ಕನ್ನಡ ವಿಶ್ವವಿದ್ಯಾಲಯ ೧೮ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಪದವಿ, ಡಿ.ಲಿಟ್. ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ನೀಡಿ ನುಡಿಹಬ್ಬವನ್ನು ಅರ್ಥಪೂರ್ಣವಾಗಿಸಲು ಬಂದಿರುವ ಕರ್ನಾಟಕ ರಾಜ್ಯದ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಘನತೆವೆತ್ತ ಸನ್ಮಾನ್ಯ ಶ್ರೀ ಹಂಸರಾಜ್ ಭಾರದ್ವಾಜ್ ಅವರೇ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ, ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರೇ, ಘಟಿಕೋತ್ಸವ ಭಾಷಣವನ್ನು ಮಾಡಲು ಆಗಮಿಸಿರುವ ಹಿರಿಯರೂ ನನ್ನ ಗುರುಗಳೂ ಹಾಗೂ ಸಂಸ್ಥಾಪಕ ಕುಲಪತಿಗಳೂ ಆದ ಡಾ. ಚಂದ್ರಶೇಖರ ಕಂಬಾರ ಅವರೇ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಭಾಜನರಾದ ಡಾ. ಶಿಕಾರಿಪುರ ರಂಗನಾಥರಾವ್ ಅವರೇ, ಡಾ. ಡಿ.ಎನ್. ಶಂಕರಭಟ್ ಅವರೇ, ಶ್ರೀಮತಿ ಸಾಲುಮಗರದ ತಿಮ್ಮಕ್ಕ ಅವರೇ, ಶ್ರೀ ವೆಂಕಟೇಶ ತುಳಾಜರಾಮ್‌ಕಾಳೆ ಅವರೇ, ಶ್ರೀಮುನಿವೆಂಕಟಪ್ಪ ಅವರೇ, ನೆರೆದಿರುವ ಜನಪ್ರತಿನಿಧಿಗಳೇ, ವಿವಿಧ ಪದವಿಗಳನ್ನು ಪಡೆಯಲಿರುವ ಮಹನೀಯರೇ, ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದದವರೇ, ಆಡಳಿತ ಸಿಬ್ಬಂದಿಗಳೇ, ಮಾಧ್ಯಮದ ಮಿತ್ರರೇ, ಆಹ್ವಾನಿತರೇ, ಮಹಿಳೆಯರೇ ಹಾಗೂ ಮಹನೀಯರೇ, ತಮ್ಮೆಲ್ಲರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಅತ್ಯಂತ ಗೌರವ ಹಾಗೂ ಆದರದಿಂದ ಸ್ವಾಗತಿಸುತ್ತೇನೆ.

೧೮ನೇ ನುಡಿಹಬ್ಬದಲ್ಲಿ ಪಾಲ್ಗೊಂಡಿರುವ ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಹಂಸರಾಜ್‌ಭಾರದ್ವಾಜ್ ಅವರು ಉತ್ತಮ ಸಮಾಜ ಚಿಂತಕರು, ರಾಜಕೀಯ ಮುತ್ಸದ್ಧಿಗಳು. ಶ್ರೀಯುತರು ಈ ನುಡಿಹಬ್ಬದ ಸಂದರ್ಭದಲ್ಲಿ ಡಿ.ಲಿಟ್., ಹಾಗೂ ಪಿಎಚ್.ಡಿ. ಪದವಿಯನ್ನು ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರು ಉತ್ತಮ ಶಿಕ್ಷಣ ಚಿಂತಕರು, ಶೈಕ್ಷಣಿಕ ರಂಗದಲ್ಲಿ ಹೊಸ ಹೊಳಹುಗಳನ್ನು ಅರಸುತ್ತಿರುವ ಯುವ ರಾಜಕಾರಣಿಗಳು. ಅವರು ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ನುಡಿಹಬ್ಬಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ.

ಡಾ. ಚಂದ್ರಶೇಖರ ಕಂಬಾರ ಅವರು ಇಂದಿನ ನುಡಿಹಬ್ಬದ ಘಟಿಕೋತ್ಸವದ ಭಾಷಣವನ್ನು ಮಾಡಲು ಬಂದಿದ್ದಾರೆ. ಡಾ. ಚಂದ್ರಶೇಖರ ಕಂಬಾರ ಅವರು ನಾಟಕಕಾರರು, ಕಾದಂಬರಿಕಾರರು ಮತ್ತು ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದವರು ಮತ್ತು ಬೆಳೆಸುತ್ತಿರುವವರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ಚಂದ್ರಶೇಖರ ಕಂಬಾರರು ಸಾಹಿತಿಯಾಗಿ, ಸಮಾಜಪರ ಚಿಂತಕರಾಗಿ ಗುರುತಿಸಿಕೊಂಡವರು. ಕೇಂದ್ರ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರು ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ನೀಡಿ ಕೊಡುಗೆ ಹಾಗೂ ಹೊಳಹುಗಳು ದೀರ್ಘಕಾಲಿಕವಾದವು. ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅವರ ಯೋಜನೆ ಆ ಸಮುದಾಯಗಳ ಅಧಿಕೃತ ದಾಖಲೀಕರಣಕ್ಕೆ ಕಾರಣವಾಯಿತು. ಡಾ. ಚಂದ್ರಶೇಖರ ಕಂಬಾರರು ಸದಾ ಚಿಂತನಾಶೀಲರು. ಅವರ ಬರವಣಿಗೆಗಳು ಸದಾ ವೈಚಾರಿಕೆಯಿಂದ ತುಂಬಿರುತ್ತವೆ. ಅವರು ಒಂದಲ್ಲ ಒಂದು ವಿಚಾರಧಾರೆಯನ್ನು ಹಿಡಿದು ಎಳೆ ಎಳೆಯಾಗಿ ವಿಶ್ಲೇಷಿಸುವ ಅವರ ಉಪನ್ಯಾಸದ ಪರಿ ಅನುಕರಣೀಯ. ಅವರೇ ಕಟ್ಟಿ ಬೆಳೆಸಿದ ಕನಸಿನ ಕೂಸಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಅವರಿಗೆ ಮತ್ತೊಮ್ಮೆ ವಿಶ್ವವಿದ್ಯಾಲಯದ ಪರವಾಗಿ ಸ್ವಾಗತವನ್ನು ಬಯಸುತ್ತೇನೆ.

