತಾ ಮತ್ತೊಮ್ಮೆ ಬರಮಾಡಿಕೊಳ್ಳಬಯಸುತ್ತೇನೆ.

ನಮ್ಮ ಕನ್ನಡ ವಿಶ್ವವಿದ್ಯಾಲಯವು ಕನ್ನಡಿಗರೆಲ್ಲರ ಮನದಾಳದ ಆಶಯದಂತೆ, ದೂರದೃಷ್ಟಿಯ ಕೆಲವು ಮುಖಂಡರುಗಳ ಕನಸಿನ ಪ್ರತೀಕವಾಗಿ ಹದಿನಾರು ವರ್ಷಗಳ ಹಿಂದೆ ಸ್ಥಾಪಿತವಾಯಿತು. ಜನಪರ ಕನಸುಗಳನ್ನು ನನಸು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕನಸು ಸಾಕಾರಗೊಳ್ಳುವುದು ಕನಸನ್ನು ಕಾಣಬಲ್ಲ ಸೃಜನಶೀಲ ವ್ಯಕ್ತಿಯಿಂದಲೇ ಹೊರತು ನಿರಾಸೆಯನ್ನು ಆಶಯ ಮಾಡಿಕೊಂಡು ವ್ಯಕ್ತಿಗಳಿಂದಲ್ಲ. ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಯಾಗಿ ನೇಮಕಗೊಂಡ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡದ ಒಬ್ಬ ಕವಿ. ಸೃಜನಶೀಲ ಗುಣದ ಒಬ್ಬ ಮಹಾನ್ ಕನಸುಗಾರ. ಕನಸನ್ನು ಸಾಕಾರಗೊಳಿಸುವ ಛಲ ಹೊತ್ತಿದ ಕಂಬಾರ ಅವರಿಗೆ ವಿಶ್ವವಿದ್ಯಾಲಯದ ಮೇಲೆ ಕಡು ನಿಷ್ಠೆಯೂ ಇದ್ದ ಕಾರಣದಿಂದಾಗಿ ಕನ್ನಡ ವಿಶ್ವವಿದ್ಯಾಲಯವು ವೈಚಾರಿಕ ಧೋರಣೆಯ ಹಲವು ಪ್ರತಿಭಾವಂತರ ಅನುಭವ ಮಂಟಪವಾಯಿತು.

ವಿದ್ಯೆಯ ಸೃಷ್ಟಿ ಕನ್ನಡ ವಿಶ್ವವಿದ್ಯಾಲಯದ ಒಂದು ಪ್ರಮುಖ ಧೋರಣೆ. ವಿಶ್ವದ ಜ್ಞಾನವನ್ನು ಕನ್ನಡಿಗರಿಗೆ ಮುಟ್ಟಿಸುವ, ಕನ್ನಡ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಮಹತ್ವದ ಹೊಣೆಗಾರಿಕೆ ಕನ್ನಡ ವಿಶ್ವವಿದ್ಯಾಲಯಕ್ಕಿದೆ. ವಿದ್ಯೆಯ ಸೃಷ್ಟಿ ಮತ್ತು ಪ್ರಸರಣ ಎಂದರೆ ಅದು ಕೇವಲ ವಿಶ್ವವಿದ್ಯಾಲಯದಲ್ಲಿರುವ ಅಧ್ಯಾಪಕರಿಂದ ಮಾತ್ರ ಎಂಬ ಹಮ್ಮು ನಮ್ಮದಲ್ಲ. ಇಲ್ಲಿನ ವಿವಿಧ ವಿಭಾಗಗಳ ಒಳಗಿನ ಪ್ರತಿಭಾವಂತರ ಜೊತೆಗೆ ಕರ್ನಾಟಕದ ಎಲ್ಲ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭಾ ಸಂಪನ್ನತೆಯನ್ನು ಬೆಸೆಯುವ ಕೊಂಡಿಯಂತೆ ಪ್ರಿತಯೊಂದು ವಿಭಾಗವೂ ಕೆಲಸ ಮಾಡುತ್ತದೆ. ಈ ಸುಂದರ ಬೆಸುಗೆ ಹೊಸ ಜ್ಞಾನದ ಸೃಷ್ಟಿಗೆ ಹಾಗೆಯೇ ಅರ್ಥಪೂರ್ಣ ಮೌಲ್ಯಗಳ ಪುನರ್ ಸ್ಥಾಪನೆಗೆ ಕಾರಣವಾಗಿದೆ. ವಿದ್ಯೆಯ ಸೃಷ್ಟಿಗೆ ಪೂರಕವಾದ ಹಲವು ಬಗೆಯ ಜ್ಞಾನವಾಹಿನಿಗಳ ತಿಳುವಳಿಕೆ ವಿಶ್ವವಿದ್ಯಾಲಯದ ಒಳಗೆ ರೂಪುಗೊಳ್ಳುತ್ತಿದೆ. ಕನ್ನಡ ಸಂಶೋಧನೆಯ ವಿಧಿ ವಿದಾನಗಳನ್ನು ಸೃಷ್ಟಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಇವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅನೇಕ ಕಮ್ಮಟ, ತರಬೇತಿ ಮುಂತಾದಂತೆ ಹತ್ತಾರು ಶಿಬಿರಗಳು ಇಲ್ಲಿ ನಡೆಯುತ್ತಿವೆ. ಈ ಎಲ್ಲ ಕುಲುಮೆಗಳಲ್ಲಿ ಪಕ್ವಗೊಂಡ ಜ್ಞಾನ ಪುಸ್ತಕದ ರೂಪದಲ್ಲಿ ಪ್ರಸಾರಾಂಗದ ಮೂಲಕ ಆಕಾರ ಪಡೆಯುತ್ತಿದೆ. ಕನ್ನಡ ವಿಶ್ವವಿದ್ಯಾಲಯವು ಜನಸಾಮಾನ್ಯರು, ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರನ್ನು ತನ್ನ ಗುರಿಯನ್ನಾಗಿಟ್ಟುಕೊಂಡು ಹಲವು ಬಗೆಯ ಕಾರ್ಯಯೋಜನೆಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರ ತಿಳುವಳಿಕೆಗಾಗಿ ನವಸಾಕ್ಷರ ಮಾಲೆ ಮತ್ತು ಮಂಟಪ ಮಾಲೆ ಎಂಬ ಪುಸ್ತಕಗಳು, ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳು, ಸಂಶೋಧಕರಿಗೆ ಹಲವು ಬಗೆಯ ವಿಶ್ವಕೋಶಗಳು ಮುಂತಾದಂತೆ ವೈವಿಧ್ಯಮಯ ಜಾನಸೃಷ್ಟಿ ಇಲ್ಲಿ ನಡೆಯುತ್ತಿದೆ. ಇವೆಲ್ಲವನ್ನೂ ಮೀರಿ ಮತ್ತೊಂದು ಗುರಿ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ. ಅದೇನೆಂದರೆ ಕನ್ನಡ ಸಂಸ್ಕೃತಿಯ ಆಮೂಲಾಗ್ರಶೋಧ ನಡೆಸುವ ಮೂಲಕ ದೇಸಿ ಚಿಂತನಾಕ್ರಮವೊಂದನ್ನು ರೂಪಿಸುವುದು. ಭಾರತೀಯ ಸಂಸ್ಕೃತಿ ಎಂದು ಏಕಮುಖವಾಗಿ ಸಾರ್ವತ್ರೀಕರಿಸುವ ಭ್ರಮೆಯಿಂದ ಹೊರ ಬಂದು ಪ್ರತಿಯೊಂದು ನೆಲಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇದೆಯೆಂಬ ವಾಸ್ತವವಾದ ನೆಲೆಯಲ್ಲಿ ಕನ್ನಡ ನೆಲದ ಗುಣ ಹುಡುಕುವ ಕಾರ್ಯದಲ್ಲಿ ನಾವು ಈಗ ಮಗ್ನರಾಗಿದ್ದೇವೆ. ಆ ಮೂಲಕ ನಿರ್ಲಕ್ಷಿಸಲ್ಪಟ್ಟ ಕ್ಷೇತ್ರಗಳನ್ನು ಪ್ರಧಾನ ನೆಲೆಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ದೇಶದ ಅಥವಾ ನಾಡಿನ ಅಂಚಿನ ಜನಕ್ಕೆ ಕೂಡ ಒಂದು ಶ್ರೀಮಂತ ಸಂಸ್ಕೃತಿ ಇದೆಯೆಂದು, ಆ ಸಂಸ್ಕೃತಿಗೆ ತನ್ನದೇ ವಿಶಿಷ್ಟ ಪರಂಪರೆಯಿದೆ ಎಂದು, ಆ ಪರಂಪರೆಯೇ ನಾಡಿನ ವಿವೇಕ ಮತ್ತು ಜ್ಞಾನವನ್ನು ಕಾಪಾಡಿಕೊಂಡು ಬಂದಿದೆಯೆಂದು ಸ್ಪಷ್ಟ ಮಾತುಗಳಿಂದ ನಿರ್ವಚಿಸಬೇಕಾದ ಕಾಲವೊಂದು ಈಗ ಬಂದಿದೆ. ಆ ಮೂಲಕ ಕನ್ನಡ ನಾಡಿನ ಸರ್ವತೋಮುಖ ಬೆಳವಣಿಗೆಯನ್ನು ಯಾವ ಯಾವ ದಿಸೆಯಲ್ಲಿ ಸಾಧಿಸಬೇಕೆಂಬ ದೂರದೃಷ್ಟಿ ಮತ್ತು ಆಶಾವಾದ ಕೂಡ ನಮ್ಮ ಅಧ್ಯಯನಗಳ ಹಿಂದೆ ಇದೆ.

