ಕನ್ನಡ ವಿಶ್ವವಿದ್ಯಾಲಯ ೧೭ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಪದವಿ, ಡಿ.ಲಿಟ್. ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ನೀಡಿ ನುಡಿಹಬ್ಬವನ್ನು ಅರ್ಥಪೂರ್ಣವಾಗಿಸಲು ಬಂದಿರುವ ಕರ್ನಾಟಕ ರಾಜ್ಯದ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಘನತೆವೆತ್ತ ಸನ್ಮಾನ್ಯ ರಾಮೇಶ್ವರ ಠಾಕೂರ್ ಅವರೇ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ, ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರೇ, ಘಟಿಕೋತ್ಸವ ಭಾಷಣವನ್ನು ಮಾಡಲು ಆಗಮಿಸಿರುವ ಶ್ರೀ ಬರಗೂರು ರಾಮಚಂದ್ರಪ್ಪನವರೇ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಭಾಜನರಾದ ಪ್ರೊ. ಎಲ್. ಬಸವರಾಜು ಅವರೆ, ಪ್ರೊ. ಯು.ಆರ್. ಅನಂತಮೂರ್ತಿ ಅವರೇ, ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ ಅವರೇ, ಪ್ರೊ. ಕಮಲಾ ಹಂಪನಾ ಅವರೇ, ಪ್ರೊ. ಶ್ರೀನಿವಾಸ ಹಾವನೂರ ಅವರೇ, ನೆರೆದಿರುವ ಜನಪ್ರತಿನಿಧಿಗಳೇ, ವಿವಿಧ ಪದವಿಗಳನ್ನು ಪಡೆಯಲಿರುವ ಮಹನೀಯರೇ, ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದದವರೇ, ಆಡಳಿತ ಸಿಬ್ಬಂದಿಗಳೇ, ಮಾಧ್ಯಮದ ಮಿತ್ರರೇ, ಆಹ್ವಾನಿತರೇ, ಮಹಿಳೆಯರೇ ಹಾಗೂ ಮಹನೀಯರೇ, ತಮ್ಮೆಲ್ಲರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಅತ್ಯಂತ ಗೌರವ ಹಾಗೂ ಆದರದಿಂದ ಸ್ವಾಗತಿಸುತ್ತೇನೆ.

೧೭ನೇ ನುಡಿಹಬ್ಬದಲ್ಲಿ ಪಾಲ್ಗೊಂಡಿರುವ ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ರಾಮೇಶ್ವರ ಠಾಕೂರ್ ಅವರು ಉತ್ತಮ ಸಮಾಜ ಚಿಂತಕರು, ರಾಜಕೀಯ ಮುತ್ಸದ್ಧಿಗಳು. ಶ್ರೀಯುತರು ಈ ನುಡಿಹಬ್ಬದ ಸಂದರ್ಭದಲ್ಲಿ ಡಿ.ಲಿಟ್., ಪಿಎಚ್.ಡಿ. ಹಾಗೂ ಎಂ.ಫಿಲ್ ಪದವಿಯನ್ನು ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರು ಉತ್ತಮ ಶಿಕ್ಷಣ ಚಿಂತಕರು, ಶೈಕ್ಷಣಿಕ ರಂಗದಲ್ಲಿ ಹೊಸ ಹೊಳಹುಗಳನ್ನು ಅರಸುತ್ತಿರುವ ಯುವ ರಾಜಕಾರಣಿಗಳು. ಅವರು ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ನುಡಿಹಬ್ಬಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ.

ಶ್ರೀಯುತ ಬರಗೂರು ರಾಮಚಂದ್ರಪ್ಪ ಅವರು ಇಂದಿನ ನುಡಿಹಬ್ಬದ ಘಟಿಕೊತ್ಸವದ ಭಾಷಣವನ್ನು ಮಾಡಲು ಬಂದಿದ್ದಾರೆ. ಬರಗೂರು ರಾಮಚಂದ್ರಪ್ಪ ನವರು ಕನ್ನಡ ಸಾಹಿತ್ಯ ವಲಯದಲ್ಲಿ ಹಾಗೂ ಬಂಡಾಯ ಸಾಹಿತ್ಯ ಸಂಘಟಕರಲ್ಲಿ ತೀರ ಪರಿಚಿತವಾದ ಹೆಸರು. ಬೆಂಗಳುರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಬರಗೂರು ಅವರು ಸಾಹಿತಿಯಾಗಿ, ಬಂಡಾಯ ಸಾಹಿತ್ಯದ ಮುಂಚೂಣಿಯ ನಾಯಕರಾಗಿ, ಸಮಾಜಪರ ಚಿಂತಕರಾಗಿ ಗುರುತಿಸಿ ಕೊಂಡವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರು ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಹೊಳಹುಗಳು ದೀರ್ಘಕಾಲಿಕವಾದವು. ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅವರ ಯೋಜನೆ ಆ ಸಮುದಾಯಗಳ ಅಧಿಕೃತ ದಾಖಲೀಕರಣಕ್ಕೆ ಕಾರಣವಾಯಿತು. ಬರಗೂರು ರಾಮಚಂದ್ರಪ್ಪ ಅವರು ಸದಾ ಚಿಂತನಾಶೀಲರು. ಅವರ ಬರವಣಿಗೆಗಳು ಸದಾ ವೈಚಾರಿಕೆಯಿಂದ ತುಂಬಿರುತ್ತವೆ. ಅವರು ಒಂದಲ್ಲ ಒಂದು ವಿಚಾರಧಾರೆಯನ್ನು ಹಿಡಿದು ಎಳೆ ಎಳೆಯಾಗಿ ವಿಶ್ಲೇಷಿಸುವ ಅವರ ಉಪನ್ಯಾಸದ ಪರಿ ಅನುಕರಣೀಯ. ಕನ್ನಡ ವಿಶ್ವವಿದ್ಯಾಲಯದ ಮೇಲಿನ ಅಭಿಮಾನದಿಂದ ಅವರು ಇಂದು ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಅವರಿಗೆ ಮತ್ತೊಮ್ಮೆ ವಿಶ್ವವಿದ್ಯಾಲಯದ ಪರವಾಗಿ ಸ್ವಾಗತವನ್ನು ಬಯಸುತ್ತೇನೆ.