ಇಂದಿನ ನುಡಿಹಬ್ಬದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾದವರಲ್ಲಿ
ಡಾ. ಶಿಕಾರಿಪುರ ರಂಗನಾಥ ರಾವ್ ಅವರು ಹೆಸರಾಂತ ಪುರಾತತ್ವ ತಜ್ಞರು. ಜಗತ್ತಿನಲ್ಲೇ ಪ್ರಥಮವಾಗಿ ಸಾಗರ ಪುರಾತತ್ವ ಅಧ್ಯಯನವನ್ನು ಹುಟ್ಟು ಹಾಕಿದವರು. ಸಿಂಧೂನಗರ ಸಂಸ್ಕೃತಿಯನ್ನು ವಿಶೇಷವಾಗಿ ಅಧ್ಯಯನ ಮಾಡಿದವರು. ಸಿಂಧೂಲಿಪಿಯನ್ನು ಮರು ಓದಿಗೆ ಒಳಪಡಿಸುವುದರ ಮೂಲಕ ಸಿಂಧೂ ಪಠ್ಯಕ್ಕೆ ಹೊಸ ಅರ್ಥವನ್ನು ನೀಡಿದವರು. ದ್ವಾರಕೆಯಲ್ಲಿ ಸಾಗರ ಪುರಾತತ್ವ ಅಧ್ಯಯನ ಕೈಗೊಳ್ಳುವುದರ ಮೂಲಕ ಸಾಗರ ಯಾನದ ಬಗ್ಗೆ ಹೊಸ ಸಂಗತಿಗಳನ್ನು ಹೊರಹಾಕಿದ ಕನ್ನಡಿಗರು. ಅಂತೆಯೇ ತಮಿಳುನಾಡಿನ ಪೂಂಬುಹಾರಿನ ಸಮುದ್ರ ಅಧ್ಯಯನ ನಡೆಸಿ ಸಾಗರ ಸಂಸ್ಕೃತಿಯ ಬಗ್ಗೆ ಹೊಸ ಹೊಳಹನ್ನು ನೀಡಿದವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಪರಿಣತಿಯನ್ನು ಮೆರೆದ ಇವರಿಗೆ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಶಂಕರಭಟ್ಟರು ಮದರಾಸು ವಿವಿಯಿಂದ ಸಂಸ್ಕೃತ ಎಂ.ಎ. (೧೦೬೦) ಪದವಿಯನ್ನು ಪಡೆದವರು. ಬಳಿಕ ಪುಣೆ ವಿವಿಯಿಂದ ಭಾಷಾವಿಜ್ಞಾನದಲ್ಲಿ ಪಿ.ಎಚ್‌ಡಿಯನ್ನೂ ಪಡೆದರು; ನಂತರ ಬ್ರಿಟಿಶ್ ಕೌನ್ಸಿಲ್‌ನ ಫೆಲೊ ಆಗಿ ಇಂಗ್ಲೆಂಡಿನಲ್ಲಿ ಉಪಭಾಷಾ ಸಮೀಕ್ಷೆಯ ವಿಧಾನಗಳ ಮೇಲೆ ಅಧ್ಯಯನ ಮಾಡಿದರು; ಮರಾಠಿಯ ಉಪಭಾಷೆಗಳ ಸಮೀಕ್ಷೆಯ ಯೋಜನೆಯಲ್ಲಿ ಸಂಶೋಧನ ಸಹಾಯಕರಾಗಿ ಪುಣೆಯಲ್ಲಿ ತಮ್ಮ ವೃತ್ತಿಜಿವನ ಆರಂಭಿಸಿದ ಭಟ್ಟರು, ಮುಂದೆ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ದ್ರಾವಿಡ ಭಾಷೆಗಳ ಅಧ್ಯಾಪಕರಾದರು; ನಂತರ ಅಮೆರಿಕೆಯ ಸ್ಟ್ಯಾ‌ನ್‌ಫೋರ್ಡ್‌ ವಿವಿಯಲ್ಲಿ ಸಂಶೋಧನ ಸಹಾಯಕರಾಗಿ ಕೆಲಸ ಮಾಡಲು ಹೋದರು. ನಂತರ ತಿರುವನಂತಪುರದ ಭಾರತೀಯ ದ್ರಾವಿಡ ಭಾಷೆಯ ಸಂಸ್ಥೆಯಲ್ಲಿ ಭಾಷಾವಿಜ್ಞಾನದ ಪ್ರಾಧ್ಯಾಪಕರಾದರು. ಈ ನಡುವೆ ಈಶಾನ್ಯ ಭಾರತದ ಟಿಬೆಟೊ-ಬರ್ಮನ್ ಭಾಷೆಗಳ ವಿಷಯದಲ್ಲಿ ಪಾಂಡಿತ್ಯ ಪಡೆದ ಶ್ರೀಯುತರು, ಇಂಫಾಲಿನ ಮಣಿಪುರ ವಿವಿಯಲ್ಲಿ ಪ್ರಾಧ್ಯಾಪಕರಾದರು. ನಂತರ ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿ ಸಂಶೋಧನ ವಿಜ್ಞಾನಿಯಾಗಿ, ಬೆಲ್ಜಿಯಂ ವಿವಿಯಲ್ಲಿ ಸಂದರ್ಶಕ ಸಂಶೋಧಕರಾಗಿ, ಆಸ್ಟ್ರೇಲಿಯಾದ ಲಾಟೊರ್ಬೊ ವಿವಿಯಲ್ಲಿ ಸಂದರ್ಶಕ ಫೆಲೊ ಆಗಿ, ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಅತಿಥಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು ಈತನಕ ೨೭ ಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಪಾಲಿಗೆ ಅಮೆರಿಕೆಯ ಶ್ರೇಷ್ಠ ಭಾಷಾವಿಜ್ಞಾನಿ ಜೋಮ್‌ಸ್ಕಿವರಷ್ಟೇ ಮುಖ್ಯರಾಗಿರುವ ಈ ಅಪರೂಪದ ವಿದ್ವಾಂಸರಿಗೆ ಕನ್ನಡ ವಿಶ್ವವಿದ್ಯಾಲಯವು ೨೦೦೯ನೇ ಸಾಲಿನ ನಾಡೋನ ಪದವಿಯನ್ನು ನೀಡಿ ಗೌರವಿಸುತ್ತಿದೆ.

ಶ್ರೀಮತಿ ಸಾಲುಮರದ ತಿಮ್ಮಕ್ಕನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕು ಹುಲಿಕಲ್ಲಿನವರು. ಬೋವಿ ಸಮುದಾಯದ ಚಿಕ್ಕರಂಗಯ್ಯ-ವಿಜಯಮ್ಮ ದಂಪತಿಗಳ ಎರಡನೇ ಮಗಳು. ತಿಮ್ಮಕ್ಕನವರ ತಂದೆ ಚಿಕ್ಕರಂಗಯ್ಯ ಭೂಮಾಲೀಕರ ಮನೆಯಲ್ಲಿ ಜೀತಕ್ಕಿದ್ದರು. ಎಂದೂ ಶಾಲೆಯ ಮುಖವನ್ನು ನೋಡದ ತಿಮ್ಮಕ್ಕ ಸಮೀಪದ ಕಲ್ಲುಕ್ವಾರಿಯಲ್ಲಿ ಜಲ್ಲಿಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದರು. ಅವರಿಗೆ ದನ ಕಾಯುವ ಬಿಕ್ಕಲು ಚಿಕ್ಕಯ್ಯನ ಜತೆ ಲಗ್ನವಾಯಿತು. ದುರದೃಷ್ಟವಶಾತ್ ತಿಮ್ಮಕ್ಕನಿಗೆ ಮಕ್ಕಳಾಗಲಿಲ್ಲ. ಮಕ್ಕಳಿಲ್ಲದ ನೋವನ್ನು ಕಳೆದುಕೊಳ್ಳಲು ದಂಪತಿಗಳು ನೂತನ ಹಾದಿಯೊಂದನ್ನು ಕಂಡುಕೊಂಡರು. ಅದೆಂದರೆ ಮರಗಳನ್ನು ನೆಟ್ಟು ಅವನ್ನೇ ತಮ್ಮ ಮಕ್ಕಳೆಂದು ಸಾಕುವುದು. ಇದಕ್ಕಾಗಿ ಅವರು ತಮ್ಮೂರಿನ ಸರ್ಕಾರಿ ರಸ್ತೆಯನ್ನು ಆರಿಸಿಕೊಂಡರು. ರಸ್ತೆಯ ಬದಿಯಲ್ಲಿ ಆಲದ ಮರದ ಕೊಂಬೆಗಳನ್ನು ನೆಡತೊಡಗಿದರು. ಹುಲಿಕಲ್ಲಿನಿಂದ ಕುದೂರಿನವರೆಗಿನ ೪ ಕಿ.ಮಿ. ರಸ್ತೆಯಲ್ಲಿ ೩೮೪ ಮರಗಳನ್ನು ಹಾಕಿದರು. ಮಳೆ ಕಡಿಮೆ ಬೀಳುವ ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ ಗಿಡಗಳನ್ನು ಉಳಿಸಲು ದೂರದ ಕೆರೆ ಹಳ್ಳಗಳಿಂದ ನೀರನ್ನು ತಂದು ಹಾಕಿದರು. ಮೇಯುವ ದನಗಳಿಂದ ರಕ್ಷಿಸಲು ಅವಕ್ಕೆ ಮುಳ್ಳು ಕಟ್ಟಿದರು. ಇಷ್ಟು ಕೆಲಸವನ್ನು ಅವರು ಕೂಲಿಗೆ ಹೋಗುವ ಮುನ್ನವೇ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ ಅವರು ನೆಟ್ಟ ಕೊಂಬೆಗಳು ಹೆಮ್ಮರವಾಗಿ ಬೆಳೆದವು. ಅವೇ ತಿಮ್ಮಕ್ಕನ ಮಕ್ಕಳಾದವು. ಬಿಸಿಲು ಧೂಳಿನಿಂದ ಕೂಡಿದ ಪ್ರದೇಶವನ್ನು ತಮ್ಮ ಹಸಿರಿನಿಂದ ಅವು ತುಂಬಿದವು. ಕೆಲವು ಸಸ್ಯವಿಜ್ಞಾನಿಗಳು ಈ ಮರಗಳ ಜೈವಿಕ ಮೌಲ್ಯವನ್ನು ೪.೫ ಕೋಟಿ ಎಂದು ಬೆಲೆಗಟ್ಟಿದ್ದಾರೆ. ಕರ್ನಾಟಕ ಸರ್ಕಾರವು ಈ ಮರಗಳ ಉಸ್ತುವಾರಿಯನ್ನು ಈಗ ವಹಿಸಿಕೊಂಡಿದೆ.

ತನ್ನ ಬಾಳಿಗೆ ಹೊಸದೊಂದು ವ್ಯಾಖ್ಯಾನವನ್ನು ಬರೆದು ಲೋಕವನ್ನು ಸೋಜಿಗಗೊಳಿಸಿದ ತಿಮ್ಮಕ್ಕ, ಪರಿಸರ ಕುರಿತ ನೂರಾರು ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದಾರೆ. ಸದ್ಯ ಅವರು ಮಾಗಡಿ ಭಾಗದ ಕೆರೆಗಳನ್ನು ಸಂರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ. ತಮ್ಮ ಪ್ರಶಸ್ತಿ ಹಣದಲ್ಲಿ ತಮ್ಮ ಊರಿನಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಲಾಭವೇ ದೊಡ್ಡ ಮಂತ್ರವಾಗಿರುವ ಮಾರುಕಟ್ಟೆ ಅರ್ಥಶಾಸ್ತ್ರದ ಈ ದಿನಗಳಲ್ಲಿ ಲೋಕದ ಹಿತಕ್ಕಾಗಿ ತಮ್ಮ ಬಾಳನ್ನು ಮುಡಿಪಾಗಿಸಿದ ಬಡವಿ ತಿಮ್ಮಕ್ಕ ದೊಡ್ಡ ಆದರ್ಶವಾಗಿದ್ದಾರೆ. ಕರ್ನಾಟಕ ಸಮಾಜ ಹುಟ್ಟಿಸಿದ ಅತ್ಯುತ್ತಮ ಮನಸ್ಸಾಗಿರುವ ತಿಮ್ಮಕ್ಕ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ೨೦೦೯ನೇ ಸಾಲಿನ ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತಿದೆ.