ಇತಿಹಾಸದ ಹಲವು ಕಾಲಘಟ್ಟಗಳಲ್ಲಿ ನಡೆದಿರಬಹುದಾದ ಸಾಂಸ್ಕೃತಿಕ ಸಂಘರ್ಷಗಳ ಕಡೆಗೆ ಗಮನಹರಿಸಿ ಪರಂಪರಾಗತ ಆರೋಗ್ಯಕರ ಮೌಲ್ಯಗಳನ್ನು ಪುನರ್‌ಸ್ಥಾಪಿಸುವ ಕಾರ್ಯವು ಇಂದು ನಡೆಯಬೇಕಾಗಿದೆ. ಇವತ್ತು ನಾವು ಬದುಕುತ್ತಿರುವುದೇ ನಿಜವೆಂಬ ಭ್ರಮೆಗೆ ದೂಡಿರುವ ಈ ವರ್ತಮಾನವನ್ನು ಭೂತಕಾಲದ ಬದುಕಿನ ವಿಶ್ಲೇಷಣೆಯ ಮೂಲಕ ವಿಮರ್ಶೆಗೆ ಒಳಪಡಿಸುವುದು ನಮ್ಮ ಅಧ್ಯಯನದ ಗುರಿಯಾಗಿದೆ. ಒಂದು ಕಡೆಯಿಂದ ವಸಾಹತುಶಾಹಿ ಧೋರಣೆಯ ಪಾಶ್ಚತ್ಯ ಪ್ರಭಾವ, ಮತ್ತೊಂದು ಕಡೆ ವೈದಿಕಶಾಹಿಗಳ ವೈಭವೀಕರಣ ಇವುಗಳಿಂದ ಆವರಿಸಿದ ವಿಸ್ಮೃತಿಯಿಂದ ಬಿಡುಗಡೆಗೊಳ್ಳುವ ಮೂಲಕ ಕನ್ನಡ ಸಂಸ್ಕೃತಿಯೊಂದನ್ನು ಪ್ರತಿಷ್ಠಾಪಿಸುವ ಕೆಲಸ ಆಗಬೇಕಾಗಿದೆ. ಇಂದಿನ ಜಾಗತೀಕರಣ ಕೋಮುವಾದ ಹಾಗೂ ಹಿಂಸೆಯ ವಾತಾವರಣದಲ್ಲಿ ನಲುಗುತ್ತಿರುವ ಮಾನವೀಯ ಮೌಲ್ಯಗಳನ್ನು ಹುಡುಕುವ ಮತ್ತು ಹುಟ್ಟು ಹಾಕುವ ಬರಹಗಳನ್ನು ಪ್ರೋತ್ಸಾಹಿಸುವ ಕೆಲಸವೂ ಆಗಬೇಕಾಗಿದೆ. ಒಟ್ಟಾರೆಯಾಗಿ ಆಲೋಚನೆಗಳ ಮತ್ತು ಸಿದ್ಧಾಂತಗಳ ಮೌಲ್ಯೀಕರಣದ ಅಗತ್ಯವನ್ನು ಮನಗಂಡಿರುವ ಕನ್ನಡ ವಿಶ್ವವಿದ್ಯಾಲಯ ದೇಸಿ ಮತ್ತು ಸಾಂಪ್ರದಾಯಿಕ ಮೌಲ್ಯಗಳ ನಡುವೆ ಮುಖಾಮುಖಿಯೊಂದನ್ನು ಹುಟ್ಟು ಹಾಕುವ ಮೂಲಕ ಸತ್ಯದ ಬೆಳಕಿನೆಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತದೆಯೆಂಬ ಆಶಯ ನನ್ನದಾಗಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಉಪಯುಕ್ತ ಮತ್ತು ಮೌಲಿಕವಾದ ಅನೇಕ ಯೋಜನೆಗಳನ್ನು  ಹಮ್ಮಿಕೊಂಡಿದೆ. ತಮಗೆಲ್ಲ ಗೊತ್ತಿರುವ ಹಾಗೆ ಕನ್ನಡ ವಿಶ್ವವಿದ್ಯಾಲಯವು ಇತರೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಸ್ವರೂಪದ್ದಾಗಿದೆ. ಈಗಾಗಲೇ ಹೇಳಿದಂತೆ ವಿದ್ಯೆಯ ಸೃಷ್ಟಿ ನಮ್ಮ ಪ್ರಮುಖ ಆಶಯವಾಗಿರುವುದರಿಂದ ಪದವೀಧರರನ್ನು ಸೃಷ್ಟಿಸುವ ಕಾರ್ಯಕ್ಕೆ ನಾವು ಹೆಚ್ಚು ಒತ್ತು ನೀಡಿಲ್ಲ. ಉನ್ನತ ಶಿಕ್ಷಣದ ಪ್ರತಿರೂಪವಾದ ಪಿಎಚ್.ಡಿ., ಎಂ.ಫಿಲ್ ಮತ್ತು ಎಂ.ಎ. ಪಿಎಚ್‌.ಡಿ. ಸಂಯೋಜಿತ ಕೋರ್ಸುಗಳು ಮಾತ್ರ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿವೆ. ಎಲ್ಲಕ್ಕಿಂತ ಸಂಶೋಧನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡ ನಮ್ಮ ಹಲವು ವಿಭಾಗಗಳು ಹತ್ತಾರು ಬಗೆಯ ಕಾರ್ಯ ಯೋಜನೆಗಳ ಮೂಲಕ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಹಾಗೂ ಅಭಿವೃದ್ಧಿ ಮತ್ತು ಅನುಷ್ಠಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿವೆ. ಈ ಹಿನ್ನೆಲೆಯಲ್ಲಿ ನಮ್ಮ ವಿವಿಧ ವಿಭಾಗಗಳು ಕೈಗೊಂಡಿರುವ ಮತ್ತು ಸಾಧಿಸಿರುವ ಕಾರ್ಯಯೋಜನೆಗಳ ಸ್ಥೂಲ ಪರಿಚಯವನ್ನು ಇಲ್ಲಿ ಮಾಡಿಕೊಡಬಯಸುತ್ತೇನೆ.