ಇಂದಿನ ನುಡಿಹಬ್ಬದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾದವರಲ್ಲಿ ಪ್ರೊ. ಎಲ್. ಬಸವರಾಜು ಅವರೂ ಒಬರು. ಹಿರಿಯರೂ, ಜ್ಞಾನವೃದ್ಧರೂ ಆಗಿರುವ ಪ್ರೊ. ಎಲ್. ಬಸವರಾಜು ಅವರು ದೀರ್ಘಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಪ್ರಮುಖವಾಗಿ ಅವರು ಶ್ರೇಷ್ಠ ಗ್ರಂಥ ಸಂಪಾದಕರು ಮತ್ತು ಸಾಹಿತ್ಯ ಸಂಶೋಧಕರು. ಮುಖ್ಯವಾಗಿ ಅವರು ತಮ್ಮ ಸೃಜನೇತರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೂ ಸೃಜನ ಸಾಹಿತ್ಯದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಆಳವಾದ ಅಧ್ಯಯನದ ಮೂಲಕ ಹಸ್ತಪ್ರತಿಗಳಲ್ಲಿನ ಕೃತಿಗಳನ್ನು ಕವಿಗೆ ಸಮೀಪವಾದ ರೀತಿಯಲ್ಲಿ ಸಂಪಾದಿಸಿಕೊಟ್ಟಿರುವದು ಅವರ ಹೆಗ್ಗಳಿಕೆ. ಶಿವದಾಸ ಗೀತಾಂಜಲಿ, ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆಯನ್ನು ಪ್ರಥಮ ಬಾರಿಗೆ ಸಂಪಾದಿಸಿದ್ದಾರೆ. ಅಲ್ಲದೆ ಆದಿಪುರಾಣ, ಕನ್ನಡ ಛಂದಸ್ಸು, ಶಬ್ದಮಣಿದರ್ಪಣ, ಪರಮಾರ್ಥ ಮುಂತಾದವು ಪ್ರೊ. ಎಲ್. ಬಸವರಾಜು ಅವರು ಸಂಪಾದಿಸಿದ ಇತರ ಕೃತಿಗಳು. ಹಳಗನ್ನಡ ಕಾವ್ಯಗಳಾದ ಪಂಪಭಾರತ, ಆದಿಪುರಾಣದಂತಹ ಕೃತಿಗಳನ್ನು ಓದುಗರ ಅನುಕೂಲಕ್ಕಾಗಿ ಸರಳ ಪಠ್ಯವಾಗಿ ರೂಪಿಸಿಕೊಟ್ಟವರು. ಅಲ್ಲಮ, ಬಸವ, ಅಕ್ಕಮಹಾದೇವಿ, ದಾಸಿಮಯ್ಯ ಅವರ ವಚನಗಳ ಶಾಸ್ತ್ರೀಯ ಸಂಪಾದನೆ ಬಸವರಾಜು ಅವರ ಹಿರಿಮೆ.

ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಅವರಿಗೆ ಲಭಿಸಿವೆ. ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಕರ್ನಾಟಕ ಸರ್ಕಾರ ಅವರಿಗೆ ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ. ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿ ನೀಡಿ ಇದೀಗ ಪುರಸ್ಕರಿಸುತ್ತಿದೆ.

ಪ್ರೊ. ಅನಂತಮೂರ್ತಿ ಅವರು ಭಾರತೀಯ ಹಾಗೂ ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಒಬ್ಬ ಅಪರೂಪದ ಲೇಖಕರು. ಸಾಹಿತ್ಯ ಚಳುವಳಿ ಹಾಗೂ ಸಾಮಾಜಿಕ ಚಳುವಳಿಗಳೆರಡರಲ್ಲಿಯೂ ತಮ್ಮನ್ನು ಗುರುತಿಸಿಕೊಂಡಿರುವ ಅನಂತಮೂರ್ತಿ ಅವರು ತಮ್ಮ ಸಣ್ಣಕತೆ ಹಾಗೂ ಕಾದಂಬರಿಗಳು ಹಾಗೂ ಅವುಗಳ ಅನುವಾದದ ಮೂಲಕ ಕನ್ನಡ ಹಾಗೂ ಯುರೋಪಿಯನ್ ಭಾಷೆಗಳಲ್ಲಿ ಚಿರಪರಿಚಿತರು.

ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಯಾಗಿ, ನ್ಯಾಶನಲ್ ಬುಕ್ ಟ್ರಸ್ಟ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದುದು.

ಸಂಸ್ಕಾರ, ಘಟಶ್ರಾದ್ಧ ಮೊದಲಾದ ಕಾದಂಬರಿ ಹಾಗೂ ಅವುಗಳ ಚಲನಚಿತ್ರ ರೂಪಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು. ತುಮಕೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ೧೯೯೪ ರಲ್ಲಿ ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಸಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಪ್ರೊ. ಅನಂತಮೂರ್ತಿ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತಿದೆ.

ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ ಅವರು ಜಾನಪದ ನೆಲೆಯಿಂದ ಮೂಡಿ ಬಂದವರು. ತಮ್ಮ ಒಂಬತ್ತನೆಯ ವಯಸ್ಸಿನಿಂದಲೆ ತಾಯಿಯ ತವರುಮನೆಯಿಂದ ತೊಗಲು ಗೊಂಬೆಯಾಟವನ್ನು ಬಳುವಳಿಯಾಗಿ ಪಡೆದು ಅದನ್ನು ನಿರಂತರವಾಗಿ ತಮ್ಮ ಕಾಯಕವಾಗಿ ರೂಪಿಸಿಕೊಂಡವರು. ಕಿಳ್ಳೇಕ್ಯಾತರ ದೊಡ್ಡಭರಮಪ್ಪ ಎಂದೇ ಪರಿಚಿತರಾದ ಇವರು ರಾಮಾಯಣ, ಮಹಾಭಾರತ ಮತ್ತು ಪುರಾಣ ಕಥೆಗಳ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನೀಡಿದ್ದಾರೆ. ದೊಡ್ಡಭರಮಪ್ಪನವರು. ಮೂರು ನಾಲ್ಕು ದಿನಗಳ ಕಾಲ ಸತತವಾಗಿ ರಾಮಾಯಣದ ಕಥೆಯನ್ನು ತಮ್ಮ ತೊಗಲು ಗೊಂಬೆಗಳ ಮೂಲಕ ಪ್ರದರ್ಶಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಪ್ರಧಾನ ಕಥೆಯ ಸಮಯಕ್ಕೆ ತಕ್ಕಂತೆ ಉಪಕಥೆಗಳನ್ನು ಹೆಣೆದು ಪ್ರದರ್ಶಿಸುವ ಚಾಕಚಕ್ಯತೆ ದೊಡ್ಡಭರಮಪ್ಪನವರಲ್ಲಿ ಇದೆ. ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಜಾನಪದ ಸಮ್ಮೇಳನಗಳಲ್ಲಿ ದೊಡ್ಡಭರಮಪ್ಪನವರು ತಮ್ಮ ಪ್ರದರ್ಶನವನ್ನು ನೀಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪುರಸ್ಕರಿಸಿವೆ.

ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ೧೯೮೫-೮೬ ರಲ್ಲಿ ಜರ್ಮನಿಯಲ್ಲಿ ಪ್ರದರ್ಶನ ಹಾಗೂ ಪ್ರಶಸ್ತಿ, ೧೯೯೨ ರಲ್ಲಿ ಕರ್ನಾಟಕ ಸರ್ಕಾರದ ಜಾನಪದಶ್ರೀ ಪ್ರಶಸ್ತಿ ಮುಂತಾದವು ಅವರಿಗೆ ಲಭಿಸಿವೆ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯವು ಶ್ರೀ ಯಡ್ರಾಮನಹಳ್ಳಿ ದೊಡ್ಡಭರಮಪ್ಪ ಅವರಿಗೆ ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತದೆ.

ಪ್ರೊ. ಕಮಲಾ ಹಂಪನಾ ಅವರದು ಸಾಹಿತ್ಯ ಮತ್ತು ಮಹಿಳಾ ಚಿಂತನೆಗಳಲ್ಲಿ ಗಣನೀಯವಾದ ಹೆಸರು. ಕಥೆ, ಕವನ, ಶಿಶುಸಾಹಿತ್ಯ, ಸಂಶೋಧನೆ, ಸಂಪಾದನೆ, ಜೀವನಚರಿತ್ರೆಗೆ ಸಂಬಂಧಿಸಿದಂತೆ ಅವರು ಕೃಷಿಗೈದಿದ್ದಾರೆ. ಪೂರ್ವದ ಹಳಗನ್ನಡದಿಂದ ಆಧುನಿಕ ಸಾಹಿತ್ಯದವರೆಗಿನ ಗಂಭೀರವಾದ ಚಿಂತನೆ ಮತ್ತು ಸೃಜನಾತ್ಮಕ ಕೃತಿ ರಚನೆಯ ಜೊತೆಜೊತೆಗೆ ಅನುವಾದಿತ ಕೃತಿಗಳನ್ನು ಹೊರತಂದಿದ್ದಾರೆ. ವಿವಿಧ ವಿಷಯಗಳನ್ನು ಕುರಿತಂತೆ ೩೦ಕ್ಕೂ ಹೆಚ್ಚಿನ ಕೃತಿ ರಚಿಸಿದ ಕಮಲಾ ಹಂಪನಾ ಅವರು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಕಾಲೇಜು ಹರಿಜನ ಗಿರಿಜನ ಅಧ್ಯಾಪಕ ಸಂಘದ ಸಂಘಟಕರಾಗಿ ಸಾಹಿತ್ಯ ಮತ್ತು ಸಮುದಾಯಗಳಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪದವಿ ಅವರಿಗೆ ಲಭಿಸಿರುವುದು ಅವರ ಸಾಹಿತ್ಯ ಸಾಧನೆಗೆ ಪ್ರತೀಕ. ದಲಿತವರ್ಗದಿಂದ ಬಂದ ಇವರು ದಲಿತ ಸಂವೇದನೆಯನ್ನು ಸೂಕ್ಷ್ಮವಾಗಿ ಗುರುತಿಸಬಲ್ಲದು. ಅಂಬೇಡ್ಕರ್ ವಿಚಾರಧಾರೆಯಿಂದ ಪ್ರಭಾವಿತರಾದ ಇವರು ರೂಢಿಗತ ಮಾಧ್ಯಮವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬಲ್ಲವರು. ಅಂದಿನ ಕಾಲಸಂದರ್ಭದಲ್ಲಿ ಡಾ. ಹಂಪನಾ ಅವರ ಕೈಹಿಡಿಯುವ ಮೂಲಕ ಅಂತರ್ಜಾತಿ ವಿವಾಹಕ್ಕೆ ಮೌಲ್ಯವನ್ನು ತಂದುಕೊಟ್ಟವರು ಕಮಲಾ ಹಂಪನಾ ಅವರು. ಪ್ರೊ. ಕಮಲಾ ಹಂಪನಾ ಅವರಿಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿ ನೀಡಿ ಸನ್ಮಾನಿಸುತ್ತದೆ.