ಶ್ರೀ ವಿ.ಟಿ. ಕಾಳೆಯವರು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾ ಶಿಬಿರ, ಕಲಾ ಕಾರ್ಯಗಾರ, ಕಮ್ಮಟಗಳಲ್ಲಿ, ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ಕಲಾಕೃತಿ ರಚನೆ ಮಾಡಿದ್ದಾರೆ  ಮತ್ತು ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ. ಇವರು ರಚಿಸಿದ ಭಾವಚಿತ್ರ, ನಿಸರ್ಗ ಚಿತ್ರ, ಪೌರಾಣಿಕ, ದೇವತಾ ಚಿತ್ರಗಳು, ಭಿತ್ತಿ ಚಿತ್ರಗಳು, ಶಿಲ್ಪಕಲಾಕೃತಿಗಳು, ರೇಖಾಚಿತ್ರಗಳು, ನವ್ಯಶೈಲಿಯ ಅಮೂರ್ತ ಕಲಾಕೃತಿಗಳು ದೇಶ ವಿದೇಶಗಳಲ್ಲಿ, ಕಲಾಗ್ಯಾಲರಿಗಳಲ್ಲಿ, ವೈಯಕ್ತಿಕ ಸಂಗ್ರಹಗಳಲ್ಲಿ ಉದಾಹರಣೆಗೆ ಮುಂಬಯಿ, ಪಾಕಿಸ್ತಾನ, ಸಕ್ಸ್‌, ಅಮೆರಿಕಾಗಳಲ್ಲಿ ಮತ್ತು ಸಂಡೂರಿನ ಶಿವಪುರ ಅರಮನೆಯಲ್ಲಿ ಹೀಗೆ ಅನೇಕ ಕಡೆಗಳಲ್ಲಿ ಅನೇಕ ಕಲಾಕೃತಿಗಳು ಸಂಗ್ರಹಗೊಂಡಿವೆ.

ಚಿತ್ರಕಲಾ ಪರಿಚಯ, ಚಿತ್ರಕಲಾ ದರ್ಪಣ, ಕಲಾವಿದ ಎಸ್. ಎಂ. ಪಂಡಿತ್ ಮತ್ತು ಎಸ್.ಪಿ. ಅಕ್ಕಿ, ಟಿ.ಪಿ.ಅಕ್ಕಿಯವರ ಕುರಿತು ಗ್ರಂಥಗಳನ್ನು ಬರೆದಿದ್ದಾರೆ. ಕಲಾಕೋಶ ಗ್ರಂಥದ ಸಂಪಾದಕರಲ್ಲೊಬ್ಬರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಅನೇಕ ಪಠ್ಯಪುಸ್ತಕಗಳಿಗೆ ಕಲಾವಿದನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಾವಿರಾರು ರೇಖಾಚಿತ್ರ, ವರ್ಣಚಿತ್ರಗಳನ್ನು ನಾಡಿಗೆ ನೀಡಿದ್ದಾರೆ.

ಎಪ್ಪತ್ತಾರನೇ ತಮ್ಮ ಇಳಿವಯಸ್ಸಿನಲ್ಲೂ ಫಲಾಕೃತಿ ರಚನೆಗೈಯುತ್ತಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ೧೯೬೨ ರಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾಪ್ರದರ್ಶನದಲ್ಲಿ ಶ್ರೇಷ್ಠ ಕೃತಿ ಪ್ರಶಸ್ತಿ, ಮೈಸೂರು ದಸರಾ ಉತ್ಸವದಲ್ಲಿ ೧೯೫೯-೬೦ ರಲ್ಲಿ ವಾರ್ಷಿಕ ಪ್ರಶಸ್ತಿ ೧೯೮೫-೮೬ ರಲ್ಲಿ ಮತ್ತು ರಾಜ್ಯ ಸರ್ಕಾರದ ೮೯ನೆಯ ರಾಜ್ಯೋತ್ಸವ ಪ್ರಶಸ್ತಿ ೨೦೦೪, ಅಲ್ಲದೆ ನೃಪತುಂಗ ಪ್ರಶಸ್ತಿ, ಭಾರತೀಯ ಸಂಸ್ಕಾರ ಭಾರತಿ ಪ್ರಶಸ್ತಿ ಹೀಗೆ ಹಲವಾರು ಸಂಘ ಸಂಸ್ಥೆ, ಮಠ-ಮಾನ್ಯಗಳಿಂದ ಅನೇಕ ಪ್ರಶಸ್ತಿ ಸನ್ಮಾನಗಳಿಗೆ ಶ್ರೀ ವ್ಹಿ.ಟಿ. ಕಾಳೆಯವರು ಭಾಜನರಾಗಿದ್ದಾರೆ. ಇವರಿಗೆ ಕನ್ನಡ ವಿಶ್ವವಿದ್ಯಾಲಯ ೨೦೦೯ನೇ ಸಾಲಿನ ನಾಡೋಜ ಪದವಿ ನೀಡಿ ಗೌರವಿಸುತ್ತಿದೆ.

ದಿವಂಗತ ಶ್ರೀ ಪಾಪಣ್ಣ ಮತ್ತು ಶ್ರೀಮತಿ ಮುನಿಗಂಗಮ್ಮ ಬಡ ದಂಪತಿಯ ಮಗನಾಗಿ ಶ್ರೀ ಮುನಿವೆಂಕಟಪ್ಪ ಶಿಡ್ಲಘಟ್ಟ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಪಿಂಡಿಪಾಪನಹಳ್ಳಿಯಲ್ಲಿ ದಿನಾಂಕ ೦೨-೦೬-೧೯೪೭ ರಂದು ಜನಿಸಿದರು. ಅವರೊಬ್ಬ ಜಾನಪದ ಕಲಾವಿದರು. ಅವರು ಜಾನಪದ ವಾದ್ಯವಾದ ‘ತಮಟೆ’ಯನ್ನು ವಿವಿಧ ಬಗೆಯಲ್ಲಿ ನುಡಿಸಬಲ್ಲವರಾಗಿದ್ದಾರೆ. ಈ ಚರ್ಮದ ವಾದ್ಯಕ್ಕೆ ಲಲಿತ ಕಲೆಗಳಲ್ಲಿ ಒಂದು ಗೌರವದ ಸ್ಥಾನವನ್ನು ಅವರು ತಂದುಕೊಟ್ಟಿದ್ದಾರೆ. ಇದೊಂದು ಗ್ರಾಮೀಣ ಕಲೆ.