ನಮ್ಮ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಪ್ರಾಚೀನ ಕಾವ್ಯಗಳು ಮತ್ತು ಕಾವ್ಯ ಮಾರ್ಗಗಳನ್ನು ಆಧಾರವಾಗಿಟ್ಟುಕೊಂಡು ನಡೆಸಿರುವ ಸಾಂಸ್ಕೃತಿಕ ಮುಖಾಮುಖಿ ಕಾರ್ಯಕ್ರಮವು ಅತ್ಯಂತ ವಿಭಿನ್ನ ಯೋಜನೆಯಾಗಿದ್ದು, ಸಾಹಿತ್ಯ ವಿಮರ್ಶೆಯ ಹೊಸ ಮಾನದಂಡಗಳಿಗೆ ದಾರಿ ಮಾಡಿಕೊಟ್ಟಿದೆಯೆಂದರೆ ಅತಿಶಯೋಕ್ತಿಯಲ್ಲ. ಕಳೆದ ಕೆಲವು ವರ್ಷಗಳಲ್ಲಿ ಕನ್ನಡದ ಪ್ರಖ್ಯಾತ ಕೃತಿಗಳ ಮೇಲೆ ನಡೆದ ಈ ಮುಖಾಮುಖಿ ಕಾರ್ಯಕ್ರಮ ಹೊಸ ಬಗೆಯ ಚಿಂತನಾಕ್ರಮಗಳನ್ನು ಮೂಡಿಸಿದೆ. ಹಾಗೆಯೇ ಸಾಹಿತ್ಯ ಅಧ್ಯಯನ ವಿಭಾಗವು ನಡೆಸಿದ ಯುವ ಬರಹಗಾರರ ಕಮ್ಮಟ ಈ ವರ್ಷದ ಸಾಧನೆಗಳಲ್ಲಿ ಒಂದು. ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ತುಳು ಸಾಹಿತ್ಯ ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಮೂಲಕ ತುಳು ಭಾಷಾ ಚರಿತ್ರೆಯಲ್ಲಿ ಹೊಸ ವಿಕ್ರಮವೊಂದನ್ನು ಸಾಧಿಸಿದೆ. ಇಷ್ಟರಲ್ಲೇ ಈ ಬೃಹತ್ ಸಂಪುಟವು ಬಿಡುಗಡೆಯಾಗಲಿದ್ದು, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಶ್ರಮದ ಪ್ರತೀಕವಾಗಿ ಈ ಸಂಪುಟ ಹೊರಬಂದಿದೆ. ದಕ್ಷಿಣ ಭಾರತದ ಜನಪದ ರಂಗಭೂಮಿ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಇತರೆ ಭಾಷಾ ವಿಶ್ವವಿದ್ಯಾಲಯಗಳ ಸಹಕಾರದಿಂದ ಸಂಘಟಿಸಿ ಅದರ ಕಲಾಪಗಳನ್ನು ಕೂಡ ಮುದ್ರಣ ರೂಪದಲ್ಲಿ ಹೊರತರುವ ಕಾರ್ಯ ನಡೆದಿದೆ. ಕನ್ನಡ ಭಾಷಾಧ್ಯಯನ ವಿಭಾಗವು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಸಹಯೋಗದೊಂದಿಗೆ Sala ಎಂಬ ಅಂತಾರಾಷ್ಟ್ರೀಯ ಭಾಷಾ ಸಮ್ಮೇಳನವನ್ನು ನಡೆಸುವ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಪ್ರಯತ್ನ ಮಾಡಿತು. ಕಾಲೇಜು ವಿದ್ಯಾಪಕರಿಗೂ ಸಹ ಬಹಳ ಉಪಯುಕ್ತವಾಗಿತ್ತು. ಭಾಷಾಂತರ ಅಧ್ಯಯನ ವಿಭಾಗವು ಕೇರಳ ಕಣ್ಣೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಭಾಷೆಗಳ ಸಮಾಜ ವಿಜ್ಞಾನಗಳ ಭಾಷಾಂತರ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಅನುವಾದ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಸಿದ ಕನ್ನಡ ಮರಾಠಿ ಭಾಷಾಂತರ ರಾಷ್ಟ್ರೀಯ ವಿಚಾರ ಸಂಕಿರಣವು ನಮ್ಮ ನೆರೆಯ ಭಾಷೆಗಳನ್ನು ಪರಸ್ಪರ ಅರ್ಥಮಾಡಿಕೊಳ್ಳುವ ಪ್ರಕ್ರಿಯೆಗೆ ಸಹಕಾರಿಯಾಗಿದ್ದವು. ಇದೇ ವಿಭಾಗದ ಕಾವ್ಯಾನುವಾದ ಕಮ್ಮಟ ಮತ್ತು ಯುವ ಭಾಷಾಂತರಕಾರರ ಕಮ್ಮಟಗಳು ಯುವ ಜನರಿಗೆ ದಾರಿದೀಪವಾಗಿ ಪರಿಣಮಿಸಿವೆ. ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗವು ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ ನಡೆಸುವುದರ ಮೂಲಕ ಜನತೆಯಲ್ಲಿ ಹಸ್ತಪ್ರತಿಗಳ ಸಂರಕ್ಷಣೆಯ ಬಗೆಗೆ ಕಾಳಜಿಯನ್ನು ಉಂಟುಮಾಡುತ್ತಿದೆ. ಇದೇ ವಿಭಾಗವು ನಡೆಸುವ ಹಸ್ತಪ್ರತಿ ತರಬೇತಿ ಶಿಬಿರಗಳು, ಹಳಗನ್ನಡ ಸಾಹಿತ್ಯ ಶಿಬಿರಗಳು ಮತ್ತು ಹಸ್ತಪ್ರತಿಗಳ ದಾನಿಗಳ ಸಮಾವೇಶ ಈ ಕ್ಷೇತ್ರದಲ್ಲಿ ಹೊಸ ಎಚ್ಚರವನ್ನು ಉಂಟುಮಾಡಿದೆ. ಅಲ್ಲದೆ ದೆಹಲಿಯ ಸಮಾವೇಶ ಈ ಕ್ಷೇತ್ರದಲ್ಲಿ ಹೊಸ ಎಚ್ಚರವನ್ನು ಉಂಟುಮಾಡಿದೆ. ಅಲ್ಲದೆ ದೆಹಲಿಯ ನ್ಯಾಷನಲ್ ಮ್ಯಾನ್‌ಸ್ಕ್ರಿಪ್ಟ್‌ಮಿಷನ್ ಸಂಸ್ಥೆಯ ನೆರವಿನಿಂದ ಹಸ್ತಪ್ರತಿಗಳ ಸಂಗ್ರಹ ಮತ್ತು ಗಣಕೀಕರಣ ಕಾರ್ಯವೂ ನಡೆಯುತ್ತಿದೆ. ಈ ಯೋಜನೆಯಡಿಯಲ್ಲಿ ಉತ್ತರ ಕರ್ನಾಟಕದ ಹನ್ನೊಂದು ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಮಾಡಿ ಅರವತ್ತು ಸಾವಿರ ಕಟ್ಟುಗಳ ಒಂದು ಲಕ್ಷದ ಇಪ್ಪತ್ತು ಸಾವಿರ ಕೃತಿಗಳ ದತ್ತಾಂಶಗಳನ್ನು ತಯಾರಿಸಿ ಅಂತರ್ಜಾಲದಲ್ಲಿ ಹರಿಬಿಡಲಾಗಿದೆ. ಇಷ್ಟಲ್ಲದೆ ನಮ್ಮ ಹಸ್ತಪ್ರತಿ ಭಂಡಾರ ಮೂರು ಕೃತಿಗಳಾದ ಬಸವ ಪುರಾಣ, ಶೂನ್ಯಸಂಪಾದನೆ, ಕುರುಬರ ರಟ್ಟಮತಗಳು ಅಂತಾರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