ಡಾ. ಶ್ರೀನಿವಾಸ ಹಾವನೂರ ಅವರು ಹಾವೇರಿ ಜಿಲ್ಲೆಯ ಹಾವನೂರು ಗ್ರಾಮದವರು. ಅವರ ಬಾಳ ಪಯಣ ವೈವಿಧ್ಯಮಯವಾದದ್ದು. ಸಾಂಗ್ಲಿಯ ವೆಲ್ಲಿಂಗ್ಡನ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಟ್ಯೂಟರ್ ಆಗಿ ಸೇವೆಯನ್ನು ಆರಂಭಿಸಿದ ಹಾವನೂರ ಅವರು ಟಾಟಾ ಇನ್ಸ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್‌ನಲ್ಲಿ ಗ್ರಂಥಪಾಲಕರಾಗಿ, ಮಂಗಳೂರು-ಮುಂಬೈ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ‘ಹೊಸಗನ್ನಡ ಅರುಣೋದಯ’, ಗೋವಿಂದ ಪೈ ವಾಙ್ಮಯ ದರ್ಶನ, ಕನ್ನಡದಲ್ಲಿ ಕ್ರೈಸ್ತ ಸಾಹತಿಯ, ಗೋವಿಂದ ಪೈಗಳ ಕೃತಿ ಸಮೀಕ್ಷೆ, ಮುಂತಾದವು ಅವರ ಪ್ರಮುಖ ಕೃತಿಗಳು. ಸಾಹಿತ್ಯ, ಇತಿಹಾಸ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ವಿದೇಶಿಯರ ಕೊಡುಗೆಯನ್ನು ಕುರಿತಂತೆ ಅಧಿಕೃತ ಬರವಣಿಗೆ ಪ್ರೊ. ಶ್ರೀನಿವಾಸ ಹಾವನೂರ ಅವರದು. ಮರಾಠಿ ನೆಲೆಯಲ್ಲಿ ನಿಂತು ಕನ್ನಡ -ಮರಾಠಿ ಸ್ನೇಹ ಕೇಂದ್ರವಾಗಿ ಅವರು ಸಲ್ಲಿಸಿದ ಸೇವೆ ಗಮನಾರ್ಹ ವಾದದ್ದು. ಮಿಥಿಕ್ ಸೊಸೈಟಿ ಪ್ರಶಸ್ತಿ, ಕಿಟೆಲ್ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ. ಇತಿಹಾಸ ಸಮ್ಮೇಳನದ ಅಧ್ಯಕ್ಷತೆ ಮೊದಲಾದವು ಪ್ರೊ. ಹಾವನೂರ ಅವರಿಗೆ ಸಂದ ಗೌರವಗಳು. ಪ್ರೊ. ಶ್ರೀನಿವಾಸ ಹಾವನೂರ ಅವರಿಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತದೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗಮನದಲ್ಲಿರಿಸಿ ಅಧ್ಯಯನಶೀಲವಾಗುವ ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಂಶೋಧನೆಯನ್ನು ತನ್ನ ಉಸಿರನ್ನಾಗಿಸಿಕೊಂಡಿರುವ ವಿಶ್ವವಿದ್ಯಾಲಯ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಪರವಾದ ಚಿಂತನೆಗಳನ್ನು ನಡೆಸಿಕೊಂಡು ಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಲ್ಲುತ್ತಿರುವ ಈ ಸಂದರ್ಭದಲ್ಲಿ ಕನ್ನಡವನ್ನು ನಿರಂತರವಾಗಿಸುವ ದಿಸೆಯಲ್ಲಿ ಅದು ಇನ್ನಷ್ಟು ತೀವ್ರವಾಗಿ ಕಾರ್ಯಪ್ರವೃತ್ತವಾಗುವ ಆವಶ್ಯಕತೆ ಇದೆ. ಕನ್ನಡವನ್ನು ಉಳಿಸುವುದು ಎಂದರೆ ಕನ್ನಡ ಸಂಸ್ಕೃತಿಯನ್ನು ಉಳಿಸುವುದು. ಸಂಸ್ಕೃತಿಯನ್ನು ಹೊರತುಪಡಿಸಿ ಯಾವುದೇ ಭಾಷೆ ಇರಲಾರದ ಕಾರಣ, ಕನ್ನಡ ದೇಶಿ ಸಂಸ್ಕೃತಿಯನ್ನು ಉಳಿಸುವ ಮೂಲಕ ಕನ್ನಡ ಭಾಷೆಯನ್ನು ನಿರಂತರವಾಗಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಪ್ರಸ್ತುತ ಜೀವಂತವಿರುವ ಹಾಗೂ ಬದಲಾವಣೆಗೆ ಒಳಗಾಗುತ್ತಿರುವ ಸಂಸ್ಕೃತಿಗಳನ್ನು ಹಿಡಿದಿಡುವ, ದಾಖಲಿಸುವ ನಿಟ್ಟಿನಲ್ಲಿ ತೀವ್ರಗತಿಯಿಂದ ಧಾವಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ. ದೇಶಿ ಸಂಸ್ಕೃತಿ ಹಾಗೂ ಉನ್ನತ ತಾಂತ್ರಿಕತೆಯಂತಹ ಆಧುನಿಕ ಕಲ್ಪನೆಗಳ ಬಳಕೆಗಳ ನಡುವೆ ಕೊಂಡಿಯನ್ನು ಬೆಸೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ. ಕನ್ನಡ ಎಂಬುದು ಒಂದೇ ಅಲ್ಲ. ಕವಿರಾಜಮಾರ್ಗಕಾರ ೧೦ ನೇ ಶತಮಾನದ ಹೊತ್ತಿಗೆ ‘ಕನ್ನಡಂಗಳ್’ ಎಂಬ ಪದ ಪ್ರಯೋಗ ಮಾಡಿದ್ದಾನೆ. ಈ ಮೂಲಕ ಕನ್ನಡ ಪ್ರಭೇದಗಳ ಬಗ್ಗೆ, ಉಪಭಾಷೆಗಳ ಬಗ್ಗೆ ಪ್ರಸ್ತಾಪಿಸಿದ್ದಾನೆ. ಇಂದಿಗೂ ಕನ್ನಡದಲ್ಲಿನ ಭೌತಿಕ ಪರಿಸರ, ಅದರಿಂದ ನಿರೂಪಿತವಾಗಬಹುದಾದ ಆಚಾರ-ವಿಚಾರಗಳು, ಪ್ರಾದೇಶಿಕ ರೂಪಗಳು, ಸಾಮಾಜಿಕ ರೂಪಗಳು. ಅಲ್ಲದೆ, ಕಾಲಕಾಲಕ್ಕೆ ಬದಲಾದ ಸಂಸ್ಕೃತಿಯ ಅಂಶಗಳನ್ನು ಗರ್ಭೀಕರಿಸಿಕೊಂಡಿರುವ ಭಿನ್ನರೂಪಗಳನ್ನು ಹಿಡಿದಿಡುವ ಅವಶ್ಯಕತೆ ಇದೆ. ಯಾವುದೇ ಒಂದು ಸಮುದಾಯದ ಭಾಷಾ ರಚನೆ, ಶಬ್ದಕೋಶ, ಅವರವರ ವೃತ್ತಿ, ಪರಿಸರಕ್ಕೆ ಅನುಗುಣವಾಗಿ ಬದಲಾಗುವ ಕಾರಣ ಈ ಎಲ್ಲ ಅಂಶಗಳಿಗೆ ಸಂಬಂಧಿಸಿದಂತೆ ಉಪಭಾಷಾ ಕೋಶಗಳು, ಪಾರಿಭಾಷಿಕ ಕೋಶಗಳು, ನಿಘಂಟುಗಳು ರಚಿತವಾಗಬೇಕಿದೆ. ಕನ್ನಡ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ಈಗಾಗಲೇ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿದೆ.

