ಕನ್ನಡ ವಿಶ್ವವಿದ್ಯಾಲಯ ೧೯ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಪದವಿ, ಡಿ.ಲಿಟ್. ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ನೀಡಿ ನುಡಿಹಬ್ಬವನ್ನು ಅರ್ಥಪೂರ್ಣವಾಗಿಸಲು ಬಂದಿರುವ ಕರ್ನಾಟಕ ರಾಜ್ಯದ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಘನತೆವೆತ್ತ ಸನ್ಮಾನ್ಯ ಶ್ರೀ ಎಚ್.ಆರ್. ಭಾರದ್ವಾಜ್ ಅವರೇ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು, ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಸನ್ಮಾನ್ಯ ಡಾ. ವಿ.ಎಸ್. ಆಚಾರ್ಯ ಅವರೇ, ಘಟಿಕೋತ್ಸವ ಭಾಷಣವನ್ನು ಮಾಡಲು ಆಗಮಿಸಿರುವ ನ್ಯಾಕ್‌ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ಎಚ್.ಎ. ರಂಗನಾಥ್‌ ಅವರೆ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಭಾಜನರಾದ ಡಾ. ಎಂ.ಎಂ. ಕಲಬುರ್ಗಿ ಅವರೆ, ಡಾ. ಡಿ.ಬಿ.ಶ್ರೀನಿವಾಸ್ ಅವರೇ, ಶ್ರೀಮತಿ ಹರಿಜನ ಪದ್ಮಮ್ಮ ಅವರೇ, ಪ್ರೊ. ಬರಗೂರು ರಾಮಚಂದ್ರಪ್ಪ ಅವರೇ, ನೆರೆದಿರುವ ವಿವಿಧ ಪದವಿಗಳನ್ನು ಪಡೆಯಲಿರುವ ಮಹನೀಯರೇ, ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದದವರೇ, ಆಡಳಿತ ಸಿಬ್ಬಂದಿಗಳೇ, ಮಾಧ್ಯಮದ ಮಿತ್ರರೇ, ಆಹ್ವಾನಿತರೇ, ಮಹಿಳೆಯರೇ ಹಾಗೂ ಮಹನೀಯರೇ, ತಮ್ಮೆಲ್ಲರನ್ನು ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಅತ್ಯಂತ ಗೌರವ ಹಾಗೂ ಆದರದಿಂದ ಸ್ವಾಗತಿಸುತ್ತೇನೆ.

೧೯ನೇ ನುಡಿಹಬ್ಬದಲ್ಲಿ ಪಾಲ್ಗೊಂಡಿರುವ ಘನತೆವೆತ್ತ ಕುಲಾಧಿಪತಿಗಳಾದ ಸನ್ಮಾನ್ಯ ಶ್ರೀ ಹಂಸರಾಜ್‌ ಭಾರದ್ವಾಜ್ ಅವರು ಉತ್ತಮ ಸಮಾಜ ಚಿಂತಕರು, ರಾಜಕೀಯ ಮುತ್ಸದ್ಧಿಗಳು. ಶ್ರೀಯುತರು ಈ ನುಡಿಹಬ್ಬದ ಸಂದರ್ಭದಲ್ಲಿ ಡಿ.ಲಿಟ್., ಪಿಎಚ್.ಡಿ. ಹಾಗೂ  ಎಂ.ಫಿಲ್ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರೂ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಸನ್ಮಾನ್ಯ ಡಾ. ವಿ.ಎಸ್.ಆಚಾರ್ಯ ಅವರು ಉತ್ತಮ ಶಿಕ್ಷಣ ಚಿಂತಕರು, ಶೈಕ್ಷಣಿಕ ರಂಗದಲ್ಲಿ ಹೊಸ ಹೊಳಹುಗಳನ್ನು ಅರಸುತ್ತಿರುವ ಸುಸಂಸ್ಕೃತ ರಾಜಕಾರಣಿಗಳು. ಅವರು ನುಡಿಹಬ್ಬದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ನುಡಿಹಬ್ಬಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ.

ಡಾ. ಎಚ್.ಎ.ರಂಗನಾಥ್‌ ಅವರು ಇಂದಿನ ನುಡಿಹಬ್ಬದ ಘಟಿಕೋತ್ಸವದ ಭಾಷಣವನ್ನು ಮಾಡಲು ನಮ್ಮ ಆಹ್ವಾನವನ್ನು ಮನ್ನಿಸಿ ಆಗಮಿಸಿದ್ದಾರೆ. ಡಾ. ಎಚ್.ಎ. ರಂಗನಾಥ್ ಅವರು ಹೆಸರಾಂತ ವಿಜ್ಞಾನಿಗಳು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಈಗ ಬೆಂಗಳೂರಿನ ನ್ಯಾಕ್ ಕೇಂದ್ರದ ನಿರ್ದೇಶಕರೂ ಆಗಿರುವ ಶ್ರೀಯುತರು ಕನ್ನಡ ವಿಶ್ವವಿದ್ಯಾಲಯದ ಮೇಲಿನ ಅಭಿಮಾನದಿಂದ ಇಂದು ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಎಂದಿನಂತೆ ಈ ಸಲವೂ ಕನ್ನಡ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಐವರು ಸಾಧಕರಿಗೆ ನಾಡೋಜ ಗೌರವ ಪದವಿಯನ್ನು ನೀಡುತ್ತಿದೆ. ಕನ್ನಡದ ಪ್ರಸಿದ್ಧ ಚಿಂತಕರೂ, ಜನಪ್ರಿಯ ಪ್ರಾಧ್ಯಾಪಕರೂ, ಖ್ಯಾತ ವಾಗ್ಮಿಗಳೂ, ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಕೊಡುಗೆಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದವರೂ ಕನ್ನಡ ವಿಶ್ವವಿದ್ಯಾಲಯದ ಹಿತಚಿಂತಕರೂ ಆದ ಪ್ರೊ. ಬರಗೂರು ರಾಮಚಂದ್ರಪ್ಪನವರು ಆಗಮಿಸಿದ್ದಾರೆ.

ನಾಡಿನ ಪ್ರಸಿದ್ಧ ಸಂಶೋಧಕರೂ, ಶ್ರೇಷ್ಠ ಪ್ರಾಧ್ಯಾಪಕರೂ, ಪಂಪಪ್ರಶಸ್ತಿ ವಿಜೇತರೂ, ಕನ್ನಡ ವಿಶ್ವವಿದ್ಯಾಲಯವನ್ನು ತಮ್ಮ ಶ್ರಮ ಮತ್ತು ಪ್ರತಿಭೆಗಳಿಂದ ಕಟ್ಟಿದವರೂ ಆದ ಪ್ರೊ. ಎಂ.ಎಂ. ಕಲಬುರ್ಗಿ ಅವರು ಆಗಮಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿಯ ವಿಶಿಷ್ಟತೆ ಎಂದರೆ, ಅಜ್ಞಾತವಾಗಿರುವ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಗುರುತಿಸುವುದು. ಈ ನಿಟ್ಟಿನಲ್ಲಿ ಈ ಬಾರಿ ಜನಪದ ರಂಗಭೂಮಿಯಲ್ಲಿ ಎಲೆಮರೆಯ ಕಾಯಿಯಂತೆ ದುಡಿದಿರುವ  ಬಳ್ಳಾರಿಯ ಹರಿಜನ ಪದ್ಮಮ್ಮನವರು ಈ ಪದವಿಗೆ ಭಾಜನರಾಗಿದ್ದಾರೆ. ಅವರು ಕೂಡ ಇಲ್ಲಿ ಆಗಮಿಸಿದ್ದಾರೆ.

ಧರ್ಮಸ್ಥಳದ ಮಂಜುನಾಥೇಶ್ವರ ಕ್ಷೇತ್ರದ ಧರ್ಮಾಧಿಕಾರಿಗಳೂ, ಗ್ರಾಮೀಣ ಅಭಿವೃದ್ಧಿಯಲ್ಲಿ ತಮ್ಮದೇ ಆದ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಸಂಚಲನೆಯನ್ನು ಉಂಟು ಮಾಡಿರುವವರೂ, ಧರ್ಮಸ್ಥಳವನ್ನು ತಮ್ಮ ಸಾಹಿತ್ಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದವರೂ, ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಪಡೆದಿರುವವರೂ ಡಾ. ವೀರೇಂದ್ರ ಹೆಗ್ಗಡೆಯವರನ್ನು ಅವರ ಅನುಪಸ್ಥಿತಿಯಲ್ಲಿ ಸ್ವಾಗತಿಸುತ್ತೇನೆ.

ತಮ್ಮ ಸಾವಿರಾರು ಮಧುರವಾದ ಹಾಡುಗಳಿಂದ ಸಮಸ್ತ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿರುವ, ಕನ್ನಡ ಚಲನಚಿತ್ರರಂಗದಲ್ಲಿ ಅಪಾರವಾದ ಸಾಧನೆ ಮಾಡಿರುವ ಪಿ.ಬಿ. ಶ್ರೀನಿವಾಸ್ ಅವರು ಆಗಮಿಸಿದ್ದಾರೆ.

ಈ ಎಲ್ಲ ನಾಡೋಜರನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ: ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳುವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಸವಾಲು’ಗಳಿಗೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವ ಕಳೆದ ಹದಿನೇಳು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ, ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ : ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

‘ನಾಡೋಜ’ ಎನ್ನುವುದು ಕನ್ನಡದ ಆದಿಕವಿ ಪಂಪನ ಬಿರುದು. ನಾಡೋಜ ಎಂದರೆ ನಾಡಿನ ಹಿರಿಯ, ನಾಡಿನ ಉಪಾಧ್ಯಾಯ, ನಾಡಿನ ಶಿಲ್ಪಿ, ನಾಡಿನ ರೂವಾರಿ. ಆಚಾರ್ಯ ಪುರುಷ ಎನ್ನುವ ವಿಶಿಷ್ಟ ಅರ್ಥಗಳಿವೆ. ಜೀವಮಾನದುದ್ದಕ್ಕೂ ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ, ಕಲೆ, ಇತಿಹಾಸ ತಂತ್ರಜ್ಞಾನ ಹೀಗೆ ಹಲವು ನೆಲೆಗಳಲ್ಲಿ ಕನ್ನಡ ಹಾಗೂ ಕರ್ನಾಟಕವನ್ನು ಕ್ರಿಯಾಶೀಲವಾಗಿಸುತ್ತ ಬಂದ ಧೀಮಂತ ಚೇತನಗಳನ್ನು ನಾಡೋಜ ಗೌರವ ಪದವಿ ನೀಡುವ ಮೂಲಕ ಕನ್ನಡ ವಿಶ್ವವಿದ್ಯಾಲಯ ತನ್ನ ಬಳಗಕ್ಕೆ ಸೇರಿಸಿಕೊಳ್ಳುತ್ತ ಬಂದಿದೆ. ಸಮಾಜದ ಅನೇಕ ಕರಾರುಗಳಿಂದಾಗಿ ಮೂಲೆ ಗುಂಪಾದ ಕರ್ನಾಟಕದ ಜನಸಮುದಾಯಗಳ ಬದುಕಿನ ರೀತಿ ನೀತಿ ವೃತ್ತಿಗಳ ಅಧ್ಯಯನ ವಿರ್ಶವವಿದ್ಯಾಲಯದ ಮೊದಲ ಆದ್ಯತೆಯಾದಂತೆ ಅಂಥ ಸ್ಥರದಿಂದ ಬಂದ ಧೀಮಂತ ಚೇತನಗಳಿಗೂ ನಾಡೋಜ ಗೌರವ ಪದವಿ ನೀಡುವ ಮೂಲಕ ಕನ್ನಡದ ಸ್ವಾಭಿಮಾನ ಹಾಗೂ ಸ್ವಾವಲಂಬನೆಯನ್ನು ಪೋಷಿಸುತ್ತ ಬಂದಿದೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಗಮನದಲ್ಲಿರಿಸಿ ಅಧ್ಯಯನಶೀಲವಾಗುವ ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಂಶೋಧನೆಯನ್ನು ತನ್ನ ಉಸಿರನ್ನಾಗಿಸಿಕೊಂಡಿರುವ ವಿಶ್ವವಿದ್ಯಾಲಯ ನಿರಂತರವಾಗಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಪರವಾದ ಚಿಂತನೆಗಳನ್ನು ನಡೆಸಿಕೊಂಡು ಬಂದಿದೆ. ಕನ್ನಡ ವಿಶ್ವವಿದ್ಯಾಲಯವು ತನ್ನ ವಿವಿಧ ವಿಭಾಗಗಳು, ಅಧ್ಯಯನ ಪೀಠಗಳ ಮುಖಾಂತರ ಶೈಕ್ಷಣಿಕ ಚಟುವಟಿಕೆಯಲ್ಲಿ ನಿರತವಾಗಿದೆ.