ಪ್ರಾಚೀನ ಮತ್ತು ಪುರಾತತ್ವ ಅಧ್ಯಯನ ವಿಭಾಗವು ತಂಜಾವೂರಿನಲ್ಲಿ ತಮಿಳು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಸಿದ Recent Discoveries and its impact on South Indian History ಎಂ ರಾಷ್ಟ್ರೀಯ ವಿಚಾರ ಸಂಕಿರಣವು ವಿಭಾಗವು ವಿಸ್ತರಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು. ಇದೇ ವಿಭಾಗವು ಕೈಗೊಳ್ಳುತ್ತಿರುವ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ವಿಚಾರ ಸಂಕಿರಣಗಳು ಅತ್ಯಂತ ಉಪಯುಕ್ತವಾಗಿವೆ. ಅಲ್ಲದೆ ವಿಭಾಗದಿಂದ ಪ್ರಕಟಗೊಳ್ಳುತ್ತಿರುವ ಕರ್ನಾಟಕ ದೇವಾಲಯ ಕೋಶ ಎಂಬ ಮಾಲೆ ವಿಭಾಗದ ಸತತ ಪರಿಶ್ರಮಕ್ಕೆ ಸಾಕ್ಷಿ. ಶಾಸನಶಾಸ್ತ್ರ ವಿಭಾಗವು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಶಾಸ್ತ್ರೀಯ ಭಾಷೆ ಮತ್ತು ಶಾಸನಶಾಸ್ತ್ರ ಎಂಬ ವಿಚಾರ ಸಂಕಿರಣವನ್ನು ಯಶಸ್ವಿಯಾಗಿ ನಡೆಸಿದೆ. ಅಲ್ಲದೆ ಜನಸಾಮಾನ್ಯರಿಗೂ ಈ ಕ್ಷೇತ್ರದಲ್ಲಿ ಅರಿವನ್ನುಂಟು ಮಾಡಲು ಸೇಡಂನಲ್ಲಿ ಮೂರು ದಿನಗಳ ಶಾಸನ ಕಮ್ಮಟವನ್ನು ಆಯೋಜಿಸಿತ್ತು. ಇದೇ ವಿಭಾಗವು ಜಿಲ್ಲಾ ಶಾಸನಗಳ ಪ್ರಕಟಣೆಯ ಯೋಜನೆಯ ಅಡಿಯಲ್ಲಿ ಈಗಾಗಲೇ ಹಲವು ಜಿಲ್ಲೆಗಳ ಸಂಪುಟಗಳು ಪ್ರಕಟಗೊಂಡಿದ್ದು, ಈ ವರ್ಷ ಗದಗ, ಧಾರವಾಡ, ಹಾವೇರಿ ಮತ್ತು ಉಡುಪಿ ಜಿಲ್ಲೆಗಳ ಶಾಸನ ಸಂಪುಟಗಳು ಸಿದ್ಧಗೊಳ್ಳುತ್ತಿವೆ. ಜಾನಪದ ಅಧ್ಯಯನ ವಿಭಾಗವು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹಂಪಿ ಪರಿಸರದ ಸಕಲ ಮಾಹಿತಿಗಳನ್ನು ಸಂಗ್ರಹಿಸುವ ವಿನೂತನ ಯೋಜನೆಯೊಂದನ್ನು ಕೈಗೊಂಡಿದ್ದು, ಹಂಪಿ ಪರಿಸರದ ಪ್ರಾಣಿ ಪಕ್ಷಿ ಪರಂಪರೆ, ಸಾಮಾಜಿಕ, ಸಾಂಸ್ಕೃತಿಕ ರೂಪಾಂತರಗಳು ಹಾಗೂ ಪ್ರದರ್ಶನಾತ್ಮಕ ಕಲೆಗಳ ಬಗ್ಗೆ ವಿವರ ಸಂಗ್ರಹಿಸುತ್ತಿದೆ. ಇದೇ ವಿಭಾಗವು ಮುಂದಿನ ತಿಂಗಳಲ್ಲಿ ಜಾನಪದ ಮತ್ತು ಸಂಕಥನ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ವಿಭಾಗವು ಪ್ರತಿವರ್ಷ ನಡೆಸುತ್ತಿರುವ ದೇಸೀ ಸಮ್ಮೇಳನ ಆಯಾ ಪ್ರದೇಶದ ದೇಸೀಯ ಅನನ್ಯತೆಗಳನ್ನು ಗುರುತಿಸುವಲ್ಲಿ ಸಫಲವಾಗಿದೆ. ಚರಿತ್ರೆ ಅಧ್ಯಯನ ವಿಭಾಗವು ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಚರಿತ್ರೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನಡೆಸುವುದರ ಮೂಲಕ ಹೊಸ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ. ಈ ವಿಭಾಗವು ಚರಿತ್ರೆ ವಿಶ್ವಕೋಶದ ಬಿಡಿ ಆವೃತ್ತಿಗಳನ್ನು ಪ್ರಕಟಿಸುತ್ತಿದ್ದು, ಈ ಆವೃತ್ತಿಗಳು ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚು ಉಪಯುಕ್ತವಾಗಲಿದೆಯೆಂಬ ಆಶಯವಿದೆ. ಅಭಿವೃದ್ಧಿ ಅಧ್ಯಯನ ವಿಭಾಗವು ಶಿಕ್ಷಕರಿಗಾಗಿ, ಜನಪ್ರತಿನಿಧಿಗಳಿಗಾಗಿ, ಸಂಶೋಧಕರಿಗಾಗಿ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅನೇಕ ಕಾರ್ಯಗಾರಗಳನ್ನು ಹಮ್ಮಿಕೊಂಡು ನಡೆಸುತ್ತಾ ಬರುತ್ತಿದೆ. ಆ ಮೂಲಕ ಕನ್ನಡ ವಿಶ್ವವಿದ್ಯಾಲಯವು ಕೇವಲ ಚಿಂತನೆಯ ದಂತಗೋಪುರದಲ್ಲಿರದೆ ಫಲಾಪೇಕ್ಷಿಗಳ ಅಂಗಳಕ್ಕೆ ಕಾಲಿಡುವ ಪ್ರಯತ್ನವನ್ನೂ ಮಾಡಿದೆ. ಈ ವರ್ಷ ಈ ವಿಭಾಗದ ಮೂಲಕ ನಡೆದ ಸುವರ್ಣ ಕರ್ನಾಟಕದ ರಾಷ್ಟ್ರೀಯ ವಿಚಾರ ಸಂಕಿರಣವು ಅಭಿವೃದ್ಧಿಯನ್ನು ಕುರಿತ ಹೊಸ ಚಿಂತನೆಗಳನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ. ಬುಡಕಟ್ಟು ಅಧ್ಯಯನ ವಿಭಾಗವು ಯುಜಿಸಿ ಪ್ರಾಯೋಜಿತ ಸಮಗ್ರ ಬುಡಕಟ್ಟು ಸಮೀಕ್ಷೆ ಮತ್ತು ಅಧ್ಯಯನವನ್ನು ಕೈಗೊಂಡಿದ್ದು, ಆ ಮೂಲಕ ಕರ್ನಾಟಕದ ಸಮಸ್ತ ಬುಡಕಟ್ಟುಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಸ್ಪಷ್ಟವಾಗಿ ಅಧ್ಯಯನಿಸುವ ಕಾರ್ಯವನ್ನು ಕೈಗೊಂಡಿದೆ. ಇದೇ ವಿಭಾಗದಿಂದ ಕೈಗೊಂಡ ಅಲೆಮಾರಿ ಸಮುದಾಯ ಅಧ್ಯಯನವು ಆ ಸಮುದಾಯಗಳಿಗೆ ಒಂದು ಆರ್ಥಿಕ ಸ್ಥಿರತೆ ನೀಡುವ ಪ್ರಯತ್ನಕ್ಕೆ ಸಹಕಾರಿಯಾಗಿದೆ. ಬುಡಕಟ್ಟು ಮಹಿಳೆಯರಿಗೆ, ಯುವಕರಿಗೆ ಮತ್ತು ಜನ ಪ್ರತಿನಿಧಿಗಳಿಗಾಗಿ ಈ ವಿಭಾಗವು ನಡೆಸಿದ ಕಾರ್ಯಾಗಾರಗಳು ಪ್ರಯೋಜನಜಮುಖಿಯಾಗಿ ಹೊರಹೊಮ್ಮಿವೆ. ಈ ವರ್ಷ ಪ್ರಪ್ರಥಮ ಬುಡಕಟ್ಟು ಸಮ್ಮೇಳನವನ್ನು ನಡೆಸಲಾಗುತ್ತಿದ್ದು, ಮುಂದಿನ ವರ್ಷದಿಂದ ಅದು ಸತತವಾಗಿ ಮುಂದುವರಿಯಲಿದೆ.