ಈ ವಾದ್ಯದ ರಕ್ಷಣೆಗಾಗಿ ಮತ್ತು ಅದನ್ನು ಜನಪ್ರಿಯಗೊಳಿಸುವುದಕ್ಕಾಗಿ ಶ್ರೀ ಮುನಿವೆಂಕಟಪ್ಪ ೧೫ ಕಲಾವಿದರ ತಂಡವೊಂದನ್ನು ಕಟ್ಟಿದ್ದಾರೆ. ಅವರು ತಮಟೆ ಬಾರಿಸುವುದನ್ನು, ಅದರ ವಿವಿಧ ಮಟ್ಟಗಳನ್ನು, ಅದರಲ್ಲಿನ ಕುಸುರಿ ಸೂಕ್ಷ್ಮಗಳನ್ನು ಯುವಕರಿಗೆ ಕಲಿಸುತ್ತಿದ್ದಾರೆ. ತಮ್ಮ ತಂಡವನ್ನು ಕಟ್ಟಿಕೊಂಡು ಅವರು ಊರೂರು ಸುತ್ತುತ್ತಾರೆ. ಜಾತ್ರೆ, ಉತ್ಸವ, ಸಮಾವೇಶ, ಸಮ್ಮೇಳನ, ಜಾನಪದ ಪ್ರದರ್ಶನ ಮುಂತಾದ ಸಂದರ್ಭದಲ್ಲಿ ಅವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಶ್ರೀ ಮುನಿವೆಂಕಟಪ್ಪ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ತನ್ನ ನುಡಿಹಬ್ಬದ ಸಂದರ್ಭದಲ್ಲಿ ಇಂತಹ ಮಹಾನ್ ಜಾನಪದ ಕಲಾವಿದರಿಗೆ ಕನ್ನಡ ವಿಶ್ವವಿದ್ಯಾಲಯ ೨೦೦೯ನೇ ಸಾಲಿನ ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತಿದೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗಮನದಲ್ಲಿರಿಸಿ ಅಧ್ಯಯನಶೀಲವಾಗುವ ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಂಶೋಧನೆಯನ್ನು ತನ್ನ ಉಸಿರನ್ನಾಗಿಸಿಕೊಂಡಿರುವ ವಿಶ್ವವಿದ್ಯಾಲಯ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಪರವಾದ ಚಿಂತನೆಗಳನ್ನು ನಡೆಸಿಕೊಂಡು ಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಲ್ಲುತ್ತಿರುವ ಈ ಸಂದರ್ಭದಲ್ಲಿ ಕನ್ನಡವನ್ನು ನಿರಂತರವಾಗಿಸುವ ದಿಸೆಯಲ್ಲಿ ಅದು ಇನ್ನಷ್ಟು ತೀವ್ರವಾಗಿ ಕಾರ್ಯಪ್ರವೃತ್ತವಾಗುವ ಆವಶ್ಯಕತೆ ಇದೆ. ಕನ್ನಡವನ್ನು ಉಳಿಸುವುದು ಎಂದರೆ ಕನ್ನಡ ಸಂಸ್ಕೃತಿಯನ್ನು ಉಳಿಸುವುದು. ಸಂಸ್ಕೃತಿಯನ್ನು ಹೊರತುಪಡಿಸಿ ಯಾವುದೇ ಭಾಷೆ ಇರಲಾರದ ಕಾರಣ, ಕನ್ನಡ ದೇಶಿ ಸಂಸ್ಕೃತಿಯನ್ನು ಉಳಿಸುವ ಮೂಲಕ ಕನ್ನಡ ಭಾಷೆಯನ್ನು ನಿರಂತರವಾಗಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಪ್ರಸ್ತುತ ಜೀವಂತವಿರುವ ಹಾಗೂ ಬದಲಾವಣೆಗೆ ಒಳಗಾಗುತ್ತಿರುವ ಸಂಸ್ಕೃತಿಗಳನ್ನು ಹಿಡಿದಿಡುವ, ದಾಖಲಿಸುವ ನಿಟ್ಟಿನಲ್ಲಿ ತೀವ್ರಗತಿಯಿಂದ ಧಾವಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ. ದೇಶಿ ಸಂಸ್ಕೃತಿ ಹಾಗೂ ಉನ್ನತ ತಾಂತ್ರಿಕತೆಯಂತಹ ಆಧುನಿಕ ಕಲ್ಪನೆಗಳ ಬಳಕೆಗಳ ನಡುವೆ ಕೊಂಡಿಯನ್ನು ಬೆಸೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಕನ್ನಡ ಭಾಷೆಯ ಬಳಕೆ ಹಾಗೂ ತಾಂತ್ರಿಕತೆ ಜೊತೆಜೊತೆಯಾಗಿ ನಡೆಯಬೇಕಿದೆ. ಕನ್ನಡ ಭಾಷೆಯನ್ನು ಕಂಪ್ಯೂಟರ್ ಮೂಲಕ ಸಮರ್ಪಕವಾಗಿ ಬಳಸುವ ದಿಸೆಯಲ್ಲಿ ಮುನ್ನಡೆಯಬೇಕಾಗಿದೆ. ಇಂಗ್ಲಿಷಿಗಿರುವಂತೆ ಕಾಗುಣಿತ ಸರಿಪಡಿಸುವಿಕೆ, ಭಾಷಾ ತರ್ಜುಮೆ, ಒಸಿಆರ್‌ನಂತಹ ತಂತ್ರಾಂಶವನ್ನು ರೂಪಿಸುವ ಅವಶ್ಯಕತೆ ಇದೆ. ಮಾತು ಮತ್ತು ತಾಂತ್ರಿಕತೆ, ತಾಂತ್ರಿಕತೆ ಮತ್ತು ಮಾತಿಗೆ ಸಂಬಂಧಿಸಿದಂತೆ ಯೋಜನೆಯನ್ನು ತಯಾರಿಸುತ್ತಿದೆ.

ಕನ್ನಡ ಕಲಿಕೆ ಸಂಬಂಧಿಸಿದಂತೆ, ದೋಷರಹಿತಕಲಿಕೆ ಯೋಜನೆಯನ್ನು ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕದ ಕುಶಲ ಕಲೆಗಳನ್ನು ಮುಂದುವರಿಸುವ ದಿಶೆಯಲ್ಲಿ ನಿರಂತರವಾಗಿ ಕಮ್ಮಟಗಳನ್ನು ಏರ್ಪಡಿಸಿ ಮುಂದಿನ ಪೀಳಿಗೆಗೆ ರವಾನಿಸುವ ಯೋಜನೆ ವಿಶ್ವವಿದ್ಯಾಲಯಕ್ಕೆ ಇದೆ.

ಈ ಎಲ್ಲ ಕಾರ್ಯಗಳು ಕಾರ್ಯರೂಪಕ್ಕೆ ಬರುವಲ್ಲಿ ವಿಶ್ವವಿದ್ಯಾಲಯದ ಎಲ್ಲ ಅಧ್ಯಾಪಕವರ್ಗ, ವಿದ್ಯಾರ್ಥಿ ಸಮುದಾಯ ಹಾಗೂ ಆಡಳಿತ ಸಿಬ್ಬಂದಿವರ್ಗ ಎಂದಿನಂತೆ ಒಂದಾಗಿ ದುಡಿಯಬೇಕಾಗಿದೆ. ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಈ ದಿಸೆಯಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಂಡಿವೆ. ವೈಯಕ್ತಿಕ ಯೋಜನೆಗಳು ಅಂತೆಯೇ ಸಾಮೂಹಿಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಅಭಿವೃದ್ಧಿ ಅಧ್ಯಯನ ವಿಭಾಗವು ಸಮಾಜವಿಜ್ಞಾನ ನಿಕಾಯದಲ್ಲಿ ಸಂಶೋಧನಾ ಚಟುವಟಿಕೆಗಳಲ್ಲಿ ನಿರತವಾಗಿರುವ ಒಂದು ಅಧ್ಯಯನ ವಿಭಾಗವಾಗಿದೆ. ಇದು ೧೯೯೬ ರಲ್ಲಿ ಅಸ್ತಿತ್ವಕ್ಕೆ ಬಂದು ನಿರಂತರವಾಗಿ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಬದುಕಿಗೆ ಪೂರಕವಾಗುವಂತೆ ನೀತಿ-ನಿರೂಪಣ ಕಾರ್ಯದಲ್ಲಿ ತೊಡಗಿದೆ. ೧೯೯೯ ರಿಂದ ತಳಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಜನಸಾಮಾನ್ಯರಿಗೆ ಅಭಿವೃದ್ಧಿಯ ಬಗ್ಗೆ ತರಬೇತಿ, ಕಮ್ಮಟ, ಅಂಗನವಾಡಿ ಕಾರ್ಯಕರ್ತೆಯರಿಗೆ, ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ, ಆರಕ್ಷಕ ಸಿಬ್ಬಂದಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬಂದಿದೆ. ಇದುವರೆಗೆ ಸುಮಾರು ೩೦ ಯೋಜನೆಗಳನ್ನು ಕೈಗೊಂಡು ಪೂರೈಸಿದೆ. ೪೫ ಸಂಶೋಧನಾ ಗ್ರಂಥಗಳು ಪ್ರಕಟಗೊಂಡಿವೆ.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಅಮರೇಶ ನುಗಡೋಣಿ ಅವರಿಗೆ ‘ಸವಾರಿ’ ಕಥಾಸಂಕಲನಕ್ಕೆ ಮಾಸ್ತಿ ಕಥಾ ಪುರಸ್ಕಾರ ಲಭಿಸಿದೆ.

ಕನ್ನಡ ಭಾಷಾಧ್ಯಯನ ವಿಭಾಗವು ಫೆಬ್ರವರಿ ೧೨, ೨೦೦೯ರಂದು ಅಮೆರಿಕದ ಇಲಿನಾಯ್ ವಿಶ್ವವಿದ್ಯಾಲಯದ ಪ್ರೊ.ಹನ್ಸ್‌ ಹೆನ್ರಿಕ್ ಹಾಕ್ ‘ಐತಿಹಾಸಿಕ ಭಾಷಾಶಾಸ್ತ್ರ’ದ ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಿತ್ತು. ಮಾರ್ಚ್‌ ೩೦, ೩೧, ೨೦೦೯ ರಂದು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅದ್ಯಯನ ಪೀಠದ ಸಹಯೋಗದಲ್ಲಿ ‘ಕನ್ನಡ ಭಾಷೆ ಮತ್ತು ಜಾಗತೀಕರಣ’ ಎಂಬ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು.