ಕನ್ನಡ ಭಾಷಾಧ್ಯಯನ ವಿಭಾಗವು ‘ಭಾಷೆ ವಿಶ್ವಕೋಶ’, ‘ಕನ್ನಡ ಉಪಭಾಷಾ ಪದಕೋಶ’, ‘ಆಡಳಿತ ಕನ್ನಡ’, ‘ಆಡಳಿತ ಕನ್ನಡ ಕಾರ್ಯಶಿಬಿರ ಕೈಪಿಡಿ’, ‘ಕನ್ನಡ ಓದಿಬರೆ, ಕ್ರಿಯಾಪದದ ಬಗೆಗಳು’, ‘ಪದವಿನ್ಯಾಸ’ ಮುಂತಾದ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇದಲ್ಲದೆ ‘ಕನ್ನಡ ಲಿಂಗಸಂಬಂಧಿ ಆಯಾಮಗಳು’ ಎಂಬ ವಿಚಾರ ಸಂಕಿರಣವನ್ನು ಮತ್ತು ‘ಕನ್ನಡ ನುಡಿ ರಚನೆ ಬಳಕೆ ಎಂಬ ಕಮ್ಮಟವನ್ನು ನಡೆಸಿದ್ದಾರೆ.

ಕನ್ನಡ ಸಾಹಿತ್ಯ ಅಧ್ಯಯನ ವಿಭಾಗವು ‘ಕನ್ನಡ ಸಾಹಿತ್ಯ ಸಂಶೋಧನೆ: ತಾತ್ವಿಕ ಆಯಾಮಗಳು’, ‘ಗ್ರಾಮಾಯಣ: ಸಾಂಸ್ಕೃತಿಕ ಮುಖಾಮುಖಿ’, ‘ಅಲ್ಲಮಪ್ರಭು ವಚನಗಳು: ಸಾಂಸ್ಕೃತಿಕ ಮುಖಾಮುಖಿ’, ‘ಪುರಂದರ ಸಾಹಿತ್ಯ ಅಧ್ಯಯನ’, ‘ಈ ಪರಿಯ ಸೊಬಗು’, ‘ತುಕಾರಾಮ’, ‘ದಿನಕರ ದೇಸಾಯಿ ಶತಮಾನ ಸ್ಮರಣೆ’,  ‘ತತ್ವಪದ ಸಾಹಿತ್ಯ ಚಳವಳಿ’, ‘ಕನ್ನಡ -ತೆಲುಗು ಬಸವ ಪುರಾಣಗಳ ತೌಲನಿಕ ಅಧ್ಯಯನ’, ‘ತೇಜಸ್ವಿ ಬರಹ ಸಾಮಾಜಿಕ ಆಯಾಮ’, ‘ಕನ್ನಡ ವಾಗ್ವಾದಗಳು, ‘ಮಲೆಗಳಲ್ಲಿ ಮದಮಗಳು: ಸಾಂಸ್ಕೃತಿಕ ಮುಖಾಮುಖಿ’, ‘ಕನ್ನಡ ಬಹುಭಾಷಿಕ ಸಾಹಿತ್ಯ’ ಎಂಬ ಯೋಜನೆಗಳನ್ನು ಮುಗಿಸಿದೆ. ಈ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಅವರ ಸವಾರಿ ಕಥೆಯು ಡಾ. ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ.

ಭಾಷಾಂತರ ಅಧ್ಯಯನ ವಿಭಾಗವು ವೈಯಕ್ತಿಕ ಯೋಜನೆಯಾಗಿ ‘ಯಶೋಧರ ಚರಿತೆ’, ‘ಕಾಸರಗೋಡಿನ ಕನ್ನಡ ಪರಂಪರೆ’, ‘ಕನ್ನಡ ಮರಾಠಿ ಸಾಂಸ್ಕೃತಿಕ ಬಾಂಧವ್ಯ’, ‘ಕನ್ನಡ ಕಾರ್ಪಸ್ ನಿರ್ಮಾಣ ಮುಂತಾದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳು ಪ್ರಗತಿಯಲ್ಲಿವೆ. ‘ಭಾಷಾಂತರ ದತ್ತ ಕಣಜ’, ‘ಕನ್ನಡದಲ್ಲಿ ಶೈಕ್ಷಣಿಕ ಸಾಮಗ್ರಿ ನಿರ್ಮಾಣದ ಉಪಕ್ರಮ’, ‘ಕುವೆಂಪು ಸಮಗ್ರ ಸಂಪುಟಗಳು’ ಯೋಜನೆಗಳು ಪ್ರಗತಿಯಲ್ಲಿವೆ. ‘ಕನ್ನಡದಲ್ಲಿ ಜ್ಞಾನೇಶ್ವರಿ ಅನುವಾದಗಳು’, ‘ಭಾಷಾಂತರ ಕರ್ನಾಟಕದ ಸಾಂಸ್ಕೃತಿಕ ರಾಜಕಾರಣ’ ಎಂಬ ವಿಚಾರ ಸಂಕಿರಣಗಳನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಡಾ. ಮೋಹನ್ ಕುಂಟಾರ್ ಅವರ ‘ಯಕ್ಷಗಾನ ಆಹಾರ್ಯ’ ಎಂಬ ಕೃತಿಗೆ ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿ ಲಭಿಸಿದೆ. ಭಾಷಾಂತರ ಅಧ್ಯಯನ ಕೇಂದ್ರವು ಸರ್ವಜ್ಞನ ವಚನಗಳನ್ನು ಮತ್ತು ಕುವೆಂಪು ಅವರ ಆಯ್ದ ಕವಿತೆಗಳನ್ನು ಇಂಗ್ಲಿಷಿಗೆ ವಿವಿಧ ವಿದ್ವಾಂಸರಿಂದ ಭಾಷಾಂತರ ಮಾಡಿಸಿ ಪ್ರಕಟಣೆಗೆ ಸಿದ್ಧಪಡಿಸಿದೆ. ಡಾ. ಕರೀಗೌಡ ಬೀಚನಹಳ್ಳ ಅವರಿಗೆ ರಾ.ಗೌ. ಕಥಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗವು ‘ತೆಲುಗು ಸಾಹಿತ್ಯ ಚರಿತ್ರೆ’, ಆಧುನಿಕ ಕನ್ನಡ ನಿಘಂಟು’ ಯೋಜನೆಯನ್ನು ಪೂರೈಸಿದೆ. ಈ ವಿಭಾಗವು ಕೋಲಾರದ ಆದಿಮದಲ್ಲಿ ಕುಪ್ಪಂ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮೂರು ದಿನಗಳ ವಿಚಾರ ಸಂಕಿರಣವನ್ನು ನಡೆಸಿದೆ. ಡಾ. ಮಾಧಮ ಪೆರಾಜೆ ಅವರ ‘ಪರಿಭಾಷೆ’ ಕೃತಿಗೆ ೨೦೦೯-೧೦ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.

ಹಸ್ತಪ್ರತಿಶಾಸ್ತ್ರ ವಿಭಾಗವು ‘ಬಳ್ಳಾರಿ ಜಿಲ್ಲಾ ಶಾಸನೋಕ್ತ ಸ್ಥಳನಾಮಗಳ ಅಧ್ಯಯನ’, ‘ಹಾಲುಮತ ಸಂಸ್ಕೃತಿ ದಾಖಲೀಕರಣ’, ‘ಹಸ್ತಪ್ರತಿ ಮುಖೇನ ಕನ್ನಡಿಗರ ಬದುಕು’, ಕನ್ನಡ ಶಾಸ್ತ್ರ ಹಸ್ತಪ್ರತಿಗಳ ಸರ್ವೇಕ್ಷಣೆ ಮತ್ತು ದಾಖಲೀಕರಣ’ ಎಂಬ ಯೋಜನೆಗಳನ್ನು ನಿರ್ವಹಿಸುತ್ತಿದೆ. ಶಾಸ್ತ್ರೀಯ ಭಾಷಾ ಅನುದಾನದ ಯೋಜನೆಯಾದ ‘ಮೋಡಿಲಿಪಿಯ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಿ ಯಶಸ್ವಿಯಾಗಿ ಮುಗಿಸಿದೆ. ಹಸ್ತಪ್ರತಿ ಸಮ್ಮೇಳನ, ಹಸ್ತಪ್ರತಿ ತರಬೇತಿ ಶಿಬಿರ, ಹಳಗನ್ನಡ ಅಧ್ಯಯನ ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಉತ್ತರ ಕರ್ನಾಟಕದ ಹಸ್ತಪ್ರತಿಗಳ ಸಂರಕ್ಷಣೆಗಾಗಿ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ನ್ಯಾಷನಲ್ ಮಿಷನ್ ಫಾರ್‌ ಮ್ಯಾನ್ಯುಸ್ಕ್ರೀಪ್ಟ್ಸ್ ನವದೆಹಲಿ ಇವರು ನ್ಯಾಷನಲ್ ಕಂಜರ್‌ವೇಷನ್ ಸೆಂಟರ್ (NMM)ನ್ನು ಮಂಜೂರು ಮಾಡಿದ್ದಾರೆ. ವಿಶ್ವವಿದ್ಯಾಲಯದ ಹಸ್ತಪ್ರತಿ ಸಂರಕ್ಷಣಾ ಕೇಂದ್ರಕ್ಕಾಗಿ ಪ್ರಾಧ್ಯಾಪಕರಾದ ಡಾ. ವಿ.ಎಸ್.ಬಡಿಗೇರ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಯೋಜನೆಗೆ ಹತ್ತು ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿದೆ. ಇದರ ಮುಖಾಂತರ ಹೊಸದಾಗಿ ಹಸ್ತಪ್ರತಿಗಳನ್ನು ಸಂಗ್ರಹಿಸುವ, ಈಗಾಗಲೇ ಬೇರೆ ಬೇರೆ ವಿಶ್ವವಿದ್ಯಾಲಯ, ಸಂಸ್ಥೆಗಳಿಂದ ಸಂಗ್ರಹಿಸಿದ ಹಸ್ತಪ್ರತಿಗಳನ್ನು ಸಂರಕ್ಷಿಸಿ ಇಡುವ ಅವಕಾಶ ಕನ್ನಡ ವಿಶ್ವವಿದ್ಯಾಲಯಕ್ಕೆ ದೊರಕಿದೆ. ಇದೇ ವಿಭಗದ ಡಾ. ಕೆ.ರವೀಂದ್ರನಾಥ ಅವರು ರಾಜ್ಯ ಪತ್ರಗಾರ ಇಲಾಖೆಯ ಯೋಜನೆಯ ಸಲಹಾ ಸಮಿತಿ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ. ಡಾ. ಎಫ್‌.ಟಿ.ಹಳ್ಳಿಕೇರಿ ಅವರು ಕನ್ನಡ ಶಾಸ್ತ್ರೀಯ ಭಾಷಾ ಉನ್ನತ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಡಾ. ಎಸ್.ಎಸ್. ಅಂಗಡಿ ಅವರಿಗೆ ‘ವಚನ ಛಂದೋಲಯ’ ಕೃತಿಗೆ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿ ಲಭಿಸಿದೆ. ಡಾ. ವಿ.ಎಸ್. ಬಡಿಗೇರ ಅವರ ‘ಸಂಸ್ಕೃತಿ ಸಂಕಥನ’ ಪುಸ್ತಕಕ್ಕೆ ‘ಅಮ್ಮ’ ಪ್ರಶಸ್ತಿ ದೊರಕಿದೆ.