ದೃಶ್ಯಕಲಾ ವಿಭಾಗವು ವಿದ್ಯಾರಣ್ಯದ ಜೊತೆಗೆ ಬಾದಾಮಿಯಲ್ಲಿಯೂ ತನ್ನ ಶಾಖೆಯನ್ನು ತೆರೆದಿದ್ದು, ಶಿಲ್ಪ ಮತ್ತು ದೃಶ್ಯಕಲೆಯ ಬಗ್ಗೆ ಅತ್ಯುತ್ತಮವಾದ ಕಾರ್ಯ ಮಾಡುತ್ತಿದೆ. ಈ ವಿಭಾಗವು ದೆಹಲಿಯ ಕರ್ನಾಟಕ ಸಂಘದ ಸಹಯೋಗದೊಂದಿಗೆ ನಡೆಸಿದ ಕಲಾಕೃತಿಗಳ ಪ್ರದರ್ಶನ ಅಪಾರ ಮೆಚ್ಚುಗೆ ಪಡೆದಿದೆ. ಈ ವಿಭಾಗವು ನಡೆಸುವ ಶಿಬಿರಗಳು, ಕಮ್ಮಟಗಳು ಯುವ ಕಲಾವಿದರುಗಳಿಗೆ ಅಪಾರ ಸ್ಫೂರ್ತಿಯನ್ನು ತುಂಬುತ್ತಿದೆ. ಸಂಗೀತ ಮತ್ತು ನೃತ್ಯ ವಿಭಾಗವು ರಾಜ್ಯದ ವಿವಿಧೆಡೆಗಳಲ್ಲಿ ಸಂಗೀತಯಾತ್ರೆ ಎಂಬ ಕಾರ್ಯಕ್ರಮ ನಡೆಸುತ್ತ ಬರುತ್ತಿದೆ. ಈ ವಿಭಾಗದ ಮುಖ್ಯಸ್ಥರು ಸಿದ್ಧಪಡಿಸುತ್ತಿರುವ ಹಿಂದೂಸ್ಥಾನಿ ರಾಗಗಳು ಎಂಬ ವಿಶೇಷ ಗ್ರಂಥವು ಕನ್ನಡಕ್ಕೆ ಒಂದು ಅಪರೂಪದ ಕೊಡುಗೆಯಾಗಲಿದೆ. ನಮ್ಮ ಬಹುತೇಕ ಅಧ್ಯಯನ ವಿಭಾಗಗಳು ಆಯಾ ಕ್ಷೇತ್ರದ ಸಮಕಾಲೀನ ಚರ್ಚೆಗಳನ್ನು ಪರಾಮರ್ಶೆಗೆ ಒಳಪಡಿಸುವ ರೀತಿಯಲ್ಲಿ ವಿವಿಧ ನಿಯತಕಾಲಿಕೆಗಳು ಕರ್ನಾಟಕದಲ್ಲಿ ಅಪಾರ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ಗಂಭೀರ ಸ್ವರೂಪದ ಅಧ್ಯಯನಕ್ಕೆ ತಳಪಾಯವನ್ನು ಒದಗಿಸುತ್ತಿವೆ. ಇದಿಷ್ಟು ಅಧ್ಯಯನ ವಿಭಾಗಗಳ ಕಾರ್ಯ ಸಾಧನೆಗಳು.