ಭಾಷಾಂತರ ವಿಭಾಗದಿಂದ ‘ಮಧ್ಯಕಾಲೀನ ಮಹಾಕಾವ್ಯ ಮತ್ತು ಕರ್ನಾಟಕದಲ್ಲಿ ವಿಠ್ಠಲಪಂಥ ಎಂಬ ಯುಜಿಸಿ ಎಂ.ಆರ್.ಪಿ. ಅನುದಾನದಲ್ಲಿ ನಡೆಯುತ್ತಿದೆ. ಎಂ.ಪಿ.ಐ.ಕೆ. ಯೋಜನೆಯಡಿಯಲ್ಲಿ ಸರ್ ರತನ್ ಟಾಟಾ ಟ್ರಸ್ಟ್ ಅವರ ಅನುದಾನದಲ್ಲಿ ‘ಕನ್ನಡದಲ್ಲಿ ಶೈಕ್ಷಣಿಕ ಸಾಮಗ್ರಿ ನಿರ್ಮಾಣದ ಉಪಕ್ರಮಗಳು’ ಎಂಬ ಯೋಜನೆ ಸಿದ್ಧವಾಗುತ್ತಿದೆ. ಭಾಷಾಂತರ ದತ್ತ ಕಣಜ’ ನಿರ್ಮಾಣ ಮತ್ತು ಅದರ ಆನ್‌ಲೈನ್ ಬಳಕೆ ಮತ್ತು ಭಾಷಾಂತರ : ಕರ್ನಾಟಕ ಸಾಂಸ್ಕೃತಿಕ ರಾಜಕಾರಣ ಎಂಬ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಮಹಿಳಾ ಅಧ್ಯಯನ ವಿಭಾಗವು ಅಕ್ಟೋಬರ್‌ ತಿಂಗಳಲ್ಲಿ ‘ಮಹಿಳಾ ಮೀಸಲಾತಿ: ಒಂದು ಅವಲೋಕನ’ ಎಂಬ ರಾಜ್ಯಮಟ್ಟದ ವಿಚಾರಸಂಕಿರಣ ನಡೆಸಿತು. ಮಹಿಳಾ ಅಧ್ಯಯನ ಎಂಬ ನಿಯತಕಾಲಿಕೆಯನ್ನು ಹೊರತರುತ್ತಿದೆ.

ಮಹಿಳಾ ಅಧ್ಯಯನ ಕೇಂದ್ರವು ಇತ್ತೀಚೆಗೆ ನಡೆದ ನೆರೆಹಾವಳಿಯ ಸ್ಥಳಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ನವೆಂಬರ್ ೨೪, ೨೦೦೯ರಂದು ಸಂವಾದ ಕಾರ್ಯಕ್ರಮ ಮತ್ತು ವರದಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ದಿನಾಂಕ ಡಿಸೆಂಬರ್ ೨೨, ೨೦೦೯ರಂದು ಹೊಸಪೇಟೆ ತಾಲ್ಲೂಕು ಆರೋಗ್ಯ ಇಲಾಖೆ, ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಸುಗ್ಗೇನಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಹಸ್ತಪ್ರತಿ ವಿಭಾಗವು ಹಸ್ತಪ್ರತಿಗಳ ಸಂಗ್ರಹಣೆ, ರಕ್ಷಣೆ ಸಂಬಂಧಿಸಿದಂತೆ ಮಾರ್ಗದರ್ಶನ ಶಿಬಿರ ನಡೆಸುವುದರ ಮೂಲಕ ಹಸ್ತಪ್ರತಿಗಳ ಅಧ್ಯಯನಕ್ಕೆ ತೊಡಗಿಸಿ ಕೊಂಡಿದ್ದಾರೆ. ಒಬಲೇಶ್ವರದಲ್ಲಿ ಹಸ್ತಪ್ರತಿ ತರಬೇತಿ ಶಿಬಿರವನ್ನು ವಿದ್ಯಾರ್ಥಿ ಮತ್ತು ಆಸಕ್ತರ ಸಲುವಾಗಿ ಶಿಬಿರವನ್ನು ನಡೆಸಲಾಯಿತು. ತುಮಕೂರು ಜಿಲ್ಲೆ ಪರಿಸರದಲ್ಲಿ ಪ್ರಾಚೀನ ಹಸ್ತಪ್ರತಿ ಶಾಸನ ಸ್ಮಾರಕಗಳ ರಕ್ಷಣೆಗಾಗಿ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮ ತರಬೇತಿ ಹಮ್ಮಿಕೊಂಡಿತು. ಡಾ. ಟಿ.ವಿ. ವೆಂಕಟಾಚಲಶಾಸ್ತ್ರೀ ಮತ್ತು ಎಲ್. ಬಸವರಾಜು ಅವರಿಗೆ ಪಂಪಪ್ರಶಸ್ತಿ ಲಭಿಸಿದ್ದಕ್ಕೆ ವಿಭಾಗದಲ್ಲಕಿ ವಿಶೇಷ ಉಪನ್ಯಾಸ ನೀಡಿದರು. ಡಾ. ಎಫ್‌.ಟಿ. ಹಳ್ಳಿಕೇರಿ ಅವರನ್ನು ಕನ್ನಡ ಶಾಸ್ತ್ರೀಯ ಭಾಷೆಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಕರ್ನಾಟಕ ಸರ್ಕಾರ ನೇಮಿಸಿದೆ.

ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ತೆಲುಗು ಸಾಹಿತ್ಯ ಚರಿತ್ರೆ ಎಂಬ ವಿಷಯದ ಮೇಲೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಶ್ರೀ ವೈ.ಎಸ್. ನಾಗೇಶ ಶಾಸ್ತ್ರಿ ದತ್ತಿನಿಧಿ ಉಪನ್ಯಾಸವನ್ನು ಏಪ್ರಿಲ್ ೧೯, ೨೦೦೯ರಂದು ಸಂಡೂರಿನಲ್ಲಿ ನಡೆಸಲಾಯಿತು. ಮಾರ್ಚ್‌ ೨೧ ಮತ್ತು ೨೨ ರಂದು ಮಂಗಳೂರಿನಲ್ಲಿ ದ್ರಾವಿಡ ಸಾಹಿತ್ಯ ಮತ್ತು ದೇಸೀ ಸಂಸ್ಕೃತಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.

ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ‘ಶ್ರೀ ಕೃಷ್ಣದೇವರಾಯನ ತೀರ್ಥಯಾತ್ರೆಗಳು’, ಡಾ. ಟಿ.ಪಿ. ವಿಜಯ್‌ ಅವರು ‘ರಾಜೇಂದ್ರನಾಮೆ: ಮರು ಓದು’, ಡಾ. ಸಿ.ಆರ್‌. ಗೋವಿಂದರಾಜು ಅವರು ‘ಕರ್ನಾಟಕ ಸಾಂಸ್ಕೃತಿಕ ಪ್ರತೀಕಗಳು’, ಡಾ. ಮೋಹನ್‌ಕೃಷ್ಣ ರೈ ಅವರು ‘ಕೆಳದಿನಾಯಕರು ಹಾಗೂ ತುಳುನಾಡು’, ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ‘ಆಧುನಿಕ ಮೈಸೂರಿಗೆ ದಿವಾನ್ ಮಿರ್ಜಾ ಇಸ್ಮಾಯಿಲರ ಕೊಡುಗೆ-ಸಮಗ್ರ ಅಧ್ಯಯನ’ ಎಂಬ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇಷ್ಟಲ್ಲದೆ ಚರಿತ್ರೆ ವಿಶ್ವಕೋಶದ ಬಿಡಿ ಬಿಡಿ ಏಳು ಸಂಪುಟಗಳು ಡಾ. ಟಿ.ಪಿ. ವಿಜಯ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಪ್ರೊ. ಲಕ್ಷ್ಮಣ್ ತೆಲಗಾವಿ ಅವರು ಯುಜಿಸಿ ಎಮಿರಿಟಿಸ್ ಫೆಲೋ ಆಗಿ ವಿಭಾಗದಲ್ಲಿ ನೇಮಕಗೊಂಡಿದ್ದಾರೆ. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿದ್ದಾರೆ. ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ರಚಿಸಿದ ‘ಭಾರತೀಯ ಸಮಾಜ ಮತ್ತು ದಲಿತರು’ ಎಂಬ ಪುಸ್ತಕಕ್ಕೆ ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ಪುಸ್ತಕ ಬಹುಮಾನ ಲಭಿಸಿದೆ.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಕನ್ನಡ ನಾಡಿನ ಕಲೆ, ವಾಸ್ತುಶಿಲ್ಪ, ಧರ್ಮ ಮತ್ತು ಸಂಸ್ಕೃತಿ ಕುರಿತಂತೆ ಅನೇಕ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ವಯ ಬಾಗಲಕೋಟೆ ಮತ್ತು ಗುಲಬರ್ಗಾ ಜಿಲ್ಲೆಯ ದೇವಾಲಯ ಕೋಶಗಳು ಪ್ರಕಟಣೆಗೆ ಸಿದ್ಧವಾಗಿವೆ. ರಾಯಚೂರು, ಚಿತ್ರದುರ್ಗ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯಗಳು ನಡೆಯುತ್ತಿವೆ. ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ಎಂಬ ಯೋಜನೆ ಅಡಿಯಲ್ಲಿ ಕುರುಗೋಡು, ಹಾನಗಲ್, ತೊಣ್ಣೂರು ಕುರಿತ ಪುಸ್ತಕಗಳು ಪ್ರಕಟವಾಗಿದ್ದು, ಮೈಲಾರ, ಬಸವನ ಬಾಗೇವಾಡಿ, ಬ್ರಹ್ಮಗಿರಿ, ಕಿತ್ತೂರು, ಜಗಳೂರು, ನಾಗಮಂಗಲ ಸ್ಥಳಗಳಲ್ಲಿ ನಡೆದ ವಿಚಾರ ಸಂಕಿರಣಗಳ ಪುಸ್ತಕಗಳು ಪ್ರಕಟಗೊಳ್ಳಲಿವೆ. ಕರ್ನಾಟಕದ ಇತಿಹಾಸ, ಪುರಾತತ್ವ ಮತ್ತು ಸಂಸ್ಕೃತಿಯನ್ನು ಕುರಿತು ಅಧ್ಯಾಪಕರು ಮತ್ತು ಸಂಶೋಧಕರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಪ್ರಸ್ತುತ ಸಾಲಿನಲ್ಲಿ ಶ್ರವಣಬೆಳಗೊಳದಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಬುಡಕಟ್ಟು ಅಧ್ಯಯನ ವಿಭಾಗವು ಕರ್ನಾಟಕದ ಅರಣ್ಯವಾಸಿ ಬುಡಕಟ್ಟುಗಳ ಜಾನಪದೀಯ ಅಧ್ಯಯನ ಎಂಬ ಯೋಜನೆಯನ್ನು ವಿಶ್ವವಿದ್ಯಾಲಯದ ಧನಸಹಾಯದ ಅಡಿಯಲ್ಲಿ ಪೂರೈಸಿ ಹದಿನೈದು ಬುಡಕಟ್ಟು ಸಮುದಾಯಗಳ ಕುರಿತು ವರದಿ ಸಲ್ಲಿಸಿದೆ. ಮುಂದುವರಿಕೆಯಾಗಿ ವಿಶೇಷ ನೆರವಿನಡಿಯಲ್ಲಿ ಯೋಜನೆಯ ಎರಡನೆಯ ಹಂತದ ಸಂಶೋಧನೆಗೆ ರೂ. ೪೦ ಲಕ್ಷಗಳ ಅನುದಾನ ದೊರಕಿದೆ. ಬುಡಕಟ್ಟು ಕಲ್ಯಾಣ ಇಲಾಖೆಯ ಯೋಜನೆಯಡಿಯಲ್ಲಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಡಾ. ಕೆ.ಎಂ. ಮೇತ್ರಿ ಅವರಿಗೆ ಶ್ರೇಷ್ಠ ಶಿಕ್ಷಣತಜ್ಞ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿ ೨೦೦೯, ಅಲೆಮಾರಿ ಸಿರಿ ೨೦೦೯. ಪ್ರತಿಭಾ ಪುರಸ್ಕಾರ ೨೦೦೯ಗಳು ಲಭಿಸಿವೆ.