ಕನ್ನಡ ಭಾಷೆಯನ್ನು ಕನ್ನಡಿಗರು ಬಳಕೆಯಲ್ಲಿ ಹಿಡಿದಿಡುವ ರೀತಿ ಹಾಗೂ ಕನ್ನಡೇತರರು ಕನ್ನಡ ಭಾಷೆಯ ಬಗ್ಗೆ ಆಸ್ಥೆಯನ್ನು ತಾಳುವ ರೀತಿಯ ಕುರಿತು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಹೊರ ರಾಜ್ಯದವರು. ಹೊರ ರಾಷ್ಟ್ರದವರು ಕನ್ನಡವನ್ನು ಕಲಿಯಲು ಅನುವಾಗುವ ರೀತಿಯಲ್ಲಿ ಪಠ್ಯಗಳ ನಿರ್ಮಾಣ ಆಗಬೇಕಿದೆ. ಕನ್ನಡ ಭಾಷೆಯ ಸಾಹಿತ್ಯ ಕೃತಿಗಳ ಅನುವಾದ ಆಗಬೇಕಿದೆ. ಅಂತೆಯೇ ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ಪಠ್ಯವನ್ನಾಗಿ ರೂಪಿಸುವ ಆವಶ್ಯಕತೆಯೂ ಇದೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಮುಖಾಂತರ ಅರ್ಥೈಸಿಕೊಳ್ಳಬಹುದಾದ ಸೌಲಭ್ಯವನ್ನು ಒದಗಿಸಬೇಕಿದೆ.

ಕನ್ನಡ ಭಾಷೆಯ ಬಳಕೆ ಹಾಗೂ ತಾಂತ್ರಿಕತೆ ಜೊತೆಜೊತೆಯಾಗಿ ನಡೆಯಬೇಕಿದೆ. ಕನ್ನಡ ಭಾಷೆಯನ್ನು ಕಂಪ್ಯೂಟರ್ ಮೂಲಕ ಸಮರ್ಪಕವಾಗಿ ಬಳಸುವ ದಿಸೆಯಲ್ಲಿ ಮುನ್ನಡೆಯಬೇಕಾಗಿದೆ. ಇಂಗ್ಲಿಷಿಗಿರುವಂತೆ ಕಾಗುಣಿತ ಸರಿಪಡಿಸುವಿಕೆ, ಭಾಷಾ ತರ್ಜುಮೆ, ಒಸಿಆರ್‌ನಂತಹ ತಂತ್ರಾಂಶವನ್ನು ರೂಪಿಸುವ ಅವಶ್ಯಕತೆ ಇದೆ. ಮಾತು ಮತ್ತು ತಾಂತ್ರಿಕತೆ, ತಾಂತ್ರಿಕತೆ ಮತ್ತು ಮಾತಿಗೆ ಸಂಬಂಧಿಸಿದಂತೆ ಯೋಜನೆಯನ್ನು ತಯಾರಿಸುತ್ತಿದೆ.

ಕನ್ನಡ ಕಲಿಕೆ ಸಂಬಂಧಿಸಿದಂತೆ, ದೋಷರಹಿತಕಲಿಕೆ ಯೋಜನೆಯನ್ನು ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕದ ಕುಶಲ ಕಲೆಗಳನ್ನು ಮುಂದುವರಿಸುವ ದಿಶೆಯಲ್ಲಿ ನಿರಂತರವಾಗಿ ಕಮ್ಮಟಗಳನ್ನು ಏರ್ಪಡಿಸಿ ಮುಂದಿನ ಪೀಳಿಗೆಗೆ ರವಾನಿಸುವ ಯೋಜನೆ ವಿಶ್ವವಿದ್ಯಾಲಯಕ್ಕೆ ಇದೆ.

ಈ ಎಲ್ಲ ಕಾರ್ಯಗಳು ಕಾರ್ಯರೂಪಕ್ಕೆ ಬರುವಲ್ಲಿ ವಿಶ್ವವಿದ್ಯಾಲಯದ ಎಲ್ಲ ಅಧ್ಯಾಪಕವರ್ಗ, ವಿದ್ಯಾರ್ಥಿ ಸಮುದಾಯ ಹಾಗೂ ಆಡಳಿತ ಸಿಬ್ಬಂದಿವರ್ಗ ಎಂದಿನಂತೆ ಒಂದಾಗಿ ದುಡಿಯಬೇಕಾಗಿದೆ. ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಈ ದಿಸೆಯಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಂಡಿವೆ. ವೈಯಕ್ತಿಕ ಯೋಜನೆಗಳು ಅಂತೆಯೇ ಸಾಮೂಹಿಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಅಭಿವೃದ್ಧಿ ಅಧ್ಯಯನ ವಿಭಾಗವು ನಿರಂತರವಾಗಿ ಸಮುದಾಯಮುಖಿಯಾದ ಕಾರ್ಯಕ್ರಮಗಳನ್ನು ನಿಯೋಜಿಸುತ್ತಿದೆ. ವಿಭಾಗವು ಸಲ್ಲಿಸಿದ ಕೆಲವು ಶಿಫಾರಸ್ಸುಗಳನ್ನು ಸರಕಾರ ಅನುಷ್ಠಾನಕ್ಕೆ ತಂದಿದೆ. ವಿಭಾಗವು ಆರೋಗ್ಯ ಇಲಾಖೆಯ ನೌಕರರಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿನಿಯರಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿತ್ತು.

ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ‘ವಿಜಯನಗರ ಕಾಲದ ಸಂಸ್ಕೃತಿ’ ಎಂಬ ಗ್ರಂಥ ರಚಿಸಿದ್ದಾರೆ. ‘ಕೃಷ್ಣದೇವರಾಯ’ ಗ್ರಂಥದ ಸಂಪಾದಕರಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ. ಟಿ.ಪಿ. ವಿಜಯ್ ಅವರು ಚರಿತ್ರೆಯ ಏಳು ಸಂಪುಟಗಳ ಪ್ರಧಾನ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಡಾ. ಮೋಹನಕೃಷ್ಣ ರೈ ಅವರು ‘ಏಷ್ಯಾ-ಯುರೋಪ್’ ಸಂಪುಟದ ಸಂಪಾದಕರಾಗಿದ್ದಾರೆ. ಡಾ. ಚಿನ್ನಸ್ವಾಮಿ ಸೋಸಲೆ ಅವರು ‘ಭಾರತೀಯ ಸಮಾಜ ಮತ್ತು ದಲಿತರು’ ಎಂಬ ಕೃತಿ ರಚಿಸಿದ್ದಾರೆ. ‘ಸಮಕಾಲೀನ ಕರ್ನಾಟಕ’ ಮತ್ತು ‘ಸಮಕಾಲೀನ ಆಫ್ರಿಕಾ’ ಸಂಪುಟಗಳ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಾ. ಸಿ.ಆರ್. ಗೋವಿಂದರಾಜು ಅವರು ವಿಭಾಗದಿಂದ ಈ ವರ್ಷ ‘ವಿಜಯನಗರೋತ್ತರ ಕರ್ನಾಟಕದ ಪಾಳೆಯಗಾರರನ್ನು ಕುರಿತು ವಿಚಾರ ಸಂಕಿರಣ’ವನ್ನು ಹಮ್ಮಿಕೊಂಡಿದ್ದಾರೆ.