ಮಹಿಳಾ ಅಧ್ಯಯನ ವಿಭಾಗದಲ್ಲಿ ‘ವಿವರಣಾತ್ಮಕ ಮಹಿಳಾ ಪದಕೋಶ’, ‘ಮಹಿಳೆ ಮತ್ತು ಧರ್ಮ’, ‘ಹರಿದೇಶಿ-ನಾಗೇಶಿ’ ಎಂಬ ಯೋಜನೆಗಳು ಪ್ರಗತಿಯಲ್ಲಿವೆ. ‘ಮಹಿಳಾ ಮೀಸಲಾತಿ : ಒಂದು ಅವಲೋಕನ’ ಎಂಬ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ವಿಭಾಗದಿಂದ ಏರ್ಪಡಿಸಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಅಲ್ಲಮ್ ಸುಮಂಗಳಮ್ಮ ದತ್ತಿನಿಧಿಯಿಂದ ‘ದೇವದಾಸಿ ಪದ್ಧತಿಯ ನಿರ್ಮೂಲನ: ಸವಾಲು ಸಾಧ್ಯತೆಗಳು’ ಎಂಬ ಎರಡು ದಿನಗಳ ವಿಚಾರ ಸಂಕಿರಣವನ್ನು ವಿಭಾಗದ ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಚರಿತ್ರೆ ವಿಭಾಗದ ವತಿಯಿಂದ ಎಂಟು ಚರಿತ್ರೆ ಸಂಪುಟಗಳ ಮುದ್ರಣಕಾರ್ಯ ನಡೆಯುತ್ತಿದೆ. ಅದಲ್ಲದೆ ‘ತುಳುನಾಡ ಸಿರಿ : ಬದುಕು ಹೋರಾಟದ ಕಥನ’, ‘ಕೆನರಾದ ವಿಭಜನೆ’, ‘ಕರ್ನಾಟಕ ಸಂಸ್ಕೃತಿ ಚರಿತ್ರೆ’, ‘ವಾಲ್ಮೀಕಿ ಮತ್ತು ತಿರುವಳ್ಳವರ್: ಒಂದು ಅಧ್ಯಯನ’, ‘ಸಿನಿಮಾ ಸಂಕಥನ’, ‘ವಸಾಹತು ಕಾಲಘಟ್ಟದ ಮೈಸೂರು ಸಂಸ್ಥಾನ’, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು’, ‘ಗಡಿ ಚಳುವಳಿ: ಇತ್ತೀಚಿನ ಆಯಾಮಗಳು’, ‘ಏಕೀಕರಣ ಚಳುವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಚಳವಳಿಗಾರರು’ ಯೋಜನೆಗಳು ಮುಕ್ತಾಯದ ಹಂತದಲ್ಲಿವೆ. ‘ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟಗಳು’, ಬಾಗಲ ಕೋಟೆ ಬಸವೇಶ್ವರ ದತ್ತಿನಿಧಿಯಿಂದ ‘ವಸಹಾತು ಪೂರ್ವ ಕರ್ನಾಟಕದ ರಾಜ್ಯ ವ್ಯವಸ್ಥೆ’, ‘ಇತಿಹಾಸ ರಚನೆ ಹಾಗೂ ಆಸ್ಮಿತೆಗಳು’, ‘ಕರ್ನಾಟಕದಲ್ಲಿ ಸಾಮಾಜಿಕ ಸುಧಾರಣೆಗಳ ಪ್ರಶ್ನೆಗಳು ಹಾಗೂ ಮಹಿಳೆ’, ಮೈಸೂರಿನಲ್ಲಿ ‘ದಿವಾನ್ ಸರ್‌ ಮಿರ್ಜಾ ಇಸ್ಮಾಯಿಲ್ ಅವರ ಕಾರ್ಯ ಸಾಧನೆಗಳು’ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಮತ್ತು ಕಮ್ಮಟಗಳು ಹಾಗೂ ದತ್ತಿ ನಿಧಿ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಡಾ. ತಂಬಂಡ್ ವಿಜಯ್ ಪೂಣಚ್ಚ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಲ್ಲಿ ಪಠ್ಯಪುಸ್ತಕ ಪಠ್ಯವಸ್ತು ತಯಾರಿ ಸಮಿತಿಯ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದಾರೆ. ಇದಲ್ಲದೆ ಪ್ರೌಢಶಾಲಾ ವಿದ್ಯಾರ್ಥಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಕಲೆ, ವಾಸ್ತುಶಿಲ್ಪ, ದೇವಾಲಯ, ಸ್ಮಾರಕಗಳ ಕುರಿತ ವಿಷಯಗಳನ್ನೊಳಗೊಂಡ ಮಹತ್ವದ ಆಶೋತ್ತರಗಳನ್ನು ಇಟ್ಟುಕೊಂಡು ಸಾಂಸ್ಥಿಕ ಹಾಗೂ ವೈಯಕ್ತಿ ಯೋಜನೆಗಳನ್ನು ಹಮ್ಮಿಕೊಂಡಿದೆ. ವಿಭಾಗವು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬಳ್ಳಾರಿ, ಹಾವೇರಿ, ಕೊಪ್ಪಳ, ವಿಜಾಪುರ, ಧಾರವಾಡ ಮತ್ತು ಗದಗ ಜಿಲ್ಲೆಯ ದೇವಾಲಯ ಕೋಶಗಳನ್ನು ಪೂರ್ಣಗೊಳಿಸಿದೆ. ಗುಲ್ಬರ್ಗಾ, ರಾಯಚೂರು, ಬೀದರ, ಚಿತ್ರದುರ್ಗ ಜಿಲ್ಲೆಯ ದೇವಾಲಯ ಕೋಸಗಳು ಪ್ರಕಟಣೆಗೆ ಸಿದ್ಧವಾಗಿವೆ. ಶ್ರವಣಬೆಳಗೊಳದ ಜೈನ ದಿಗಂಬರ ಸಂಸ್ಥೆಗಳ ಸಹಯೋಗದಲ್ಲಿ ‘ಕಲೆ ಮತ್ತು ವಾಸ್ತುಶಿಲ್ಪ’ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರೈಸಿದೆ. ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ ನಿಮಿತ್ತ ‘ಶ್ರೀಕೃಷ್ಣದೇವರಾಯನ ಜೀವನ ಮತ್ತು ಸಾಧನೆಗಳು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯಡಿ ನಡೆಸಲಾಗಿದೆ. ತೊಣ್ಣೂರು, ಬ್ರಹ್ಮಗಿರಿ, ಬಸವನ ಬಾಗೇವಾಡಿ, ಜಗಳೂರು, ನಾಗಮಂಗಲಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಮುದ್ರಣ ಹಂತದಲ್ಲಿದೆ.

ಜಾನಪದ ಅಧ್ಯಯನ ವಿಭಾಗವು ‘ದಟ್ಟಿ ಕುಣಿತ’, ‘ಕಿನ್ನರ ಜೋಗಿ ಮೇಳ’, ‘ಸುಡುಗಾಡು ಸಿದ್ಧರ ಮೋಡಿ’, ‘ಕಾಡುಗೊಲ್ಲರ ಗಣೆ’ ಪ್ರದರ್ಶನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ‘ಭಾರತೀಯ ಸಂಸ್ಕೃತಿ ಕುರಿತ’ ಸಂವಾದದಲ್ಲಿ ಅಮೇರಿಕಾದ ಎರಡು ವಿಶ್ವವಿದ್ಯಾಲಯದ ತಜ್ಞರು ಭಾಗವಹಿಸಿದ್ದರು. ದೇಸಿ ಸಮ್ಮೇಳನವನ್ನು ಜನವರಿಯಲ್ಲಿ ಹಮ್ಮಿಕೊಂಡಿದ್ದಾರೆ. ಡಾ. ಮಂಜುನಾಥ ಬೇವಿನಕಟ್ಟಿ ಅವರ ‘ಕರ್ನಾಟಕದ ಸ್ತ್ರೀ ದೈವಗಳು ಸಾಂಸ್ಕೃತಿಕ ಪದಕೋಶ’ಕ್ಕೆ ‘ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಪ್ರಶಸ್ತಿ ದೊರಕಿದೆ.

ಅಭಿವೃದ್ಧಿ ಅಧ್ಯಯನ ವಿಭಾಗವು ಮೈಸೂರು ವಿಶ್ವವಿದ್ಯಾಲಯದ ಐಡಿಎಸ್ ವಿಭಾಗದ ಸಂಶೋಧನ ವಿದ್ಯಾರ್ಥಿಗಳಿಗೆ ಎರಡು ದಿನಗಳ ಸಂಶೋಧನ ಕಮ್ಮಟ, ಡಾ. ಮುಜಾಫರ್ ಅಸಾದಿ ಅವರಿಂದ ‘ಅಭಿವೃದ್ಧಿ ರಾಜಕಾರಣ’ ಎಂಬ ವಿಶೇಷ ಉಪನ್ಯಾಸ, ಗುಲಬರ್ಗಾ ಜಿಲ್ಲಾ ಪಂಚಾಯತ್ ಸದಸ್ಯರಿಗೆ ‘ಮಾನವ ಅಭಿವೃದ್ಧಿ ವರದಿ’ ತರಬೇತಿ ಕಮ್ಮಟ ಮತ್ತು ಹೆಚ್‌ಕೆಡಿಬಿ ಅಧ್ಯಯನ ಪೀಠದಿಂದ ‘ಡಾ. ನಂಜುಂಡಪ್ಪ ವರದಿ ನಂತರ’ ಕುರಿತು ಕಾಲೇಜು ಉಪನ್ಯಾಸಕರಿಗೆ ಮೂರು ದಿನಗಳ ಕಮ್ಮಟವನ್ನು ಆಯೋಜಿಸಲಾಗಿತ್ತು. ಡಾ. ಎಚ್.ಡಿ. ಪ್ರಶಾಂತ್ ಅವರು ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ‘ಹಿಂದುಳಿದ ಜಿಲ್ಲೆಗಳ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸಾಮರ್ಥ್ಯ ವಿಸ್ತರಣ’ ಕಾರ್ಯಾಗಾರಗಳನ್ನು ಬೀದರ್, ಗುಲಬರ್ಗಾ, ರಾಯಚೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಸಿದ್ದಾರೆ. ಈ ಕಾರ್ಯಾಗಾರವನ್ನು ಬಿ.ಆರ್.ಜಿ.ಎಫ್. ಯೋಜನೆಯಲ್ಲಿ ಮಂಜೂರಾದ ೭೦ ಲಕ್ಷ ರೂಪಾಯಿಗಳ ಅನುದಾನದ ನೆರವಿನಿಂದ ಕೈಗೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ‘ಸ್ಥಳೀಯ ಸಂಸ್ಥೆಗಳಲ್ಲಿ ಜನರ ಭಾಗವಹಿಸುವಿಕೆ, ಪ್ರಜಾಪ್ರಭುತ್ವ, ವಿಕೇಂದ್ರಿಕರಣ ಮತ್ತು ಅಭಿವೃದ್ಧಿ ಕೋರ್ಸುಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಶ್ರೀ ಅಬ್ದುಲ್ ನಜೀರ್ ಸಾಬ್ ಅವರ ಹೆಸರಿನಲ್ಲಿ ಒಂದು ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಮೂರು ಕೋಟಿ ರೂ.ಗಳ ಅನುದಾನ ಕೋರಿ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಪ್ರಾಯೋಜಿಸಿದ ‘ಜಿಲ್ಲಾ ಮಾನವ ಅಭಿವೃದ್ಧಿ ವರದಿ’ ಎಂಬ ಯೋಜನೆಯಡಿಯಲ್ಲಿ ಡಾ.ಟಿ.ಆರ್. ಚಂದ್ರಶೇಖರ ಅವರು ‘ವಿಜಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೦೬’ ಅನ್ನು ಸರ್ಕಾರಕ್ಕೆ ಸಿದ್ಧಪಡಿಸಿ ಕೊಟ್ಟಿದ್ದಾರೆ. ಈ ವರದಿಯನ್ನು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಸರ್ಕಾರವು ಪ್ರಕಟಿಸಿದೆ. ಅದರ ಮುಂದುವರಿದ ಭಾಗವಾಗಿ ಅವರು ಈಗ (೨೦೧೦-೧೨) ರಾಯಚೂರು ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸುವ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ವಿಭಾಗವು ೨೦೧೦ರಲ್ಲಿ ಗದಗ ಜಿಲ್ಲಾ ಪಂಚಾಯಿತಿಯ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡು ‘ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧ್ಯಯನ’ ವೆಂಬ ಯೋಜನೆಯನ್ನು ಕೈಗೊಂಡಿದೆ. ಡಾ. ಟಿ.ಆರ್. ಚಂದ್ರಶೇಖರ ಅವರು ರಾಜ್ಯ ಸರ್ಕಾರದ ಯೋಜನಾ ಇಲಾಖೆಯು ಕೈಗೊಂಡಿರುವ ‘ಆರ್ಥಿಕ ಸಮೀಕ್ಷೆ’ ಎಂಬ ವರದಿಯ ಪರಿಷ್ಕರಣ ಯೋಜನೆಯಲ್ಲಿ ಕನ್ನಡ ವಿಭಾಗದ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಡಾ. ಟಿ.ಆರ್. ಚಂದ್ರಶೇಖರ ಮತ್ತು ಅವರ ವಿದ್ಯಾರ್ಥಿಗಳು ಸೇರಿಕೊಂಡು ೨೦೦೯-೨೦೧೦ ರಲ್ಲಿ ಸುಮಾರು ೨೦೦೦ ಪುಟಗಳಿಗೂ ಮೀರಿದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ವರದಿಗಳನ್ನು ವಿವಿಧ ಸಂಸ್ಥೆಗಳಿಗೆ ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದಾರೆ. ಈ ವಿಭಾಗವು ೨೦೧೦ ರಲ್ಲಿ ಸಿದ್ಧಪಡಿಸಿಕೊಟ್ಟ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಹತ್ತಕ್ಕಿಂತ ಅಧಿಕ ಸಂಶೋಧನ ಕೃತಿಗಳನ್ನು ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದೆ. ಕರ್ನಾಟಕದ ಪ್ರಸಿದ್ಧ ಸಮಾಜ ವಿಜ್ಞಾನಿಗಳಾದ ಡಾ. ಕೆ.ರಾಘವೇಂದ್ರರಾವ್ ಮತ್ತು. ಡಾ.ಬಿ.ಶೇಷಾದ್ರಿ ಅವರು ಕರ್ನಾಟಕದ ಬಗ್ಗೆ ಸಿದ್ಧ ಮಾಡಿಕೊಟ್ಟಿರುವ ಇಂಗ್ಲೀಷ್ ಕೃತಿಗಳನ್ನು ವಿಶ್ವವಿದ್ಯಾಲಯವು ೨೦೧೦ ರಲ್ಲಿ ಅತ್ಯಂತ ಹೆಮ್ಮೆಯಿಂದ ಪ್ರಕಟಿಸುತ್ತಿದೆ.