ಮಾನವಶಾಸ್ತ್ರ ವಿಭಾಗದ ಡಾ. ತಾರಿಹಳ್ಳಿ ಹನುಮಂತಪ್ಪ ಅವರು ‘ಹಂಪೆಯ ಜಾತ್ರೆ ಮತ್ತು ಆಚರಣೆಗಳು’, ‘ಕರ್ನಾಟಕದ ಉಗ್ರ ಆಚರಣೆಗಳು’ ಮತ್ತು ಡಾ. ಎಲ್. ಶ್ರೀನಿವಾಸ ಅವರು ‘ಹಂಪಿ ಪರಿಸರದ ಆದಿಮಾನವರ ನೆಲೆಗಳು’, ಕರ್ನಾಟಕ ಆದಿವಾಸಿಗಳು (ತೋಡ ಜನಾಂಗಗಳನ್ನು ಅನುಲಕ್ಷಿಸಿ) ಎಂಬ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಇದಲ್ಲದೆ ‘ಸಾಹಿತ್ಯ ಪ್ರಾಚೀನ ಇತಿಹಾಸ ಮಾನವಶಾಸ್ತ್ರ ಕುರಿತು ಅಂತರಶಿಸ್ತೀಯ ಹಾಗೂ ‘ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜ’, ಕರ್ನಾಟಕದ ಬುಡಕಟ್ಟು ಸಮುದಾಯಗಳು’, ‘ಸುಸ್ಥಿರ ಜಲ ನಿರ್ವಹಣೆ ಸಂಪ್ರದಾಯ ಮತ್ತು ಆಧುನಿಕತೆ’, ಅಭಿವೃದ್ಧಿ ಪಥದತ್ತ ಮಹಿಳೆ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು.

ಶಾಸನಶಾಸ್ತ್ರ ವಿಭಾಗದ ‘ಹಾವೇರಿ ಜಿಲ್ಲಾ ಶಾಸನ ಸಂಪುಟ’ ಮತ್ತು ‘ಧಾರವಾಡ ಜಿಲ್ಲಾ ಶಾಸನ ಸಂಪುಟಗಳು’ ಸಂಪಾದನಾ ಕಾರ್ಯ ಪ್ರಗತಿಯಲ್ಲಿದೆ. ಇದಲ್ಲದೆ ‘ಗದಗ ಜಿಲ್ಲೆಯ ಶಾಸನ ಸಂಪುಟ’ವು ಈಗಾಗಲೇ ಮುದ್ರಣ ಹಂತದಲ್ಲಿದೆ. ಮೇ ತಿಂಗಳಲ್ಲಿ ರಾಮಚಂದ್ರಪುರ ಮಠದ ಸಹಯೋಗದಲ್ಲಿ ತುರುಗೋಳ್ ವಿಷಯದ ಮೇಲೆ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನಡೆಸಲಾಯಿತು. ಅಕ್ಟೋಬರ್ ೨೬, ೨೭ ರಂದು ಆಸಕ್ತ ಶಿಕ್ಷಕರು, ವಿದ್ಯಾರ್ಥಿಗಳಿಗೆ ‘ಶಾಸನ ಅಧ್ಯಯನ ತರಬೇತಿ’ ಶಿಬಿರವನ್ನು ಬೆಂಗಳೂರಿನ ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ನಡೆಸಲಾಯಿತು.

ಜಾನಪದ ಅಧ್ಯಯನ ವಿಭಾಗವು ಕುಪ್ಪಂ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ‘ದಕ್ಷಿಣ ದ್ರಾವಿಡ ಭಾಷೆಗಳ ಜಾನಪದ ಪಾರಿಭಾಷಿಕ ಪದಕೋಶ’ ಯೋಜನೆ ಕೈಗೆತ್ತಿಕೊಂಡಿದೆ. ವಿಭಾಗದ ಅಧ್ಯಾಪಕರುಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರದವರ ಸಹಯೋಗದಲ್ಲಿ ಯೋಜನೆಗಳನ್ನು ಹಮ್ಮಿಕೊಂಡು ಪೂರ್ಣಗೊಳಿಸಿಕೊಟ್ಟಿದ್ದಾರೆ. ಪ್ರತಿವರ್ಷವೂ ದೇಸೀ ಸಮ್ಮೇಳನವನ್ನು ವಿವಿಧ ಊರುಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರವು ‘ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ’ ಕುರಿತ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಡಾ. ಫ.ಗು.ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ‘ಫ.ಗು.ಹಳಕಟ್ಟಿ ಅವರ ಸಾಹಿತ್ಯ ಸಾಧನೆ’ ಕುರಿತ ವಿಚಾರ ಸಂಕಿರಣವನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ, ಆಸಕ್ತ ವಿದ್ವಾಂಸರಿಗೆ ಉಪಯುಕ್ತವಾಗುವಂತೆ ‘ಅಖಿಲ ಕರ್ನಾಟಕ ವಚನ ಸಾಹಿತ್ಯ ಅಧ್ಯಯನ’ ಶಿಬಿರ ಹಮ್ಮಿಕೊಳ್ಳಲಾಯಿತು. ಡಾ. ಎಸ್.ಎಸ್. ಅಂಗಡಿ ಅವರ ‘ವಚನ ಸಾಹಿತ್ಯ ಛಂದೋಲನ’ ಕೃತಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಲಭಿಸಿದೆ.

ಲೋಕಸಭಾ ಸದಸ್ಯರಾದ ಶ್ರೀ ಕೆ. ವಿರೂಪಾಕ್ಷಪ್ಪ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಂಸದರ ಅನುದಾನದಿಂದ ನಿರ್ಮಿಸಿದ ‘ಹಾಲುಮತ ಭವನ’, ‘ಹಾಲುಮತ ಮೇಲುದೀಪ’, ‘ಗ್ರಂಥಾಲಯ ಹಾಗೂ ಹಾಲುಮತ ಭಂಡಾರ’, ‘ವಸ್ತುಸಂಗ್ರಹಾಲಯಗಳನ್ನು ಉದ್ಘಾಟನೆ ಮಾಡಲಾಯಿತು. ‘ಹಾಲುಮತ ಸಂಸ್ಕೃತಿ-೨ ಚಳ್ಳಕೆರೆಯಲ್ಲಿ ನಡೆಸಲಾಯಿತು. ‘ರಸ್ತಾಪುರ ಭೀಮಕವಿಯ ಹಾಲುಮತ್ತೋತ್ತೇಜಕ ಪುರಾಣವನ್ನು ಸಂಪಾದಿಸಿ ಡಾ. ಎಫ್‌.ಟಿ.ಹಳ್ಳಿಕೇರಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅವರಿಂದ ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ಪ್ರಶಸ್ತಿ ಲಭಿಸಿದೆ.