ಜಾನಪದ ವಿಭಾಗದ ಡಾ. ಮೊಗಳ್ಳಿ ಗಣೇಶ ಅವರು ‘ನಡುಗಾಲದ ಕನ್ನಡನಾಡು’ ಕೃತಿ ರಚಿಸಿದ್ದಾರೆ. ಡಾ. ರಹಮತ್ ತರೀಕೆರೆ ಅವರು ‘ಕರ್ನಾಟಕದ ಸೂಫಿಗಳು’ ಕೃತಿ ರಚಿಸಿದ್ದಾರೆ. ‘ಕವಿರಾಜಮಾರ್ಗ: ಸಾಂಸ್ಕೃತಿಕ ಮುಖಾಮುಖಿ’ ಹಾಗೂ ‘ಹೊಸ ತಲೆಮಾರಿನ ತಲ್ಲಣ’ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಡಾ. ಎಂ. ಚಂದ್ರಪೂಜಾರಿ ಅವರು ‘ದೇಸೀಯತೆಯ ನೆರಳಲ್ಲಿ ವಿಕೇಂದ್ರೀಕರಣ’, ‘ಕರಾವಳಿ ಕರ್ನಾಟಕದ ಕೋಮುವಾದ’ ಕೃತಿಗಳನ್ನು ರಚಿಸಿದ್ದಾರೆ. ಡಾ. ಮಂಜುನಾಥ ಬೇವಿನಕಟ್ಟಿ ಅವರು ‘ರಾಮಾಯಣ: ಮರುದರ್ಶನ’ ಕೃತಿ ಸಂಪಾದಿಸಿದ್ದಾರೆ. ಡಾ. ಎಫ್.ಟಿ. ಹಳ್ಳಿಕೇರಿ ಅವರು ‘ಹಸ್ತಪ್ರತಿ ವ್ಯಾಸಂಗ-೮’ನ್ನು ಸಂಪಾದಿಸಿದ್ದಾರೆ. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ‘ಬೇಡ ಬುಡಕಟ್ಟು ಚರಿತ್ರೆ ಮತ್ತು ಸಂಸ್ಕೃತಿ’ ಕೃತಿ ರಚಿಸಿದ್ದಾರೆ. ಡಾ. ಟಿ.ಆರ್. ಚಂದ್ರಶೇಖರ ಅವರು ‘ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸ್ಥಿತಿಗತಿ’, ‘ಲಿಂಗಸಂಬಂಧಿ ಅಭಿವೃದ್ಧಿ ಅಧ್ಯಯನ ಪ್ರಬಂಧಗಳು’ ಕೃತಿಗಳನ್ನು ರಚಿಸಿದ್ದಾರೆ. ಡಾ. ಬಿ.ಎಂ. ಪುಟ್ಟಯ್ಯ ಅವರು ‘ದಲಿತರು ಮತ್ತು ಭೂಮಿಯ ಪ್ರಶ್ನೆ’ ಎಂಬ ಕೃತಿ ರಚಿಸಿದ್ದಾರೆ. ಡಾ. ಎಸ್.ಎಸ್. ಅಂಗಡಿ ಅವರು ‘ಹೊಸಗನ್ನಡ ಛಂದಸ್ಸು’ ಎಂಬ ಕೃತಿಯನ್ನು ರಚಿಸಿದ್ದಾರೆ. ಇವುಗಳನ್ನು ಒಳಗೊಂಡಂತೆ ೨೫ ಪುಸ್ತಕಗಳನ್ನು ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಸನ್ಮಾನ್ಯ ರಾಮೇಶ್ವರ ಠಾಕೂರ್ ಅವರು ಇಂದು ಬಿಡುಗಡೆ ಮಾಡಿದ್ದಾರೆ.

ಪ್ರಾಚೀನ ಇತಿಹಾಸ ವಿಭಾಗವು ಸ್ಥಳೀಯ ಚರಿತ್ರೆ ಮತ್ತು ಪುರಾತತ್ವಮಾಲೆ ಅಡಿಯಲ್ಲಿ ಬಸವನಬಾಗೇವಾಡಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ, ನಾಗಮಂಗಲ, ಜಗಳೂರಿನಲ್ಲಿ ಸ್ಥಳೀಯ ಚರಿತ್ರೆಯನ್ನು ಕುರಿತಂತೆ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಈ ಮೂಲಕ ಪುಸ್ತಕವನ್ನು ಪ್ರಕಟಿಸಿದೆ. ದೇವಾಲಯ ಕೋಶಗಳು ಪ್ರಕಟವಾಗುತ್ತಿವೆ.

ಭಾಷಾಂತರ ವಿಭಾಗದಿಂದ ಮಧ್ಯಕಾಲೀನ ಮಹಾಕಾವ್ಯ ಮತ್ತು ಕರ್ನಾಟಕದಲ್ಲಿ ವಿಠ್ಠಲಪಂಥ ಕುರಿತ ಯೋಜನೆ. ‘ಲಿಂಗಭೇದ ಮತ್ತು ಭಾಷಾಂತರ’ ಕುರಿತಂತೆ ವಿಚಾರ ಸಂಕಿರಣ, ‘ಭಾಷಾಂತರ ದತ್ತ ಕಣಜ’ ನಿರ್ಮಾಣ ಯೋಜನೆ ಮೊದಲಾದ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಭಾಷಾಂತರ ಅಧ್ಯಯನ ವಿಭಾಗದಿಂದ ಡಾ. ಮೋಹನ ಕುಂಟಾರ್ ಅವರು ‘ಕನ್ನಡದಲ್ಲಿ ಧಾರ್ಮಿಕ ಪಠ್ಯಗಳ ಭಾಷಾಂತರ’ ಎಂಬ ವಿಚಾರಸಂಕಿರಣವನ್ನು ಜನವರಿ ತಿಂಗಳಲ್ಲಿ ಹಮ್ಮಿಕೊಂಡಿದ್ದಾರೆ.