ಶಾಸನಶಾಸ್ತ್ರ ವಿಭಾಗದಿಂದ ‘ಕಲ್ಯಾಣ ಕರ್ನಾಟಕದ ಸಾಮಂತ ಅರಸು ಮನೆತನಗಳು’ ಮತ್ತು ಹರಪನಹಳ್ಳಿ ತಾಲೂಕಿನ ರಕ್ಷಣಾ ವಾಸ್ತು’, ‘ಪೆಣ್ಬುಯಲ್’, ‘ಗದಗ ಜಿಲ್ಲೆಯ ಮತ್ತು ಬಿಜಾಪುರ ಜಿಲ್ಲೆಯ ಶಾಸನ ಸಂಪುಟ’ ಬಿಜಾಪುರ ಹಾಗೂ ಸದಾಶಿವರಾಯನ ಶಾಸನ ಸಂಪುಟಗಳ ಮುದ್ರಣಕಾರ್ಯ ನಡೆಯುತ್ತಿದೆ. ಹಾವೇರಿ, ಧಾರವಾಡ ಮತ್ತು ಬೆಳಗಾಂ ಜಿಲ್ಲೆಗಳ ಶಾಸನ ಸಂಪುಟಗಳ ಕೆಲಸ ಪ್ರಗತಿಯಲ್ಲಿದೆ. ಬೆಂಗಳೂರಿನ ಮಿಥಿಕ್ ಸೊಸೈಟಿಯ ಸಹಯೋಗದಲ್ಲಿ ಮೂರು ದಿನಗಳ ‘ಶಾಸನ ಅಧ್ಯಯನ’ ಕಮ್ಮಟವನ್ನು ಆಯೋಜಿಸಲಾಗಿದೆ. ಇದೇ ವಿಭಾಗದ ಸಹಾಯ ಪ್ರಾಧ್ಯಾಪಕರಾದ ಡಾ. ಎಂ. ಕೊಟ್ರೇಶ್ ಅವರಿಗೆ ಶಿಕ್ಷಣ ಹಾಗೂ ಸಮಾಜ ಸೇವೆಗಾಗಿ ‘ಶಿವಸಿಂಪಿ’ ಪ್ರಶಸ್ತಿ ಲಭಿಸಿದೆ.

ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಯುಜಿಸಿಯಿಂದ ‘ಕರ್ನಾಟಕ ಅರಣ್ಯವಾಸಿ ಬುಡಕಟ್ಟು ಸಮುದಾಯಗಳ ಜಾನಪದ’ ಎಂಬ ಯೋಜನೆಗೆ ಮೂವತ್ತೆಂಟು ಲಕ್ಷದ ಐವತ್ತು ಸಾವಿರ ರೂಪಾಯಿಗಳ ಅನುದಾನ ಬಂದಿದೆ. ವಿಭಾಗವು ‘ಅಲಕ್ಷಿತ ಸಮುದಾಯಗಳ ಆಧುನಿಕ ಮುಖಾಮುಖಿ’, ‘ಸೋಲಿಗರ ಪಾರಂಪರಿಕ ಕೃಷಿ’, ‘ಹಾಲಕ್ಕಿ ಒಕ್ಕಲಿಗರ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ’ ಹಾಗೂ ಶಾಸ್ತ್ರೀಯ ಭಾಷೆ ಯೋಜನೆಯಾಗಿ ‘ದೇಶೀ ಕನ್ನಡ ಪರಂಪರೆ’, ‘ಅಲೆಮಾರಿಗಳ ಮರಗಭಾಷೆ’, ‘ಸೋಲಿಗರ ನುಡಿ ಸಾಂಸ್ಕೃತಿಕ ಪದಕೋಶ’, ಅಲೆಮಾರಿಗಳ ಬುಡಕಟ್ಟುಗಳ ಮೌಖಿಕ ಕಥನ ಪರಂಪರೆ’, ‘ಅಲೆಮಾರಿ ಬುಡಕಟ್ಟು ಸಮುದಾಯಗಳ ಸೃಷ್ಟಿ ಪುರಾಣಗಳ ತೌಲನಿಕ ಅಧ್ಯಯನ’ ಎಂಬ ಯೋಜನೆಗಳು ಪ್ರಗತಿಯಲ್ಲಿವೆ. ಬುಡಕಟ್ಟುಗಳಲ್ಲಿರುವ ಸೃಷ್ಟಿ ಪುರಾಣ, ಕಥನ ಕಾವ್ಯಗಳು, ಆಚರಣೆ, ನಂಬಿಕೆ, ಆರ್ಥಿಕ ಸಂಘಟನೆ, ಪಾರಂಪರಿಕ ಜ್ಞಾನ, ಮುಂತಾದ ವಿಷಯಗಳ ಬಗ್ಗೆ ಕಾರ್ಯಾಗಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಬುಡಕಟ್ಟು ಸಮ್ಮೇಳನವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದೆ.

ಮಾನವಶಾಸ್ತ್ರ ವಿಭಾಗವು ‘ಹಂಪಿ ಪರಿಸರದ ಆದಿಮಾನವ’ ಎಂಬ ಯೋಜನೆಯನ್ನು ಪೂರ್ಣಗೊಳಿಸಿದ್ದು ಮುದ್ರಣ ಹಂತದಲ್ಲಿದೆ. ಕರ್ನಾಟಕ ಸರ್ಕಾರದ ಪರಿಶಿಷ್ಟ ಕಲ್ಯಾಣ ಇಲಾಖೆಯ ಅನುದಾನದಡಿಯಲ್ಲಿ ಕರ್ನಾಟಕದ ಗಂಗಾಮತ ಹಾಗೂ ಅದರ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಕೈಗೆತ್ತಿಕೊಂಡಿದೆ. ಭಾರತದ ಆರೋಗ್ಯದ ಸಂರಕ್ಷಣೆ ಹಾಗೂ ಸವಾಲುಗಳು ಎಂಬ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನಡೆಸಲಾಗಿದೆ. ಸಾಂಸ್ಕೃತಿಕ ಚೌಕಟ್ಟಿನಲ್ಲಿ ಬುಡಕಟ್ಟು ಮಹಿಳೆಯರ ಅಭಿವೃದ್ಧಿ ಎಂಬ ವಿಚಾರ ಸಂಕಿರಣವನ್ನು ಬಿಳಿಗಿರಿ ರಂಗನಬೆಟ್ಟದಲ್ಲಿ ಆಯೋಜಿಸಿ ಯಶಸ್ವಿಗೊಳಿಸಿದೆ. ಇದೇ ವರ್ಷದ ಫೆಬ್ರವರಿಯಲ್ಲಿ ಮಾನವಶಾಸ್ತ್ರ ಸರ್ವೇಕ್ಷಣಾಲಯ ಕೊಲ್ಕತ ಹಾಗೂ ಅಂತಾರಾಷ್ಟ್ರೀಯ ಜಾನಪದ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ, ಕೇರಳ ಇವರ ಸಹಯೋಗದಲ್ಲಿ ಆದಿವಾಸಿ ಸಮಾಜಗಳ ಸಾಂಸ್ಕೃತಿಕ ಬದಲಾವಣೆಗಳು ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.

ದೃಶ್ಯಕಲಾ ವಿಭಾಗವು ಯುನೆಸ್ಕೋ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ನಡೆಸಿ ಯಶಸ್ವಿಗೊಳಿಸಿದೆ. ವಿಭಾಗದ ಅಧ್ಯಾಪಕರು ಇಂಡೋನೇಶಿಯಾದ ಜಕಾರ್ತನಲ್ಲಿ ಅಂತಾರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ರಾಜ್ಯ ಹೊರರಾಜ್ಯಗಳಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಡಾ.ಎಸ್.ಸಿ.ಪಾಟೀಲ ಅವರು ಯು.ಜಿ.ಸಿ. ಯ ನೆಟ್ ಮೌಲ್ಯಮಾಪನ ಬೋರ್ಡಿನ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ.

ಶಿಲ್ಪ ಮತ್ತು ವರ್ಣಚಿತ್ರಕಲಾ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡಿ ಬಹುಮಾನಗಳನ್ನು ಪಡೆದಿದ್ದಾರೆ.

ಸಂಗೀತ ಮತ್ತು ನೃತ್ಯ ವಿಭಾಗವು ಪ್ರತಿ ಶುಕ್ರವಾರದಂದು ‘ನಾದನಮನ’ ಕಾರ್ಯಕ್ರಮವನ್ನು ನಡೆಸುತ್ತ ಬಂದಿದೆ. ವಿಭಾಗದ ವಿದ್ಯಾರ್ಥಿಗಳು ಜಿಲ್ಲೆ ಮತ್ತು ರಾಜ್ಯಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಪ್ರಸ್ತುತ ವರ್ಷ ವಿಶ್ವವಿದ್ಯಾಲಯವು ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಪಂಡಿತ ಡಾ. ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ ನಾದ ನಮನ ಎನ್ನುವ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶಕುಮಾರ್, ಶ್ರೀಮತಿ ಲೀಲಾ ಮುರಿಗೆಪ್ಪ, ಶ್ರೀಮತಿ ಸವಿತಾ ನುಗಡೋಣಿ, ಶ್ರೀಮತಿ ನಾಗಪುಷ್ಪಲತಾ ಮುಂತಾದ ಕಲಾವಿದರು ಹಾಗೂ ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಚಿತ್ರದುರ್ಗದ ಜಮುರಾ ಹಾಗೂ ನೀನಾಸಂ ನಾಟಕ ತಂಡಗಳು ನಾಟಕ ಪ್ರದರ್ಶನಗಳನ್ನು ನೀಡಿವೆ. ಅಧ್ಯಯನಾಂಗವು ಯುಜಿಸಿ ಮಾರ್ಗದರ್ಶನದಂತೆ ಎಂ.ಫಿಲ್., ಪಿಎಚ್.ಡಿ. ನಿಯಮಗಳನ್ನು ರೂಪಿಸಿದೆ. ಯುಜಿಸಿ ಸೂಚಿಸಿದಂತೆ ಭಾರತದಲ್ಲಿಯೇ ಮೊದಲ ಬಾರಿಗೆ ಪಿಎಚ್.ಡಿ.ಗೆ ಸಂಬಂಧಿಸಿದಂತೆ ಕೋರ್ಸ್ ಅನುಷ್ಠಾನಕ್ಕೆ ತಂದಿರುವುದು ವಿಶೇಷ. ಇದರಿಂದ ಸಂಶೋಧನೆಯಲ್ಲಿ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಸಾಧ್ಯವಾಗಿದೆ.