ನಮ್ಮ ಪ್ರಸಾರಾಂಗವು ಈ ಅಧ್ಯಯನ ವಿಭಾಗಗಳ ಸೃಜನಾತ್ಮಕ ಉತ್ಪಾದನೆಯನ್ನು ಜ್ಞಾನ ವಾಹಕಗಳ ಪ್ರತಿರೂಪವಾದ ಗ್ರಂಥಗಳನ್ನಾಗಿ ಪರಿವರ್ತಿಸಿ ನಾಡಿನ ಜನತೆಗೆ ತಲುಪಿಸುವ ಕೈಂಕರ್ಯವನ್ನು ಕೈಗೊಂಡಿದೆ. ನಮ್ಮ ಹೆಮ್ಮೆಯ ಪ್ರಸಾರಾಂಗ ಪ್ರಕಟಿಸಿದ ಒಟ್ಟು ಗ್ರಂಥಗಳ ಸಂಖ್ಯೆ ೭೮೫. ಕಳೆದ ವರ್ಷ ನಾವು ಪ್ರಕಟಿಸಿದ ಗ್ರಂಥಗಳ ಸಂಖ್ಯೆ ೫೦. ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ನಾಡಿನ ಹಿರಿಯ ಉದ್ಧಾಮ ಸಾಹಿತಿಗಳಿಂದ ಬರೆಯಿಸಿದ ೨೦ ಹೊನ್ನಾರು ಮಾಲೆ ಪುಸ್ತಕಗಳು, ಸುವರ್ಣ ಕರ್ನಾಟಕದ ನೆನಪಿಗಾಗಿ ಹೊರತಂದ ೨ ಬೃಹತ್ ಸಂಪುಟಗಳಾದ ಅಭಿವೃದ್ಧಪಥ ಮತ್ತು ಸಾಹಿತ್ಯ ಸಂಸ್ಕೃತಿ ಪಥ, ಬಾಹುಬಲಿಯ ಮಹಾಮಸ್ತಕಾಭಿಷೇಕದ ಸವಿನೆನಪಿನಲ್ಲಿ ಹೊರತಂದ ಸಮಗ್ರ ಜೈನ ಸಾಹಿತ್ಯ ಮಾಲೆ ಇವುಗಳಲ್ಲಿ ಮುಖ್ಯವಾದವು. ಹಂಪಿ ಉತ್ಸವದಲ್ಲಿ ಪ್ರೌಢದೇವರಾಯ ಶಾಸನಗಳು ಎಂಬ ಗ್ರಂಥವನ್ನು ವಿಶ್ರಾಂತ ಕುಲಪತಿಗಳಾದ ಡಾ. ಎಂ.ಎಂ. ಕಲಬುರ್ಗಿ ಅವರು ಲೋಕಾರ್ಪಣೆ ಮಾಡಿದರು. ಕನ್ನಡ ವಿಶ್ವವಿದ್ಯಾಲಯದ ಗ್ರಂಥಗಳನ್ನು ಕನ್ನಡ ಜನತೆ ಅತ್ಯಂತ ಆಪ್ತವಾಗಿ ಸ್ವೀಕರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ೪೦ ಲಕ್ಷ ರೂಪಾಯಿಗಳಷ್ಟು ಗ್ರಂಥಗಳು ಮಾರಾಟವಾಗಿರುವುದೇ ಇದಕ್ಕೆ ಸಾಕ್ಷಿ. ಪ್ರತಿವರ್ಷ ವಿವಿಧ ಹಂತಗಳಲ್ಲಿ ನಾವು ಕೈಗೊಳ್ಳುವ ಪುಸ್ತಕ ಸಂಸ್ಕೃತಿ ಯಾತ್ರೆ ಕನ್ನಡದ ಜನತೆಯನ್ನು ನಾವು ತಲುಪುತ್ತಿರುವ ದ್ಯೋತಕವಷ್ಟೇ ಅಲ್ಲ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಆಸಕ್ತರಿಂದ ಬರುತ್ತಿರುವ ಬೇಡಿಕೆ ನಮ್ಮ ಸಾಧನೆಗೆ ಸಿಕ್ಕ ಗೌರವದ ಪ್ರತೀಕ. ದೂರಶಿಕ್ಷಣ ಕೇಂದ್ರದಲ್ಲಿ ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ೨೯೫೦. ಪ್ರಸ್ತುತ ವರ್ಷದಲ್ಲಿ ೧೩೩೪ಕ್ಕೆ ಏರಿದೆ. ಹಾಗೆಯೇ ಈ ವರ್ಷ ಸುಮಾರು ೨೦ ಹೊಸ ಅಧ್ಯಯನ ಕೇಂದ್ರಗಳು ಸೇರ್ಪಡೆಯಾಗಲಿವೆ.