ಲೋಕಸಭಾ ಸದಸ್ಯರಾದ ಶ್ರೀ ಕೆ.ವಿರೂಪಾಕ್ಷಪ್ಪ ಅವರು ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಸಂಸದರ ಅನುದಾನದಿಂದ ‘ಹಾಲುಮತ ಭವನ’ ನಿರ್ಮಾಣವಾಗಿದೆ. ಹಾಲುಮತ ಅಧ್ಯಯನ ಪೀಠದಿಂದ ಗದಗ, ಅಥಣಿಯಲ್ಲಿ ವಿಚಾರ ಸಂಕಿರಣ, ಶಿಬಿರಗಳು ನಡೆದಿವೆ. ಹಾಲುಮತ ಅಧ್ಯಯನ ಪೀಠವು ದಾನಿಗಳ ನೆರವಿನಿಂದ ಪುಸ್ತಕ ಪ್ರಕಟಣೆಗೆ ಮುಂದಾಗಿದೆ.

ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠದ ಮೂಲಕ ಶ್ರವ್ಯ ಮತ್ತು ದೃಶ್ಯ ಗ್ರಂಥಾಲಯ ತೆರೆಯಲಾಗಿದೆ. ರಾಜಕುಮಾರ್ ಅವರ ಚಲನಚಿತ್ರಗಳ ಸಿ.ಡಿ.ಗಳನ್ನು ಸಂಗ್ರಹಿಸಲಾಗಿದೆ. ರಂಗಭೂಮಿ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕೃತಿಗಳನ್ನು ಸಂಗ್ರಹಿಸಲಾಗಿದೆ.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ಮ್ಯಾಕ್ಸಿಂಗಾರ್ಕಿ, ಹಾಲುಮತ ಪುರಾಣವನ್ನು ಕುರಿತಂತೆ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಮಹಿಳಾ ಅಧ್ಯಯನ ವಿಭಾಗವು ‘ಮಹಿಳಾ ವಿಷಯ ವಿಶ್ವಕೋಶ’, ‘ಪೂರಕ ಸಾಹಿತ್ಯ’ ನಿರ್ಮಾಣ ಯೋಜನೆಗಳನ್ನು ಹಮ್ಮಿಕೊಂಡಿದೆ. ಗುಲಬರ್ಗಾ, ಬಳ್ಳಾರಿ, ಬೆಂಗಳೂರು, ತಿಕೋಟ, ದೇವರಗೋನಾಳದಲ್ಲಿ ಮಹಿಳಾ ಜಾಗೃತಿ ಶಿಬಿರಗಳನ್ನು ನಡೆಸಿದೆ.

ಬುಡಕಟ್ಟು ಅಧ್ಯಯನ ವಿಭಾಗವು ಗೋಕರ್ಣದಲ್ಲಿ ಬುಡಕಟ್ಟು ಸಮ್ಮೇಳನವನ್ನು ಹಮ್ಮಿಕೊಂಡಿತ್ತು. ಬುಡಕಟ್ಟು ಅಧ್ಯಯನ ವಿಭಾಗದಿಂದ ‘ಚುನಾಯಿತ ಪಂಚಾಯತ್ ಸದಸ್ಯರಿಗಾಗಿ ತರಬೇತಿ ಶಿಬಿರವನ್ನು ನಡೆಸಲಾಯಿತು. ವಿಭಾಗದ ಅಧ್ಯಾಪಕರು ವಿಶೇಷ ಅನುದಾನದಡಿಯಲ್ಲಿ ಐವತ್ತು ಬುಡಕಟ್ಟುಗಳನ್ನು ಕುರಿತ ವರದಿ ತಯಾರಿಸುತ್ತಿದ್ದಾರೆ.

ಹಸ್ತಪ್ರತಿ ವಿಭಾಗ ಹಾಗೂ ಶಾಸನಶಾಸ್ತ್ರ ವಿಭಾಗಗಳು ಹಸ್ತಪ್ರತಿ, ಶಾಸನಶಾಸ್ತ್ರ ಕುರಿತಂತೆ ವಿಶೇಷ ತರಬೇತಿ ಶಿಬಿರಗಳನ್ನು ನಡೆಸಿ ನೂರಾರು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸಿದೆ.

ಕನ್ನಡ ಭಾಷಾಧ್ಯಯನ ವಿಭಾಗ, ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗಗಳು ನಿರಂತರವಾಗಿ ಸಂಶೋಧನೆ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.

ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ದೃಶ್ಯಕಲಾ ವಿಭಾಗಗಳು ಬೋಧನೆ, ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

ದೃಶ್ಯಕಲಾ ವಿಭಾಗವು ದೆಹಲಿ, ಕುಪ್ಪಂ, ಹೈದ್ರಾಬಾದ್, ಕೇರಳ, ಅನಂತಪುರ, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನಗಳನ್ನು ನಡೆಸಿದೆ. ವಿಭಾಗದಲ್ಲಿ ಚಿತ್ರಕಲಾ ವಿಚಾರ ಸಂಕಿರಣ, ಹಸೆ ಚಿತ್ರಕಲೆಯ ಕಮ್ಮಟ, ಕಲಾಶಿಬಿರ, ಹಿರಿಯ ಕಲಾವಿದರ ವಿಶೇಷ ಉಪನ್ಯಾಸ, ಕಲಾ ಪ್ರಾತ್ಯಕ್ಷಿಕೆಗಳು ನಡೆದಿವೆ. ಡಾ. ಎಸ್.ಸಿ. ಪಾಟೀಲ್ ಅವರಿಗೆ ಮುಂಬೈಯಲ್ಲಿ ರಾಷ್ಟ್ರೀಯ ಶಿಕ್ಷಾರತ್ನ ಪ್ರಶಸ್ತಿ, ಉಡುಪಿಯ ಉಪಾಧ್ಯಾಯ ಪ್ರಶಸ್ತಿಗಳು ಲಭಿಸಿವೆ. ಚಿತ್ರಕಲಾ ಶಾಲೆಗಳ ನಿರ್ವಹಣಾ ಕೇಂದ್ರದಲ್ಲಿ ಬಿ.ವಿ.ಎ, ಎ.ಟಿ.ಸಿ, ಡಿಪ್ಲೊಮ, ಬಿ.ವಿ.ಇಡಿ ಕೋರ್ಸ್‌ಗಳಲ್ಲಿ ಒಟ್ಟು ನಾಲ್ಕು ಸಾವಿರದ ಮುನ್ನೂರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ನಮ್ಮ ವಿಶ್ವವಿದ್ಯಾಲಯದಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನೆರವಿನಿಂದ ಅನೇಕ ಅಧ್ಯಯನ ಪೀಠಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೀಠಗಳು ವಿಚಾರಸಂಕಿರಣಗಳನ್ನು ಏರ್ಪಡಿಸುತ್ತಿವೆ. ಕಮ್ಮಟಗಳನ್ನು ಸಂಘಟಿಸುತ್ತಿವೆ.