ಮಹಿಳಾ ಅಧ್ಯಯನ ಕೇಂದ್ರಕ್ಕೆ ಪ್ರಸ್ತತ ವರ್ಷದ ಕಾರ್ಯಚಟುವಟಿಕೆಗಳಿಗಾಗಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಆರುವರೆ ಲಕ್ಷ ರೂಪಾಯಿಗಳನ್ನು ನೀಡಿದೆ. ಹನ್ನೊಂದನೆ ಯೋಜನೆಯಲ್ಲಿ ವಿಶ್ವವಿದ್ಯಾಲಯಕ್ಕೆ ಹತ್ತು ಕೋಟಿಗಲ್ಲದೆ ಹೆಚ್ಚುವರಿ ಸಹಾಯಧನವಾಗಿ ಒಂದು ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದೆ. ಈ ಪೈಕಿ ೯೦ ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಹಣವನ್ನು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು ಹಾಗೂ ಅಧ್ಯಾಪಕರುಗಳಿಗೆ ಕಂಪ್ಯೂಟರ್‌ಗಳನ್ನು ಒದಗಿಸಲು ಹಾಗೂ ಲ್ಯಾಪ್‌ಟ್ಯಾಪ್‌ಗಳನ್ನು ಖರೀದಿಸಲು ಬಳಸಲಾಗುತ್ತಿದೆ. ವಿಶ್ವವಿದ್ಯಾಲಯದ ಧನ ಸಹಾಯ ಆಯೋಗವು ಹನ್ನೊಂದನೆ ಯೋಜನೆಯಡಿಯಲ್ಲಿ ಪ್ರಸ್ತುತ ಯೋಜನಾವಧಿಗೆ ಹನ್ನೊಂದುಕೋಟಿ ರೂಪಾಯಿಗಳಿಗೆ ಅನುದಾನ ಹಂಚಿಕೆ ಮಾಡಿದೆ. ಈವರೆಗೆ ಸುಮಾರು ಏಳುಕೋಟಿ ಬಿಡುಗಡೆ ಮಾಡಿದೆ. ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರಸಾರಾಂಗದ ಕಟ್ಟಡವನ್ನು, ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದೃಶ್ಯಕಲಾ ವಿಭಾಗದ ಕಟ್ಟಡವನ್ನು, ನಲವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕ್ಯಾಂಟೀನ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಈ ಮೂರು ಕಟ್ಟಡಗಳನ್ನು ಜನವರಿ ಮಾಸದಲ್ಲಿ ಉದ್ಘಾಟಿಸುವ ಯೋಜನೆ ಇದೆ. ಅಲ್ಲದೆ ವಿಶ್ವವಿದ್ಯಾಲಯದ ಅತಿಥಿ ಅಧ್ಯಾಪಕರ ನೇಮಕಾತಿ, ಅಧ್ಯಾಪಕರ ಪ್ರಯಾಣ ಭತ್ಯೆ, ವಿದ್ಯಾರ್ಥಿನಿಯರ ವಸತಿಗೃಹ, ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮಗಳು ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ಐದುಕೋಟಿ ಹತ್ತೊಂಬತ್ತು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದೆ. ಇದರ ಬಾಬ್ತು ಮೂರು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ರಾಜ್ಯ ಸರಕಾರವು ಸಿಬ್ಬಂದಿಗಳ ವೇತನಕ್ಕಾಗಿ ನಾಲ್ಕು ಕೋಟಿ ಅರವತ್ತೇಳು ಲಕ್ಷ ಎಂಬತ್ತೈದು ಸಾವಿರ ರೂಪಾಯಿಗಳನ್ನು ನೀಡುತ್ತಲಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ಹೊಸ ಯುಜಿಸಿ ವೇತನವನ್ನು ಜಾರಿಗೆ ತರಲಾಗಿದೆ. ರಾಜ್ಯ ಸರಕಾರವು ವಿಶ್ವವಿದ್ಯಾಲಯದ ಅಭಿವೃದ್ಧಿ ಅನುದಾನವಾಗಿ ಐದು ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ವಿಶ್ವವಿದ್ಯಾಲಯದಿಂದ ಪ್ರಕಟವಾದ ಪುಸ್ತಕಗಳ ಮಾರಾಟದಿಂದ ಸುಮಾರು ಮೂವತ್ತು ಲಕ್ಷ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ. ವಿಶ್ವವಿದ್ಯಾಲಯದ ಸ್ವೀಕೃತಿಯಾಗಿ ಇತರೆ ಮೂಲದಿಂದ ಒಂದು ಕೋಟಿ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ. ದೂರಶಿಕ್ಷಣದ ಸ್ವೀಕೃತಿಯಾಗಿ ಸುಮಾರು ನಲವತ್ತು ಲಕ್ಷ ರೂಪಾಯಿಗಳನ್ನು ನಿರೀಕ್ಷಿಸಲಾಗಿದೆ. ಹಾಲುಮತ ಅಧ್ಯಯನ ಪೀಠಕ್ಕಾಗಿ ಸರಕಾರವು ೧೫ ಲಕ್ಷ ರೂಪಾಯಿಗಳನ್ನು ನೀಡಿದೆ. ಸರಕಾರವು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಲಯಕ್ಕಾಗಿ ೨೫ ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡದ ದತ್ತ ಸಂಗ್ರಹಕ್ಕೆ ದತ್ತ ನಿರ್ಮಾಣ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು ಪ್ರಸಾರಾಂಗದ ಹೆಚ್ಚಿನ ಪುಸ್ತಕಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಜನವರಿ ತಿಂಗಳಲ್ಲಿ ಸಿ.ಡಿ. ರೂಪದಲ್ಲಿ ಹೊರತರಲಾಗುತ್ತದೆ. ಗಣಕ ಕೇಂದ್ರದ ಮುಖಾಂತರವಾಗಿ ವಿಶ್ವವಿದ್ಯಾಲಯದ ಎಂ.ಎ, ಪಿಎಚ್.ಡಿ., ಎಂ.ಫಿಲ್, ಹಾಗೂ ಚಿತ್ರಕಲಾ ವಿದ್ಯಾರ್ಥಿಗಳಿಗೆ ಗಣಕಯಂತ್ರ ಬಳಕೆ ಕುರಿತು ತರಬೇತಿ ನೀಡಲಾಗುತ್ತಿದೆ. ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಅಧ್ಯಾಪಕರ, ವಿಶ್ವವಿದ್ಯಾಲಯದ ಅಧ್ಯಯನಾಂಗ, ಪ್ರಸಾರಾಂಗ, ದೂರಶಿಕ್ಷಣ ಕೇಂದ್ರ ಹಾಗೂ ಇನ್ನಿತರ ವಿಭಾಗಗಳ ಮಾಹಿತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅಳವಡಿಸಪ ಪ್ರಕಟಪಡಿಸಲಾಗಿದೆ. ಅಧ್ಯಾಪಕರ ಹಾಗೂ ಆಡಳಿತಾಂಗದ ಅನುಕೂಲಕ್ಕಾಗಿ ಇ-ಮೇಲ್ ಸರ್ವರನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ಕನ್ನಡ ವಿಶ್ವವಿದ್ಯಾಲಯದ ಹೆಸರಿನಲ್ಲಿ ಅಧಿಕೃತವಾಗಿ ಇ-ಮೇಲ್‌ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಅನುಕೂಲವಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ೧೧ನೇ ಯೋಜನೆಯಡಿಯಲ್ಲಿ ಮಾಹಿತಿ ಮತ್ತು ಸಂವಹನ ಯೋಜನೆಯಡಿಯಲ್ಲಿ ೧೭೬ ಲಕ್ಷ ರೂ.ಗಳ ಅನುದಾನವನ್ನು ಹಂಚಿಕೆ ಮಾಡಿದ್ದು ಈ ಹಣವನ್ನು ಡಿಜಿಟಲ್ ಸ್ಟುಡಿಯೋ, ಡಿಜಿಟಲ್ ಲೈಬ್ರರಿ, ಡಿಜಿಟಲ್ ಲ್ಯಾಂಗ್ವೇಜ್ ಲ್ಯಾಬ್, ಆಡಿಯೋ ಮತ್ತು ವೀಡಿಯೋ ರೆಕಾರ್ಡ್‌ ಲ್ಯಾಬ್, ಸ್ಥಾಪನೆಗೆ ವಿನಿಯೋಗ ಮಾಡಿಕೊಳ್ಳಲಾಗುತ್ತದೆ.