ಜೈನ ಅಧ್ಯಯನ ಪೀಠವು ಕನ್ನಡ ಸಾಹಿತ್ಯ ಪರಂಪರೆ ಮತ್ತು ಜೈನಧರ್ಮ ವಿಚಾರ ಸಂಕಿರಣವನ್ನು ಯಶಸ್ವಿಯಾಗಿ ನಡೆಸಿತು. ಕರ್ನಾಟಕದಲ್ಲಿ ಜೈನಧರ್ಮ : ಚಾರಿತ್ರಿಕ ಅವಲೋಕನ ವಿಶೇಷ ಉಪನ್ಯಾಸ ನಡೆದಿದೆ. ಕಳೆದ ವರ್ಷ ಸರ್ಕಾರದ ಅನುದಾನದಿಂದ ೨೦ ಜೈನ ಸಮಗ್ರ ಸಾಹಿತ್ಯ ಸಂಪುಟಗಳನ್ನು ಹೊರತರಲಾಗಿದೆ. ಈ ವರ್ಷ ಶಾಸ್ತ್ರ ಸಾಹಿತ್ಯ ಕುರಿತಂತೆ ೩೦ ಗ್ರಂಥಗಳನ್ನು ಹೊರತರುವ ಯೋಜನೆ ಇದೆ. ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದ ಜೈನ ಲೇಖನಗಳ ಸಂಪುಟ ಹೊರತರುವ ಯೋಜನೆ ಈ ಪೀಠಕ್ಕಿದೆ. ಕರ್ನಾಟಕ ಜೈನಕೇಂದ್ರಗಳ ಕುರಿತು ಚಾರಿತ್ರಿಕ ವಿಚಾರ ಸಂಕಿರಣ ಯೋಜಿಸಲಾಗಿದೆ.

ಪುರಂದರದಾಸ ಅಧ್ಯಯನ ಪೀಠವು ‘ಪುರಂದರ ದಾಸರ ಸಾಹಿತ್ಯ ಅಧ್ಯಯನ ವಿಚಾರ ಸಂಕಿರಣವನ್ನು ಧಾರವಾಡದಲ್ಲಿ ಹಮ್ಮಿಕೊಂಡಿತು. ರಾಯಚೂರು ಮತ್ತು ತುಮಕೂರಿನಲ್ಲಿ ‘ಪುರಂದರದಾಸರ ಸಾಹಿತ್ಯ ಕುರಿತ ವಿಶೇಷ  ಉಪನ್ಯಾಸಗಳು ೧ ಮತ್ತು ೨’ಗಳನ್ನು ನಡೆಸಲಾಯಿತು.

ನಾಡೋಜ ಡಾ. ರಾಜಕುಮಾರ್ ಅಧ್ಯಯನ ಪೀಠದ ಮೂಲಕ ಶ್ರವ್ಯ ಮತ್ತು ದೃಶ್ಯ ಗ್ರಂಥಾಲಯ ತೆರೆಯಲಾಗಿದೆ. ರಾಜಕುಮಾರ್ ಅವರ ಚಲನಚಿತ್ರಗಳ ಸಿ.ಡಿ.ಗಳನ್ನು ಸಂಗ್ರಹಿಸಲಾಗಿದೆ. ರಂಗಭೂಮಿ ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕೃತಿಗಳನ್ನು ಸಂಗ್ರಹಿಸಲಾಗಿದೆ.

ದೃಶ್ಯಕಲಾ ವಿಭಾಗವು ಬೋಧನೆ, ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಚಿತ್ರಕಲಾ ಶಾಲೆಗಳ ನಿರ್ವಹಣಾ ಕೇಂದ್ರದಲ್ಲಿ ಬಿ.ವಿ.ಎ, ಎ.ಟಿ.ಸಿ, ಡಿಪ್ಲೊಮಾ, ಬಿ.ವಿ.ಇಡಿ ಕೋರ್ಸ್‌ಗಳಲ್ಲಿ ಒಟ್ಟು ನಾಲ್ಕು ಸಾವಿರದ ಮುನ್ನೂರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಸುಮಾರು ಎಂಬತ್ತು ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರಿಗಾಗಿ ವೃತ್ತಿಪರ ಸ್ನಾತಕೋತ್ತರ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಿಂದ ಮಹಾವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲಿದೆ.

ನಮ್ಮ ವಿಶ್ವವಿದ್ಯಾಲಯದಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನೆರವಿನಿಂದ ಅನೇಕ ಅಧ್ಯಯನ ಪೀಠಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೀಠಗಳು ವಿಚಾರಸಂಕಿರಣಗಳನ್ನು ಏರ್ಪಡಿಸುತ್ತಿವೆ. ಕಮ್ಮಟಗಳನ್ನು ಸಂಘಟಿಸುತ್ತಿವೆ.

ಪ್ರಸಾರಾಂಗದ ಪ್ರಕಟಣೆಗಳಿಗೆ ISBN ಸಂಖ್ಯೆ ಲಭಿಸಿರುವುದು ಸಂತೋಷದ ವಿಚಾರ. ಈ ಸಂಖ್ಯೆ ದೊರೆತಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ದೊರೆಯಲಿದೆ. ISBN ಸಂಖ್ಯೆಯನ್ನು ದಾಖಲಿಸುವುದರ ಮೂಲಕ ಅಂತಾರಾಷ್ಟ್ರೀಯ ಪ್ರಕಾಶಕರ ಡೈರಕ್ಟರಿಯಲ್ಲಿ ಹಾಗೂ ಬರ್ಲಿನ್‌ನ ಇಂಟರ್ ನ್ಯಾಷನಲ್ ISBN ಏಜೆನ್ಸಿಯಲ್ಲಿಯೂ ನಮ್ಮ ಪ್ರಕಟಣೆಗಳ ಮಾಹಿತಿಯು ಸೇರಿಕೊಳ್ಳುತ್ತದೆ. ಪ್ರಸಾರಾಂಗವು ಈ ಸಾಲಿನಲ್ಲಿ ೧೧ ಪುಸ್ತಕಗಳ ಮರುಮುದ್ರಣವೂ ಒಳಗೊಂಡಂತೆ ೫೨ ಪುಸ್ತಕಗಳನ್ನು ಪ್ರಕಟಿಸಿದೆ. ಪುಸ್ತಕ ಸಂಸ್ಕೃತಿ ಯಾತ್ರೆಯ ಮುಲಕ ಕರ್ನಾಟಕದ ನಾನಾ ಭಾಗಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ. ಈಗಾಗಲೇ ಈ ಆರ್ಥಿಕ ವರ್ಷದಲ್ಲಿ ೩೦ ಲಕ್ಷ ರೂಪಾಯಿಗಳ ಪುಸ್ತಕಗಳು ಮಾರಾಟವಾಗಿವೆ. ೧೮ ನುಡಿಹಬ್ಬದ ಭಾಷಣಗಳನ್ನು ಒಳಗೊಂಡ ಸಂಪುಟವೊಂದನ್ನು ಹೊರತರಲಾಗುವುದು. ಕುವೆಂಪು ಸಮಗ್ರ ಗದ್ಯ ಸಾಹಿತ್ಯ ಸಂಪುಟ ೩, ೪ ಹಾಗೂ ಸಂಕೀರ್ಣ ಸಂಪುಟಗಳ ಪ್ರಕಟಣೆ, ಚರಿತ್ರೆಯ ೭ ಸಂಪುಟಗಳ ಪ್ರಕಟಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಶ್ರೀ ಕೃಷ್ಣದೇವರಾಯನ ೫೦೦ನೇ ಪಟ್ಟಾಭಿಷೇಕೋತ್ಸವದ ಅಂಗವಾಗಿ ಐದು ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ. ಇದೇ ತಿಂಗಳು ೧೫ರಂದು ಸನ್ಮಾನ್ಯ ಗೃಹಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ಮೈಸೂರಿನಲ್ಲಿ ೧೨ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಧನಸಹಾಯ ಆಯೋಗದಿಂದ ೭೬ ಲಕ್ಷ ರೂಪಾಯಿಗಳ ಅನುದಾನ ದೊರೆತಿದ್ದು ಗ್ರಂಥಗಳನ್ನು ಹಾಗೂ ಬುಕ್ ರ್ಯಾಕನ್ನು ಖರೀದಿಸಲಾಗಿದೆ. ಇದಲ್ಲದೆ ಗ್ರಂಥಾಲಯದಿಂದ ಸಿದ್ಧಗೊಂಡಿರುವ ‘ಸಾರ-ವಿಸ್ತಾರ’ವೆಂಬ ಪ್ರಸಾರಾಂಗ ಪ್ರಕಟಿಸಿರುವ ಪುಸ್ತಕಗಳ ಪರಿಚಯ ಕೃತಿಯನ್ನು ಡಾ. ಎಚ್.ನಾಗವೇಣಿ ರೂಪಿಸಿಕೊಟ್ಟಿದ್ದಾರೆ.