ಪ್ರಸ್ತುತ ವರ್ಷದಲ್ಲಿ ಪ್ರಸಾರಾಂಗವು ೫೩ ಗ್ರಂಥಗಳನ್ನು ಹೊರ ತಂದಿದೆ. ಪುಸ್ತಕ ಮಾರಾಟಕ್ಕೆ ಸಂಬಂಧಿಸಿದಂತೆ ‘ಪುಸ್ತಕ ಸಂಸ್ಕೃತಿ ಯಾತ್ರೆ’ಯನ್ನು ಯೋಜಿಸಲಾಗಿದೆ. ದೂರಶಿಕ್ಷಣದ ಮೂಲಕ ಅನೇಕ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.

ಕುಪ್ಪಳಿ, ಬಾದಾಮಿ, ಕೂಡಲಸಂಗಮ ಅಧ್ಯಯನ ಕೇಂದ್ರಗಳ ಜೊತೆ ಕುರುಬನ ಕಟ್ಟೆಯಲ್ಲಿಯೂ ಉಪೇಕ್ಷಿತ ಸಮುದಾಯಗಳ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರವನ್ನು ತೆರೆಯಲಾಗಿದೆ. ಈ ಎಲ್ಲ ಕೇಂದ್ರಗಳಲ್ಲಿ ಸಂಶೋಧನೆ, ಪ್ರಕಟಣೆಯ ಕಾರ್ಯ ಮುಂದುವರಿದಿದೆ.

ಈ ವರ್ಷ ಹಿಂದುಳಿದ ವರ್ಗಗಳ ಆಯೋಗದ ಜೊತೆಗೂಡಿ ‘ಹಿಂದುಳಿದ ವರ್ಗಗಳ ಸಮೀಕ್ಷೆ’ಗೆ ಸಂಬಂಧಿಸಿದಂತೆ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ನಾಡಿನ ಸುಮಾರು ನೂರಕ್ಕೂ ಹೆಚ್ಚು ಹೆಸರಾಂತ ಸಮುದಾಯ ಅಧ್ಯಯನ ತಜ್ಞರು ಶಿಬಿರದಲ್ಲಿ ಭಾಗವಹಿಸಿ ಪ್ರಶ್ನಾವಳಿ ತಯಾರಿಯಲ್ಲಿ ಅಮೂಲ್ಯವಾದ ಸಲಹೆ, ಸೂಚನೆ ನೀಡಿದ್ದಾರೆ.

ಕನ್ನಡ ವಿಶ್ವವಿದ್ಯಾಲಯವು ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಬೆಂಗಳೂರು, ಹಿಂದುಳಿದ ವರ್ಗಗಳ ಆಯೋಗ, ಕರ್ನಾಟಕ ಸರ್ಕಾರ, ವಿವಿಧ ಅಕಾಡೆಮಿಗಳು, ಬುಡಕಟ್ಟು ಕಲ್ಯಾಣ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ, ಮೈಸೂರಿನ ಭಾರತೀಯ ಭಾಷಾ ಸಂಸ್ಥೆಗಳ ಜೊತೆಗೆ ನಿರಂತರವಾಗಿ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಾ ಬಂದಿದೆ.

ಕನ್ನಡ ಸಾಹಿತ್ಯ ವಿಭಾಗದ ಡಾ. ಅಮರೇಶ ನುಗಡೋಣಿ ಅವರಿಗೆ ‘ಚದುರಂಗ ಪ್ರಶಸ್ತಿ’ ಮತ್ತು ‘ಕುಂವೀ ಕಥಾ ಪ್ರಶಸ್ತಿ’, ಬುಡಕಟ್ಟು ವಿಭಾಗದ ಡಾ. ಕೆ.ಎಂ. ಮೇತ್ರಿ ಅವರಿಗೆ ‘ದೇವರಾಜ ಅರಸು ಪ್ರಶಸ್ತಿ’, ಶಾಸನಶಾಸ್ತ್ರ ವಿಭಾಗದ ಡಾ.ಕೊಟ್ರೇಶ್ ಅವರಿಗೆ ‘ಆದಿಗುರು ಶಂಕರ ಪ್ರಶಸ್ತಿ’, ಡಾ. ವೀರೇಶ ಬಡಿಗೇರ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ‘ರಾಜ್ಯೋತ್ಸವ ಕೃತಿ ಪ್ರಶಸ್ತಿ’ಯನ್ನು ಪುಸ್ತಕಕ್ಕೆ ನೀಡಿದೆ.

ನಮ್ಮ ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರು. ನಮ್ಮ ವಿಶ್ವವಿದ್ಯಾಲಯದ ೧೭ ಜನ ವಿದ್ಯಾರ್ಥಿಗಳು ಯುಜಿಸಿಯ ರಾಜೀವ್‌ಗಾಂಧಿ ಶಿಷ್ಯವೇತನ ಪಡೆಯುವಲ್ಲಿ ಸಫಲರಾಗಿದ್ದಾರೆ. ಬುಡಕಟ್ಟು ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅಧ್ಯಾಪಕ ವೃತ್ತಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾಲಯವು ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಅನುಕೂಲವಾಗುವಂತೆ ಕಮ್ಮಟ ಮತ್ತು ತರಬೇತಿ ಶಿಬಿರಗಳನ್ನು ಆಗಿಂದಾಗ್ಗೆ ಏರ್ಪಡಿಸುತ್ತಿದೆ.

ಕನ್ನಡದ ನಿರಂತರತೆಯ ಕ್ರಿಯೆಯಲ್ಲಿ ತಾವೆಲ್ಲ ಸಹಕರಿಸಬೇಕೆಂದು ಕೇಳಿಕೊಳ್ಳುತ್ತ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ.

ನಮಸ್ಕಾರ

೨೯ ಡಿಸೆಂಬರ್ ೨೦೦೮