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಪ್ರತಿ ವರ್ಷ ವಿಶ್ವವಿದ್ಯಾಲಯದ ಅಧ್ಯಾಪಕರ ಹಾಗೂ ಆಹ್ವಾನಿತ ವಿದ್ವಾಂಸರ ಮುಖಾಂತರ ಯೋಜನೆಗಳನ್ನು ಕೈಗೊಂಡು ಪ್ರಕಟಣೆಗಳ ರೂಪದಲ್ಲಿ ಹೊರತರಲಾಗುತ್ತಿದೆ. ಪ್ರಸ್ತುತ ವರ್ಷ ಅಧ್ಯಾಪಕರ ಯೋಜನೆಗಳಿಂದ ಸಿದ್ಧಗೊಂಡ ಕೃತಿ ಸುಮಾರು ೨೫೦ ಫಲಿತಗಳನ್ನು ಪ್ರಕಟಿಸಲಾಗುತ್ತಿದೆ. ಕನ್ನಡ ಶಾಸ್ತ್ರೀಯ ಭಾಷೆ ಸಂದರ್ಭದಲ್ಲಿ ಸರ್ಕಾರವು ೧ ಕೋಟಿ ರೂ.ಗಳ ಅನುದಾನವನ್ನು ನೀಡಿದ್ದು, ಇದರಡಿ ೪೨ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇವುಗಳ ಫಲಿತಗಳನ್ನು ಪ್ರಕಟಣೆಯ ರೂಪದಲ್ಲಿ ಹೊರತರಲಾಗುತ್ತದೆ. ಪ್ರಮುಖವಾಗಿ ದಕ್ಷಿಣದ ದ್ರಾವಿಡ ಭಾಷೆಗಳಾದ ಕನ್ನಡ ತೆಲುಗು, ತಮಿಳು ಹಾಗೂ ಮಲಯಾಳಂನ ಜಾನಪದ ಪಾರಿಭಾಷಿಕ ಪದಗಳನ್ನು ಆಯ್ದು ವಿವರಣಾತ್ಮಕ ಕೋಶಗಳನ್ನು ಸಹ ಪ್ರಕಟಿಸಲಾಗುತ್ತಿದೆ. ಜಾನಪದ ಸಂದರ್ಭಗಳಲ್ಲಿ ಅರ್ಥೈಸುವ, ಆಚರಿಸುವ ಮತ್ತು ಅನುಸರಿಸುವ ವಿಧಾನಗಳನ್ನು ಈ ನಾಲ್ಕು ಭಾಷೆಗಳಿಂದ ಸಂಗ್ರಹಿಸಿ ಹೆಚ್ಚಿನ ಅಧ್ಯಯನಕ್ಕೆ ಅನುವು ಮಾಡಿಕೊಡಲಾಗಿದೆ. ೨೫೦ ವಿಷಯಗಳ, ಸಾವಿರ ಪುಟಗಳ ಬೇರೆ ಬೇರೆ ಭಾಷೆಗಳಿಂದ ತಯಾರಿಸಿದ ಈ ಕೋಶ ದ್ರಾವಿಡ ಭಾಷೆಗಳ ಸಂದರ್ಭದಲ್ಲಿ ಪ್ರಥಮ ಪ್ರಯತ್ನವಾಗಿದ್ದು, ಮುಂದಿನ ಅಧ್ಯಯನಗಳಿಗೆ ಒಂದು ಮಾದರಿಯನ್ನು ನಿರ್ಮಿಸಲಿದೆ. ಕನ್ನಡ ಶಾಸ್ತ್ರೀಯ ಭಾಷೆಯ ಸಂದರ್ಭದಲ್ಲಿ ಕನ್ನಡ ಅಥವಾ ಪ್ರಸ್ತುತ ಬಳಕೆಯಲ್ಲಿರುವ ಎಲ್ಲ ಉಪ ಭಾಷೆಗಳ ಮಾಹಿತಿಯನ್ನು ಸಂಗ್ರಹಿಸಿ ಉಪ ಭಾಷಾಕೋಶವನ್ನು ಹೊರತರುವ ಯೋಜನೆ ಪ್ರಕ್ರಿಯೆಯಲ್ಲಿದೆ, ಈ ಯೋಜನೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಓಸಿಆರ್‌ ಕನ್ನಡ ತಂತ್ರಾಂಶ ಸಿದ್ಧತೆ ಕುರಿತಂತೆ ವಿಶ್ವವಿದ್ಯಾಲಯವು ಮೈಸೂರಿನ ಜಯಚಾಮ ರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದೊಡನೆ ಒಡಂಬಡಿಕೆ ಮಾಡಿಕೊಂಡು ಸದರಿ ಓಸಿಆರ್ ತಂತ್ರಾಂಶವನ್ನು ರೂಪಿಸುವ ಯೋಜನೆಯನ್ನು ಮುಂದಿನ ವರ್ಷದಲ್ಲಿ ಆರಂಭಿಸಲಾಗುತ್ತದೆ. ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ಅನೌಪಚಾರಿಕವಾಗಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪ್ರವೇಶವನ್ನು ನೀಡುತ್ತಿದೆ. ಡಿಪ್ಲೊಮ ಹಾಗೂ ಎಂ.ಎ. ಪದವಿಗಳನ್ನು ನೀಡುತ್ತಲಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಅಷ್ಟೆ ಅಲ್ಲದೆ ಬೇರೆ ಬೇರೆ ಶೈಕ್ಷಣಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ೨೦೧೦-೧೧ನೇ ಸಾಲಿಗಾಗಿ ೧೫೧೫ ಜನ ವಿದ್ಯಾರ್ಥಿಗಳು ವಿವಿಧ ಕೋರ್ಸ್‌‌ಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ೨೦೦೯-೧೦ನೇ ಸಾಲಿನಲ್ಲಿ ೪೬೭ ಎಂ.ಎ. ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ತೇರ್ಗಡೆಯಾಗಿರುತ್ತಾರೆ. ೨೦೦೧ ರಿಂದ ಇಲ್ಲಿಯವರೆಗೆ ೩೨೦೦ ವಿದ್ಯಾರ್ಥಿಗಳು ದೂರ ಶಿಕ್ಷಣ ಕೇಂದ್ರದ ಮುಲಕ ಪದವಿಗಳನ್ನು ಪಡೆದಿರುತ್ತಾರೆ. ಆದಾಗ್ಯೂ ಇಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಶೇಷ ಗಮನಹರಿಸಲಾಗುತ್ತಿದೆ. ವಿಶ್ವವಿದ್ಯಾಲಯದ ವಿವಿಧ ಕಲಾ ಶಾಲೆಗಳ ಮುಖಾಂತರ ಪ್ರಸ್ತತ ವರ್ಷ ಸುಮಾರು ೩೦೦೦ ವಿದ್ಯಾರ್ಥಿಗಳು ದೃಶ್ಯ, ಶಿಲ್ಪ ಕೋರ್ಸ್‌‌ಗಳಿಗೆ ಪ್ರವೇಶವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳು ರಾಜ್ಯದ ಎಲ್ಲ ಪ್ರದೇಶಗಳಿಂದ ಬಂದವರಾಗಿರುತ್ತಾರೆ. ಅಲ್ಲದೆ ಪ್ರಸ್ತುತ ವರ್ಷ ಎಂ.ಎ, ಪಿಎಚ್‌.ಡಿ. ಪದವಿಗೆ ೧೩ ಜನ, ಎಂ.ವಿ.ಎ. ಸ್ನಾತಕೋತ್ತರ ಪದವಿಗೆ ೨೩ ಜನ, ಎಂ.ಫಿಲ್‌.ಗೆ ೬೦ ಜನ, ಪಿಎಚ್.ಡಿ.ಗೆ ೧೧೨ ಜನ ಹಾಗೂ ಡಿಪ್ಲೊಮ ೧೫ ಜನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇಂದಿನ ಘಟಿಕೋತ್ಸವದಲ್ಲಿ ೪೧ ಜನ ವಿದ್ಯಾರ್ಥಿಗಳು ಪಿಎಚ್.ಡಿ, ೧೦೭ ಜನ ಎಂ.ಫಿಲ್, ೨೪ ಜನ ಡಿಪ್ಲೊಮ ಹಾಗೂ ಒಬ್ಬರು ಡಿ.ಲಿಟ್ ಪದವಿಗಳನ್ನು ಪಡೆಯಲಿದ್ದಾರೆ.

ಕನ್ನಡ ವಿಶ್ವವಿದ್ಯಾಲಯವು ನಾಲ್ಕ ಅಧ್ಯಯನ ಕೇಂದ್ರಗಳನ್ನು ಹೊಂದಿದ್ದು, ಬಾದಾಮಿ ಕೇಂದ್ರದಲ್ಲಿ ವಾಸ್ತುಶಿಲ್ಪ, ಶಿಲ್ಪಶಾಸ್ತ್ರ ಮತ್ತು ಪ್ರತಿಮಾಶಾಸ್ತ್ರ ಹಾಗೂ ಚಿತ್ರಕಲೆಗೆ ಸಂಬಂಧಿಸಿದಂತೆ ತರಗತಿಗಳು ನಡೆಯುತ್ತವೆ. ಇಲ್ಲಿ ಆಗಾಗ್ಗೆ ಶಿಬಿರಗಳು ಮತ್ತು ವಿಚಾರಸಂಕಿರಣಗಳು ಆಯೋಜಿಸಲಾಗಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕುರುಬನ ಕಟ್ಟೆಯಲ್ಲಿ ಉಪೇಕ್ಷಿತ ಸಮುದಾಯಗಳ ಅಧ್ಯಯನವನ್ನು ಕೇಂದ್ರವು ಆರಂಭಿಸಿದ್ದು ಈಗಾಗಲೇ ಚಾಮರಾಜನಗರ ತಾಲೂಕನ್ನು ಆಯ್ದುಕೊಂಡು ಅಧ್ಯಯನವನ್ನು ಪೂರೈಸಿದ್ದು, ವಿಶೇಷ ವೆಬ್‌ಸೈಟ್‌ನಲ್ಲಿ ಅಳವಡಿಸುವ ಹಂತದಲ್ಲಿದೆ. ಅಲ್ಲದೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಮುಖಾಮುಖಿ ಕಾರ್ಯಕ್ರಮಗಳು ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಆಯಾಮಗಳಲ್ಲಿ ಚಾಮರಾಜನಗರ ಪ್ರದೇಶದ ಅಧ್ಯಯನವನ್ನು ಕೈಗೊಳ್ಳುವ ಇಪ್ಪತ್ತು ಸಂಪುಟಗಳ ೧೦ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಯೋಜನೆಯನ್ನು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲಾಗಿದೆ. ಕುಪ್ಪಳಿಯ ಕೇಂದ್ರದಲ್ಲಿ ಕುವೆಂಪು ಸಾಹಿತ್ಯವನ್ನು ವಿವಿಧ ದೃಷ್ಟಿಕೋನಗಳಲ್ಲಿ ಹಾಗೂ ಅಂತರ್‌ಶಿಸ್ತೀಯ ಅಧ್ಯಯನಗಳ ಮೂಲಕ ಕೈಗೊಳ್ಳಲು ಹಾಗೂ ಮಹಿಳಾ ದೃಷ್ಟಿಕೋನದಿಂದ ಕುವೆಂಪು ಸಾಹಿತ್ಯವನ್ನು ಗಮನಿಸುವಂತಹ ವಿಷಯವನ್ನು ಆಧರಿಸಿ ವಿಚಾರಸಂಕಿರಣಗಳು ನಡೆದಿವೆ. ಅಲ್ಲದೆ ಕುವೆಂಪು ಸಮಗ್ರ ಕಾವ್ಯ, ಗದ್ಯಗಳ ಸಂಪಾದನಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕುಪ್ಪಳಿಯಲ್ಲಿ ಸುಮಾರು ೫೦ ಲಕ್ಷ ರೂ.ಗಳ ಕಟ್ಟಡವನ್ನು ಜಾನಪದ ವಸ್ತುಸಂಗ್ರಹಾಲಯಕ್ಕಾಗಿ ನಿರ್ಮಿಸಲಾಗಿದ್ದು ಮುಕ್ತಾಯದ ಹಂತದಲ್ಲಿದೆ. ಇನ್ನೆರಡು ತಿಂಗಳಲ್ಲಿ ವಸ್ತು ಸಂಗ್ರಹಾಲಯವನ್ನು ಆರಂಭಿಸುವ ಉದ್ದೇಶ ನಮ್ಮದಾಗಿದೆ. ಕೂಡಲ ಸಂಗಮದ ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದಲ್ಲಿ ವಚನ ಸಾಹಿತ್ಯವನ್ನು ಕುರಿತಂತೆ ಉಪನ್ಯಾಸಗಳು, ಶಿಬಿರಗಳು, ರಾಷ್ಟ್ರಮಟ್ಟದ ವಿಚಾರಸಂಕಿರಣಗಳನ್ನು ನಡೆಸಲಾಗುತ್ತಿದೆ. ಇವುಗಳ ಫಲಿತಗಳನ್ನು ಪ್ರಕಟಣೆಗಳ ರೂಪದಲ್ಲಿ ಹೊರತರಲಾಗಿದೆ.

ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಹಾಗೂ ಯುಜಿಸಿಯ ರಾಜೀವ್ ಗಾಂಧಿ ರಾಷ್ಟ್ರೀಯ ಶಿಷ್ಯವೇತನವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗಾಗಿ ಎನ್.ಇ.ಟಿ. ಸ್ಪೋಕನ್ ಇಂಗ್ಲಿಷ್, ಸ್ಪರ್ಧಾ ಪರೀಕ್ಷೆಗಳ ಸಲುವಾಗಿ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯಕ್ಕೆ ಹೆಸರನ್ನು ತಂದಿರುತ್ತಾರೆ. ಶಿಲ್ಪಕಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ೫೦೦ ರೂ.ಗಳ ಸಹಾಯಧನವನ್ನು ನೀಡುವುದರ ಮೂಲಕ ಶಿಲ್ಪಕಲೆಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ಹೊರಗಿನ ವಿದ್ವಾಂಸರನ್ನು ಅತಿಥಿ ಉಪನ್ಯಾಸಕರನ್ನಾಗಿ, ಸಂದರ್ಶಕ ಪ್ರಾಧ್ಯಾಪಕರನ್ನಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಿ ಅವರ ಪರಿಣಿತಿಯನ್ನು ಪಡೆದುಕೊಳ್ಳುತ್ತಿದೆ. ಪ್ರೊ. ಬಿ. ಶೇಷಾದ್ರಿ, ಪ್ರೊ. ಎಚ್.ಎಸ್. ರಾಘವೇಂದ್ರರಾವ್, ಶ್ರೀ ನಾರಾಯಣಮೂರ್ತಿ, ಪ್ರೊ. ಸುಧೀಂದ್ರ ಮುಂತಾದವರು ಈ ಯೋಜನೆಗಳಡಿಯಲ್ಲಿ ವಿಶ್ವವಿದ್ಯಾಲಯಕ್ಕೆ ಒಂದು ತಮ್ಮ ಅಮೂಲ್ಯವಾದ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ವಿಶ್ವವಿದ್ಯಾಲಯದ ಎಲ್ಲ ಪ್ರಕಟಣೆಗಳ ಸಾರವನ್ನು “ಸಾರ-ವಿ‌ಸ್ತಾರ” ಎಂಬ ಕೃತಿಯನ್ನು ಪ್ರಕಟಿಸಲಾಗಿದೆ.