ದೂರಶಿಕ್ಷಣ ಕೇಂದ್ರದ ವ್ಯಾಪ್ತಿಯನ್ನು ವಿಸ್ತರಿಸಲು ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ೪೦ ಲಕ್ಷ ರೂಪಾಯಿಗಳ ಅನುದಾನಕ್ಕೆ ಅನುಮೋದನೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಸುತ್ತಿರುವ ಆಡಳಿತ ಕನ್ನಡ ಕೋರ್ಸನ್ನು ರಾಜ್ಯದಾದ್ಯಂತ ಆರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರಿಗೆ ಅನ್ವಯವಾಗುವಂತೆ ಕಾರ್ಯಕ್ರಮ ನಿರೂಪಿಸಲು ಕರ್ನಾಟಕ ರಾಜ್ಯ ಸರ್ಕಾರವು ೫೦ ಲಕ್ಷ ರೂಪಾಯಿಗಳ ಅನುದಾನ ವನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಈ ವರ್ಷದಿಂದಲೇ ಆಡಳಿತ ಕನ್ನಡ ಕೋರ್ಸ್‌‌ನ್ನು ಅನುಷ್ಠಾನಗೊಳಿಸಲು ಒಡಂಬಡಿಕೆಯೊಂದನ್ನು ಮಾಡಿಕೊಳ್ಳಲಾಗಿದೆ.

ಸಿರಿಗನ್ನಡ ಗ್ರಂಥಾಲಯವು ನಮ್ಮ ಸಂಶೋಧನೆಗೆ ಪೂರಕವಾದ ಪ್ರಮುಖ ಭಾಗವಾಗಿದೆ. ಸಿರಿಗನ್ನಡ ಗ್ರಂಥಾಲಯ ಪರಾಮರ್ಶನ ಕೇಂದ್ರದಡಿಯಲ್ಲಿ ಇಂದು ನಮ್ಮ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಗೆ ಸವಾಲಾಗಿ, ಗಂಭೀರ ಸಮಸ್ಯೆಯಾಗಿ ನಿಂತಿರುವ ಸಂಶೋಧನ ಪುನರಾವರ್ತನೆಯಂತಹ ಸಮಸ್ಯೆಯನ್ನು ಕನ್ನಡ ಮತ್ತು ಕರ್ನಾಟಕತ್ವದ ಬಗೆಗಿನ ಜ್ಞಾನಕ್ಷೇತ್ರದಲ್ಲಿ ಸಮರ್ಥವಾಗಿ ನಿಭಾಯಿಸುವ ಹೊಣೆಗಾರಿಕೆಯು ಕನ್ನಡ ವಿಶ್ವವಿದ್ಯಾಲಯಕ್ಕಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ೨೦೦೪ರ ಸೆಪ್ಟೆಂಬರ್‌ನಲ್ಲಿ ಸಂಶೋಧನ ಕರ್ನಾಟಕ ಎಂಬ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕರ್ನಾಟಕ ಕರ್ನಾಟಕತ್ವಕ್ಕೆ ಸಂಬಂಧಿಸಿದಂತೆ ಇದುವರೆಗೆ ವಿವಿಧ ಜ್ಞಾನಶಿಸ್ತುಗಳಲ್ಲಿ ನಡೆದಿರುವ ಸಂಶೋಧನೆಗಳನ್ನು, ಬಿಬ್ಲಿಯೋಗ್ರಫಿಕ್ ವಿವರಗಳ ಜೊತೆಗೆ ಸಾರಾಂಶ ಸಹಿತವಾಗಿ ಒಂದೆಡೆ ವ್ಯವಸ್ಥಿತವಾಗಿ ವಿಂಗಡಿಸಿ, ಅವುಗಳನ್ನು ಮುದ್ರಿತ ಅಥವಾ ವಿದ್ಯುನ್ಮಾನ ಮಾಧ್ಯಮಗಳಿಗೆ ಅಳವಡಿಸಿ ಜಗತ್ತಿನೆಲ್ಲೆಡೆ ಇರುವ ಸಂಶೋಧನಾಸಕ್ತರಿಗೆ ಒದಗಿಸುವುದು. ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಾಹಿತಿ ಕೇಂದ್ರವು ಕರ್ನಾಟಕದ ಕಲಾವಿದರು, ಕರ್ನಾಟಕದ ಬರಹಗಾರರು, ಕರ್ನಾಟಕ ಪ್ರಾಣಿ ಪಕ್ಷಿಗಳು ಹಾಗೂ ಕರ್ನಾಟಕದ ಜಲಸಂಪತ್ತು ಎಂಬ ನಾಲ್ಕು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮಾಹಿತಿಯನ್ನು ಸಂಗ್ರಹಿಸುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ತನ್ನ ಅಧ್ಯಯನ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ಆಶಯವನ್ನು ಇಟ್ಟುಕೊಂಡಿದ್ದು, ಈಗಾಗಲೇ ಕುವೆಂಪು ಜನ್ಮಸ್ಥಳವಾದ ಕುಪ್ಪಳಿಯಲ್ಲಿ ಕುವೆಂಪು ಅಧ್ಯಯನ ಕೇಂದ್ರ ಸ್ಥಾಪಿಸಿದೆ. ಬಸವಣ್ಣನವರು ಐಕ್ಯವಾದ ಕೂಡಲ ಸಂಗಮದಲ್ಲಿ ವಚನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಎರಡು ಕೇಂದ್ರಗಳ ಮೂಲಕ ಅನೇಕ ಸಂಶೋಧನಾ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಇಂತಹ ಕೇಂದ್ರಗಳನ್ನು ವಿಸ್ತರಿಸುವ ಆಶಯವನ್ನು ಇಟ್ಟುಕೊಳ್ಳಲಾಗಿದೆ. ಇಷ್ಟೆಲ್ಲ ಬೌದ್ಧಿಕ ಚಟುವಟಿಕೆಗಳ ಜೊತೆಗೆ ವಿದ್ಯಾರಣ್ಯ ಆವರಣದಲ್ಲಿ ಭೌತಿಕ ಚಟುವಟಿಕೆಯೂ ವಿಸ್ತರಿಸುತ್ತಲಿದೆ. ಯುಜಿಸಿ ನೆರವಿನಿಂದ ಒಂದು ಕೋಟಿ ವೆಚ್ಚದಲ್ಲಿ ಗಣಕ ಕೇಂದ್ರ ಪೂರ್ಣ ಸ್ವರೂಪದಲ್ಲಿ ಸಜ್ಜುಗೊಂಡಿದ್ದು, ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಪರಿಪೂರ್ಣವಾದ ಅಂತರ್ಜಾಲದ ವ್ಯವಸ್ಥೆ ಮಾಡಲಾಗಿದೆ. ಸಂಶೋಧಕರಿಗಾಗಿ ನಿರ್ಮಿಸಿರುವ ಸಂಶೋಧಕರ ನಿವಾಸಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಚರಿತ್ರೆ ಅಧ್ಯಯನ ವಿಭಾಗ ಹಾಗೂ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ಹೊಸ ಕಟ್ಟಡಗಳು ಮತ್ತು ಆಡಳಿತ ಸಿಬ್ಬಂದಿಗಳ ವಾಸಕ್ಕಾಗಿ ೧೬ ವಸತಿ ಗೃಹಗಳು ಮುಂತಾಗಿ ಈ ವರ್ಷ ನಮ್ಮ ಭೌತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಹಾಗೆಯೇ ಹಾಲುಮತ ಅಧ್ಯಯನ ಪೀಠದ ವತಿಯಿಂದ ಹಾಲುಮತ ಭವನ, ಅಧ್ಯಯನಾಂಗದ ಕಟ್ಟಡ, ಹಸ್ತಪ್ರತಿ ಅಧ್ಯಯನ ವಿಭಾಗದ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ದಾಖಲಾತಿಗಾಗಿ ಹೊಸ ಕಟ್ಟಡಗಳು ಪ್ರಗತಿಯ ಹಂತದಲ್ಲಿವೆ.