ನಮ್ಮ ವಿಶ್ವವಿದ್ಯಾಲಯದ ಆಡಳಿತ ಸಿಬ್ಬಂದಿಯಾದ ಶ್ರೀ ಗ್ಯಾನಪ್ಪ ಬಡಿಗೇರ ಅವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ದೆಹಲಿ ಅವರು ೨೦೦೯ ನೇ ಸಾಲಿನ ಬಾಬ್ ಸಾಹೇಬ್ ಅಂಬೇಡ್ಕರ್‌ ರಾಷ್ಟ್ರೀಯ ಶಿಷ್ಯವೇತನ ಪ್ರಶಸ್ತಿಯನ್ನು ಕೊಡಮಾಡಿರುವುದು ತುಂಬ ಸಂತೋಷ ತಂದಿದೆ.

ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸುಮಾರು ಒಂದು ಕೋಟಿ ರೂಪಾಯಿಯಷ್ಟು ರಾಜೀವಗಾಂಧಿ ಶಿಷ್ಯವೇತನ ದೊರೆತಿದೆ. ಈ ವರ್ಷ ೧೮೨ ವಿದ್ಯಾರ್ಥಿಗಳು ಎಂ.ಫಿಲ್. ಪದವಿಯನ್ನೂ ೭೧ ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನೂ ೧೦ ವಿದ್ಯಾರ್ಥಿಗಳು ಡಿ.ಲಿಟ್. ಪದವಿಯನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೆಟ್ ಪರೀಕ್ಷೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್‌ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯ ವಿಸ್ತರಣೆಗಾಗಿ ಸರಕಾರದ ವತಿಯಿಂದ ೧೬ ಲಕ್ಷ ರೂಪಾಯಿಗಳು ಬಿಡುಗಡೆ ಆಗಿದೆ. ಡಾ. ಪುರುಷೋತ್ತಮ ಬಿಳಿಮಲೆ ಅವರಿಂದ ಮೂರು ದಿನಗಳ ವಿಶೇಷ ಉಪನ್ಯಾಸವನ್ನು ವಿಶ್ವವಿದ್ಯಾಯಲ ಏರ್ಪಡಿಸಿತ್ತು.

ಸಮಾಜವಿಜ್ಞಾನ ನಿಕಾಯಕ್ಕೆ ನಾಲ್ಕು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮೇಜರ್ ಯೋಜನೆಗಳು ನೀಡಲ್ಪಟ್ಟಿವೆ. ಕುಪ್ಪಳಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರ, ರಾಜ್ಯ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕುವೆಂಪು ಸಾಹಿತ್ಯ ಕುರಿತ ವಿಶೇಷ ವಿಚಾರ ಸಂಕಿರಣ ನಡೆದಿವೆ. ಛಾಯಾಚಿತ್ರಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದ ಛಾಯಾಚಿತ್ರಗಾರರ ಶಿಬಿರವನ್ನು ಇಲ್ಲಿ ನಡೆಸಲಾಗಿತ್ತು. ಇಷ್ಟಲ್ಲದೆ ಕುಪ್ಪಳಿಯಲ್ಲಿ ಜಾನಪದ ವಸ್ತುಸಂಗ್ರಹಾಲಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆದಿದ್ದು, ವಸ್ತುಸಂಗ್ರಹಾಲಯಕ್ಕಾಗಿ ಕಟ್ಟಡದ ನಿರ್ಮಾಣವನ್ನು ಪ್ರವಾಸೋದ್ಯಮ ಇಲಾಖೆ, ಕುವೆಂಪು ಟ್ರಸ್ಟ್‌ ನೆರವಿನಿಂದ ನಡೆಯುತ್ತಿದೆ.

ಸರಕಾರವು ನಿರಂತರ ಕುಡಿಯುವ ನೀರಿಗಾಗಿ ೫೦ ಲಕ್ಷ ನೀಡಿದ್ದು, ೮೫ ಲಕ್ಷ ರೂಪಾಯಿಗಳ ಯೋಜನೆ ಈ ತಿಂಗಳ ಅಂತ್ಯದಲ್ಲಿ ಪೂರ್ಣವಾಗಲಿದೆ. ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ಹನ್ನೊಂದನೇ ಪಂಚವಾರ್ಷಿಕ ಯೋಜನೆಯಲ್ಲಿ ಒಂಬತ್ತೂವರೆ ಕೋಟಿ ರೂಪಾಯಿ ಅನುದಾನ ನೀಡಲಿದ್ದು, ದೃಶ್ಯಕಲೆ, ಪ್ರಸಾರಾಂಗ, ಉಪಾಹಾರ ಕಟ್ಟಡಗಳು ನಿರ್ಮಾಣವಾಗಲಿವೆ. ಅಲ್ಲದೆ ಒಂದೂಮುಕ್ಕಾಲು ಕೋಟಿ ರೂಪಾಯಿ ಅಂದಾಜಿನಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಅಳವಡಿಕೆ ಆಗಲಿದೆ. ವಿದ್ಯಾರ್ಥಿನಿಲಯಗಳಲ್ಲಿ ಸೋಲಾರ್ ದೀಪಗಳು ಮತ್ತು ಕುಡಿಯುವ ನೀರಿಗಾಗಿ ವಾಟರ್ ಕೂಲರ್‌ಗಳನ್ನು ಅಳವಡಿಸಲಾಗಿದೆ. ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಪರಿಗಣಿಸಿದ ಸಂದರ್ಭದಲ್ಲಿ ಕರ್ನಾಟಕ ಸರಕಾರವು ಒಂದು ಕೋಟಿ ರೂಪಾಯಿ ಧನಸಹಾಯ ನೀಡಿದ್ದು, ಸುಮಾರು ೪೫ ಯೋಜನೆಗಳು ಕಾರ್ಯನಿರತವಾಗಿವೆ.

ನಾಡಿನ ಹೆಸರಾಂತ ಶಿಲ್ಪಿಗಳು ಹಾಗೂ ಕಲಾವಿದರ ಮಾರ್ಗದರ್ಶನದಲ್ಲಿ ಶಿಲ್ಪವನವನ್ನು ಇನ್ನಷ್ಟು ಆಕರ್ಷಣೀಯವಾಗಿ ರೂಪಿಸುವ ಕ್ರಿಯಾಯೋಜನೆ ಜಾರಿಯಲ್ಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡಲು ಅನುದಾನ ನೀಡಿದ್ದು, ಈಗಾಗಲೇ ೬೦ ಜನ ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನಿಂದ  ಆಡಳಿತದಲ್ಲಿ ಕನ್ನಡ ಬಳಕೆ ಕುರಿತು ತರಬೇತಿಗಾಗಿ ಪಠ್ಯವನ್ನು ವಿಶ್ವವಿದ್ಯಾಲಯ ಸಿದ್ಧಪಡಿಸಿದೆ. ಅಲ್ಲದೆ ರಾಜ್ಯಾದಾಂತ ಜಿಲ್ಲಾ ತರಬೇತಿ ಕೇಂದ್ರಗಳಿಗಾಗಿ ತರಬೇತುದಾರರನ್ನು ತರಬೇತುಗೊಳಿಸಲು ೫ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ನಡೆಸಿದೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ದೂರಶಿಕ್ಷಣ ಪರಿಷತ್ತು ನಮ್ಮ ದೂರಶಿಕ್ಷಣಕ್ಕೆ ಪ್ರಸ್ತುತ ವರ್ಷದಲ್ಲಿ ೨೦ ಲಕ್ಷ ರೂಪಾಯಿಗಳ ಅನುದಾನವನ್ನು ಮಂಜುರು ಮಾಡಿದೆ.

ಕುರುಬನಕಟ್ಟೆಯ ಸಾಂಸ್ಕೃತಿಕ ಅಧ್ಯಯನ ಕೇಂದ್ರದಿಂದ ಚಾಮರಾಜ ತಾಲ್ಲೂಕಿನ ಗ್ರಾಮಗಳ ಮಾಹಿತಿ ಕೋಶ ಪೂರ್ಣಗೊಳ್ಳುತ್ತಿದೆ. ಅಂತರ್ಜಾಲಕ್ಕೆ ಬಿಡುವ ಯೋಜನೆಯೂ ಇದೆ. ಬಾದಾಮಿ ಕೇಂದ್ರದಲ್ಲಿ ದೃಶ್ಯ, ಶಿಲ್ಪಕ್ಕೆ ಸಂಬಂಧಿಸಿದ ಬೋಧನೆ, ಇಬಿರ, ಉಪನ್ಯಾಸ, ವಿಚಾರ ಸಂಕಿರಣ ನಡೆದಿವೆ.

ಈ ಎಲ್ಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಧ್ಯಾಪಕವರ್ಗ ಹಾಗೂ ವಿದ್ಯಾರ್ಥಿ ವರ್ಗ, ಆಡಳಿತ ಸಿಬ್ಬಂದಿ ವರ್ಗವಿದೆ. ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಅತ್ಯಂತ ಕಾಳಜಿಯಿಂದ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಎಲ್ಲ ಸೌಕರ್ಯಗಳ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಮುಂಬರುವ ದಿನಗಳಲ್ಲಿ ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಉನ್ನತ ಸ್ಥಾನವನ್ನು ಗಳಿಸಲಿದೆ.

ನಮಸ್ಕಾರ

೧೩ ಜನವರಿ ೨೦೧೦