ವಿಶ್ವವಿದ್ಯಾಲಯವು ಮೂರು ಹೊಸ ಕಟ್ಟಡಗಳಲ್ಲದೆ, ಅಭಿವೃದ್ಧಿ ಅಧ್ಯಯನ ವಿಭಾಗಕ್ಕಾಗಿ ಎರಡು ಕೊಠಡಿಗಳನ್ನು ನಿರ್ಮಿಸಿಕೊಟ್ಟಿದೆ. ಕ್ರಿಯಾಶಕ್ತಿಯ ಹಿಂಭಾಗದಲ್ಲಿ ಅಧ್ಯಯನಾಂಗಕ್ಕಾಗಿ ಐದು ಕೊಠಡಿಗಳನ್ನು ಹನ್ನೆರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಸರಕಾರ ನೀಡಿದ ಇಪ್ಪತ್ತೈದು ಲಕ್ಷ ರೂಪಾಯಿಗಳ ಅನುದಾನದಲ್ಲಿ ಏಳು ಕೊಠಡಿಗಳನ್ನು ನಿರ್ಮಿಸಿ ಕೊಡಲಾಗಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ವಿದ್ಯಾರಣ್ಯ ಆವರಣದ ರಸ್ತೆ ನಿರ್ಮಾಣಕ್ಕೆ ಸುಮಾರು ನಲವತ್ತು ಲಕ್ಷ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಹಾಗೆಯೇ ವಿಶ್ವವಿದ್ಯಾಲಯದ ಆವರಣಕ್ಕೆ ಗೋಡೆ ನಿರ್ಮಿಸಲು ನಲವತ್ತು ಲಕ್ಷ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಗ್ರಂಥಾಲಯದ ಮೇಲ್ಭಾಗದಲ್ಲಿ ಜಲನಿಯಂತ್ರಕ ರಿಪೇರಿ ಕಾಮಗಾರಿ ಕೈಗೊಳ್ಳಲಾಗಿದೆ. ಅಕ್ಷರ ಗ್ರಂಥಾಲಯದ ಹಾಲಿಗೆ ಫಾಲ್ಸ್ ಸೀಲಿಂಗ್ ವ್ಯವಸ್ಥೆಯ ಆದೇಶ ನೀಡಲಾಗಿದೆ. ಅಧ್ಯಾಪಕರ ಅನುಕೂಲಕ್ಕಾಗಿ ದಶಮಾನೋತ್ಸವ ಕಟ್ಟಡಗಳ ಬಳಿ ಕಾರ್‌ಶೆಡ್‌ನ್ನು ನಿರ್ಮಿಸಲಾಗುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ಶಿಲ್ಪಕಲಾ ಶಿಬಿರಕ್ಕಾಗಿ ಸುಮಾರು ಏಳು ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದ್ದು ಹದಿನೈದು ದಿನಗಳ ಶಿಬಿರದಲ್ಲಿ ಐವತ್ತು ಶಿಲ್ಪಿಗಳು ಮತ್ತು ಸಹಾಯ ಶಿಲ್ಪಿಗಳು ಸೇರಿ ಹತ್ತು ಶಿಲ್ಪಗಳನ್ನು ನಿರ್ಮಿಸಿದ್ದರೆ. ಶಿಬಿರದ ಸಂಚಾಲಕರಾಗಿ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಶ್ರೀ ವೆಂಕಟಾಚಲಪತಿ ಅವರು ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಶಿಬಿರದಲ್ಲಿ ರಾಜ್ಯದ ಹಾಗೂ ಹೊರ ರಾಜ್ಯಗಳ ಶಿಲ್ಪಿಗಳು ಭಾಗವಹಿಸಿದ್ದರು.

ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯುಜಿಸಿ ಅನುದಾನದಡಿ ಬಂದ ಐವತ್ತನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆವರಣದ ಮುವತ್ಮೂರು ಕಟ್ಟಡಗಳಿಗೆ ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈವರೆಗೆ ಅರ್ನೆಟ್ ಅವರು ೨ ಎಂ.ಬಿ.ಪಿ.ಎಸ್. ಲೀಜ್ಡ್‌ ಲೈನ್ ಮುಖಾಂತರ ಅಂತರ್ಜಾಲ ಸೇವೆಯನ್ನು ಒದಗಿಸಲಾಗಿತ್ತು. ಈಗ ಬಿ.ಎಸ್.ಎನ್.ಎಲ್. ಅವರ ಮುಖಾಂತರ ೧ ಜಿ.ಬಿ.ಪಿ.ಸ್.(೧೦೦ ಎಂ.ಬಿ.ಪಿ.ಎಸ್) ಸಾಮರ್ಥ್ಯದ ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಶ್ರ‍ವ್ಯ ಹಾಗೂ ದೃಶ್ಯ ದತ್ತಾಂಶಗಳ ವರ್ಗಾವಣೆಗೆ ಅನುಕೂಲವಾಗುತ್ತದೆ. ೫೦ ಲಕ್ಷ ರೂ.ಗಳ ಈ ಯೋಜನೆಗೆ ೧ ಲಕ್ಷ ರೂ.ಗಳನ್ನು ವಿಶ್ವವಿದ್ಯಾಲಯದ ವತಿಯಿಂದ ನೀಡಿದ್ದು ಉಳಿದ ಹಣಕ್ಕೆ ಎಂ.ಎಚ್.ಆರ್.ಡಿ. ಹಾಗೂ ಸರ್ಕಾರವನ್ನು ಅವಲಂಬಿಸಲಾಗಿದೆ. ಬಿ.ಎಸ್.ಎನ್.ಎಲ್. ಸಂಸ್ಥೆಯವರು ವಿಶ್ವವಿದ್ಯಾಲಯಕ್ಕೆ ಒಂದು ಬಿ.ಎಸ್.ಎನ್.ಎಲ್. ಟವರನ್ನು ನಿರ್ಮಿಸಿಕೊಟ್ಟಿದ್ದು ಇದಕ್ಕಾಗಿ ಬಿ.ಎಸ್.ಎನ್.ಎಲ್. ಅವರು ೫೦ ಲಕ್ಷ ರೂ.ಗಳನ್ನು ವಿನಿಯೋಗಿಸಿರುತ್ತಾರೆ. ಇದರಿಂದಾಗಿ ಎಂಟು ಜಿ.ಬಿ.ಪಿ.ಎಸ್.ವರೆಗೆ ಅಂತರ್ಜಾಲ ಸಂಪರ್ಕವನ್ನು ಪಡೆಯಬಹುದಾಗಿದೆ. ೧೧ನೇ ಯೋಜನೆ ಅಡಿಯಲ್ಲಿ ವಿಶ್ವವಿದ್ಯಾಲಯದ ಎಂಟು ವಿಭಾಗಗಳ ಅಧ್ಯಾಪಕರಿಗೆ ೩೦ ಲಕ್ಷ ರೂ.ಗಳಲ್ಲಿ ಅಧಿಕೃತ ಲ್ಯಾಪ್‌ಟಾಪ್‌ಗಳನ್ನು ಹಾಗೂ ಇನ್ನಿತರ ಉಪಕರಣಗಳನ್ನು ಒದಗಿಸಲಾಗಿದೆ. ಅವಶ್ಯಕವಿರುವ ಇನ್ನುಳಿದ ಅಧ್ಯಾಪಕರಿಗೂ ಸಹ ಈ ವ್ಯವಸ್ಥೆಯನ್ನು ಡಿಸೆಂಬರ್ ತಿಂಗಳಲ್ಲಿ ಕಲ್ಪಿಸಲಾಗುತ್ತದೆ. ಕುವೆಂಪು ತಂತ್ರಾಂಶ ಸಿದ್ಧತೆಗೆ ಡಾ. ಚಂದ್ರಶೇಖರ ಕಂಬಾರ ಅವರ ಎಂ.ಎಲ್.ಸಿ. ನಿಧಿಯಿಂದ ಕೆಲವು ವರ್ಷಗಳ ಹಿಂದೆ ೬ ಲಕ್ಷ ರೂ.ಗಳ ಅನುದಾನವನ್ನು ಪಡೆದು ಕುವೆಂಪು ತಂತ್ರಾಂಶದ ಬೀಟಾ ಆವೃತ್ತಿಯನ್ನು ರೂಪಿಸಲಾಗಿತ್ತು. ಇದರಲ್ಲಿ ಕಂಡು ಬಂದು ಕೆಲವು ಕೊರತೆಗಳನ್ನು ಈಗ ನಿವಾರಿಸಲಾಗಿದೆ. ಇದರ ಜೊತೆಗೆ ಬಂದು ಹೊಸ ಕೀಲಿಮಣೆ ವಿನ್ಯಾಸವನ್ನು ತಯಾರಿಸಲಾಗಿದೆ. ಇದರಿಂದಾಗಿ ಬೇರೆ ಬೇರೆ ಫಾಂಟ್‌ಗಳ ಕೀಲಿಮಣೆಯನ್ನು ಬಳಸುವುದು ಬೆರಳಚ್ಚುಗಾರರಿಗೆ ಅನುಕೂಲವಾಗುತ್ತದೆ. ಸೊನಾಟಾ ಕಂಪನಿಯವರು ಪ್ರಕಾಶಕ್‌ ಪ್ರಜಾ ಫಾಂಟ್ ಬಳಸಲು ಅನುಮತಿ ನೀಡಿದ್ದು ಮೂರು ಫಾಂಟ್‌ಗಳನ್ನು ಕುವೆಂಪು ತಂತ್ರಾಂಶಕ್ಕೆ ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ತಂತ್ರಾಂಶದ ೨ ನೇ ಆವೃತ್ತಿಯನ್ನು ಎಲ್ಲ ಬಳಕೆದಾರರು ಬಳಸಬಹುದಾಗಿದೆ. ಕರ್ನಾಟಕದ ಕೋರ್ಟ್‌‌ಗಳಲ್ಲಿ ಬಳಸಲು ಅನುಕೂಲವಾಗುವಂತೆ ಕುವೆಂಪು ತಂತ್ರಾಂಶವನ್ನು ಥಿನ್ ಕ್ಲೈಂಟ್ ಸರ್ವರ್ ಟೆಕ್ನಾಲಜಿಯಲ್ಲಿ ಸಿದ್ಧಪಡಿಸಲಾಗಿದೆ. ಕರ್ನಾಟಕ ಸರ್ಕಾರವು ಕನ್ನಡ ವಿಶ್ವವಿದ್ಯಾಲಯಕ್ಕೆ ಓ.ಸಿ.ಆರ್. ತಂತ್ರಾಂಶವನ್ನು ಸಿದ್ಧಪಡಿಸಲು ಹಾಗೂ ಆನ್‌ಲೈನ್‌ನಲ್ಲಿ ಪದಕೋಶವನ್ನು ರೂಪಿಸಲು ೩೦ ಲಕ್ಷ ರೂ.ಗಳ ಅನುದಾನ ನೀಡಲಿದೆ. ಶೀಘ್ರದಲ್ಲಿ ಈ ಯೋಜನೆಯನ್ನು ಕೈಗೊಂಡು ಮುಂದಿನ ಮೂರು ತಿಂಗಳಲ್ಲಿ ಪೂರೈಸಲಾಗುತ್ತದೆ. ಪಾರದರ್ಶಕ ಹಾಗೂ ಉತ್ತಮ ಗುಣಮಟ್ಟದ ಆಡಳಿತ ವ್ಯವಸ್ಥೆಗೆ ಇ-ಪ್ರಾಕ್ಯೂರ್‌ಮೆಂಟ್, ಇ-ಟೆಂಡರ್ ಹಾಗೂ ಫೈಲ್ ಮೇನೇಜ್‌ಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಿ ಮತ್ತು ಡಿ ಗುಂಪಿನ ಸಿಬ್ಬಂದಿಗಳಿಗೆ ಗಣಕಯಂತ್ರವನ್ನು ಪರಿಣಾಮಕಾರಿಯಾಗಿ ಬಳಸಲು ಸೂಕ್ತ ತರಬೇತಿಯನ್ನು ನೀಡಲಾಗಿದೆ.

ಸರ್ಕಾರವು ನೀಡಿದ ೫೦ ಲಕ್ಷ ರೂ.ಗಳ ಅನುದಾನದಲ್ಲಿ ಈಗಾಗಲೇ ಶಾಶ್ವತ ನೀರು ಸರಬರಾಜು ಯೋಜನೆಯನ್ನು ಪೂರೈಸಲಾಗಿದೆ. ಬಳ್ಳಾರಿ ಜಿಲ್ಲಾ ಪರಿಷತ್ತಿನ ಅಧ್ಯಕ್ಷರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಕೆರೆಯ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ. ಅಲ್ಲದೆ ಗಿಡಗಳ ಬೆಳವಣಿಗೆಗೆ ವಿವಿಧ ಜಾತಿಯ ಐದು ಸಾವಿರ ಸಸಿಗಳನ್ನು ನೀಡಿದ್ದು, ಅವುಗಳನ್ನು ಈಗಾಗಲೇ ಆವರಣದಲ್ಲಿ ನೆಡಲಾಗಿದೆ.