ಹದಿನೈದು ವರ್ಷಗಳ ಹಿಂದೆ ಕೇವಲ ಬರಡು ನೆಲವಾಗಿ ನಿಂತಿದ್ದು ವಿದ್ಯಾರಣ್ಯ ಭೂಮಿ ಈಗ ಹಚ್ಚ ಹಸಿರಿನ ಕ್ಷೇತ್ರವಾಗಿ ಪರಿವರ್ತಿತವಾಗಿದೆ. ಬಯಲಿನಿಂದ ಆಲಯಕ್ಕೆ ನಾವು ಬಂದಿದ್ದೇವೆಂಬುದು ನಿಜವಾದರೂ ವಿಶಾಲ ಕರ್ನಾಟಕದ ಬಯಲು ನಮ್ಮ ನಿರಂತರ ಅಧ್ಯಯನದ ತಾಣವೆಂಬುದು ನಮಗೆ ಗೊತ್ತಿದೆ. ವಿದ್ಯಾರಣ್ಯದಲ್ಲಿರುವುದು ಒಂದು ನೆಪ. ವಿದ್ಯಾರಣ್ಯದ ಆಚೆಗಿರುವ ಬುಡಕಟ್ಟುಗಳ ನಿರ್ಲಕ್ಷಿತ ಜನ ಸಮುದಾಯಗಳು, ಭೂಮಿ ಉಳುವ ರೈತರು, ದುಡಿಯುವ ಎಲ್ಲ ಬಗೆಯ ಶ್ರಮಿಕರು, ಕೋಟೆ ಕೊತ್ತಲಗಳು, ಶಾಸನಗಳು, ಕವಿ, ವಿಮರ್ಶಕರು, ಇವರೆಲ್ಲ ನಮ್ಮ ಪ್ರೀತಿಯ ಸಂಗಾತಿಗಳು. ಆದುದರಿಂದ ನಾವು ಬಯಲಿನಿಂದ ಆಲಯಕ್ಕೆ ಬಂದಿದ್ದೇವೆಯೋ? ಇಲ್ಲವೇ ಆಲಯದಿಂದ ಬಯಲಿಗೋ? ಈ ನಿರಂತರ ಜಿಜ್ಞಾಸೆಯೇ ನಮ್ಮ ಶಕ್ತಿ.

ಕರ್ನಾಕಟದ ಘನತೆವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ರಾಮೇಶ್ವರ ಠಾಕೂರ್‌. ಅವರು ಮತ್ತು ಭಾರತ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಂ. ವೀರಪ್ಪ ಮೊಯಿಲಿ ಅವರ ಸಮ್ಮುಖದಲ್ಲಿ ವಿಶ್ವವಿದ್ಯಾಲಯದ ಕುಲಪತಿಯಾದ ನನ್ನದೊಂದು ಮನವಿ ಇದೆ. ಕನ್ನಡ ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಾದ ವಿಭಿನ್ನ ವಿಶ್ವವಿದ್ಯಾಲಯವಾಗಿರುವುದರಿಂದ ನಮಗೆ ಬೇರೆ ಮೂಲಗಳಿಂದ ಯಾವ ಆದಾಯವೂ ಇಲ್ಲ. ಕರ್ನಾಟಕ ಸರ್ಕಾರ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಉದಾರ ನೆರವಿನಿಂದ ವಿಶ್ವವಿದ್ಯಾಲಯವನ್ನು ನಿರಂತರವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಕನ್ನಡವನ್ನು ಕಟ್ಟುವ ಮತ್ತು ಕನ್ನಡ ಸಂಸ್ಕೃತಿಯನ್ನು ಅಭ್ಯಸಿಸುವ ನಿರಂತರ ಕಾಯಕದ ಈ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಕೊರತೆ ಇದೆ ಎಂಬುದಂತೂ ಸ್ಪಷ್ಟ.

ಕಳೆದ ವರ್ಷ ನಮಗೆ ಬಂದ ಬಜೆಟ್‌ನಲ್ಲಿ ಸಂಬಳಕ್ಕಾಗಿ ವಿನಿಯೋಗಿಸಿರುವುದು ರೂ. ೪,೩,೭೮,೦೦೦.೦೦ಗಳು. ರೂ ೧ ಕೋಟಿ ಹಣದಲ್ಲಿ ನಾವು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಬೇಕಾಗಿದೆ. ಇನ್ನೂ ಅನೇಕ ಬಗೆಯ ಮೂಲಭೂತ ಸೌಲಭ್ಯಗಳು ನಮ್ಮಲ್ಲಿ ಏರ್ಪಡಬೇಕಾಗಿದೆ. ಅಧ್ಯಾಪಕರು ಮತ್ತು ಸಂಶೋಧಕರ ಯೋಜನೆಗಳಿಗಾಗಿ ತೀರ ಕಡಿಮೆ ಹಣವನ್ನು ಮೀಸಲಿಡುತ್ತಿದ್ದೇವೆ. ಸರ್ಕಾರ ಉದಾರವಾಗಿ ಕನ್ನಡದ ಕೆಲಸಕ್ಕಾಗಿ ಹಣವನ್ನು ನೀಡಬೇಕೆಂದು ವಿನಯ ಪೂರ್ವಕವಾಗಿ ಕೋರಿಕೊಳ್ಳುತ್ತಾ ಈ ಸಲದ ಆಯವ್ಯಯದಲ್ಲಿ ನಮ್ಮ ಈ ಕೊರತೆಯನ್ನು ತುಂಬಿಕೊಡಬೇಕೆಂದು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ.

ಇಷ್ಟು ಹೇಳಿ ಸನ್ಮಾನ್ಯ ಘನತೆವೆತ್ತ ರಾಜ್ಯಪಾಲರಿಗೆ, ನುಡಿಹಬ್ಬದ ಭಾಷಣವನ್ನು ಮಾಡಲಿರುವ ಭಾರತ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಿಗೆ ಮತ್ತು ಈ ವರ್ಷದ ನಾಡೋಜರಿಗೆ ಗೌರವವನ್ನು ಸಮರ್ಪಿಸುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

ಜೈ ಕರ್ನಾಟಕ ಮಾತೆ

೫ ಡಿಸೆಂಬರ್ ೨೦೦೮