ವಿಶ್ವವಿದ್ಯಾಲಯದ ಅಧ್ಯಾಪಕರು ಇತರ ಮೂಲಗಳಿಂದ ಧನಸಹಾಯವನ್ನು ಪಡೆದು ಅನೇಕ ವಿಶಿಷ್ಟ ಯೋಜನೆಗಳನ್ನು ಹಮ್ಮಿಕೊಂಡು ಗಂಭೀರ ಅಧ್ಯಯನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ತಲಾ ೬ ಲಕ್ಷ ರೂ.ಗಳ ಪ್ರಧಾನ ಸಂಶೋಧನಾ ಯೋಜನೆಗಳು ಸಹ ಪ್ರಾಧ್ಯಾಪಕರಾದ ಡಾ. ಬಿ.ಎಂ. ಪುಟ್ಟಯ್ಯ ಹಾಗೂ ಡಾ.ಆರ್. ವೆಂಕಟೇಶ್‌ ಇಂದ್ವಾಡಿ ಇವರಿಗೆ ಮಂಜೂರಾಗಿದೆ.

ವಿಶ್ವವಿದ್ಯಾಲಯದಲ್ಲಿ ಹತ್ತು ಅಧ್ಯಯನ ಪೀಠಗಳು ತಂತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಸಂಕಿರಣ, ಪ್ರಕಟಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪುರಂದರದಾಸ ಅಧ್ಯಯನ ಪೀಠದಿಂದ ಮೂರು ಪುಸ್ತಕಗಳು, ಹಾಲುಮತ ಅಧ್ಯಯನ ಪೀಠದಿಂದ ಎರಡು ಗ್ರಂಥಗಳು, ಡಾ. ಶಂಬಾ ಜೋಶಿ ಅಧ್ಯಯನ ಪೀಠದಿಂದ ಎರಡು ಗ್ರಂಥಗಳು, ರಾಮಮನೋಹರ ಲೋಹಿಯಾ ಅಧ್ಯಯನ ಪೀಠದಿಂದ ಮೂರು ಗ್ರಂಥಗಳು ಪ್ರಕಟವಾಗುತ್ತಿವೆ. ನಾಡೋಜ ಡಾ. ರಾಜಕುಮಾರ ಅಧ್ಯಯನ ಪೀಠದಿಂದ ಧಾರವಾಡದ ಸೃಜನ ಸಂಸ್ಥೆಯ ಸಹಯೋಗದೊಂದಿಗೆ ಡಾ. ರಾಜಕುಮಾರ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಲ್ಲದೆ ಬೆಂಗಳೂರಿನ ಹಂಸಲೇಖ ಅವರ ಸಂಸ್ಥೆಯ ಸಹಯೋಗದೊಂದಿಗೆ ಮೂರು ದಿನಗಳ ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀರಂಗ ದತ್ತಿನಿಧಿಯನ್ನು ಹೊಸದಾಗಿ ಸ್ಥಾಪಿಸಿದ್ದು, ಇದಕ್ಕಾಗಿ ಆದ್ಯ ರಂಗಾಚಾರ್ಯರ ಮಗಳಾದ ಶಶಿಕಲಾ ದೇಶಪಾಂಡೆ ಅವರು ೫ ಲಕ್ಷ ರೂ.ಗಳನ್ನು ಠೇವಣೆಯಾಗಿಟ್ಟಿದ್ದಾರೆ. ಇದರ ಅಂಗವಾಗಿ ಉಪನ್ಯಾಸ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ೧೯ ಲಕ್ಷ ಮೌಲ್ಯದ ಸುಮಾರು ೧೬ ಸಾವಿರ ಗ್ರಂಥಗಳು ಸೇರ್ಪಡೆಯಾಗಿವೆ. ಪ್ರಸಾರಾಂಗದಿಂದ ಪ್ರಕಟಣೆಯಾಗಿರುವ ಪುಸ್ತಕಗಳಿಗೆ ಐ.ಎಸ್.ಬಿ.ಎನ್. ನೊಂದಣಿ ಲಭ್ಯವಾಗಿದ್ದು ಇದರಿಂದ ಈ ಗ್ರಂಥಗಳು ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರವಾಗುತ್ತವೆ.

ಬಾದಾಮಿ ಕೇಂದ್ರಕ್ಕೆ ಶ್ರೀ ಎಂ.ಕೆ.ಪಟ್ಟಣಶೆಟ್ಟಿ, ಶಾಸಕರು ಹಾಗೂ ಶ್ರೀ ಪಿ.ಸಿ. ಗದ್ದಿಗೌಡರ್, ಸಂಸದರು ಇವರು ಸುಮಾರು ೭ ಲಕ್ಷ ರೂ.ಗಳ ಅನುದಾನ ನೀಡಿದ್ದು ಕ್ರೀಡಾಂಗಣ, ಕಟ್ಟಡ ವಿಸ್ತರಣೆ ಮುಂತಾದ ಕಾರ್ಯಗಳಿಗಾಗಿ ಈ ಅನುದಾನವನ್ನು ಬಳಸಲಾಗುತ್ತದೆ.

ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಮುಂಬಡ್ತಿ ನೀಡಲಾಗಿದೆ. ಹಾಗೂ ದಿನೇದಿನೇ ಹೆಚ್ಚುತ್ತಿರುವ ಕೆಲಸಕಾರ್ಯಗಳ ಒತ್ತಡಗಳನ್ನು ಸರಿದೂಗಿಸಲು ವಿವಿಧ ಆಡಳಿತ ಹುದ್ದೆಗಳ ಸೃಜನೆ ಮತ್ತು ಮಂಜೂರಾತಿಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ಈ ಎಲ್ಲ ಕಾರ್ಯಗಳ ಸುಲಲಿತವಾಗಿ, ಯಶಸ್ವಿಯಾಗಿ ನಡೆದುಕೊಂಡು ಹೋಗಲು ವಿರ್ಶವವಿದ್ಯಾಲಯದ ಅಧ್ಯಾಪಕ ವರ್ಗ, ಆಡಳಿತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವರ್ಗ ಒಟ್ಟಾಗಿ ದುಡಿಯುತ್ತಿದ್ದಾರೆ. ಆಡಳಿತಾಂಗದ ಎಲ್ಲ ಸದಸ್ಯರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಮಾಧ್ಯಮದವರು ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಸಕಾರಾತ್ಮಕವಾಗಿ ಗುರುತಿಸಿ ಉತ್ತಮ ಪ್ರಚಾರ ನೀಡುತ್ತಿದ್ದಾರೆ. ವಿಶ್ವವಿದ್ಯಾಲಯದ ಎಲ್ಲ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿಯ ಎಲ್ಲ ನಾಮನಿರ್ದೇಶಿತ ಸದಸ್ಯರು ಹಾಗೂ ಪದನಿಮಿತ್ತ ಸದಸ್ಯರು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಸ್ತುತ ವರ್ಷ ರಾಜ್ಯ ಸರ್ಕಾರದ ಅನುದಾನದಲ್ಲಿ ರಸ್ತೆಗಳ ದುರಸ್ತಿ, ಆವರಣ ಗೋಡೆ, ಅಕ್ಷರ ಗ್ರಂಥಾಲಯದ ನವೀಕರಣ, ಪರೀಕ್ಷಾ ಭವನ ನಿರ್ಮಾಣ ಹಾಗೂ ಎಲ್ಲ ಪರೀಕ್ಷೆಗಳನ್ನು ಒಂದೆಡೆ ನಡೆಸುವ ಕೇಂದ್ರ ವ್ಯವಸ್ಥೆ ಮುಂತಾದವುಗಳನ್ನು ಯೋಜಿಸಬೇಕಾಗಿದೆ. ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಆಶಯದಂತೆ ದೇಸಿ ತಂತ್ರಜ್ಞಾನ ಅರಿತುಕೊಳ್ಳುವ ದಿಸೆಯಲ್ಲಿ ವಿಜ್ಞಾನ ನಿಕಾಯ, ಅಂತೆಯೇ ನಾಟಕ, ನೃತ್ಯ, ತತ್ವಶಾಸ್ತ್ರ ವಿಷಯಗಳ ಅಧ್ಯಯನಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆ ರೂಪಿತವಾಗಬೇಕಾಗಿದೆ.

ವಿಶ್ವವಿದ್ಯಾಲಯದ ಧನಸಹಾಯ ಆಯೋಗವು ೧.೫೦ ಕೋಟಿ ರೂ.ಗಳನ್ನು ಕನ್‌ವೆನ್ಷ್‌ನಲ್ ಹಾಲ್ ನಿರ್ಮಾಣಕ್ಕಾಗಿ ನೀಡಿದ್ದು ಅದನ್ನು ಪಾರಂಪರಿಕ ರೂಪುರೇಷೆಯಲ್ಲಿ ಯೋಜಿಸಿ ನಿರ್ಮಿಸಬೇಕಾಗಿದೆ. ವಿಶ್ವವಿದ್ಯಾಲಯವು ನ್ಯಾಕ್ (ಎನ್‌.ಎ.ಎ.ಸಿ) ಪುನರ್ ಮೌಲ್ಯೀಕರಣಕ್ಕೆ ಒಳಗಾಗಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ೧೧ನೇ ಯೋಜನೆಯಡಿ ಮೂರು ವರ್ಷಗಳನ್ನು ಪೂರೈಸಿದ್ದು, ಮುಂಬರುವ ೧೨ನೇ ಯೋಜನೆಯ ಪ್ರಕ್ರಿಯೆಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಅವಶ್ಯಕತೆಯಿದೆ.

ಪ್ರಸ್ತುತ ವರ್ಷ ಪ್ರಸಾರಾಂಗದಿಂದ ಸುಮಾರು ನೂರು ಮಂಟಪ ಮಾಲೆ ಗ್ರಂಥಗಳನ್ನು ಹಾಗೂ ಸುಮಾರು ನೂರೈವತ್ತು ಪೂರ್ಣ ಪ್ರಮಾಣದ ಪುಸ್ತಕಗಳನ್ನು ಹೊರತರುವ ಯೋಜನೆ ಹಮ್ಮಿಕೊಂಡಿದ್ದು, ಇಂದು ೧೨೦ ಪುಸ್ತಕಗಳು ಬಿಡುಗಡೆಗೊಂಡಿವೆ. ಉಳಿದೆಲ್ಲ ಗ್ರಂಥಗಳನ್ನು ಇನ್ನು ಒಂದು ತಿಂಗಳಲ್ಲಿ ಪ್ರಕಟಿಸಲಾಗುತ್ತದೆ.

ಕನ್ನಡ ವಿಶ್ವವಿದ್ಯಾಲಯದ ವಿಭಾಗಗಳು, ನಿಕಾಯಗಳು ಹಾಗೂ ಕಾರ್ಯಕಾರಿ ಸಮಿತಿ ಗುಣಮಟ್ಟದ ಶಿಕ್ಷಣ, ಮೌಲ್ಯಯುತ ಪ್ರಕಟಣೆ, ಜವಾಬ್ದಾರಿಯುತವಾದ ವಿದ್ಯಾರ್ಥಿ ಸಮುದಾಯವನ್ನು ರೂಪಿಸುವಲ್ಲಿ ಪಣ ತೊಟ್ಟಿವೆ. ಆಡಳಿತ ವರ್ಗ ಇದಕ್ಕಾಗಿ ಕಾಯಾವಾಚಾ ಶ್ರಮಿಸುತ್ತಿದೆ. ಹೀಗಾಗಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧ್ಯಾಪಕ ವರ್ಗ, ಅಧ್ಯಾಪಕೇತರ ವರ್ಗ, ಕಾರ್ಯಕಾರಿ ಸಮಿತಿ, ಶೈಕ್ಷಣಿಕ ಮಂಡಳಿ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಬಯಸುತ್ತೇನೆ. ನಾಡೋಜ ಪದವಿ ಪುರಸ್ಕೃತರು, ಉನ್ನತ ಶಿಕ್ಷಣ ಸಚಿವರು ಹಾಗೂ ಎಲ್ಲ ಅತಿಥಿಗಳು, ಗಣ್ಯ ಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿಹಬ್ಬಕ್ಕೆ ಶೋಭೆಯನ್ನು ತಂದಿದ್ದಾರೆ. ಇದಕ್ಕಾಗಿ ತಮಗೆಲ್ಲ ಧನ್ಯವಾದಗಳನ್ನು ಹೇಳಬಯಸುತ್ತೇನೆ.

ನಮಸ್ಕಾರ

೨೧ ಡಿಸೆಂಬರ್ ೨೦೧೦